ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಂಕಿಪಾಕ್ಸ್‌ ಬಗ್ಗೆ ಭೀತಿ ಬೇಡ, ಎಚ್ಚರ ಬೇಕು

Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಕಿಪಾಕ್ಸ್‌ ಎಂಬ ವೈರಾಣುವಿನಿಂದ ಬರುವ ಅತ್ಯಂತ ಅಪರೂಪದ ರೋಗವೇ ಮಂಕಿಪಾಕ್ಸ್‌. ಮಂಕಿಪಾಕ್ಸ್ ವೈರಾಣುವು ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಮಂಕಿಪಾಕ್ಸ್ ರೋಗ ಬಾಧಿತರಿಗೆ ಸಿಡುಬು ಇರುವವರಲ್ಲಿ ಕಾಣಿಸುವಂತಹ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಆದರೆ, ಮಂಕಿಪಾಕ್ಸ್‌ನಿಂದಾಗಿ ಬರುವ ಲಕ್ಷಣಗಳು ಸಿಡುಬಿಗಿಂತ ಬಹಳ ಸೌಮ್ಯವಾಗಿರುತ್ತವೆ. ಮಂಕಿಪಾಕ್ಸ್‌ ಮಾರಣಾಂತಿಕ ಅಲ್ಲ. ಸೀತಾಳೆ ಸಿಡುಬು (ಚಿಕನ್‌ಪಾಕ್ಸ್‌) ಜತೆಗೆ ಮಂಕಿಪಾಕ್ಸ್‌ಗೆ ಯಾವುದೇ ಸಂಬಂಧ ಇಲ್ಲ.

ಮಂಕಿಪಾಕ್ಸ್‌ ಮೊದಲು ಪತ್ತೆಯಾದದ್ದು 1958ರಲ್ಲಿ. ಸಂಶೋಧನೆಗಾಗಿ ಮಂಗಗಳನ್ನು ಇರಿಸಿದ್ದ ಎರಡು ಕಾಲೊನಿಗಳಲ್ಲಿ ಸಿಡುಬಿನಂತಹ ರೋಗ ಕಾಣಿಸಿಕೊಂಡಿತ್ತು. ಈ ರೋಗಕ್ಕೆ ಮಂಕಿಪಾಕ್ಸ್ ಎಂಬ ಹೆಸರು ಇದ್ದರೂ ಇದರ ಮೂಲ ಮಂಗಗಳು ಅಲ್ಲ. ಈ ವೈರಾಣುವಿನ ಮೂಲ ಯಾವುದು ಎಂಬುದು ಈವರೆಗೆ ಪತ್ತೆ ಆಗಿಲ್ಲ. ಆಫ್ರಿಕಾದಲ್ಲಿರುವ ಬಾಚಿ ಹಲ್ಲು ಇರುವ ಪ್ರಾಣಿಗಳು (ಮೊಲ, ಇಲಿ, ಅಳಿಲು ಇತ್ಯಾದಿ) ಮತ್ತು ಮಂಗಗಳಲ್ಲಿ ಈ ವೈರಾಣು ಇರಬಹುದು ಮತ್ತು ಅವುಗಳಿಂದ ಮನುಷ್ಯರಿಗೆ ಸೋಂಕು ತಗಲಬಹುದು ಎಂದು ಅಂದಾಜಿಸಲಾಗಿದೆ.1970ರಲ್ಲಿ ಮನುಷ್ಯರಲ್ಲಿ ಮೊದಲಿಗೆ ಮಂಕಿಪಾಕ್ಸ್‌ ಕಾಣಿಸಿಕೊಂಡಿತು. 2022ರಲ್ಲಿ ಮಂಕಿಪಾಕ್ಸ್‌ ಕಾಣಿಸಿಕೊಳ್ಳುವುದಕ್ಕೆ ಮೊದಲು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವು ದೇಶಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. 2022ರವರೆಗೆ ಪತ್ತೆಯಾದ ಮಂಕಿಪಾಕ್ಸ್‌ನ ಎಲ್ಲ ಪ್ರಕರಣಗಳು ಆಫ್ರಿಕಾದಿಂದ ಬಂದವರಲ್ಲಿಯೇ ಕಾಣಿಸಿಕೊಂಡಿದ್ದವು.

1980ರಲ್ಲಿ ಸಿಡುಬು ನಿರ್ಮೂಲನೆಯಾಯಿತು. ಹಾಗಾಗಿ ಸಿಡುಬು ತಡೆ ಲಸಿಕೆ ಹಾಕಿಸುವುದನ್ನು ನಿಲ್ಲಿಸ ಲಾಯಿತು. ಇದರಿಂದಾಗಿ ಮಂಕಿಪಾಕ್ಸ್ ಸೋಂಕು ಹರಡುವಿಕೆ ಹೆಚ್ಚಳವಾಗಿದೆ ಎಂದು ಅಮೆರಿಕದ ಸೆಂಟರ್‌ ಫಾರ್ ಡಿಸೀಸ್‌ ಕಂಟ್ರೋಲ್ ಆ್ಯಂಡ್‌ ಪ್ರಿವೆನ್‌ಷನ್‌ ಹೇಳಿದೆ.

ಜಾಗತಿಕ ಆರೋಗ್ಯ ಸಮಸ್ಯೆ

ಆರಂಭದಲ್ಲಿ ಆಫ್ರಿಕಾದ ದೇಶಗಳಲ್ಲಿ ಮಾತ್ರ ಮಂಕಿಪಾಕ್ಸ್ ಇತ್ತು. ಆದರೆ, ಈಗ ಅದು ಜಗತ್ತಿನ ವಿವಿಧ ಭಾಗಗಳಿಗೆ ಹರಡಿದೆ. ಹಾಗಾಗಿ, ಇದನ್ನು ಈಗ ಜಾಗತಿಕ ಆರೋಗ್ಯ ಸಮಸ್ಯೆ ಎಂದೇ ಪರಿಗಣಿಸಲಾಗುತ್ತಿದೆ. ಆಫ್ರಿಕಾದ ಹೊರಗೆ ಮಂಕಿಪಾಕ್ಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2003ರಲ್ಲಿ. ಇದು ಅಮೆರಿಕದಲ್ಲಿ ಪತ್ತೆಯಾದ ಪ್ರಕರಣ. ಘಾನಾದಿಂದ ತರಿಸಿಕೊಂಡ ನಾಯಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಳಿಕ, ಅಮೆರಿಕದಲ್ಲಿ 70 ಪ್ರಕರಣಗಳು ವರದಿಯಾದವು. 2018ರಲ್ಲಿ ನೈಜೀರಿಯಾ ಮತ್ತು ಇಸ್ರೇಲ್‌ನಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 2022ರ ಮೇಯಲ್ಲಿ ಆವರೆಗೆ ಸೋಂಕು ಇಲ್ಲದ ದೇಶಗಳಲ್ಲಿಯೂ ರೋಗ ಕಾಣಿಸಿಕೊಂಡಿತು.

ಪ್ರಾಣಿಯಿಂದ–ಮನುಷ್ಯರಿಗೆ; ವ್ಯಕ್ತಿಯಿಂದ–ವ್ಯಕ್ತಿಗೆ ಸೋಂಕು

ಮಂಕಿಪಾಕ್ಸ್ ಸೋಂಕು ತಗಲಿರುವ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ಈ ವೈರಾಣು ಹರಡುತ್ತದೆ. ಇಂತಹ ಪ್ರಾಣಿಗಳ ರಕ್ತ, ಚರ್ಮ ಅಥವಾ ಗಾಯದಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಆಫ್ರಿಕಾದಲ್ಲಿ ವಿವಿಧ ಪ್ರಬೇಧದ ಅಳಿಲು, ಮಂಗ, ಕೆಲವು ಪ್ರಬೇಧದ ಇಲಿಗಳಲ್ಲಿ ಅಧಿಕವಾಗಿ ಪತ್ತೆಯಾಗಿದೆ. ರೋಗ ತಗುಲಿರುವ ಈ ಪ್ರಾಣಿಗಳ ಮಾಂಸ ಸೇವನೆಯು ಸಂಭಾವ್ಯ ಅಪಾಯಕ್ಕೆ ತಳ್ಳುತ್ತದೆ. ಈ ವೈರಾಣು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ಇದೆ. ಸೋಂಕಿತ ವ್ಯಕ್ತಿಯ ಉಸಿರು ತಗಲುವ ಅಥವಾ ಚರ್ಮದ ಗಾಯದ ಜೊತೆ ಸಂಪರ್ಕ ಹೊಂದುವ ಮತ್ತೊಬ್ಬ ವ್ಯಕ್ತಿಗೆ ಇದು ತಗಲುವ ಸಂಭವ ಇರುತ್ತದೆ. ಸೋಂಕು ತಗಲಿರುವ ವಸ್ತುವನ್ನು ಬಳಸಿದ ವ್ಯಕ್ತಿಗೂ ವೈರಾಣುಗಳು ಹರಡಬಲ್ಲವು.

ಸೋಂಕಿತ ವ್ಯಕ್ತಿಯ ಉಸಿರಾಟದ ವೇಳೆ ಹೊರಬೀಳುವ ಕಣಗಳು ಸಹ ಸೋಂಕು ಹರಡಬಲ್ಲವು. ರೋಗಬಾಧಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿ, ಆರೈಕೆ ಮಾಡುವ ಕುಟುಂಬ ಸದಸ್ಯರು ಹಾಗೂ ನಿಕಟ ಸಂಪರ್ಕ ಹೊಂದಿದವರಿಗೆ ಇದರ ಅಪಾಯ ಹೆಚ್ಚು. ರೋಗ ಬಾಧಿತ ವ್ಯಕ್ತಿಯೊಬ್ಬನಿಂದ 9 ವ್ಯಕ್ತಿಗಳಿಗೆ ಈ ಸೋಂಕು ಹರಡಿದ್ದು ದಾಖಲಾಗಿದೆ. ಸಮುದಾಯಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದನ್ನು ಇದು ಬಿಂಬಿಸುತ್ತದೆ. ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣವಾಗಬಲ್ಲದು. ಪ್ರಸವದ ವೇಳೆ ಅಥವಾ ಪ್ರಸವಾನಂತರ ನಿಕಟ ಸಂಪರ್ಕದಿಂದಲೂ ಇದು ಹರಡುತ್ತದೆ. ಮುಖ್ಯವಾಗಿ, ಪರಸ್ಪರ ಸಂಪರ್ಕದಿಂದ ಇದು ಹರಡುವ ಸಾಧ್ಯತೆ ಹೆಚ್ಚಿದೆ. ಸೋಂಕು ಹರಡುವಿಕೆ ಅಪಾಯವನ್ನು ದೃಢಪಡಿಸುವ ಇನ್ನಷ್ಟು ಅಧ್ಯಯನಗಳು ನಡೆಯಬೇಕಿವೆ.

ಸೋಂಕಿತರ ಚಿಕಿತ್ಸೆ

ಸೋಂಕಿನ ಪ್ರಮಾಣವನ್ನು ತಗ್ಗಿಸಲು, ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ದೀರ್ಘಕಾಲದ ಪರಿಣಾಮಗಳನ್ನು ತಡೆಗಟ್ಟಲು ಚಿಕಿತ್ಸೆ ಅಗತ್ಯ. ಆದರೆ ಮಂಕಿಪಾಕ್ಸ್‌ಗೆಂದೇ ಪ್ರತ್ಯೇಕ ಚಿಕಿತ್ಸಾ ವಿಧಾನ ಇಲ್ಲ. ಮಂಕಿಪಾಕ್ಸ್ ಮತ್ತು ಸಿಡುಬು ಅನುವಂಶೀಯವಾಗಿ ಒಂದೇ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಿಡುಬು ನಿಯಂತ್ರಣಕ್ಕೆ ಬಳಸಲಾದ ವೈರಾಣು ನಿಯಂತ್ರಣ ಔಷಧಗಳನ್ನೇ ಇದಕ್ಕೂ ಬಳಸಬಹುದಾಗಿದೆ. ವೈರಾಣು ನಿಯಂತ್ರಿಸುತ್ತದೆ ಎಂದು ಪರಿಗಣಿಸಲಾಗಿರುವ ‘ಟೆಕೊವಿರಿಮಾಟ್’ (ಟಿಪಿಒಎಕ್ಸ್ಎಕ್ಸ್) ಔಷಧವನ್ನು ಬಳಸಬಹುದು ಎಂದು ಶಿಫಾರಸು ಮಾಡಲಾಗಿದೆ. ಸಿಡುಬು ತಡೆಗೆ ಅಭಿವೃದ್ಧಿಪಡಿಸಿದ್ದ ಈ ಔಷಧವನ್ನು ಮಂಕಿಪಾಕ್ಸ್‌ಗಾಗಿ ಬಳಕೆ ಮಾಡಲು ಯುರೋಪಿಯನ್ ಯೂನಿಯನ್ ಏಜನ್ಸಿಯು 2022ರಲ್ಲಿ ಪರವಾನಗಿ ಪಡೆದಿದೆ. ಮಂಕಿಪಾಕ್ಸ್‌ನಿಂದ ತೀವ್ರವಾಗಿ ಬಳಲುತ್ತಿರುವ ಹಾಗೂ ರೋಗನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳಿಗೆ ಇದನ್ನು ನೀಡಬಹುದು. ಆದರೆ, ವೈದ್ಯಕೀಯ ನಿಗಾದೊಂದಿಗೆ ಈ ಔಷಧವನ್ನು ಬಳಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ ಇದು ಎಲ್ಲ ಕಡೆ ಲಭ್ಯವಿಲ್ಲ. ರೋಗಿಗೆ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಲು ಆಹಾರವನ್ನು ನೀಡಬೇಕು. ದ್ರವರೂಪದ ಆಹಾರವನ್ನೂ ನೀಡಬಹುದು. ಮಂಕಿಪಾಕ್ಸ್‌ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಲೈಂಗಿಕ ಕ್ರಿಯೆಯಿಂದ ಪ್ರಸರಣ?

ಪರಸ್ಪರ ಸಂಪರ್ಕದಿಂದ ಮಂಕಿಪಾಕ್ಸ್ ವೈರಾಣು ಹರಡುತ್ತದೆ ಎಂಬುದರ ಜೊತೆಗೆ ಅದು, ಪುರುಷ ಹಾಗೂ ಪುರುಷರ ನಡುವೆ ಏರ್ಪಡುವ ಲೈಂಗಿಕ ಕ್ರಿಯೆಯಿಂದಲೂ ಹರಡುತ್ತದೆ ಎಂಬ ವಿಚಾರದ ಬಗ್ಗೆ ಆರೋಗ್ಯ ತಜ್ಞರು ಗಮನ ಕೇಂದ್ರೀಕರಿಸಿದ್ದಾರೆ. ಸೆಂಟರ್‌ ಫಾರ್ ಡಿಸೀಸ್‌ ಕಂಟ್ರೋಲ್ ಆ್ಯಂಡ್‌ ಪ್ರಿವೆನ್‌ಷನ್‌ (ಸಿಡಿಸಿ), ಅಮೆರಿಕದಲ್ಲಿ ಪುರುಷ–ಪುರುಷ ಲೈಂಗಿಕಾಸಕ್ತ ಸಮುದಾಯದವರು ಸೇರಿದಂತೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸುತ್ತಿದ್ದು, ಸೋಂಕಿತರ ಜೊತೆ ನಿಕಟ ಸಂಪರ್ಕ ಹೊಂದಿರುವವರು ಲಸಿಕೆ ಪಡೆಯಲು ಅರ್ಹರು ಎಂದು ತಿಳಿಸುತ್ತಿದೆ. ಪುರುಷ–ಪುರುಷ ಲೈಂಗಿಕಾಸಕ್ತರು ಹಾಗೂ ಪುರುಷ ಹಾಗೂ ಮಹಿಳೆಯರಿಬ್ಬರ ಜೊತೆಗೂ ಲೈಂಗಿಕ ಸಂಪರ್ಕ ಹೊಂದುವ ವ್ಯಕ್ತಿಗಳಿಗೆ ಲಸಿಕೆಯನ್ನು ಆದ್ಯತೆಯ ಮೇಲೆ ಒದಗಿಸಲು ಕೆಲವು ನಗರಗಳು ಮುಂದಾಗಿವೆ ಎಂದು ‘ಪಾಪ್ಯುಲರ್ ಸೈನ್ಸ್’ ನಿಯತಕಾಲಿಕ ವರದಿ ಮಾಡಿದೆ.

ಮಂಕಿಪಾಕ್ಸ್ ಎಂಬುದು ‘ಲೈಂಗಿಕ ಸಂಪರ್ಕದ ಸೋಂಕು’ (ಎಸ್‌ಟಿಐ) ಅಲ್ಲದಿದ್ದರೂ, ಆರೋಗ್ಯ ತಜ್ಞರು ಸೋಂಕನ್ನು ಆ ರೀತಿ ಬಿಂಬಿಸುತ್ತಿರುವುದೇಕೆ ಎಂದು ಹಲವರು ದನಿ ಎತ್ತಿದ್ದಾರೆ. ಈ ಮೂಲಕ ಪುರುಷ–ಪುರುಷ ಲೈಂಗಿಕ ಸಂಪರ್ಕಕ್ಕೆ ಕಳಂಕದ ಪಟ್ಟ ಕಟ್ಟಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಮಂಕಿಪಾಕ್ಸ್ ಮತ್ತು ಲೈಂಗಿಕತೆ ನಡುವಿನ ನಂಟು ನಿಜಕ್ಕೂ ಗೊಂದಲಕಾರಿಯಾಗಿದೆ. ಅದು ಲೈಂಗಿಕ ಕ್ರಿಯೆಯೊಂದರಿಂದಲೇ ಹರಡುವ ಸೋಂಕು ಅಲ್ಲದಿದ್ದರೂ, ಪುರುಷ–ಪುರುಷರ ನಡುವಿನ ಲೈಂಗಿಕ ಕ್ರಿಯೆಯಿಂದ ಹರಡಿದಂತೆ ತೋರುತ್ತಿದೆ. ಇದರರ್ಥ, ಪುರುಷ–ಪುರುಷನ ಲೈಂಗಿಕ ಸಂಪರ್ಕವನ್ನು ನಿಯಂತ್ರಿಸುವುದರ ಮೂಲಕ ತಕ್ಷಣಕ್ಕೆ ವೈರಾಣು ಪ್ರಸರಣ ತಡೆಯುವುದು ಕಾರ್ಯತಂತ್ರದ ಒಂದು ಭಾಗ ಎನ್ನಲಾಗಿದೆ. ‘ಲೈಂಗಿಕ ಕ್ರಿಯೆಯು ವೈರಾಣು ಹೆಚ್ಚಿನ ಪ್ರಮಾಣದಲ್ಲಿ ಹರಡಲು ಸಹಾಯ ಮಾಡುತ್ತದೆ’ ಎಂದು ಕ್ಯಾಲಿಫೋರ್ನಿಯಾ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ವೈರಾಣುಶಾಸ್ತ್ರಜ್ಞೆ ಆ್ಯನ್‌ ರಿಮೊಯಿನ್ ಅಭಿಪ್ರಾಯಪಟ್ಟಿದ್ದಾರೆ.

ಲಕ್ಷಣಗಳು

ಸೋಂಕು ತಗಲಿದ ನಂತರದ 6ರಿಂದ 13 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಪ್ರಕರಣಗಳಲ್ಲಿ 5ರಿಂದ 21 ದಿನಗಳ ಅವಧಿಯಲ್ಲಿಯೂ ಕಾಣಿಸಿಕೊಳ್ಳಬಹುದು.

ಜ್ವರ, ತೀವ್ರವಾದ ತಲೆನೋವು, ದುಗ್ಧರಸ ಗ್ರಂಥಿಗಳಲ್ಲಿ ಊತ, ಬೆನ್ನು ನೋವು, ಸ್ನಾಯು ನೋವು ಮತ್ತು ತೀವ್ರವಾದ ನಿತ್ರಾಣ ಕಾಣಿಸಿಕೊಳ್ಳಬಹುದು. ಜ್ವರ ಕಾಣಿಸಿಕೊಂಡ 1–3 ದಿನಗಳಲ್ಲಿ ದದ್ದುಗಳು (ಮೊಡವೆಯ ರೀತಿ ಇರುತ್ತದೆ) ಕಾಣಿಸಿಕೊಳ್ಳಬಹುದು. ಮುಖ, ಕೈ, ಕಾಲುಗಳು, ಹಸ್ತ ಮತ್ತು ಪಾದಗಳಲ್ಲಿ ದದ್ದುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ದೇಹದ ಇತರ ಭಾಗಗಳಲ್ಲಿ ದದ್ದುಗಳು ಅಷ್ಟಾಗಿ ಇರುವುದಿಲ್ಲ. ಶೇ 95ರಷ್ಟು ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದದ್ದುಗಳು ಇರುತ್ತವೆ.

2ರಿಂದ 4 ವಾರಗಳವರೆಗೆ ಲಕ್ಷಣಗಳು ಇರಬಹುದು. ಮಕ್ಕಳಲ್ಲಿ ರೋಗವು ಹೆಚ್ಚು ತೀವ್ರವಾಗಿರುತ್ತದೆ. ದೇಹದಲ್ಲಿ ವೈರಾಣುವಿನ ಪ್ರಮಾಣ, ರೋಗಿಯ ಆರೋಗ್ಯ ಸ್ಥಿತಿ ಇತ್ಯಾದಿಗಳ ಮೇಲೆ ರೋಗದ ತೀವ್ರತೆಯು ಅವಲಂಬಿಸಿರುತ್ತದೆ. ರೋಗ ನಿರೋಧಕ ಶಕ್ತಿಯ ಕೊರತೆ ಇರುವವರಲ್ಲಿ ಲಕ್ಷಣಗಳು ಹೆಚ್ಚು ತೀವ್ರವಾಗಬಹುದು.

ತಡೆ ಕ್ರಮಗಳು

l ಚರ್ಮದಲ್ಲಿ ದದ್ದುಗಳು ಕಾಣಿಸಿಕೊಂಡವರ ಜತೆ ಸಂಪರ್ಕ ತಪ್ಪಿಸಿ, ದದ್ದುಗಳನ್ನು ಮುಟ್ಟಬೇಡಿ

l ಮಂಕಿಪಾಕ್ಸ್‌ ಸೋಂಕಿತರಿಗೆ ಮುತ್ತು ಕೊಡಬೇಡಿ, ಅವರನ್ನು ಆಲಂಗಿಸಿಕೊಳ್ಳಬೇಡಿ, ಅವರ ಜತೆಗೆ ಲೈಂಗಿಕ ಸಂ‍ಪರ್ಕ ಮಾಡಬೇಡಿ

l ಸೋಂಕಿತರ ಜತೆಗೆ ಆಹಾರ ಸೇವನೆಯ ಬಟ್ಟಲು, ಲೋಟ ಇತ್ಯಾದಿಗಳನ್ನು ಹಂಚಿಕೊಳ್ಳಬೇಡಿ

l ಸೋಂಕಿತರು ಬಳಸಿದ ಬಟ್ಟೆ, ಟವಲು, ಹೊದಿಕೆ ಇತ್ಯಾದಿಗಳನ್ನು ಮುಟ್ಟಬೇಡಿ

l ಸಾಬೂನು ಬಳಸಿ ಆಗಾಗ ಕೈತೊಳೆಯಿರಿ, ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ ಬಳಸಿ

l ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಇರುವವರು ಪ್ರಾಣಿಗಳನ್ನು ಮುಟ್ಟಬಾರದು. ಅಲ್ಲಿನ ಪ್ರಾಣಿಗಳ ದೇಹದಲ್ಲಿ ವೈರಾಣು ಇರುವ ಸಾಧ್ಯತೆ ಇದೆ

l ಸೋಂಕು ತಗಲಿದವರು ಅಥವಾ ಲಕ್ಷಣಗಳು ಇರುವವರು ಪ್ರತ್ಯೇಕವಾಗಿ ಇರಬೇಕು. ಸಾಕುಪ್ರಾಣಿಗಳಿಂದಲೂ ದೂರ ಇರಬೇಕು

ಎರಡು ಲಸಿಕೆ

ಮಂಕಿಪಾಕ್ಸ್‌ ನಿಯಂತ್ರಿಸುವ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಅನುಮೋದನೆ ನೀಡಿರುವ ಜೆವೈಎನ್‌ಎನ್‌ಇಒಎಸ್ (ಇಮ್ವಾನೆಕ್ಸ್) ಹಾಗೂ ಎಸಿಎಎಂ–2000 ಹೆಸರಿನ ಎರಡು ಲಸಿಕೆಗಳು ಲಭ್ಯವಿವೆ. ಅಮೆರಿಕದಲ್ಲಿ ಇಮ್ವಾನೆಕ್ಸ್ ಲಸಿಕೆಯ ಸೀಮಿತ ಪೂರೈಕೆಯಿದೆ. ಆದರೆ ಎಸಿಎಎಂ–2000 ಲಸಿಕೆ ಹೆಚ್ಚು ಲಭ್ಯವಿದೆ. ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವವರು ಹಾಗೂ ಚರ್ಮದ ಕಾಯಿಲೆಯಿರುವವರು ಈ ಲಸಿಕೆ ತೆಗೆದುಕೊಳ್ಳಬಾರದು. ಈಗ ವ್ಯಾಪಕವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್‌ ನಿಯಂತ್ರಿಸುವಲ್ಲಿ ಈ ಎರಡೂ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬ ದತ್ತಾಂಶ ಲಭ್ಯವಾಗಿಲ್ಲ. ಈ ಬಗ್ಗೆ ಅಮೆರಿಕದ ಸೆಂಟರ್‌ ಫಾರ್ ಡಿಸೀಸ್‌ ಕಂಟ್ರೋಲ್ ಆ್ಯಂಡ್‌ ಪ್ರಿವೆನ್‌ಷನ್‌ (ಸಿಡಿಸಿ) ಮಾಹಿತಿ ಕಲೆಹಾಕುತ್ತಿದೆ.

ತ್ವರಿತ ಏರಿಕೆ

ಮೇ 6;1

ಜೂನ್ 6;1,042

ಜೂನ್;15;2,040

ಜೂನ್ 21;3,172

ಜೂನ್;24;4,015

ಜೂನ್ 28;5,010

ಜುಲೈ 1;6,208

ಜುಲೈ 5;7,143

ಜುಲೈ 7;8,028

ಜುಲೈ 8; 9,087

ಜುಲೈ 12;10,710

ಜುಲೈ 13;11,086

ಜುಲೈ 15;12,687

ಜುಲೈ 18;13,069

ಯುರೋಪ್‌ನಲ್ಲಿ ಅತಿಹೆಚ್ಚು ಪ್ರಕರಣ

ಬೆಲ್ಜಿಯಂ;224

ಬ್ರೆಜಿಲ್;310

ಕೆನಡಾ;539

ಫ್ರಾನ್ಸ್;908

ಜರ್ಮನಿ;1,924

ಇಟಲಿ;339

ನೆದರ್ಲೆಂಡ್ಸ್;656

ಪೋರ್ಚುಗಲ್;515

ಸ್ಪೇನ್;2,835

ಸ್ವಿಟ್ಜರ್ಲೆಂಡ್;208

ಬ್ರಿಟನ್;1,857

ಅಮೆರಿಕ;1,965

ಒಟ್ಟು;13,069

ಆಧಾರ್: ಡಬ್ಲ್ಯುಎಚ್‌ಒ, ಸಿಡಿಸಿ,ಅವರ್ ವರ್ಲ್ಡ್‌ ಇನ್ ಡಾಟಾ.ಒಆರ್‌ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT