ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ
ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ
Published 29 ಜುಲೈ 2023, 23:26 IST
Last Updated 29 ಜುಲೈ 2023, 23:26 IST
ಅಕ್ಷರ ಗಾತ್ರ

ಮಂಗಳೂರು: ಅದು ಜುಲೈ ಎಂಟನೇ ತಾರೀಕು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಉಚ್ಚಿಪ್ಪುಳಿ ಗ್ರಾಮದ ಉದಯ ಕುಮಾರ್ ಅವರ ಮನೆಯಲ್ಲಿ ಸಂಭ್ರಮ. ಕಡಲಿನ ಆಳಕ್ಕೆ ಬಲೆ ಹಾಕಿ ಮೀನು ಹಿಡಿದು ಮಂಗಳೂರಿನ ದಕ್ಕೆಗೆ ತಂದು ಸುರಿಯುವ ಉದಯ ಕುಮಾರ್‌, ಊರಿಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಮನೆಯ ಕೆಲಸ ಪೂರ್ಣಗೊಂಡಿತ್ತು. ಊರಿಡೀ ಸಂಭ್ರಮಿಸಿದ್ದ ಗೃಹಪ್ರವೇಶದ ಖುಷಿಯಲ್ಲಿ ಉದಯ್ ಕುಮಾರ್ ‘ಕ್ಯಾಪ್ಟನ್’ ಆಗಿರುವ ಬೋಟ್‌ನ ಮಾಲೀಕ, ಮಂಗಳೂರಿನ ರಾಜೇಶ್ ಪುತ್ರನ್ ಅವರೂ ಪಾಲ್ಗೊಂಡಿದ್ದರು.

ಅದೇ ದಿನ, ಅತ್ತ ಛತ್ತೀಸ್‌ಗಡದ ಜಸ್‌ಪುರ್ ಜಿಲ್ಲೆಯ ಬಾರ್ಟೊಲಿ ಗ್ರಾಮದ ಮದುವೆ ಮನೆಯೊಂದನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವ ಕೆಲಸದಲ್ಲಿ ತೊಡಗಿದ್ದರು ಮನ್ನು ತಿರ್ಕಿ. ಮಂಗಳೂರಿನ ದಕ್ಕೆಯಲ್ಲಿ ನಾಟು ಎಂಬ ಅಡ್ಡ ಹೆಸರಿನಿಂದ ಕರೆಯಲಾಗುವ ಅವರು ರೊನಾಲ್ಡ್ ಪಿಂಟೊ ಅವರ ಬೋಟ್‌ನಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ನ ಕ್ಯಾಪ್ಟನ್ (ಚಾಲಕ) ಆಗಿರುವ ಆಂಧ್ರಪ್ರದೇಶದ ನೆಲ್ಲೂರಿನ ನವೀನ್ ರಜೆಯಲ್ಲಿ ಊರಿಗೆ ಹೋದರೂ ಮೀನುಗಾರಿಕೆ ವೃತ್ತಿಯನ್ನೇ ಮಾಡುತ್ತಾರೆ.

ಉಡುಪಿಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಹಲವು ವರ್ಷಗಳಿಂದ ಬೋಟ್‌ಗಳಿಂದ ಮೀನು ಇಳಿಸುವ ಕೆಲಸ ಮಾಡುವ ಕೊಪ್ಪಳದ ಹುಲಿಗೆಪ್ಪ, ‘ನಿತ್ಯವೂ ಕನಿಷ್ಠ ₹1,500 ಗಳಿಕೆ ಇದೆ’ ಎಂದು ಹೇಳಿ ಖುಷಿಪಡುತ್ತಿದ್ದ ಅವರೀಗ, ಊರಿನಲ್ಲಿ ಕೂಲಿ ಮಾಡುತ್ತಿದ್ದಾರೆ.

ಕಾರವಾರದ ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಪರ್ಸಿನ್ ಬೋಟ್‍ವೊಂದರ ತಳಪಾಯದಲ್ಲಿ ಕಟ್ಟಿಕೊಂಡಿದ್ದ ಪಾಚಿಯನ್ನು ಕಬ್ಬಿಣದ ಸಲಾಕೆಯಿಂದ ಕೀಳುತ್ತಿದ್ದ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ‘ವಿಜಿ’,  ‘ದುಡಿದಷ್ಟು ದಿನ ನಮಗೆ ಆದಾಯ. ಒಂದು ವೇಳೆ ಸಮುದ್ರಕ್ಕೆ ಬಿದ್ದು ಸತ್ತರೆ ಬಿಡಿಗಾಸೂ ಸಿಗದು. ನಮ್ಮೂರಿನ ಒಬ್ಬ ಕಾರ್ಮಿಕರು ಎರಡು ವರ್ಷ ಹಿಂದೆ ಸತ್ತಾಗ ಅವರ ಮನೆಯವರ ಕಷ್ಟ ನೋಡಿದ್ದೇನೆ. ಆದರೆ ಏನು ಮಾಡುವುದು, ಹೊಟ್ಟೆಪಾಡಿಗೆ ಕೆಲಸ ಮಾಡಲೇಬೇಕು’ ಎನ್ನುತ್ತ ಕಾಯಕದಲ್ಲಿ ಮಗ್ನರಾದರು.

ಆಳಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮಂಗಳೂರು ದಕ್ಕೆ ಬದಿಯ ತೆರೆದ ಸ್ಥಳದಲ್ಲಿ ಬಲೆಗಳನ್ನು ಕಟ್ಟಿ ಇರಿಸಿರುವುದು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಆಳಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮಂಗಳೂರು ದಕ್ಕೆ ಬದಿಯ ತೆರೆದ ಸ್ಥಳದಲ್ಲಿ ಬಲೆಗಳನ್ನು ಕಟ್ಟಿ ಇರಿಸಿರುವುದು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಹೊಸ ಸರ್ಕಾರ ಬಂದಿದೆ. ಮುಂದಿನ ಋತುವಿನಲ್ಲಿ ಎಲ್ಲ ಯೋಜನೆಗಳು ಕಾರ್ಯಗತವಾಗಿ ಮೀನುಗಾರರ ಸಮಸ್ಯೆಗಳು ಪರಿಹಾರ ಕಾಣುವ ಭರವಸೆ ಇದೆ.
ಚೇತನ್ ಬೆಂಗ್ರೆ, ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ, ಮಂಗಳೂರು

ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ಪ್ರಧಾನ ಉದ್ಯೋಗ. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುತ್ತದೆ. ಇದು ಮೀನುಗಳ ಸಂತಾನೋತ್ಪತ್ತಿ ಅವಧಿಯೂ ಹೌದು. ಹೀಗಾಗಿ ಆಳಸಮುದ್ರ ಹಾಗೂ ಯಾಂತ್ರಿಕೃತ ಬೋಟ್‌ ಬಳಸಿ ಮೀನುಗಾರಿಕೆ ನಡೆಸುವುದಕ್ಕೆ ನಿಷೇಧ ವಿಧಿಸಲಾಗುತ್ತದೆ. ಅರಬ್ಬಿ ಸಮುದ್ರದಲ್ಲಿ ಜೂನ್‌ 1ರಿಂದ ಜುಲೈ 31ರವರೆಗೆ ಈಗ ಮೀನುಗಾರಿಕೆಗೆ ನಿಷೇಧದ ಕಾಲ. (ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರೆ, ನಿಷೇಧ ಇನ್ನೂ 15 ದಿನ ವಿಸ್ತರಣೆಯಾಗುತ್ತದೆ) ಹೀಗಾಗಿ ಮೀನುಗಾರಿಕೆ ದಕ್ಕೆಗಳಲ್ಲಿಯ ಚಟುವಟಿಕೆಗಳು ಮಗ್ಗಲು ಬದಲಿಸಿವೆ. ನೂರಾರು ನಾಟಿಕಲ್‌ ಮೈಲಿ ದೂರ ಕ್ರಿಮಿಸಿ 10–15ದಿನ ಸಮುದ್ರದಲ್ಲೇ ಇದ್ದು ಬೀಸಿದ ಬಲೆಗೆ ಬಿದ್ದ ಮೀನುಗಳನ್ನು ಬೋಟ್‌ನಲ್ಲಿ ತುಂಬಿಕೊಂಡು ಬಂದು ಅವುಗಳನ್ನು ಇಳಿಸುವ ಧಾವಂತ, ಅನ್‌ಲೋಡಿಂಗ್‌ ಮಾಡುವವರ ಕಲರವ, ಮೀನುಗಳ ರಾಶಿ, ಅಲ್ಲೇ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವವರ ಭರಾಟೆ, ಪ್ಯಾಕಿಂಗ್‌ ಮತ್ತು ಸಾಗಾಟಕ್ಕೆ ಬಳಸಲು ಐಸ್‌ ಗುಡ್ಡೆ, ಸಾಲು ಸಾಲು ಲಾರಿಗಳು... ಹೀಗೆ ಗಿಜಿಗುಡುತ್ತಿದ್ದ ದಕ್ಕೆಗಳಲ್ಲಿ ಈಗ ಕಾಣಸಿಗುವುದು ಬೆರಳೆಣಿಕೆಯಷ್ಟು ಜನರು ಮಾತ್ರ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಕಾರ್ಮಿಕರು, ಆಂಧ್ರ, ತಮಿಳುನಾಡು ಕಾರ್ಮಿಕರು ಇಲ್ಲಿ ದುಡಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೊರರಾಜ್ಯದ ಬಹುಪಾಲು ಕಾರ್ಮಿಕರು ದುಡಿಮೆಗೆ ಸಿಗುವುದು ವರ್ಷದಲ್ಲಿ ಒಂಬತ್ತು ತಿಂಗಳು ಮಾತ್ರ. ಬೋಟ್‌ ನಿಲ್ಲಿಸಲು ದಕ್ಕೆಗಳಲ್ಲಿ ಜಾಗ ಸಿಗುವುದಿಲ್ಲ ಎಂದು ನಿಷೇಧದ ಅವಧಿಗಿಂತ ಕೆಲ ದಿನ ಮುಂಚೆಯೇ ಬೋಟ್‌ಗಳನ್ನು ಲಂಗರು ಹಾಕಲಾಗುತ್ತದೆ. ಕಾರ್ಮಿಕರು ವಾಪಸ್‌ ಬರುವುದು ಆಗಸ್ಟ್‌ ಮಧ್ಯಭಾಗದಲ್ಲಿ. ಮೀನುಗಾರಿಕೆ ಆರಂಭಿಸುವ ಮುನ್ನ ‘ಸಮುದ್ರ ಪೂಜೆ’ ಮಾಡುವ ಸಂಪ್ರದಾಯ ಇದ್ದು, ಇದು ಮುಗಿದ ಮೇಲೆಯೇ ಹೊರಗಿನ ಕಾರ್ಮಿಕರು ಬರುವುದು.

ಪರ್ಸಿನ್ ಬೋಟ್‍ಗಳಲ್ಲಿ ಸಾಮಾನ್ಯವಾಗಿ 20ರಿಂದ 40 ಮಂದಿ ಮೀನುಗಾರಿಕೆಗೆ ತೆರಳುತ್ತಾರೆ. ಅವರಲ್ಲಿ ನಾಲ್ಕೈದು ಮಂದಿ ಸ್ಥಳೀಯರಿದ್ದರೆ, ಉಳಿದ ಬಹುತೇಕ ಮಂದಿ ಉತ್ತರ ಭಾರತದವರು. ಹೀಗಾಗಿ ರಾಜ್ಯದ ಕರಾವಳಿ ಭಾಗದ ಮೀನುಗಾರಿಕಾ ಬಂದರುಗಳಲ್ಲಿ ಬಿಹಾರ, ಒಡಿಶಾ, ಜಾರ್ಖಂಡ್, ಛತ್ತೀಸಗಡ ರಾಜ್ಯದ
ಕಾರ್ಮಿಕರೇ ಹೆಚ್ಚು.

ನಾಡದೋಣಿ ಮೀನುಗಾರಿಕೆಗೆ ನಿಷೇಧ ಅನ್ವಯಿಸುವುದಿಲ್ಲ. ಸ್ಥಳೀಯ ಮೀನುಗಾರರು ಈಗ ನಾಡದೋಣಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇನ್ನು ಹಲವರು ಬಲೆ ಹಾಗೂ ಬೋಟ್‌ಗಳ ರಿಪೇರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಕೆಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ದಕ್ಕೆಯಲ್ಲಿ ಮೀನು ಇಳಿಸಲು ನೆರವಾಗುವ ಮಹಿಳೆಯರ ಪೈಕಿ ಕೆಲವರು ಈಗ ಮೀನು ಕತ್ತರಿಸಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ.

‘ನಮ್ಮ ಬದುಕು ಏನಿದ್ದರೂ ಇಲ್ಲೇ. ಮೀನುಗಾರಿಕೆ ಇದ್ದಾಗ ಕೆಲಸಕ್ಕೇನೂ ತೊಂದರೆ ಇಲ್ಲ. ಆದರೆ ನಿಷೇಧದ ಎರಡು ತಿಂಗಳು ಕಳೆಯುವುದು ತುಂಬ ಕಷ್ಟ. ಮೀನು ಸ್ವಚ್ಘಗೊಳಿಸಿ ಕತ್ತರಿಸಿಕೊಟ್ಟರೆ ಪ್ರತಿ ಗ್ರಾಹಕರು ₹10 ಕೊಡುತ್ತಾರೆ. ಅದೇ ಈಗಿನ ನಮ್ಮ ವರಮಾನ’ ಎಂದು ಮಳೆಗಾಲದ ಸಂಕಷ್ಟ ತೆರೆದಿಡುತ್ತಾರೆ ಮಂಗಳೂರಿನ ದಕ್ಕೆಯಲ್ಲಿಯ ಕಾರ್ಮಿಕ ಮಹಿಳೆ.

ಹಲವರು ದುಡಿಮೆಯ ಹಣದಲ್ಲೇ ಉಳಿತಾಯ ಮಾಡಿ ಎರಡು ತಿಂಗಳು ಕುಟುಂಬದವರೊಟ್ಟಿಗೆ ಕಳೆಯುತ್ತಾರೆ. ಆದರೆ ಅಂಕೋಲದ ಚೇತನ್ ಖಾರ್ವಿ ಅವರಂಥ ಮೀನುಗಾರರಿಗೆ ಎರಡು ತಿಂಗಳು ಸಂಕಷ್ಟದ ಸಮಯ. ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಕಾರ್ಮಿಕರು ‘ವಾರ್ಷಿಕ ರಜೆ’ಯಲ್ಲಿ ಊರಿಗೆ ತೆರಳುವಾಗ ಬೋಟ್ ಮಾಲೀಕರು ಒಂದಿಷ್ಟು ಹಣ ಕೊಡುತ್ತಾರಾದರೂ ಊರಿನಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳದೇ ಇದ್ದರೆ ಜೀವನ ಸಾಗಿಸುವುದು ಕಷ್ಟ. ಈ ಕಾರಣದಿಂದಲೇ ಚೇತನ್, ಅವರಂಥವರು ಮೀನುಗಾರಿಕೆ ಆದಷ್ಟು ಬೇಗ ಪುನರಾರಂಭ ಆಗಲಿ ಎಂದು ಕಾಯುತ್ತಿದ್ದರೆ, ಮನ್ನು ತಿರ್ಕಿಯವರಂಥವರು ‘ಮಂಗಳೂರಿಗೆ ಬಂದರೆ ಮೀನುಗಾರಿಕೆ ಖುಷಿ ನೀಡುತ್ತದೆ, ಊರಿಗೆ ಮರಳಿದರೆ ಡೆಕೊರೇಷನ್‌ನಲ್ಲಿ ಸಂತಸ ಕಾಣುತ್ತೇನೆ’ ಎಂದು ಹೇಳಿ ನಗೆ ಬೀರುತ್ತಾರೆ.

ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರು ಪರ್ಸಿನ್ ಬೋಟ್ ದುರಸ್ತಿ ಮಾಡುತ್ತಿರುವುದು
ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರು ಪರ್ಸಿನ್ ಬೋಟ್ ದುರಸ್ತಿ ಮಾಡುತ್ತಿರುವುದು ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ಊಟ, ವಸತಿಗೆ ಸಮಸ್ಯೆ ಇಲ್ಲ. ಆದರೆ ಉಳಿದ ಮೀನುಗಾರರಂತೆ ನಮಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಿದರೆ ಅನುಕೂಲ ಆಗುತ್ತದೆ. ಆಳಸಮುದ್ರದಲ್ಲಿ, ಜೀವಭಯದಲ್ಲಿ ಕೆಲಸ ಮಾಡುವ ಸ್ಥಿತಿಯಿದೆ.
ಅಭಯ್ ಖಜೋರ್, ಜಾರ್ಖಂಡ್‌ನ ಮೀನುಗಾರಿಕೆ ಕಾರ್ಮಿಕ

ಎಲ್ಲ ವಯೋಮಾನದವರಿಗೂ ಅವರ ಶ್ರಮಕ್ಕೆ ಅನುಸಾರ ಕೂಲಿ ತಂದುಕೊಡುವ ವೃತ್ತಿ ಇದು. ಹೀಗಾಗಿ ಹೆಚ್ಚು ಹೆಚ್ಚು ಕಾರ್ಮಿಕರನ್ನು ಇದು ಸೆಳೆಯುತ್ತಿದೆ. ಸ್ನೇಹಿತನೊಂದಿಗೆ ಮಂಗಳೂರು ದಕ್ಕೆಯಲ್ಲಿ ನಿಂತಿದ್ದ ಬಿಹಾರದ ಯುವಕ ಪರಮೇಶ್‌, ‘ಎರಡು ವರ್ಷಗಳಿಂದ ಇಲ್ಲಿ ಮೀನುಗಾರಿಕೆ ಸಂಸ್ಕರಣೆಯಲ್ಲಿ ದುಡಿಯುತ್ತಿದ್ದೇವೆ. ವಾರಕ್ಕೆ ₹ 9 ಸಾವಿರದ ವರೆಗೂ ಕೂಲಿ ತೆಗೆದುಕೊಂಡಿದ್ದಿದೆ. ರಜೆಯ ಅವಧಿಯಲ್ಲಿ ಊರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಈಗ ಅಲ್ಲಿಯೂ ಕೆಲಸ ಇಲ್ಲ. ಹೀಗಾಗಿ ಬೇಗ ವಾಪಸಾಗಿದ್ದೇನೆ’ ಎಂದು ತನ್ನನ್ನು ಕೆಲಸಕ್ಕೆ ಕರೆದೊಯ್ಯುವವರನ್ನು ಹುಡುಕಲಾರಂಭಿಸಿದರು.

‘ಸಮುದ್ರದ ಮಧ್ಯೆಯೇ ನಮ್ಮ ಜೀವನ ಮತ್ತು ಜೀವ. ಬಿಸಿಲು, ಗಾಳಿಗೆ ಎದೆಯೊಡ್ಡಿ ಬೃಹತ್ ಮೀನುಗಳ ದಾಳಿಯ ಆತಂಕವನ್ನೂ ಮೀರಿ ಜೀವವನ್ನೇ ಪಣಕ್ಕಿಟ್ಟು ಮಾಡುವ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆಯಾದರೂ ಆರೋಗ್ಯ, ಜೀವನ ಭದ್ರತೆ ಇಲ್ಲ’ ಎಂಬುದು ಕಾರ್ಮಿಕರಾದ ಉದಯ್ ಕುಮಾರ್, ಮನ್ನು ತಿರ್ಕಿ, ನವೀನ್ ಅವರ ವೇದನೆ.

ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಮತ್ಸ್ಯಾಶ್ರಯ ಯೋಜನೆ, ಮೀನುಗಾರಿಕೆ ವೇಳೆ ಮೃತರಾದವರ ಕುಟುಂಬಕ್ಕೆ ಪರಿಹಾರ ಇತ್ಯಾದಿ ಯೋಜನೆಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಆದರೆ, ಹೊರರಾಜ್ಯದಿಂದ ಬಂದವರಿಗೆ ಮತ್ತು ಅವರ ಕುಟುಂಬದವರಿಗೆ ಇದ್ಯಾವುದೂ ಅನ್ವಯವಾಗುವುದಿಲ್ಲ. ರಾಜ್ಯದ ಮೀನುಗಾರರಿಗೂ ಇದರ ಲಾಭ ಪಡೆಯಲು ಅನೇಕ ಆಡ್ಡಿ.  ಹೀಗಾಗಿ ಮೀನುಗಾರರ ಬದುಕು ‘ಆರಕ್ಕೆ ಏರುವ’ ಕಾಲ ಇನ್ನೂ ಸನ್ನಿಹಿತವಾಗಿಲ್ಲ.

‌‘ಬೋಟ್ ನಿರ್ವಹಣೆ, ಕೂಲಿ, ತೆರಿಗೆ ಮುಂತಾದವನ್ನೆಲ್ಲ ಕಳೆದು ನಮಗೂ ಸಿಗುವುದು ಅತ್ಯಲ್ಪ ಲಾಭ. ಚೀನಾದಿಂದ ದೊಡ್ಡ ಯಂತ್ರಗಳು, ಸಾಗರ ಜೀವವೈವಿಧ್ಯವನ್ನು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುತ್ತಿರುವ ಅಪಾಯಕಾರಿ ಬಲೆಗಳು ಬಂದ ಮೇಲಂತೂ ನಿಯತ್ತಿನಿಂದ ಈ ವೃತ್ತಿ ಮಾಡುವವರ ಪಾಡು ಹೇಳತೀರದು’ ಎಂದು ಬೋಟ್ ಮಾಲೀಕರೂ ಅಳಲು ತೋಡಿಕೊಳ್ಳುತ್ತಾರೆ.

ಮಂಗಳೂರು ದಕ್ಕೆಯೊಂದರಲ್ಲೇ ಈ ಮೀನುಗಾರಿಕೆಯ ಹಂಗಾಮಿನಲ್ಲಿ  ಮೀನು ಮಾರಾಟ ಮತ್ತು ರಫ್ತಿನಿಂದ ₹4,150 ಕೋಟಿಗೂ ಹೆಚ್ಚು ವಹಿವಾಟು ಆಗಿದೆ. ಪ್ರತಿ ವರ್ಷ ಈ ಮೊತ್ತ ಹೆಚ್ಚುತ್ತಲೇ ಇದೆ. ಕಳೆದ ವರ್ಷ ₹3,946 ಕೋಟಿ ಮೊತ್ತದ ವಹಿವಾಟು ನಡೆದಿದ್ದರೆ 2020 ಮತ್ತು 21ರಲ್ಲಿ ಕ್ರಮವಾಗಿ ₹1,760 ಕೋಟಿ ಮತ್ತು ₹2,090 ಕೋಟಿ ವಹಿವಾಟಿಗೆ ದಕ್ಕೆ ಸಾಕ್ಷಿಯಾಗಿದೆ. ಆದರೆ ಇದರ ಪ್ರಯೋಜನ ಪಡೆದುಕೊಳ್ಳುವವರು ಕೆಲವರು ಮಾತ್ರ ಎಂಬ ದುಗುಡ ಮೀನುಗಾರರಲ್ಲಿ ಮಾತ್ರವಲ್ಲ, ಬೋಟ್ ಮಾಲೀಕರಲ್ಲೂ ಇದೆ.

ಬೋಟುಗಳಲ್ಲಿ ದುಡಿಯುವ ಹೊರರಾಜ್ಯದ ಕಾರ್ಮಿಕರು ಸೂಕ್ತ ದಾಖಲೆಗಳನ್ನು ಸಲ್ಲಿಸುವುದಿಲ್ಲ. ಅವರಿಗೆ ಗುರುತಿನ ಕಾರ್ಡ್ ನೀಡಲು ತಾಂತ್ರಿಕ ಸಮಸ್ಯೆಗಳಿವೆ. ಇದರಿಂದ ದುರಂತದ ಸಮಯದಲ್ಲಿ ಅವರಿಗೆ ಪರಿಹಾರ ಒದಗಿಸುವುದು ಕಷ್ಟ.
ಬಬಿನ್ ಬೋಪಣ್ಣ, ಜಂಟಿ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಕಾರವಾರ
ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿರುವ ಮುಂಗಾರಿನ ಆರಂಭದ ಅವಧಿಯಲ್ಲಿ ಪರ್ಸಿನ್ ಬಲೆಗಳನ್ನು ಕಾರ್ಮಿಕರು ದುರಸ್ತಿ ಪಡಿಸುತ್ತಿರುವುದು
ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿರುವ ಮುಂಗಾರಿನ ಆರಂಭದ ಅವಧಿಯಲ್ಲಿ ಪರ್ಸಿನ್ ಬಲೆಗಳನ್ನು ಕಾರ್ಮಿಕರು ದುರಸ್ತಿ ಪಡಿಸುತ್ತಿರುವುದು ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್

ಬದಲಾಗುವ ದಕ್ಕೆ– ಬಂದರು ಚಹರೆ

ಆಳ ಸಮುದ್ರ ಮೀನುಗಾರಿಕೆ ಸಂದರ್ಭದಲ್ಲಿ ಮೀನುಗಾರಿಕೆ ಕೆಲಸಗಾರರು, ಮೀನು ಖರೀದಿಸುವವರು ಮತ್ತು ಸಾಗಿಸುವವರಿಂದ ಗಿಜಿಗುಡುತ್ತಿರುವ ಬಂದರು ಮತ್ತು ದಕ್ಕೆಯ ಚಹರೆ ಟ್ರಾಲ್ ಬೋಟ್‌ ಮೀನುಗಾರಿಕೆ ನಿಷೇಧವಾಗುತ್ತಿದ್ದಂತೆ ಬದಲಾಗಿದೆ. ಬೋಟ್‌ಗಳು ದಕ್ಕೆಯಲ್ಲಿ ಲಂಗರು ಹಾಕಿವೆ. ಬೋಟ್‌ ಬಿಲ್ಡಿಂಗ್ ಯಾರ್ಡ್‌ನಲ್ಲಿ ಬೋಟ್‌ಗಳ ದುರಸ್ತಿ ಕಾರ್ಯ ನಡೆದಿದೆ. ಬಲೆ ಹೆಣೆಯುವ ಮತ್ತು ಹರಿದ ಬಲೆಯನ್ನು ಸರಿಪಡಿಸುವ ಕಾರ್ಯವೂ ಜೋರಾಗಿ ನಡೆದಿದೆ.

‘ಬೋಟ್‌ ಶುಚಿಗೊಳಿಸುವ, ಬಲೆ ರಿಪೇರಿ ಕೆಲಸ ಗೊತ್ತಿರುವವರು ಇಲ್ಲೇ ಇದ್ದು ಆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ’ ಎಂದು ಜಾರ್ಖಂಡ್‍ನ ರಾಂಚಿ ಜಿಲ್ಲೆಯ ಕಾರ್ಮಿಕ ಅಭಯ್ ಖಜೋರ್ ಹೇಳುತ್ತಾರೆ. ಮಂಗಳೂರಿನ ರಾಬರ್ಟ್‌, ‘30 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡು ತಿಂಗಳು ಬಲೆ ರಿಪೇರಿ, ಬೋಟ್‌ ಸ್ವಚ್ಛತೆಯ ಹೊಣೆ. ಎಲ್ಲ ಕೆಲಸ ಗೊತ್ತಿರುವ ನನ್ನಂತಹವರಿಗೆ ಇಡೀ ವರ್ಷ ದುಡಿಮೆ ಇದ್ದೇ ಇರುತ್ತದೆ’ ಎನ್ನುತ್ತಾರೆ.

ಮಂಗಳೂರು ದಕ್ಕೆಯಲ್ಲಿ ಬೋಟ್‌ಗೆ ಬಣ್ಣ ಬಳಿಯುತ್ತಿದ್ದ ಉಕ್ಕಡಗಾತ್ರಿಯ ಬಸವರಾಜ, ‘ನಾನು ಸುಮಾರು 15 ವರ್ಷಗಳಿಂದ ಮಲ್ಪೆ ದಕ್ಕೆಯಲ್ಲಿ ಪೇಂಟಿಂಗ್‌ ವೃತ್ತಿಯಲ್ಲಿ ತೊಡಗಿದ್ದೇನೆ. ಮೂರು ಬೋಟ್‌ಗಳಿಗೆ ಬಣ್ಣ ಬಳಿಯಲು ಇಲ್ಲಿಗೆ ಜನರನ್ನು ಕರೆಸಿಕೊಂಡಿದ್ದಾರೆ. ಈ ಎರಡು ತಿಂಗಳು ನಮಗೆ ಬಿಡುವಿಲ್ಲದ ಕೆಲಸ’ ಎನ್ನುತ್ತಾರೆ.

ಮಂಗಳೂರಿನಲ್ಲಿ 63 ಐಸ್ ಘಟಕಗಳು ಇದ್ದು 11 ಶೈತ್ಯಾಗಾರ, 14 ಫಿಶ್ ಮಿಲ್‌ಗಳು ಇವೆ. ಇಲ್ಲೆಲ್ಲ ಈ ಎರಡು ತಿಂಗಳು ನವೀಕರಣ ಕಾರ್ಯ ನಡೆಯುತ್ತದೆ. ನಗರದಲ್ಲಿರುವ 10 ರಫ್ತು ಕಂಪನಿಗಳಲ್ಲಿ ನಿರಂತರ ಕೆಲಸ ನಡೆಯುತ್ತಿರುತ್ತದೆ. ಮೀನುಗಾರಿಕೆ ನಿಷೇಧದ ಕೆಲವು ದಿನ ಆಗಾಗಲೇ ಹಿಡಿದ ಮೀನು ಸಂಸ್ಕರಿಸಿ ಕಳುಹಿಸುವ ಕೆಲಸ ನಡೆದರೆ ನಂತರ ತಮಿಳುನಾಡು ಮತ್ತು ಆಂಧ್ರದಿಂದ ಬರುವ ಮೀನುಗಳ ಶೇಖರಣೆ ಮತ್ತು ರಫ್ತು ಕಾರ್ಯ ನಡೆಯುತ್ತದೆ. ಬಂಗಾಳ ಕೊಲ್ಲಿಯಲ್ಲಿ ಅರಬ್ಬಿ ಸಮುದ್ರಕ್ಕಿಂತ ಎರಡು ತಿಂಗಳು ಮೊದಲೇ ನಿಷೇಧ ಆರಂಭವಾಗಿರುತ್ತದೆ. ಹೀಗಾಗಿ ನಿಷೇಧದ ಸಂದರ್ಭದಲ್ಲಿ ಪಶ್ಚಿಮ ಕರಾವಳಿ ಭಾಗದ ಜನರಿಗೂ ಕಂಪನಿಗಳಿಗೂ ಪೂರ್ವ ಕರಾವಳಿಯ ಮೀನು ಯಥೇಚ್ಛವಾಗಿ ಲಭಿಸುತ್ತದೆ. ಪರ್ಸಿನ್ ಬೋಟ್ ಮತ್ತು ನಾಡದೋಣಿಗಳಲ್ಲಿ ತೆರಳಿ ಹಿಡಿಯುವ ಮೀನು ಕೂಡ ಜೂನ್‌–ಜುಲೈ ತಿಂಗಳಲ್ಲಿ ಇಲ್ಲಿನವರ ಕೈ ಹಿಡಿಯುತ್ತದೆ. ಪರ್ಸಿನ್ ಬೋಟ್‌ಗಳಲ್ಲಿ ಹಿಡಿಯುವ ಮೀನಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಬೋಟ್ ಮಾಲೀಕ ಡೊನಾಲ್ಡ್ ಪಿಂಟೊ ಹೇಳುತ್ತಾರೆ.

(ಒಳನೋಟಕ್ಕೆ) – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
(ಒಳನೋಟಕ್ಕೆ) – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಪರ್ಸಿನ್ ಬೋಟ್ ದುರಸ್ತಿಗೆ ಪ್ರತಿ 2 ವರ್ಷಕ್ಕೊಮ್ಮೆ ಕನಿಷ್ಠ 5 ರಿಂದ ₹15 ಲಕ್ಷದವರೆಗೆ ವ್ಯಯಿಸಬೇಕು. ಮೀನುಗಾರಿಕೆ ಚಟುವಟಿಕೆ ಉತ್ತಮವಾಗಿ ಇರದಿದ್ದರೆ ದೊಡ್ಡ ಆರ್ಥಿಕ ಹೊಡೆತ ಎದುರಿಸಬೇಕಾಗುತ್ತದೆ.
ಅಭಿಷೇಕ ದುರ್ಗೇಕರ, ಕಾರವಾರ ಪರ್ಸಿನ್ ಬೋಟ್ ಮಾಲೀಕ

ಬೋಟ್ ದುರಸ್ತಿ ದೊಡ್ಡ ಸವಾಲು

ದುರಸ್ತಿ ಯಾರ್ಡ್‌ನಲ್ಲಿ ಬೋಟ್‌ಗಳ ದುರಸ್ತಿಯ ಕೆಲಸ ಹಗಲು–ರಾತ್ರಿ ನಡೆಯುತ್ತಿರುತ್ತದೆ. ಹೆಚ್ಚು ಹಾಳಾಗಿದ್ದರೆ ಪ್ರತಿ ಬೋಟ್‌ ದುರಸ್ತಿಗೆ ₹ 6 ಲಕ್ಷದಷ್ಟು ಖರ್ಚಾಗುತ್ತದೆ. ಬೋಟ್‌, ಬಲೆ ಮುಂತಾದವುಗಳ ದುರಸ್ತಿ ಮಾಡಿ ಮತ್ತೊಮ್ಮೆ ಬಳಕೆಗೆ ಸಿದ್ಧಗೊಳಿಸಬೇಕಾದರೆ ಪ್ರತಿ ವರ್ಷ ಪ್ರತ್ಯೇಕವಾಗಿ ಒಂದಿಷ್ಟು ಹಣ ತೆಗೆದಿರಿಸಬೇಕಾಗುತ್ತದೆ ಎನ್ನುತ್ತಾರೆ ಟ್ರಾಲ್ ಬೋಟ್ ಮತ್ತು ಪರ್ಸಿನ್ ಬೋಟ್‌ಗಳ ಮಾಲೀಕರು.

‘ದುರಸ್ತಿ, ಪೇಂಟಿಂಗ್‌, ಬಲೆ ರಿಪೇರಿ ಎಲ್ಲ ಮುಗಿಸಿ ಸಮುದ್ರಕ್ಕೆ ಬೋಟ್ ಇಳಿಸುವಾಗ ಹಾಕುವ ಭಾರಿ ಪ್ರಮಾಣದ ಡೀಸೆಲ್‌ ಇತ್ಯಾದಿಗಳಿಗೆ ಕನಿಷ್ಠ ₹10 ಲಕ್ಷ ಬೇಕಾಗುತ್ತದೆ. ಇದರ ನಡುವೆ ಮೀನುಗಾರರು ಮತ್ತು ಇತರ ಕಾರ್ಮಿಕರ ಕ್ಷೇಮವನ್ನೂ ನೋಡಿಕೊಳ್ಳಬೇಕಾಗುತ್ತದೆ. ಹೀ‌ಗಾಗಿ ಬೋಟ್ ಮಾಲೀಕರಿಗೂ ಮೀನುಗಾರಿಕೆ ಭಾರಿ ಲಾಭ ತಂದುಕೊಡುವ ಉದ್ಯಮವೇನಲ್ಲ’ ಎನ್ನುತ್ತಾರೆ ಮಂಗಳೂರಿನ ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೇಂಗ್ರೆ. 

‘ಬಲೆ ಹೆಣೆಯಲು ಸರಿಯಾದ ಜಾಗ ಇಲ್ಲ. ದಕ್ಕೆ ಸಮೀಪದಲ್ಲಿ ಹರಡಿರುವ ವಿಶಾಲವಾದ ಪ್ರದೇಶದಲ್ಲಿ ಟೆಂಟ್ ಹಾಕಿಕೊಡಬೇಕು ಎಂಬ ಬೇಡಿಕೆ ಇರಿಸಿ ವರ್ಷಗಳೇ ಕಳೆದಿವೆ. ಬಲೆಗಳನ್ನು ಸುರಕ್ಷಿತವಾಗಿ ಇರಿಸುವುದಕ್ಕೂ ಅನುಕೂಲಕರ ವಾತಾವರಣ ಇಲ್ಲ’ ಎಂದು ದೂರುತ್ತಾರೆ ಡೊನಾಲ್ಡ್ ಪಿಂಟೊ.

‘ಮಂಗಳೂರು ಬಂದರಿನ ಮೂರನೇ ಹಂತದ ಕಾಮಗಾರಿಗೆ ಅನುಮೋದನೆ ಲಭಿಸಿದರೆ ಮಾತ್ರ ಬಲೆ ನೇಯ್ಗೆಗೆ ಶೆಡ್ ನಿರ್ಮಾಣ ಮಾಡಲು ಸಾಧ್ಯ. ಅಲ್ಲಿಯವರೆಗೆ ಈಗಿನ ಪರಿಸ್ಥಿತಿಯೇ ಮುಂದುವರಿಯಲಿದೆ’ ಎಂಬುದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೆ.ಹರೀಶ್ ಕುಮಾರ್ ಅವರ ವಿವರಣೆ.

ಪೂರಕ ಮಾಹಿತಿ: ವಿಕ್ರಂ ಕಾಂತಿಕೆರೆ (ಮಂಗಳೂರು), ಗಣಪತಿ ಹೆಗಡೆ (ಕಾರವಾರ), ಬಾಲಚಂದ್ರ ಎಚ್‌. (ಉಡುಪಿ)

ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT