ಭಾನುವಾರ, ಆಗಸ್ಟ್ 1, 2021
26 °C

ಆಳ-ಅಗಲ | ಅನ್‌ಲಾಕ್ ಕಾಲದಲ್ಲೂ ಲಾಕ್‌ಡೌನ್‌ ಜಪ!

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ದೇಶದಲ್ಲಿ ವಿಧಿಸಿದ್ದ 68 ದಿನಗಳ ಲಾಕ್‌ಡೌನ್‌ ಮುಗಿದು ತಿಂಗಳ ಮೇಲೆ ಒಂದು ವಾರ ಕಳೆದಿದೆ. ಅನ್‌ಲಾಕ್‌ನ ಎರಡನೇ ಹಂತ ಈಗ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ತಾನು ವಿಧಿಸಿದ್ದ ಲಾಕ್‌ಡೌನ್‌ಅನ್ನು ತೆರವುಗೊಳಿಸಿದ್ದರೂ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ವಯಂನಿರ್ಬಂಧ ಹಾಕಿಕೊಂಡು ಭಾಗಶಃ ಲಾಕ್‌ಡೌನ್‌ ಮಾಡಲಾಗುತ್ತಿದೆ. ರಾಜ್ಯದ ಸದ್ಯದ ಸ್ಥಿತಿಯ ಚಿತ್ರಣ ಇಲ್ಲಿದೆ...

 ಚಿತ್ರದುರ್ಗ:

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಸ್ವಕ್ಷೇತ್ರ ಮೊಳಕಾಲ್ಮುರು ತಾಲ್ಲೂಕು ಅರ್ಧದಿನ ಅಧಿಕೃತವಾಗಿ ಲಾಕ್‌ಡೌನ್‌ ಆಗುತ್ತಿದೆ. ಮಧ್ಯಾಹ್ನ 1 ಗಂಟೆಯ ಬಳಿಕ ವ್ಯಾಪಾರ ವಹಿವಾಟು, ಜನ ಸಂಚಾರಕ್ಕೆ ತಾಲ್ಲೂಕು ಆಡಳಿತ ನಿರ್ಬಂಧ ವಿಧಿಸಿದೆ. ಪಕ್ಕದ ಆಂಧ್ರ ಪ್ರದೇಶದ ರಾಯದುರ್ಗ ತಾಲ್ಲೂಕಿನಲ್ಲಿ ಪ್ರಕರಣ ಹೆಚ್ಚಾಗಿರುವ ಕಾರಣ ಲಾಕ್‌ಡೌನ್‌ ಅನಿವಾರ್ಯವೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ದಾವಣಗೆರೆ:

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ವಿವಿಧ ಪಟ್ಟಣಗಳಲ್ಲಿ ಮಧ್ಯಾಹ್ನದ ಬಳಿಕ ವರ್ತಕರು ವ್ಯಾಪಾರ ಮಾಡುತ್ತಿಲ್ಲ. ಚನ್ನಗಿರಿಯಲ್ಲಿ ಮಾತ್ರ ಬೆಳಿಗ್ಗೆ ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಜಗಳೂರು, ಹೊನ್ನಾಳಿ, ನ್ಯಾಮತಿ, ಹರಿಹರದಲ್ಲಿ ಮಧ್ಯಾಹ್ನವೇ ಎಲ್ಲ ಅಂಗಡಿಗಳು ಬಂದ್‌ ಆಗುತ್ತಿವೆ.

ಶಿವಮೊಗ್ಗ:

ಶಿವಮೊಗ್ಗ ನಗರದಲ್ಲಿ ಜವಳಿ ವರ್ತಕರು ಹಾಗೂ ಆಟೊಮೊಬೈಲ್ ಬಿಡಿಭಾಗಗಳನ್ನು ಮಾರುವವರು ಸ್ವಪ್ರೇರಣೆಯಿಂದ ಗುರುವಾರದಿಂದ ಜುಲೈ 13ರ ವರೆಗೆ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಕಾರ್ಗಲ್‌ ಪಟ್ಟಣದ ವರ್ತಕರ ಸಂಘ ಮಧ್ಯಾಹ್ನ 2ರವರೆಗೆ ಮಾತ್ರ ವ್ಯಾಪಾರ ನಡೆಸಲು ಸ್ವಯಂ ನಿಯಂತ್ರಣ ಹಾಕಿಕೊಂಡಿದೆ.

ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಸ್ವಯಂಪ್ರೇರಿತ ಲಾಕ್‌ಡೌನ್ ಪ್ರಾರಂಭವಾಗಿದೆ. ಈ ಮಧ್ಯೆ ಇದಕ್ಕೆ ಬೆಂಬಲ ಸೂಚಿಸಿ, ಸಾಮಾಜಿಕ ಜಾಲತಾಣದಲ್ಲಿ ‘ಐ ಸಪೋರ್ಟ್ ಕೋಸ್ಟಲ್ ಕರ್ಪ್ಯೂ’ ಹ್ಯಾಷ್ ಟ್ಯಾಗ್ ಎಂಬ ಅಭಿಯಾನ ಟ್ವಿಟರ್‌ನಲ್ಲಿ ಆರಂಭವಾಗಿದೆ. ಬಜ್ಪೆ ವ್ಯಾಪ್ತಿಯಲ್ಲಿ ಮಧ್ಯಾಹ್ನದ ನಂತರ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಉಳ್ಳಾಲ, ಮೂಲ್ಕಿ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಮುಂದುವರಿದಿದೆ.

ಉಡುಪಿ:

ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾwwಯಕ್ಕೆ ಹರಡಿರುವ ಭೀತಿಯಿಂದ ಕೋಟದ ಅಮೃತೇಶ್ವರಿ ದೇವಸ್ಥಾನದ‌ ಬಳಿಯ ಎಲ್ಲ ಅಂಗಡಿ ಹಾಗೂ ಹೋಟೆಲ್‌ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ. ಕೋಟ ಪೇಟೆಯ ರಿಕ್ಷಾ ಚಾಲಕರು ಕೂಡ ಸದ್ಯ ಆಟೊಗಳನ್ನು ಓಡಿಸುತ್ತಿಲ್ಲ. ಸಾಲಿಗ್ರಾಮದಲ್ಲಿ ಹಲವು ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ.

ಚಿಕ್ಕಮಗಳೂರು:

ಜಿಲ್ಲೆಯ ಕಳಸ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು ತಿಳಿಯುತ್ತಿದ್ದಂತೆ ಇದೇ 6 ಮತ್ತು 7ರಂದು ಇಡೀ ಸ್ವಯಂಪ್ರೇರಿತವಾಗಿ ಗ್ರಾಮದಲ್ಲಿ ಬಂದ್‌ ಮಾಡಿದ್ದಾರೆ. ಕೋವಿಡ್‌ನಿಂದ ದೂರ ಉಳಿಯಲು ಪಾಲಿಸಬೇಕಿರುವ ಕ್ರಮಗಳ ಬಗ್ಗೆ ಗ್ರಾಮದ ಚಾಲಕರಿಗೆ ವಿಶೇಷ ತರಬೇತಿ ನೀಡಿದ್ದಾರೆ.

ಧಾರವಾಡ:

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ನವಲಗುಂದ ಹಾಗೂ ಕುಂದಗೋಳ ಪಟ್ಟಣಗಳ ವರ್ತಕರು ಸಂಜೆ 4ರವರೆಗೆ ವ್ಯಾಪಾರ ವಹಿವಾಟನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಜವಳಿ ವರ್ತಕರು ದಿನದ ವಹಿವಾಟನ್ನು ಸಂಜೆ 5 ಗಂಟೆಗೆ ಬಂದ್ ಮಾಡುತ್ತಿದ್ದಾರೆ. ಧಾರವಾಡ ತಾಲ್ಲೂಕಿನ ಚಂದನಮಟ್ಟಿ, ಸೋಮಾಪುರ, ಕವಲಗೇರಿ, ಅಮ್ಮಿನಭಾವಿ, ನವಲಗುಂದ ತಾಲ್ಲೂಕಿನ ಮೊರಬ ಗ್ರಾಮಸ್ಥರು ಸ್ವಯಂಪ್ರೇರಿತ ಲಾಕ್‌ಡೌನ್‌ ಮಾಡಿಕೊಂಡು, ಹೊರಗಿನವರ ಪ್ರವೇಶ ನಿರ್ಬಂಧಿಸಿದ್ದಾರೆ.

ಉತ್ತರ ಕನ್ನಡ:

ಜಿಲ್ಲೆಯಲ್ಲಿ ಭಟ್ಕಳದಲ್ಲಿ ಜಿಲ್ಲಾಡಳಿತ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟಿಗೆ ಅವಕಾಶ ನೀಡಿದೆ. ಕುಮಟಾ ತಾಲ್ಲೂಕಿನಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಯ ನಂತರ, ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳಲ್ಲಿ ಸಂಜೆ 5 ಗಂಟೆಗೆ ಅಂಗಡಿ ಬಾಗಿಲು ಮುಚ್ಚಿ ಎಲ್ಲ ವರ್ತಕರು ಸ್ವಯಂಪ್ರೇರಿತ ಲಾಕ್‌ಡೌನ್‌ ಪ್ರಾರಂಭಿಸಿದ್ದಾರೆ. ಕಾರವಾರದಲ್ಲಿ ಜುಲೈ 10ರಿಂದ ಹತ್ತು ದಿನಗಳವರೆಗೆ ವ್ಯಾಪಾರಸ್ಥರು ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದಾರೆ.

ಬಾಗಲಕೋಟೆ:

ಬಾಗಲಕೋಟೆ ನಗರದಲ್ಲಿ ಮಧ್ಯಾಹ್ನ 2ರವರೆಗೆ ಮಾತ್ರ ವ್ಯಾಪಾರ ನಡೆಸಲು ಇಲ್ಲಿನ ವರ್ತಕರು ನಿರ್ಧರಿಸಿದ್ದಾರೆ. ಇದಕ್ಕೆ ಕಿರಾಣಿ, ಬಟ್ಟೆ, ಚಿನ್ನಾಭರಣ ವರ್ತಕರು ಸೇರಿದಂತೆ ಎಂಟು ವಿವಿಧ ವರ್ತಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಬಳ್ಳಾರಿ:

ಜಿಲ್ಲಾ ಕೇಂದ್ರ ಬಳ್ಳಾರಿ, ಜಿಲ್ಲೆಯ ಕೊಟ್ಟೂರು, ಕುರುಗೋಡು, ಕಂಪ್ಲಿಯಲ್ಲಿ ವರ್ತಕರು ಮಧ್ಯಾಹ್ನ 3 ಗಂಟೆಯವರೆಗಷ್ಟೇ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ. ಹೊಸಪೇಟೆಯಲ್ಲಿ ಕಿರಾಣಿ ವರ್ತಕರು ಮಧ್ಯಾಹ್ನ ಮೂರು ಗಂಟೆಯ ವರೆಗೆ ವಹಿವಾಟು ನಡೆಸಲು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.

ಬೆಳಗಾವಿ:

ಜಿಲ್ಲೆಯ ಅಥಣಿಯಲ್ಲಿ ಜನರೇ ಸ್ವಯಂಪ್ರೇರಿತರಾಗಿ ಜುಲೈ 12ರವರೆಗೆ ಲಾಕ್‌ಡೌನ್‌ಗೆ ನಿರ್ಧರಿಸಿದ್ದಾರೆ. ಅಂಗಡಿ, ವ್ಯಾಪಾರ, ಆಟೊ, ಬಾಡಿಗೆ ವಾಹನಗಳ ಓಡಾಟ ಎಲ್ಲವೂ ಬಂದ್ ಆಗಿದೆ. ಗೋಕಾಕ ತಾಲ್ಲೂಕಿನಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ವ್ಯಾಪಾರ ವಹಿವಾಟು ಬಂದ್ ಮಾಡಲು ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಹಾವೇರಿ:

ಹಾವೇರಿ ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜ ಕ್ಷೌರಿಕ ವೃತ್ತಿಬಾಂಧವರ ಸಮಿತಿ ವತಿಯಿಂದ ಜುಲೈ 8ರಿಂದ ಅನಿರ್ದಿಷ್ಟಾವಧಿ ಅಂಗಡಿ ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಹಾವೇರಿ ನಗರದಲ್ಲಿ ರಾತ್ರಿ 8ರವರೆಗೆ ವ್ಯಾಪಾರ ಮಾಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಆದರೆ, ಕಿರಾಣಿ, ಬಟ್ಟೆ, ಜ್ಯುವೆಲರಿ ವ್ಯಾಪಾರಿಗಳ ಸಂಘದವರು ನಿತ್ಯ ಸಂಜೆ 3.30ರಿಂದ ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ.

ವಿಜಯಪುರ:

ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮಧ್ಯಾಹ್ನದ ವರೆಗೆ ವ್ಯಾಪಾರ ನಡೆಸಲಾಗುತ್ತಿದೆ. ನಿಡಗುಂದಿ ಪಟ್ಟಣದಲ್ಲಿ ಸಾರ್ವಜನಿಕ ಜನದಟ್ಟಣೆ ತಡೆಗಟ್ಟುವ ಸಲುವಾಗಿ ಜುಲೈ 31 ರವರೆಗೆ (ಜವಳಿ) ಬಟ್ಟೆ ಅಂಗಡಿಯ ಮಾಲೀಕರು ಸಂಜೆ 5.30ರವರೆಗೆ ಮಾತ್ರ ಅಂಗಡಿಗಳನ್ನು ತೆಗೆದು ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ.

ಗದಗ:

ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೂ ಸ್ವಯಂಪ್ರೇರಿತ ಲಾಕ್‌ಡೌನ್‌ ಇಲ್ಲ. ಮುಂಡರಗಿ ಪಟ್ಟಣದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಬೆನ್ನಲ್ಲೇ ಅಲ್ಲಿನ ವರ್ತಕ ಸಂಘದವರು ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟಿನ ಅವಧಿಯನ್ನು ಬೆಳಿಗ್ಗೆ 11 ಗಂಟೆಯವರೆಗೆ ನಿಗದಿ ಮಾಡಿದ್ದರು. ಇದು ಒಂದು ವಾರವಷ್ಟೇ ಜಾರಿಯಲ್ಲಿತ್ತು. ನಂತರ ಸಂಘದ ಸದಸ್ಯರಲ್ಲೇ ಹೊಂದಾಣಿಕೆ ಮೂಡದ ಕಾರಣ, ಜುಲೈ 6ರಿಂದ ಮತ್ತೆ ಈ ಅವಧಿಯನ್ನು ಸಂಜೆ 4ರವರೆಗೆ ವಿಸ್ತರಿಸಲಾಗಿದೆ.

ರಾಯಚೂರು:

ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ಮುದಗಲ್‌ಗಳಲ್ಲಿ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟು ಬಂದ್‌ ಮಾಡುತ್ತಿದ್ದಾರೆ. ಪ್ರತಿದಿನ ಮಧ್ಯಾಹ್ನ 2ರ ನಂತರ ಅಂಗಡಿ–ಮುಂಗಟ್ಟುಗಳು ಬಾಗಿಲು ಹಾಕಲಾಗುತ್ತದೆ. ಬೀದಿ ವ್ಯಾಪಾರ ಕೂಡ ನಡೆಯುವುದಿಲ್ಲ.

ಕೊಪ್ಪಳ:

ಕೊಪ್ಪಳ ನಗರದಲ್ಲಿ ಮಧ್ಯಾಹ್ನ 2 ರಿಂದ ಲಾಕ್‌ಡೌನ್‌ ಮಾಡಲು ನಿರ್ಧರಿಸಿಲಾಗಿದ್ದು, ಈ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕೆ ಎಲ್ಲಾ ವ್ಯಾಪಾರಸ್ಥರ ಸಹಕಾರ ಸಿಕ್ಕಿದೆ.

ಯಾದಗಿರಿ:

ಯಾದಗಿರಿಯ ಜಿಲ್ಲೆಯ ಹುಣಸಗಿ ಮತ್ತು ಕಕ್ಕೇರಾ ಪಟ್ಟಣದಲ್ಲಿ ಸ್ವಯಂ–ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಲಾಗುತ್ತಿದೆ. ಹುಣಸಗಿ ಪಟ್ಟಣದ ಕಂಟೈನ್ಮೆಂಟ್ ಪ್ರದೇಶದಲ್ಲಿ ಕಿರಾಣಿ, ಹಾಲು, ತರಕಾರಿ ಮತ್ತು ಹಣ್ಣು ಅಂಗಡಿಗಳಿಗೆ ಬೆಳಿಗ್ಗೆ 10ರವರೆಗೆ ಮಾತ್ರ ತೆರೆಯಲು ಅವಕಾಶವಿದೆ.

ಕಲಬುರ್ಗಿ ಮತ್ತು ಬೀದರ್‌

ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಜನರು ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಸುವುದು ಹೊರತುಪಡಿಸಿದರೆ ಸ್ವಯಂ–ಪ್ರೇರಣೆಯಿಂದ ಲಾಕ್‌ಡೌನ್‌ ಮಾಡುತ್ತಿಲ್ಲ.

ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯುತ್ತಿವೆ. ವರ್ತಕರ ಸಂಘದ ಸದಸ್ಯರು ಈ ಸ್ವಯಂ ಲಾಕ್‌ಡೌನ್ ನಿರ್ಣಯ ತೆಗೆದುಕೊಂಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು, ಕುಣಿಗಲ್‌ನಲ್ಲಿ ಜುಲೈ 22ರವರೆಗೆ ಕಾಲ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ತಿಪಟೂರು, ಕೊರಟಗೆರೆ, ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ತರಹದ ವ್ಯಾಪಾರಿಗಳು ಮಧ್ಯಾಹ್ನ 2 ಗಂಟೆವರೆಗೆ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ತುಮಕೂರು ನಗರದಲ್ಲಿ ಆಭರಣ ಅಂಗಡಿಗಳು ಮತ್ತು ಗಿರವಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಚಾಮರಾಜನಗರ:

ಗಡಿ ಜಿಲ್ಲೆ ಚಾಮರಾಜನಗರಗದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಹೊರಗಡೆಯಿಂದ ಬಂದವರಲ್ಲೇ ಹೆಚ್ಚಾಗಿ ಕೋವಿಡ್‌–19 ಕಂಡು ಬಂದಿರುವುದರಿಂದ, ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹೇರಿಕೊಂಡಿದ್ದಾರೆ. ಹೊರಗಡೆಯಿಂದ ಬಂದವರಿಗೆ ಪ್ರವೇಶ ನಿರ್ಬಂಧಿಸುತ್ತಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಶಂಕನಪುರ, ಹಂಪಾಪುರ, ಹರಳೆ, ದಾಸನಪುರ, ಸತ್ತೇಗಾಲ, ಸರಗೂರು, ಧನಗೆರೆ ಮತ್ತಿತರ ಗ್ರಾಮಗಳಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಪ್ರವೇಶವಿಲ್ಲ. ಮುಳ್ಳೂರಿನ ಉಪ್ಪಾರ ಸಮುದಾಯದವರು, ಕದ್ದು ಮುಚ್ಚಿ ಬಂದವರಿಗೆ ₹10 ಸಾವಿರ ದಂಡ ವಿಧಿಸಲು ತೀರ್ಮಾನಿಸಿದ್ದಾರೆ.

ಮೈಸೂರು:

ಮೈಸೂರು ಗ್ರಾಮಾಂತರ ಪ್ರದೇಶದ ಜನರು, ಮಾಹಿತಿ ನೀಡದೆ ಗ್ರಾಮಕ್ಕೆ ಬಂದವರ ಮೇಲೆ ಪೊಲೀಸ್‌ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ತಾಲ್ಲೂಕಿನ ಭುಗತಹಳ್ಳಿಯಲ್ಲಿ ಈ ಸಂಬಂಧ ನಿತ್ಯ ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರು ಹಾಗೂ ಇನ್ನಿತರ ಪ್ರದೇಶಗಳಿಂದ ಬರುವವರು ಮೊದಲು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಬೇಕು ಎಂದು ತಿಳಿ ಹೇಳುತ್ತಿದ್ದಾರೆ. ಭಾನುವಾರದ ಲಾಕ್‌ಡೌನ್‌ಗೆ ಹಿಂದಿನ ದಿನ ಬೆಂಗಳೂರಿನಿಂದ ಬಂದವರನ್ನು ಹುಣಸೂರು ತಾಲ್ಲೂಕಿನ ಹನಗೋಡು ಹಾಗೂ ಅಬ್ಬೂರು ಗ್ರಾಮದವರು ಒಳಗೆ ಬಿಟ್ಟಿರಲಿಲ್ಲ.

ಹಾಸನ:

ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗದಂತೆ ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ ಭಾಗದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟನ್ನು ಸೀಮಿತಗೊಳಿಸಲಾಗಿದೆ. ಹಾಸನ ನಗರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಶನಿವಾರವೂ ಲಾಕ್‌ಡೌನ್‌ ಮಾಡಲಾಗುತ್ತಿದೆ. ಹೋಂ ಸ್ಟೇ, ರೆಸಾರ್ಟ್‌ ಬಂದ್ ಮಾಡಲು ಜಿಲ್ಲಾಡಳಿತ ಆದೇಶಿಸಿದೆ. ಸಕಲೇಶಪುರ ಗಡಿ ಭಾಗದ ಗ್ರಾಮಗಳ ಜನರು, ತಮ್ಮೂರಿಗೆ ಹೊರಗಿನವರು ಬಾರದಂತೆ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ನಿರ್ಬಂಧ ಹೇರಿದ್ದಾರೆ. ಕ್ಷೌರಿಕರಲ್ಲಿಯೂ ಸೋಂಕು ಕಾಣಿಸಿಕೊಂಡಿದ್ದರಿಂದ ಜುಲೈ 25ರವರೆಗೆ ಸಲೂನ್‌ಗಳನ್ನು ಬಂದ್‌ ಮಾಡಲಾಗಿದೆ.

ಮಂಡ್ಯ:

ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮಗಳಲ್ಲಿ ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ನಿಯಮ ಜಾರಿಗಾಗಿ ಡಂಗೂರದ ಸದ್ದಿನ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಶ್ರೀಕ್ಷೇತ್ರ ಮೇಲುಕೋಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಂಗಡಿ–ಮುಂಗಟ್ಟು ಮುಚ್ಚಲಾಗುತ್ತಿದೆ. ಬೆಳಿಗ್ಗೆ, ಸಂಜೆ ಒಂದು ಗಂಟೆ ಮಾತ್ರ ಇಲ್ಲಿ ಅಂಗಡಿಗಳು ವಹಿವಾಟು ನಡೆಸುತ್ತವೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಡಂಗೂರದ ಮೂಲಕ ಎಚ್ಚರಿಕೆ ನೀಡಲಾಗಿದೆ.

ಕೊಡಗು:

ಹೋಂ ಸ್ಟೇ, ರೆಸಾರ್ಟ್‌ ಅನಿರ್ದಿಷ್ಟಾವಧಿವರೆಗೆ ಬಂದ್‌ ಮಾಡಲಾಗಿದೆ. ವ್ಯಾಪಾರ ಇಲ್ಲದೇ ಇರುವುದರಿಂದ ಅಂಗಡಿಕಾರರೇ ಬೇಗನೇ ಅಂಗಡಿಗಳನ್ನು ಮುಚ್ಚುತ್ತಿದ್ದಾರೆ.

ಬೆಂಗಳೂರು ನಗರ:

ಬೆಂಗಳೂರು ನಗರದಲ್ಲಿ ಲಾಕ್‌ಡೌನ್‌ ತೆರವುಗೊಂಡ ಬಳಿಕ ಕೆ.ಆರ್‌.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಸಗಟು ಮಾರುಕಟ್ಟೆಗಳಲ್ಲೂ ವ್ಯಾಪಾರ ಆರಂಭವಾಗಿತ್ತು. ಇಲ್ಲಿನ ಕೆಲವು ವರ್ತಕರಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಆಗ ವರ್ತಕರ ಸಂಘದವರು ಸ್ವಯಂಪ್ರೇರಿತವಾಗಿ ಎರಡೂ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡರು. ಅಚ್ಚರಿಯೆಂದರೆ, ಜೂನ್‌ ಆರಂಭದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದಾಗ ನಗರದ ಬೇರೆ ಮಾರುಕಟ್ಟೆಗಳಲ್ಲಿ ವಹಿವಾಟಿಗೆ ಅವಕಾಶ ನೀಡಿದ್ದ ಬಿಬಿಎಂಪಿ, ಕೆ.ಆರ್‌.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಸಗಟು ಮಾರುಕಟ್ಟೆಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಿರಲಿಲ್ಲ. ಆಗ ಇಲ್ಲಿನ ವರ್ತಕರೆಲ್ಲ ಸೇರಿ ಪ್ರತಿಭಟನೆ ನಡೆಸಿದ್ದರು. 

ಬೆಂಗಳೂರು ಗ್ರಾಮಾಂತರ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವ್ಯಾಪಾರಸ್ಥರು ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಮುಂದಾದರು. ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಮಾತ್ರ ಮಧ್ಯಾಹ್ನದ ನಂತರ ಸಂಪೂರ್ಣ ಲಾಕ್‌ಡೌನ್‌ ನಡೆಯುತ್ತಿದೆ. ಉಳಿದಂತೆ ದೇವನಹಳ್ಳಿ, ನೆಲಮಂಗಲ ತಾಲ್ಲೂಕಿನಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ವ್ಯಾಪಾರಸ್ಥರಿಂದ ಸ್ಪಂದನ ದೊರೆತಿಲ್ಲ.

ಎಲ್ಲೆಲ್ಲಿ ಏನೇನು?

ಬೆಂಗಳೂರಿನಲ್ಲಿ ಮಾರುಕಟ್ಟೆ ತೆರೆಯಿರಿ ಎಂದು ಪ್ರತಿಭಟಿಸಿದ ವರ್ತಕರೇ ಲಾಕ್‌ಡೌನ್‌ ಮಾಡಿದ್ದಾರೆ!

ಚಾಮರಾಜನಗರದ ಹಲವು ಗ್ರಾಮಗಳಲ್ಲಿ ಹೊರಗಿನವರಿಗೆ ನಿರ್ಬಂಧವಿದೆ

ಹಾಸನದಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ

ಮಂಡ್ಯ ಜಿಲ್ಲೆಯಾದ್ಯಂತ ಡಂಗೂರದ ಸದ್ದು ಮೊಳಗುತ್ತಿದೆ!

ಹೋಂ ಸ್ಟೇ, ರೆಸಾರ್ಟ್‌ ಅನಿರ್ದಿಷ್ಟಾವಧಿವರೆಗೆ ಬಂದ್‌ ಮಾಡಲಾಗಿದೆ

ಆರೋಗ್ಯ ಸಚಿವರ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತದಿಂದ ಅರ್ಧದಿನ ಲಾಕ್‌ಡೌನ್‌ ಘೋಷಿಸಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು