ಮಂಗಳವಾರ, ಸೆಪ್ಟೆಂಬರ್ 29, 2020
22 °C

ಆಳ–ಅಗಲ | ಇದು ಯುವ ತಲೆಮಾರಿನ ಮನದ ಮಾತು

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ನಮ್ಮ ದೇಶದಲ್ಲಿ ಯುವ ಜನರ ಸಂಖ್ಯೆ ದೊಡ್ಡದು. 18 ವರ್ಷಕ್ಕೆ ಮತದಾನದ ಹಕ್ಕು ಪಡೆಯುವ ಈ ಯುವಸಮೂಹ ದೇಶವನ್ನು ಯಾರು ಆಳಬೇಕು ಎಂದು ನಿರ್ಧರಿಸುವಲ್ಲಿಯೂ ನಿರ್ಣಾಯಕ. ಆದರೆ, ತಮ್ಮದೇ ಬದುಕಿನ ಹಾದಿ ನಿರ್ಧರಿಸುವಾಗ ಅವರ ಮಾತಿಗಿರುವ ಕಿಮ್ಮತ್ತು ಕಡಿಮೆ ಎಂಬ ಅಳಲು ಯುವ ತಲೆಮಾರಿಗೆ ಇದೆ. ವಿದ್ಯೆ, ವೃತ್ತಿ, ಮದುವೆ, ಮಕ್ಕಳು, ಬದುಕು ಹೇಗೆ ಸಾಗಬೇಕು ಎಂಬುದೆಲ್ಲ ತೀರ್ಮಾನವಾಗುವುದು ಯುವ ವಯಸ್ಸಿನಲ್ಲಿಯೇ. ಹಾಗಾಗಿಯೇ ಈ ನಿರ್ಧಾರಗಳಲ್ಲಿ ತಮ್ಮ ದನಿ ಕೇಳಿಸಿಕೊಳ್ಳಿ ಎಂದು ಯುವಕ–ಯುವತಿಯರು ಕೂಗಿ ಹೇಳುತ್ತಿದ್ದಾರೆ.

ತಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ನಿರ್ಧಾರ ಮಾಡುವಾಗ ಅಥವಾ ಕಾನೂನಿನಲ್ಲಿ ಬದಲಾವಣೆ ತರುವ ಮುನ್ನ ತಮ್ಮ ಅಭಿಪ್ರಾಯವನ್ನೂ ಕೇಳಬೇಕು. ಅವನ್ನೂ ಗಂಭಿರವಾಗಿ ಪರಿಗಣಿಸಬೇಕು ಎಂಬುದು ದೇಶದ ಯುವಜನರ ಒತ್ತಾಯ. ‘ನಮಗೆ ಸಂಬಂಧಿಸಿದ, ನಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸರ್ಕಾರವು ನಮ್ಮೊಂದಿಗೂ ಚರ್ಚಿಸಬೇಕು. ಶಾಲೆ–ಕಾಲೇಜು, ರೇಡಿಯೋ, ಗ್ರಾಮ ಪಂಚಾಯಿತಿಗಳ ಮೂಲಕ ನಮ್ಮನ್ನು ಸಂಪರ್ಕಿಸಬೇಕು’ ಎನ್ನುತ್ತಾರೆ ಯುವಜನ.

ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಸರ್ಕಾರದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ನಡೆಸಲಾದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು. ಸರ್ಕಾರದ ಈ ಪ್ರಸ್ತಾವಕ್ಕೆ ಯುವಜನರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಮದುವೆಯ ಕನಿಷ್ಠ ವಯಸ್ಸನ್ನು ಏರಿಕೆ ಮಾಡುವುದರಿಂದ ಏನಾಗಬಹುದು, ಬಾಲ್ಯ ವಿವಾಹ ತಡೆಗಟ್ಟಲು ಏನೆಲ್ಲಾ ಮಾಡಬೇಕು ಮತ್ತು ತಮ್ಮ ಸಬಲೀಕರಣಕ್ಕೆ ಏನು ಬೇಕು ಎಂಬುದನ್ನು ಯುವ ತಲೆಮಾರು ಹೇಳಿಕೊಂಡಿದೆ. 

‘ದೈನಂದಿನ ಬದುಕಿನಲ್ಲಿ ಯಾವುದೇ ಬದಲಾವಣೆ ತರದೆ, ಕಾನೂನಿಗೆ ತಿದ್ದುಪಡಿ ತಂದರೆ ಉಪಯೋಗವಿಲ್ಲ. ಕಾನೂನಿಗೆ ತಿದ್ದುಪಡಿ ತರುವುದರಿಂದ ವಾಸ್ತವ ಸ್ಥಿತಿ ಬದಲಾಗುವುದಿಲ್ಲ. ವಾಸ್ತವ ಸ್ಥಿತಿ ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತದೆ. ಇವುಗಳನ್ನು ಪರಿಗಣಿಸದೆ, ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸಿದರೆ, ಬಾಲ್ಯ ವಿವಾಹಗಳ ಸಂಖ್ಯೆ ಇಳಿಯುವುದಿಲ್ಲ. ಬದಲಿಗೆ ಏರಿಕೆಯಾಗುತ್ತದೆ’ ಎನ್ನುವುದು ಕರ್ನಾಟಕದ ಯುವತಿಯೊಬ್ಬರ ಪ್ರತಿಪಾದನೆ.

‘ಹೆಣ್ಣುಮಕ್ಕಳಿಗೆ 18 ವರ್ಷಕ್ಕೆ ಮತದಾನದ ಹಕ್ಕು ನೀಡಲಾಗುತ್ತದೆ. ಅದೇ ವಯಸ್ಸಿನಲ್ಲಿ ಮದುವೆಯಾದರೆ ಏನು ಸಮಸ್ಯೆ? ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏಕೆ ಏರಿಸಬೇಕು’ ಎಂಬುದು ಜಾರ್ಖಂಡ್‌ನ ಯುವತಿಯೊಬ್ಬರ ಪ್ರಶ್ನೆ.

ಸಮುದಾಯದ ರೀತಿ ರಿವಾಜುಗಳಿಗೂ, ಕಾನೂನಿಗೂ ಬಹಳ ವ್ಯತ್ಯಾಸವಿದೆ. ಎರಡೂ ಭಿನ್ನದಾರಿಯಲ್ಲಿ ಸಾಗುತ್ತವೆ. ಕಾನೂನಿನಲ್ಲಿ ಎಷ್ಟೇ ಬದಲಾವಣೆ ತಂದರೂ, ಜನರು ಅದನ್ನು ಬೈಪಾಸ್ ಮಾಡುತ್ತಾರೆ. ಸಮುದಾಯದ ರಿವಾಜುಗಳನ್ನು ಉಳಿಸಿಕೊಳ್ಳಲು ಈ ಕಾನೂನುಗಳನ್ನೇ ಬಳಸಿಕೊಳ್ಳುತ್ತಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ‘ನೋಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿ ಅವಿವಾಹಿತೆಯಾಗಿದ್ದರೂ ಗರ್ಭಿಣಿಯಾದರೆ, ಸಂಬಂಧಿತ ವ್ಯಕ್ತಿಯೊಂದಿಗೆ ಮದುವೆಗೆ ಸಿದ್ಧತೆ ಮಾಡಲಾಗುತ್ತದೆ. ಆ ವ್ಯಕ್ತಿ ಮದುವೆಗೆ ಒಪ್ಪದಿದ್ದರೆ ಮಾತ್ರ ಪೊಲೀಸ್ ಠಾಣೆ, ಕಾನೂನು ಎಂದು ಹೋಗುತ್ತಾರೆ. ಇಲ್ಲದಿದ್ದಲ್ಲಿ, ಬಾಲ್ಯ ವಿವಾಹ ನಡೆಯುತ್ತದೆ’ ಎಂದು ಗುಜರಾತಿನ ಯುವತಿಯೊಬ್ಬರು ವಿವರಿಸಿದ್ದಾರೆ.

‘ಮದುವೆಯ ವಯಸ್ಸನ್ನು ಏರಿಸಿದರೆ, ಉನ್ನತ ಶಿಕ್ಷಣ ಪಡೆಯುವ ಅವಕಾಶ ಕೆಲವರಿಗಷ್ಟೇ ಸಿಗುತ್ತದೆ. ಹಲವರು ತಮ್ಮ ಹೆಣ್ಣುಮಕ್ಕಳನ್ನು ಕಾಲೇಜಿಗೆ ಕಳುಹಿಸುವುದೇ ಇಲ್ಲ. ಯಾರನ್ನಾದರೂ ಪ್ರೀತಿಸಿ ಓಡಿಹೋಗಬಹುದು ಎಂಬ ಭಯದಲ್ಲಿ ಮದುವೆ ಮಾಡುತ್ತಾರೆ. ಹೀಗಾಗಿ ಕೇವಲ ಈ ಕಾನೂನು ತಿದ್ದುಪಡಿಯಿಂದ ಹೆಣ್ಣುಮಕ್ಕಳಿಗೆ ಅವರ ಹಕ್ಕುಗಳು ದತ್ತವಾಗುತ್ತವೆ ಎಂಬುದು ಸುಳ್ಳು’ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ.

ಬಾಲ್ಯವಿವಾಹವನ್ನು ತಡೆಗಟ್ಟಬೇಕೆಂದರೆ, ಬಾಲಕಿಯರನ್ನು ಸಬಲರನ್ನಾಗಿ ಮಾಡಬೇಕು. ಉನ್ನತ ಶಿಕ್ಷಣ ಒದಗಿಸಬೇಕು, ಉದ್ಯೋಗಾವಕಾಶ ಹೆಚ್ಚಬೇಕು, ಅವರು ಆರ್ಥಿಕವಾಗಿ ಸ್ವತಂತ್ರರಾಗಬೇಕು. ಆಗ ಮಾತ್ರ ತಮ್ಮ ವಿವಾಹಕ್ಕೆ ಸಂಬಂಧಿಸಿದ ನಿರ್ಧಾರವನ್ನು ಹೆಣ್ಣುಮಕ್ಕಳು ತಾವೇ ತೆಗೆದುಕೊಳ್ಳಬಹುದು ಎಂದು ಬಹುತೇಕರು ಹೇಳಿದ್ದಾರೆ.

‘ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ. 10ನೇ ತರಗತಿವರೆಗೆ ಮಾತ್ರ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಲಾಗುತ್ತಿದೆ. ನನ್ನ ಗೆಳತಿಯೊಬ್ಬಳು ಮೊದಲ ವರ್ಷದ ಪಿಯುಸಿಯಲ್ಲೇ ಶಿಕ್ಷಣ ತೊರೆದಳು. ಕಾಲೇಜಿಗೆ ಕಟ್ಟಲು ಅವರ ಬಳಿ ದುಡ್ಡಿರಲಿಲ್ಲ. ಕಾಲೇಜಿನ ಶಿಕ್ಷಣ ಸುಮ್ಮನೆ ಆಗುತ್ತದೆಯೇ? ಫೀಸು, ಬಸ್‌ ಚಾರ್ಜ್‌, ಪುಸ್ತಕಗಳು, ಬ್ಯಾಗು–ಬಟ್ಟೆ, ಊಟ–ತಿಂಡಿ ಈ ಎಲ್ಲಾ ಖರ್ಚು ಇರುತ್ತವೆ. ಇವನ್ನೆಲ್ಲಾ ಒದಗಿಸುವುದು ನನ್ನ ಗೆಳೆತಿಯ ಮನೆಯವರಿಗೆ ಸಾಧ್ಯವಿರಲಿಲ್ಲ. ಅವಳೀಗ ಮನೆಕೆಲಸ ಮಾಡಿಕೊಂಡಿದ್ದಾಳೆ. ಬೇರೇನು ಮಾಡಲು ಸಾಧ್ಯವಿತ್ತು’ ಎಂಬುದು ಜಾರ್ಖಂಡ್‌ನ ಯುವತಿಯೊಬ್ಬರ ತಕರಾರು.

‘ನಮ್ಮ ಊರಿನಲ್ಲಿ ಎಸ್‌ಎಸ್‌ಎಲ್‌ಸಿ ಮಾಡಿದವರಿಗೆ ಯಾವ ಕೆಲಸವೂ ಸಿಗುವುದಿಲ್ಲ. ಕನಿಷ್ಠ ಪದವಿ ಶಿಕ್ಷಣವಾದರೂ ಆಗಬೇಕು. ಎಲ್ಲರಿಗೂ, ಮುಖ್ಯವಾಗಿ ಬಾಲಕಿಯರಿಗೆ 18 ವರ್ಷದವೆರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಾಗಬೇಕು. ಉದ್ಯೋಗಕ್ಕೆ ನೆರವಾಗುವ ಕೌಶಲಗಳನ್ನು ಕಲಿಸುವಂತಾಗಬೇಕು. ಆಗ ಬಾಲಕಿಯರು ತಮ್ಮ ಕಾಲಮೇಲೆ ನಿಲ್ಲಬಹುದು. ತಮ್ಮ ಮದುವೆಯನ್ನು ತಾವು ನಿರ್ಧರಿಸಬಹುದು’ ಎಂದು ಆ ಯುವತಿ ವಿವರಿಸಿದ್ದಾರೆ.

ಯುವತಿ ದುಡಿಯುತ್ತಿದ್ದರೆ ಮಾತ್ರ ಅವಳ ಮದುವೆ ಮತ್ತು ಬದುಕನ್ನು ನಿರ್ಧರಿಸುವಲ್ಲಿ ಅವಳಿಗೆ ಅವಕಾಶ ಇರುತ್ತದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವರು ಉತ್ತರಿಸಿದ್ದಾರೆ. ‘ಉನ್ನತ ಶಿಕ್ಷಣಕ್ಕೆ ಸೇರುವುದೇ ದೊಡ್ಡ ಸವಾಲು. ಓದಿನ ಖರ್ಚನ್ನು ನಾವೇ ನೋಡಿಕೊಳ್ಳಬೇಕು. ಅಂಗಡಿಗಳಲ್ಲಿ, ಬ್ಯೂಟಿಪಾರ್ಲರ್‌ಗಳಲ್ಲಿ, ಮಾಲ್‌ಗಳಲ್ಲಿ ಅರೆಕಾಲಿಕ ಕೆಲಸ ಮಾಡಬೇಕು. ದುಡಿಯುತ್ತಿದ್ದರೆ ಮಾತ್ರ ಮನೆಯಲ್ಲಿ ನಮ್ಮ ಮಾತಿಗೆ ಬೆಲೆ ಇರುತ್ತದೆ. ಇಲ್ಲದಿದ್ದಲ್ಲಿ ನಮ್ಮ ಮಾತನ್ನು ಯಾರೂ ಕೇಳುವುದೇ ಇಲ್ಲ’ ಎಂಬುದು ಉತ್ತರಪ್ರದೇಶದ ನಗರವೊಂದರ ಯುವತಿ ಹೇಳುವ ಅನುಭವದ ಮಾತು.

ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸಲು ಹಲವು ಸವಲತ್ತುಗಳು ಮತ್ತು ಅನುಕೂಲಕರ ಪರಿಸ್ಥಿತಿ ಇರಬೇಕು ಎಂದು ಬಹುತೇಕರು ಒತ್ತಾಯಿಸಿದ್ದಾರೆ. ‘ಮನೆಗೆ ತೀರಾ ಹತ್ತಿರದಲ್ಲಿ ಶಾಲಾ–ಕಾಲೇಜು ಇರಬೇಕು. ಓಡಾಡಲು ಸಾರಿಗೆ ವ್ಯವಸ್ಥೆ ಇರಬೇಕು. ಉನ್ನತ ಶಿಕ್ಷಣ ಉಚಿತವಾಗಿ ದೊರೆಯುವಂತಿರಬೇಕು. ದೂರದ ಪಟ್ಟಣ/ನಗರಗಳಿಗೆ ಓದಲು ಹೋಗುವ ಬಾಲಕಿಯರಿಗೆ ಉತ್ತಮ ವಿದ್ಯಾರ್ಥಿನಿಲಯವನ್ನು ಉಚಿತವಾಗಿ ಒದಗಿಸಬೇಕು. ರಸ್ತೆಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಆಸ್ಪದವಿರುವ ವಾತಾವರಣ ಇರಬಾರದು. ಕುಟುಂಬದವರು ಬಾಲಕಿಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೆಲಸ ಮಾಡಿಕೊಂಡೇ ಓದಲು ಅನುಕೂಲವಾಗುವಂತಹ ಪರಿಸ್ಥಿತಿ ಇರಬೇಕು...’ ಹೀಗೆ ಯುವಜನರ ಬೇಡಿಕೆಗಳ ಪಟ್ಟಿ ದೊಡ್ಡದಿದೆ. ಸರ್ಕಾರವು ಈ ಎಲ್ಲವನ್ನೂ ಸರಿದೂಗಿಸಿದರೆ ಮಾತ್ರ, ವಾಸ್ತವ ಸ್ಥಿತಿಯನ್ನು ಬದಲಿಸಲು ಸಾಧ್ಯ ಎಂಬುದು ಇವರ ಗಟ್ಟಿ ನಂಬಿಕೆ.

ಸಮೀಕ್ಷೆ ಹೇಗೆ?
ಕೋವಿಡ್‌–19 ಕಾರಣದಿಂದಾಗಿ ದೇಶದ ಯುವ ಸಮುದಾಯದ ಜತೆಗೆ ಸಂವಾದ ನಡೆಸಲು ಮದುವೆಯ ವಯಸ್ಸಿನ ಮಿತಿ ಏರಿಕೆ ಬಗ್ಗೆ ಚರ್ಚಿಸಲು ರಚಿಸಿದ ಕ್ರಿಯಾ ಸಮಿತಿಗೆ ಅಡ್ಡಿ ಉಂಟಾಗಿರಬಹುದು. ಆದರೆ, ಆ ಕಾರಣಕ್ಕೆ ಈ ಸಮುದಾಯದ ಅಭಿಪ್ರಾಯವು ದಾಖಲಾಗದೆ ಉಳಿಯಬಾರದು ಎಂಬ ಕಳಕಳಿಯಿಂದ ‘ಯಂಗ್‌ ವಾಯ್ಸ್‌’ ಸಂಸ್ಥೆ ದೇಶದ ವಿವಿಧ ರಾಜ್ಯಗಳ ಯುವ ಸಮುದಾಯದ ಅಭಿಪ್ರಾಯ ಸಂಗ್ರಹಿಸಿದೆ.

* ಹಿಂದುಳಿದ ಸಮುದಾಯದ ಯುವಕ–ಯುವತಿಯರಿಗೆ ವಿಶೇಷ ಆದ್ಯತೆ ನೀಡಲಾಗಿತ್ತು.

* ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಅದರಲ್ಲೂ ಹುಡುಗಿಯರ ಅಭಿಪ್ರಾಯ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

* ಸಂದರ್ಶನ, ಸಮೂಹ ಸಂವಾದ, ಗೂಗಲ್‌ ಸಮೀಕ್ಷೆ, ಸ್ವಾನುಭವ, ಹಾಗೂ ಧ್ವನಿ ಸಂದೇಶಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಕೆಲವು ಸಂಘಟನೆಗಳು ರಾಜ್ಯಮಟ್ಟದ ವೆಬಿನಾರ್‌ಗಳನ್ನೂ ಆಯೋಜಿಸಿದ್ದವು.

* ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೆಲವರು ತಮ್ಮ ಇಡೀ ಸಮುದಾಯದ ಪರವಾಗಿ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಗೌರವಿಸಿ, ಅವರದ್ದೇ ಆದ ವಿಶೇಷ ಸಂದರ್ಭ, ಪರಿಸರಗಳ ಹಿನ್ನೆಲೆಯಲ್ಲಿ ಅರ್ಥೈಸಲಾಗಿದೆ.

ಬೇಡಿಕೆಗಳು

* ಬಡತನ, ಮದುವೆಗೆ ಸಂಬಂಧಿಸಿದ ಸಾಮಾಜಿಕ ನಿಯಮಗಳು ಮತ್ತು ಬಾಲಕಿಯ ಲೈಂಗಿಕತೆ ಮೇಲಿನ ನಿಯಂತ್ರಣಗಳು ಬಾಲ್ಯವಿವಾಹಕ್ಕೆ ಮೂಲ ಕಾರಣ. ಇವುಗಳನ್ನು ಬದಲಿಸದ ಹೊರತು, ವಿವಾಹದ ವಯಸ್ಸನ್ನು ಏರಿಕೆ ಮಾಡಿದರೆ ಅದರಿಂದ ನಮಗೆ ಹೆಚ್ಚಿನ ಹಾನಿಯಾಗುತ್ತದೆ

* ಬಾಲಕರು ಮತ್ತು ಯುವಕರೊಂದಿಗೆ ಬೆರೆಯಲು ಬಿಡಿ. ಪಿತೃಪ್ರಧಾನ ರೀತಿ–ರಿವಾಜುಗಳಿಗೆ ಸವಾಲು ಎಸೆಯಲು ಮತ್ತು ಅವನ್ನು ಬದಲಿಸಲು ಅವಕಾಶ ಕೊಡಿ

* ನಮಗೆ ಸಂಬಂಧಿಸಿದ ವಿಷಯಗಳನ್ನು ನಮ್ಮೊಂದಿಗೆ ಚರ್ಚಿಸುವಂತೆ ಮತ್ತು ನಮ್ಮ ನಿರ್ಧಾರಗಳನ್ನು ಗೌರವಿಸುವಂತೆ ನಮ್ಮ ಪೋಷಕರು ಮತ್ತು ಸಮುದಾಯದ ನಾಯಕರಲ್ಲಿ ಅರಿವು ಮೂಡಿಸಿ

* ನಮ್ಮ ಲೈಂಗಿಕತೆಯ ಬಗ್ಗೆ, ಲೈಂಗಿಕ ಹಕ್ಕುಗಳ ಬಗ್ಗೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಶಾಲೆ ಮತ್ತು ಸಮುದಾಯದ ಮಟ್ಟದಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ನೀಡಿ

* ಬಾಲ್ಯವಿವಾಹವನ್ನು ತಡೆಗಟ್ಟಲು ನಮ್ಮ ಪೋಷಕರಿಗೆ ಸಾಮಾಜಿಕ ಮತ್ತು ಆರ್ಥಿಕ ನೆರವು ನೀಡಿ

ಮದುವೆ ಸುಲಭವೇ?
‘ಮದುವೆಯ ನಂತರ ಎಷ್ಟೆಲ್ಲಾ ಸಮಸ್ಯೆ ಇದೆ ಎನ್ನುತ್ತೀರಿ... ಮದುವೆ ಮುಗಿದ ಶೀಘ್ರದಲ್ಲೇ ಮಕ್ಕಳು ಮಾಡಿಕೊಳ್ಳಲೇಬೇಕು. ಇಷ್ಟವಿದೆಯೋ ಇಲ್ಲವೋ, ಹುಡುಗಿ ಮಗು ಹೆರಲೇಬೇಕು. ಚಿಕ್ಕ ವಯಸ್ಸಿಗೇ ಮದುವೆ, ಮಕ್ಕಳು ಎಂಬ ಬಿಡುವಿಲ್ಲದ ಜೀವನದಲ್ಲಿ ಶಿಕ್ಷಣ ಮುಂದುವರಿಸುವುದು ಕಷ್ಟಸಾಧ್ಯ. ಗಂಡ ಸತ್ತರೆ, ವಿಚ್ಛೇಧನ ನೀಡಿದರೆ ಆಕೆಯ ಗತಿಯೇನು? ಆಕೆಯ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಮಕ್ಕಳ ಶಿಕ್ಷಣ ಏನು? ಆಕೆ ಯಾವುದಾದರೂ ಕೆಲಸ ಮಾಡುವಷ್ಟು ದುಡಿಯುತ್ತಿದ್ದರಷ್ಟೇ ಬದುಕು ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ಉನ್ನತ ಶಿಕ್ಷಣ ಇರಬೇಕು. ಇಲ್ಲದಿದ್ದಲ್ಲಿ, ಮಕ್ಕಳು ಮಾಡಿಕೊಳ್ಳುವ ಹಕ್ಕಾದರೂ ಆಕೆಯ ಬಳಿ ಇರಬೇಕು’ ಎಂದು ರಾಜಸ್ಥಾನದ ಯುವತಿಯೊಬ್ಬರು ಹೇಳಿದ್ದಾರೆ.

ಮಕ್ಕಳು ಮಾಡಿಕೊಳ್ಳಲು ಪತಿ–ಪತ್ನಿ ಇಬ್ಬರೂ ಸಿದ್ದರಿರಬೇಕು. ಇಬ್ಬರ ಒಪ್ಪಿಗೆಯ ಮೇರೆಗೆ ಇದು ನಡೆಯಬೇಕು. ಆದರೆ, ಈಗ ಯುವತಿಯರಿಗೆ ತಾವು ತಾಯಿಯಾಗಬೇಕೇ ಅಥವಾ ಯಾವಾಗ ಆಗಬೇಕು ಎಂಬುದನ್ನು ನಿರ್ಧರಿಸುವ ಹಕ್ಕೇ ಇಲ್ಲ ಎಂಬುದು ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 83ರಷ್ಟು ಯುವಜನರ ಅಭಿಪ್ರಾಯ. 

ಹೆಣ್ಣುಮಕ್ಕಳನ್ನು ಸಬಲರನ್ನಾಗಿ ಮಾಡಬೇಕೆಂದರೆ ಸಮಾಜದಲ್ಲೂ ಸಾಕಷ್ಟು ಬದಲಾವಣೆ ಆಗಬೇಕು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವರು ಪ್ರಬಲವಾಗಿ ನಂಬಿದ್ದಾರೆ. ಬಾಲಕ–ಬಾಲಕಿ, ಯುವಕ–ಯುವತಿ ಸಾರ್ವಜನಿಕವಾಗಿ ಮುಕ್ತವಾಗಿ ಭೇಟಿಯಾಗುವಂತಹ ವಾತಾವರಣ ಇರಬೇಕು. ಸಹಜೀವನ ನಡೆಸಲು ಅವಕಶ ಇರಬೇಕು. ತಾವು ಇಷ್ಟಪಟ್ಟವರನ್ನು ಮದುವೆಯಾಗಲು ಅವಕಾಶವಿರಬೇಕು. ಇಂತಹ ಅವಕಾಶ ಇಲ್ಲದ ಕಾರಣಕ್ಕೆ, ಮದುವೆ ಆಗುವುದಿಲ್ಲ ಎಂಬ ಭಯವನ್ನು ಅವರು ಎದುರಿಸುತ್ತಾರೆ. ಹೀಗಾಗಿಯೇ ಓಡಿಹೋಗುತ್ತಾರೆ. ಈ ಪರಿಸ್ಥಿತಿ ಬದಲಾದರೆ, ಓಡಿಹೋಗುವ ಸಮಸ್ಯೆಯನ್ನೂ ತಡೆಗಟ್ಟಬಹುದು. ಅಲ್ಲದೆ, ಮಕ್ಕಳು ಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕು ಹೆಣ್ಣುಮಕ್ಕಳಿಗೆ ದೊರೆಯುತ್ತದೆ ಎಂಬುದು ಯುವಜನರ ಪ್ರತಿಪಾದನೆ.

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು. ಯಾರನ್ನು ಮದುವೆಯಾಗಬೇಕು ಮತ್ತು ಯಾವಾಗ ಮದುವೆಯಾಗಬೇಕು ಎಂಬುದನ್ನು ನಿರ್ಧಿಸುವ ಹಕ್ಕನ್ನು ಅವರಿಗೆ ನೀಡಬೇಕು. ಈ ಹಕ್ಕು ದೊರೆಯಲು ಪೂರಕವಾಗಿ ಉನ್ನತ ಶಿಕ್ಷಣ ಒದಗಿಸಬೇಕು ಮತ್ತು ದುಡಿಯಲು ಅವಕಾಶವಿರಬೇಕು. ಮುಖ್ಯವಾಗಿ, ಹೆಣ್ಣುಮಕ್ಕಳಿಗೆ ಇವೆಲ್ಲವನ್ನೂ ಒದಗಿಸಬೇಕು, ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಬಾರದು ಎಂಬುದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕು ಎಂಬುದು ಯುವಜನರ ಪ್ರತಿಪಾದನೆ.

ಕನಸು ಮೂಡಲಿ ಸ್ಪಷ್ಟವಾಗಿ... 
‘ಬಾಲಕ ಮತ್ತು ಬಾಲಕಿಯರಿಗೆ ಅವರ ಕನಸಿನ ಬಗ್ಗೆ, ಜೀವನದ ಬಗ್ಗೆ ಅರಿವು ಮೂಡಿಸಬೇಕಿದೆ. ತಮ್ಮ ಕನಸಿನ ಬಗ್ಗೆ ಸ್ಪಷ್ಟತೆ ಇದ್ದರೆ, ಅದನ್ನು ಪೂರೈಸಿಕೊಳ್ಳಲು ಅವರು ಏನು ಬೇಕಾದರೂ ಮಾಡುತ್ತಾರೆ. ತಮ್ಮ ಕುಟುಂಬದವರನ್ನೂ ಎದುರು ಹಾಕಿಕೊಳ್ಳುತ್ತಾರೆ. ಈ ಬಗ್ಗೆ ಅರಿವೇ ಇಲ್ಲದಿದ್ದರೆ, ತಮ್ಮ ತಂದೆತಾಯಿ ಏನು ಹೇಳುತ್ತಾರೋ ಅದನ್ನು ಕೇಳುತ್ತಾರೆ’ ಎಂಬುದು ಯುವತಿಯೊಬ್ಬರ ಸ್ಪಷ್ಟ ನುಡಿ. 

ಆಧಾರ: ಯಂಗ್‌ ವಾಯ್ಸ್‌: ನ್ಯಾಷನಲ್‌ ರಿಪೋರ್ಟ್‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು