ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಮಹಾತ್ಮ ಗಾಂಧಿ ಮೇಲೆ ಅವಹೇಳನದ ಸುರಿಮಳೆ

Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಯುವ ವಕೀಲ ಮೋಹನದಾಸ್‌ ಕರಮಚಂದ್‌ ಗಾಂಧಿ ಅವರು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾಕ್ಕೆ ಹೋಗಲು ಪ್ರಥಮ ದರ್ಜೆ ಟಿಕೆಟ್‌ನೊಂದಿಗೆ ರೈಲು ಏರಿದ್ದರು. ಆಗ ಅಲ್ಲಿ ವರ್ಣಭೇದ ನೀತಿ ಜಾರಿಯಲ್ಲಿತ್ತು. ಪ್ರಥಮ ದರ್ಜೆ ರೈಲಿನಲ್ಲಿ ಬಿಳಿಯರು ಮಾತ್ರ ಪ್ರಯಾಣಿಸಬಹುದಿತ್ತು. ಗಾಂಧಿಯ ಪ್ರಯಾಣವನ್ನು ಬಿಳಿಯನೊಬ್ಬ ಪ್ರಶ್ನಿಸಿದ್ದ. ಹಾಗಾಗಿ, ಗಾಂಧಿಯನ್ನು ಪೀಟರ್‌ಮಾರಿಟ್ಸ್‌ಬರ್ಗ್‌ನಲ್ಲಿ ರಾತ್ರಿಯ ಹೊತ್ತು ರೈಲಿನಿಂದ ಹೊರಗೆ ದಬ್ಬಲಾಗಿತ್ತು. ಇದು 1893ರ ಜೂನ್‌ 7ರಂದು ನಡೆಯಿತು. ಭಾರತೀಯರ ವಿರುದ್ಧ ಅಲ್ಲಿ ನಡೆಯುತ್ತಿದ್ದ ತಾರತಮ್ಯದ ವಿರುದ್ಧ ಈ ಘಟನೆಯ ಬಳಿಕ ಗಾಂಧಿ ಹೋರಾಟ ನಡೆಸಿದ್ದರು. ಅಂದು ಆದ ಅವಮಾನ ಗಾಂಧಿಯನ್ನು ಮಹಾತ್ಮನನ್ನಾಗಿ ಬೆಳೆಸಿತು. ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬಂದ ಗಾಂಧಿಯನ್ನು ನಮ್ಮ ರಾಷ್ಟ್ರಪಿತ ಎಂದೂ ಕರೆಯಲಾಯಿತು. ಇತ್ತೀಚಿನ ವರ್ಷಗಳಲ್ಲಿ, ಮಹಾತ್ಮನನ್ನು ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಆದರೆ, ಇಂತಹ ಅವಹೇಳನಗಳು ಗಾಂಧೀಜಿಯ ಬಗ್ಗೆ ಭಾರತೀಯರಲ್ಲಿ ಇರುವ ಪ್ರೀತಿ, ಗೌರವವನ್ನು, ಅವರ ಚಿಂತನೆಗಳ ಬಗೆಗಿನ ವಿಶ್ವಾಸವನ್ನು ಕುಂದಿಸಲಾರವು, ಮಾನವೀಯತೆಯಲ್ಲಿನ ನಂಬಿಕೆಯನ್ನು ಕಳೆದುಕೊಳ್ಳಲೇಬಾರದು.

ರಾಷ್ಟ್ರಪಿತ ಎಂದಿದ್ದು ನೇತಾಜಿ

ಮಹಾತ್ಮ ಗಾಂಧಿ ಅವರನ್ನು ಮೊದಲ ಬಾರಿ ‘ರಾಷ್ಟ್ರಪಿತ’ ಎಂದು ಕರೆದವರು ನೇತಾಜಿ ಸುಭಾಷ್ ಚಂದ್ರ ಬೋಸ್. ನೇತಾಜಿ ಅವರು ಮ್ಯಾನ್ಮಾರ್‌ನ ರಂಗೂನ್‌ನಲ್ಲಿ ಇದ್ದಾಗ, 1944ರಲ್ಲಿ ಮಹಾತ್ಮ ಗಾಂಧಿ ಅವರ ಪತ್ನಿ ಕಸ್ತೂರ ಬಾ ಅವರು ನಿಧನರಾಗಿದ್ದರು. ಮ್ಯಾನ್ಮಾರ್ ರೇಡಿಯೊ ಮೂಲಕ ಸಂತಾಪ ಸೂಚನಾ ಭಾಷಣ ಮಾಡಿದ್ದ ನೇತಾಜಿ ಅವರು, ಗಾಂಧೀಜಿ ಅವರನ್ನು ‘ಫಾದರ್ ಆಫ್‌ ದಿ ನೇಷನ್’ ಎಂದು ಕರೆದಿದ್ದರು. ಆ ನಂತರ ಸರೋಜಿನಿ ನಾಯ್ಡು ಅವರು, ‘ರಾಷ್ಟ್ರಪಿತ’ ಎಂಬುದನ್ನು ಬಳಸಿದ್ದರು. ನಂತರದ ದಿನಗಳಲ್ಲಿ ಇದು ಜನಜನಿತವಾಯಿತು.

‘ರಾಷ್ಟ್ರಪಿತ ಎಂಬ ಬಿರುದನ್ನು ಯಾವ ಕಾಯ್ದೆ ಅಡಿ ನೀಡಲಾಗಿದೆ’ ಎಂದು ಉತ್ತರ ಪ್ರದೇಶದ ಬಾಲಕಿಯೊಬ್ಬಳು ಕೇಂದ್ರ ಸರ್ಕಾರವನ್ನು, ಮಾಹಿತಿ ಹಕ್ಕು ಕಾಯ್ದೆ ಅಡಿ 2012ರಲ್ಲಿ ಪ್ರಶ್ನಿಸಿದ್ದಳು. ಯಾವುದೇ ವ್ಯಕ್ತಿಗೆ ಈ ಸ್ವರೂಪದ ಬಿರುದು ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಕೇಂದ್ರ ಸರ್ಕಾರವು ಮಾಹಿತಿ ನೀಡಿತ್ತು.

ಚತುರ ಬನಿಯಾ ಎಂದಿದ್ದ ಶಾ

ಬಿಜೆಪಿ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ 2017ರ ಜೂನ್‌ನಲ್ಲಿ ರಾಯಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಹಾತ್ಮ ಗಾಂಧಿ ಅವರನ್ನು ‘ಚತುರ ಬನಿಯಾ’ (ವ್ಯಾಪಾರಿ ವರ್ಗಕ್ಕೆ ಸೇರಿದ ಜಾತಿಯ ಹೆಸರು) ಎಂದು ಕರೆದು ವಿವಾದಕ್ಕೆ ಕಾರಣರಾಗಿದ್ದರು.

ಅವರ ಹೇಳಿಕೆಯ ಪೂರ್ಣಪಾಠ ಹೀಗಿತ್ತು: ‘ಭಿನ್ನ ಸಿದ್ಧಾಂತ ಹಾಗೂ ವಿಚಾರಧಾರೆಯ ಜನ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಕಾಂಗ್ರೆಸ್‌ ಜತೆ ಸೇರಿದ್ದರು. ಕಾಂಗ್ರೆಸ್‌ಗೆ ಸಾಂಸ್ಥಿಕವಾಗಿ ಯಾವುದೇ ತತ್ವ ಮತ್ತು ಸಿದ್ಧಾಂತ ಇರಲಿಲ್ಲ. ಸ್ವಾತಂತ್ರ್ಯ ಪಡೆಯಲು ಅದೊಂದು ವಾಹಕವಾಗಿತ್ತು ಅಷ್ಟೆ. ಭವಿಷ್ಯದ ಕುರಿತು ಮುನ್ನೋಟ ಹೊಂದಿದ್ದ ಮಹಾತ್ಮ ಗಾಂಧಿ –ಅವರು ತುಂಬಾ ಚತುರ ಬನಿಯಾ ಆಗಿದ್ದರು (ಬಹುತ್‌ ಚತುರ್‌ ಬನಿಯಾ ಥಾ ವೋ) – ಅವರಿಗೆ ಮುಂದೇನಾಗಲಿದೆ ಎನ್ನುವುದು ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಸ್ವಾತಂತ್ರ್ಯ ಸಿಕ್ಕೊಡನೆ ಕಾಂಗ್ರೆಸ್‌ ಸಂಘಟನೆಯನ್ನು ವಿಸರ್ಜಿಸಬೇಕೆಂದು ಅವರು ಹೇಳಿದ್ದು’

ಪ್ರತಿಕೃತಿಗೆ ಗುಂಡಿಕ್ಕಿದ್ದ ವಿಎಚ್‌ಪಿ ನಾಯಕಿ

ಹಿಂದೂ ಮಹಾಸಭಾದ ಭೋಪಾಲ್ ಘಟಕದ ಮುಂದಾಳು ಪೂಜಾ ಶಕುನ್ ಪಾಂಡೆ 2019ರ ಮೇ 19ರಂದು, ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿದ್ದರು. ನಂತರ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಪರ ಘೋಷಣೆ ಕೂಗಿದ್ದರು. ಗುಂಡು ತಗಲುತ್ತಿದ್ದಂತೆ ಪ್ರತಿಕೃತಿಯಿಂದ ರಕ್ತ ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಮೆ ವಿರೂಪದ ವಿಕೃತಿ

ಗಾಂಧೀಜಿ ಪ್ರತಿಮೆಯನ್ನು ಧ್ವಂಸ ಮಾಡುವ, ವಿರೂಪಗೊಳಿಸುವ ಘಟನೆಗಳು ದೇಶದಾದ್ಯಂತ ನಡೆದಿವೆ. ಒಂದು ವರ್ಷದಿಂದ ಈಚೆಗೆ ಇಂತಹ ಹಲವು ದುಷ್ಕೃತ್ಯಗಳು ಮರುಕಳಿಸಿವೆ

ಗುಜರಾತ್: ಮೋದಿ ಉದ್ಘಾಟಿಸಿದ್ದ ಪ್ರತಿಮೆ ಧ್ವಂಸ

ತೀರಾ ಇತ್ತೀಚೆಗೆ, ಗಾಂಧೀಜಿ ಪ್ರತಿಮೆಯನ್ನು ಧ್ವಂಸ ಮಾಡುವ ಕೃತ್ಯ ನಡೆದದ್ದು ಗುಜರಾತ್‌ನ ಅಮ್ರೇಲಿಯಲ್ಲಿ. ಅಮ್ರೇಲಿ ಜಿಲ್ಲಾ ಕೇಂದ್ರದ ಹರಿಕೃಷ್ಣ ಕೆರೆಯ ದಂಡೆಯ ಉದ್ಯಾನದಲ್ಲಿ ಇದ್ದ ಗಾಂಧೀಜಿ ಪ್ರತಿಮೆಯನ್ನು 2020ರ ಜನವರಿ 3ರ ರಾತ್ರಿ ಒಡೆದು ಹಾಕಲಾಗಿತ್ತು. ದಂಡಿ ಸತ್ಯಾಗ್ರಹದ ನಡಿಗೆಯ ರೂಪದಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಪೂರ್ಣ ಒಡೆದು ಹಾಕಲಾಗಿತ್ತು. ಆದರೆ, ಈ ಕೃತ್ಯ ಎಸಗಿದ ದುಷ್ಕರ್ಮಿಗಳು ಯಾರು ಎಂಬುದನ್ನು ಪೊಲೀಸರು ಈವರೆಗೆ ಪತ್ತೆ ಮಾಡಿಲ್ಲ. ಈ ಪ್ರತಿಮೆ ಮತ್ತು ಉದ್ಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಉದ್ಘಾಟಿಸಿದ್ದರು.

ರಾಜಸ್ಥಾನ: ರಾಜಸ್ಥಾನದ ಅಜ್ಮೀರ್‌ನ ಗಾಂಧಿ ಚೌಕದಲ್ಲಿ ಇದ್ದ ಗಾಂಧೀಜಿ ಪ್ರತಿಮೆಯನ್ನು 2019ರ ಅಕ್ಟೋಬರ್ 27ರ ರಾತ್ರಿ ಧ್ವಂಸ ಮಾಡಲಾಗಿತ್ತು. ದುಷ್ಕರ್ಮಿಗಳನ್ನು ಪತ್ತೆ ಮಾಡಲು ಪೊಲೀಸರು ಯತ್ನಿಸಿದ್ದರು. ಆದರೆ, ಕೃತ್ಯ ಎಸಗಿದವರು ಈವರೆಗೆ ಸಿಕ್ಕಿಲ್ಲ.

ಗಾಂಧೀಜಿ ಅವರ ಅಂತ್ಯಸಂಸ್ಕಾರದ ನಂತರ ಚಿತಾಭಸ್ಮವನ್ನು ದೇಶದ ಹಲವೆಡೆ ಇರುವ ಗಾಂಧಿ ಸ್ಮಾರಕ ಭವನಗಳು ಮತ್ತು ವಸ್ತುಸಂಗ್ರಹಾಲಯಗಳ ಸಂಗ್ರಹಕ್ಕೆ ಕಳುಹಿಸಲಾಗಿತ್ತು. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಗಾಂಧಿ ಸ್ಮಾರಕ ಭವನದಲ್ಲಿ ಇದ್ದ ಚಿತಾಭಸ್ಮದ ಕುಡಿಕೆಯನ್ನು 2019ರ ಅಕ್ಟೋಬರ್ 4ರ ರಾತ್ರಿ ಕಳವು ಮಾಡಲಾಗಿತ್ತು. ಸ್ಮಾರಕ ಭವನದಲ್ಲಿ ಇದ್ದ ಗಾಂಧೀಜಿ ಭಾವಚಿತ್ರಕ್ಕೆ ಹಸಿರು ಬಣ್ಣ ಬಳಿದು, ವಿರೂಪಗೊಳಿಸಲಾಗಿತ್ತು. ಗಾಂಧೀಜಿ ಅವರ ಜನ್ಮದಿನದ 150ನೇ ವರ್ಷಾಚರಣೆ ಪೂರ್ಣಗೊಂಡ (ಅಕ್ಟೋಬರ್ 2) ಎರಡೇ ದಿನದಲ್ಲಿ ಈ ಕೃತ್ಯ ಎಸಗಲಾಗಿತ್ತು.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಜಾಲೌನ್‌ನ ಕಾಲೇಜು ಒಂದರ ಆವರಣದಲ್ಲಿ ಇದ್ದ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದರು. 2019ರ ಸೆಪ್ಟೆಂಬರ್ 13ರಂದು ಕೃತ್ಯ ನಡೆದಿತ್ತು.

ಪ್ರತಿಮೆ ಧ್ವಂಸ ತಡೆಗೆ ಕಾನೂನು

ಗಾಂಧೀಜಿ ಅವರ ಪ್ರತಿಮೆ, ಚಿತ್ರವನ್ನು ಧ್ವಂಸ ಮಾಡುವುದು ಮತ್ತು ವಿರೂಪಗೊಳಿಸುವುದನ್ನು ತಡೆಯುವ ಉದ್ದೇಶದಿಂದ ತಮಿಳನಾಡು ಸರ್ಕಾರವು 1957ರಲ್ಲಿ ‘ರಾಷ್ಟ್ರೀಯ ಗೌರವಗಳಿಗೆ ಹಾನಿ ತಡೆ ಕಾಯ್ದೆ’ಯನ್ನು ಜಾರಿಗೆ ತಂದಿತ್ತು.

ಗಾಂಧೀಜಿ ಅವರ ಪ್ರತಿಮೆ ಮತ್ತು ಚಿತ್ರಗಳನ್ನು ಯಾವುದೇ ರೀತಿಯಲ್ಲಿ ವಿರೂಪಗೊಳಿಸುವುದು ಮತ್ತು ಧ್ವಂಸ ಮಾಡುವುದನ್ನು ಈ ಕಾಯ್ದೆ ತಡೆಯುತ್ತದೆ. ಇಂತಹ ಕೃತ್ಯ ಎಸಗುವವರಿಗೆ 3 ವರ್ಷ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಕಸಕ್ಕೆ ಹೋಲಿಸಿದ್ದ ತಾಸಾ

ಮಹಾತ್ಮ ಗಾಂಧಿ ಮತ್ತು ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಅವರನ್ನುರಾಜ್ಯಸಭೆಯಲ್ಲಿ ಅಸ್ಸಾಂ ಅನ್ನು ಪ್ರತಿನಿಧಿಸುವ ಬಿಜೆಪಿಯ ಕಾಮಾಖ್ಯ ಪ್ರಸಾದ್‌ ತಾಸಾ ಕಸಕ್ಕೆ ಹೋಲಿಸಿದ್ದರು. ‘ಕಾಂಗ್ರೆಸ್‌ ಪಕ್ಷವು ಹಲವು ವರ್ಷಗಳಿಂದ ಜನರ ಮನಸ್ಸಿನಲ್ಲಿ ನೆಹರೂ–ಗಾಂಧಿ ಕಸವನ್ನೇ ತುಂಬಲು ಯತ್ನಿಸುತ್ತಿದೆ. ಬೇರೆ ಸಿದ್ಧಾಂತಗಳಿಗೆ ಅಲ್ಲಿ ಅವಕಾಶವೇ ಇಲ್ಲ’ ಎಂದು ಚುನಾವಣಾ ರ‍್ಯಾಲಿಯೊಂದರಲ್ಲಿ ಹೇಳಿದ್ದರು.

ಸಂಬಿತ್‌ ಪಾತ್ರಾಗೆ ಮೋದಿಯೇ ರಾಷ್ಟ್ರಪಿತ

ಮಹಾತ್ಮ ಗಾಂಧಿಯನ್ನು ಇಡೀ ದೇಶವೇ ಒಕ್ಕೊರಲಿನಿಂದ ‘ರಾಷ್ಟ್ರಪಿತ’ ಎಂದು ಕರೆಯುತ್ತಾ ಬಂದಿದೆ. ಆದರೆ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ಪ್ರಧಾನಿ ಮೋದಿಯನ್ನು ‘ರಾಷ್ಟ್ರಪಿತ’ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಸುದ್ದಿ ವಾಹಿನಿಯೊಂದರ ಸಂವಾದ ಕಾರ್ಯಕ್ರಮದಲ್ಲಿ ಪಾತ್ರಾ ಈ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು, ಸಂಬಿತ್‌ ಅವರ ಹೇಳಿಕೆಯನ್ನು ಮಹಾತ್ಮನಿಗೆ ಮಾಡಿದ ಅಪಮಾನ ಎಂದೇ ಕರೆದಿದ್ದವು. ಮೋದಿ ಅವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದವು.

‘ನೋಟಿನಲ್ಲಿ ಗಾಂಧಿ ಚಿತ್ರ: ಹಣದ ಅಪಮೌಲ್ಯೀಕರಣಕ್ಕೆ ಕಾರಣ’

‘ಮಹಾತ್ಮ ಗಾಂಧಿ ಅವರ ಚಿತ್ರವು ಖಾದಿ ಬೆಳವಣಿಗೆಗೆ ಏನೂ ಸಹಕಾರಿ ಆಗಿರಲಿಲ್ಲ. ಬದಲಾಗಿ ಅದು ಹಣದ ಅಪಮೌಲ್ಯೀಕರಣಕ್ಕೆ ಕಾರಣವಾಯಿತು’ ಎಂದು ಹರಿಯಾಣದ ಆರೋಗ್ಯ ಸಚಿವರಾಗಿದ್ದ ಅನಿಲ್ ವಿಜ್‌ ನೀಡಿದ್ದ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ನಿಗಮದ (ಕೆವಿಐಸಿ) ಕ್ಯಾಲೆಂಡರ್‌ ಮತ್ತು ದಿನಚರಿಯಲ್ಲಿ ಗಾಂಧೀಜಿ ಅವರ ಚಿತ್ರದ ಬದಲು ಪ್ರಧಾನಿ ಮೋದಿ ಅವರ ಚಿತ್ರ ಬಳಸಿಕೊಂಡಿರುವುದನ್ನು ವಿಜ್ ಸಮರ್ಥಿಸಿಕೊಂಡಿದ್ದರು. ‘ಗಾಂಧೀಜಿ ಅವರಿಗಿಂತ ಮೋದಿ ಉತ್ತಮ ‘ಬ್ರ್ಯಾಂಡ್‌’ ಆಗಿದ್ದಾರೆ. ಮೋದಿ ಅವರ ಹೆಸರಿನಿಂದ ಖಾದಿ ಮಾರಾಟದಲ್ಲಿ ಏರಿಕೆಯಾಗಿದೆ. ಮುಂದೆ ಗಾಂಧೀಜಿ ಅವರ ಚಿತ್ರವನ್ನು ನೋಟುಗಳಿಂದಲೂ ಹಂತಹಂತವಾಗಿ ತೆಗೆದುಹಾಕಲಾಗುತ್ತದೆ’ ಎಂದೂ ಅವರು ಹೇಳಿದ್ದರು.

‘ಖಾದಿಗೆ ಗಾಂಧೀಜಿ ಅವರ ಹೆಸರನ್ನು ಪೇಟೆಂಟ್‌ ಮಾಡಿಲ್ಲ. ಖಾದಿಗೆ ಗಾಂಧೀಜಿ ಅವರ ಹೆಸರನ್ನಿರಿಸಿದ ದಿನದಿಂದಲೂ ಅದರ ಖ್ಯಾತಿ ಕುಸಿಯುತ್ತಲೇ ಇದೆ. ಗಾಂಧೀಜಿ ಅವರ ಚಿತ್ರವನ್ನು ನೋಟುಗಳಲ್ಲಿ ಅಳವಡಿಸಿದ ಬಳಿಕ ಹಣವೂ ತನ್ನ ಮೌಲ್ಯ ಕಳೆದುಕೊಂಡಿದೆ’ ಎಂದು ವಿಜ್ ಹೇಳಿಕೆ ನೀಡಿದ್ದರು.

ಪಾಕಿಸ್ತಾನದ ಪಿತಾಮಹ ಎಂದಿದ್ದ ಸೌಮಿತ್ರ

‘ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ’ ಎಂದು ಮಧ್ಯ ಪ್ರದೇಶ ಬಿಜೆಪಿ ಘಟಕದ ವಕ್ತಾರ ಅನಿಲ್ ಸೌಮಿತ್ರ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಬರಹ ಪ್ರಕಟಿಸಿದ್ದರು. ಭಾರತವು ಸನಾತನ ದೇಶ. ಭಾರತದಿಂದ ಪಾಕಿಸ್ತಾನ ನಿರ್ಮಾಣವಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ಪಿತಾಮಹರೇ ಹೊರತು ಭಾರತಕ್ಕಲ್ಲ ಎಂದು ಅವರು ಬರೆದುಕೊಂಡಿದ್ದರು.

ಫೇಸ್‌ಬುಕ್‌ ಬರಹದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಸೌಮಿತ್ರ, ‘ಭಾರತದ ಜವಾಹರಲಾಲ್ ನೆಹರೂ ಹಾಗೂ ಪಾಕಿಸ್ತಾನದ ಮೊಹಮ್ಮದ್ ಅಲಿ ಜಿನ್ನಾ ಸೇರಿ ಎರಡು ರಾಷ್ಟ್ರಗಳನ್ನು ನಿರ್ಮಾಣ ಮಾಡಿದರು. ದೇಶ ವಿಭಜನೆ ಮಹಾತ್ಮ ಗಾಂಧಿಯ ಮುಂದೆಯೇ ಆಯಿತು. ಹೀಗಾಗಿ ಗಾಂಧೀಜಿ ಪಾಕಿಸ್ತಾನಕ್ಕೆ ಪಿತಾಮಹರು’ ಎಂದು ಸಮರ್ಥನೆ ಮಾಡಿಕೊಂಡಿದ್ದರು.

ಸೌಮಿತ್ರ ಅವರನ್ನು ಆಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ತೆಗೆದುಹಾಕಿತ್ತು.

ಮಧ್ಯಪ್ರದೇಶ: ಚಿತಾಭಸ್ಮ ಕಳವು

ಗಾಂಧೀಜಿ ಅವರ ಅಂತ್ಯಸಂಸ್ಕಾರದ ನಂತರ ಚಿತಾಭಸ್ಮವನ್ನು ದೇಶದ ಹಲವೆಡೆ ಇರುವ ಗಾಂಧಿ ಸ್ಮಾರಕ ಭವನಗಳು ಮತ್ತು ವಸ್ತುಸಂಗ್ರಹಾಲಯಗಳ ಸಂಗ್ರಹಕ್ಕೆ ಕಳುಹಿಸಲಾಗಿತ್ತು. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಗಾಂಧಿ ಸ್ಮಾರಕ ಭವನದಲ್ಲಿ ಇದ್ದ ಚಿತಾಭಸ್ಮದ ಕುಡಿಕೆಯನ್ನು 2019ರ ಅಕ್ಟೋಬರ್ 4ರ ರಾತ್ರಿ ಕಳವು ಮಾಡಲಾಗಿತ್ತು. ಸ್ಮಾರಕ ಭವನದಲ್ಲಿ ಇದ್ದ ಗಾಂಧೀಜಿ ಭಾವಚಿತ್ರಕ್ಕೆ ಹಸಿರು ಬಣ್ಣ ಬಳಿದು, ವಿರೂಪಗೊಳಿಸಲಾಗಿತ್ತು. ಗಾಂಧೀಜಿ ಅವರ ಜನ್ಮದಿನದ 150ನೇ ವರ್ಷಾಚರಣೆ ಪೂರ್ಣಗೊಂಡ (ಅಕ್ಟೋಬರ್ 2) ಎರಡೇ ದಿನದಲ್ಲಿ ಈ ಕೃತ್ಯ ಎಸಗಲಾಗಿತ್ತು. ಈ ಸಂಬಂಧ ರೇವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಯಾವುದೇ ಸಾಕ್ಷ್ಯ ದೊರೆಯದ ಕಾರಣ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.

***

‘ಮಾನವೀಯತೆ ಎಂಬುದು ಸಾಗರ. ಸಾಗರದ ಕೆಲವು ಹನಿಗಳು ಮಲಿನವಾಗಿವೆ ಎಂಬ ಕಾರಣಕ್ಕೆ ಸಾಗರ ಮಲಿನ ಆಗುವುದಿಲ್ಲ’

– ಗಾಂಧೀಜಿ ಒಮ್ಮೆ ಹೇಳಿದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT