ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷರ ಈ ಮಾಹಿತಿ ಗೊತ್ತೇ...? ಇಲ್ಲಿವೆ 15 ಆಸಕ್ತಿದಾಯಕ ಸಂಗತಿ

Last Updated 21 ಜನವರಿ 2021, 3:21 IST
ಅಕ್ಷರ ಗಾತ್ರ

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ (ಜೋಸೆಫ್‌ ರಾಬಿನೈಟ್‌ ಬೈಡನ್‌) ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 78 ವರ್ಷದ ಬೈಡನ್‌ ಈ ಹುದ್ದೆಗೇರಿದ ಅತಿ ಹಿರಿಯ ವಯಸ್ಸಿನ ಅಧ್ಯಕ್ಷ ಎಂಬ ದಾಖಲೆಗೂ ಒಡೆಯರಾಗಿದ್ದಾರೆ.

ಈ ಹಿಂದಿನ ಅಮೆರಿಕದ ಅಧ್ಯಕ್ಷರ ಪ್ರಥಮಗಳು, ಸ್ವಾರಸ್ಯಕರ ಸಂಗತಿಗಳತ್ತ ಒಮ್ಮೆ ಗಮನಹರಿಸೋಣ. ಇಂಥ 15 ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

1) ವೈಟ್‌ ಹೌಸ್‌ ಅಥವಾ ಶ್ವೇತಭವನ ಎಂಬುದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ಈ ಹಿಂದೆ ಈ ನಿವಾಸವನ್ನು ವಿವಿಧ ಸಂದರ್ಭಗಳಲ್ಲಿ ಪ್ರೆಸಿಡೆಂಟ್ಸ್‌ ಹೌಸ್‌, ಎಕ್ಸಿಕ್ಯೂಟಿವ್‌ ಮ್ಯಾನ್ಷನ್‌ ಎಂದೆಲ್ಲಾ ಕರೆಯಲಾಗುತಿತ್ತು. ಥಿಯೋಡರ್‌ ರೂಸ್‌ವೆಲ್ಟ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, 1901ರಲ್ಲಿ ಈ ಭವನಕ್ಕೆ ಈಗಿನ ಹೆಸರು ಬಂತು. ಈ ನಿವಾಸದಲ್ಲಿ ಮೊದಲು ನೆಲೆಸಿದವರು ಯಾರು ಗೊತ್ತೇ? ಅಮೆರಿಕದ ಎರಡನೇ ಅಧ್ಯಕ್ಷರಾಗಿದ್ದ ಜಾನ್‌ ಆ್ಯಡಮ್ಸ್‌ (ಅಧಿಕಾರಾವಧಿ: 1796–1800) ಅವರು. 1800ರ ನವೆಂಬರ್‌ನಲ್ಲಿ ತಮ್ಮ ಅಧ್ಯಕ್ಷ ಅವಧಿಯ ಕೊನೆಯ ವರ್ಷ ಶ್ವೇತ ಭವನಕ್ಕೆ ಸ್ಥಳಾಂತರಗೊಂಡರು.

ಜಾರ್ಜ್‌ ಬುಷ್‌
ಜಾರ್ಜ್‌ ಬುಷ್‌

2) ತಂದೆಯ ನಂತರ ಮಗ ಅಧ್ಯಕ್ಷರಾದ ದೃಷ್ಟಾಂತಗಳು ಅಮೆರಿಕದಲ್ಲೂ ಇವೆ. ಇತ್ತೀಚಿನ ದಶಕಗಳಲ್ಲಿ ನಮಗೆ ನೆನಪಿಗೆ ಬರುವ ಇಂಥ ಸಂದರ್ಭ ಎಂದರೆ ಜಾರ್ಜ್‌ ಹರ್ಬಟ್‌ ವಾಕರ್‌ ಬುಷ್‌ ಮತ್ತು ಅವರ ಮಗ ಜಾರ್ಜ್‌ ಬುಷ್‌ (ಕ್ರಮವಾಗಿ 41 ಮತ್ತು 43ನೇ ಅಧ್ಯಕ್ಷ). ಅಮೆರಿಕದಲ್ಲಿ ಈ ರೀತಿ ಅಧ್ಯಕ್ಷರಾದ ಮೊದಲ ತಂದೆ– ಮಗ ಯಾರು ಎಂಬುದು ಗೊತ್ತೇ? ಅವರು ಜಾನ್‌ ಆ್ಯಡಮ್ಸ್ (2ನೇ ಅಧ್ಯಕ್ಷ) ಮತ್ತು ಜಾನ್‌ ಕ್ವಿನ್ಸಿ ಆ್ಯಡಮ್ಸ್ (6ನೇ ಅಧ್ಯಕ್ಷ).

3) ಅಮೆರಿಕದ ಅತಿ ಹಿರಿಯ ಅಧ್ಯಕ್ಷರಾಗಿದ್ದವರು (ಜೊ ಬೈಡನ್‌ಗೆ ಮೊದಲು) ಡೊನಾಲ್ಡ್‌ ಟ್ರಂಪ್‌. 70ನೇ ವಯಸ್ಸಿನಲ್ಲಿ. ಆದರೆ ಅತಿ ಕಿರಿಯ ಅಧ್ಯಕ್ಷ ಯಾರೆಂದು ಬಲ್ಲಿರಾ? ಅವರು ಜಾನ್‌ ಫಿಟ್ಜೆರಾಲ್ಡ್‌ ಕೆನಡಿ. 1961 ಜನವರಿ 20ರಂದು 35ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದಾಗ ಅವರ ವಯಸ್ಸು 43 ವರ್ಷ 236 ದಿನ. ಅವರು ಪುಲಿಟ್ಜರ್‌ ಪ್ರಶಸ್ತಿ ಗೆದ್ದ ಮೊದಲ ಅಧ್ಯಕ್ಷ. ಆದರೆ ಅಧ್ಯಕ್ಷರಾಗುವ ಮೊದಲೇ, 1956ರಲ್ಲಿ ‘ಪ್ರೊಫೈಲ್ಸ್‌ ಇನ್‌ ಕರೇಜ್‌’ ಎಂಬ ಕೃತಿಗೆ ಈ ಪುರಸ್ಕಾರ ಬಂದಿತ್ತು.

4) ಅಬ್ರಹಾಂ ಲಿಂಕನ್‌, ಜೇಮ್ಸ್ ಎ.ಗ್ಯಾರ್ಫೀಲ್ಡ್‌, ವಿಲಿಯಂ ಮೆಕಿನ್ಲಿ ಮತ್ತು ಜಾನ್‌ ಎಫ್‌ ಕೆನಡಿ ಇವರಲ್ಲಿರುವ ಸಮಾನ ಅಂಶ ಏನು ಗೊತ್ತೇ? ಇವರೆಲ್ಲಾ ಹತ್ಯೆಗೊಳಗಾದ ಅಮೆರಿಕದ ಅಧ್ಯಕ್ಷರು. 1965ರಲ್ಲಿ ಲಿಂಕನ್‌, 1881ಲ್ಲಿ ಗ್ಯಾರ್ಫೀಲ್ಡ್‌, 1901ರಲ್ಲಿ ಮೆಕಿನ್ಲಿ ಮತ್ತು 1963ರಲ್ಲಿ ಕೆನಡಿ ಅಧಿಕಾರದಲ್ಲಿದಾಗ ಹಂತಕರ ಗುಂಡಿಗೆ ಬಲಿಯಾಗಿದ್ದರು.

5) ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಡ್ವೈಟ್‌ ಡೇವಿಡ್‌ ಐಸೆನ್‌ಹೋವರ್‌. 1959ರಲ್ಲಿ ಇವರು ಸೌಹಾರ್ದ ಉದ್ದೇಶದಿಂದ ಭಾರತಕ್ಕೆ ಭೇಟಿ ನೀಡಿದ್ದರು. ಅವರು ರಾಮಲೀಲಾ ಮೈದಾನದಲ್ಲಿ ಸಭೆಯಲ್ಲಿ ಮಾತನಾಡಿದ್ದರು. ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿಯೂ ಮಾತನಾಡಿದ ಅವರು, ಅಗ್ರಾದ ತಾಜ್‌ ಮಹಲ್‌ಗೂ ಭೇಟಿ ಕೊಟ್ಟಿದ್ದರು.

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

6) ನೊಬೆಲ್ ಶಾಂತಿ ಪಾರಿತೋಷಕ ಗೆದ್ದ ಮೊದಲ ಅಧ್ಯಕ್ಷ ಥಿಯೋಡರ್‌ ರೂಸ್‌ವೆಲ್ಟ್‌. 26ನೇ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್‌ ಅವರು 1906ರಲ್ಲಿ ಈ ಪುರಸ್ಕಾರಕ್ಕೆ ಪಾತ್ರರಾದರು. ಈ ಪ್ರಶಸ್ತಿ ಸ್ಥಾಪನೆಯಾಗಿ ಕೇವಲ ಆರು ವರ್ಷಗಳಲ್ಲಿ ಈ ಗೌರವ ಪಡೆದ ಮೊದಲ ಮುತ್ಸದ್ಧಿ ಎನಿಸಿದರು. ಟೆಡ್ಡಿ ಬೇರ್‌ ಎಂಬ ಮುದ್ದಾದ ಕರಡಿಯ ಬೊಂಬೆಗೆ ಆ ಹೆಸರು ಬರಲು ಕಾರಣ ಥಿಯೋಡರ್‌ ಅವರು. 1901ರಲ್ಲಿ ಬೇಟೆಗೆ ಹೋಗಿದ್ದಾಗ ಮುದ್ದಾದ ಕರಡಿ ಮರಿಯನ್ನು ಅವರು ಕೊಲ್ಲದೇ ಹಾಗೇ ಬಿಟ್ಟರು. ಇದರ ಹಿನ್ನೆಲೆ ತಿಳಿದ ಆಟಿಕೆ ತಯಾರಕ ತನ್ನ ಉತ್ಪನ್ನಕ್ಕೆ ಟೆಡ್ಡಿ ಬೇರ್‌ ಎಂಬ ಹೆಸರಿಟ್ಟ! ನಂತರ ವರ್ಷಗಳಲ್ಲಿ ಅಧ್ಯಕ್ಷರಾದ ವುಡ್ರೊ ವಿಲ್ಸನ್‌ (1919), ಜಿಮ್ಮಿ ಕಾರ್ಟರ್‌ (2002) ಮತ್ತು ಬರಾಕ್‌ ಒಬಾಮಾ ಅವರಿಗೂ ನೊಬೆಲ್‌ ಶಾಂತಿ ಪ್ರಶಸ್ತಿ ಗೌರವ ಸಂದಿತ್ತು.

7) ಅತ್ಯಲ್ಪ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿದ್ದವರು ವಿಲಿಯಂ ಹೆನ್ರಿ ಹ್ಯಾರಿಸನ್‌ ಅವರು. 9ನೇ ಅಧ್ಯಕ್ಷರಾಗಿ ಅವರು 1841ರ ಮಾರ್ಚ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಬರೇ 32 ದಿನಗಳ ನಂತರ ನ್ಯುಮೋನಿಯಾಕ್ಕೆ ಬಲಿಯಾದರು. ಅವರು ಅಧ್ಯಕ್ಷರಾಗಿದ್ದಾಗಲೇ ಮೃತಪಟ್ಟ ಮೊದಲಿಗರು.

8) ಅತಿ ಹೆಚ್ಚು ಅವಧಿಗೆ ಅಮೆರಿಕದ ಅಧ್ಯಕ್ಷರಾಗಿದ್ದವರು ಯಾರು ಗೊತ್ತೇ? ಫ್ರಾಂಕ್ಲಿನ್ ಡಿಲಾನೊ ರೂಸ್‌ವೆಲ್ಟ್‌. ಅವರು 1933ರಲ್ಲಿ ಮೊದಲ ಬಾರಿಗೆ 32ನೇ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಮತ್ತೆ ಮೂರು ಅವಧಿಗೆ (1936, 1940 ಮತ್ತು 1944) ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಹೀಗಾಗಿ 1951ರಲ್ಲಿ ಸಂವಿಧಾನಕ್ಕೆ 22ನೇ ತಿದ್ದುಪಡಿ ತಂದು ಅಧ್ಯಕ್ಷರಿಗೆ ಗರಿಷ್ಠ ಎರಡು ಅವಧಿ (ಒಟ್ಟು ಎಂಟು ವರ್ಷ) ಎಂದು ಮಿತಿ ಹೇರಲಾಯಿತು!

9) ಅಧ್ಯಕ್ಷರಾದ ನಂತರ ಸುಪ್ರೀ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗುವವರು ಇದ್ದಾರೆಯೇ? ಅಮೆರಿಕದಲ್ಲೂ ಇಂಥದ್ದೂ ಆಗಿದೆ. 27ನೇ ಅಧ್ಯಕ್ಷರಾದ ವಿಲಿಯಮ್‌ ಎಚ್‌. ಟಾಫ್ಟ್‌ ಅವರು ಕಾನೂನು ಪಂಡಿತರು ಸಹ. 1909 ರಿಂದ 1913ರವರೆಗೆ ಅಧ್ಯಕ್ಷರಾಗಿದ್ದರು. 1921ರಲ್ಲಿ ಅವರನ್ನು ಆಗಿನ ಅಧ್ಯಕ್ಷ ವಾರೆನ್‌ ಜಿ.ಹಾರ್ಡಿಂಜ್‌ ಅವರು ಅಮೆರಿಕದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದರು. 1930ರವರೆಗೂ ಈ ಹುದ್ದೆಯಲ್ಲಿದ್ದರು. ಈ ಎರಡೂ ಹುದ್ದೆ ವಹಿಸಿದ ಏಕೈಕ ವ್ಯಕ್ತಿ ಅವರು.

10) ಅಮೆರಿಕದ 15ನೇ ಅಧ್ಯಕ್ಷರಾಗಿದ್ದವರು ಜೇಮ್ಸ್ ಬುಕಾನನ್‌. ಅವರು ಬ್ರಹ್ಮಚಾರಿಯಾಗಿಯೇ ಉಳಿದ ಅಮೆರಿಕದ ಏಕೈಕ ಅಧ್ಯಕ್ಷ ಎನಿಸಿದರು. ಡೆಮಾಕ್ರ್ಯಾಟಿಕ್‌ ಪಕ್ಷದ ಅವರು 1857 ರಿಂದ 1861ರವರೆಗೆ ಅಧ್ಯಕ್ಷರಾಗಿದ್ದರು.

ಶ್ವೇತಭವನ
ಶ್ವೇತಭವನ

11) ಅಮೆರಿಕದ 10ನೇ ಅಧ್ಯಕ್ಷರಾಗಿದ್ದ ಜಾನ್‌ ಟೇಲರ್‌ ಅವರು ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾದ ಮೊದಲಿಗ. ಹ್ಯಾರಿಸನ್‌ ಅವಧಿಯಲ್ಲಿ ಅವರು ಉಪಾಧ್ಯಕ್ಷರಾಗಿದ್ದರು. ನಂತರ 1841 ರಿಂದ 1845ರವರೆಗೆ ಅಧ್ಯಕ್ಷರಾದರು. ಅವರ ಮಡದಿ 1842ರಲ್ಲಿ ಮೃತರಾಗಿದ್ದರು. ಎರಡು ವರ್ಷಗಳ ನಂತರ ಅವರು ಎರಡನೇ ಮದುವೆಯಾದರು. ಶ್ವೇತಭವನದಲ್ಲಿದ್ದಾಗಲೇ ಮದುವೆಯಾದ ಮೊದಲ ಅಧ್ಯಕ್ಷರೆನಿಸಿದರು!

12) ಅವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ ಮೊದಲ ಅಧ್ಯಕ್ಷರೆಂದರೆ ರಿಚರ್ಡ್‌ ನಿಕ್ಸನ್‌ ಅವರು. ವಾಟರ್‌ಗೇಟ್‌ ಹಗರಣದಲ್ಲಿ ಅವರ ವಿರುದ್ಧ ದೋಷಾರೋಪಣೆ (impeachment) ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಅದು ಮುಂದುವರಿಯುವ ಮೊದಲೇ ಅವರು ರಾಜೀನಾಮೆ ನೀಡಿದರು.

13) ರೊನಾಲ್ಡ್‌ ರೇಗನ್‌ ಅಧ್ಯಕ್ಷರಾಗುವ ಮೊದಲು ಸಿನಿಮಾ ನಟನಾಗೇ ಪ್ರಸಿದ್ಧರಾದವರು. 50ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ಅವರು 1981 ರಿಂದ 1989ರವರೆಗೆ ಅಧ್ಯಕ್ಷರಾಗಿದ್ದರು.

14) ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ (ಸೆಂಟ್ರಲ್‌ ಇಂಟಲಿಜೆನ್ಸ್‌ ಏಜನ್ಸಿ) ನಿರ್ದೇಶಕರಾಗಿದ್ದು ನಂತರ ಅಧ್ಯಕ್ಷರಾದವರು ಜಾರ್ಜ್‌ ಡಬ್ಲ್ಯು ಬುಷ್‌. ಅವರು 1976 ರಿಂದ 1977ರವರೆಗೆ ಸಿಐಎ ನಿರ್ದೇಶಕರಾಗಿದ್ದರು.

15) ವಾಟರ್‌ಗೇಟ್‌ ಹಗರಣ ನಡೆದಿದ್ದು ನಿಕ್ಸನ್‌ ಅವಧಿಯಲ್ಲಿ. ಟೀಪೋಟ್‌ ಡೋಮ್‌ ಹಗರಣ ನಡೆದಿದ್ದು ಯಾರ ಕಾಲದಲ್ಲಿ ಗೊತ್ತೇ? ಇದು ವಾರೆನ್‌ ಜಿ.ಹಾರ್ಡಿಂಜ್‌ ಅವಧಿಯಲ್ಲಿ. ಟೀಪೋಟ್‌ನಲ್ಲಿ ತೈಲಬಾವಿ ಕೊರೆಯಲು ಅಧ್ಯಕ್ಷರ ಸಲಹಾಕಾರರೊಬ್ಬರು ಲಂಚ ಕೇಳಿದ ಹಗರಣ ಅದು. 1922ರಲ್ಲಿ ಇದು ಬೆಳಕಿಗೆ ಬಂತು. ನೇರವಾಗಿ ಭಾಗಿ ಆಗದಿದ್ದರೂ, ಇದರಿಂದ ಅಧ್ಯಕ್ಷ ಹಾರ್ಡಿಂಗ್‌ ಅವರ ಮೇಲೂ ಪರಿಣಾಮವಾಯಿತು, ಆರೋಗ್ಯ ಕೆಟ್ಟು ಅವರು ಅಧಿಕಾರಿವಧಿ ಪೂರೈಸಲು ಒಂದು ವರ್ಷ ಇರುವಾಗಲೇ ಮೃತಪಟ್ಟರು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ನಂತರ ಆಯ್ಕೆಯಾದ ಮೊದಲ ಅಧ್ಯಕ್ಷ ಕೂಡ ಹಾರ್ಡಿಂಜ್‌.

ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಸಿದ್ಧವಾಗಿರುವ ಯುಎಸ್‌ ಕ್ಯಾಪಿಟಲ್ – ಎಎಫ್‌ಪಿ ಚಿತ್ರ
ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಸಿದ್ಧವಾಗಿರುವ ಯುಎಸ್‌ ಕ್ಯಾಪಿಟಲ್ – ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT