ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ | ರಾಷ್ಟ್ರೀಯ ಸಾಧನೆ ಸಮೀಕ್ಷೆ; ಕಲಿಕೆ ಕಳವಳ

Last Updated 26 ಮೇ 2022, 19:30 IST
ಅಕ್ಷರ ಗಾತ್ರ

3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ‘ರಾಷ್ಟ್ರೀಯ ಸಾಧನೆ ಸಮೀಕ್ಷೆ’ ನಡೆಸಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಖಾಸಗಿ ಶಾಲೆ ಮತ್ತು ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಮೀಕ್ಷೆ ನಡೆದಿದೆ. ಇದು ದೊಡ್ಡ ಮಟ್ಟದ ಸಮೀಕ್ಷೆಯಾಗಿದೆ. 2021ರ ಸಮೀಕ್ಷೆಯ ವರದಿಯು ಈಗ ಪ್ರಕಟವಾಗಿದೆ. ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್‌ ಮುಂತಾದ ವಿಷಯಗಳಲ್ಲಿನ ಕಲಿಕಾ ಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಕಲಿಕಾ ಮಟ್ಟವು ಕುಸಿತ ಕಂಡಿದೆ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಮಟ್ಟವು ಕಳವಳಕಾರಿಯಾಗಿದೆ ಎಂಬುದರತ್ತ ಸಮೀಕ್ಷಾ ವರದಿಯು ಬೆಳಕು ಚೆಲ್ಲಿದೆ.

ಓದಲು, ಬರೆಯಲು ತೊಡಕು
ದೇಶದ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಮಕ್ಕಳಿಗೆ ಆಧುನಿಕ ಭಾರತೀಯ ಭಾಷೆಯೊಂದನ್ನು (ಎಂಐಎಲ್‌) ಬೋಧಿಸಲಾಗುತ್ತದೆ. ಸಂಸ್ಕೃತ, ಹಿಂದಿ, ಬಂಗಾಳಿ, ಕನ್ನಡ, ತಮಿಳು ಸೇರಿ ಒಟ್ಟು 21 ಭಾಷೆಗಳನ್ನು ಆಧುನಿಕ ಭಾರತೀಯ ಭಾಷೆ ಎಂದು ವರ್ಗೀಕರಿಸಲಾಗಿದೆ. ಆದರೆ ದೇಶದಾದ್ಯಂತ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನವರು, ಎಂಐಎಲ್‌ನಲ್ಲಿ ಇರುವ ಪಠ್ಯವನ್ನು ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಎಂಐಎಲ್‌ ಆಗಿ ಬೋಧಿಸಲಾಗುತ್ತದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿದ ಭಾಷೆಗಳನ್ನು ಎಂಐಎಲ್‌ ಆಗಿ ಬೋಧಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಲ್ಲಿ, ಶೇ 59ರಷ್ಟು ಜನರು ಎಂಐಎಲ್‌ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು–ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಶೇ 65ರಷ್ಟು ವಿದ್ಯಾರ್ಥಿಗಳುಎಂಐಎಲ್‌ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು–ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಗ್ರಹಿಕೆ ಸಾಧಾರಣ
ರಾಜ್ಯದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ಆಧುನಿಕ ಭಾರತದ ಭಾಷೆಯ ಗ್ರಹಿಕೆಯ ಮಟ್ಟ ಒಂದೇ ತೆರನಾಗಿದೆ. ಈ ಎಲ್ಲಾ ವರ್ಗದ ವಿದ್ಯಾರ್ಥಿಗಳಲ್ಲಿ ಶೇ 99ರಷ್ಟು ವಿದ್ಯಾರ್ಥಿಗಳಿಗೆ ಆಧುನಿಕ ಭಾರತೀಯ ಭಾಷೆಯ ಗ್ರಹಿಕೆ ಮತ್ತು ಕಲಿಕೆಯ ಮಟ್ಟ ಸಾಧಾರಣ ಮತ್ತು ಸಾಧಾರಣ ಮಟ್ಟಕ್ಕಿಂತಲೂ ಕಡಿಮೆ ಇದೆ ಎಂದು ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT