ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಬೆಳೆ ವಿಮೆ: ಮಳೆಯಷ್ಟೇ ಅನಿಶ್ಚಿತ

Last Updated 26 ಜೂನ್ 2021, 20:27 IST
ಅಕ್ಷರ ಗಾತ್ರ

ಮಂಗಳೂರು: ಪ್ರಕೃತಿ ವಿಕೋಪದಿಂದ ಸಂಭವಿಸುವ ಕೃಷಿ ಬೆಳೆ ಹಾನಿಯಿಂದ ಕೊಂಚ ಸಾವರಿಸಿಕೊಳ್ಳಲು ರೈತರಿಗೆ ಬೆಳೆ ವಿಮೆ ಯೋಜನೆ ಊರುಗೋಲಾಗಿದೆ. ಆದರೆ, ಗೋಜಲಾಗಿರುವ ಪರಿಹಾರ ಮೊತ್ತ ಪಾವತಿ, ಅದಕ್ಕೆ ಆಗುವ ವಿಳಂಬ, ನಷ್ಟ ಲೆಕ್ಕ ಹಾಕುವ ಮಾನದಂಡದ ಪ್ರಕ್ರಿಯೆಗಳು ರೈತರಲ್ಲಿ ವಿಮೆಯ ಬಗ್ಗೆ ವಿಶ್ವಾಸ ಕಡಿಮೆ ಮಾಡಿವೆ.

ಇತ್ತೀಚಿನ ವರ್ಷಗಳಲ್ಲಿ ಬೆಳೆ ವಿಮೆಯೆಡೆಗೆ ಆಸಕ್ತರಾಗಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020–21ನೇ ಸಾಲಿನಲ್ಲಿ ರಾಜ್ಯದಲ್ಲಿ 14.88 ಲಕ್ಷ ರೈತರು ಕೃಷಿ ಬೆಳೆಗಳಿಗೆ ವಿಮೆ ಕಂತು ಪಾವತಿಸಿದ್ದರು. ಅವರಲ್ಲಿ ಬೆಳೆ ನಷ್ಟ ಅನುಭವಿಸಿದ 61,310 ರೈತರಿಗೆ ಈವರೆಗೆ ₹ 47.35 ಕೋಟಿ ಮೊತ್ತ ಪಾವತಿಯಾಗಿದೆ.

ವಿಮೆ ಕಂತು ಪಾವತಿ ಹೇಗೆ?:

ಮುಂಗಾರು, ಹಿಂಗಾರು, ಬೇಸಿಗೆ ಹೀಗೆ ಮೂರು ಹಂಗಾಮಿನ ಪ್ರಾದೇಶಿಕ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಯೋಜನೆ ಲಭ್ಯವಾಗುತ್ತದೆ. ರೈತರು ಶೇ 1.5ರಿಂದ ಗರಿಷ್ಠ ಶೇ 2ರಷ್ಟು ವಿಮೆ ಕಂತು ಪಾವತಿಸಿದರೆ, ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50ರ ಅನುಪಾತದಲ್ಲಿ ಪಾವತಿಸುತ್ತವೆ. ಬೆಳೆ ಆಧರಿಸಿ, ಈ ವರ್ಷ ಆಗಸ್ಟ್‌ವರೆಗೆ ವಿಮೆ ಮಾಡಿಸಲು ಅವಕಾಶವಿದ್ದು, ಈವರೆಗೆ 60,306 ರೈತರು ನೋಂದಾಯಿಸಿದ್ದಾರೆ.

ರಾಜ್ಯದ 10 ಕ್ಲಸ್ಟರ್‌ಗಳಲ್ಲಿ ಐದು ವಿಮಾ ಕಂಪನಿಗಳು ಬೆಳೆವಿಮೆಯ ಹೊಣೆ ನಿರ್ವಹಿಸುತ್ತಿವೆ. ಕಂಪನಿಯ ಬಿಡ್ ಆಧರಿಸಿ, ವಿಮೆ ಕಂತಿನ ಮೊತ್ತ ಪ್ರಾದೇಶಿಕವಾಗಿ ವ್ಯತ್ಯಾಸ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಪ್ರತಿ ಎಕರೆಗೆ ರೈತರು ₹ 440 ಕಂತು ಪಾವತಿಸಬೇಕು. ಸಂಪೂರ್ಣ ಬೆಳೆ ನಷ್ಟವಾದರೆ, ಅವರಿಗೆ ಗರಿಷ್ಠ ₹ 22 ಸಾವಿರ ಪರಿಹಾರ ಮೊತ್ತ ದೊರೆಯುತ್ತದೆ.

‘ಬೆಳೆವಿಮೆಯು ಗ್ರಾಮ ಪಂಚಾಯಿತಿ, ಹೋಬಳಿವಾರು ಬೆಳೆಹಾನಿಯ ಮೇಲೆ ನಿಗದಿಯಾಗುತ್ತದೆ. ಇದರಿಂದ ಬೆಳೆ ನಷ್ಟವಾದ ರೈತರು ಪರಿಹಾರದಿಂದ ವಂಚಿತರಾದ ಅನೇಕ ಸಂದರ್ಭಗಳಿವೆ. ನಷ್ಟ ಅನುಭವಿಸಿದ ನಿರ್ದಿಷ್ಟ ರೈತನ ಹೊಲದಲ್ಲಿ ಹಾನಿ ಸಮೀಕ್ಷೆ ನಡೆಸಿದಾಗ ಮಾತ್ರ ನ್ಯಾಯ ಸಿಗುತ್ತದೆ’ ಎಂದು ರೈತ ಮುಖಂಡ ಹುಬ್ಬಳ್ಳಿಯ ವಿಕಾಸ್ ಸೊಪ್ಪಿನ ಹೇಳುತ್ತಾರೆ.

ತೊಡಕುಗಳು ಏನು ?

* ಆಲಿಕಲ್ಲು ಮಳೆಯಂತಹ ಅನಿರೀಕ್ಷಿತ ಹಾನಿಗೆ ಮಾತ್ರ ವೈಯಕ್ತಿಕ ಹಾನಿ ಲೆಕ್ಕ ಹಾಕಿ ಪರಿಹಾರ ಪಡೆಯಲು ಅವಕಾಶ

* ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ನಷ್ಟದ ಲೆಕ್ಕ ಹಾಕಿದಾಗ, ರ್‍ಯಾಂಡಮ್ ಸರ್ವೆಯಲ್ಲಿ ನೈಜ ಫಲಾನುಭವಿಗೆ ಅನ್ಯಾಯವಾಗುವ ಸಾಧ್ಯತೆ ಹೆಚ್ಚು

* ಐದು ವರ್ಷಗಳ ಸರಾಸರಿ ಇಳುವರಿ ಆಧರಿಸಿ ಪರಿಹಾರ ನೀಡುವುದರಿಂದ, ರೈತರಿಗೆ ದೊರೆಯುವ ಪರಿಹಾರ ಮೊತ್ತ ಕಡಿಮೆ

* ಕಂತು ಪಾವತಿಗೆ ದಿನಾಂಕ ನಿಗದಿಪಡಿಸುವಂತೆ, ಪರಿಹಾರ ಮೊತ್ತ ಪಾವತಿಗೆ ನಿರ್ದಿಷ್ಟ ಅವಧಿ ನಿಗದಿ ಇಲ್ಲ

* ವಿಮೆ ಪರಿಹಾರ ಮೊತ್ತ ನಿಗದಿಗೆ ಸರ್ಕಾರದ ಮಟ್ಟದಲ್ಲಿ ವಿಳಂಬ

**********

ಬೆಳೆವಿಮೆ ಮಾಡಿಸುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕಂತು ಪಾವತಿಸುವ ರೈತರಿಗೆ ಬೆಳೆ ನಷ್ಟವಾದರೆ, ವಿಮಾ ಕಂಪನಿಯಿಂದ ಪರಿಹಾರ ದೊರೆಯುತ್ತದೆ.

-ಸೀತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ದಕ್ಷಿಣ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT