ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಒಳಮೀಸಲಾತಿ ಹೋರಾಟ: ಒಡಕಿನ ಬಿಂಬದ ಹಿಂದಿನ ಹುನ್ನಾರ

Last Updated 16 ಸೆಪ್ಟೆಂಬರ್ 2020, 0:41 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿಗಳ 45 ವರ್ಷಗಳ ಸುದೀರ್ಘ ಹೋರಾಟದ ನಂತರವೂ ಒಳಮೀಸಲಾತಿ ಜಾರಿಯಾಗಿಲ್ಲ. 1975ರಲ್ಲಿ ಪಂಜಾಬ್ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ನೀಡಲು ಬಯಸಿದ ಒಳಮೀಸಲಾತಿಯನ್ನು, ಇಂದು ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳ ಪರಿಶಿಷ್ಟ ಜಾತಿಯ ಜನರು ಕೇಳುತ್ತಿದ್ದಾರೆ. ಒಳಮೀಸಲಾತಿಗಾಗಿ 1994ರಲ್ಲಿ ಆರಂಭವಾದ ‘ಮಾದಿಗ ದಂಡೋರ’ ಹೋರಾಟಮತ್ತು ಈ ಹೋರಾಟಕ್ಕೆ ಮಾಲ ಮಹಾನಾಡು ನೀಡಿದ ನಕಾರಾತ್ಮಕ ಪ್ರತಿಕ್ರಿಯೆಯು, ದೇಶದ ಪರಿಶಿಷ್ಟ ಜಾತಿಯ ಜನರ ನಡುವೆ ಇರುವ ಭಿನ್ನತೆಯನ್ನು ಜಗಜ್ಜಾಹೀರುಗೊಳಿಸಿದೆ. ಒಳಮೀಸಲಾತಿ ಜಾರಿಯಾಗದೇ ಇರಲು ಪರಿಶಿಷ್ಟ ಜಾತಿಗಳ ನಡುವೆ ಇರುವ ಒಡಕೇ ಕಾರಣ ಎಂದು ಆಳುವ ವರ್ಗವು ಬಿಂಬಿಸಿಕೊಂಡು ಬಂದಿದೆ. ಹೀಗೆ ಬಿಂಬಿಸುವುದರ ಹಿಂದೆ ಇರುವ ಆಳುವ ವರ್ಗದ ‘ಜಾಣತನ’ವನ್ನು ಮತ್ತು ಹೀಗೆ ಬಿಂಬಿಸುವುದರಿಂದ ಆಗುವ ಅಪಾಯವನ್ನು ಪರಿಶಿಷ್ಟ ಜಾತಿಯವರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಇದರಿಂದ ‘ಪರಿಶಿಷ್ಟರ ಹಿತಾಸಕ್ತಿ’ಯ ಹೋರಾಟಗಳು ನನೆಗುದಿಗೆ ಬಿದ್ದಿವೆ.

ಹಿಂದೂಗಳಲ್ಲಿರುವ ಮನುವಾದಿಗಳು ಈವರೆಗೆ ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಬಡ್ತಿಯಲ್ಲಿ ಮೀಸಲಾತಿಯ ವಿರುದ್ಧ ಹೋರಾಟ ನಡೆಸಿದ್ದಾರೆ. ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯವನ್ನು ವಿರೋಧಿಸುತ್ತಲೇ ಇದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬೇಡಿಕೆಯನ್ನು ವಿರೋಧಿಸುತ್ತಲೇ ಇದ್ದಾರೆ. ಮೀಸಲಾತಿಗೆ ಸಂಬಂಧಿಸಿದ ಈ ಎಲ್ಲಾ ಹೋರಾಟಗಳನ್ನು ವಿರೋಧಿಸುವ ಮನುವಾದಿಗಳು, ಈಗ ಒಳಮೀಸಲಾತಿಯ ಪರವಾಗಿ ಮಾತನಾಡುತ್ತಿದ್ದಾರೆ. ಈ ದ್ವಂದ್ವದ ಹಿಂದಿನ ಹುನ್ನಾರವೇನು ಎಂಬುದನ್ನು ಪರಿಶಿಷ್ಟ ಜಾತಿಯ ಜನರು ಅರ್ಥಮಾಡಿಕೊಳ್ಳಬೇಕಿದೆ.

ಪರಿಶಿಷ್ಟ ಜಾತಿಗಳು ಒಳಮೀಸಲಾತಿ ವಿಚಾರದಲ್ಲಿ ವಿಭಜನೆಯಾಗಿವೆ. ಒಳಮೀಸಲಾತಿಗಾಗಿ ದೀರ್ಘ ಹೋರಾಟ ನಡೆದಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೋರಾಟಗಾರರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಹಲವರು ಹತರಾಗಿದ್ದಾರೆ. ಆಯೋಗಗಳ ನಂತರ ಆಯೋಗಗಳು ರಚನೆಯಾಗಿ ವರದಿಗಳು ಸಲ್ಲಿಕೆಯಾಗಿವೆ. ಉಷಾ ಮೆಹ್ರಾ ಆಯೋಗವು ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿ 12 ವರ್ಷ ಕಳೆದಿದೆ. ಆದರೆ ಒಳಮೀಸಲಾತಿ ಜಾರಿಯಾಗಿಲ್ಲ.

ಬ್ರಾಹ್ಮಣ–ಬನಿಯಾಗಳ ಸೇರಿದಂತೆ ಮೀಸಲಾತಿಯಿಂದ ಹೊರಗೆ ಉಳಿದಿದ್ದ ಜಾತಿಗಳ ಜನಗಣತಿ ನಡೆಸದೆ, ಯಾವುದೇ ಆಯೋಗವನ್ನು ರಚಿಸದೆ, ಹಿಂದುಳಿದಿರುವಿಕೆಯ ಕಾರಣ ಮತ್ತು ಪ್ರಮಾಣಗಳನ್ನು ಗಣನೆಗೆ ತೆಗೆದುಕೊಳ್ಳದೆ, ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ರಾತ್ರೋರಾತ್ರಿ ಮೀಸಲಾತಿ ಜಾರಿ ಮಾಡಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 5ರಷ್ಟು ಇರುವ ಈ ಜಾತಿಗಳಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದಿದ್ದು, ಆರ್ಥಿಕವಾಗಿ ಮಾತ್ರ ಹಿಂದುಳಿದಿರುವ ಮೇಲ್ಜಾತಿಗಳಿಗೆ ಮೀಸಲಾತಿ ನೀಡಲಾಗಿದೆ. ಬೀದಿಗಿಳಿದು ಹೋರಾಟ ನಡೆಸದಿದ್ದರೂ, ನ್ಯಾಯಾಲಯದ ಮೆಟ್ಟಿಲು ಹತ್ತದಿದ್ದರೂ ಅವರಿಗೆ ಮೀಸಲಾತಿ ದೊರೆತಿದೆ.

ಒಳಮೀಸಲಾತಿ ಜಾರಿಯಾಗದೇ ಇರಲು ಪರಿಶಿಷ್ಟರ ನಡುವಣ ಭಿನ್ನತೆಯೇ ಕಾರಣ ಎಂದು ಬಿಂಬಿಸುತ್ತಿರುವ ಆಳುವ ವರ್ಗವು, ಬ್ರಾಹ್ಮಣ–ಬನಿಯಾ ಮೊದಲಾದ ಜಾತಿಗಳ ಬಡವರಿಗೆ ಸದ್ದೇ ಇಲ್ಲದಂತೆ ಶೇ 10ರಷ್ಟು ಮೀಸಲಾತಿ ನೀಡಿದೆ. ಪರಿಶಿಷ್ಟರನ್ನು ಒಡೆದು ಆಳುತ್ತಿರುವ ಈ ಸಂದರ್ಭದಲ್ಲಿ ಅಂಬೇಡ್ಕರರು 1937ರಲ್ಲಿ ಮಹಾರಾಷ್ಟ್ರದ ‘ಮಾತಂಗ ಸಮಾವೇಶ’ದಲ್ಲಿ ಆಡಿದ ಮಾತುಗಳು ಇಂದು ಹೆಚ್ಚು ಪ್ರಸ್ತುತವಾಗಿವೆ.

ಮಹಾರ್, ಚಮ್ಮಾರ್, ಮಾಂಗ್, ಭಂಗಿ ಇತ್ಯಾದಿ ವಿವಿಧ ಅಸ್ಪೃಶ್ಯ ಜಾತಿಗಳಲ್ಲಿ ಏಕತೆ ಇಲ್ಲದಿರುವುದು ದುರದೃಷ್ಟಕರ. ಹಿಂದೂಗಳಲ್ಲಿರುವ ಮನುವಾದಿಗಳು ತಮ್ಮ ನಡುವಿನ ಜಾತಿ ಭೇದಗಳನ್ನು ತೊಡೆದುಹಾಕುವುದು ಒತ್ತಟ್ಟಿಗಿರಲಿ, ಅದಕ್ಕೆ ವ್ಯತಿರಿಕ್ತವಾಗಿ ಅಸ್ಪೃಶ್ಯರೊಳಗಿನ ಭಿನ್ನತೆಗಳನ್ನು ಗಟ್ಟಿಗೊಳಿಸಲು ಶ್ರಮಿಸುತ್ತಾರೆ. ಅವರು ಮಾಂಗ್‍ರನ್ನು ಬೆಂಬಲಿಸಿ ಮಹಾರರ ವಿರುದ್ಧ ಎತ್ತಿ ಕಟ್ಟುತ್ತಾರೆ. ಚಮ್ಮಾರರನ್ನು ಬೆಂಬಲಿಸಿ ಮಹಾರ್ ಮತ್ತು ಮಾಂಗ್‍ರ ವಿರುದ್ಧ ಎತ್ತಿಕಟ್ಟುತ್ತಾರೆ. ನಮ್ಮ ಏಕತೆಯನ್ನು ತಡೆಯುವ ಸಲುವಾಗಿ, ಅವರ ತಾರತಮ್ಯ ಸಿದ್ಧಾಂತವನ್ನು ನಮ್ಮೊಳಗೆ ಹರಡುತ್ತಾರೆ. ನಮ್ಮೊಳಗಿನ ಜಾತಿ ಭೇದವನ್ನು ತೊಡೆದುಹಾಕಬೇಕಾದ್ದು ಹಾಗೂ ಜಾತಿ ತಾರತಮ್ಯ ಸಿದ್ಧಾಂತವನ್ನು ನಮ್ಮೊಳಗೆ ನುಸುಳದಂತೆ ತಡೆಗಟ್ಟಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದನ್ನು ಸಾಧಿಸದ ಹೊರತಾಗಿ, ನಮ್ಮ ಮೇಲಿನ ಅನ್ಯಾಯಗಳನ್ನು ತೊಡೆದುಹಾಕುವುದು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು.

ಅಂಬೇಡ್ಕರರ ಈ ಮಾತುಗಳನ್ನು ದಲಿತರು ಈಗಲಾದರೂ ಎಚ್ಚರಿಕೆಯಿಂದ ಆಲಿಸಬೇಕಿದೆ. ಒಳಮೀಸಲಾತಿಯೂ ಸೇರಿದಂತೆ, ಪರಿಶಿಷ್ಟರ ಹಿತಾಸಕ್ತಿಯ ಹಲವು ವಿಚಾರಗಳಲ್ಲಿ ಹೋರಾಟ ನಡೆಯಬೇಕಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ದೊರೆಯಬೇಕಿದೆ. ಮೀಸಲಾತಿಯ ಮೇಲೆ ಹೇರಿರುವ ಶೇ 50ರಷ್ಟು ನಿರ್ಬಂಧ ತೆರವು ಆಗಬೇಕಿದೆ. ಪರಿಶಿಷ್ಟರಿಗೆ ಭೂಮಿಯ ಹಕ್ಕು ದೊರೆಯಬೇಕಿದೆ. ‘ಮೇಲ್ಜಾತಿ’ಯ ಬಡವರಿಗೆ ನೀಡಿರುವ ಶೇ 10ರಷ್ಟು ಮೀಸಲಾತಿಯನ್ನು ನ್ಯಾಯಬದ್ಧಗೊಳಿಸಬೇಕಿದೆ. ಆದರೆ, ಒಳಮೀಸಲಾತಿಗೆ ಸಂಬಂಧಿಸಿದ ಒಡಕಿನ ಕಾರಣದಿಂದ ಈ ಎಲ್ಲಾ ಹೋರಾಟಗಳು ನನೆಗುದಿಗೆ ಬಿದ್ದಿವೆ. ಯಾವುದೋ ಒಂದು ಪರಿಶಿಷ್ಟ ಜಾತಿಯು ಈ ಎಲ್ಲಾ ಹೋರಾಟಗಳನ್ನು ಯಶಸ್ಸುಗೊಳಿಸುವುದು ಸಾಧ್ಯವಿಲ್ಲ. ಎಲ್ಲಾ ಪರಿಶಿಷ್ಟ ಜಾತಿಗಳು ಒಟ್ಟುಗೂಡಿ ಇವನ್ನು ಸಾಧಿಸಬೇಕಿದೆ.

ಒಳಮೀಸಲಾತಿಯ ಜಾರಿಯು ಪರಿಶಿಷ್ಟ ಜಾತಿಗಳ ಸಾಂಸ್ಕೃತಿಕ ಭಿನ್ನತೆಯನ್ನು ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಏಕತೆಯೆಡೆಗೆ ಕೊಂಡೊಯ್ಯುತ್ತದೆ. ಉಷಾ ಮೆಹ್ರಾ ಸಮಿತಿಯ ಶಿಫಾರಸ್ಸಿನಂತೆ ಸಾಂವಿಧಾನಿಕ ತಿದ್ದುಪಡಿಯಿಂದಾಗುವ ‘ಒಳಮೀಸಲಾತಿಗೆ’ ಹೆಚ್ಚು ತೂಕವಿರಲಿದೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪಡೆಯುವುದರಿಂದ ಯಾರಿಗೂ ನಷ್ಟವಾಗಲಾರದು. ಭವಿಷ್ಯದಲ್ಲಿ ‘ಒಳಮೀಸಲಾತಿ’ ಲಾಭವನ್ನೇ ನೀಡುತ್ತದೆ. ಆದ್ದರಿಂದ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯು ಬಹಿರಂಗಗೊಳ್ಳಬೇಕು. ಚರ್ಚಿತವಾಗಿ ಕೇಂದ್ರಕ್ಕೆ ಶಿಫಾರಸುಗೊಳ್ಳಬೇಕು. ಇದನ್ನು ಸಾಧಿಸಲು ಎಡಗೈ, ಬಲಗೈ ಮತ್ತು ಸ್ಪೃಶ್ಯ ಜಾತಿಗಳು ಒಗ್ಗಟ್ಟಾಗಿ ಹೋರಾಡಬೇಕು. ಮೀಸಲಾತಿಯ ಒಟ್ಟು ಪ್ರಮಾಣವನ್ನು ಹೆಚ್ಚಿಸಿಕೊಳ್ಳುವವರೆಗೂ ಒಗ್ಗಟ್ಟಿನಿಂದ ಹೋರಾಡಬೇಕು.

(ಲೇಖಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ)

***

ಸಣ್ಣ ಜಾತಿಗಳನ್ನು ಮರೆಯದಿರೋಣ

1976ರ ಎಲ್.ಜಿ.ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಮಾದಿಗ ಜಾತಿಯ ಜನಸಂಖ್ಯೆ ರಾಜ್ಯದ ಒಟ್ಟಾರೆ ಪರಿಶಿಷ್ಟರಲ್ಲಿ ಶೇ 57.3% ರಷ್ಟಿತ್ತು. ಹಾಗಾಗಿ, ಶೇ 15ರಷ್ಟು ಮೀಸಲಾತಿಯಲ್ಲಿ ಮಾದಿಗರಿಗೆ ಸಿಗಬೇಕಾದ ಪಾಲು ಶೇ 8ರಷ್ಟು. ಆದರೆ ಸಿಕ್ಕಿರುವುದು ಶೇ 2ರಷ್ಟು ಮಾತ್ರ. ಹಾಗಾದರೆ ಇನ್ನುಳಿದ ಶೇ 6ರಷ್ಟನ್ನು ಯಾರು ದೋಚಿದರು? ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾದರೆ, ಕಳೆದುಕೊಂಡಿರುವ ಶೇ 6ರಷ್ಟರ ಅವಕಾಶಗಳನ್ನು ಶಿಕ್ಷಣ, ಉದ್ಯೋಗ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ವಾಪಸ್ ಪಡೆಯಬಹುದೆಂಬ ನಿರೀಕ್ಷೆಯಿಂದ ಮಾದಿಗ ಜಾತಿಯು ‘ಸದಾಶಿವ ವರದಿ’ ಜಾರಿಗೆ ಹಟ ಹಿಡಿದು ಕುಳಿತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದ ಉದ್ದಗಲಕ್ಕೂ ಧರಣಿ, ಜನಶಕ್ತಿ ಸಮಾವೇಶ, ವಿಚಾರ ಸಂಕಿರಣಗಳನ್ನು ಸಂಘಟಿಸುತ್ತಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೀಸಲಾತಿಯ ಆಶಯಕ್ಕೆ‌ ಅನುಗುಣವಾಗಿಯೇ ಮಾದಿಗ ಜಾತಿಯ ಒಳಮೀಸಲಾತಿಯ ಆಗ್ರಹವಿರುವುದನ್ನು ಇತರ ಜಾತಿಗಳು ಸಂಯಮದಿಂದ ಅರಿತುಕೊಳ್ಳಬೇಕಿದೆ. ಒಳಮೀಸಲಾತಿ ಮಾದಿಗ ಸಮುದಾಯದ ಆಗ್ರಹ ಅಂತ ಮಾತ್ರ ಭಾವಿಸಬಾರದು, ಬದಲಾಗಿ ಇನ್ನೂ ಪರಿಶಿಷ್ಟ ಮೀಸಲಿನ ಫಲಾನುಭವಿಗಳಾಗಿಲ್ಲದಿರುವ ಅತ್ಯಂತ ಸಣ್ಣ ಸಣ್ಣ ಜಾತಿಗಳಿವೆ ಎಂಬುದನ್ನು ಮರೆಯಕೂಡದು. ಅವುಗಳಿಗೆ ಪ್ರಾತಿನಿಧ್ಯ ದೊರೆಯುವುದು ಕೂಡ ಅಷ್ಟೇ ಮುಖ್ಯ. ಆದರೆ‌ ಆ ಸಣ್ಣ ಸಣ್ಣ ಜಾತಿಗಳಿಗೆ ಒಳಮೀಸಲಾತಿ ಹೋರಾಟ ನಡೆಸುವುದು ಇನ್ನೂ ಸಾಧ್ಯವಾಗಿಲ್ಲ ಅಷ್ಟೇ. ಹಾಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಅವಕಾಶಗಳಿಂದ ವಂಚಿತರಾಗುಳಿದಿರುವ ಎಲ್ಲಾ ಸಮುದಾಯಗಳಿಗೆ ಒಳಮೀಸಲು ಜಾರಿಯಾಗಬೇಕಿರುವುದು ನ್ಯಾಯಸಮ್ಮತವಾದುದಾಗಿದೆ. ಮಾದಿಗ ಸಮುದಾಯವು ನಡೆಸುತ್ತಿರುವ ಒಳಮೀಸಲಾತಿ ಹೋರಾಟದ ವಿರುದ್ಧ ಯಾರೇ ಆಗಲಿ ಧ್ವನಿಯೆತ್ತುವುದು ಸಾಮಾಜಿಕ ನ್ಯಾಯದ ವಿರುದ್ಧದ ನಡೆಯಾದೀತು. ಎಲ್ಲಾ ಪರಿಶಿಷ್ಟರೂ ಒಳಮೀಸಲಾತಿ ಹೋರಾಟದ ಜೊತೆಗೂಡಬೇಕಿದೆ ವಿನಃ ವಿರೋಧದ ನಿಲುವು ನಿಜವಾಗಿಯೂ ದುರದೃಷ್ಟಕರ.

–ಸಿದ್ದು.ಮಾದರ (ಮಮದಾಪೂರ), ಸಂಶೋಧನಾ ವಿದ್ಯಾರ್ಥಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದಲಿತ ಯುವ ಸಾಹಿತ್ಯ ಚಿಂತನ ವೇದಿಕೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT