ಬುಧವಾರ, ಫೆಬ್ರವರಿ 19, 2020
30 °C
ಕೇಂದ್ರ ಸರ್ಕಾರದಿಂದ ₹1,000 ಮಾತ್ರ; ರಾಜ್ಯದಿಂದ ರಾಜ್ಯಕ್ಕೆ ಗೌರವಧನ ವ್ಯತ್ಯಾಸ

Explainer | ಬಿಸಿಯೂಟ: ಗೌರವಧನದ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mid day meal

ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ನೌಕರರ ಪ್ರತಿಭಟನೆ ಒಂದಲ್ಲ ಒಂದು ರಾಜ್ಯದಲ್ಲಿ ನಡೆಯುತ್ತಲೇ ಇರುತ್ತದೆ. 2019ರ ಜನವರಿಯಲ್ಲಿ ಬಿಹಾರದ ಬಿಸಿಯೂಟ ನೌಕರರು ಪ್ರತಿಭಟನೆ ಆರಂಭಿಸಿದ್ದರು. ಇದು 39 ದಿನ ನಡೆಯಿತು. ಅದಾದ ಬಳಿಕ, ಅವರ ಗೌರವಧನವನ್ನು ₹250 ಹೆಚ್ಚಿಸಲಾಯಿತು. ಗೌರವಧನದ ಮೊತ್ತವು ₹1,500ಕ್ಕೆ ಏರಿತು. ದೇಶದ ವಿವಿಧ ಭಾಗಗಳ ನೌಕರರು ಕಳೆದ ನವೆಂಬರ್‌ 18ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಧರಣಿ ನಡೆಸಿದ್ದರು. ಅಸ್ಸಾಂ, ಪಂಜಾಬ್‌ ಮುಂತಾದ ರಾಜ್ಯಗಳಲ್ಲಿಯೂ ಈ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕದಲ್ಲಿಯೂ ಬಿಸಿಯೂಟ ಸಿಬ್ಬಂದಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ‘ಗೌರವಧನ ಹೆಚ್ಚಿಸಿ’ ಎಂಬ ಅವರ ಬೇಡಿಕೆ ನಿರಂತರ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಹತ್ತಿರಹತ್ತಿರ ನೂರು ವರ್ಷಗಳ ಇತಿಹಾಸವಿದೆ. ತಮಿಳುನಾಡಿನಿಂದ ಆರಂಭವಾದ ಕಾರ್ಯಕ್ರಮ ಬಳಿಕ ಕೆಲವು ರಾಜ್ಯಗಳಲ್ಲಿ ಅನುಷ್ಠಾನಗೊಂಡಿತು. ಕೇಂದ್ರ ಸರ್ಕಾರವು ದೇಶದಾದ್ಯಂತ ಯೋಜನೆಯನ್ನು ವಿಸ್ತರಿಸಿತು. ಮದ್ರಾಸ್‌ ಮಹಾನಗರ ಪಾಲಿಕೆಯು 1925ರಲ್ಲಿ ಮೊತ್ತ ಮೊದಲಿಗೆ  ಯೋಜನೆಯನ್ನು ಆರಂಭಿಸಿತು. 1980ರ ದಶಕದಲ್ಲಿ ಗುಜರಾತ್, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶ ತಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆಯನ್ನು ಆರಂಭಿಸಿದವು. 90ರ ದಶಕದಲ್ಲಿ 12 ರಾಜ್ಯಗಳಿಗೆ ಇದು ವಿಸ್ತರಿಸಿತು. 

1995ರ ಆಗಸ್ಟ್ 15ರಂದು ಕೇಂದ್ರ ಸರ್ಕಾರ ಪ್ರಾಯೋಜಿತ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಚಾಲನೆ ಪಡೆಯಿತು. ಆರಂಭದಲ್ಲಿ 2408 ವಲಯಗಳಿಗೆ ಸೀಮಿತವಾಗಿದ್ದ ಯೋಜನೆಯು ದೇಶದ ಎಲ್ಲ ವಲಯಗಳಿಗೆ ವಿಸ್ತರಣೆಯಾಯಿತು. ಬಳಿಕ, ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಶಾಲೆಗಳ ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೂ ಮಧ್ಯಾಹ್ನದ ಊಟ ನೀಡಲಾಯಿತು. ಎಂಟನೆಯ ತರಗತಿವರೆಗೆ ವಿದ್ಯಾರ್ಥಿಗಳಿಗೂ (ಸುಮಾರು 1.7 ಕೋಟಿ) 2007ರಲ್ಲಿ ಯೋಜನೆಯ ಲಾಭ ಒದಗಿಸಲಾಯಿತು.

ಮಧ್ಯಾಹ್ನದ ಬಿಸಿಯೂಟ ತಯಾರಕರನ್ನು ‘ಕಾರ್ಯಕರ್ತೆಯರು’ ಎಂದು ಕರೆಯಲಾಗುತ್ತಿದೆಯೇ ಹೊರತು ‘ನೌಕರರು’ ಎಂದಲ್ಲ. ಹೀಗಾಗಿ ಅವರಿಗೆ ಕನಿಷ್ಠ ವೇತನದ ಬದಲು ಗೌರವಧನವನ್ನು ಮಾತ್ರ ನೀಡಲಾಗುತ್ತಿದೆ. ‘ಪ್ರತಿದಿನ 7–8 ಗಂಟೆ ಕೆಲಸ ಮಾಡಿದರೂ ನಮ್ಮ ಕೆಲಸವನ್ನು ಅರೆಕಾಲಿಕ ಎಂದು ಪರಿಗಣಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬಿಸಿಯೂಟದ ಕಾರ್ಯಕರ್ತೆಯರು.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ ವರದಿ ಪ್ರಕಾರ, ಭಾರತದಲ್ಲಿ ಪ್ರತಿಯೊಬ್ಬ ಮಹಿಳೆ ಮಾಡುವ ಸರಾಸರಿ 5.8 ಗಂಟೆಗಳ ಕೆಲಸಕ್ಕೆ ಯಾವುದೇ ಪ್ರತಿಫಲ ದೊರೆಯುವುದಿಲ್ಲ. ಅಂದರೆ ಅದು ಸಂಬಳವಿಲ್ಲದ ಕೆಲಸ.

1995ರಲ್ಲಿ ಯೋಜನೆಯನ್ನು ಆರಂಭಿಸಿದಾಗ ನಿತ್ಯ ಎಷ್ಟು ಮಕ್ಕಳಿಗೆ ಅಡುಗೆ ಸಿದ್ಧಪಡಿಸಲಾಗಿದೆ ಎಂಬುದರ ಆಧಾರದ ಮೇಲೆ, ಪ್ರತಿ ಮಗುವಿಗೆ ತಲಾ 60 ಪೈಸೆಯಂತೆ ಲೆಕ್ಕಹಾಕಿ ಗೌರವಧನ ನೀಡಲಾಗುತ್ತಿತ್ತು. ಆದರೆ, ಮುಂದೆ ಕೇಂದ್ರ ಸರ್ಕಾರ ಪ್ರತಿಯೊಬ್ಬ ಕಾರ್ಯಕರ್ತೆಗೆ ಪ್ರತಿ ತಿಂಗಳು ₹1,000 ಗೌರವಧನ ನೀಡುವ ಪರಿಪಾಟ ಆರಂಭಿಸಿತು.

ಬಿಸಿಯೂಟದ ಕಾರ್ಯಕರ್ತೆಯರನ್ನೂ ನೌಕರರನ್ನಾಗಿ ಕಾಣಬೇಕು ಎಂದು ವಾದಿಸಿ 2011ರಲ್ಲಿ ಅವತಾರ್‌ ಸಿಂಗ್‌ ಎಂಬುವವರು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ‘ಸರ್ಕಾರದ ಕೆಲವು ನಿಯಮಗಳಿಗೆ ಬದ್ಧರಾಗಿ, ಒಪ್ಪಂದ ಮಾಡಿಕೊಂಡು ಊಟ ತಯಾರಿಸುವ ಕೆಲಸಕ್ಕೆ ಸೇರಿದವರು ಈ ಕಾರ್ಯಕರ್ತೆಯರು. ಇದೊಂದು ಅರೆಕಾಲಿಕ ಕೆಲಸವಾಗಿದ್ದು, ಅವರಿಗೆ ಕೊಡುತ್ತಿರುವುದು ಗೌರವಧನವೇ ಹೊರತು ಕನಿಷ್ಠ ವೇತನವಲ್ಲ. ಹೀಗಾಗಿ ಅವರು ಕನಿಷ್ಠ ವೇತನ ಕೇಳುವ ನೌಕರರ ಪರಿಧಿಯಲ್ಲಿ ಬರುವುದಿಲ್ಲ’ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು. ವೇತನ ಹೆಚ್ಚಿಸಲು ಒಪ್ಪದ ರಾಜ್ಯ ಸರ್ಕಾರಗಳ ಪಾಲಿಗೆ ಈ ತೀರ್ಪು ಈಗಲೂ ಗುರಾಣಿಯಾಗಿ ಪರಿಣಮಿಸಿದೆ.

ಪ್ರಮುಖ ಬೇಡಿಕೆಗಳು

* ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಬಾರದು. ಕೆಲ ಜಿಲ್ಲೆಗಳಲ್ಲಿ ಧರ್ಮಾಧಾರಿತ ಸಂಘ–ಸಂಸ್ಥೆಗಳಿಗೆ ನೀಡಿರುವ ಜವಾಬ್ದಾರಿಯನ್ನು ಕೂಡಲೇ ವಾಪಸು ಪಡೆಯಬೇಕು

* ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುವ ಕಾರ್ಯಕರ್ತರಿಗೆ ಕನಿಷ್ಠ ಕೂಲಿ, ಕೆಲಸದ ಭದ್ರತೆ ಒದಗಿಸಬೇಕೆಂದು 45ನೇ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸಿನಂತೆ ಬಿಸಿಯೂಟ ತಯಾರಕರಿಗೂ ಕನಿಷ್ಠ ಕೂಲಿ ನೀಡಬೇಕು

* ನಿವೃತ್ತಿ ವೇತನ, ವೇತನ ಸಹಿತ ರಜೆ, ಹೆರಿಗೆ ರಜೆ ಹಾಗೂ ಹೆರಿಗೆ ಭತ್ಯೆ ನೀಡಬೇಕು

* ಶಾಲೆಯ ‘ಡಿ’ ಗ್ರೂಪ್ ನೌಕರರ ಕೆಲಸವನ್ನೂ ಅಡುಗೆ ತಯಾರಕರು ಪರೋಕ್ಷವಾಗಿ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಶಿಕ್ಷಣ ಇಲಾಖೆಯಡಿ ಶಾಲಾ ಸಿಬ್ಬಂದಿಯೆಂದು ನೇಮಿಸಿ ನೇಮಕಾತಿ ಆದೇಶ ಪತ್ರ ನೀಡಬೇಕು

* ಮಕ್ಕಳ ಹಾಜರಾತಿ ಆಧರಿಸಿ ಬಿಸಿಯೂಟ ತಯಾರಕರನ್ನು ಕೆಲಸದಿಂದ ಕೈ ಬಿಡುವ ಕ್ರಮ ನಿಲ್ಲಬೇಕು

* ಬಿಸಿಯೂಟ ಯೋಜನೆಯನ್ನು 12ನೇ ತರಗತಿಯವರೆಗೆ ವಿಸ್ತರಣೆ ಮಾಡಬೇಕು

* ಸರ್ಕಾರಿ ಕಾರ್ಯಕ್ರಮ, ಜಯಂತಿ ಆಚರಣೆಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ಭತ್ಯೆ ನೀಡಬೇಕು

* ತಿಂಗಳಿಗೊಮ್ಮೆ ಕ್ಲಸ್ಟರ್‌ ಮಟ್ಟದಲ್ಲಿ ಅಡುಗೆ ಕೆಲಸಗಾರರ ಸಭೆ ನಡೆಸಬೇಕು

* ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಜಾರಿ ಮಾಡಬೇಕು. ಅಡುಗೆಯವರಿಗೂ ಯೂನಿವರ್ಸಲ್ ಆರೋಗ್ಯ ಕಾರ್ಡ್ ನೀಡಬೇಕು

* ಬರಗಾಲ ಹಾಗೂ ವಿಶೇಷ ದಿನಗಳಲ್ಲಿ ದುಪ್ಪಟ್ಟು ವೇತನ ನೀಡಬೇಕು

ಅಡುಗೆಯವರ ವೇತನ ತಾರತಮ್ಯ

ಅಡುಗೆ ಕೆಲಸದವರಿಗೆ ₹1000 ಗೌರವಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೆಲವು ರಾಜ್ಯಗಳು ಈ ಗೌರವಧನಕ್ಕೆ ಒಂದಿಷ್ಟು ಹಣ ಸೇರಿಸಿ ನೀಡುತ್ತಿವೆ. ವಿವಿಧ ರಾಜ್ಯಗಳಲ್ಲಿ ಅಡುಗೆಯವರ ಗೌರವಧನದಲ್ಲಿ ವ್ಯತ್ಯಾಸವಿದೆ.

ಸಿಬ್ಬಂದಿ ಕೊರತೆ

ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಸಿಬ್ಬಂದಿ, 26ರಿಂದ 100 ವಿದ್ಯಾರ್ಥಿಗಳಿಗೆ ಇಬ್ಬರು ಸಿಬ್ಬಂದಿ ಹಾಗೂ 100ಕ್ಕಿಂತ ಮೇಲ್ಪಟ್ಟು ವಿದ್ಯಾರ್ಥಿಗಳಿದ್ದಲ್ಲಿ ಪ್ರತಿ 100 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಬ್ಬ ಸಿಬ್ಬಂದಿ ನೇಮಿಸಬೇಕು ಎಂಬುದು ನಿಯಮ. ಆದರೆ ನೂರಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಒಬ್ಬರೇ ಅಡುಗೆ ಸಿಬ್ಬಂದಿ ಕೆಲಸ ಮಾಡುತ್ತಿರುವ ಚಿತ್ರಣ ಬಹುತೇಕ ಕಡೆ ಕಂಡುಬರುತ್ತಿದೆ.

ಗೌರವಧನ ಹೆಚ್ಚಳ ಪ್ರಸ್ತಾವ ಇಲ್ಲ: ಸರ್ಕಾರ

ಅಡುಗೆ ಸಿಬ್ಬಂದಿಯ ವೇತನ ಹೆಚ್ಚಳದ ಕುರಿತು ಕಳೆದ ವರ್ಷದ ಫೆಬ್ರುವರಿ 7ರಂದು ಬಿನಯ್ ವಿಶ್ವಂ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಸರ್ಕಾರ ಇದಕ್ಕೆ ಉತ್ತರ ನೀಡಿದೆ. ಅಡುಗೆ ಸಹಾಯಕರಿಗೆ ₹1000 ಗೌರವಧನ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಈ ಖರ್ಚು ಭರಿಸುತ್ತಿವೆ. ಆಯಾ ರಾಜ್ಯ ಸರ್ಕಾರಗಳು ಹೆಚ್ಚುವರಿ ಗೌರವಧನ ನೀಡಬಹುದು. ಅಡುಗೆ ತಯಾರಕರ ಗೌರವಧನ ಹೆಚ್ಚಿಸುವ ಪ್ರಸ್ತಾವ ಇಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯವು ಉತ್ತರ ನೀಡಿತ್ತು. ವಿವಿಧ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಗೌರವಧನದ ಪಟ್ಟಿಯನ್ನು ಸಚಿವಾಲಯ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು