ಗುರುವಾರ , ಏಪ್ರಿಲ್ 2, 2020
19 °C

ಕುಸಿದರೂ ತೈಲ ಬೆಲೆ ಇಳಿಯದ ಗ್ರಾಹಕನ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ 2014ರ ಮೇ ತಿಂಗಳಲ್ಲಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಕಚ್ಚಾ ತೈಲದ ದರ ಪ್ರತೀ ಬ್ಯಾರಲ್‌ಗೆ ₹ 7,920ರಷ್ಟಿತ್ತು. ಆಗ ದೆಹಲಿಯಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರ ₹ 71.41ರಷ್ಟಿತ್ತು. ಆರು ವರ್ಷಗಳ ಬಳಿಕ, 2020ರ ಮಾರ್ಚ್‌ 1ರಂದು ಅದೇ ದೆಹಲಿಯಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರ ₹ 71.71ರಷ್ಟಿತ್ತು. ಆದರೆ, ಈ ಸಲ ಪ್ರತೀ ಬ್ಯಾರಲ್‌ ದರ ₹ 3,706ಕ್ಕೆ ಇಳಿದಿತ್ತು. ಕಚ್ಚಾ ತೈಲದ ಬೆಲೆಯಲ್ಲಿ ಶೇ 50ರಷ್ಟು ಕಡಿಮೆಯಾದರೂ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಮಾತ್ರ ಹಾಗೆಯೇ ಉಳಿಯಿತು.

ಈ ಬೆಳವಣಿಗೆಗೆ ಬಹುಮುಖ್ಯ ಕಾರಣವೆಂದರೆ ಡಾಲರ್‌ ಎದುರು ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು. ಆರು ವರ್ಷಗಳ ಹಿಂದೆ, ರೂಪಾಯಿ ಎದುರು ಪ್ರತೀ ಡಾಲರ್‌ ಮೌಲ್ಯ ₹58–59ರಷ್ಟಿತ್ತು. ಆದರೆ, ಈಗ ಅದರ ಮೌಲ್ಯ ₹73–74ಕ್ಕೆ ಹೆಚ್ಚಿದೆ. ಈ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ವಿಧಿಸುತ್ತಾ ಬಂದ ತೆರಿಗೆ ಪ್ರಮಾಣವೂ ನಿರಂತರ ಹೆಚ್ಚುತ್ತಲೇ ಬಂದಿದೆ. ಆರು ವರ್ಷಗಳಲ್ಲಿ ತೆರಿಗೆ ಪ್ರಮಾಣ ಶೇ 50ರಷ್ಟು ಏರಿಕೆಯಾಗಿದೆ.

ಮಾರ್ಚ್‌ 1ರ ಉದಾಹರಣೆಯನ್ನೇ ತೆಗೆದುಕೊಂಡರೆ ಅಂದು ಪ್ರತೀ ಲೀಟರ್‌ ಪೆಟ್ರೋಲ್‌ಗೆ ಡೀಲರ್‌ಗಳ ಖರೀದಿ ದರ ₹ 32.93. ಆದರೆ, ಗ್ರಾಹಕನಿಗೆ ಮಾರಾಟ ಮಾಡುತ್ತಿರುವುದು ಮಾತ್ರ ₹ 71.71 ದರದಲ್ಲಿ. ಅಂದರೆ ಡೀಲರ್‌ಗೆ ನೀಡಿದ ಬೆಲೆಗಿಂತ ಶೇ 118ರಷ್ಟು ಅಧಿಕ ದರ ತೆತ್ತು ಪೆಟ್ರೋಲ್‌ ಖರೀದಿಸುವ ಪ್ರಮೇಯ ಗ್ರಾಹಕನದ್ದು. ಡೀಲರ್‌ಗೆ ಸಿಕ್ಕ ಬೆಲೆಯ ಮೇಲೆ ಕೇಂದ್ರ ಸರ್ಕಾರ ಶೇ 19.98ರಷ್ಟು ಆಮದು ಸುಂಕ ವಿಧಿಸಿದರೆ, ರಾಜ್ಯ ಸರ್ಕಾರ ಶೇ 27ರಷ್ಟು ತೆರಿಗೆ (ಪ್ರತೀ ಲೀಟರ್‌ಗೆ ₹ 15.25) ಹಾಕಿತು. ಅದರೊಡನೆ ಡೀಲರ್‌ಗೆ ಸಿಗುವ ಕಮಿಷನ್‌ ₹3.55 ಸಹ ಸೇರಿ, ಗ್ರಾಹಕನಿಗೆ ಮಾರಾಟ ಮಾಡುವ ಬೆಲೆಯಲ್ಲಿ ಅಷ್ಟೊಂದು ವ್ಯತ್ಯಾಸವಾಗಲು ಕಾರಣವಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಇಳಿದರೂ ತೆರಿಗೆ ಪ್ರಮಾಣದಲ್ಲಿ ಇಳಿಕೆ ಆಗದ್ದರಿಂದ ಬೆಲೆ ಹಾಗೇ ಉಳಿಯಿತು.

ಸೌದಿ–ರಷ್ಯಾ ಜಟಾಪಟಿ
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ತೈಲ ದರ ಇಳಿಕೆ ಮಾಡುವ ಮೂಲಕ ಸೌದಿ ಅರೇಬಿಯಾವು ರಷ್ಯಾಗೆ ಅಘಾತ ನೀಡಿದೆ. ಸೌದಿ ನೇತೃತ್ವದ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯು (ಒಪೆಕ್) ಕಳೆದ ವಾರ ತೈಲ ದರ ಇಳಿಸಿದೆ. ಕೊರೊನಾ ವೈರಸ್‌ನಿಂದ ಬೇಡಿಕೆ ಕುಸಿದಿದ್ದು, ತೈಲ ಉತ್ಪಾದನೆಯನ್ನು ಶೇ 4ರಷ್ಟು ತಗ್ಗಿಸಲು ಒಪೆಕ್ ಮುಂದಾಗಿತ್ತು. ಆದರೆ ಯಾರು ಎಷ್ಟು ಬೇಕಾದರೂ ತೈಲು ಉತ್ಪಾದಿಸಬಹುದು ಎಂದು ಪ್ರತಿಪಾದಿಸಿದ್ದ ರಷ್ಯಾ, ಈ ನಿರ್ಧಾರಕ್ಕೆ ಒಪ್ಪಿರಲಿಲ್ಲ. ರಷ್ಯಾಕ್ಕೆ ಪಾಠ ಕಲಿಸುವ ಉದ್ದೇಶದಿಂದ ಸೌದಿ ಅರೇಬಿಯಾವು ತೈಲ ದರ ಇಳಿಸಿದ್ದಲ್ಲದೇ, ಉತ್ಪಾದನೆಯನ್ನೂ ಹೆಚ್ಚಿಸಿದೆ. 

2016ರಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಅಮೆರಿಕದ ಶೇಲ್ ತೈಲ ಕಂಪನಿಗಳ ಉತ್ಪಾದನೆಗೆ ಪೆಟ್ಟು ಕೊಡುವ ಸಲುವಾಗಿ ಸೌದಿ, ರಷ್ಯಾ ಸೇರಿದಂತೆ ಇತರೆ ತೈಲ ಉತ್ಪಾದಕ ರಾಷ್ಟ್ರಗಳು ಯಥೇಚ್ಚ ಪ್ರಮಾಣದ ತೈಲವನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪೂರೈಸಿದ್ದವು. ಆಗ ರಷ್ಯಾವು ಸೌದಿ ಜತೆಗಿತ್ತು. ಈಗ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸದ ರಷ್ಯಾ ವಿರುದ್ಧ ಸೌದಿ ಸರ್ಕಾರವು ದರ ಸಮರದ ಅಸ್ತ್ರ ಪ್ರಯೋಗಿಸಿದೆ ಎನ್ನಲಾಗುತ್ತಿದೆ.  

ಕಡಿಮೆ ದರದಲ್ಲಿ ತೈಲ ಒದಗಿಸುವ ಸೌದಿಯ ಈ ನಿರ್ಧಾರದಿಂದ ಅಮೆರಿಕದ ಶೇಲ್ ತೈಲೋದ್ಯಮ ಹಾಗೂ ರಷ್ಯಾದ ತೈಲೋದ್ಯಮಕ್ಕೆ ಕೆಲಕಾಲ ಸಂಕಷ್ಟ ಇರಲಿದೆ. ಪ್ರತಿ ಬ್ಯಾರಲ್‌ಗೆ 40ರಿಂದ 50 ಡಾಲರ್‌ ದರ ಸಿಕ್ಕರೆ, ಎರಡೂ ದೇಶಗಳ  ಉದ್ಯಮಗಳು ಸುಧಾರಿಸಿಕೊಳ್ಳಬಹುದು. ಇಲ್ಲದಿದ್ದರೆ, ತೈಲ ಉತ್ಪಾದಿಸುವ ಹಲವು ಕಂಪನಿಗಳು ದಿವಾಳಿಯಾಗಬಹುದು ಎನ್ನಲಾಗಿದೆ. ಆದರೆ ಕಡಿಮೆ ದರದಲ್ಲಿ ತೈಲ ಉತ್ಪಾದಿಸುವ ಸೌದಿ ಸರ್ಕಾರದ ಬಹುತೇಕ ವೆಚ್ಚಗಳು ತೈಲ ಮಾರುಕಟ್ಟೆಯನ್ನೇ ಅವಲಂಬಿಸಿವೆ. ಹೀಗಾಗಿ ಹೆಚ್ಚು ದಿನಗಳ ಕಾಲ ಅದು ತೈಲ ಸಮರ ನಡೆಸಲಾರದು ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

ರಾಜ್ಯದಲ್ಲೂ ತೆರಿಗೆ ಬಿಸಿ
ಕರ್ನಾಟಕ ಸಹ ಪೆಟ್ರೋಲ್‌ ಮೇಲೆ ಅತ್ಯಧಿಕ ತೆರಿಗೆ ವಿಧಿಸುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. 2020–21ರ ಬಜೆಟ್‌ನಲ್ಲಿ ಈ ತೆರಿಗೆ ಪ್ರಮಾಣವನ್ನು ಇನ್ನಷ್ಟು ಏರಿಕೆ ಮಾಡಲಾಗಿದ್ದು ಈಗ ರಾಜ್ಯದ ಪೆಟ್ರೋಲ್‌ ಗ್ರಾಹಕರು ಶೇ 35ರಷ್ಟು ತೆರಿಗೆ ಭರಿಸಬೇಕಿದೆ. ಹಾಗೆಯೇ ಡೀಸೆಲ್‌ ಮೇಲಿನ ತೆರಿಗೆ ಪ್ರಮಾಣವನ್ನೂ ಶೇ 21ರಿಂದ ಶೇ 24ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಅತ್ಯಂತ ದುಬಾರಿ ದರದಲ್ಲಿ ಗ್ರಾಹಕರಿಗೆ ಪೆಟ್ರೋಲ್‌–ಡೀಸೆಲ್‌ ಮಾರಾಟ ಮಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ.

ರೂಪಾಯಿ ಚೇತರಿಕೆಗೆ ಅನುಕೂಲ
ಭಾರತವು ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. 2019ರ ಏಪ್ರಿಲ್‌ನಿಂದ 2020ರ ಜನವರಿ ವರೆಗಿನ ಅವಧಿಯಲ್ಲಿ 18.84 ಕೋಟಿ ಟನ್‌ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದು, ಅದಕ್ಕಾಗಿ ₹ 65 ಲಕ್ಷ ಕೋಟಿ ವ್ಯಯಿಸಿದೆ. ಈ ಅವಧಿಯಲ್ಲಿ ಭಾರತೀಯ ವಲಯದಲ್ಲಿ ಪ್ರತೀ ಬ್ಯಾರಲ್‌ಗೆ ಸರಾಸರಿ ದರ ₹ 4,744 ಆಗಿತ್ತು. ಮಾರ್ಚ್‌ 6ರಂದು ಭಾರತೀಯ ವಲಯದಲ್ಲಿ ಆ ದರ ₹ 3,552ಕ್ಕೆ ಕುಸಿಯಿತು. ಅದೇ ಮಾರ್ಚ್‌ 10ರಂದು ಆ ದರದಲ್ಲಿ ಇನ್ನಷ್ಟು ಕುಸಿತ ಕಂಡು ₹ 2,558ಕ್ಕೆ ಇಳಿಯಿತು. ಕೆಲವೇ ದಿನಗಳಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇ 28ರಷ್ಟು ಕಡಿಮೆಯಾಗಿದೆ. ತೈಲದ ವಹಿವಾಟಿನಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿ ಎಂದರೆ ಭಾರತೀಯ ಕಂಪನಿಗಳು ತಾವು ಆಮದು ಮಾಡಿಕೊಳ್ಳುವ ತೈಲದ ಬೆಲೆಯನ್ನು ಡಾಲರ್‌ ಲೆಕ್ಕದಲ್ಲೇ ತೆರಬೇಕು. ಇದರಿಂದ ರೂಪಾಯಿಯಿಂದ ಡಾಲರ್‌ಗೆ ವಿನಿಮಯದ ಪ್ರಮಾಣ ಹೆಚ್ಚಿ, ಅದಕ್ಕೆ ಬೇಡಿಕೆ ಸಹ ಹೆಚ್ಚಾಗಿತ್ತು. ಸದ್ಯ ತೈಲ ದರದಲ್ಲಿ ಭಾರಿ ಕುಸಿತ ಆಗಿರುವುದರಿಂದ ಅದನ್ನು ಖರೀದಿಸಲು ಬೇಕಾದ ಡಾಲರ್‌ಗಳ ಪ್ರಮಾಣ ಸಹ ತಗ್ಗಿದೆ. ಇದರಿಂದ ರೂಪಾಯಿ ಚೇತರಿಸಿಕೊಳ್ಳಲು ದಾರಿ ಸಿಕ್ಕಂತಾಗಿದೆ.

ಜಾಗತಿಕ ತೈಲ ದರ ಇಳಿಕೆಗೆ ಕಾರಣಗಳು
*ಕೋವಿಡ್ ಸೋಂಕಿನ ಕಾರಣ ಜಾಗತಿಕ ತೈಲ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಕುಸಿತ
* ತೈಲೋತ್ಪಾದನೆ ತಗ್ಗಿಸುವ ಸಂಬಂಧ ರಷ್ಯಾ, ಒಪೆಕ್ ದೇಶಗಳ ನಡುವೆ ಮೂಡದ ಒಮ್ಮತ
* ಅಮೆರಿಕ ಹಾಗೂ ರಷ್ಯಾದ ತೈಲ ಉದ್ಯಮಕ್ಕೆ ಹೊಡೆತ ನೀಡಲು ತೈಲ ದರ ಇಳಿಸಿದ ಸೌದಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು