ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ತಾಳೆ ಎಣ್ಣೆಗೂ ತಟ್ಟಿದ ಪೌರತ್ವ ಕಾಯ್ದೆ ಬಿಸಿ

ಭಾರತ–ಮಲೇಷ್ಯಾ ಬಿಕ್ಕಟ್ಟು * ಆಮದು ಮೇಲೆ ನಿರ್ಬಂಧ, ದೇಶಿ ಉತ್ಪಾದನೆಯಲ್ಲಿ ಕೊರತೆ
Last Updated 21 ಜನವರಿ 2020, 21:05 IST
ಅಕ್ಷರ ಗಾತ್ರ
ADVERTISEMENT
""
""

ಮಲೇಷ್ಯಾದಿಂದ ಆಮದಾಗುತ್ತಿದ್ದ ತಾಳೆ ಎಣ್ಣೆಯ ಮೇಲೆ ರಾಜತಾಂತ್ರಿಕ ಕಾರಣಗಳಿಗಾಗಿ ಭಾರತವು ನಿರ್ಬಂಧ ಹೇರಿದೆ. ಇದರಿಂದ ಭಾರತದಲ್ಲಿ ತಾಳೆ ಎಣ್ಣೆಯ ಬೆಲೆ ಏರಿಕೆಯಾಗಿದೆ. ಜತೆಗೆ ಎರಡೂ ದೇಶಗಳ ನಡುವಣ ವಾಣಿಜ್ಯ ಸಂಬಂಧವೂ ಬಿಗಡಾಯಿಸಿದೆ. ಇದು ವಾಣಿಜ್ಯ ಸಮರವಾಗುವ ಎಲ್ಲಾ ಅಪಾಯಗಳೂ ಇವೆ. ಮಲೇಷ್ಯಾದಲ್ಲಿರುವ ಭಾರತದ ವಲಸೆ ಕಾರ್ಮಿಕರ ಮೇಲೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಳ್ಳುವ ಅಪಾಯವೂ ಇದೆ

ಮುಂಬೈ/ಕ್ವಾಲಾಲಂಪುರ:ಭಾರತದ ವಿವಿಧ ಬಂದರುಗಳಲ್ಲಿ ಮಂಗಳವಾರದ ಅಂತ್ಯಕ್ಕೆ 30,000 ಟನ್‌ಗಳಿಗೂ ಹೆಚ್ಚು ಸಂಸ್ಕರಿಸಿದ ತಾಳೆ ಎಣ್ಣೆ ಹೊತ್ತ ಹಡಗುಗಳು ಬಂದುನಿಂತಿವೆ. ಸಂಸ್ಕರಿಸಿದ ತಾಳೆ ಎಣ್ಣೆಯ ಆಮದಿನ ಮೇಲೆ ಕೇಂದ್ರ ಸರ್ಕಾರವು ನಿರ್ಬಂಧ ಹೇರಿರುವ ಕಾರಣ, ಹಡಗುಗಳಿಂದ ಈ ಎಣ್ಣೆಯನ್ನು ಇಳಿಸಿಕೊಳ್ಳುವ ಕಾರ್ಯ ಸ್ಥಗಿತವಾಗಿದೆ.

‘ಭಾರತ ಮತ್ತು ಮಲೇಷ್ಯಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ತೆರವು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಲೇಷ್ಯಾ ಪ್ರಧಾನಿ ಹೇಳಿಕೆ ನೀಡಿದ್ದೇ ಈ ಬಿಕ್ಕಟ್ಟಿಗೆ ಕಾರಣ. ಇದಕ್ಕೆ ಪ್ರತಿಕ್ರಿಯೆಯಾಗಿ ಮಲೇಷ್ಯಾದಿಂದ ಆಮದಾಗುವ ಸಂಸ್ಕರಿಸಿದ ತಾಳೆ ಎಣ್ಣೆ ಮೇಲೆ ಭಾರತವು ನಿರ್ಬಂಧ ಹೇರಿದೆ. ಬಂದರುಗಳಲ್ಲಿ ನಿಂತಿರುವ 30,000 ಟನ್ ತಾಳೆ ಎಣ್ಣೆಯಲ್ಲಿ ಬಹುತೇಕ ಸರಕು ಮಲೇಷ್ಯಾದಿಂದ ಆಮದಾಗಿದೆ’ ಎಂದು ಮೂಲಗಳು ಹೇಳಿವೆ.

‘ಜನವರಿ ಎರಡನೇ ವಾರದಲ್ಲಿ, ಪ್ರಮುಖ ಆಮದು ಕಂಪನಿಗಳ ಜತೆ ಸಚಿವಾಲಯದ ಅಧಿಕಾರಿಗಳು ಮಾತುಕತೆ ನಡೆಸಿದ್ದರು. ಮಲೇಷ್ಯಾ ದಿಂದ ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಬಾರದು ಎಂದು ಆ ಕಂಪನಿಗಳಿಗೆ ಮೌಖಿಕವಾಗಿ ಸೂಚಿಸಲಾಗಿತ್ತು. ಆನಂತರ ಯಾವ ಕಂಪನಿಗಳೂ ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಂಡಿಲ್ಲ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಆದರೆ, ಈ ನಿರ್ಬಂಧ ಜಾರಿಗೆ ಬರುವುದಕ್ಕೂ ಮುನ್ನವೇ ಖರೀದಿಸಲಾಗಿದ್ದ ಸಾವಿರಾರು ಟನ್‌ಗಟ್ಟಲೆ ತಾಳೆ ಎಣ್ಣೆ ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ಭಾರತದ ಬಂದರುಗಳಿಗೆ ಜನವರಿ ಮೂರು ಮತ್ತು ನಾಲ್ಕನೇವಾರದಲ್ಲಿ ಬಂದಿದೆ. ಆದರೆ, ಆ ಹಡಗುಗಳಿಂದ ತಾಳೆ ಎಣ್ಣೆ ಇಳಿಸಿಕೊಳ್ಳಲು ಭಾರತದ ಯಾವ ಕಂಪನಿಗಳೂ ಮುಂದಾಗುತ್ತಿಲ್ಲ’ ಎಂದು ಮೂಲಗಳು ಹೇಳಿವೆ.

‘ಯಾವುದೇ ನಿರ್ಬಂಧಗಳನ್ನು ಹೇರುವ ಮುನ್ನ ಖರೀದಿಸಲಾದ ಸರಕು ಗಳನ್ನು ಇಳಿಸಿಕೊಳ್ಳಲು ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಗಳಲ್ಲಿ ಅವಕಾಶವಿರುತ್ತದೆ. ಈ ಪ್ರಕಾರ, ಈಗ ಬಂದರುಗಳಿಗೆ ಬಂದಿರುವ ತಾಳೆ ಎಣ್ಣೆಯನ್ನು ಇಳಿಸಿ ಕೊಳ್ಳಲು ಅವಕಾಶವಿದೆ. ಆದರೆ, ಯಾವ ಕಂಪನಿಗಳೂ ಈ ಎಣ್ಣೆಯನ್ನು ಇಳಿಸಿಕೊಳ್ಳಲು ಮುಂದಾಗುತ್ತಿಲ್ಲ. ಕೇಂದ್ರ ಸರ್ಕಾರ ಏನು ಕ್ರಮ ತೆಗೆದುಕೊ ಳ್ಳುತ್ತದೋ ಎಂಬ ಭಯ ವರ್ತಕರಲ್ಲಿ ಇದೆ’ ಎಂದು ಮಂಗಳೂರು ಬಂದರಿನಲ್ಲಿ ಕಾರ್ಯನಿರ್ವಹಿಸುವ ಕಂಪನಿಯೊಂದರ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕಂಪನಿಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಬೆಲೆ ಏರಿಕೆ ಮತ್ತು ಕೃಷಿ ವಿಸ್ತರಣೆ
ಭಾರತದಲ್ಲಿ ತಾಳೆ ಎಣ್ಣೆಯನ್ನು ಪ್ರಮುಖ ಖಾದ್ಯ ತೈಲವಾಗಿ ಬಳಸಲಾಗುತ್ತಿದೆ. ಬೇರೆ ಖಾದ್ಯ ತೈಲಗಳಿಗಿಂತ ಕಡಿಮೆ ಬೆಲೆ ಇರುವ ಕಾರಣ ತಾಳೆ ಎಣ್ಣೆಯ ಬಳಕೆ ಹೆಚ್ಚು. ದೇಶದ ಹಲವು ರಾಜ್ಯಗಳಲ್ಲಿ ತಾಳೆ ಎಣ್ಣೆಯನ್ನು ಪಡಿತರ ಪೂರೈಕೆ ವ್ಯವಸ್ಥೆ ಅಡಿ ವಿತರಣೆ ಮಾಡಲಾಗುತ್ತದೆ. ಆದರೆ ಬೇಡಿಕೆ ಇರುವಷ್ಟು ಪ್ರಮಾಣದ ತಾಳೆ ಎಣ್ಣೆ ದೇಶದಲ್ಲಿ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ತಾಳೆ ಎಣ್ಣೆಗಾಗಿ ಭಾರತವು ಮಲೇಷ್ಯಾ ಮತ್ತು ಇಂಡೊನೇಷ್ಯಾವನ್ನು ಅವಲಂಬಿಸಿದೆ.

ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಇರುವ ಕಾರಣ, ಈಗ ತಾಳೆ ಎಣ್ಣೆಯ ಕೊರತೆ ಎದುರಾಗಿದೆ. 2019ರ ಸೆಪ್ಟೆಂಬರ್‌ನಲ್ಲಿ ಸುಂಕವನ್ನು ಶೇ 5ರಷ್ಟು ಏರಿಕೆ ಮಾಡಿದ್ದರಿಂದ ತಾಳೆ ಎಣ್ಣೆಯ ಚಿಲ್ಲರೆ ಬೆಲೆ ಏರಿಕೆಯಾಗಿತ್ತು. ಈಗ ಕೊರತೆ ಎದುರಾಗಿರುವ ಕಾರಣ ತಾಳೆ ಎಣ್ಣೆಯ ಬೆಲೆ ಮತ್ತಷ್ಟು ಏರಿಕೆಯಾಗುವ ಅಪಾಯವಿದೆ. ತಾಳೆ ಎಣ್ಣೆಗೆ ಪರ್ಯಾಯವಾಗಿ ಸೋಯಾಬಿನ್ ಎಣ್ಣೆಯ ಬಳಕೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಆದರೆ ಈ ಎಣ್ಣೆಯ ಬೆಲೆ, ತಾಳೆ ಎಣ್ಣೆಯ ಬೆಲೆಗಿಂತ ಹೆಚ್ಚು. ಹೀಗಾಗಿ ಗ್ರಾಹಕರು ಖಾದ್ಯ ತೈಲ ಖರೀದಿಗೆ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ.

ವಾಣಿಜ್ಯ ಸಮರದ ಭೀತಿ, ಭಾರತೀಯರ ಉದ್ಯೋಗಕ್ಕೆ ಕುತ್ತು
‘ತಾಳೆ ಎಣ್ಣೆ ಆಮದಿನ ಮೇಲೆ ಭಾರತವು ನಿರ್ಬಂಧ ಹೇರಿರುವುದರಿಂದ ಮಲೇಷ್ಯಾದ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ’ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಅವರ ಮಾಧ್ಯಮ ಸಲಹೆಗಾರ ಕಾದಿರ್ ಜಾಸಿನ್ ಹೇಳಿದ್ದಾರೆ.

‘ಆದರೆ, ಭಾರತವು ನಮ್ಮ ಇನ್ನಷ್ಟು ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದರೆ ನಾವೂ ಬೇರೆ ರೀತಿ ಯೋಚನೆ ಮಾಡಬೇಕಾಗುತ್ತದೆ. ಭಾರತದಿಂದ ಆಮದಾಗುವ ಸರಕುಗಳ ಮೇಲೆ, ಭಾರತದ ವಲಸೆ ಕಾರ್ಮಿಕರ ಮೇಲೆ ನಾವೂ ನಿರ್ಬಂಧ ಹೇರಬೇಕಾಗುತ್ತದೆ’ ಎಂದು ಕಾದಿರ್ ಎಚ್ಚರಿಕೆ ನೀಡಿದ್ದಾರೆ.

ಮಲೇಷ್ಯಾದಲ್ಲಿ ಭಾರತದ 1.17 ಲಕ್ಷ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ಮಲೇಷ್ಯಾದಲ್ಲಿರುವ ವಲಸೆ ಕಾರ್ಮಿಕರಲ್ಲಿ ಭಾರತೀಯರ ಪಾಲು ಶೇ 6. ಮಲೇಷ್ಯಾವು ತನ್ನ ವಲಸೆ ನೀತಿಯನ್ನು ಬದಲಿಸಿದರೆ, ಈ ಕಾರ್ಮಿಕರ ಭವಿಷ್ಯ ಅತಂತ್ರವಾಗಲಿದೆ.

‘ನಮ್ಮಿಂದ ತಾಳೆ ಎಣ್ಣೆ ಖರೀದಿಸುವ ರಾಷ್ಟ್ರಗಳೆಲ್ಲವೂ, ತಮ್ಮ ಸರಕುಗಳನ್ನು ಖರೀದಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತವೆ. ನಾವೂ ಅದನ್ನು ಪಾಲಿಸುತ್ತೇವೆ. ಆದರೆ ನಮ್ಮ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ನಾವೂ ಆ ರಾಷ್ಟ್ರಗಳ ಉತ್ಪನ್ನಗಳನ್ನು ಬಹಿಷ್ಕರಿಸಲು ಅವಕಾಶವಿದೆ’ ಎಂದು ಮಲೇಷ್ಯಾದ ಕೈಗಾರಿಕಾ ಸಚಿವ ತೆರೆಸಾ ಕೋಕ್ ಹೇಳಿದ್ದಾರೆ.

ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದ ಹೇಳಿಕೆಗಳು

ಭಾರತದ ಕ್ರಮ ಸರಿಯಲ್ಲ: ಮಲೇಷ್ಯಾ

2019ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಮಹತಿರ್, ಭಾರತವು ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಆರೋಪಿಸಿದ್ದರು. ನಂತರದ ದಿನಗಳಲ್ಲಿ, ‘ಜಾತ್ಯತೀತ ಎಂದು ಕರೆದುಕೊಳ್ಳುವ ಭಾರತದಲ್ಲಿ ಕೆಲವು ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. 70 ವರ್ಷಗಳಿಂದ ಭಾರತೀಯರು ಒಟ್ಟಿಗೆ ಬಾಳುತ್ತಿರುವಾಗ, ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯವೇನಿತ್ತು?’ ಎಂದು ಮಹತಿರ್ ಟೀಕಿಸಿದ್ದರು..

ಆಂತರಿಕ ವಿಷಯ: ಭಾರತ
‘ಕಾಶ್ಮೀರ ಮತ್ತು ಲಡಾಖ್ ಭಾರತದ ಆಂತರಿಕ ವಿಷಯಗಳು. ಇದರಲ್ಲಿ ಮೂರನೇ ದೇಶದ ಹಸ್ತಕ್ಷೇಪ ಸಲ್ಲದು. ಇದನ್ನು ಮಲೇಷ್ಯಾ ಅರ್ಥಮಾಡಿಕೊಂಡು ಪ್ರತಿಕ್ರಿಯೆ ನೀಡಬೇಕು ಎಂದು ಭಾರತ ಹೇಳಿತ್ತು.

ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ: ಮಹತಿರ್
‘ಮಲೇಷ್ಯಾ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾದರೂ ತಪ್ಪುಗಳ ವಿರುದ್ಧ ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ.ನಿರ್ಬಂಧದಿಂದ ಒಂದಿಷ್ಟು ತೊಂದರೆಯಾಗಬಹುದು, ಆದರೆ ನಾವು ಸತ್ಯದ ದಾರಿಯಲ್ಲೇ ನಡೆಯಬೇಕು. ತಪ್ಪು ನಡೆದಾಗ ಹೇಳಬೇಕು’ ಎಂದುಮಹತಿರ್ ತಿರುಗೇಟು ನೀಡಿದ್ದರು.

ಝಾಕಿರ್‌ ನಾಯ್ಕ್ ಕಾರಣ?
ವಿವಾದಾತ್ಮಕ ಧರ್ಮಬೋಧಕ ಝಾಕಿರ್‌ ನಾಯ್ಕ್ ಅವರಿಗೆ ನೀಡಿರುವ ‘ಕಾಯಂ ನಿವಾಸಿ’ ಸೌಲಭ್ಯವನ್ನು ತೆಗೆದುಹಾಕುವಂತೆ ಭಾರತ ಸರ್ಕಾರ ಮಲೇಷ್ಯಾಕ್ಕೆ ಮನವಿ ಮಾಡಿತ್ತು. ಆದರೆ ಮನವಿಯನ್ನು ಮಲೇಷ್ಯಾ ತಿರಸ್ಕರಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು.

ಮಲೇಷ್ಯಾ: ಪರ್ಯಾಯ ಏನು
* ತಾಳೆ ಎಣ್ಣೆ ಮಾರಾಟಕ್ಕೆ ಪರ್ಯಾಯ ಮಾರುಕಟ್ಟೆಗಳನ್ನುಮಲೇಷ್ಯಾ ಹುಡುಕುತ್ತಿದೆ. ತನ್ನಲ್ಲಿ ಉಳಿಯುವ ಹೆಚ್ಚುವರಿ ದಾಸ್ತಾನನ್ನು ಪಾಕಿಸ್ತಾನ, ಫಿಲಿಪ್ಪೀನ್ಸ್, ಮ್ಯಾನ್ಮಾರ್, ವಿಯೆಟ್ನಾಂ, ಇಥಿಯೋಪಿಯಾ, ಸೌದಿ ಅರೇಬಿಯಾ, ಈಜಿಪ್ಟ್, ಅಲ್ಜೀರಿಯಾ, ಜೋರ್ಡನ್‌ಗೆ ರಫ್ತು ಮಾಡುವ ಯೋಜನೆಯಲ್ಲಿದೆ.

* ತಾಳೆ ಎಣ್ಣೆಯಿಂದ ಜೈವಿಕ ಡೀಸೆಲ್ ಉತ್ಪಾದನೆ ಮಾಡಿ, ಐರೋಪ್ಯ ದೇಶಗಳಿಗೆ ರಫ್ತು ಮಾಡುವ ಉದ್ದೇಶ.

ನಿಯಮ ಬದಲಾವಣೆ
*ಕಾಶ್ಮೀರದ ವಿಚಾರವಾಗಿ ಮಲೇಷ್ಯಾವು 2019ರ ಸೆಪ್ಟೆಂಬರ್‌ನಲ್ಲಿ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಸಂಸ್ಕರಿಸಿದ ತಾಳೆ ಎಣ್ಣೆಯ ಆಮದು ಶುಲ್ಕವನ್ನು ಭಾರತ ಸರ್ಕಾರವು ಏರಿಕೆ ಮಾಡಿತು

45 %:ಸೆಪ್ಟೆಂಬರ್‌ಗೂ ಮುನ್ನ ಸಂಸ್ಕರಿಸಿದ ತಾಳೆ ಎಣ್ಣೆ ಮೇಲೆ ವಿಧಿಸುತ್ತಿದ್ದ ಆಮದು ಸುಂಕ

50 %:ಸೆಪ್ಟೆಂಬರ್ ನಂತರ ಸಂಸ್ಕರಿಸಿದ ತಾಳೆ ಎಣ್ಣೆ ಮೇಲೆ ವಿಧಿಸಲಾಗುತ್ತಿರುವ ಆಮದು ಸುಂಕ

*ಈ ಮೊದಲು ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಆಮದು ನಿಯಮಗಳಲ್ಲಿ ಮುಕ್ತ ಉತ್ಪನ್ನ ಎಂದು ಗುರುತಿಸಲಾಗಿತ್ತು. ಆಗ ಈ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ವಿಶೇಷ ಪರವಾನಗಿಯ ಅವಶ್ಯಕತೆ ಇರಲಿಲ್ಲ. ಆದರೆ, ಜನವರಿ 8ರಂದು ಈ ನಿಯಮಗಳಿಗೆ ಭಾರತ ಸರ್ಕಾರವು ತಿದ್ದುಪಡಿ ತಂದಿತು. ಸಂಸ್ಕರಿ ಸಿದ ತಾಳೆ ಎಣ್ಣೆಯನ್ನು ‘ನಿರ್ಬಂಧಿತ ಸರಕುಗಳ’ ಪಟ್ಟಿಗೆ ಸೇರಿಸಲಾಯಿತು. ಈ ಪಟ್ಟಿಯಲ್ಲಿ ಇರುವ ಸರಕುಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಕಡ್ಡಾಯ.

**


ನಿರ್ಬಂಧ ಹೇರುವ ಮುನ್ನ ಬಂದರು ತಲುಪಿದ್ದ ಸರಕನ್ನು ಇಳಿಸಿಕೊಳ್ಳಲಾಗಿದೆ. ಆದರೆ, ನಿರ್ಬಂಧ ಜಾರಿಗೆ ಬಂದ ನಂತರ ಬಂದ ಸರಕನ್ನು ಯಾರೂ ಇಳಿಸಿಕೊಳ್ಳುತ್ತಿಲ್ಲ.
–ಸುಧಾಕರ್ ದೇಸಾಯಿ, ಭಾರತೀಯ ಖಾದ್ಯ ತೈಲ ಉತ್ಪಾದಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT