ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: ‘ಪ್ರಪಾತ’ಕ್ಕೆ ಸರ್ಕಾರಿ ವಿವಿಗಳು
ಒಳನೋಟ: ‘ಪ್ರಪಾತ’ಕ್ಕೆ ಸರ್ಕಾರಿ ವಿವಿಗಳು
Published 9 ಡಿಸೆಂಬರ್ 2023, 23:40 IST
Last Updated 9 ಡಿಸೆಂಬರ್ 2023, 23:40 IST
ಅಕ್ಷರ ಗಾತ್ರ

ಬೆಂಗಳೂರು: ‘ಅಗತ್ಯ ಹಣಕಾಸಿನ ನೆರವು, ಮೂಲ ಸೌಕರ್ಯ ಕಲ್ಪಿಸದೇ ರಾಜಕೀಯ ಲಾಭಕ್ಕಾಗಿ ಹಳೆಯ ವಿಶ್ವವಿದ್ಯಾಲಯಗಳನ್ನು ಮನಸ್ಸಿಗೆ ಬಂದಂತೆ ವಿಭಜಿಸಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಪರಿಪಾಠ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ’

–ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರ ಈ ಮಾತು ರಾಜ್ಯದ ವಿಶ್ವವಿದ್ಯಾಲಯಗಳ ಪ್ರಸ್ತುತ ಸ್ಥಿತಿಗತಿ, ಸಾಗುತ್ತಿರುವ ಅಧೋಗತಿಯ ದಾರಿಗೆ ಹಿಡಿದ ಕನ್ನಡಿ. ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಕಳೆದ ಏಳು ವರ್ಷಗಳಲ್ಲಿ ನೀಡಿದ ಅನುದಾನ ಗಮನಿಸಿದರೆ ಸಾಕು ವಿಶ್ವವಿದ್ಯಾಲಯಗಳ ಆರ್ಥಿಕ ದುಸ್ಥಿತಿಯನ್ನು ಸುಲಭವಾಗಿ ಅಳೆಯಬಹುದು. ಒಂದು ಕಡೆ ಆದಾಯ ಹಾಗೂ ಮತ್ತೊಂದು ಕಡೆ ಅನುದಾನದ ಕೊರತೆಯಿಂದ ನೆಲಕಚ್ಚುತ್ತಿದ್ದರೆ, ಮಗದೊಂದು ಕಡೆ ಖಾಸಗಿ ವಿಶ್ವವಿದ್ಯಾಲಯಗಳ ಪೈಪೋಟಿ ಎದುರಿಸಲಾಗದೆ ಹಲವು ದಶಕಗಳಿಂದ ಶಿಕ್ಷಣ ಕ್ರಾಂತಿಯನ್ನೇ ಸೃಷ್ಟಿಸಿದ್ದ ಹಳೆಯ ವಿಶ್ವವಿದ್ಯಾಲಯಗಳೂ ಕೈಚೆಲ್ಲಿ ಕುಳಿತಿವೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿಗೆ ಮಂಡಿಸಿದ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ನೀಡಿರುವ ಅನುದಾನ ಬಜೆಟ್‌ನ ಶೇ 1.76 ಮಾತ್ರ. 2016–17ರ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಶೇ 6 ರಷ್ಟು ಹಣ ನೀಡಲಾಗಿತ್ತು. ಅದು ಪ್ರತಿ ವರ್ಷ ಇಳಿಮುಖವಾಗುತ್ತಾ ಬಂದಿದೆ. ಕಳೆದ ವರ್ಷ ಬಜೆಟ್‌ನ ಶೇ 3.5 ಅನುದಾನವಿತ್ತು. ಈ ಹಣ ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಬೋಧಕ, ಬೋಧಕೇತರು ಹಾಗೂ ನಿವೃತ್ತರ ಪಿಂಚಣಿಗಷ್ಟೇ ಸಾಲುತ್ತದೆ. ಶೈಕ್ಷಣಿಕ–ಮೂಲ ಸೌಕರ್ಯ ಅಭಿವೃದ್ಧಿಗೆ ನಯಾಪೈಸೆಯೂ ಇಲ್ಲವಾಗಿದೆ. 

ವಿಶ್ವವಿದ್ಯಾಲಯಗಳ ಕಾಯಂ ಬೋಧಕ ಹಾಗೂ ಬೋಧಕೇತರರ ವೇತನವಷ್ಟೇ ಸರ್ಕಾರದಿಂದ ಸಿಗುತ್ತಿದೆ. ಹಳೆಯ ವಿಶ್ವವಿದ್ಯಾಲಯಗಳಿಗೆ ಹೊರೆಯಾಗಿರುವ ನಿವೃತ್ತರ ಪಿಂಚಣಿ ಮೊತ್ತದಲ್ಲಿ ಪ್ರತಿ ವರ್ಷ ಶೇ 25ರಿಂದ 50ರಷ್ಟು ಬಿಡುಗಡೆ ಮಾಡಲಾಗುತ್ತದೆ. ವೇತನ, ಪಿಂಚಣಿ, ಮೂಲಸೌಕರ್ಯ, ಶೈಕ್ಷಣಿಕ ಅಭಿವೃದ್ಧಿ ಗಾಗಿ ಕಳೆದ ಏಳು ವರ್ಷಗಳಲ್ಲಿ ವಿವಿಧ ವಿಶ್ವವಿದ್ಯಾಲಯಗಳು ಬೇಡಿಕೆ ಸಲ್ಲಿಸಿದ್ದು ₹10 ಸಾವಿರ ಕೋಟಿಗೂ ಹೆಚ್ಚು. ಸರ್ಕಾರ ನೀಡಿದ ನೆರವು ₹2,070.06 ಕೋಟಿ ಮಾತ್ರ. 

ದಶಕಗಳಿಂದ ನೇಮಕಾತಿ ಪ್ರಕ್ರಿಯೆ ಗಳು ನಡೆಯದ ಕಾರಣ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ವಿವಿಧ ಕಾಲೇಜುಗಳ ಸಂಯೋಜನೆ. ಪರೀಕ್ಷೆ, ಇತರೆ ಶುಲ್ಕಗಳಿಂದ ಬರುತ್ತಿರುವ ಆದಾಯ‌ವು ಪಿಂಚಣಿ, ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರ ವೇತನ–ಭತ್ಯೆ ಭರಿಸು ವುದಕ್ಕೆ ಸಾಲುತ್ತಿಲ್ಲ. ಹಳೆಯ ವಿಶ್ವವಿದ್ಯಾಲಯಗಳಿಗೆ ನಿವೃತ್ತರ ಪಿಂಚಣಿಗಳ ಭಾರ ಹೆಚ್ಚಾಗಿದೆ. ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯಗಳ ಸ್ಥಾಪನೆ ಪರಿಣಾಮ ಹಳೇ ವಿಶ್ವವಿದ್ಯಾಲಯಗಳಿಗೆ ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿ, ಆದಾಯದ ಕೊರತೆ ಕಾಡುತ್ತಿದೆ. ಅನು ದಾನ ನಿರೀಕ್ಷೆ ಯಂತೆ ದೊರೆಯದೆ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಆವಶ್ಯಕತೆ ಇರುವ ಕಡೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಅದರ ಶೇ 25ರಷ್ಟೂ ನೆರವೂ ಸಿಗುತ್ತಿಲ್ಲ. ಹೊಸ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನವನ್ನೇ ಸರ್ಕಾರ ನೀಡಿಲ್ಲ. ಹಾಗಾಗಿ, ಶೇ 90ರಷ್ಟು ವಿಶ್ವವಿದ್ಯಾಲಯಗಳು ಆರ್ಥಿಕಬಿಕ್ಕಟ್ಟಿಗೆ ಸಿಲುಕಿವೆ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನುಗಾರಿಕೆ ವಿಶ್ವವಿದ್ಯಾಲಯ ಆರಂಭಕ್ಕೆ ಇರುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಅಥವಾ ಆಡಳಿತ ವಿಭಾಗದ ಸದಸ್ಯರನ್ನು ಮಾತನಾಡಿಸಿದರೂ ತಮ್ಮ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಬಾಗಿಲುಮುಚ್ಚುವ ಸ್ಥಿತಿ ಎದುರಿಸುತ್ತಿದ್ದೇವೆ ಎನ್ನುವ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಬೆಂಗಳೂರು, ಶಿವಮೊಗ್ಗ, ಮಂಗಳೂರು ವಿಭಾಗದವರೆಗೆ ಕಾರ್ಯವ್ಯಾಪ್ತಿ ಇದ್ದ ಶತಮಾನದ ಮೈಸೂರು ವಿಶ್ವವಿದ್ಯಾಲಯವೀಗ ಮೈಸೂರಿಗಷ್ಟೇ ಸೀಮಿತಗೊಂಡಿದೆ. ಪಿಂಚಣಿಗೆ ಸರ್ಕಾರದಿಂದ ಬರುವ ಹಣ ಕಡಿಮೆಯಾಗಿದ್ದು, ವಾರ್ಷಿಕ ₹ 50 ಕೋಟಿ ಕೊರತೆಯನ್ನು ಈ ವಿಶ್ವವಿದ್ಯಾಲಯ ಎದುರಿಸುತ್ತಿದೆ. ಸಂಪನ್ಮೂಲದ ಹರಿವೂ ಕಡಿಮೆಯಾಗಿದೆ. ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಾಲೇಜುಗಳು ಮೈಸೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟಿವೆ. ಕಟ್ಟಡಗಳ ನಿರ್ವಹಣೆಯೇ ದುಬಾರಿಯಾಗಿ ಪರಿಣಮಿಸಿ, ಅತಿಥಿ ಉಪನ್ಯಾಸಕರಿಂದಲೇ ಪಾಠ, ಪ್ರವಚನ ನಡೆಯುತ್ತಿದೆ.

‘2007ರಿಂದಲೂ ಬೋಧಕ ಸಿಬ್ಬಂದಿ ನೇಮಕಾತಿ ‍ನಡೆದಿಲ್ಲ. ನಿವೃತ್ತರ ಸಂಖ್ಯೆಯೂ ಹೆಚ್ಚಿದೆ. ನೇಮಕಾತಿಗೆ ಸರ್ಕಾರ ಅನುಮತಿಯನ್ನೇ ನೀಡುತ್ತಿಲ್ಲ. 2019–20ರಲ್ಲಿ ನೇಮಕಾತಿ ನಡೆಯಬೇಕಿತ್ತು. ಆದರೆ ಕೋವಿಡ್‌ ಹಾಗೂ ಆರ್ಥಿಕ ಕಾರಣಗಳಿಗಾಗಿ ಮತ್ತೆ ವಿಷಯ ಹಿನ್ನೆಲೆಗೆ ಸರಿಯಿತು’ ಎಂದು ವಿ.ವಿಯ ಕಠಿಣ ಸ್ಥಿತಿ ಬಿಚ್ಚಿಟ್ಟರು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌.

ಅಮೃತ ವರ್ಷಾಚರಣೆ ಹೊಸ್ತಿಲಲ್ಲಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತನ್ನ ನಿವೃತ್ತರಿಗೆ ಪಿಂಚಣಿ ನೀಡಲೂ ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಿಶ್ವವಿದ್ಯಾಲಯದ 578  ಬೋಧಕ ಹುದ್ದೆಗಳಲ್ಲಿ 359 ಹುದ್ದೆಗಳು ಖಾಲಿ ಇವೆ. ಬಹುತೇಕ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರೇ ಹೆಚ್ಚಿದ್ದಾರೆ. ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಹೊರತಾಗಿ ವಿಶ್ವವಿದ್ಯಾಲಯಕ್ಕೆ ಯಾವ ಆದಾಯವೂ ಇಲ್ಲ ಎನ್ನುವುದು ವಿಶ್ವವಿದ್ಯಾಲಯದ ಅಧಿಕಾರಿಗಳ ಅಳಲು.

ಆರು ದಶಕ ಪೂರೈಸಿರುವ ಬೆಂಗಳೂರು ವಿಶ್ವವಿದ್ಯಾಲಯದ್ದು ‘ಮನೆಯೊಂದು ಮೂರು ಬಾಗಿಲು’ ಎನ್ನುವ ಕಥೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಬೆಂಗಳೂರು ನಗರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಹೊಸದಾಗಿ ರಚಿಸಲಾಗಿದೆ. ಹೊಸ ಎರಡು ವಿಶ್ವವಿದ್ಯಾಲಯಗಳಿಗೆ ಕಾಲೇಜುಗಳು ಹಂಚಿಕೆಯಾದ ಪರಿಣಾಮದಿಂದ ಮೂಲ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಬಹುತೇಕ ಸಿಬ್ಬಂದಿ ಬೆಂಗಳೂರು ವಿಶ್ವವಿದ್ಯಾಲಯದಲ್ಲೇ ಉಳಿದ ಕಾರಣ ಹೊರೆ ಹೆಚ್ಚಾಗಿದೆ. 1,536 ನಿವೃತ್ತರ ಪಿಂಚಣಿಗೇ ವಾರ್ಷಿಕ ₹ 70 ಕೋಟಿ ವ್ಯಯಿಸಲಾಗುತ್ತಿದೆ. ₹ 67 ಕೋಟಿ ನೀಡುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರೆ, ನೀಡಿದ್ದು ₹ 15 ಕೋಟಿ ಮಾತ್ರ.

ಮಂಗಳೂರು ವಿಶ್ವವಿದ್ಯಾಲಯಕ್ಕೆ ಯುಜಿಸಿಯಿಂದ ಬರುವ ಅನುದಾನ ನಿಂತಿದೆ. ನಾಲ್ಕೈದು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಬರುವ ಅನುದಾನವೂ ಕಡಿಮೆಯಾಗಿದೆ. ಹೀಗಾಗಿ, ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿ ಕಠಿಣವಾಗಿದೆ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಜಯರಾಜ್ ಅಮೀನ್.

‘ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ದೊಡ್ಡ ಸೆಮಿನಾರ್‌ಗಳು, ವಿಭಾಗವಾರು ನಡೆಸುತ್ತಿದ್ದ ಶೈಕ್ಷಣಿಕ ಚಟುವಟಿಕೆಗಳನ್ನು ಕಡಿತಗೊಳಿಸಲಾಗಿದೆ. ತುರ್ತು ಅಗತ್ಯದ ದುರಸ್ತಿ ಕೆಲಸ ಹೊರತುಪಡಿಸಿ, ಉಳಿದವನ್ನು ಸಾಧ್ಯವಾದಷ್ಟು ಮುಂದೂಡಲಾಗಿದೆ’ ಎನ್ನುತ್ತಾರೆ ಅಮೀನ್.

‘ವಿಶ್ವವಿದ್ಯಾಲಯ ಹಾಗೂ ಏಳು ಘಟಕ ಕಾಲೇಜುಗಳು ಸೇರಿ ಬೋಧಕ ವಿಭಾಗದಲ್ಲಿ 145 ಕಾಯಂ ಪ್ರಾಧ್ಯಾಪಕರು ಇದ್ದರೆ, 128 ಹುದ್ದೆಗಳು ಖಾಲಿ ಇವೆ. ಅಗತ್ಯಕ್ಕೆ ಅನುಗುಣವಾಗಿ 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊರಗು‌ತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ವೇತನ ನೀಡುವುದು ವಿಶ್ವವಿದ್ಯಾಲಯಕ್ಕೆ ಸವಾಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 27 ವರ್ಷಗಳಿಂದ ಬೋಧಕ ಹುದ್ದೆಯ ನೇಮಕಾತಿ ನಡೆದಿಲ್ಲ. ವಾಸ್ತವವಾಗಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮೋದನೆ ಬೇಕಿಲ್ಲ. ಆದರೂ, ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ದೊರೆತಿಲ್ಲ. 2014ರಿಂದಲೇ ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ಪಡೆಯಲು ಪ್ರಕ್ರಿಯೆಗಳು ನಡೆದಿದ್ದರೂ, ಇದುವರೆಗೂ ಪೂರ್ಣಪ್ರಮಾಣ ಒಪ್ಪಿಗೆ ಸಿಕ್ಕಿಲ್ಲ. ಖಾಲಿ ಇರುವ ಸುಮಾರು 700 ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಇತ್ತೀಚೆಗಷ್ಟೇ ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.

ವಿಜಯಪುರದ  ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 32 ಸ್ನಾತಕೋತ್ತರ ವಿಭಾಗಗಳಿವೆ. 20 ವಿಭಾಗಗಳಿಗೆ ಮಾತ್ರ ಬೋಧಕ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಿದ್ದು, ಉಳಿದ 12  ವಿಭಾಗಗಳಿಗೆ ಈವರೆಗೆ ಬೋಧಕ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಅನುಮತಿ ದೊರೆತಿಲ್ಲ. ವಿ.ವಿ ಅಧೀನದ ಮಂಡ್ಯ, ಸಿಂದನೂರು, ಶಿವಮೊಗ್ಗ ಜಿಲ್ಲೆ ಉಡುತಡಿ ಸ್ನಾತಕೋತ್ತರ ಕೇಂದ್ರದಲ್ಲಿ ತಲಾ ಒಂದು ವಿಭಾಗವಿದ್ದು, ಯಾವ ವಿಭಾಗಕ್ಕೂ ಕಾಯಂ ಬೋಧಕ ಸಿಬ್ಬಂದಿ ಇಲ್ಲ.

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕುವೆಂಪು ವಿಶ್ವವಿದ್ಯಾಲಯಕ್ಕೆ ₹5 ಕೋಟಿ ಅನುದಾನ ನೀಡಿದ್ದರು. ಇದರ ಪೈಕಿ ಕಳೆದ ಹಣಕಾಸು ವರ್ಷದಲ್ಲಿ (2022–23) ₹ 37 ಲಕ್ಷ ಬಿಡುಗಡೆಯಾಗಿದೆ. ಯುಜಿಸಿ ಅನುದಾನ 2014ರ ನಂತರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ವಿದ್ಯಾರ್ಥಿಗಳ ಶುಲ್ಕದ ರೂಪದಲ್ಲಿ ಸಂಗ್ರಹವಾಗುವ ಹಣ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಅಭಿವೃದ್ಧಿಯಲ್ಲಿ ಕಲ್ಯಾಣ ಕರ್ನಾಟಕ ಕಡೆಗಣಿಸಿದಂತೆ ಶಿಕ್ಷಣ ಕ್ಷೇತ್ರದಲ್ಲೂ ಕಡೆಗಣಿಸಲಾಗಿದೆ ಎನ್ನುವ ದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಗೆ (ಕೆಕೆಆರ್‌ಡಿಬಿ) ನೀಡುವ ಅನುದಾನದಲ್ಲಿ ಕನಿಷ್ಠ ಶೇ 10 ರಷ್ಟನ್ನು ನೇರವಾಗಿ ಆ ಭಾಗದ ವಿಶ್ವವಿದ್ಯಾಲಯಗಳ ಬಳಕೆಗೆ ಮೀಸಲಿಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಈಚೆಗೆ ನಿರ್ದೇಶನ ನೀಡಿರುವುದು ಇಂತಹ ದೂರಿಗಳಿಗೆ ಮತ್ತಷ್ಟು ಸಾಕ್ಷ್ಯ ಒದಗಿಸಿದಂತಾಗಿದೆ.

ಹಗರಣಗಳ ಸರಮಾಲೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ ಎನ್ನಲಾದ ₹250 ಕೋಟಿಯಷ್ಟು ಹಣ ದುರ್ಬಳಕೆ ಮಾಡಿಕೊಂಡ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. 2009–10ರಿಂದ 2015–16ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಕುಲಪತಿ, ಕುಲಸಚಿವ ಹಾಗೂ ಇತರೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸಿಬಿಐ ಕೆಲ ದಿನಗಳ ಹಿಂದಷ್ಟೇ ನೋಟಿಸ್‌ ನೀಡಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ, ಪರೀಕ್ಷೆ, ಅಧ್ಯಯನ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಣ ದುರ್ಬಳಕೆ ಆರೋಪಗಳು ವಿಶ್ವವಿದ್ಯಾಲಯದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಕರಾಳಮುಖವನ್ನು ಅನಾವರಣಗೊಳಿಸಿದೆ. ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೊಂದಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆದರೂ, ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ದೊಡ್ಡ ಮೊತ್ತದ ‘ಕಪ್ಪಕಾಣಿಕೆ‘ಯನ್ನು ಇಂತಹ ಕೇಂದ್ರಗಳು ವಿ.ವಿ ಆಡಳಿತ ಮಂಡಳಿಗೆ ಸಲ್ಲಿಸುತ್ತಿದ್ದದ್ದೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಆರೋಪಗಳಿಗೆ ಬಲವಾದ ಸಾಕ್ಷ್ಯವೇನು ಇರಲಿಲ್ಲ. ಕೊನೆಗೆ ಕೆಎಸ್‌ಒಯು ಹೊರತುಪಡಿಸಿ ಉಳಿದ ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ನಿರ್ದೇಶನಾಲಯಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಎಲ್ಲಾ ವಿ.ವಿಗಳ ಆದಾಯದ ಮೂಲವೇ ಮುಚ್ಚಿದಂತಾಗಿದೆ. ನೇಮಕಾತಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದ ಆರೋಪಗಳು ಹಲವು ವಿಶ್ವವಿದ್ಯಾಲಯಗಳ ಮೇಲಿದೆ. ನೇಮಕಾತಿಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ನೀಡಿ ಸರ್ಕಾರ ಈಚೆಗೆ ಕೆಎಸ್‌ಒಯು, ಜಾನಪದ ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಒಟ್ಟಾರೆ ಬಿಗಿ ಆಡಳಿತ ಮತ್ತು ಆರ್ಥಿಕ ಶಿಸ್ತು ಜಾರಿಯಾಗದಿದ್ದರೆ ವಿ.ವಿಗಳ ಸ್ಥಿತಿ ಮತ್ತಷ್ಟು ಕೆಟ್ಟದಾಗಲಿದೆ.

ಪಿಎಚ್‌.ಡಿ. ಸೀಟುಗಳೂ ಮಾರಾಟಕ್ಕೆ: ಆರೋಪ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗೆ ಪಿಎಚ್‌.ಡಿ. ಕಡ್ಡಾಯಗೊಳಿಸಿದ ನಂತರ ಸಂಶೋಧನಾ ಆಕಾಂಕ್ಷಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಪಿಎಚ್‌.ಡಿ. ಆಯ್ಕೆಯಲ್ಲಿ ಸ್ವಜನಪಕ್ಷಪಾತ, ಹಣಕ್ಕೆ ಸೀಟುಗಳನ್ನು ಮಾರಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. 

ಅಭ್ಯರ್ಥಿಗಳ ಆಯ್ಕೆಯನ್ನು ವಿಶ್ವವಿದ್ಯಾಲಯಗಳ ಆಯಾ ವಿಭಾಗದ ಪ್ರಾಧ್ಯಾಪಕರೇ ನಡೆಸುವ ಕಾರಣ ಪಿಎಚ್‌.ಡಿ ಸೀಟು ಹಂಚಿಕೆಯಲ್ಲಿ ರಾಜಕೀಯ ನುಸುಳಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು. 

ಹಳೆಯ ಪ್ರತಿಗಳಿಗೆ ಸಣ್ಣಪುಟ್ಟ ಬದಲಾವಣೆ ಮಾಡಿ, ಆಳ ಅಧ್ಯಯನ ಮಾಡದೇ ಕೇವಲ ಪದವಿಗಾಗಿ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೆಲ ಹಿರಿಯ ಸಂಶೋಧಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲಾ ಸಾರ್ವಜನಿಕ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶೇ 40 ಪಿಎಚ್‌.ಡಿ. ಸೀಟುಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಸಾಮಾನ್ಯ ಕೌನ್ಸೆಲಿಂಗ್‌ ನಡೆಸುವಂತೆ ಮುಖ್ಯಮಂತ್ರಿ ಸೂಚನೆಯೂ ಕಾರ್ಯಗತವಾಗಿಲ್ಲ. 

ವಿಶಿಷ್ಟ ವಿಶ್ವವಿದ್ಯಾಲಯಗಳಿಗೂ ಇಲ್ಲ ನೆಲೆ

ಹಾವೇರಿ ಜಿಲ್ಲೆ ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ವಿಶಿಷ್ಟ ವಿಶ್ವವಿದ್ಯಾಲಯಗಳಿಗೂ ಅನುದಾನ ಸಿಕ್ಕಿಲ್ಲ. ಹುದ್ದೆಗಳನ್ನೂ ತುಂಬಿಲ್ಲ. ಸಂಗೀತ ವಿಶ್ವವಿದ್ಯಾಲಯಕ್ಕೆ ಸ್ವಂತ ನೆಲೆ ಇಲ್ಲ.

‘ವಿಷಯ ಆಧಾರಿತ ವಿಶ್ವವಿದ್ಯಾಲಯ ಸ್ಥಾಪಿಸಿದರೂ ಅಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳು ಕಡಿಮೆ. ಹಾಗಾಗಿ, ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಒಲವು ತೋರುವುದಿಲ್ಲ’ ಎನ್ನುತ್ತಾರೆ ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅನಿಲ್‌.

ಕನ್ನಡ ಭಾಷೆ, ಪ್ರಗತಿಯ ಸಂಶೋಧನೆಗಾಗಿಯೇ ಸ್ಥಾಪಿತವಾದ ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿತ ಉದ್ದೇಶವನ್ನೇ ಮರೆತಂತಿದೆ ಎನ್ನುವುದು ಹಲವರ ಆರೋಪ. ಏಕ ಘಟಕೀಯ ಮತ್ತು ನಿವಾಸಿ ಸ್ವರೂಪದ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಯಾವ ಕಾಲೇಜೂ ಇದಕ್ಕಿಲ್ಲ. ಸರ್ಕಾರದ ನೀಡುವ ಅನುದಾನ ಹೊರತು ಯಾವುದೇ ಆದಾಯದ ಮೂಲ ಇಲ್ಲ.  

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲೂ ವಿಭಜನೆ, ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಗಳ ನಂತರವೂ ಏಕ ರೂಪದ ಶಿಕ್ಷಣ ಸಾಧ್ಯವಾಗಿಲ್ಲ. ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಮತ್ತಷ್ಟು ನೆರವು ನೀಡಬೇಕಿತ್ತು. ದೇಶದ ಹಾಗೂ ವಿದೇಶಗಳ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಸಂಶೋಧನಾ ತಳಿ, ಉತ್ಪನ್ನಗಳಿಗೆ ಪೇಟೆಂಟ್‌ ಪಡೆದದ್ದು ಅತ್ಯಂತ ಕಡಿಮೆ. ಖಾಸಗಿ ವಿಶ್ವವಿದ್ಯಾಲಯಗಳ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಇಲ್ಲದ ಕಾರಣ ಅನಾರೋಗ್ಯಕರ ಪೈಪೋಟಿ ತಡೆ ಇಲ್ಲವಾಗಿದೆ.

ಇನ್ನು ಮುಂದೆ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ ನಂತರವೂ ಸರ್ಕಾರ ಮತ್ತೊಂದು ಹೊಸ ವಿಶ್ವವಿದ್ಯಾಲಯ ತೆರೆಯುವ ಘೋಷಣೆ ಮಾಡಿದೆ.

ಸದ್ಯಕ್ಕಿಲ್ಲ ಹೊಸ ವಿ.ವಿ ಸ್ಥಾಪನೆ: ಸಚಿವ ಸುಧಾಕರ್‌
ಬೇಕಾಬಿಟ್ಟಿಯಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದರಿಂದಲೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಿರುವ ಎಲ್ಲ ವಿಶ್ವವಿದ್ಯಾಲಯಗಳೂ ಬಲವರ್ಧನೆಯಾಗುವವರೆಗೆ ಯಾವುದೇ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಸುಧಾಕರ್‌. ಹೊಸ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸರ್ಕಾರ ಐದು ವರ್ಷಗಳ ಅವಧಿಗೆ ಕನಿಷ್ಠ ₹342 ಕೋಟಿ ನೀಡಬೇಕು. 100ರಿಂದ 200 ಎಕರೆ ಭೂಮಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಮಿತಿ ಶಿಫಾರಸು ಮಾಡಿದೆ. ಅಗತ್ಯವಾದ ಹಣಕಾಸಿನ ನೆರವು, ಮೂಲ ಸೌಕರ್ಯ ದೊರಕದೆ ಹೊಸ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟದಲ್ಲಿವೆ. ಹಲವು ಕುಲಪತಿಗಳು ಬಾಡಿಗೆ ಕಾರು ಬಳಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಕಟ್ಟಡಗಳಿಲ್ಲದೆ ಪರಿತಪಿಸುವಂತಾಗಿದೆ. ಹಳೆಯ ಹಾಗೂ ಹೊಸ ವಿಶ್ವವಿದ್ಯಾಲಯಗಳಿಗೆ ಮುಂದಿನ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಲಾಗುವುದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅನುದಾನ ನೀಡದೆ ರಾಜಕೀಯ ಪ್ರತಿಷ್ಠೆಗಾಗಿ ಕಳೆದ ವರ್ಷ ಸ್ಥಾಪಿಸಿದ್ದ ಚಾಮರಾಜನಗರ, ಹಾಸನ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ, ಬಾಗಲಕೋಟೆ, ಹಾವೇರಿ ಸೇರಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ವಿವರವಾದ ವರದಿ ಸಿದ್ಧಪಡಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಸಚಿವ ಸುಧಾಕರ್.

ಉಳಿವಿಗೆ ಬೇಕಾಗಿದೆ...

ವಿಶ್ವವಿದ್ಯಾಲಯಗಳು ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರ ಸಂಪೂರ್ಣ ನೆರವು ನೀಡಬೇಕು. ಇಲ್ಲವೇ ಯಾವ ವಿಷಯದಲ್ಲೂ ಮೂಗು ತೂರಿಸದೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು ಎನ್ನುತ್ತಾರೆ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೊ. ಕೆ.ಎಸ್‌.ರಂಗಪ್ಪ.

ಅನುದಾನ ನೀಡದೇ ಇದ್ದರೆ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯುವುದು ಅನಿವಾರ್ಯವಾಗುತ್ತದೆ. ಅವೈಜ್ಞಾನಿಕವಾಗಿ ವಿಶ್ವವಿದ್ಯಾಲಯಗಳನ್ನು ವಿಭಜನೆ ಮಾಡಿದ್ದರಿಂದ ಘಟಕ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿ ಆದಾಯದ ಮೂಲವೂ ಕ್ಷೀಣಿಸಿದೆ. ಹಿಂದೆ ಎಂಜಿನಿಯರಿಂಗ್‌, ಕಾನೂನು.. ಹೀಗೆ ಎಲ್ಲ ಉದ್ಯೋಗಾಧಾರಿತ ವಿಷಯಗಳು ಇದ್ದ ಕಾರಣ ವಿ.ವಿಗಳಿಗೆ ಉತ್ತಮ ಆದಾಯವಿತ್ತು. ಪ್ರತಿ ವಿಷಯಕ್ಕೂ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಮೂಲಕ ಹಳೇ ವಿಶ್ವವಿದ್ಯಾಲಯಗಳ ಆದಾಯದ ಮೂಲ ಕುಂಠಿತಗೊಳಿಸಲಾಯಿತು.

ಸ್ವಾಯತ್ತತೆ ಇದ್ದರೆ ಉತ್ತಮ ಸಂಶೋಧನೆ, ಉದ್ಯೋಗಾಧಾರಿತ ಕೋರ್ಸ್‌ಗಳ ಮೂಲಕ ಲಾಭಗಳಿಸಬಹುದು. ವಿವಿಧ ಕಂಪನಿ, ಸಂಸ್ಥೆ, ವಿದೇಶಿ ವಿಶ್ವವಿದ್ಯಾಲಯಗಳು ನೆರವು ನೀಡುತ್ತವೆ. ಅನುಪಯುಕ್ತ ಕೋರ್ಸ್‌ ತೆಗೆದುಹಾಕಿಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ಸರ್ಕಾರವೇ ಬೇರೆ ಕಡೆ ನಿಯೋಜಿಸಬೇಕು. ಅಗತ್ಯ ಇರುವ ಬೋಧಕ, ಬೋಧಕೇತರರ ನೇಮಕ ಮಾಡಬೇಕು. ಪ್ರಸ್ತುತ ಎಲ್ಲೆಡೆ ಶೇ 70ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ‘ಅತಿಥಿ’ಗಳ ಮೇಲೆ ಪಾಠಗಳು ನಡೆಯುತ್ತಿವೆ.  

ಹಣ ನೀಡುವ ಸಾಮರ್ಥ್ಯದ ಆಧಾರದ ಮೇಲೆ ಕುಲಪತಿಗಳ ನೇಮಕ ಆರಂಭವಾದಾಗಲೇ ವಿ.ವಿಗಳ ಪತನಕ್ಕೆ ಮುನ್ನುಡಿ ಬರೆಯಲಾಯಿತು. ಹಿಂದೆ ಪ್ರತಿಭೆ, ಅನುಭವ, ಜ್ಞಾನದ ಆಧಾರದಲ್ಲಿ ಕುಲಪತಿ ನೇಮಕವಾಗುತಿತ್ತು. ಹಾಗಾಗಿಯೇ, ಕುವೆಂಪು ಅಂಥವರು ಹುದ್ದೆ ಅಲಂಕರಿಸಿದ್ದರು. ಈಗ ಜಾತಿ, ಪ್ರಭಾವ, ಹಣವೇ ಪ್ರಧಾನವಾಗಿದೆ ಎಂದು ರಂಗಪ್ಪ ವಿವರಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 211 ಬೋಧಕ ಹುದ್ದೆಗಳಿವೆ. ಕೇವಲ 42 ಬೋಧಕ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ.
–ದಯಾನಂದ ಅಗಸರ, ಕುಲಪತಿ, ಗುಲಬರ್ಗಾ ವಿ.ವಿ.
ಸಿಬ್ಬಂದಿಯ ವೇತನದ ಜತೆಗೆ, ಪಿಂಚಣಿಯನ್ನೂ ನೀಡಬೇಕು. ಇಲ್ಲ ವಾದರೆ ಮೂರು ವರ್ಷಗಳ ನಂತರ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಲಿದ್ದೇವೆ.
– ಎಸ್‌.ಎಂ.ಜಯಕರ್‌, ಕುಲಪತಿ ಬೆಂಗಳೂರು ವಿ.ವಿ
ವಿ.ವಿಯ ಆರ್ಥಿಕ ಸ್ಥಿತಿಗತಿ ಉತ್ತವಾಗಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ಕಾಯಂ ಸಿಬ್ಬಂದಿ ಇಲ್ಲದಿರುವುದೇ ಪ್ರಮುಖ ಸಮಸ್ಯೆ.
– ನಿರಂಜನ ವಾನಳ್ಳಿ, ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ
ಶತಮಾನದ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿಸುವ ಎಲ್ಲ ಪ್ರಕ್ರಿಯೆ ನಡೆಸುತ್ತಿರುವೆ. ಆಗ, ಕೇಂದ್ರ ಬಜೆಟ್‌ನಲ್ಲಿಯೇ ಅನುದಾನ ಸಿಗುತ್ತದೆ ನೇಮಕಾತಿಯೆಲ್ಲವೂ ರಾಷ್ಟ್ರಮಟ್ಟದಲ್ಲಿಯೇ ಆಗುತ್ತದೆ. ದೇಶದ ಎಲ್ಲೆಡೆಯಿಂದ ಸಂಶೋಧಕರು ಬರಲಿದ್ದಾರೆ.
– ಲೋಕನಾಥ್, ಮೈಸೂರು ವಿಶ್ವವಿದ್ಯಾಲಯ ಕುಲಪತಿ

ಪೂರಕ ಮಾಹಿತಿ: ಜಿ.ಎಚ್‌.ವೆಂಕೇಶ್‌, ಸಂಧ್ಯಾ ಹೆಗಡೆ, ಧನ್ಯಪ್ರಸಾದ ಬಿ.ಜೆ, ಬಸವರಾಜ ಸಂಪಳ್ಳಿ, ಸಿದ್ದು ಆರ್‌.ಜಿ ಹಳ್ಳಿ, ಎಂ.ಜಿ.ಬಾಲಕೃಷ್ಣ, ಮನೋಜ್‌ಕುಮಾರ್ ಗುದ್ದಿ, ಎಂ.ಮಹೇಶ, ಸಿ.ಮೋಹನ್‌ಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT