ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಭಾರತ–ರಷ್ಯಾ ಮೈತ್ರಿಗೆ ಹೊಸ ಭಾಷ್ಯ

Last Updated 13 ಡಿಸೆಂಬರ್ 2021, 2:18 IST
ಅಕ್ಷರ ಗಾತ್ರ

ಕೋವಿಡ್‌ ಸಾಂಕ್ರಾಮಿಕವು ಜಗತ್ತನ್ನು ತಲ್ಲಣ ಗೊಳಿಸಿದ ನಂತರದ ಸುಮಾರು ಎರಡು ವರ್ಷಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಎರಡು ಬಾರಿ ಮಾತ್ರ ತಮ್ಮ ದೇಶ ಬಿಟ್ಟು ಹೊರಗೆ ಹೋಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಜತೆಗೆ ಒಂದು ಶೃಂಗಸಭೆ ನಡೆದರೆ, ಇನ್ನೊಂದು ಬಾರಿ ಭಾರತಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪುಟಿನ್‌ ಭೇಟಿಯೇ ಎರಡು ದೇಶಗಳ ಸಂಬಂಧ ಎಷ್ಟು ಮುಖ್ಯ ಎಂಬುದನ್ನು ಸಾರಿ ಹೇಳುತ್ತದೆ. ‘ಭಾರತವು ಪ್ರಬಲ, ಸ್ನೇಹಮಯಿ ದೇಶ. ಕಾಲದ ಪರೀಕ್ಷೆಯಲ್ಲಿ ಗೆದ್ದ ಗೆಳೆಯ’ ಎಂಬ ಪುಟಿನ್‌ ಅವರ ಬಣ್ಣನೆ ಕೂಡ ನಂಟಿನ ಮಹತ್ವವೇನು ಎಂಬುದನ್ನು ಹೇಳಿದೆ. ‘ರಾಜಕೀಯ ಸಮೀಕರಣ, ಲೆಕ್ಕಾಚಾರಗಳು ಬದಲಾದರೂ ಭಾರತ–ರಷ್ಯಾ ಸಂಬಂಧ ಸದಾ ಸ್ಥಿರ’ ಎಂದು ಮೋದಿಯವರೂ ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಇದೆ. 1947ರಲ್ಲಿ ಭಾರತಕ್ಕೆ ಮಾನ್ಯತೆ ಕೊಟ್ಟ ಮೊದಲ ದೇಶಗಳಲ್ಲಿ ಸೋವಿಯತ್‌ ಒಕ್ಕೂಟ ಕೂಡ ಒಂದು. 1950ರ ದಶಕದ ಮಧ್ಯ ಭಾಗದಿಂದ ಸಂಬಂಧ ಇನ್ನಷ್ಟು ನಿಕಟಗೊಂಡಿತು. ಭಾರತದ ಆರ್ಥಿಕ ಅಭಿವೃದ್ಧಿಗಾಗಿ ಇಲ್ಲಿ ಬಂಡವಾಳ ಹೂಡಿಕೆಗೂ ಸೋವಿಯತ್‌ ಒಕ್ಕೂಟ ಸಿದ್ಧವಾಯಿತು. ರಕ್ಷಣಾ–ತಾಂತ್ರಿಕ ಸಹಕಾರಕ್ಕೆ 1962ರಲ್ಲಿ ಒಪ್ಪಿಕೊಳ್ಳಲಾಯಿತು. 1971ರಲ್ಲಿ ಶಾಂತಿ ಮತ್ತು ಗೆಳೆತನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು, ಪರಮಾಣು ಪೂರೈಕೆದಾರರ ಗುಂಪಿಗೆ ಭಾರತವನ್ನು ಸೇರಿಸಿಕೊಳ್ಳಬೇಕು ಎಂಬುದಕ್ಕೆ ರಷ್ಯಾದ ದೃಢ ಬೆಂಬಲ ಇದೆ.

1991ರಲ್ಲಿ ಸೋವಿಯತ್‌ ಒಕ್ಕೂಟ ಪತನಗೊಂಡು ರಷ್ಯಾ ಸೇರಿ 15 ಸ್ವತಂತ್ರ ದೇಶಗಳು ರೂಪುಗೊಂಡವು. 1990ರ ದಶಕದಲ್ಲಿ ಭಾರತವು ಆರ್ಥಿಕ ಉದಾರೀಕರಣ ನೀತಿ ಅನುಸರಿಸಿತು. ಆರ್ಥಿಕ ನೀತಿಯು ಬದಲಾದಂತೆ, ರಕ್ಷಣೆ, ವ್ಯಾಪಾರ– ವಹಿವಾಟು ಮುಂತಾದ ವಿಷಯಗಳಲ್ಲಿ ಭಾರತವು ವಿವಿಧ ದೇಶಗಳ ಜತೆಗೆ ಸಂಬಂಧವನ್ನು ವಿಸ್ತರಿಸಿಕೊಂಡಿತು. ಅಮೆರಿಕ, ಫ್ರಾನ್ಸ್‌, ಇಸ್ರೇಲ್‌ ಮುಂತಾದ ದೇಶಗಳು ಭಾರತಕ್ಕೆ ಈಗ ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿವೆ. 2009–13ರ ಅವಧಿಗೆ ಹೋಲಿಸಿದರೆ 2014–18ರ ಅವಧಿಯಲ್ಲಿ ಭಾರತಕ್ಕೆ ರಷ್ಯಾದ ರಕ್ಷಣಾ ಸಾಮಗ್ರಿ ಪೂರೈಕೆಯು ಸುಮಾರು ಶೇ 40ಕ್ಕಿಂತಲೂ ಹೆಚ್ಚು ಕುಸಿದಿದೆ ಎಂಬ ವರದಿಗಳಿವೆ. ಹಾಗಿದ್ದರೂ, ಭಾರತದಲ್ಲಿ ಈಗ ಬಳಕೆಯಲ್ಲಿರುವ ರಕ್ಷಣಾ ಸಾಮಗ್ರಿಗಳಲ್ಲಿ ಶೇ 86ರಷ್ಟು ರಷ್ಯಾದಿಂದ ಆಮದಾದವು ಎಂದು ಇನ್ನೊಂದು ವರದಿ ಹೇಳಿದೆ.

ವಾಯು ‍ಪ್ರದೇಶ ರಕ್ಷಣೆಯ ಕ್ಷಿಪಣಿ ನಿರೋಧಕ ವ್ಯವಸ್ಥೆ–ಟ್ರಯಂಫ್‌ ಅನ್ನು ರಷ್ಯಾ ಈ ವರ್ಷದ ಕೊನೆಯ ಹೊತ್ತಿಗೆ ಪೂರೈಸಲಿದೆ. ಇದು ₹39 ಸಾವಿರ ಕೋಟಿಯ ಒಪ್ಪಂದ. ಆರು ಲಕ್ಷಕ್ಕೂ ಹೆಚ್ಚು ಎ.ಕೆ–203 ರೈಫಲ್‌ಗಳನ್ನು ‘ಭಾರತದಲ್ಲಿ ತಯಾರಿಸಿ’ ಯೋಜನೆ ಅಡಿಯಲ್ಲಿ ಅಮೇಠಿಯಲ್ಲಿ ತಯಾರಿಸುವ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿವೆ. ಇದು ₹5 ಸಾವಿರ ಕೋಟಿಯ ಒಪ್ಪಂದ.

ಹೀಗೆ ಭಾರತ–ರಷ್ಯಾ ನಡುವಣ ರಕ್ಷಣಾ ಸಂಬಂಧವು ಮತ್ತೆ ಪುನಶ್ಚೇತನದ ಹಾದಿಗೆ ಮರಳಿದೆ.

ರೂಪಾಯಿ ವ್ಯವಹಾರ

ಅಮೆರಿಕದ ‘ಎದುರಾಳಿ’ ದೇಶಗಳ ಜತೆಗೆ, ಬೇರೆ ದೇಶಗಳು ಡಾಲರ್ ಮತ್ತು ಯೂರೊ ಮೂಲಕ ಹಣಕಾಸು ವ್ಯವಹಾರ ಮಾಡಿದಾಗ ಮಾತ್ರ ನಿರ್ಬಂಧವು ಅನ್ವಯವಾಗುತ್ತದೆ. ಹೀಗಾಗಿ ಎಸ್‌–400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಯ ಹಣವನ್ನು ರೂಪಾಯಿಯಲ್ಲೇ ವರ್ಗಾಯಿಸಲು ಭಾರತ ಮತ್ತು ರಷ್ಯಾ ಒಪ್ಪಿಕೊಂಡಿವೆ. ಇದರಿಂದ ಅಮೆರಿಕವು ನಿರ್ಬಂಧ ಹೇರಲು ಅವಕಾಶವೇ ಇಲ್ಲದಂತಾಗುತ್ತದೆ ಎಂದು ಈ ಒಪ್ಪಂದ ಕುರಿತು ಮಾಹಿತಿ ಇರುವ, ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಯಂಫ್‌ ಖರೀದಿ: ಅಮೆರಿಕದ ನಿರ್ಬಂಧ ಸಾಧ್ಯತೆ ಕ್ಷೀಣ

ಟ್ರಯಂಫ್‌ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ರಷ್ಯಾ ಸೇನಾ ಸಹಕಾರ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ಶುಗಯೆವ್‌ ಇತ್ತೀಚೆಗೆ ಹೇಳಿದ್ದರು. ಈ ಪೂರೈಕೆಯಿಂದಾಗಿ ಭಾರತವು ಅಮೆರಿಕದ ನಿರ್ಬಂಧಗಳಿಗೆ ಒಳಗಾಗುವ ಅಪಾಯ ಎದುರಾಗಿದೆ. ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವ ದಾರಿಗಳನ್ನು ಭಾರತ ಹುಡುಕುತ್ತಿದೆ.

ಅಮೆರಿಕದ ಎದುರಾಳಿಗಳಿಗೆ ನಿರ್ಬಂಧದ ಮೂಲಕ ತಿರುಗೇಟು ಕಾಯ್ದೆಯನ್ನು (ಸಿಎಎಟಿಎಸ್‌ಎ) ಅಮೆರಿಕವು 2017ರಲ್ಲಿ ಜಾರಿಗೆ ತಂದಿದೆ. ಉಕ್ರೇನ್‌ನಲ್ಲಿ ರಷ್ಯಾದ ‘ಅತಿಕ್ರಮಣ’, ಅಮೆರಿಕದ ಚುನಾವಣೆಯಲ್ಲಿ ‘ಹಸ್ತಕ್ಷೇಪ’ ಮುಂತಾದ ಕಾರಣಗಳಿಂದಾಗಿ ರಷ್ಯಾವನ್ನು ‘ಎದುರಾಳಿ’ ಎಂದು ಅಮೆರಿಕ ಗುರುತಿಸಿದೆ. ಇಂತಹ ಎದುರಾಳಿ ದೇಶದ ಜತೆಗೆ ವ್ಯವಹರಿಸುವ ದೇಶದ ಮೇಲೆ ನಿರ್ಬಂಧ ಹೇರಲು ಕಾಯ್ದೆಯು ಅವಕಾಶ ಒದಗಿಸುತ್ತದೆ. ಹೀಗಾಗಿ, ಭಾರತವು ಅಮೆರಿಕದ ನಿರ್ಬಂಧಕ್ಕೆ ಒಳಗಾಗಬಹುದು. ರಷ್ಯಾದಿಂದ ಟ್ರಯಂಫ್‌ ವ್ಯವಸ್ಥೆಯನ್ನು ಖರೀದಿಸಿದ ಟರ್ಕಿ ಮೇಲೆ ಅಮೆರಿಕ ನಿರ್ಬಂಧ ಹೇರಿದ ಉದಾಹರಣೆಯೂ ಇದೆ.

ಟ್ರಯಂಫ್‌ ಪೂರೈಕೆಗಾಗಿ ರಷ್ಯಾ ಜತೆಗೆ 2016ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಿಎಎಟಿಎಸ್‌ಎಯನ್ನು ಅಮೆರಿಕವು ಜಾರಿಗೆ ತಂದದ್ದು 2017ರಲ್ಲಿ. ಹಾಗಾಗಿ, ರಷ್ಯಾ ಜತೆಗಿನ ಟ್ರಯಂಫ್‌ ಪೂರೈಕೆ ಒಪ್ಪಂದಕ್ಕೆ ಇದು ಅನ್ವಯ ಆಗುವುದಿಲ್ಲ ಎಂಬುದು ಭಾರತದ ಪ್ರತಿಪಾದನೆ.

ಭಾರತದ ಮೇಲೆ ನಿರ್ಬಂಧ ಹೇರುವುದು ಅಮೆರಿಕಕ್ಕೆ ಸುಲಭವೇನೂ ಅಲ್ಲ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಲೇ ಇದೆ. ಇದು ಭಾರತ ಮತ್ತು ಅಮೆರಿಕ ಎರಡೂ ದೇಶಗಳಿಗೂ ದೊಡ್ಡ ಬೆದರಿಕೆ. ಚೀನಾವನ್ನು ನಿಯಂತ್ರಣದಲ್ಲಿ ಇರಿಸಲು ಅಮೆರಿಕಕ್ಕೆ ಭಾರತದ ಬೆಂಬಲ ಅನಿವಾರ್ಯ. ಅದಲ್ಲದೆ, ಭಾರತ–ಅಮೆರಿಕ ಸಂಬಂಧ ಈಗ ಅತ್ಯಂತ ಆಪ್ತ ಎನ್ನುವ ಮಟ್ಟಕ್ಕೆ ತಲುಪಿದೆ. ವ್ಯಾಪಾರ, ನಾಗರಿಕ–ನಾಗರಿಕರ ನಡುವಣ ನಂಟು ಎಲ್ಲವೂ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ನಿರ್ಬಂಧದ ಮಾತು ಎಲ್ಲವನ್ನೂ ಕೆಡಿಸಬಲ್ಲುದು ಎಂಬ ಅರಿವು ಅಮೆರಿಕಕ್ಕೆ ಇದೆ.

ಅಮೆರಿಕದ ವಿದೇಶಾಂಗ ಖಾತೆಯ ಉಪಕಾರ್ಯದರ್ಶಿ ವೆಂಡಿ ಶೆರ್ಮನ್‌ ಅವರು ಎರಡು ತಿಂಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾಗ, ಟ್ರಯಂಫ್‌ ವ್ಯವಸ್ಥೆ ಖರೀದಿ ಒಪ್ಪಂದದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಇರುವ ಅಸಮಾಧಾನವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯ ಎಂದಿದ್ದರು. ಅಮೆರಿಕವು ನಿರ್ಬಂಧ ಹೇರುವ ನಿರ್ಧಾರ ಕೈಗೊಳ್ಳದು ಎಂಬುದರ ಸೂಚನೆ ಇದು.

ಶಸ್ತ್ರಾಗಾರ ನಿರ್ವಹಣೆಗೆ ರಷ್ಯಾ ಸಂಬಂಧ ಅನಿವಾರ್ಯ

ರಷ್ಯಾ ಮತ್ತು ಚೀನಾ ಸಂಬಂಧ ಉತ್ತಮವಾಗಿದೆ. ಈಗ ಚೀನಾ ಜತೆಗೆ ಗಡಿ ಸಂಘರ್ಷದ ಕಾರಣ, ಭಾರತ ಮತ್ತು ಚೀನಾ ಸಂಬಂಧ ಹಳಿತಪ್ಪಿದೆ. ಆದರೆ ಚೀನಾದ ಆಪ್ತ ರಾಷ್ಟ್ರವಾಗಿರುವ ರಷ್ಯಾದ ಜತೆಗೆ ರಕ್ಷಣಾ ಸಹಕಾರ ಒಪ್ಪಂದವನ್ನು ಹತ್ತು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ.

ಭಾರತೀಯ ಭೂಸೇನೆಯಲ್ಲಿರುವ ಟ್ಯಾಂಕ್‌ಗಳು, ಟ್ರಕ್‌ಗಳು, ಫಿರಂಗಿಗಳಲ್ಲಿ ರಷ್ಯಾದ್ದೇ ಸಿಂಹಪಾಲು. ಇನ್ನು ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಇರುವ ಹೆಲಿಕಾಪ್ಟರ್‌ಗಳು, ಯುದ್ಧ
ವಿಮಾನಗಳಲ್ಲಿ ಬಹುತೇಕವು ರಷ್ಯಾ ನಿರ್ಮಿತವೇ ಆಗಿವೆ. ಐದಾರು ದಶಕಗಳ ಹಿಂದೆ ಖರೀದಿಸಲಾದ ಇವುಗಳನ್ನು ಈಗಲೂ ಬಳಸಲಾಗುತ್ತಿದೆ. ಇವುಗಳಿಗೆ ಅಗತ್ಯವಿರುವ ಬಿಡಿಭಾಗಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದು–ಗುಂಡುಗಳಿಗಾಗಿ, ರಷ್ಯಾ ಜತೆಗೆ ಭಾರತವು ರಕ್ಷಣಾ ವಾಣಿಜ್ಯ ಸಂಬಂಧವನ್ನು ಮುಂದುವರಿಸುವುದು ಅನಿವಾರ್ಯವಾಗಿದೆ. ಜತೆಗೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ರಷ್ಯಾ ಜತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಅಗತ್ಯವೂ ಇದೆ.

ಭಾರತಕ್ಕೆ ಈಗ ತೀವ್ರತರವಾದ ಗಡಿತಂಟೆ ಇರುವುದು ಪಾಕಿಸ್ತಾನ ಮತ್ತು ಚೀನಾ ಜತೆಗೆ ಮಾತ್ರ. ಭಾರತದ ಜತೆಗಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ತಂಟೆ ಮಾಡುತ್ತಲೇ ಇದೆ. ಎಲ್‌ಎಸಿಯ ಉದ್ದಕ್ಕೂ ಚೀನಾ ತನ್ನ ಸೇನಾ ಇರುವಿಕೆಯನ್ನು ಹೆಚ್ಚಿಸುತ್ತಿದೆ. ಜತೆಗೆ ತನ್ನ ನೆಲದ ಯಾವುದೇ ಪ್ರದೇಶದಿಂದಲಾದರೂ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಬಹುದಾದ ಪ್ರಬಲ ಕ್ಷಿಪಣಿಗಳನ್ನು ಹೊಂದಿದೆ. ಹೀಗಾಗಿ ಅಂತಹ ಕ್ಷಿಪಣಿಗಳ ದಾಳಿಯನ್ನು ತಡೆಯಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಭಾರತಕ್ಕೆ ಅನಿವಾರ್ಯವಾಗಿದೆ. ರಷ್ಯಾದ ಎಸ್‌–400 ಟ್ರಯಂಫ್ ಮಾತ್ರವೇ ಜಗತ್ತಿನ ಅತ್ಯಂತ ಪ್ರಬಲ ಕ್ಷಿಪಣಿ ನಿರೋಧಕ ವ್ಯವಸ್ಥೆ ಎನಿಸಿದೆ. ಹೀಗಾಗಿ ಅನಿವಾರ್ಯವಾಗಿ ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ಖರೀದಿಸಿದೆ.

ಭಾರತವು ಅಮೆರಿಕದ ಜತೆಗೆ ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆಗಳ ಖರೀದಿಗೆ ಹಲವು ಬಾರಿ ಯತ್ನಿಸಿದೆ. ಆದರೆ ಅಮೆರಿಕವೇ ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ರಷ್ಯಾದ ಎಸ್‌–400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯಂತಹ, ಥಾಡ್ ಎಂಬ ವ್ಯವಸ್ಥೆಯನ್ನು ಅಮೆರಿಕ ಹೊಂದಿದೆ. ಆದರೆ ಭಾರತಕ್ಕೆ ಅದನ್ನು ಮಾರಾಟ ಮಾಡಲು ಅಮೆರಿಕ ಯಾವುದೇ ಆಸಕ್ತಿ ತೋರಲಿಲ್ಲ. ಯುದ್ಧವಿಮಾನಗಳ ಖರೀದಿಗೆ ಭಾರತ ಟೆಂಡರ್‌ ಕರೆದಾಗಲೂ ಅಮೆರಿಕದ ಕಂಪನಿಗಳು ಅದರಲ್ಲಿ ಭಾಗಿಯಾಗಲಿಲ್ಲ. ಈಗ ಬಾಂಬರ್ ಡ್ರೋನ್‌ ಖರೀದಿಗೆ ಭಾರತ ಆಸಕ್ತಿ ತೋರುತ್ತಿದ್ದರೂ, ಒಪ್ಪಂದಕ್ಕೆ ಸಹಿ ಹಾಕುವುದುನ್ನು ಅಮೆರಿಕ ಮುಂದೂಡುತ್ತಲೇ ಇದೆ.

ಈ ಎಲ್ಲಾ ಕಾರಣಗಳಿಂದಾಗಿ, ಭಾರತವು ತನ್ನ ಶಸ್ತ್ರಾಗಾರವನ್ನು ಸಜ್ಜಾಗಿ ಇರಿಸಿಕೊಳ್ಳಲು ರಷ್ಯಾವನ್ನು ಅವಲಂಬಿಸುವುದು ಅನಿವಾರ್ಯವೇ ಆಗಿದೆ.

ರಷ್ಯಾ ಈಗಲೂ ಪ್ರಭಾವಿ ರಾಷ್ಟ್ರವೇ?

ಶೀತಲ ಸಮರದ ವೇಳೆಯಲ್ಲಿ ಅಮೆರಿಕಕ್ಕೆ ಪರ್ಯಾಯ ಶಕ್ತಿಯಂತಿದ್ದ ರಷ್ಯಾ, ಸೋವಿಯತ್ ಒಕ್ಕೂಟದ ಪತನದ ನಂತರ ಆ ಶಕ್ತಿಯನ್ನು ಕಳೆದುಕೊಂಡಿತ್ತು. ಆದರೆ ವಿಶ್ವದ ಹಲವು ರಾಷ್ಟ್ರಗಳನ್ನು ನಿಯಂತ್ರಿಸುವ ಸೂತ್ರವನ್ನು ರಷ್ಯಾ ಈಗಲೂ ಹೊಂದಿದೆ. ವಿಶ್ವದ 97 ದೇಶಗಳಿಗೆ ರಷ್ಯಾ ಈಗಲೂ ಶಸ್ತ್ರಾಸ್ತ್ರ ಮತ್ತು ಮದ್ದು–ಗುಂಡನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ.

ಆದರೆ ಸೇನಾ ನಿರ್ವಹಣೆಗಾಗಿ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಭಾರತ, ಈಜಿಪ್ಟ್, ಚೀನಾ, ಕಜಕಿಸ್ತಾನ್, ಇಂಡೊನೇಷ್ಯಾ, ಇರಾನ್, ವಿಯೆಟ್ನಾಂ ಮತ್ತಿತರ ದೇಶಗಳು. 19ನೇ ಶತಮಾನದಲ್ಲಿ ಅಮೆರಿಕದ ಜತೆಗೆ ವೈರತ್ವ ಇಲ್ಲವೇ ಸೇನಾ ಸಂಘರ್ಷ ಹೊಂದಿದ್ದ ಬಹುತೇಕ ರಾಷ್ಟ್ರಗಳು ತಮ್ಮ ಸೇನೆಗಳ ಶಸ್ತ್ರಾಗಾರಗಳ ನಿರ್ವಹಣೆಗಾಗಿ ರಷ್ಯಾವನ್ನು ಅವಲಂಬಿಸಿವೆ. ಹೀಗಾಗಿ ಅಮೆರಿಕದಷ್ಟು ಭಾರಿ ಪ್ರಾಬಲ್ಯ ಹೊಂದಿಲ್ಲದಿದ್ದರೂ, ರಷ್ಯಾ ಜಾಗತಿಕವಾಗಿ ಪ್ರಭಾವ ಹೊಂದಿದೆ.

ಇಡೀ ಜಗತ್ತಿನ ತೈಲ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಒಪೆಕ್‌+ ದೇಶಗಳಲ್ಲಿ (ತೈಲ ಉತ್ಪಾದನೆ ಮತ್ತು ರಫ್ತು ದೇಶಗಳು) ರಷ್ಯಾ ಸಹ ಒಂದು. ಯೂರೋಪ್‌ನ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ರಷ್ಯಾ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕದ ದೇಶಗಳು ಮತ್ತು ಪಶ್ಚಿಮ ಆಫ್ರಿಕಾದ ಹಲವು ದೇಶಗಳಿಗೆ ರಷ್ಯಾವು ಕಚ್ಚಾತೈಲವನ್ನು ಪೂರೈಸುತ್ತದೆ. ಈ ದಿಸೆಯಲ್ಲಿ ರಷ್ಯಾ ಇಂದಿಗೂ ಒಂದು ಪ್ರಬಲ ಶಕ್ತಿಯಾಗಿ ಉಳಿದುಕೊಂಡಿದೆ.

ಅಫ್ಗಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಪಡೆಗಳು ನಿರ್ಗಮಿಸಿದ ನಂತರ ಮಧ್ಯಏಷ್ಯಾದಲ್ಲಿ ಶಾಂತಿ ಕಾಪಾಡುವ ಹೊಣೆ ನೆರೆಯ ದೇಶಗಳ ಹೆಗಲಿಗೆ ಬಿದ್ದಿದೆ. ಅಫ್ಗಾನಿಸ್ತಾನವು ಉಗ್ರರ ನೆಲೆಯಾಗುವುದನ್ನು ತಪ್ಪಿಸುವುದು ಹೇಗೆ ಎಂಬುದನ್ನು ರಷ್ಯಾ, ಭಾರತ ಮತ್ತು ಚೀನಾ ಕೂತು ಚರ್ಚಿಸಿವೆ. ರಷ್ಯಾವೇ ಈ ಮಾತುಕತೆಯ ಮುಂದಾಳತ್ವ ವಹಿಸಿತ್ತು. ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ರಷ್ಯಾ ಈ ಮೂಲಕ ಯತ್ನಿಸಿದೆ. ಆದರೆ ಇದಕ್ಕಾಗಿ, ಏಷ್ಯಾದಲ್ಲಿ ದೊಡ್ಡ ಶಕ್ತಿಗಳಲ್ಲಿ ಒಂದಾಗಿರುವ ಭಾರತವನ್ನು ಪ್ರಾದೇಶಿಕ ಶಾಂತಿ ಪಾಲನೆಯಲ್ಲಿ ಒಳಗೊಳ್ಳುವುದು ರಷ್ಯಾಕ್ಕೆ ಅನಿವಾರ್ಯ.

ಆಧಾರ: ಸಿಪ್ರಿ, ಪಿಟಿಐ, ರಾಯಿಟರ್ಸ್, ಭಾರತದ ವಿದೇಶಾಂಗ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT