ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಹನಿ ನೀರು, ಇಂಗದ ರೈತರ ಕಣ್ಣೀರು; ಹಸಿರು ಹೊದೆಯಲಿಲ್ಲ ಕಪ್ಪು ನೆಲ

ಬಾಗಲಕೋಟೆ ಜಿಲ್ಲೆ ರಾಮಥಾಳ ಹನಿ ನೀರಾವರಿ
Last Updated 28 ಮೇ 2022, 20:20 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಎಲ್ಲ ಹಾಳು ಮಾಡಿ ಹತ್ತಿ ಬಿತ್ಯಾರ.. ಏನೂ ಉಳಿದಿಲ್ರಿ. ಸರಿಯಾಗ ಜಾರಿ ಆಗಿದ್ರ ಬಾಳಾ ಚಂದ ಯೋಜನಾ ಇದು.. ಆದರೆ, ಎಲ್ಲ ತಿಂದ ಹಾಕ್ಯಾರ.. ಇನ್ನೂ ನಮ್ ಹೊಲಕ್ಕ ನೀರು ಹನಿದಿಲ್ಲ ನೋಡ್ರಿ.. ಬರೀ ದಾಖಲೇಗ ಯೋಜನಾ ತೋರಿಸ್ಯಾರ..’

ಇಸ್ರೇಲ್ ಮಾದರಿ ಶ್ರೇಯದೊಂದಿಗೆ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರದ ಗಮನ ಸೆಳೆದಿದ್ದ ಹುನಗುಂದ ತಾಲ್ಲೂಕಿನ ರಾಮಥಾಳ ಹನಿ ನೀರಾವರಿ ಯೋಜನೆ ವ್ಯಾಪ್ತಿಯ ಚಿತ್ತವಾಡಗಿಯ ರೈತ ಸಿದ್ದಣ್ಣ ಗದ್ದನ ಕೇರಿ ‘ಪ್ರಜಾವಾಣಿ’ಯೊಂದಿಗೆ ಹಂಚಿ ಕೊಂಡ ನೋವಿನ ಅಭಿವ್ಯಕ್ತಿ ಇದು.

ಚಿತ್ತವಾಡಗಿ ಮಾತ್ರವಲ್ಲ; ಯೋಜನೆ ವ್ಯಾಪ್ತಿಯ ಮರೋಳ, ಹುನಗುಂದ ಪಟ್ಟಣ, ಅಮರಾವತಿ, ವೀರಾಪುರ, ಬಿಂಜವಾಡಗಿ, ಘಟ್ಟಿಗನೂರು, ರಾಮವಾಡಗಿ, ಕಡಿವಾಲ, ಹಿರೇಬಾದವಾಡಗಿ ಸೇರಿ ಸಾವಿರಾರು ಎಕರೆ ಹೊಲಗಳಲ್ಲಿ ಬಳಕೆಯಾಗದ ಲ್ಯಾಟರಲ್‌ ಪೈಪ್‌ಗಳ ರಾಶಿಯೇ ಕಣ್ಣಿಗೆ ಬೀಳುತ್ತವೆ.

ಕಿತ್ತುಹೋದ ಸೋಲಾರ್ ‍‍ಪ್ಯಾನಲ್‌, ಪಾಳು ಬಿದ್ದ ನಿಯಂತ್ರಣ ಕೊಠಡಿ, ಇನ್ನೂ ಹಸಿರು ಕಾಣದ ಕಪ್ಪು ನೆಲ, ರೈತರ ಅಸಹಾಯಕತೆ, ಆಕ್ರೋಶವು ಯೋಜನೆಯ ವೈಫಲ್ಯದ ಕಥನ ಬಿಚ್ಚಿಡುತ್ತವೆ.

ಏನಿದು ಹನಿ ನೀರಾವರಿ?
ನಾರಾಯಣಪುರ ಜಲಾಶಯದ ಹಿನ್ನೀರನ್ನು ಮುಖ್ಯ ಕಾಲುವೆ ಮೂಲಕ ಜಾಕ್‌ವೆಲ್‌ಗೆ ತಂದು ಅಲ್ಲಿಂದ ಪೈಪ್‌ಲೈನ್‌ ಮೂಲಕ ರೈತರ ಹೊಲಗಳಿಗೆ ಹನಿಸುವುದು ಯೋಜನೆಯ ಉದ್ದೇಶ.

ಮಣ್ಣಿನಲ್ಲಿನ ತೇವಾಂಶ ಆಧರಿಸಿ, ಹೊಲದಲ್ಲಿನ ಬೆಳೆಗೆ ವೈಜ್ಞಾನಿಕವಾಗಿ ಅಗತ್ಯವಿರುವಷ್ಟು ನೀರನ್ನು ಸ್ವಯಂ ಚಾಲಿತವಾಗಿ ಹರಿಸಲಾಗುತ್ತದೆ. ಅದಕ್ಕಾಗಿ ಪ್ರತಿ 50 ಎಕರೆಗೆ ಒಂದು ಬ್ಲಾಕ್‌ ಗುರುತಿಸಿ ನಿಯಂತ್ರಣ ಕೊಠಡಿ ನಿರ್ಮಿಸಿ ಕಂಪ್ಯೂಟರ್ ಮೂಲಕ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ.

ತಾಂತ್ರಿಕತೆಯಂತೆ ಯೋಜನೆ ಕೆಲಸ ಬರೋಬ್ಬರಿ ಆಗಿದೆ. ಆದರೆ, ಅದೆಲ್ಲವೂ ಕಳಪೆ ಇರುವುದರಿಂದ ಪೈಪ್‌ಲೈನ್‌ಗೆ (ಡ್ರಿಪ್‌) ಅಗತ್ಯವಿರುವಷ್ಟು ಒತ್ತಡ (ಪ್ರೆಷರ್) ದೊರೆಯದೆ ಹೊಲಗಳಿಗೆ ನೀರು ಹನಿಯುತ್ತಿಲ್ಲ. ಕೆಲವು ಕಡೆ ನೀರಿನ ಒತ್ತಡಕ್ಕೆ ಪೈಪ್‌ಗಳು ಒಡೆದಿವೆ. ಹಲವು ಕಡೆ ಲ್ಯಾಟರಲ್‌ ಪೈಪ್‌ ಇದೆ ಎಂಬುದೇ ರೈತರಿಗೆ ಗೊತ್ತಿಲ್ಲ. ನೀರು ಬಾರದೇ ಬಳಕೆಯ ಅಗತ್ಯವೇ ಬಿದ್ದಿಲ್ಲ. ಕೆಲವು ಕಡೆ ಕಳ್ಳರ ಪಾಲಾಗಿವೆ.

‘ಒಂದೂವರೆ ಅಡಿ ಆಳಕ್ಕೆ ನೇಗಿಲು ಉಳುಮೆ ಮಾಡುವುದರಿಂದ ಪೈಪ್‌ಲೈನ್ ಕನಿಷ್ಠ 3 ಅಡಿ ಒಳಗೆ ಹಾಕಬೇಕಿತ್ತು. ಆದರೆ, ಗುತ್ತಿಗೆದಾರರು ರಾತ್ರೋ ರಾತ್ರಿ ಮೇಲೆಯೇ ಹಾಕಿ ಕೈ ತೊಳೆದುಕೊಂಡಿದ್ದಾರೆ. ಅವೆಲ್ಲಈಗ ಕಿತ್ತುಹೋಗಿವೆ.ಗ್ರಾಮಸ್ಥರು ಉರುವಲು ಕಟ್ಟಲು ಹಗ್ಗದ ರೀತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಿದ್ದಣ್ಣ ಗದ್ದನಕೇರಿ ಹೇಳುತ್ತಾರೆ.

‘ವಾಸ್ತವವಾಗಿ 24 ಸಾವಿರ ಹೆಕ್ಟೇರ್‌ಗೆ ನೀರು ಹನಿಯಬೇಕಿತ್ತು. ಸರಿಯಾಗಿ ಸಾವಿರಎಕರೆಗೂ ಹಾಯ್ದಿಲ್ಲ. ಎನ್‌ಜಿಒಗಳ ಬಳಸಿ ಅಲ್ಲಲ್ಲಿ ಒಂದಷ್ಟು ಮಾದರಿ ತಾಕು ನಿರ್ಮಿಸಿದ್ದಾರೆ. ಹೊರಗಿನವರನ್ನು ಕರೆತಂದು ಅದನ್ನೇ ತೋರಿಸಿ ಯೋಜನೆ ಯಶಸ್ವಿಯಾಗಿದೆ ಎಂದು ಬಿಂಬಿಸಲಾಗುತ್ತಿದೆ‘ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆರೋಪಿಸುತ್ತಾರೆ.

‘ಭಾಗಿದಾರರಲ್ಲಿ (ರೈತರಲ್ಲಿ) ಜಾಗೃತಿ ಮೂಡಿಸಿಲ್ಲ. ಇದು ಯೋಜನೆ ವೈಫಲ್ಯಕ್ಕೆ ಕಾರಣ. ಅದನ್ನು ಸರಿಪಡಿಸಲು ಈಗ ಧಾರವಾಡದ ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆಗೆ (ವಾಲ್ಮಿ) ಹೊಣೆ ವಹಿಸಲಾಗಿದೆ. ಆದರೆ, ನೀರೇ ಇಲ್ಲದೆ ಯಾವ ಭಾಗಿದಾರಿಕೆ’ ಎಂದು ಪ್ರಶ್ನಿಸುತ್ತಾರೆ.

ಕೆಬಿಜೆಎನ್‌ಎಲ್‌ನಿಂದ ಅನುಷ್ಠಾನ..
ಬಚಾವತ್ ತೀರ್ಪಿನ ಅನ್ವಯ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ‘ಎ’ ಸ್ಕೀಮ್‌ನ ಅಡಿ 7.27 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿಕೊಳ್ಳಲು ಹನಿ ನೀರಾವರಿ ಯೋಜನೆಯನ್ನು ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಅನುಷ್ಠಾನಗೊಳಿಸಿದೆ. ಜೈನ್‌ ಇರಿಗೇಶನ್ ಸಿಸ್ಟಮ್‌ ಹಾಗೂ ನೆಟಾಫಿಮ್ ಸಂಸ್ಥೆಗಳು ಯೋಜನೆ ಪೂರ್ಣಗೊಳಿಸಿವೆ.

ಬಹಿರಂಗಗೊಳ್ಳದ ತನಿಖಾ ವರದಿ...
‘ಕಳಪೆ ಕಾಮಗಾರಿ ಕಾರಣ ನಮ್ಮಲ್ಲಿ ಹನಿ ನೀರಾವರಿ ಯೋಜನೆ ವಿಫಲಗೊಂಡಿದೆ’ ಎಂದು ಮೂರು ವರ್ಷಗಳ ಹಿಂದೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅಧಿವೇಶನದಲ್ಲಿ ದನಿ ಎತ್ತಿದ್ದರು.

ಸಂಬಂಧಿಸಿದ ಕಂಪನಿಗಳ ಕಪ್ಪುಪಟ್ಟಿಗೆ ಸೇರಿಸಿ ಎಂದು ಒತ್ತಾಯಿಸಿದ್ದರು. ಸರ್ಕಾರ ಆಗ ತನಿಖೆಗೆ ಅಧಿಕಾರಿಗಳ ತಂಡ ನೇಮಿಸಿತ್ತು. ವರದಿ ಇನ್ನೂ ಬಹಿರಂಗಗೊಂಡಿಲ್ಲ.

‘ಒಣ ಬೇಸಾಯದ ತೃಪ್ತಿ ಈಗಿಲ್ರಿ...’
‘ಒಣ ಬೇಸಾಯದಲ್ಲಿದ್ದ ತೃಪ್ತಿ ನಮಗೆ ಈ ಹನಿ ನೀರಾವರಿ ಬಂದ ಮೇಲೆ ಉಳಿದಿಲ್ರಿ’ ಎಂದು ಹುನಗುಂದದ ರೈತ ಮಹೇಶ ಬೆಳ್ಳಿಹಾಳ ಬೇಸರ ವ್ಯಕ್ತಪಡಿಸುತ್ತಾರೆ.

‘ಇವರು (ಸರ್ಕಾರ) ರೈತರ ಭಾವನೆ, ಬದುಕಿನ ಜೊತೆಗೆ ಚೆಲ್ಲಾಟವಾಡಿದ್ದಾರೆ. ಹನಿ ನೀರಾವರಿ ಹೆಸರಿಗಷ್ಟೇ ಆಯ್ತು.ಜಾಕ್‌ವೆಲ್‌ನಿಂದ 500 ಮೀಟರ್ ಅಂತರದಲ್ಲಿ ನಮ್ಮದು 19 ಎಕರೆ ಹೊಲ ಇದೆ. ಅಲ್ಲಿಗೆ ಇನ್ನೂ ಹನಿ ನೀರು ಹರಿದಿಲ್ಲ. ಆದರೂ ಪ್ರತಿ ಎಕರೆಗೆ ₹1,200 ನೀರಾವರಿ ಕಂದಾಯ ಈಗ ಕಟ್ಟಬೇಕು. ಸದನ ಸಮಿತಿ, ಲೋಕಾಯುಕ್ತರು, ಕೆಬಿಜೆಎನ್‌ಎಲ್‌ನವರು ಬಂದು ನಮ್ಮ ಅಹವಾಲು ಆಲಿಸಿದರು. ಇನ್ನೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಅಳಲು ತೋಡಿಕೊಂಡರು.

**

ಇದು ಪ್ರಾಯೋಗಿಕ ಯೋಜನೆ. ಏನು ತಪ್ಪು ಆಗಿದೆ, ಹೇಗೆ ಸರಿಪಡಿಸಬೇಕೆಂದು ಮೇಲಿನ ಹಂತದಲ್ಲಿ ಚರ್ಚೆ ಆಗುತ್ತಿದೆ. ಸರ್ಕಾರ ನೇಮಿಸಿದ್ದ ಟಾಸ್ಕ್‌ಫೋರ್ಸ್‌ನಿಂದ ತನಿಖೆ ಪ್ರಗತಿಯಲ್ಲಿದೆ.
-ರಾಜಾಭಕ್ಷ್ ಕಿತ್ತೂರು, ಎಇಇ, ಕೆಬಿಜೆಎನ್‌ಎಲ್, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT