ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು
ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು
Published 11 ಜೂನ್ 2023, 1:13 IST
Last Updated 11 ಜೂನ್ 2023, 1:13 IST
ಅಕ್ಷರ ಗಾತ್ರ

ಬೆಂಗಳೂರು: 2022ರ ಜುಲೈ ತಿಂಗಳ ಕೊನೆಯ ದಿನ. ಕುಣಿಗಲ್‌ ಸಮೀಪದ ತೆರೆದಕೊಪ್ಪ ಗ್ರಾಮದ ಗರ್ಭಿಣಿ ಪಲ್ಲವಿಗೆ ಹೆರಿಗೆ ನೋವು ಕಾಣಿಸಿತು. ತಕ್ಷಣವೇ ಮನೆಯವರು ಆಕೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಚಿಕಿತ್ಸೆ ಪ್ರಾರಂಭಿಸಿದರು. ಆಕೆ ಗಂಡು ಮಗುವಿಗೆ ಜನ್ಮವಿತ್ತಳು. ತಾಯಿ, ಮಗು ಚೆನ್ನಾಗಿಯೇ ಇದ್ದರು. ಇದಕ್ಕಿದ್ದಂತೆ ಆಕೆ ರಕ್ತಸ್ರಾವದಿಂದ ನಿತ್ರಾಣಗೊಂಡಳು.

ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಬೆಂಗಳೂರಿನ ಯಾವುದಾದರೊಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊ ಯ್ಯಲು ವೈದ್ಯರು ಶಿಫಾರಸು ಮಾಡಿದರು. ಕುಟುಂಬಸ್ಥರು ಅಲ್ಲಿಗೂ ಕರೆದೊಯ್ಯಲು ಮುಂದಾದರು. ಆದರೆ, ಆ ವೇಳೆಗಾಗಲೇ ಎಳೆ ಕುಡಿಯನ್ನು ಆಕೆ ಅಗಲಿದಳು.

ಕುಣಿಗಲ್‌ ಆಸ್ಪತ್ರೆಗೆ ಬಂದ ಕುಟುಂಬ ಸ್ಥರು ವೈದ್ಯರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿರುವುದೇ ಸಾವಿಗೆ ಕಾರಣ ಎಂದು ಪ್ರತಿಭಟನೆಗೆ ಇಳಿದರು. ಅವರ ಹೋರಾಟಕ್ಕೆ ರಾಜಕೀಯ ಮುಖಂಡರು ಕೈಜೋಡಿಸಿದರು. ಸ್ಥಳಕ್ಕೆ ಬಂದ ಶಾಸಕರು ಸಹ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ ಎಂದು ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿದರು.

ಹಾಗಿದ್ದರೆ ಪಲ್ಲವಿ ಪ್ರಸವ ಪೂರ್ವದಲ್ಲಿ ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲವೇ, ಆಕೆ ಅಸುನೀಗಿದ್ದೇಕೆ? ಈ ಸಾವನ್ನು ಕೆದಕುತ್ತಾ ಹೋದರೆ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಸುತ್ತಿಕೊಂಡಿರುವ ಅವ್ಯವಸ್ಥೆಯ ಸುಳಿಗಳು ಬಿಚ್ಚಿಕೊಳ್ಳುತ್ತವೆ. ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೌಲಭ್ಯದ ಕೊರತೆಯಿಂದ ನರಳುತ್ತಿರುವುದು ಎದ್ದು ಕಾಣುತ್ತದೆ.

ಹೆಣ್ಣಿನ ಚೊಚ್ಚಿಲ ತಾಯ್ತನ ಆಕೆಯ ಬದುಕಿನ ಬಹುಮುಖ್ಯ ಘಟ್ಟ. ಆದರೆ, ಅಸುರಕ್ಷಿತ ಹೆರಿಗೆ, ತರಬೇತಿ ರಹಿತ ಶುಶ್ರೂಷೆಯು ಮಹಿಳೆಯರ ಬದುಕನ್ನು ಕಸಿದುಕೊಳ್ಳುತ್ತಿದೆ. ಇಂದಿಗೂ ಸುರಕ್ಷಿತ ಹೆರಿಗೆ ಎಂಬುದು ಬಡ ಕುಟುಂಬಗಳ ಪಾಲಿಗೆ ಗಗನಕುಸುಮವಾಗಿದೆ. ಪ್ರಸವದ ವೇಳೆ ತಾಯಂದಿರೇಕೆ ಸಾಯುತ್ತಾರೆ? ಇದಕ್ಕೆ ಮೊದಲ ಕಾರಣ ಅತಿಯಾದ ರಕ್ತಸ್ತಾವ. ಪ್ರಸವಪೂರ್ವ ಹಾಗೂ ನಂತರದ ಅವಧಿಯಲ್ಲಿ ಅವರು ಮೃತ ಪಡಲು ರಕ್ತಹೀನತೆಯೇ ಬಹುಮುಖ್ಯ ಕಾರಣವಾಗಿದೆ. ಶೇ 75ರಷ್ಟು ಸಾವು ಇದೇ ಕಾರಣಕ್ಕೆ ಸಂಭವಿಸುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ರಕ್ತಹೀನತೆ:
ರಕ್ತಹೀನತೆಯು ಗರ್ಭಿಣಿ ಯರಲ್ಲಿ ನಿಶ್ಯಕ್ತಿ ಉಂಟು ಮಾಡಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಸುಲಭವಾಗಿ ತಡೆಗಟ್ಟ ಬಹುದಾದ ಸಮಸ್ಯೆ ಇದು. ಆದರೆ, ಇದನ್ನು ತಡೆಗಟ್ಟಲು ಸರ್ಕಾರ ಜಾರಿ ಗೊಳಿಸಿರುವ ಯೋಜನೆಗಳ ಅನುಷ್ಠಾನ ದಲ್ಲಿನ ವೈಫಲ್ಯ ಎದ್ದು ಕಾಣುತ್ತದೆ.

ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು, ಕಿಶೋರಿ ಯರ ಸಂಖ್ಯೆ ಹೆಚ್ಚಿದೆ. ಇದಕ್ಕೆ 2019–20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ–ಅಂಶಗಳು ಕನ್ನಡಿ ಹಿಡಿಯುತ್ತವೆ. ರಕ್ತಹೀನತೆಯಿಂದ ಬಳಲುತ್ತಿರುವ (15–49 ವರ್ಷದೊಳಗೆ ಗರ್ಭಿಣಿಯರು) ಮಹಿಳೆಯರ ಪ್ರಮಾಣ ನಗರ ಪ್ರದೇಶದಲ್ಲಿ ಶೇ 37.3ರಷ್ಟಿದ್ದರೆ; ಗ್ರಾಮೀಣ ಪ್ರದೇಶದಲ್ಲಿ ಶೇ 50.6ರಷ್ಟಿದೆ.

ಇಂದಿಗೂ ಗ್ರಾಮೀಣ ಕುಟುಂಬ ಗಳಲ್ಲಿ ಸೊಸೆಯ ಆಹಾರ ಕಟ್ಟಕಡೆಯ ಆದ್ಯತೆಯಾಗಿದೆ. ಕುಟುಂಬದ ಸದಸ್ಯರು ಊಟ ಮಾಡಿ ಉಳಿದ ಆಹಾರವನ್ನು ಸೇವಿಸುವಂತಹ ದಯನೀಯ ಸ್ಥಿತಿ ಆಕೆ ಯದ್ದು. ಮೊದಲೇ ಅಪೌಷ್ಟಿಕತೆಯಿಂದ ಬಳಲುವ ಆಕೆಯು ಪೌಷ್ಟಿಕ ಆಹಾರ ಇಲ್ಲದೆ ಬಹುಬೇಗ ರಕ್ತಹೀನತೆಗೆ ತುತ್ತಾಗುತ್ತಾಳೆ.

ಇದೇ ಕಾರಣದಿಂದ ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ‘ಮಾತೃಪೂರ್ಣ’ ಯೋಜನೆ ಜಾರಿಗೊಳಿಸಿದೆ. ಆದರೆ, ಹಲವೆಡೆ ಇದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬ ಆರೋಪ ಇದೆ. ಗರ್ಭಿಣಿಯರು ಮಧ್ಯಾಹ್ನ ಅಂಗನವಾಡಿ ಕೇಂದ್ರಕ್ಕೆ ಬಂದರೆ ಮಾತ್ರ ಊಟ ನೀಡಲಾಗುತ್ತದೆ. ಆದರೆ, ಕೆಲವೆಡೆ ಇದಕ್ಕೆ ಅವರು ಒಪ್ಪುತ್ತಿಲ್ಲ. ಕೋವಿಡ್‌ ವೇಳೆ ಮನೆಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿತ್ತು. ಹಾಗೆಯೇ ಮುಂದುವರಿಸಿ ಎಂದು ಒತ್ತಾಯ ಕೇಳಿಬರುತ್ತಿದೆ.

ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು
‘ಮಧಾಹ್ನದ ಒಂದೊತ್ತಿನ ಊಟಕ್ಕೆ ಕೂಲಿ ಕೆಲಸ ಅಥವಾ ಮನೆಗೆಲಸ ಬಿಟ್ಟು ಅಂಗನವಾಡಿಗೆ ಹೋಗಬೇಕಾ? ನಮಗೆ ದಿನಕ್ಕೆ ಕೂಲಿ ₹200 ಸಿಗುತ್ತದೆ. ಅದಕ್ಕೆ ಮನೆಗೆ ಆಹಾರ ಧಾನ್ಯದ ಕಿಟ್ ವಿತರಿಸಿದರೆ ಸೂಕ್ತ’ ಎನ್ನುತ್ತಾರೆ ಕಲಬುರಗಿ ಜಿಲ್ಲೆಯ ನರಸಮ್ಮ.

ರಕ್ತಹೀನತೆ ಸಮಸ್ಯೆ ನಿವಾರಣೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಹೆರಿಗೆಗೂ ಮೂರು ತಿಂಗಳು ಮೊದಲೇ ಆಶಾ ಕಾರ್ಯಕರ್ತೆಯರ ಮೂಲಕ‌ ನಿಯಮಿತವಾಗಿ ನೀಡಿದರೆ ಗರ್ಭಿಣಿಯರನ್ನು ಸಾವಿನ ದವಡೆಯಿಂದ ತಪ‍್ಪಿಸಬಹುದು. ಆದರೆ, ಬಹಳಷ್ಟು ಗರ್ಭಿಣಿಯರು ಮಾತ್ರೆಗಳನ್ನು ನುಂಗದೆ ಹಿತ್ತಲಿಗೆ ಎಸೆದು ಬಿಡುವ ಪ್ರಸಂಗವೇ ಹೆಚ್ಚಿದೆ ಎನ್ನುವ ಆರೋಪ ವ್ಯಾಪಕವಾಗಿದೆ.

‘ಗರ್ಭಿಣಿಯರು ಹಿರಿಯರ ಮಾತಿಗೆ ಕಟ್ಟು ಬೀಳುತ್ತಾರೆ. ಆರೋಗ್ಯ ರಕ್ಷಣೆಯ ಕ್ರಮ, ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದರೆ ಕೇಳುವ ತಾಳ್ಮೆ ಅವರಲಿಲ್ಲ. ಎಲ್ಲವೂ ಗೊತ್ತು ಎನ್ನುವ ರೀತಿ ವರ್ತಿಸುತ್ತಾರೆ. ಹಿಂದಿನ ಕಾಲದ ನಂಬಿಕೆಗಳಿಗೆ ಕಟ್ಟು ಬೀಳುವವರೂ ಇದ್ದಾರೆ’ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರು.

ಸಾಂಸ್ಥಿಕ ಹೆರಿಗೆ ಹೆಚ್ಚಳ:
ತಾಯಂದಿರ ಸಾವು ತಪ್ಪಿಸಲು ಸರ್ಕಾರವು ಒಂದು ದಶಕದ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಒತ್ತು ನೀಡಿದೆ.

ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಾವಸ್ಥೆ, ಹೆರಿಗೆ ಹಾಗೂ ಬಾಣಂತಿಯರ ಆರೋಗ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಸಾಂಸ್ಥಿಕ ಹೆರಿಗೆಗಳ ಸಂಖ್ಯೆಯೇನೊ ಹೆಚ್ಚಿದೆ. ಆದರೆ, ತಾಯಂದಿರ ಸಾವಿನ ಸಂಖ್ಯೆ ಮಾತ್ರ ತಗ್ಗಿಲ್ಲ.

ಮತ್ತೊಂದು ಸಮಸ್ಯೆ:
ಅಧಿಕ ರಕ್ತದೊತ್ತಡವು ತಾಯಂದಿರನ್ನು ಕೊಲ್ಲುವ ಮತ್ತೊಂದು ಸಮಸ್ಯೆ. ಗರ್ಭಧಾರಣೆಯ ಮೂರನೇ ಮಾಸಿಕ ಹಾಗೂ ಹೆರಿಗೆ ನಂತರ ಮೊದಲ 24 ಗಂಟೆಗಳಲ್ಲಿ ಕಂಡುಬರುವ ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಮಾರಕ. ಇದನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ಉಪ್ಪಿನಾಂಶ ಹೆಚ್ಚಾಗಿ ತಾಯಿಯನ್ನು ಮೃತ್ಯುಕೂಪಕ್ಕೆ ದೂಡುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಗರ್ಭಿಣಿಯರು ನಿಯಮಿತವಾಗಿ ತಪಾಸಣೆಯನ್ನೇ ಮಾಡಿಸುವುದಿಲ್ಲ ಎಂಬುದು ವಿಪರ್ಯಾಸ.
ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು

‘ಮೂರು ತಿಂಗಳ ಗರ್ಭಿಣಿಯಾಗಿದ್ದಾಗಿನಿಂದ ಕಡ್ಡಾಯವಾಗಿ ತಾಯಿಯ ಆರೋಗ್ಯ ತಪಾಸಣೆ ಮಾಡಿಸಬೇಕು. ಕಡಿಮೆ ಎತ್ತರವುಳ್ಳವರು, ಶಸ್ತ್ರಚಿಕಿತ್ಸೆಗೆ ಒಳಗಾದವರು, ಥೈರಾಯ್ಡ್, ಮಧುಮೇಹ, ರಕ್ತದೊತ್ತಡದಂಥ ಆರೋಗ್ಯ ಸಮಸ್ಯೆ ಉಳ್ಳವರು ತೀವ್ರ ನಿಗಾವಹಿಸಬೇಕು’ ಎಂದು ಸಲಹೆ ನೀಡುತ್ತಾರೆ ಹಾಸನದ ಡಿಎಚ್‌ಒ ಡಾ.ಶಿವಸ್ವಾಮಿ.

ಕೌಟುಂಬಿಕ ಮೌಢ್ಯಗಳೂ ತಾಯಂದಿರ ಮರಣಕ್ಕೆ ಕಾರಣವಾಗುತ್ತಿವೆ. ಚಿಕ್ಕವಯಸ್ಸಿನಲ್ಲೇ ಹೆಣ್ಣುಮಕ್ಕಳಿಗೆ ಬಹುಬೇಗ ಮದುವೆ ಮಾಡಿಸಲಾಗುತ್ತಿದೆ. ಗಂಡು ಮಗು ಜನಿಸಲಿಯೆಂದು ಗಂಡನ ಮನೆಯವರು ಒತ್ತಾಯಿಸುತ್ತಾರೆ. ಹೀಗಾಗಿ, ನಾಲ್ಕು ಅಥವಾ ಐದು ಮಕ್ಕಳು ಜನಿಸುತ್ತವೆ. ಇದರಿಂದ ಮಹಿಳೆಯರ ಆರೋಗ್ಯ ಕ್ಷೀಣಿಸುತ್ತದೆ. ಅದರಲ್ಲೂ ಕೂಲಿ  ಮಾಡುವ ಮಹಿಳೆಗೆ ಸರಿಯಾಗಿ ಆರೋಗ್ಯ ರಕ್ಷಿಸಿಕೊಳ್ಳಲು ಆಗುವುದಿಲ್ಲ.

ಬಾಲ್ಯವಿವಾಹವು ತಾಯಂದಿರ ಸಾವು ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ. ಈ ಸಮೀಕ್ಷೆ ಅನ್ವಯ ಕರ್ನಾಟಕದಲ್ಲಿ 15–19 ವರ್ಷದೊಳಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡುವ ಪ್ರಮಾಣ ನಗರ ಪ್ರದೇಶದಲ್ಲಿ ಶೇ 3.4ರಷ್ಟಿದ್ದರೆ; ಗ್ರಾಮೀಣ ಪ್ರದೇಶದಲ್ಲಿ ಶೇ 6.6ರಷ್ಟಿದೆ.

ಭ್ರಷ್ಟಾಚಾರ ಉಲ್ಬಣ
ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎನ್ನುವ ಆರೋಪ ವ್ಯಾಪಕವಾಗಿದೆ. ಹಣ ನೀಡದಿದ್ದರೆ ಗರ್ಭಿಣಿಯರಿಗೆ ವೈದ್ಯಕೀಯ ಸೇವೆಯೇ ಸಿಗದಿರುವಂತಹ ವಾತಾವರಣವಿದೆ. ಕಳೆದ ವರ್ಷ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಗಂಡು ಶಿಶುಗಳು ಮೃತಪಟ್ಟ ಘಟನೆ ಇದಕ್ಕೊಂದು ತಾಜಾ ಉದಾಹರಣೆ.

ತುಮಕೂರಿನ ಭಾರತಿನಗರದಲ್ಲಿ ವಾಸವಿದ್ದ ತಮಿಳುನಾಡಿನ ಮೂವತ್ತು ವರ್ಷದ ಕಸ್ತೂರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ನೆರೆಹೊರೆಯವರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಧಾರ್‌ ಕಾರ್ಡ್‌ ಮತ್ತು ತಾಯಿ ಕಾರ್ಡ್‌ ಇಲ್ಲವೆಂದು ವೈದ್ಯಕೀಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರ್ಲಕ್ಷ್ಯವಹಿಸಿದರು. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಆಕೆ ಮತ್ತು ಹೊಟ್ಟೆಯಲ್ಲಿದ್ದ ಶಿಶುಗಳು ಸಾವನ್ನಪ್ಪಿದವು. 

‘ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ನೀಡದಿದ್ದರೆ ವೈದ್ಯಕೀಯ ಸೇವೆ ಸಿಗುವುದಿಲ್ಲ. ಹಣ ಕೊಟ್ಟು ಸರ್ಕಾರಿ ಆಸ್ಪತ್ರೆಯತ್ತ ಯಾಕೆ ಹೋಗಬೇಕು ಎಂದು ಅನೇಕರು ಖಾಸಗಿಯತ್ತ ಮುಖ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡರೂ ಸಿಸೇರಿಯನ್‌ಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಸರ್ಕಾರಿ ವೈದ್ಯರೇ ಸೂಚಿಸುತ್ತಾರೆ. ಆ ವೈದ್ಯರೇ ಅಲ್ಲಿಗೆ ಹೋಗಿ ಸಿಸೇರಿಯನ್‌ ಮಾಡಿಸುತ್ತಾರೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ತುಮಕೂರಿನ ಆರೋಗ್ಯ ಕಾರ್ಯಕರ್ತರೊಬ್ಬರು.

ಗ್ರಾಮೀಣ‌ ಪ್ರದೇಶದ ಬಹಳಷ್ಟು ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಹೆರಿಗೆ ತಜ್ಞರು, ಅರಿವಳಿಕೆ ತಜ್ಞರು, ಶುಶ್ರೂಷ ಸಿಬ್ಬಂದಿಯ ಕೊರತೆಯಿದೆ. ಮತ್ತೊಂದೆಡೆ ‌ಸ್ಥಳೀಯ ರಾಜಕಾರಣದ ಒತ್ತಡ, ವೈದ್ಯರ ಮೇಲಿನ ಹಲ್ಲೆ, ಕಡಿಮೆ ಸಂಬಳ, ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಬೇಸತ್ತು ನುರಿತ ತಜ್ಞ ವೈದ್ಯರು ಸರ್ಕಾರಿ ಸೇವೆಗೆ ಬರಲು ಒಪ್ಪುತ್ತಿಲ್ಲ. ಇದು ಸಮಸ್ಯೆಯ ಇನ್ನೊಂದು ಮುಖ.

ಉತ್ತರ ಕರ್ನಾಟಕದಲ್ಲೇ ಹೆಚ್ಚು ಸಾವು
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ಧಾರವಾಡ, ತುಮಕೂರು ಜಿಲ್ಲೆಯಲ್ಲಿ ತಾಯಂದಿರ ಸಾವಿನ ಪ್ರಮಾಣ ಹೆಚ್ಚಿದೆ. ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಯಲ್ಲಿಯೂ ತಾಯಂದಿರ ಮರಣಕ್ಕೆ ಕಡಿವಾಣ ಬಿದ್ದಿಲ್ಲ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಿಜಿಸ್ಟರ್‌ ಜನರಲ್‌ ಆಫ್‌ ಇಂಡಿಯಾದ ಮಾದರಿ ನೋಂದಣಿ ವ್ಯವಸ್ಥೆಯ(ಎಸ್‌ಆರ್‌ಎಸ್‌) 2018–20ರ ವರದಿ ಪ್ರಕಾರ ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೊದಲ ಐದು ಸ್ಥಾನದಲ್ಲಿವೆ.  

ವಾರ್ಷಿಕ ಒಂದು‌ ಲಕ್ಷ ಹೆರಿಗೆಯಾಗುವ ರಾಜ್ಯಗಳಲ್ಲಷ್ಟೇ‌ ತಾಯಿ‌ ಮರಣ ದರ‌ದ ಈ ಸಮೀಕ್ಷೆ ನಡೆದಿದೆ. ದೇಶದ 19 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆದಿದ್ದು, ಕರ್ನಾಟಕ ಎಂಟರಿಂದ ಏಳನೇ ಸ್ಥಾನಕ್ಕೆ ಜಿಗಿದಿದೆ. ಆದರೆ, ದಕ್ಷಿಣ ಭಾರತದ ಈ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿಹೆಚ್ಚು ತಾಯಂದಿರ ಮರಣ ದಾಖಲಾಗುತ್ತಿದೆ.

ತಾಯಂದಿರ ಸಾವಿನ ಪ್ರಕರಣದ ತನಿಖೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಡಿ ಸಮಿತಿ ಇದೆ. ಬಹಳಷ್ಟು ಸಾವು ವೈದ್ಯರ ನಿರ್ಲಕ್ಷ್ಯದಿಂದಲೂ ಸಂಭವಿಸುತ್ತವೆ ಎನ್ನುವ ಆರೋಪವಿದೆ. ಆದರೆ, ಸಮಿತಿ ಮುಂದೆ ನಡೆಯುವ ವಿಚಾರಣೆ ವೇಳೆ ಈ ವಿಷಯ ಪ್ರಸ್ತಾಪವಾಗುವುದೇ ಇಲ್ಲ. ಸಾವಿಗೆ ರಕ್ತಹೀನತೆ, ರಕ್ತಸ್ರಾವ ಕಾರಣವೆಂದು ವೈದ್ಯಾಧಿಕಾರಿಗಳು ವರದಿ ಮಂಡಿಸಿ ಪ್ರಕರಣವನ್ನು ಮುಚ್ಚು ಹಾಕುತ್ತಾರೆ ಎನ್ನುವ ದೂರು ವ್ಯಾಪಕವಾಗಿದೆ. ಹಾಗಾಗಿ, ನ್ಯಾಯವು ಸಂತ್ರಸ್ತ ಕುಟುಂಬಗಳಿಗೆ ಕನ್ನಡಿಯೊಳಗಿನ ಗಂಟಾಗಿದೆ. 

ಶಿಶು ಮರಣ ಪ್ರಮಾಣ:

ಒಂದು ವರ್ಷದಲ್ಲಿನ ಜೀವಂತ ಜನನದಲ್ಲಿ ಸಂಭವಿಸಬಹುದಾದ ಶಿಶುಗಳ ಮರಣವನ್ನು ‘ಶಿಶು ಮರಣ ದರ’ವೆಂದು ಕರೆಯಲಾಗುತ್ತದೆ. 2020ರ ಎಸ್‌ಆರ್‌ಎಸ್‌ ವರದಿ ಅನ್ವಯ ಒಂದು ಸಾವಿರ ಶಿಶುಗಳ ಜನನದ ವೇಳೆ ಕರ್ನಾಟಕದಲ್ಲಿ 19 ಮಕ್ಕಳು ಮೃತಪಡುತ್ತಿದ್ದಾರೆ. ಕೇರಳದಲ್ಲಿ ಆರು ಮಕ್ಕಳಷ್ಟೇ ಮೃತಪಡುತ್ತಾರೆ. ರಾಜ್ಯದಲ್ಲಿ ಮಕ್ಕಳ ಸಾವಿನ ಸಂಖ್ಯೆಯನ್ನು ಒಂದಂಕಿಗೆ ಇಳಿಸುವ ಗುರಿ ಸರ್ಕಾರಿ ಆದೇಶದಲ್ಲಷ್ಟೇ ಉಳಿದಿದೆ.

ಮಕ್ಕಳ ಸಾವಿಗೆ ಅಪೌಷ್ಟಿಕತೆಯೇ ಬಹುಮುಖ್ಯ ಕಾರಣ. ತಾಯಿ ಅಪೌಷ್ಟಿಕತೆಗೆ ತುತ್ತಾದರೆ ಅದು ಆಕೆಯ ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವುದು ನಿಶ್ಚಿತ. ತಾಯಿಯ ರಕ್ತಸ್ರಾವ, ಶ್ವಾಸಕೋಶ ಬೆಳವಣಿಗೆ ಇಲ್ಲದಿರುವುದು, ಅವಧಿಪೂರ್ವ ಜನನ, ಅವಧಿ ಮೀರಿದ ಗಂಡಾಂತರ ಹೆರಿಗೆ, ಗರ್ಭಿಣಿಯರಲ್ಲಿ ಸೋಂಕಿನ ಕಾರಣಗಳಿಂದಲೂ ಶಿಶುಗಳು ಮೃತಪಡುತ್ತವೆ. 

ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು

ನವಜಾತ ಶಿಶು ಮತ್ತು ಐದು ವರ್ಷದೊಳಗಿನ ಶಿಶುಗಳ ಮರಣ ದರವನ್ನು ಕಡಿತಗೊಳಿಸಲು ಹಾಗೂ ಮಕ್ಕಳ ಆರೋಗ್ಯ ಸುಧಾರಿಸಲು ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬುದು ಜನರ ಆರೋಪ.

‘ಸರ್ಕಾರಿ ಆಸ್ಪತ್ರೆಗಳಲ್ಲಿನ ಭ್ರಷ್ಟಾಚಾರದಿಂದ ಬಡವರಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಬಹುತೇಕ ವೈದ್ಯರು ಖಾಸಗಿಯಲ್ಲಿ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳತ್ತ ಸೆಳೆಯುತ್ತಿದ್ದಾರೆ. ಸ್ಕ್ಯಾನಿಂಗ್‌, ಎಕ್ಸ್‌ರೇ ಸೌಲಭ್ಯಕ್ಕಾಗಿ ಖಾಸಗಿ ಕೇಂದ್ರಗಳ ಮೇಲೆ ಅವಲಂಬಿಸುವಂತಾಗಿದೆ. ಇದು ದಂಧೆಯ ರೂಪ ತಾಳಿದ್ದು ವೈದ್ಯರೇ ಕಮಿಷನ್‌ ಪಡೆದು ಖಾಸಗಿ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ’ ಎಂದು ದೂರುತ್ತಾರೆ ಮಳವಳ್ಳಿಯ ಜನವಾದಿ ಮಹಿಳಾ ಸಂಘಟನೆಯ ನಾಯಕಿ ದೇವಿ.

ವಿಶೇಷ ನವಜಾತ ಶಿಶು ಆರೈಕೆ ಘಟಕ, ನವಜಾತ ಶಿಶು ಸ್ಥಿರೀಕರಣ ಘಟಕ, ನವಜಾತ ಶಿಶು ಆರೈಕೆ ಕೇಂದ್ರ, ಮನೆ ಆಧಾರಿತ ಶಿಶು ಆರೈಕೆ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಶಿಶು ಮರಣ ಪರಿಶೀಲನೆ, ಕಾಂಗರೂ ಮದರ್‌ ಕೇರ್, ತಾಯಿ ಎದೆ ಹಾಲುಣಿಸುವ ಕೇಂದ್ರಗಳ ಸ್ಥಾಪನೆ, ನವಜಾತ ಮತ್ತು ಮಕ್ಕಳ ಕಾಯಿಲೆಗಳ ಸಮಗ್ರ ನಿರ್ವಹಣಾ ಕಾರ್ಯಕ್ರಮ, ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆಗೆ ಒತ್ತು ನೀಡಲಾಗಿದೆ. ಆದರೆ, ಇವುಗಳಲ್ಲಿ ಸಕಾಲದಲ್ಲಿ ಸೇವೆ ಸಿಗುತ್ತಿಲ್ಲ ಎಂಬುದು ಜನರ ದೂರು.

ಕೊಪ್ಪಳದ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶಿಶುಗಳ ಆರೈಕೆಯಲ್ಲಿ ತೊಡಗಿರುವ ದಾದಿ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳದ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶಿಶುಗಳ ಆರೈಕೆಯಲ್ಲಿ ತೊಡಗಿರುವ ದಾದಿ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರದಲ್ಲಿ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಆರೈಕೆ ಮಾಡುತ್ತಿರುವ ತಾಯಂದಿರು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರದಲ್ಲಿ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಆರೈಕೆ ಮಾಡುತ್ತಿರುವ ತಾಯಂದಿರು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಬಾಣಂತಿಯರು ಆರೋಗ್ಯ ತಪಾಸಣೆಗಾಗಿ ಸರತಿ ಸಾಲಿನಲ್ಲಿ ಕುಳಿತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಬಾಣಂತಿಯರು ಆರೋಗ್ಯ ತಪಾಸಣೆಗಾಗಿ ಸರತಿ ಸಾಲಿನಲ್ಲಿ ಕುಳಿತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಕುಗ್ರಾಮಗಳಲ್ಲಿ ವಾಸಿಸುವ ಕೆಲವು ಬುಡಕಟ್ಟು ಜನಾಂಗದವರು ಇನ್ನೂ ಸಾಂಪ್ರದಾಯಿಕ ಹೆರಿಗೆ ಪದ್ಧತಿ ಅನುಸರಿಸುತ್ತಿದ್ದರು. ಸತತ ಜಾಗೃತಿ ಮೂಲಕ ಈಗ ಅದು ನಿಂತಿದೆ
– ಡಾ.ಅನ್ನಪೂರ್ಣ ವಸ್ತ್ರದ್, ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ಕನ್ನಡ.
ತಾಯಂದಿರ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ವೈದ್ಯಕೀಯ ಸೌಕರ್ಯ ಹೆಚ್ಚಿದ್ದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞರು ಇದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಶಸ್ತ್ರಚಿಕಿತ್ಸಾ ಘಟಕಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಲಭಿಸಲಿದ್ದು ಮರಣ ಪ್ರಮಾಣ ಕಡಿಮೆಯಾಗಿದೆ
– ಡಾ.ಪ್ರಭುಲಿಂಗ‌ ಮಾನಕರ್ ಆರ್‌ಸಿಎಚ್‌ಒ ಅಧಿಕಾರಿ ಕಲಬುರಗಿ.
ತಾಯಂದಿರ ಮರಣ ದರ ಲೆಕ್ಕಾಚಾರ ಹೇಗೆ?
ಯಾವುದೇ ರಾಜ್ಯದ ಆರೋಗ್ಯದ ಮಾನದಂಡ ಅಳೆಯಲು ತಾಯಿ ಮತ್ತು ಶಿಶು ಮರಣವೇ ಅಳತೆಗೋಲು. ಸಂತಾನೋತ್ಪತ್ತಿ ವಯಸ್ಸಿನ ಒಟ್ಟು ಮಹಿಳೆಯರನ್ನು (ಪ್ರತಿ ಲಕ್ಷ ಜೀವಂತ ಜನನ) ಸಾವನ್ನಪ್ಪಿದ ತಾಯಂದಿರ ಪ್ರಮಾಣದಿಂದ ಭಾಗಿಸಿದಾಗ ಬರುವ ಭಾಗಲಬ್ದವನ್ನು ‘ತಾಯಂದಿರ ಮರಣ ದರ’ವೆಂದು ಕರೆಯುತ್ತಾರೆ.
ಸೋಲಿಗರಲ್ಲೂ ಕಡಿಮೆಯಾದ ಮನೆ ಹೆರಿಗೆ

  – ಸೂರ್ಯನಾರಾಯಣ ವಿ.

ಚಾಮರಾಜನಗರ: ಜಿಲ್ಲೆಯ ‌ಬುಡಕಟ್ಟು ಸೋಲಿಗ ಜನಾಂಗದಲ್ಲಿ ಹಿಂದೆಲ್ಲ ಸೂಲಗಿತ್ತಿಯರು‌ ಮನೆಯಲ್ಲೇ ಹೆರಿಗೆ ಮಾಡಿಸುತ್ತಿದ್ದರು. ಗರ್ಭಿಣಿಯರನ್ನು ಕುಕ್ಕರಗಾಲಿನಲ್ಲಿ‌ ಕೂರಿಸಿ ಹೆರಿಗೆ ಮಾಡಿಸುವ ವಿಶಿಷ್ಟ ಸಾಂಪ್ರದಾಯಿಕ ಪದ್ಧತಿ ಅದಾಗಿತ್ತು. ಈಗ ಸೋಲಿಗರಲ್ಲೂ ಮನೆ ಹೆರಿಗೆ ಅಪರೂಪವಾಗಿದೆ. ನಾಟಿ ವೈದ್ಯೆಯರು ಸೂಲಗಿತ್ತಿಯರೂ‌ ಕಾಣಸಿಗುತ್ತಿಲ್ಲ. ಸಮುದಾಯದಲ್ಲಿ ಯಾರೇ ಗರ್ಭಿಣಿಯಾದರೂ ಆಶಾ ಕಾರ್ಯಕರ್ತೆಯರು ಅವರ ವಿವರ ದಾಖಲಿಸಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸುವಂತೆ ತಿಳಿಹೇಳುತ್ತಾರೆ. ತಿಂಗಳು ತುಂಬಿದಾಗ ಆಸ್ಪತ್ರೆಗೆ ಕರೆತರಿಸುತ್ತಾರೆ. ‘ಗಿರಿಜನರು ಅದರಲ್ಲೂ ವಿಶೇಷವಾಗಿ ಸೋಲಿಗರಲ್ಲಿ ಮನೆ ಹೆರಿಗೆ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಹಾಗಿದ್ದರೂ ಕೆಲವೆಡೆ ಈಗಲೂ ಸೂಲಗಿತ್ತಿಯರು ಹೆರಿಗೆ ಮಾಡಿಸುತ್ತಾರೆ. ಅಂಥ ಸಂದರ್ಭದಲ್ಲಿ ತಾಯಿ ಶಿಶು ಸಾಯುವ ಸಾಧ್ಯತೆ ಇರುತ್ತದೆ. ಅಲ್ಲೊಂದು–ಇಲ್ಲೊಂದು ಅಂಥ ಪ್ರಕರಣ ನಡೆಯುತ್ತಿರುತ್ತದೆ. ಆಶಾ ಕಾರ್ಯಕರ್ತೆಯರ ಗಮನಕ್ಕೆ ಬಾರದ ಸಂದರ್ಭದಲ್ಲಿ ಮಾತ್ರ ಮನೆ ಹೆರಿಗೆ ಆಗುತ್ತದೆ. ಇಂತಹ ಪ್ರಕರಣ ಒಂದೋ ಎರಡೋ ಇರಬಹುದು' ಎಂದು ಹೇಳುತ್ತಾರೆ ಸೋಲಿಗ ಸಮುದಾಯದ ಮುಖಂಡರು. ಸೋಲಿಗರು ಹೆಚ್ಚು ವಾಸಿಸುವ ಬಿಳಿಗಿರಿರಂಗನಬೆಟ್ಟದಲ್ಲಿ ಹಿಂದೆ ಎಣ್ಣೆ ಸಿದ್ದಮ್ಮ ಎಂಬ ಸೂಲಗಿತ್ತಿ ಹೆರಿಗೆ ಮಾಡಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು. ಸುತ್ತಮುತ್ತಲಿನ ಪೋಡುಗಳ ಸಾವಿರಾರು ಗರ್ಭಿಣಿಯರಿಗೆ ಅವರು ಹೆರಿಗೆ ಮಾಡಿಸಿದ್ದರು. ನಂತರ ಅವರ ಮಗಳು ಜಡೆ ಮಾದಮ್ಮ ಇದರಲ್ಲಿ ಪರಿಣತಿ‌ ಸಾಧಿಸಿದ್ದರು. ಅವರ ನಿಧನದ ನಂತರ ಈಗ ಬೆಟ್ಟದಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವವರಿಲ್ಲ. ‘ನನ್ನ ಹೆರಿಗೆಯೂ ಮನೆಯಲ್ಲೇ ಆಗಿತ್ತು. ಕುಕ್ಕರಗಾಲಿನಲ್ಲಿ ಕುಳಿತು ಮಕ್ಕಳನ್ನು ಹೆತ್ತಿದ್ದೆ. ಈಗ ಮನೆಗಳಲ್ಲಿ ಹೆರಿಗೆ ಮಾಡುವುದು ಕಡಿಮೆಯಾಗಿದೆ. ಆಸ್ಪತ್ರೆಗೆ ಹೋಗುತ್ತೇವೆ. ಮನೆ ಹೆರಿಗೆಯಲ್ಲಿ ತಾಯಿ ಶಿಶುವಿನ ಪ್ರಾಣಕ್ಕೆ ಅಪಾಯ ಇರುವುದರಿಂದ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಬೇಕು ಎಂದು ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ. ಆಶಾ ಕಾರ್ಯಕರ್ತೆಯರು ಸಕ್ರಿಯರಾಗಿದ್ದು ಮನೆಗಳಲ್ಲಿ ಹೆರಿಗೆ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಸೋಲಿಗ ಮಹಿಳಾ ಸಂಘಟಕಿ ಕಾರೆಮಾಳ ಪುಟ್ಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT