ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಕಿ–ಖಾದಿ ನೆರಳಲ್ಲೇ ನಡೆಯುತ್ತಿದೆ ದೌರ್ಜನ್ಯ: ಕತ್ತು ಕೊಯ್ಯುವ ಮೀಟರ್ ಬಡ್ಡಿ

ಬಡತನ, ಬಲಹೀನತೆಯೇ ಬಂಡವಾಳ
Last Updated 16 ಫೆಬ್ರುವರಿ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ವ್ಯವಹಾರ ಜಗತ್ತಿನ ಎಲ್ಲ ಮಾಫಿಯಾಗಳಿಗೂ ‘ದೊಡ್ಡಪ್ಪ’ನಂತೆ ನಿಂತಿರುವುದು ‘ಮೀಟರ್ ಬಡ್ಡಿ’ ದಂಧೆ.‌ ಜನರ ಆರ್ಥಿಕ ಬಲಹೀನತೆಯನ್ನೇ ಬಂಡವಾಳ ಮಾಡಿಕೊಂಡ ದೊಡ್ಡ ದೊಡ್ಡ ಕುಳಗಳು, ‘ಖಾದಿ-ಖಾಕಿ’ಯ ನೆರಳಿನಲ್ಲೇ ದಿನದ ಹಾಗೂ ತಾಸಿನ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಗಂಟೆ ಮುಳ್ಳಿನ ಸರಿದಾಟಕ್ಕೆ ಏರುವ ಬಡ್ಡಿಯ ಮೀಟರ್, ಅಸಹಾಯಕರ ಕುತ್ತಿಗೆಗೆ ಕುಣಿಕೆಯಂತೆ ಬಿಗಿಯುತ್ತಾ ಉಸಿರುಗಟ್ಟಿಸುತ್ತಿದೆ.

ಕೆಲವು ರಾಜಕಾರಣಿಗಳೂ ತಮ್ಮ ಏಜೆಂಟ್‌ಗಳ ಮೂಲಕ ‘ವ್ಯವಹಾರ’ ನಡೆಸುತ್ತಿರುವುದು ದಂಧೆ ಹಿಂದಿರುವ ಗಳಿಕೆಯನ್ನು ತೋರುತ್ತದೆ. ಇಲ್ಲಿ ಮೂರ್ನಾಲ್ಕು ವರ್ಷ ಏಜೆಂಟ್ ಆಗಿದ್ದವನು, ಏಕಾಏಕಿ ವಾರ್ಡ್‌ನ ಕೌನ್ಸಿಲರ್ ಆಗುವ ಮಟ್ಟಕ್ಕೆ ಬೆಳೆದು ಬಿಡುತ್ತಾನೆ ಎಂಬುದೇನು ಗುಟ್ಟಾಗಿ ಉಳಿದಿಲ್ಲ. ಪೊಲೀಸರು ಎಲ್ಲ ಗೊತ್ತಿದ್ದೂ, ತಮ್ಮ ‘ಪಾಲು’ ಪಡೆದು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಳ್ಳುತ್ತಿದ್ದಾರೆ. ಇವರೆಲ್ಲರ ನಡುವೆ ನರಳುತ್ತಿರುವವರು ಮಾತ್ರ ‘ಅಂದೇ ದುಡಿದು, ಅಂದೇ ಉಣ್ಣುವ’ ಸ್ಥಿತಿಯಲ್ಲಿರುವ ವ್ಯಾಪಾರಿಗಳು.

80–90ರ ದಶಕದಿಂದಲೂ ಬೆಂಗಳೂರಿನಲ್ಲಿ ಈ ಮಾಫಿಯಾ ಚಾಲ್ತಿಯಲ್ಲಿದೆ. ಆಗ ಚಾಮರಾಜಪೇಟೆಯಲ್ಲಿ ನೆಲೆಸಿದ್ದ ಕುಖ್ಯಾತ ರೌಡಿ ಜಯರಾಜ್, ಕಲಾಸಿಪಾಳ್ಯ ಹಾಗೂ ಕೆ.ಆರ್.ಮಾರುಕಟ್ಟೆಯಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಕ್ರಮೇಣ, ಮೀಟರ್ ಬಡ್ಡಿ, ಚಕ್ರ ಬಡ್ಡಿ ಪರಿಕಲ್ಪನೆಗಳೂ ಬಂದವು. ಜಯರಾಜ್ ಬಳಿಕ ಆತನ ಸಹಚರರು, ಕೊನೆಗೆ ಬಹುತೇಕ ರೌಡಿಗಳೂ ಇದೇ ದಂಧೆಗೆ ಇಳಿದರು. ಕ್ರಮೇಣ ಮಾಫಿಯಾದ ಬೇರು ರಾಜ್ಯವ್ಯಾಪಿ ಹರಡಿಕೊಂಡಿತು.

ತುರ್ತು ಸಾಲ (ಎಮರ್ಜೆಂಟ್ ಲೋನ್) ಹಾಗೂ ದಿನದ ಸಾಲದ (ಡೈಲಿ ಲೋನ್) ರೂಪದಲ್ಲಿ ದಂಧೆ ನಡೆಯುತ್ತದೆ. ಜನರ ಅಸಹಾಯಕ ಪರಿಸ್ಥಿತಿ ಜತೆ ಆಟವಾಡುವ ಬಡ್ಡಿಕೋರರು, ಸಾಲ ನೀಡುವ ಮುನ್ನ ಜಮೀನು, ಮನೆ, ಪಿತ್ರಾರ್ಜಿತ ಆಸ್ತಿ ಬರೆಸಿಕೊಳ್ಳುವುದರ ಜತೆಗೆ ಖಾಲಿ ಚೆಕ್ ಹಾಗೂ ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಕೊನೆಗೆ ತೋಳ್ಬಲ ಹಾಗೂ ಬಾಯ್ಬಲದ ಮೂಲಕವೇ ತಮ್ಮಿಷ್ಟದಂತೆ ‘ಲೆಕ್ಕ’ ಚುಕ್ತಾ ಮಾಡಿಕೊಳ್ಳುತ್ತಾರೆ.

‘ಬಡ್ಡಿ ಮಾಫಿಯಾ ಸಂಬಂಧ ರಾಜ್ಯದ ವಿವಿಧ ಠಾಣೆಗಳಲ್ಲಿ 4 ವರ್ಷಗಳಲ್ಲಿ 1,662 ಪ್ರಕರಣ ದಾಖಲಾಗಿವೆ. ಇವೆಲ್ಲ ವರದಿಯಾದ ಪ್ರಕರಣಗಳಷ್ಟೇ. ಸಾವಿರಾರು ಮಂದಿ ಅಮಾಯಕರು ಠಾಣೆ ಮೆಟ್ಟಿಲೇರುವುದಕ್ಕೇ ಭಯಪಟ್ಟುಕೊಂಡು ಬಡ್ಡಿಕೋರರಿಂದ ಹಿಂಸೆ ಅನುಭವಿಸುತ್ತಲೇ ಇದ್ದಾರೆ’ ಎನ್ನುತ್ತಾರೆ ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ.

ಬೆಂಗಳೂರು ಬಿಟ್ಟರೆ ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಕೋಲಾರ, ತುಮಕೂರು, ವಿಜಯಪುರದಲ್ಲಿ ದಂಧೆ ಹೆಚ್ಚಿದೆ. ಹುಬ್ಬಳ್ಳಿಯ ಕಮರಿಪೇಟೆ, ಚೆನ್ನಪೇಟೆ, ದೇವಾಂಗಪೇಟೆ, ನೇಕಾರನಗರ ಬಡ್ಡಿಕೋರರ ಅಡ್ಡೆಗಳಾಗಿ ಮಾರ್ಪಟ್ಟಿವೆ. ವಿಜಯಪುರದ ಶಕ್ತಿನಗರ‌, ಡೋರಗಲ್ಲಿ, ಜಂಬಗಿ, ಚಡಚಣದಲ್ಲಿ ರಾಜಾ ರೋಷವಾಗಿಯೇ ವ್ಯವಹಾರ ನಡೆಯುತ್ತಿದೆ. ಬಡ್ಡಿಕೋರರನ್ನು ಹತ್ತಿಕ್ಕಲು ಎಲ್ಲ ಜಿಲ್ಲೆಗಳಲ್ಲೂ ಪೊಲೀಸರು ‘ಸಹಾಯವಾಣಿ’ ಪ್ರಾರಂಭಿಸಿದ್ದರೂ, ಜನ ಧೈರ್ಯವಾಗಿ ಅಲ್ಲಿಗೆ ಕರೆ ಮಾಡುತ್ತಿಲ್ಲ. ಏಕೆಂದರೆ ಈ ಬಡ್ಡಿದಂಧೆಯ ‘ವಸೂಲಿ’ ವೀರರ ಪೈಕಿ ಪೊಲೀಸರು ಇದ್ದು, ಅವರೇ ಬಡ್ಡಿಕೋರರಿಗೆ ಮಾಹಿತಿ ನೀಡುವ ‘ಏಜೆಂಟ’ರು ಆಗಿರುತ್ತಾರೆ.

ಸಂಜೆ ವಸೂಲಿ: ‘ಎಪಿಎಂಸಿ, ತರಕಾರಿ ಮಾರುಕಟ್ಟೆ, ಹೂವು–ಹಣ್ಣಿನ ಮಂಡಿಗಳ ಮುಂದೆ ಬೆಳಿಗ್ಗೆ 5 ಗಂಟೆಗೆ ಹಾಗೂ ಸಂಜೆ ನಂತರ ಹೋಗಿ ನಿಂತರೆ ದಂಧೆಯ ಕರಾಳತೆ ಮುಖಕ್ಕೆ ರಾಚುತ್ತದೆ. ಮೀಟರ್ ಬಡ್ಡಿ ತಮ್ಮ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತಿದೆ ಎಂದು ಗೊತ್ತಿದ್ದರೂ ವ್ಯಾಪಾರಿಗಳು ದಿನದ ಮಾಲು ಖರೀದಿಗೆ ಬಡ್ಡಿಕೋರರನ್ನೇ ಅವಲಂಬಿಸಿದ್ದಾರೆ’ ಎನ್ನುತ್ತಾರೆ ಸಿಸಿಬಿ ಪೊಲೀಸರು.

ಸದ್ಯ ಬೆಂಗಳೂರಿನಲ್ಲಿ ದಿನಕ್ಕೆ ಶೇ 10ರ ಬಡ್ಡಿ ದರದಲ್ಲಿ ವ್ಯವಹಾರ ನಡೆಯುತ್ತಿದೆ. ವ್ಯಾಪಾರಿ ಬೆಳಿಗ್ಗೆ 5 ಗಂಟೆಗೆ ₹ 10 ಸಾವಿರ ಸಾಲ ಕೇಳಿದರೆ, ಬಡ್ಡಿ ಮುರಿದುಕೊಂಡು ₹ 9 ಸಾವಿರವನ್ನಷ್ಟೇ ಕೊಡುತ್ತಾನೆ. ಸಂಜೆ 5 ಗಂಟೆಯ ಒಳಗೆ ವ್ಯಾಪಾರಿ ಪೂರ್ತಿ ₹ 10 ಸಾವಿರ ಮರಳಿಸಿಬಿಡಬೇಕು. ಇಲ್ಲವಾದರೆ, ಮರುದಿನ ನಸುಕಿನೊಳಗೆ ₹ 10 ಸಾವಿರದ ಜತೆಗೆಮತ್ತೆ ಇನ್ನೊಂದು ಸಾವಿರ ಬಡ್ಡಿ ಸೇರಿಸಿ, ಹಿಂದಿರುಗಿಸಬೇಕು.

ಈ ರೀತಿ ಗಡಿಯಾರದ ಮುಳ್ಳಿನ ಜತೆಗೇ ನಿತ್ಯ ಹೋರಾಡುವ ವ್ಯಾಪಾರಿ, ‘ಬಡ್ಡಿಯ ಬೆಟ್ಟ’ ದೊಡ್ಡದಾದಾಗ ಕುತ್ತಿಗೆಯ ಸುತ್ತ ಹರಡಿದ ಹಗ್ಗವನ್ನು ತಾನೇ ಬಿಗಿ ಮಾಡಿಕೊಳ್ಳುತ್ತಾನೆ. ಪರಿಸ್ಥಿತಿ ಹೀಗಿದ್ದರೂ, ಸಾಲ ಪಡೆಯಲು ಸಾಲುಗಟ್ಟುವ ವ್ಯಾಪಾರಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

ಇದು ಪೊಲೀಸರು, ರಾಜಕಾರಣಿಗಳು, ರೌಡಿಗಳು, ಫೈನಾನ್ಶಿಯರ್‌ಗಳು.. ಇವರೆಲ್ಲರ ಅಲಿಖಿತ ಒಪ್ಪಂದದ ನಡುವೆ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಸಂಘಟಿತ ಅಪರಾಧ’. ಸಾಲಗಾರರು ಸಾಲ ಮರಳಿಸುವುದು ತಡ ವಾದಂತೆ ದಂಧೆಕೋರರ ಲಾಭದ ‘ಮೀಟರ್’ ಏರುತ್ತದೆ. ಜೂಜು ಅಡ್ಡೆಗಳು, ರೇಸ್ ನಡೆಯುವ ಜಾಗಗಳು ಇವರಿಗೆ ಕಲ್ಪವೃಕ್ಷಗಳಂತಾಗಿವೆ.

ಭೂಗತ ಪಾತಕಿಗಳು ಕಾರ್ಪೊರೇಟರ್ ಸೆಕ್ಟರ್‌ಗಳ, ದೊಡ್ಡ ಖಾಸಗಿ ಫೈನಾನ್ಸ್ ಕಂಪನಿಗಳ ‘ರಿಕವರಿ ಏಜೆಂಟ್‌’ಗಳಾಗಿದ್ದಾರೆ. ಹೀಗಾಗಿ, ಇದು ಕೇವಲ ದಂಧೆಯಾಗಿ ಉಳಿಯದೆ, ದಂಧೆಕೋರರ ಪಾಲಿನ ‘ವೈಟ್ ಕಾಲರ್’ ವ್ಯವಹಾರವಾಗಿದೆ.

‘ಕೆಲ ‘ಬಲಿಷ್ಠ’ ಜನಪ್ರತಿನಿಧಿಗಳನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡಿರುವ ಬಡ್ಡಿಕೋರರು ಐಎಎಸ್, ಐಪಿಎಸ್ ವರ್ಗಾವಣೆ ಪ್ರಕ್ರಿಯೆಯಲ್ಲೂ ಮೂಗು ತೂರಿಸುವಷ್ಟು ಪ್ರಭಾವಿಗಳಾಗಿ ಬೆಳೆದು ಹೋಗಿದ್ದಾರೆ.

ದಂಧೆಯ ಭೀಕರತೆ: ಫೈನಾನ್ಶಿಯರ್‌ಗಳ ಕಿರುಕುಳದಿಂದ ಬೇಸತ್ತು ಈಚೆಗೆ ಚಿಕ್ಕಬಳ್ಳಾಪುರದಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳನ್ನು ಕೊಂದು ತಾವೂ ಪ್ರಾಣ ಕಳೆದುಕೊಂಡರು. ಕೊರಟಗೆರೆಯಲ್ಲಿ ಬಡ್ಡಿಕೋರನ ಬಳಿ ₹ 5 ಲಕ್ಷ ಸಾಲ ಪಡೆದಿದ್ದ ಶಿವಣ್ಣ ಎಂಬ ರೈತ, ಮೂರು ಪುಟದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಉಮಾ ಎಂಬುವರು ನೇಣಿಗೆ ಕೊರಳೊಡ್ಡಿದರು.

ಈ ಘಟನೆಗಳು ದಂಧೆಯ ಭೀಕರತೆಯನ್ನು ಪ್ರದರ್ಶಿಸಿದರೆ, ಮತ್ತೊಂದೆಡೆ ಸಾಲಗಾರರ ಸಹನೆಯ ಕಟ್ಟೆ ಒಡೆದು ದೊಡ್ಡ ಅನಾಹುತಗಳೇ ಘಟಿಸಿದವು. ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದ ಶಿವಾಜಿನಗರ ಇರ್ಫಾನ್, ಸಿದ್ದಾಪುರ ಅಸ್ಗರ್, ಅಸ್ಲಂ ಅವರ ಕೊಲೆಗಳೂ ನಡೆದು ಹೋದವು.

* ಮೈಮೇಲೆ ಕೆ.ಜಿ.ಗಟ್ಟಲೇ ಬಂಗಾರ ಹೇರಿಕೊಂಡು ಲೇವಾದೇವಿ ಮಾಡುತ್ತ ಬಡವರ ಬೆವರಿನ ಆದಾಯ ಹೀರುವ ಗೂಂಡಾ-ಪುಢಾರಿಗಳ ಅಕ್ರಮಕ್ಕೆ ಬಡವರ ಬಂಧು ಯೋಜನೆಯಿಂದ ಕಡಿವಾಣ ಬೀಳಲಾರಂಭಿಸಿದೆ. ಗ್ರಾಮೀಣ ಮಹಿಳೆಯರಿಗೆ ನೆರವಾಗಲು ‘ಗೃಹ ಲಕ್ಷ್ಮಿ ಸಾಲ ಯೋಜನೆ’ಯ ಘೋಷಣೆ ಮಾಡಲಾಗಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

*ಹಣದ ಹರಿವು ಹೆಚ್ಚಾಗದ ಹಾಗೂ ಬ್ಯಾಂಕ್‌ಗಳು ಸಾಲ ನೀಡುವ ನಿಯಮಗಳನ್ನು ಸಡಿಲಿಸದ ಹೊರತು ಈ ಮಾಫಿಯಾಗೆ ಕಡಿವಾಣ ಬೀಳುವುದಿಲ್ಲ.

- ಎಂ.ಎ.ಸಲೀಂ ಎಡಿಜಿಪಿ, ಅಪರಾಧ ವಿಭಾಗ

*ಮೀಟರ್‌ ಬಡ್ಡಿಯಿಂದ ಬೀದಿಬದಿ ವ್ಯಾಪಾರಿಗಳನ್ನು ಮುಕ್ತಗೊಳಿಸುವ ಉದ್ದೇಶದಿಂದ ‘ಬಡವರ ಬಂಧು’ ಯೋಜನೆ ಜಾರಿಗೊಳಿಸಿದ್ದು, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಜತೆಗೆ, ಋಣಮುಕ್ತ ಪರಿಹಾರ ಸುಗ್ರೀವಾಜ್ಞೆ ಹೊರಡಿಸಿ ಅಂಕಿತಕ್ಕೆ ರಾಷ್ಟ್ರಪತಿ ಅವರಿಗೆ ಕಳುಹಿಸಲಾಗಿದೆ. ಕೆಲವು ಸ್ಪಷ್ಟನೆ ಕೇಳಿದ್ದು, ಅದಕ್ಕೆ ಉತ್ತರ ನೀಡಿದ್ದೇವೆ. ಶೀಘ್ರ ಅಂಕಿತ ಹಾಕುವ ವಿಶ್ವಾಸ ಇದೆ.

- ಬಂಡೆಪ್ಪ ಕಾಶೆಂಪೂರ, ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT