ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ವಿಮಾನ ಯಾನದಲ್ಲಿ ದುರ್ವರ್ತನೆ ಶಿಕ್ಷಾರ್ಹ ಅಪರಾಧ

Last Updated 19 ಜನವರಿ 2023, 19:43 IST
ಅಕ್ಷರ ಗಾತ್ರ

ವಿಮಾನದಲ್ಲಿ ಮತ್ತು ವಿಮಾನ ಹಾರಾಟದ ಸಂದರ್ಭದಲ್ಲಿ ಪ್ರಯಾಣಿಕರು ದುರ್ವರ್ತನೆ ತೋರಿದ ಹಲವು ಘಟನೆಗಳು ಒಂದು ತಿಂಗಳಲ್ಲಿ ವರದಿಯಾಗಿವೆ. ಅವುಗಳಲ್ಲಿ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದರು ಎನ್ನಲಾದ ಪ್ರಕರಣ ಹೆಚ್ಚು ಸದ್ದು ಮಾಡುತ್ತಿವೆ. ಈ ಸ್ವರೂಪದ ಅವಘಡಗಳ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಮತ್ತು ವಿಮಾನಯಾನ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಜಾರಿಯಲ್ಲಿಟ್ಟಿದೆ. ಆದರೆ, ವಿಮಾನಯಾನ ಸಂಸ್ಥೆಗಳು ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿಯಲ್ಲಿ ಕ್ರಮ ತೆಗೆದುಕೊಂಡಿವೆ. ಪ್ರಯಾಣಿಕರು ತುರ್ತು ನಿರ್ಗಮನ ಬಾಗಿಲನ್ನು ತೆರೆದ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಆ ಎಲ್ಲಾ ಪ್ರಕರಣಗಳಲ್ಲಿ ಅಂತಹ ದುರ್ವರ್ತನೆ ತೋರಿದ ಪ್ರಯಾಣಿಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಲಾಗಿತ್ತು. ಆದರೆ ಈಚಿನ ಪ್ರಕರಣದಲ್ಲಿ ಕ್ಷಮಾಪಣೆ ಪತ್ರ ಬರೆಸಿಕೊಂಡು, ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ

***

ವಿಮಾನದಲ್ಲಿ ದುರ್ವರ್ತನೆ ತೋರುವ ಪ್ರಯಾಣಿಕರನ್ನು ನಿರ್ವಹಿಸಲು ಮತ್ತು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಡಿಜಿಸಿಎ 2010ರಲ್ಲೇ ಎಸ್‌ಒಪಿಯನ್ನು ಜಾರಿಗೆ ತಂದಿತ್ತು. 2017ರಲ್ಲಿ ಈ ಎಸ್ಒಪಿಯನ್ನು ವಿಸ್ತರಿಸಲಾಯಿತು. ವಿಮಾನದ ಸುರಕ್ಷತಾ ವ್ಯವಸ್ಥೆಗಳಿಗೆ ಧಕ್ಕೆ ಮಾಡುವುದು ಮತ್ತು ಕಾರ್ಯಾಚರಣೆಗೆ ಅಡ್ಡಿಪಡಿಸುವಂತಹ ದುರ್ವರ್ತನೆಯನ್ನು ‘ವಿಮಾನ, ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಅಪಾಯಕ್ಕೆ ದೂಡುವ ಕ್ರಿಯೆ’ ಎಂದು ಈ ಎಸ್‌ಒಪಿಗಳು ವ್ಯಾಖ್ಯಾನಿಸುತ್ತವೆ. ಇಂತಹ ದುರ್ವರ್ತನೆ ತೋರುವ ಪ್ರಯಾಣಿಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಈ ಎಸ್‌ಒಪಿಯಲ್ಲಿ ವಿವರಿಸಲಾಗಿದೆ.

ವಿಮಾನಯಾನ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುವ, ವಿಮಾನದ ಸಿಬ್ಬಂದಿ ಮತ್ತು ಪೈಲಟ್‌ಗಳ ನಿರ್ದೇಶನವನ್ನು ಉಲ್ಲಂಘಿಸುವ ಹಾಗೂ ಅಪಾಯಕಾರಿ ವರ್ತನೆ ತೋರುವ ಪ್ರಯಾಣಿಕರನ್ನು ‘ದುರ್ವರ್ತನೆ ತೋರಿದ ಪ್ರಯಾಣಿಕ’ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಈ ನಿಯಮಗಳು ಅನ್ವಯವಾಗುತ್ತವೆ. ಭಾರತದ ವಾಯುಗಡಿಯೊಳಗೆ ಹಾರುವ ವಿಮಾನದಲ್ಲಿರುವ ವಿದೇಶಿ ಪ್ರಯಾಣಿಕರಿಗೂ ಇವು ಅನ್ವಯವಾಗುತ್ತವೆ. ಈ ಎಲ್ಲಾ ಅಂಶಗಳನ್ನು ಎಸ್‌ಒಪಿಯ 2.1 ಮತ್ತು 3.1ನೇ ಸೆಕ್ಷನ್‌ಗಳು ಹಾಗೂ ಅವುಗಳ ಉಪಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ.

ದುರ್ವರ್ತನೆ ತೋರುವ ಪ್ರಯಾಣಿಕರನ್ನು ತಕ್ಷಣವೇ ವಿಮಾನದಿಂದ ಇಳಿಸಬೇಕು ಮತ್ತು ಈ ಬಗ್ಗೆ ವಿಮಾನಯಾನ ಭದ್ರತಾ ಅಧಿಕಾರಿ, ವಿಮಾನ ನಿಲ್ದಾಣ ಪೊಲೀಸ್‌ ಅಧಿಕಾರಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮತ್ತು ವಿಮಾನ ನಿಲ್ದಾಣ ನಿರ್ವಹಣಾ ಕಂಪನಿಗೆ ಮಾಹಿತಿ ನೀಡಬೇಕು ಎಂದು ಎಸ್‌ಒಪಿಯ 4.4 ಮತ್ತು 6.7ನೇ ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ.

ಪ್ರಯಾಣಿಕರು ತೋರುವ ದುರ್ವರ್ತನೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಕಿರುಚಾಟ, ಬೈಗುಳ, ವಾಗ್ವಾದದಲ್ಲಿ ತೊಡಗುವುದನ್ನು ಪ್ರಾಥಮಿಕ ಮಟ್ಟದ ದುರ್ವರ್ತನೆ ಎಂದು ಪರಿಗಣಿಸಲಾಗುತ್ತದೆ. ಹಲ್ಲೆಯಂತಹ ದುರ್ವರ್ತನೆಗಳನ್ನು ದ್ವಿತೀಯ ಮಟ್ಟದ ದುರ್ವರ್ತನೆ ಎಂದು ಪರಿಗಣಿಸಲಾಗುತ್ತದೆ. ವಿಮಾನ, ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಅಪಾಯ ಉಂಟು ಮಾಡುವಂತಹ ವರ್ತನೆಗಳನ್ನು ತೃತೀಯ ಮಟ್ಟದ ದುರ್ವರ್ತನೆ ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ತೃತೀಯ ಮಟ್ಟದ ದುರ್ವರ್ತನೆಗಳು ಭಾರತೀಯ ದಂಡ ಸಂಹಿತೆಯ ಅಡಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಅವಕಾಶವಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲೂ ಪ್ರಕರಣ ದಾಖಲಿಸಲು ಅವಕಾಶವಿದೆ. ಈ ಅಂಶಗಳನ್ನು ಎಸ್‌ಒಪಿಯ 4.10 ಮತ್ತು 7ನೇ ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ.

ಮೂರನೇ ಮಟ್ಟದ ದುರ್ವರ್ತನೆ ತೋರುವ ಪ್ರಯಾಣಿಕರನ್ನು ತಕ್ಷಣವೇ ಅಥವಾ ವಿಮಾನವು ನೆಲಕ್ಕಿಳಿದ ತಕ್ಷಣವೇ ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ನೀಡಬೇಕು ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ವಿಮಾನ ನಿಲ್ದಾಣ ಪೊಲೀಸರು ಅಂತಹ ಪ್ರಯಾಣಿಕರನ್ನು ಬಂಧಿಸಬೇಕು ಎಂದು ಇದೇ ಎಸ್‌ಒಪಿಯ 4.13ನೇ ಸೆಕ್ಷನ್‌ನಲ್ಲಿ ಸೂಚಿಸಲಾಗಿದೆ. ಇಂತಹ ವರ್ತನೆ ತೋರುವ ಪ್ರಯಾಣಿಕರ ಮೇಲೆ ಕನಿಷ್ಠ ಎರಡು ವರ್ಷಗಳವರೆಗೆ ವಿಮಾನ ಪ್ರಯಾಣ ನಿಷೇಧ ಹೇರಬೇಕು ಎಂದು 8.1ನೇ ಸೆಕ್ಷನ್‌ನಲ್ಲಿ ಸೂಚಿಸಲಾಗಿದೆ.

ಆದರೆ, ಇಂತಹ ಪ್ರಕರಣಗಳಲ್ಲಿ ಇಂಡಿಗೊ ಸಂಸ್ಥೆಯು ಭಿನ್ನ ಸ್ವರೂಪದ ಕ್ರಮಗಳನ್ನು ತೆಗೆದುಕೊಂಡಿರುವುದು ದಾಖಲಾಗಿದೆ. ಹಿಂದಿನ ಪ್ರಕರಣದಲ್ಲಿ ಇಂತಹ ದುರ್ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ಇಂಡಿಗೊ ಎಫ್‌ಐಆರ್ ದಾಖಲಿಸಿತ್ತು. ಆ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದರು. ಆದರೆ, 2022ರ ಡಿಸೆಂಬರ್ 10ರಂದು ಚೆನ್ನೈನಿಂದ ತಿರುಚಿರಾಪಲ್ಲಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದ ಪ್ರಯಾಣಿಕನಿಂದ ಇಂಡಿಗೊ ಸಂಸ್ಥೆಯು ಕ್ಷಮಾಪಣಾ ಪತ್ರವನ್ನು ಮಾತ್ರ ಪಡೆದುಕೊಂಡಿದೆ. ಪ್ರಕರಣವನ್ನು ಮುಗಿಸಿದೆ.

ತುರ್ತು ನಿರ್ಗಮನ ಬಾಗಿಲು ತೆಗೆದಿದ್ದಕ್ಕೆ ಬಂಧಿಸಲಾಗಿತ್ತು...
2017ರ ಫೆಬ್ರುವರಿಯಲ್ಲಿ ಮುಂಬೈನಿಂದ ಚಂಡೀಗಡಕ್ಕೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದರು. ಇಂಡಿಗೊ ಸಿಬ್ಬಂದಿಯು ಆ ಪ್ರಯಾಣಿಕನ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಪೊಲೀಸರ ವಶಕ್ಕೆ ನೀಡಿದ್ದರು. ಪೊಲೀಸರು ಆತನನ್ನು ಬಂಧಿಸಿದ್ದರು.

ಅದೇ ವರ್ಷದ ಜುಲೈನಲ್ಲಿ ದೆಹಲಿಯಿಂದ ರಾಂಚಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನದಲ್ಲೂ ಇಂಥದ್ದೇ ಘಟನೆ ನಡೆದಿತ್ತು. ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯಾಣಿಕರು ಯತ್ನಿಸಿದ್ದರು. ಆ ಪ್ರಯಾಣಿಕನ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಲಾಗಿತ್ತು. ಈ ಎರಡೂ ಪ್ರಕರಣಗಳ ಅಂತಿಮ ವರದಿಯನ್ನು ಡಿಜಿಸಿಎ ಇನ್ನೂ ಬಿಡುಗಡೆ ಮಾಡಿಲ್ಲ.

ತುರ್ತು ನಿರ್ಗಮನದ ಬಾಗಿಲು ತೆರೆಯಬಾರದೇಕೆ?: ವಿಮಾನದಲ್ಲಿರುವ ತುರ್ತು ನಿರ್ಗಮನದ ಬಾಗಿಲುಗಳನ್ನು ಅಪಘಾತದ ಸಂದರ್ಭದಲ್ಲಷ್ಟೇ ಬಳಸಬೇಕು. ವಿಮಾನ ಟೇಕ್‌ಆಫ್‌, ಲ್ಯಾಂಡಿಂಗ್‌ ಮತ್ತು ಹಾರಾಟದ ಸಂದರ್ಭದಲ್ಲಿ ತೆಗೆಯುವುದು ಅಪಾಯಕಾರಿಯಾಗಿ ಪರಿಗಣಿಸುತ್ತದೆ. ಹಾರಾಟದ ಸಂದರ್ಭದಲ್ಲಿ ವಾತಾವರಣದಲ್ಲಿನ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಆದರೆ, ನೆಲಮಟ್ಟದಲ್ಲಿ ಇರುವಷ್ಟೇ ಗಾಳಿಯ ಒತ್ತಡವನ್ನು ಹಾರಾಟದ ಸಂದರ್ಭದಲ್ಲಿ ವಿಮಾನದೊಳಗೆ ಕಾಯ್ದುಕೊಳ್ಳಬೇಕು. ಈ ಒತ್ತಡ ಕಡಿಮೆಯಾದರೆ, ಪ್ರಯಾಣಿಕರ ಮೂಗು–ಕಿವಿ, ಬಾಯಿಯಿಂದ ರಕ್ತಸಾವ್ರವಾಗುವ ಹಾಗೂ ಜೀವ ಹೋಗುವ ಅಪಾಯವಿರುತ್ತದೆ.

ವಿಮಾನವು ಟೇಕ್‌ಆಫ್‌ಗೆ ಸಿದ್ಧತೆ ಮಾಡಿಕೊಂಡ ನಂತರ ವಿಮಾನದ ಒಳಗೆ ಸೂಕ್ತ ಮಟ್ಟದ ಗಾಳಿಯ ಒತ್ತಡವನ್ನು ಕಾಯ್ದುಕೊಳ್ಳಲಾಗುತ್ತದೆ. ಆಗ ತುರ್ತು ನಿರ್ಗಮನದ ಬಾಗಿಲನ್ನು ತೆರೆದರೆ, ವಿಮಾನದೊಳಗಿನ ಗಾಳಿಯು ಭಾರಿ ಒತ್ತಡದೊಂದಿಗೆ ಹೊರಕ್ಕೆ ನುಗ್ಗುತ್ತದೆ. ಆಗ ವಿಮಾನದಲ್ಲಿರುವ ವಸ್ತುಗಳು, ಪ್ರಯಾಣಿಕರು ಬಾಗಿಲಿನಿಂದ ಆಚೆಗೆ ತೂರಿಹೋಗುವ ಅಪಾಯವಿರುತ್ತದೆ. ಹಲವು ಸಂದರ್ಭಗಳಲ್ಲಿ ವಿಮಾನ ಪತನವಾಗುವ ಅಪಾಯವೂ ಇರುತ್ತದೆ. ಹೀಗಾಗಿ ಅನಗತ್ಯ ಸಂದರ್ಭದಲ್ಲಿ ತುರ್ತು ನಿರ್ಗಮನದ ಬಾಗಿಲನ್ನು ತೆರೆಯುವುದನ್ನು ‘ಅಪಾಯಕಾರಿ ವರ್ತನೆ’ ಎಂದು ಪರಿಗಣಿಸಲಾಗುತ್ತದೆ.

ಇತ್ತೀಚಿನ ಪ್ರಮುಖ ಘಟನೆಗಳು
ಮೂತ್ರ ವಿಸರ್ಜನೆ ಪ್ರಕರಣ

ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಹಿರಿಯ ವಯಸ್ಸಿನ ಮಹಿಳೆಯ ಮೇಲೆ ಶಂಕರ್ ಮಿಶ್ರಾ ಎಂಬ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾದ ಘಟನೆಯು ಜಾಗತಿಕವಾಗಿ ಸುದ್ದಿಯಾಗಿತ್ತು. ಮಹಿಳೆ ಹಾಗೂ ವಿಮಾನದ ಸಿಬ್ಬಂದಿ ನೀಡಿದ ದೂರಿನ ಮೇಲೆ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಮಿಶ್ರಾನಿಗೆ ನಾಲ್ಕು ತಿಂಗಳು ವಿಮಾನ ಪ್ರಯಾಣ ನಿಷೇಧ ಹೇರಲಾಗಿದೆ. ಇಂತಹದ್ದೇ ಮತ್ತೊಂದು ಘಟನೆ ಇದೇ ಅವಧಿಯಲ್ಲಿ ನಡೆಯಿತು. ಪ್ಯಾರಿಸ್–ದೆಹಲಿ ಮಾರ್ಗದ ವಿಮಾನದಲ್ಲಿ ಮದ್ಯಪಾನ ಮಾಡಿದ್ದ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರಿಗೆ ಸೇರಿದ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಡಿಸೆಂಬರ್ 6ರಂದು ವರದಿಯಾಗಿತ್ತು. ವಿಮಾನದ ಸಹಾಯಕರು ನೀಡಿದ ದೂರಿನ ಮೇರೆಗೆ ದೆಹಲಿ ನಿಲ್ದಾಣದಲ್ಲಿ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಯು ಕ್ಷಮೆ ಕೇಳಿದ್ದರಿಂದ ಯಾವುದೇ ಕ್ರಮ ಜರುಗಿಸದೇ ಆತನನ್ನು ಬಿಟ್ಟು ಕಳುಹಿಸಲಾಗಿತ್ತು.

ಮದ್ಯಪಾನ ಮಾಡಿ ವಿಮಾನದಲ್ಲಿ ಕೋಲಾಹಲ
ಮದ್ಯಪಾನ ಮಾಡಿ ದೆಹಲಿ–ಪಟ್ನಾ ವಿಮಾನದಲ್ಲಿ ಕೋಲಾಹಲ ಎಬ್ಬಿಸಿದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಇದೇ 12ರಂದು ಪಟ್ನಾದಲ್ಲಿ ಬಂಧಿಸಲಾಗಿತ್ತು. ಅವರು ವಿಮಾನದಲ್ಲಿ ದುರ್ವರ್ತನೆ ತೋರಿದ್ದರು ಎಂಬುದಾಗಿ ಇಂಡಿಗೊ ವ್ಯವಸ್ಥಾಪಕ ನೀಡಿದ್ದ ದೂರು ಆಧರಿಸಿ ಪ್ರಯಾಣಿಕರನ್ನು ಬಂಧಿಸಲಾಗಿತ್ತು. ವಿಮಾನದಲ್ಲಿ ಇಂತಹ ವರ್ತನೆ ತೋರಿದವರನ್ನು, ಅವರು ನಿಲ್ದಾಣದಲ್ಲಿ ಇಳಿದ ಕೂಡಲೇ ಬಂಧಿಸಬೇಕು ಎಂದು ನಿಯಮಗಳು ಹೇಳುತ್ತವೆ.

ವಿಮಾನದಲ್ಲಿ ಪ್ರಯಾಣಿಕರ ಘರ್ಷಣೆ
ಬ್ಯಾಂಕಾಕ್‌-ಕೋಲ್ಕತ್ತ ಮಾರ್ಗದ ವಿಮಾನದಲ್ಲಿ ಪ್ರಯಾಣಿಕರ ನಡುವಣ ವಾಗ್ವಾದವು ಘರ್ಷಣೆಗೆ ತಿರುಗಿದ ಘಟನೆ ಕಳೆದ ತಿಂಗಳು ವರದಿಯಾಗಿತ್ತು. ಡಿಸೆಂಬರ್‌ 27ರಂದು ಸೀಟಿನ ವಿಚಾರಕ್ಕೆ ಇಬ್ಬರು ವ್ಯಕ್ತಿಗಳು ಘರ್ಷಣೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಪ್ರಕರಣದ ಬಗ್ಗೆ ನಾಗರಿಕ ವಿಮಾನ ಭದ್ರತಾ ಸಂಸ್ಥೆಯು (ಬಿಸಿಎಎಸ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ತನಿಖೆಯ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆ ತಿಳಿಸಿತ್ತು. ವಿಮಾನದಲ್ಲಿ ಪ್ರಯಾಣಿಕರು ತೋರಿದ ದುರ್ವರ್ತನೆಯನ್ನು ಸಹಿಸಲಾಗದು ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯಿಸಿದ್ದರು.

ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೆಳಗಿಳಿಸಲಾಗಿತ್ತು
ಗೋವಾ–ಮುಂಬೈ ಮಾರ್ಗದ ಗೋಫಸ್ಟ್ ವಿಮಾನದಲ್ಲಿ ಸಿಬ್ಬಂದಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಇದೇ 6ರಂದು ವರದಿಯಾಗಿತ್ತು. ಕೆಲವು ಪ್ರಯಾಣಿಕರ ಜೊತೆಗೂ ಅನುಚಿತವಾಗಿ ವರ್ತಿಸಿದ್ದ ಅವರ ವಿರುದ್ಧ, ನಿಯಮಾವಳಿ ಉಲ್ಲಂಘನೆ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದರು. ಕೆಳಗೆ ಇಳಿಸಿದ ಇಬ್ಬರನ್ನೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿತ್ತು.

ಕುನಾಲ್ ಕಾಮ್ರಾಗೆ ಪ್ರಯಾಣ ನಿರ್ಬಂಧ
ಸ್ಟ್ಯಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ಅವರು ಪತ್ರಕರ್ತ ಅರ್ಣಬ್ ಗೋಸ್ವಾಮಿ ಅವರ ಜೊತೆ ಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವ ವೇಳೆ ವಾಗ್ವಾದ ನಡೆಸಿದ್ದರು ಎಂಬ ಆರೋಪ 2020ರಲ್ಲಿ ಕೇಳಿಬಂದಿತ್ತು. ಅರ್ಣಬ್ ಅವರ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟು, ಉತ್ತರಿಸುವಂತೆ ಕಾಮ್ರಾ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಕಾಮ್ರಾ ಅವರು ವಿಮಾನದಲ್ಲಿ ದುರ್ವರ್ತನೆ ತೋರಿದ್ದಾರೆ ಎಂಬ ಕಾರಣಕ್ಕೆ ಅವರಿಗೆ 6 ತಿಂಗಳು ವಿಮಾನ ಯಾನ ನಿಷೇಧ ಹೇರಲಾಗಿತ್ತು. ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆಯಂತೆ ನಾಲ್ಕು ವಿಮಾನಯಾನ ಸಂಸ್ಥೆಗಳು ಅವರಿಗೆ ನಿಷೇಧ ಹೇರಿದ್ದವು ಎನ್ನಲಾಗಿದೆ.

ಪ್ರಯಾಣ ನಿಷೇಧ ನಿರ್ಧಾರವು ಭಾರಿ ಚರ್ಚೆಗೂ ಕಾರಣವಾಗಿತ್ತು. ತಮ್ಮ ಅಭಿಪ್ರಾಯವನ್ನು ಪಡೆಯದೇ ಕಾಮ್ರಾ ಅವರಿಗೆ ನಿಷೇಧ ಹೇರಿದ್ದು ಏಕೆ ಎಂದು ಇಂಡಿಗೊ ವಿಮಾನದ ಪೈಲಟ್ ದನಿ ಎತ್ತಿದ್ದರು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಪ್ರಯಾಣ ನಿರ್ಬಂಧ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದರು. ಕಾಮ್ರಾ ಅವರ ವರ್ತನೆ ಸರಿಯಲ್ಲದಿದ್ದರೂ, ದುರ್ವರ್ತನೆಯ ಮಟ್ಟದಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದರು ಎಂದು ‘ದಿ ವೈರ್’ ಜಾಲತಾಣ ವರದಿ ಮಾಡಿತ್ತು.

ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿಗೆ ಪ್ರಯಾಣ ನಿಷೇಧ ಹೇರಿರುವ ನಿರ್ಧಾರವನ್ನು ತಮ್ಮ ಪ್ರಕರಣದ ಜೊತೆ ತುಲನೆ ಮಾಡಿ, ಕಾಮ್ರಾ ಅವರು ಟ್ವೀಟ್‌ ಮಾಡಿದ್ದಾರೆ. ತಾರತಮ್ಯ ಮಾಡಲಾಗಿದೆ ಎಂಬುದನ್ನು ‘ಎರಡು ರೀತಿಯ ಭಾರತ’ (2 Air India's) ಎಂದು ಅವರು ಉಲ್ಲೇಖಿಸಿದ್ದಾರೆ.

ಆಧಾರ: ಪ್ರಯಾಣಿಕರ ದುರ್ವತನೆ ವರದಿ ಪ್ರಕ್ರಿಯೆ ನಿಯಮಗಳು–2010, ಪ್ರಯಾಣಿಕರ ದುರ್ವತನೆ ನಿರ್ವಹಣೆ ಎಸ್‌ಒಪಿ–2017, ಡಿಜಿಸಿಎ, ಪಿಟಿಐ, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT