ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಏನಾಗ್ತಿದೆ, ಭಾರತವನ್ನು ಕೆರಳಿಸುತ್ತಿದೆಯೇ ಪಾಕ್?

ಸಮಗ್ರ ಮಾಹಿತಿ
Last Updated 25 ಸೆಪ್ಟೆಂಬರ್ 2020, 7:03 IST
ಅಕ್ಷರ ಗಾತ್ರ
ADVERTISEMENT
""
""

ಭಾರತದ ತೀವ್ರ ಆಕ್ಷೇಪದ ನಡುವೆಯೂ ಗಿಲ್ಗಿಟ್‌– ಬಾಲ್ಟಿಸ್ತಾನ ಶಾಸನಸಭೆಗೆ ಚುನಾವಣಾ ದಿನಾಂಕ ಘೋಷಿಸುವ ಮೂಲಕ ಪಾಕಿಸ್ತಾನವು ಮತ್ತೆ ವಿವಾದವನ್ನು ಮುನ್ನೆಲೆಗೆ ತಂದಿದೆ. ಗಿಲ್ಗಿಟ್‌– ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವಂತೆ ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅತಿಕ್ರಮಿತ ಕಾಶ್ಮೀರವೂ ಸೇರಿದಂತೆ ಗಿಲ್ಗಿಟ್‌– ಬಾಲ್ಟಿಸ್ತಾನ ಅವಿಭಾಜ್ಯ ಅಂಗ ಎಂದೂ ಭಾರತ ಹೇಳುತ್ತಲೇ ಬಂದಿದೆ.

ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಏನಾಗ್ತಿದೆ?: ಗಿಲ್ಗಿಟ್–ಬಾಲ್ಟಿಸ್ತಾನ ಶಾಸನಸಭೆಯ ಅವಧಿ ಜೂನ್‌ 24ಕ್ಕೆ ಕೊನೆಗೊಂಡಿತ್ತು. ಕಳೆದ ಅವಧಿಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಆಡಳಿತ ನಡೆಸಿತ್ತು. ಆದರೆ ಈ ಪ್ರದೇಶ ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಯಲ್ಲಿ ಬರುವುದರಿಂದ ಪಾಕಿಸ್ತಾನದ ಹಸ್ತಕ್ಷೇಪವನ್ನು ಭಾರತ ಆಕ್ಷೇಪಿಸುತ್ತಿದೆ (ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್–ಬಾಲ್ಟಿಸ್ತಾನ ಭಾರತದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಲೇ ಬಂದಿದೆ). ಮೊದಲಿಗೆ, ಆಗಸ್ಟ್‌ 18ರಂದು ಚುನಾವಣೆ ನಿಗದಿಪಡಿಸಿದ್ದ ಪಾಕಿಸ್ತಾನ ನಂತರ ಕೋವಿಡ್–19 ಸೋಂಕು ಹರಡುವಿಕೆ ವ್ಯಾಪಕಗೊಂಡ ಕಾರಣ ಮುಂದೂಡಿತ್ತು. ಇದೀಗ ನವೆಂಬರ್ 15ರಿಂದ ಚುನಾವಣೆ ನಡೆಸುವುದಾಗಿ ಘೋಷಿಸಿದೆ.

ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪೂರ್ಣ ಪ್ರಮಾಣ ಪ್ರಾಂತ್ಯದ ಸ್ಥಾನಮಾನ ನೀಡುವ ಸಂಬಂಧ ಪಾಕ್‌ನಲ್ಲಿ ಚರ್ಚೆಗಳು ನಡೆಯತ್ತಿರುವ ಬೆನ್ನಲ್ಲೇ ಈ ಕ್ರಮ ಕೈಗೊಂಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತ ಹೇಳೋದೇನು?: ‘ಸೇನಾ ವಶದಲ್ಲಿರುವ ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿನ ಯಥಾಸ್ಥಿತಿ ಬದಲಾಯಿಸಲು ಪಾಕಿಸ್ತಾನ ಯತ್ನಿಸುವುದು ಅಕ್ರಮ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಜಮ್ಮು–ಕಾಶ್ಮೀರ ಮತ್ತು ಲಡಾಖ್‌ನ ಎಲ್ಲ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

‘ಗಿಲ್ಗಿಟ್–ಬಾಲ್ಟಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹೀಗಾಗಿ ಆ ಪ್ರದೇಶಗಳ ಮೇಲೆ ಪಾಕಿಸ್ತಾನಕ್ಕಾಗಲೀ ಆ ದೇಶದ ನ್ಯಾಯಾಂಗಕ್ಕಾಗಿ ಯಾವುದೇ ಹಕ್ಕಿಲ್ಲ’ ಎಂದು ಭಾರತ ಈ ಹಿಂದೆಯೂ ಸ್ಪಷ್ಟಪಡಿಸಿತ್ತು.

ಇದೇ ಮೊದಲಲ್ಲ: ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಚುನಾವಣೆ ನಡೆಸಲು ಯತ್ನಿಸುತ್ತಿರುವುದು ಇದೇ ಮೊದಲಲ್ಲ. 2009ರಿಂದಲೇ ಪ್ರಯತ್ನಿಸುತ್ತಿದೆ. 2009ರಲ್ಲಿ ಆ ಪ್ರದೇಶವನ್ನು ‘ಉತ್ತರ ಪ್ರದೇಶ’ ಎಂದು ಮರುನಾಮಕರಣ ಮಾಡಿರುವ ಪಾಕಿಸ್ತಾನ, ಭಾರತದ ತೀವ್ರ ಪ್ರತಿರೋಧದ ನಡುವೆಯೇ 2015ರ ಜೂನ್‌ನಲ್ಲಿ ಚುನಾವಣೆ ನಡೆಸುವಲ್ಲಿ ಯಶಸ್ವಿಯೂ ಆಗಿದೆ.

ಪಾಕಿಸ್ತಾನ ಚುನಾವಣೆ ನಡೆಸಬಹುದೇ? ಇತಿಹಾಸ ಏನು ಹೇಳುತ್ತೆ?: ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವುದಕ್ಕೆ ಪಾಕಿಸ್ತಾನಕ್ಕೆ ಹಕ್ಕಿದೆಯೇ? ಭಾರತ–ಪಾಕಿಸ್ತಾನ ನಡುವಣ ಇತಿಹಾಸ, ಜಮ್ಮು–ಕಾಶ್ಮೀರದ ಅಂದಿನ ರಾಜ ಹರಿಸಿಂಗ್ ಭಾರತದ ಜತೆ ಮಾಡಿಕೊಂಡ ಒಪ್ಪಂದ, ಅದರ ನಂತರ ನಡೆದ ಬೆಳವಣಿಗೆಗಳ ಆಧಾರದಲ್ಲಿ ಹೇಳುವುದಾದರೆ ಗಿಲ್ಗಿಟ್–ಬಾಲ್ಟಿಸ್ತಾನದ ಯಾವುದೇ ಆಂತರಿಕ ವಿಚಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುವಂತಿಲ್ಲ. ಅದೂ ಸಹ ಜಮ್ಮು–ಕಾಶ್ಮೀರದ ಅಂಗ.

ಜಮ್ಮು ಕಾಶ್ಮೀರದ ಆಡಳಿತಕ್ಕೆ ಸಂಬಂಧಿಸಿ 1935ರಲ್ಲಿ ಅಂದಿನ ರಾಜ ಹರಿಸಿಂಗ್ ಬ್ರಿಟಿಷ್ ಆಡಳಿತದ ಜತೆ 60 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, 1947ರಲ್ಲಿ ಬ್ರಿಟಿಷ್ ಆಡಳಿತ ಅಂತ್ಯಗೊಳ್ಳುವುದರೊಂದಿಗೆ ಆ ಒಪ್ಪಂದ ಮುರಿದುಬೀಳುತ್ತದೆ. ಜಮ್ಮು–ಕಾಶ್ಮೀರದ ಸಂಪೂರ್ಣ ಆಡಳಿತ ಹರಿಸಿಂಗ್ ವಶಕ್ಕೆ ಒಳಪಡುತ್ತದೆ. ಈ ವೇಳೆ, ಪಾಕಿಸ್ತಾನವು ಸೇನಾ ಪಡೆಗಳು ಮತ್ತು ಕೆಲವು ಬುಡಕಟ್ಟು ಜನರನ್ನು ಗಿಲ್ಗಿಟ್–ಬಾಲ್ಟಿಸ್ತಾನ ಸೇರಿದಂತೆ ಜಮ್ಮು–ಕಾಶ್ಮೀರದ ಪ್ರದೇಶಗಳಿಗೆ ನುಗ್ಗಿಸಿ ಆ ಪ್ರದೇಶವನ್ನು ವಶಪಡಸಿಕೊಳ್ಳಲು ಮುಂದಾಗಿತ್ತು. ಇದನ್ನು ಎದುರಿಸಲು ಸಾಧ್ಯವಾಗದ ರಾಜ ಹರಿಸಿಂಗ್ ಭಾರತದ ಬಳಿ ರಕ್ಷಣೆ ಕೋರುತ್ತಾರೆ. ಹರಿಸಿಂಗ್ ಅವರು ಭಾರತದ ಜತೆ ಒಪ್ಪಂದ ಮಾಡಿಕೊಂಡ ಬಳಿಕ ಭಾರತೀಯ ಸೇನೆಯು ಜಮ್ಮು–ಕಾಶ್ಮೀರ ಪ್ರವೇಶಿಸಿ ಪಾಕಿಸ್ತಾನ ಸೇನೆ ಮತ್ತು ಬುಡಕಟ್ಟು ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತದೆ. ಬಳಿಕ 1949ರಲ್ಲಿ ಕದನವಿರಾಮ ಘೋಷಣೆಯಾಗುತ್ತದೆ. ಆ ಸಂದರ್ಭದಲ್ಲಿ ಮೀರ್‌ಪುರ, ಮುಜಾಫರಾಬಾದ್, ಗಿಲ್ಗಿಟ್–ಬಾಲ್ಟಿಸ್ತಾನ ಸೇರಿದಂತೆ ಪಾಕಿಸ್ತಾನ ವಶದಲ್ಲಿದ್ದ ಪ್ರದೇಶಗಳನ್ನು ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದು ಪರಿಗಣಿಸಲಾಗಿದೆ.

ಪಾಕಿಸ್ತಾನಕ್ಕೆ ಹಕ್ಕಿಲ್ಲ

ಅತಿಕ್ರಮಿಸಿಕೊಂಡಿರುವ ಪ್ರದೇಶವನ್ನು ಪಾಕಿಸ್ತಾನವು ‘ಆಜಾದ್ ಕಾಶ್ಮೀರ’ ಎಂದು ಕರೆಯುತ್ತಿದೆ. 1949ರಲ್ಲಿ ‘ಆಜಾದ್ ಕಾಶ್ಮೀರ’ದ ಜತೆ ಮಾಡಿಕೊಂಡ ‘ಕರಾಚಿ ಒಪ್ಪಂದ’ದ ಪ್ರಕಾರ ಪಾಕಿಸ್ತಾನಕ್ಕೆ ಗಿಲ್ಗಿಟ್–ಬಾಲ್ಟಿಸ್ತಾನದ ಮೇಲೆ ನೇರ ನಿಯಂತ್ರಣವಿದೆ ಎನ್ನಲಾಗಿದೆ. ಅಂದಿನಿಂದಲೂ ಆ ಪ್ರದೇಶದ ಜನರು ಮೂಲಭೂತ, ರಾಜಕೀಯ ಹಕ್ಕುಗಳಿಂದ ವಂಚಿತರಾಗಿಯೇ ಇದ್ದಾರೆ. ಪಾಕಿಸ್ತಾನದ ಸಂಸತ್‌ನಲ್ಲಿ ಗಿಲ್ಗಿಟ್–ಬಾಲ್ಟಿಸ್ತಾನದ ಪ್ರತಿನಿಧಿ ಇಲ್ಲ. 1956, 1962 ಮತ್ತು 1973ರಲ್ಲಿ ಪಾಕಿಸ್ತಾನ ಸರ್ಕಾರವು ಅಂಗೀಕರಿಸಿರುವ ಮೂರೂ ಸಂವಿಧಾನಗಳಲ್ಲೂ ಗಿಲ್ಗಿಟ್–ಬಾಲ್ಟಿಸ್ತಾನ ಭೌಗೋಳಿಕ ಪ್ರದೇಶ ಆ ದೇಶಕ್ಕೆ ಸೇರಿದ್ದೆಂಬ ಅಂಶ ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಆಂತರಿಕ ಸಂವಿಧಾನದಲ್ಲೂ ಗಿಲ್ಗಿಟ್–ಬಾಲ್ಟಿಸ್ತಾನ ಅದಕ್ಕೆ ಸೇರಿದ್ದೆಂಬ ಉಲ್ಲೇಖವಿಲ್ಲ ಎಂದು ‘ಇಂಡಿಯಾ ಕೌನ್ಸಿಲ್ ಫಾರ್ ವರ್ಲ್‌ಡ್‌ ಅಫೇರ್ಸ್‌’ನ ಸಂಶೋಧಕ ಡಾ.ಆಶಿಷ್ ಶುಕ್ಲಾ ಅವರು ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಭಾರತವನ್ನು ಮತ್ತೆಮತ್ತೆ ಕೆರಳಿಸ್ತಿದೆ ಪಾಕಿಸ್ತಾನ

ಪಾಕ್ ಆಕ್ರಮಿತ ವಿಚಾರಕ್ಕೆ ಸಂಬಂಧಿಸಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಭಾರತವನ್ನು ಕೆರಳಿಸುತ್ತಲೇ ಇದೆ. ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕವಂತೂ ಪಾಕಿಸ್ತಾನ ಒಂದಲ್ಲ ಒಂದು ರೀತಿಯಲ್ಲಿ ತಗಾದೆ ತೆಗೆಯುತ್ತಲೇ ಇದೆ. ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವುದು ಒಂದಡೆಯಾದರೆ, ಆ ಪ್ರದೇಶಕ್ಕೆ ‘ಪರಿಪೂರ್ಣ ಪ್ರಾಂತ್ಯ‘ದ ಸ್ಥಾನಮಾನ ನೀಡುವುದಾಗಿಯೂ ಹೇಳುತ್ತಿದೆ.

ಪಾಕಿಸ್ತಾನದ ಈ ಎಲ್ಲ ಕೃತ್ಯಗಳಿಗೆ ಭಾರತವೂ ತಕ್ಕ ತಿರುಗೇಟು ನೀಡುತ್ತಲೇ ಬಂದಿದೆ. 2019ರ ನವೆಂಬರ್‌ನಲ್ಲಿ ಹೊಸ ನಕ್ಷೆ ಬಿಡುಗಡೆ ಮಾಡಿದ್ದ ಭಾರತವು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲ್ಗಿಟ್–ಬಾಲ್ಟಿಸ್ತಾನವನ್ನು ಕೂಡ ತನ್ನ ಗಡಿಯೊಳಕ್ಕೆ ಸೇರಿಸಿತ್ತು. ಹೊಸ ಭೂಪಟದಲ್ಲಿ ಜಮ್ಮು–ಕಾಶ್ಮೀರದ ಗಡಿಯೊಳಗೆ ಪಿಒಕೆಯ ರಾಜಧಾನಿ ಮುಜಫರಾಬಾದ್‌ ಅನ್ನೂ ಲಡಾಖ್ ಗಡಿಯೊಳಗೆ ಗಿಲ್ಗಿಟ್–ಬಾಲ್ಟಿಸ್ತಾನವನ್ನೂ ಗುರುತಿಸಲಾಗಿತ್ತು.

ಭೌಗೋಳಿಕವಾಗಿ ಏಕೆ ಮುಖ್ಯ?

ಭೌಗೋಳಿಕವಾಗಿ ಗಿಲ್ಗಿಟ್–ಬಾಲ್ಟಿಸ್ತಾನ ಮತ್ತು ಒಟ್ಟು ಪಿಒಕೆ ಪ್ರದೇಶ ಭಾರತಕ್ಕೆ ಬಹು ಮುಖ್ಯವಾದದ್ದು. ವಿವಾದಿತ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಎಸಿ) ಸಹ ಇದೇ ಪ್ರದೇಶದ ಮೇಲೆ ಹಾದುಹೋಗುತ್ತದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT