ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ಮಾಲೀಕರಿಗೆ ಹೊರೆಯಾದ ಒಂದು ಕಾಲದ ‘ಚಿನ್ನದ ಮೊಟ್ಟೆ’

Last Updated 12 ಜೂನ್ 2021, 19:31 IST
ಅಕ್ಷರ ಗಾತ್ರ

ಮಂಗಳೂರು: ‘ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು ಎಂಬ ಗಾದೆ ನಮ್ಮಂಥ ಖಾಸಗಿ ಬಸ್‌ ಮಾಲೀಕರಿಗೆ ಅನ್ವಯವಾಗುತ್ತದೆ. ನಮ್ಮ ಹುಚ್ಚು ಯಾವಾಗ ಬಿಡುತ್ತದೆ ಎಂಬುದು ನಮಗೂ ಗೊತ್ತಿಲ್ಲ...’

ಡೀಸೆಲ್‌ ಬೆಲೆ ಏರಿಕೆಯಿಂದ ಖಾಸಗಿ ಬಸ್‌ ಕಂಪನಿಗಳು ನಷ್ಟದಲ್ಲಿರುವ ಬಗ್ಗೆ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ.ರಾಜವರ್ಮ ಬಳ್ಳಾಲ್ ಅವರ ಪ್ರತಿಕ್ರಿಯೆ ಇದು.

‘ಬಸ್‌ಗಳಿಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದೇವೆ. ಡೀಸೆಲ್‌ ದರ ಗಗನಕ್ಕೆ ಏರುತ್ತಿರುವುದರಿಂದ ನಮ್ಮ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪ್ರಯಾಣ ದರ ಏರಿಕೆ ಅನಿವಾರ್ಯ. ಇಲ್ಲದಿದ್ದರೆ, ಖಾಸಗಿ ಬಸ್‌ ವ್ಯವಸ್ಥೆ ಸಂಪೂರ್ಣ ಕುಸಿಯಬಹುದು’ ಎಂದು ಎಚ್ಚರಿಸುತ್ತಾರೆ ಬಳ್ಳಾಲ್‌.

ರಾಜ್ಯದ 16 ಜಿಲ್ಲೆಗಳಲ್ಲಿ ಸುಮಾರು 9 ಸಾವಿರ ಖಾಸಗಿ ಸ್ಟೇಜ್‌ ಕ್ಯಾರೇಜ್‌ ಬಸ್‌ಗಳು ಜನರಿಗೆ ಸೇವೆ ಒದಗಿಸುತ್ತಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 3,500 ಬಸ್‌ಗಳು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ. ಒಂದು ಕಾಲದಲ್ಲಿ ‘ಚಿನ್ನದ ಮೊಟ್ಟೆ’ಯಂತಿದ್ದ ಖಾಸಗಿ ಬಸ್‌ ವ್ಯವಸ್ಥೆ, ಇದೀಗ ಮಾಲೀಕರಿಗೆ ಹೊರೆಯಾಗುತ್ತಿದೆ.

ಡೀಸೆಲ್‌ ದರ ಏರಿಕೆಯ ಜೊತೆಗೆ ಬಸ್‌ಗಳ ಬಿಡಿಭಾಗ, ವಿಮೆ, ತೆರಿಗೆ ಹೆಚ್ಚಳವಾಗಿರುವುದು ಬಸ್‌ ಮಾಲೀಕರ ನಿದ್ದೆಗೆಡಿಸಿದೆ. ಪ್ರಯಾಣ ದರ ಏರಿಕೆಯ ಪ್ರಸ್ತಾವಕ್ಕೆ ಸರ್ಕಾರ ಒಪ್ಪುತ್ತಿಲ್ಲ. ಲಾಕ್‌ಡೌನ್‌ ಬಳಿಕ ಮುಖ್ಯಮಂತ್ರಿ, ಸಾರಿಗೆ ಸಚಿವರನ್ನು ಭೇಟಿಯಾಗಿ ಒತ್ತಡ ಹೇರಲು ಒಕ್ಕೂಟ ನಿರ್ಧರಿಸಿದೆ.

‘ಡೀಸೆಲ್‌ಗೆ ₹ 50 ಇದ್ದಾಗ ಪ್ರಯಾಣ ದರ ಏರಿಕೆಗೆ ಬೇಡಿಕೆ ಸಲ್ಲಿಸಿದ್ದೆವು. ಡೀಸೆಲ್‌ ದರ ₹ 64ಕ್ಕೆ ಏರಿದ ಬಳಿಕ ಸ್ಟೇಜ್‌ಗೆ ₹ 1ರಷ್ಟು ಏರಿಸಲು ಸರ್ಕಾರ ಅವಕಾಶ ನೀಡಿತ್ತು. ಈಗ ಡೀಸೆಲ್‌ ದರ ₹ 92 ದಾಟಿದೆ. ಕೋವಿಡ್‌ ಕಾಲದಲ್ಲಿ ಪ್ರಯಾಣಿಕರ ಮೇಲೆ ಹೊರೆ ಹಾಕಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ಆದರೆ, ಬೇರೆ ದಾರಿಯಿಲ್ಲ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ.

ಕೋಲಾರ, ಚಿತ್ರದುರ್ಗ, ಶಿವಮೊಗ್ಗ ದಲ್ಲೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯದೇ ಗ್ಯಾರೇಜ್‌ ಸೇರಿವೆ. ಹುಬ್ಬಳ್ಳಿ–ಧಾರವಾಡ ಅವಳಿನಗರದಲ್ಲೂ ಬೇಂದ್ರೆ ನಗರ ಸಾರಿಗೆ ಬಸ್‌ಗಳೂ ಇದಕ್ಕೆ ಹೊರತಾಗಿಲ್ಲ.

‘ಮುಳಬಾಗಿಲಿನಿಂದ ನಿತ್ಯ ಬೆಂಗಳೂರು, ಮಾಲೂರು, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶದ ಹಲವು ಹಳ್ಳಿಗಳು, ಗ್ರಾಮಾಂತರ ಪ್ರದೇಶಗಳಿಗೆ 100ಕ್ಕೂ ಹೆಚ್ಚು ಟ್ರಿಪ್‌ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಇದೀಗ ಎಲ್ಲ ಬಸ್‌ಗಳು ಸ್ಥಗಿತವಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ’ ಎನ್ನುತ್ತಾರೆ ಮುಳಬಾಗಿಲಿನ ಬಸ್‌ ಮಾಲೀಕ್‌ ರಫೀಕ್‌ ಸಾಬ್.

‘ಲಾಕ್‌ಡೌನ್‌ನಿಂದ ಖಾಸಗಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮಾಲೀಕರು ಪಾವತಿಸಬೇಕಾದ ತೆರಿಗೆ ಹಾಗೂ ವಿಮೆ ಪಾವತಿ ಮಾಡುವ ವಿಷಯ ದಲ್ಲಿ ಸರ್ಕಾರ ವಿನಾಯಿತಿ ನೀಡಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಬೇರೆ ಕೆಲಸ ನೋಡುವುದು ಒಳಿತು: ‘ಆಟೊ ರಿಕ್ಷಾಗಳು ಹೆಚ್ಚಾಗಿವೆ. ಇದೀಗ ಲಾಕ್‌ಡೌನ್‌ನಿಂದ ಬಾಡಿಗೆಯೂ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗಿದೆ. ಸಿಎನ್‌ಜಿ ಆಟೊಗಳು ಹೇಗೊ ನಿಭಾಯಿಸಬಹುದು. ದುಬಾರಿ ಪೆಟ್ರೋಲ್‌ ಹಾಕಿಕೊಂಡು, ಹಳೆಯ ದರದಲ್ಲಿ ಓಡಿಸುವುದು ಕಷ್ಟದ ಕೆಲಸ. ಆಟೊ ಮನೆಯಲ್ಲಿ ನಿಲ್ಲಿಸಿ ಬೇರೆ ಕೆಲಸ ಹುಡುಕುವುದು ಒಳಿತು’ ಎನ್ನುವುದು ಬಿಎಂಎಸ್‌ ಆಟೊ ಚಾಲಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್‌ ರಾವ್‌ ಹೇಳುವ ಮಾತು.

* ಸರ್ಕಾರವು ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿದರೆ ಬಸ್‌ಗಳನ್ನು ರಸ್ತೆಗೆ ಇಳಿಸುವುದಿಲ್ಲ. ನಮ್ಮ ಬೇಡಿಕೆಯಂತೆ ದರ ನೀಡಿದರೆ ಮಾತ್ರ ಬಸ್‌ ಸೇವೆ ಶುರುಮಾಡುತ್ತೇವೆ.

–ಕೆ.ರಾಜವರ್ಮ ಬಳ್ಳಾಲ್, ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ

ಟ್ಯಾಕ್ಸಿ ಚಾಲಕರು ವೃತ್ತಿ ತೊರೆಯುವ ಆತಂಕ

ಬೆಂಗಳೂರು: ಮೊದಲೇ ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿರುವ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಈಗ ಇಂಧನ ಬೆಲೆ ಏರಿಕೆಯ ಭಾರ ಹೊರುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

‘ಲಾಕ್‌ಡೌನ್ ಸಡಿಲಗೊಂಡರೂ ಜನ ಸಂಚಾರ ಸದ್ಯಕ್ಕೆ ಸಹಜ ಸ್ಥಿತಿಗೆ ಮರಳುವುದಿಲ್ಲ. ಹೀಗಾಗಿ, ಇಂಧನ ದರ ಹೆಚ್ಚಳ ಆಗಿದೆ ಎಂಬ ಕಾರಣಕ್ಕೆ ಪ್ರಯಾಣ ದರ ಹೆಚ್ಚಳ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಕೋವಿಡ್ ಭಯದಿಂದ ಟ್ಯಾಕ್ಸಿ ಹತ್ತಲು ಭಯಪಡುತ್ತಿರುವ ಪ್ರಯಾಣಿಕರು ದರ ಹೆಚ್ಚಳ ಮಾಡಿದರೆ ಬಳಕೆಯನ್ನೇ ನಿಲ್ಲಿಸುತ್ತಾರೆ’ ಎಂದು ಓಲಾ, ಉಬರ್ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆತಂಕ ವ್ಯಕ್ತಪಡಿಸಿದರು.

‘ಚಾಲಕರು ಒಂದೂವರೆ ತಿಂಗಳಿಂದ ಮನೆಯಲ್ಲೇ ಕುಳಿತಿದ್ದಾರೆ. ಸಾಲದ ಕಂತು ಪಾವತಿಯಾಗದ ಕಾರಣ ಬಡ್ಡಿಗೆ ಬಡ್ಡಿ ಸೇರಿಕೊಳ್ಳುತ್ತಿದೆ. ಗ್ರಾಹಕರು ಟ್ಯಾಕ್ಸಿ ಬಳಸಲು ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕು. ಇಂಧನ ಬೆಲೆ ಏರಿಕೆ ಮಾಡಿರುವುದು ನಮ್ಮ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಏನು ಮಾಡಬೇಕು ಎಂಬ ದಿಕ್ಕೇ ತೋಚದಂತಾಗಿದೆ’ ಎಂದರು.

‘ಸಮಸ್ಯೆಯಿಂದ ಪರಾಗಲು ಚಾಲಕರು ವೃತ್ತಿಯನ್ನೇ ಬಿಡುವ ಆತಂಕ ಇದೆ. ಇದರಿಂದ ನಿರುದ್ಯೋಗ, ಆತ್ಮಹತ್ಯೆ ಪ್ರಕರಣಗಳ ಹೆಚ್ಚಾಗುತ್ತವೆ. ಸಾರಿಗೆ ವ್ಯವಸ್ಥೆ ಅದೋಗತಿಗೆ ತಲುಪಲಿದೆ. ಸಾರಿಗೆ ಉದ್ಯಮವನ್ನೇ ಸರ್ಕಾರ ಸಾಯಿಸಲು ಹೊರಟಂತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT