ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Explainer: ಎನ್‌ಆರ್‌ಎ–ಬ್ಯಾಂಕ್, ರೈಲ್ವೆ, ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

Last Updated 20 ಆಗಸ್ಟ್ 2020, 8:09 IST
ಅಕ್ಷರ ಗಾತ್ರ
ADVERTISEMENT
""

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪನೆಗೆ ನಿರ್ಧರಿಸಿದೆ. ಎನ್‌ಆರ್‌ಎ ಕೇಂದ್ರ ಸರ್ಕಾರದ ವಿವಿಧ ಉದ್ಯೋಗಗಳ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದೆ. 2020ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎನ್‌ಆರ್‌ಎ ಕುರಿತು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು.


* ಎನ್‌ಆರ್‌ಎ ಅಗತ್ಯವೇನು?

ಪ್ರಸ್ತುತ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮತ್ತು ಬ್ಯಾಂಕ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತಿವೆ. ಉದ್ಯೋಗಾಂಕ್ಷಿಗಳು ಅರ್ಹ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಪರೀಕ್ಷೆಗಳಿಗೆ ಹಾಜರಾಗಬೇಕು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪ್ರಕಾರ, ಪ್ರತಿ ವರ್ಷ ಕೇಂದ್ರದ 1.25 ಲಕ್ಷ ಉದ್ಯೋಗಗಳಿಗೆ 2.5 ಕೋಟಿಯಿಂದ 3 ಕೋಟಿ ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಆದರೆ, ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಎಲ್ಲ ಹುದ್ದೆಗಳಿಗೂ ಸಿಇಟಿ ಮೂಲಕ ಏಕರೂಪ ಪರೀಕ್ಷೆ ನಡೆಸುತ್ತದೆ. ಅಭ್ಯರ್ಥಿಗಳು ಒಂದೇ ಪರೀಕ್ಷೆ ಬರೆದು, ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

* ಪ್ರತಿ ಜಿಲ್ಲೆಯಲ್ಲೂ ಪರೀಕ್ಷಾ ಕೇಂದ್ರ

ಅಭ್ಯರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಸಿಇಟಿ ಪರೀಕ್ಷೆಗೆ ಕೇಂದ್ರಗಳನ್ನು ಗುರುತಿಸುವ ಗುರಿಯಿದೆ. ಪ್ರಮುಖವಾಗಿ 117 'ಆದ್ಯತಾ ಮೇರೆಗಿನ ಜಿಲ್ಲೆಗಳಲ್ಲಿ' (Aspirational Districts) ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅದರಿಂದ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಆಕಾಂಕ್ಷಿಗಳು, ಬಡ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಈಗ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಪ್ರತ್ಯೇಕ ಅರ್ಜಿ ಹಾಕಬೇಕಿದೆ, ಅದಕ್ಕೆ ಪ್ರತ್ಯೇಕ ಪರೀಕ್ಷಾ ಶುಲ್ಕ ಪಾವತಿಸಬೇಕು, ಪರೀಕ್ಷೆ ಬರೆಯಲು ದೂರದ ಕೇಂದ್ರಗಳಿಗೆ ಪ್ರಯಾಣಿಸಬೇಕು ಹಾಗೂ ಅದಕ್ಕಾಗಿ ಉಳಿದು ಕೊಳ್ಳಲು, ಊಟ–ತಿಂಡಿಗೆ ಇನ್ನಷ್ಟು ಖರ್ಚಿನ ಹೊರೆ ಬೀಳುತ್ತಿದೆ. ಒಂದೇ ಬಾರಿ ನಡೆಯಲಿರುವ ಪರೀಕ್ಷೆ ಅಭ್ಯರ್ಥಿಗಳಿಗೆ ಹಣಕಾಸಿನ ಹೊರೆ ಕಡಿಮೆ ಮಾಡಲಿದೆ.

* ಒಂದು ಬಾರಿ ಪರೀಕ್ಷೆ; ಮಾನ್ಯತೆ ಅವಧಿ ಎಷ್ಟು?

ಎನ್‌ಆರ್‌ಎ ನಡೆಸುವ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ದಿನದಿಂದ 3 ವರ್ಷಗಳ ವರೆಗೂ ಅಭ್ಯರ್ಥಿ ಗಳಿಸಿರುವ ಅಂಕಗಳು ಮಾನ್ಯತೆಗೆ ಒಳಪಟ್ಟಿರುತ್ತವೆ. ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಪ್ರಯತ್ನಗಳ ಮಿತಿ ನಿಗದಿಯಾಗಿಲ್ಲ, ಆದರೆ ಪರೀಕ್ಷೆಗೆ ವಯಸ್ಸಿನ ಮಿತಿ ಅನ್ವಯವಾಗುತ್ತದೆ. ಬರೆಯಲಾಗಿರುವ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವುದನ್ನೇ ಜೇಷ್ಠತಾ ಪಟ್ಟಿಗೆ ತೆಗೆದುಕೊಳ್ಳಲಾಗುತ್ತದೆ. ಇನ್ನು ಸರ್ಕಾರದ ನಿಯಮಾವಳಿಗಳಂತೆ ಅಭ್ಯರ್ಥಿಗಳಿಗೆ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.

ಸಿಇಟಿ ಪರೀಕ್ಷೆಗಳನ್ನು ದೇಶದ 12 ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

* ಸರ್ಕಾರದ ಎಲ್ಲ ಹುದ್ದೆಗಳಿಗೂ ಒಂದೇ ಪರೀಕ್ಷೆ?

ಆರಂಭದಲ್ಲಿ ಮಧ್ಯಮ ಮತ್ತು ಕಿರಿಯ ಶ್ರೇಣಿಯ (ಗ್ರೂಪ್‌ ಬಿ ಮತ್ತು ಸಿ–ತಾಂತ್ರಿಕೇತರ) ಹುದ್ದೆಗಳಿಗೆ ಸಿಇಟಿ ಪರೀಕ್ಷೆ ಮೂಲಕ ಎನ್‌ಆರ್‌ಎ ಅಭ್ಯರ್ಥಿಗಳ ಜೇಷ್ಠತೆ ಗುರುತಿಸುತ್ತದೆ. ಈಗ ಎಸ್‌ಎಸ್‌ಸಿ, ಐಬಿಪಿಎಸ್‌ ನಿರ್ವಹಿಸುತ್ತಿರುವ ಪ್ರಾಥಮಿಕ ಪರೀಕ್ಷೆಗಳನ್ನು ಎನ್‌ಆರ್‌ಎ ಒಂದೇ ಪರೀಕ್ಷೆಯ ಮೂಲಕ ನಡೆಸಲಿದೆ. ಒಂದೇ ರೀತಿಯ ಅರ್ಹತಾ ಮಾನದಂಡಗಳಿರುವ ಹುದ್ದೆಗಳಿಗೆ ಸಿಇಟಿ ಪರೀಕ್ಷೆ ಅನ್ವಯವಾಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇಲಾಖೆಗಳ ಹುದ್ದೆಗಳ ಪರೀಕ್ಷೆಗಳನ್ನು ಎನ್‌ಆರ್‌ಎ ಅಡಿಗೆ ತರಲು ಉದ್ದೇಶಿಸಲಾಗಿದೆ.

ಬ್ಯಾಂಕಿಂಗ್‌ ಆನ್‌ಲೈನ್‌ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು–ಸಾಂದರ್ಭಿಕ ಚಿತ್ರ

ಇಲ್ಲಿ ಸಿಇಟಿ ಪರೀಕ್ಷೆಗೆ ಕಲಿಯಬೇಕಾದ ಪಠ್ಯ ವಿಷಯವೂ ಸಮಾನವಾಗಿರುತ್ತದೆ, ಬೇರೆ ಬೇರೆ ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಗೆ ಪ್ರತ್ಯೇಕವಾಗಿ ಸಿದ್ಧತೆ ನಡೆಸಬೇಕಾದ ಅಗತ್ಯ ಇರುವುದಿಲ್ಲ. ರಾಷ್ಟ್ರೀಯ ನೇಮಕಾತಿ ಸಂಸ್ಥೆಯಲ್ಲಿ ಎಸ್‌ಎಸ್‌ಸಿ, ಐಬಿಪಿಎಸ್‌ ಹಾಗೂ ಆರ್‌ಆರ್‌ಬಿಯ ಪ್ರತಿನಿಧಿಗಳು ಇರಲಿದ್ದು, ಮೂರು ಹಂತಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪದವಿ, ಪಿಯುಸಿ (12ನೇ ತರಗತಿ) ಮತ್ತು 10ನೇ ತರಗತಿ ಮಟ್ಟದ ಅಭ್ಯರ್ಥಿಗಳಿಗೆ ಸಿಇಟಿ ನಡೆಯಲಿದೆ. ಸಿಇಟಿಯ ಅಂಕಗಳ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಎನ್‌ಆರ್‌ಎ ಸಿದ್ಧಪಡಿಸುತ್ತದೆ. ಅಂದರೆ, ಅದನ್ನು ಆರಂಭಿಕ ಹಂತದ ಅಥವಾ ಅರ್ಹತಾ ಮಟ್ಟದ ಪರೀಕ್ಷೆ ಎನ್ನಬಹುದು. ಆದರೆ, ಸಿಇಟಿ ಅರ್ಹತೆ ಆಧರಿಸಿ ಹುದ್ದೆಗಳ ಅನುಸಾರ ಮುಂದಿನ ಎರಡು ಅಥವಾ ಮೂರನೇ ಹಂತದ ಪರೀಕ್ಷೆಗಳನ್ನು ಆಯಾ ನೇಮಕಾತಿ ಸಂಸ್ಥೆಗಳು ಮಾಡಿಕೊಳ್ಳಬೇಕಾಗುತ್ತದೆ. ಆ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂತಿಮ ಆಯ್ಕೆ ನಡೆಯಲಿದೆ.

* ಎನ್‌ಆರ್‌ಎಗೆ ಸರ್ಕಾರ ಎಷ್ಟು ಹಣ ಮೀಸಲಿಟ್ಟಿದೆ?

ಎನ್‌ಆರ್‌ಎ ಸ್ಥಾಪನೆ ಮತ್ತು ಅಭಿವೃದ್ಧಿಗೆ ಮೂರು ವರ್ಷಗಳಿಗೆ ₹1,517.57 ಕೋಟಿ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದೇ ಹಣದಲ್ಲಿ 117 ಜಿಲ್ಲೆಗಳಲ್ಲಿ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಹಲವು ಪರೀಕ್ಷೆಗಳಿಗೆ ಒಂದೇ ಸಿಇಟಿ ನಡೆಸುವುದರಿಂದ ನೇಮಕಾತಿ ಪ್ರಕ್ರಿಯೆ ಹಂತಗಳು ಕಡಿಮೆಯಾಗಲಿವೆ ಹಾಗೂ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಬಹಳಷ್ಟು ಇಲಾಖೆಗಳು ಎರಡನೇ ಹಂತರದ ಪರೀಕ್ಷೆಗಳನ್ನು ನಡೆಸದೆಯೇ ಸಿಟಿಇ ಅಂಕಗಳನ್ನು ಆಧರಿಸಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಪೂರ್ಣಗೊಳಿಸಲಿವೆ.

ಸಿಇಟಿಯ ಅಂಕಗಳನ್ನು ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಕೂಡ ಪಡೆದುಕೊಂಡು ಅದರ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಮುಂದಿನ ಹಂತದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

(ಮಾಹಿತಿ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌, ಲೈವ್‌ಮಿಂಟ್‌ ವೆಬ್‌ಸೈಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT