ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬಹುಗ್ರಾಮ ಯೋಜನೆ ವೈಫಲ್ಯ, ಕೋಟಿ ಸುರಿದರೂ ಗ್ರಾಮಗಳಿಗೆ ಬಾರದ ನೀರು

Last Updated 13 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕಲಬುರ್ಗಿ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಬಹುಪಾಲು ಯೋಜನೆಗಳು ಕಳಪೆ ಕಾಮಗಾರಿ, ಸಮನ್ವಯ ಮತ್ತು ನಿರ್ವಹಣೆ ಕೊರತೆ, ಅವೈಜ್ಞಾನಿಕವಾಗಿ ಜಲಮೂಲಗಳ ಆಯ್ಕೆಯ ಕಾರಣಗಳಿಂದ ಯಶಸ್ಸು ಕಂಡಿಲ್ಲ.

ಅಫಜಲಪುರ ತಾಲ್ಲೂಕಿನ ಅಳ್ಳಗಿ ಮತ್ತು ಇತರ ಆರು ಗ್ರಾಮಗಳಿಗೆ ನೀರು ಪೂರೈಸಲು 2014ರಲ್ಲಿ ₹ 5.16 ಕೋಟಿ ವೆಚ್ಚದಲ್ಲಿ ಸಿವಿಲ್‌ ಕಾಮಗಾರಿ ಮುಗಿಸಲಾಗಿದೆ. ಇದಕ್ಕೆ ಎಕ್ಸ್‌ಪ್ರೆಸ್‌ ಫೀಡರ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂಗೆ ₹ 67 ಲಕ್ಷ ಪಾವತಿ ಮಾಡಲಾಗಿದೆ. ಆದರೂ, ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ.

ಬಂದರವಾಡ ಗ್ರಾಮದಲ್ಲಿ ₹1.20 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌, ಪಂಪ್‌ಹೌಸ್‌, ಎರಡು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಒಮ್ಮೆಯೂ ಅಲ್ಲಿ ನೀರು ಹರಿದಿಲ್ಲ. ಇದೀಗ ಮತ್ತೊಂದು ಯೋಜನೆಯಡಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ.

ಜೇವರ್ಗಿ ತಾಲ್ಲೂಕಿನ ಮಲ್ಲಾ (ಕೆ) ಮತ್ತು ಒಂಬತ್ತು ಗ್ರಾಮಗಳಿಗೆ ನೀರು ಪೂರೈಕೆ ಯೋಜನೆಯನ್ನು ₹ 3.75 ಕೋಟಿ, ಇಟಗಾ ಮತ್ತು ಇತರ ಒಂಬತ್ತು ಗ್ರಾಮಗಳಿಗೆ ₹ 2.55 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ನಿರ್ವಹಣೆ ಇಲ್ಲದ ಕಾರಣ ನೀರು ಪೂರೈಕೆ ಆಗುತ್ತಿಲ್ಲ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಯೋಜನಾ ಮೊತ್ತ ₹ 50 ಲಕ್ಷದಿಂದ ₹ 5 ಕೋಟಿಯವರೆಗೂ ಇದೆ. ನದಿಗಳನ್ನು ಮೂಲವಾಗಿಟ್ಟುಕೊಂಡು ರೂಪಿಸಿರುವ ಬಹುಪಾಲು ಯೋಜನೆಗಳು ಯಶಸ್ವಿಯಾಗಿವೆ. ಆದರೆ, ನದಿಯಲ್ಲಿ ಎತ್ತರದಲ್ಲಿ ಜಾಕ್‌ವೆಲ್‌ ನಿರ್ಮಿಸಿರುವುದು, ನದಿ ದೂರ ಎಂಬ ಕಾರಣಕ್ಕೆ ಹಳ್ಳ–ಬಾವಿಗಳನ್ನೇ ಮೂಲವಾಗಿಟ್ಟುಕೊಂಡು ರೂಪಿಸಿರುವ ಕೆಲ ಯೋಜನೆಗಳಿಂದ ಬೇಸಿಗೆಯಲ್ಲಿ ಹನಿ ನೀರೂ ಸಿಗದ ಸ್ಥಿತಿ ಉಂಟಾಗಿದೆ. ಕೆಲವೆಡೆ ಯೋಜನೆ ಯಶಸ್ವಿಯಾಗಿದ್ದರೂ ಕೊನೆಯ ಹಂತಕ್ಕೆ ನೀರು ಸಿಗುತ್ತಿಲ್ಲ.

ಚಿಂಚೋಳಿ ತಾಲ್ಲೂಕಿನ ಚಂದನಕೇರಾ, ಚೇಂಗಟಾ, ಐನಾಪುರ ಹಾಗೂ ರುಮ್ಮನಗೂಡ ಗ್ರಾಮ ಪಂಚಾಯಿತಿಗಳ 12 ಗ್ರಾಮಗಳಿಗೆ ನೀರು ಪೂರೈಸುವ ಚಂದನಕೇರಾ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಯಶಸ್ಸು ಕಂಡಿದೆ. ಆದರೆ,ಚಂದನಕೇರಾ ಗ್ರಾಮದ ರಾಮಗೊಂಡರ ಬಡಾವಣೆಯಲ್ಲಿ ನೀರೇ ಸಿಗದ ಸ್ಥಿತಿಯಿದೆ. ಯೋಜನೆ ಅನುಷ್ಠಾನಗೊಳಿಸಿ ಆರು ವರ್ಷಗಳು ಕಳೆಯುತ್ತಿದ್ದರೂ ಈ ಬಡಾವಣೆಗೆ ಹನಿ ನೀರೂ ಬಂದಿಲ್ಲ. ‘ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಕೊಳವೆ ಅಳವಡಿಸಿರುವುದು ಹಾಗೂ ಮಾರ್ಗ ಮಧ್ಯೆ ನೀರು ಪೋಲಾಗುತ್ತಿರುವುದು ಇದಕ್ಕೆ ಕಾರಣ’ ಎಂದು ದೂರುತ್ತಾರೆ ಚಂದನಕೇರಾದ ಯುವ ಮುಖಂಡ ದತ್ತಾತ್ರೇಯ ರಾಯಗೋಳ ಹಾಗೂ ವಕೀಲ ಪ್ರಕಾಶ ಬೋಯಿ.

ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಸ್ಥಳೀಯ ಪ್ರಭಾವಿಗಳು ಗುತ್ತಿಗೆ– ಉಪ ಗುತ್ತಿಗೆ ಕಾಮಗಾರಿ ನಿರ್ವಹಿಸುವುದು ಮತ್ತು ‘ಪಾಲುದಾರರು’ ಹೆಚ್ಚಿರುವುದು. ಇದಕ್ಕೆ ಅಪವಾದ ಎಂಬಂತೆ ಶಾಸಕರು ಕ್ರಿಯಾಶೀಲವಾಗಿರುವ ಕ್ಷೇತ್ರಗಳಲ್ಲಿ ಈ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಂಗರವಾಡ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಂಗರವಾಡ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್

ಹಾಳಾಗಿಹೋದ ಪೈಪ್‌ಗಳು
ಕಲಬುರ್ಗಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಕೆಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲಾದ ಪಿವಿಸಿ ಪೈಪ್‌ಗಳು ನೆಲದಲ್ಲೇ ಹಾಳಾಗಿ ಹೋಗಿವೆ. ಈ ಕುರಿತು ರಿಯಾಲಿಟಿ ಚೆಕ್‌ ನಡೆಸಲು ‘ಪ್ರಜಾವಾಣಿ’ ಅಫಜಲಪುರ ತಾಲ್ಲೂಕಿನ ಬಂದರವಾಡ, ದೇವಲ ಗಾಣಗಾಪುರ, ಜೇವರ್ಗಿ ತಾಲ್ಲೂಕಿನ ಇಟಗಾ, ಬೋಸಗಾ (ಕೆ) ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆ ಗ್ರಾಮಗಳ ಕೆಲವು ಗ್ರಾಮಸ್ಥರು ಇದನ್ನು ಹೇಳಿಕೊಂಡರು.

‘ಇದು ಪೈಪ್‌ಗಳ ಉತ್ಪಾದಕರಿಗೆ ಲಾಭ ಮಾಡುವ ಯೋಜನೆ. ವಿದ್ಯುತ್‌ ಬಿಲ್ಲು ಸಂದಾಯದ್ದೇ ದೊಡ್ಡ ರಗಳೆ. ಇಂತಹ ಯೋಜನೆಗಳ ಬದಲು ಸ್ಥಳೀಯವಾಗಿಯೇ ಅಂತರ್ಜಲ ವೃದ್ಧಿಸುವ ಯೋಜನೆಗಳು ಬೇಕು’ ಎನ್ನುತ್ತಾರೆ ಮಾಜಿ ಶಾಸಕ ಬಿ.ಆರ್‌. ಪಾಟೀಲ.

ನಿರ್ವಹಣೆಯ ಕೊರತೆ
ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಯೋಜನೆಯನ್ನು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತದೆ. ನಂತರ ಅದನ್ನು ನಿರ್ವಹಣೆ ಮಾಡಿಕೊಂಡು ಹೋಗಬೇಕಾದ ಹೊಣೆ ಗ್ರಾಮ ಪಂಚಾಯಿತಿಯದ್ದು. ಇದಕ್ಕಾಗಿ ಆ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರೊಬ್ಬರ ನೇತೃತ್ವದಲ್ಲಿ ನಿರ್ವಹಣಾ ಸಮಿತಿಯನ್ನೂ ರಚಿಸಲಾಗಿರುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ಸೇರಿ ಕರ ವಸೂಲಿಯಿಂದ ಬಂದ ಹಣವನ್ನು ನೀರು ಪೂರೈಕೆ ಜಾಲದ ದುರಸ್ತಿಗಾಗಿ ಬಳಸಬೇಕು. ಆದರೆ, ಬಹುತೇಕ ಪಂಚಾಯಿತಿಗಳಲ್ಲಿ ಈ ಕಾರ್ಯ ನಡೆಯುತ್ತಿಲ್ಲ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಒಂದು ಯೋಜನೆ ವ್ಯಾಪ್ತಿಯಲ್ಲಿ 2–3 ಗ್ರಾಮ ಪಂಚಾಯಿತಿಗಳು ಬರುತ್ತವೆ. ಹೀಗಿದ್ದಾಗ ಇಲ್ಲಿ ಸಮನ್ವಯ ಸಾಧ್ಯವಾಗುವುದಿಲ್ಲ. ಮೇಲಾಗಿ ಹಸ್ತಾಂತರಿಸಿದ ನಂತರ ಈ ಯೋಜನೆಗಳತ್ತ ಇಲಾಖೆಯವರು ತಿರುಗಿಯೂ ನೋಡುವುದಿಲ್ಲ ಎಂಬುದು ಗ್ರಾಮ ಪಂಚಾಯಿತಿಗಳವರ ಪ್ರತ್ಯಾರೋಪ.

*
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪೈಪ್‌ ಅಳವಡಿಸಿ, ಓವರ್‌ಹೆಡ್‌ ಟ್ಯಾಂಕ್‌ ಕಟ್ಟಿಸಿದರೂ ನಮ್ಮೂರಿಗೆ ನೀರು ಹರಿಯಲಿಲ್ಲ. ಅಧಿಕಾರಿಗಳ ಬೆನ್ನುಬಿದ್ದರೂ ಪ್ರಯೋಜನವಾಗಲಿಲ್ಲ. ಸಾಕಷ್ಟು ಭ್ರಷ್ಟಾಚಾರ ನಡೆಸಿ ಹಣ ಎತ್ತಿ ಹಾಕಿದ್ದರಿಂದ ಯೋಜನೆ ವಿಫಲವಾಗಿದೆ.
-ರಾಜೇಂದ್ರ ಸರ್ದಾರ್, ಬಂದರವಾಡ, ಕಲಬುರ್ಗಿ ಜಿಲ್ಲೆ

*
ನಾಲ್ಕೈದು ವರ್ಷಗಳ ಹಿಂದೆ ಇಟಗಾ, ಸಿದ್ನಳ್ಳಿ, ಅಂಕಲಗಾ, ಬೋಸಗಾ ಗ್ರಾಮಗಳಿಗೆ ನೀರು ಕೊಡುವುದಾಗಿ ಪೈಪ್‌ಲೈನ್ ಹಾಕಿದ್ದರು. ಅದರಿಂದ ನೀರು ಬರಲೇ ಇಲ್ಲ. ಆಗ ಇದ್ದ ಅಧಿಕಾರಿಗಳು ವರ್ಗಾವಣೆಯಾಗಿ ಹೋಗಿದ್ದಾರೆ., ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನೀರು ಸಿಗಲಿಲ್ಲ.
-ಕಾಂತು ಸುಭಾಷ್, ಇಟಗಾ, ಕಲಬುರ್ಗಿ ಜಿಲ್ಲೆ

*
ವಿಫಲಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಲನಿರ್ಮಲ ಯೋಜನೆಯಡಿ ಕೈಗೆತ್ತಿಕೊಂಡು ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹಳೆಯ ಯೋಜನೆ ಏಕೆ ವಿಫಲವಾದವು ಎನ್ನುವ ಬಗ್ಗೆ ಮಾಹಿತಿ ಇಲ್ಲ.
–ಅಹ್ಮದ್‌ ಅಜೀಜುದ್ದೀನ್, ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT