ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಕೆಸಾಪ್ಸ್‌ ಕ್ರಮಕ್ಕೆ ಬಾಲಕಿಯರು ‘ಬಲಿ’

ಕಾಂಡೋಮ್‌ ಹಂಚಿಕೆಗೆ ಅಪ್ರಾಪ್ತರು * ಉದ್ಯೋಗದ ನೆಪದಲ್ಲಿ ಶೋಷಣೆ * ಸರ್ಕಾರದ ಮೌನ
Last Updated 14 ಡಿಸೆಂಬರ್ 2019, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಸುರಕ್ಷಿತ ಲೈಂಗಿಕತೆ’ ಹೆಸರಿನಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಸಾಪ್ಸ್‌) ಎರಡು ದಶಕಗ ಳಿಂದ ನಡೆಸುತ್ತಿರುವ ಉಚಿತ ಕಾಂಡೋಮ್ ಹಂಚಿಕೆ ಕಾರ್ಯಕ್ರಮಕ್ಕೆ, ಅಮಾಯಕ ಬಾಲಕಿಯರು ಮತ್ತು ಮಹಿಳೆಯರು ‘ಬಲಿಪಶು’ಗಳಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಬಡತನ, ಅನಕ್ಷರತೆ, ನಿರುದ್ಯೋಗ, ಅತ್ಯಾಚಾರ, ಬಾಲ್ಯ ವಿವಾಹ, ವೈಧವ್ಯ, ಕಳ್ಳ ಸಾಗಣೆ, ಪ್ರೀತಿ ಹೆಸರಿನಲ್ಲಿ ಮೋಸ, ಕಾಂಡೋಮ್ ಹಂಚುವ ಜಾಲ... ಹೀಗೆ ನಾನಾ ಕಾರಣಗಳಿಗಾಗಿ ಎಳೆಯ ಹೆಣ್ಣು ಜೀವಗಳು ವೇಶ್ಯಾವಾಟಿಕೆ ಬಲೆಯಲ್ಲಿ ಸಿಕ್ಕಿಕೊಂಡು ಹೊರಬರಲು ಸಾಧ್ಯವಾಗದೆ ಪರದಾಡುತ್ತಿರುವ ಆಘಾತಕಾರಿ ಅಂಶ ಬಯಲಿಗೆ ಬಂದಿದೆ. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿ ಅಧ್ಯಯನ ಸಮಿತಿ’ ನಡೆಸಿರುವ ಸಮೀಕ್ಷೆ ಇದಕ್ಕೆ ಸಾಕ್ಷ್ಯ ನೀಡುತ್ತದೆ.

ಕೋಟ್ಯಂತರ ರೂಪಾಯಿ ವ್ಯವಹಾರದ ಕಾಂಡೋಮ್‌ ಹಂಚಿಕೆ ಜಾಲದೊಳಗೆ ಹೆಣ್ಣುಮಕ್ಕಳು ಗೊತ್ತಿದ್ದೊ, ಗೊತ್ತಿಲ್ಲದೆಯೊ ಬೀಳುತ್ತಾರೆ. ಕೊನೆಗೆ ಲೈಂಗಿಕ ಜೀತಕ್ಕೆ ಸಿಕ್ಕು ಅಪರಾಧಿ ಭಾವದಿಂದ ನರಳುತ್ತಾರೆ. ಉಚಿತವಾಗಿ ವಿತರಣೆಯಾಗುವ ಈ ಗರ್ಭ ನಿರೋಧಕ ಸಾಧನದ ಪ್ರಮಾಣವನ್ನು ಪ್ರತಿವರ್ಷ ಶೇ 25ರಷ್ಟು ಹೆಚ್ಚಿಸಬೇಕೆಂಬ ಕೆಸಾಪ್ಸ್‌ ಗುರಿ, ಅಪ್ರಾಪ್ತೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ದಂಧೆಯೊಳಗೆ ತಳ್ಳುತ್ತಿದೆ. ಸರ್ಕಾರದ ಅಂಗಸಂಸ್ಥೆಯ ಕಾರ್ಯಕ್ರಮದಲ್ಲೇ ಪೋಕ್ಸೊ ಕಾಯ್ದೆಯ ರಾಜಾರೋಷ ಉಲ್ಲಂಘನೆ ನಡೆಯುತ್ತಿದೆ ಎಂಬ ಅನುಮಾನ– ಆರೋಪಗಳಿವೆ.

ಕೋಟ್ಯಂತರ ರೂಪಾಯಿ ವೆಚ್ಚ: ಹೆಣ್ಣು ಮಕ್ಕಳ ಕಳ್ಳಸಾಗಣೆ ಇದೀಗ ಮಾಫಿಯಾ ಸ್ವರೂಪ ಪಡೆದಿದ್ದು, ಕರ್ನಾಟಕ ಮೂರನೇ ದೊಡ್ಡ ರಾಜ್ಯ ಎಂದು ದಾಖಲಾಗಿದೆ. ಆರೋಗ್ಯ ಇಲಾಖೆಯಡಿ ನೊಂದಣಿಯಾಗಿರುವ ಲೈಂಗಿಕ ಕಾರ್ಯಕರ್ತೆಯರ ಪೈಕಿ, ಶೇ 45.9ರಷ್ಟು ಮಂದಿ ಮಾನವ ಕಳ್ಳ ಸಾಗಣೆಯಿಂದಾಗಿ ಈ ದಂಧೆಯಲ್ಲಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮೂಲಕವೇ ಕಾಂಡೋಮ್‍ಗಳನ್ನು ‘ಗಿರಾಕಿ’ಗಳಿಗೆ ವಿತರಿಸಲಾಗುತ್ತದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಯವ್ಯಯದಲ್ಲಿ ಲಕ್ಷಾಂತರ ರೂಪಾಯಿ ತೆಗೆದಿರಿಸುತ್ತವೆ. ವಿದೇಶಗಳಿಂದಲೂ ಸಾಕಷ್ಟು ಹಣ ಹರಿದುಬರುತ್ತದೆ.

ಏಡ್ಸ್‌ ನಿಯಂತ್ರಣಕ್ಕೆ 2014–15ರಿಂದ ಈವರೆಗೆ (2019ರ ಡಿ.5) ನ್ಯಾಕೊದಿಂದ ₹ 476.19 ಕೋಟಿ ಮತ್ತು ರಾಜ್ಯ ಸರ್ಕಾರದಿಂದ ₹ 89.91 ಕೋಟಿ ಸೇರಿ ಒಟ್ಟು ₹ 566.10 ಕೋಟಿ ಕೆಸಾಪ್ಸ್‌ಗೆ ಬಂದಿದೆ. ಅದರಲ್ಲಿ ₹ 444.09 ಕೋಟಿ ವೆಚ್ಚವಾಗಿದೆ. ವ್ಯಯವಾದ ಮೊತ್ತದಲ್ಲಿ ಏಡ್ಸ್‌ ನಿಯಂತ್ರಣ ಉದ್ದೇಶದಿಂದ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳು (ಎನ್‍ಜಿಓ) ಮತ್ತು ಸಮುದಾಯ ಆಧಾರಿತ ಸಂಸ್ಥೆಗಳಿಗೆ (ಸಿಬಿಓ) 2014–15ರಿಂದ ಈವರೆಗೆ ₹ 94.49 ಕೋಟಿ ನೀಡಲಾಗಿದೆ. ‘ಲೆಕ್ಕ’ ಪಕ್ಕಾ ಇದ್ದರೂ ನಕಲಿ ಬಿಲ್‌ಗಳ ಮೂಲಕ ಸೋರಿಕೆಯಾದ ‘ಕೋಟಿ’ಗಳೇ ಹೆಚ್ಚು ಎಂಬ ಆರೋಪಗಳಿವೆ.

ಅಪ್ರಾಪ್ತರ ಬಳಕೆ: ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಂಪ್ರದಾಯ, ಗೊಡ್ಡು ಆಚರಣೆಗಳು, ಬಾಲ್ಯವಿವಾಹ... ಇನ್ನಿಲ್ಲದಂತೆ ತುಳಿಯುತ್ತವೆ. ಅಸಹಾಯಕರಾದ ಇಂಥವರನ್ನು ರಕ್ಷಣೆ ಮಾಡುವ ನೆಪದಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಕಾಂಡೋಮ್‍ಗಳ ನೇರ ಹಂಚಿಕೆದಾರರನ್ನಾಗಿಸುತ್ತವೆ. ಸ್ವತಃ ಸಂತ್ರಸ್ತರಿಗೇ ಪೀರ್ ವರ್ಕರ್ (ಲೈಂಗಿಕ ವೃತ್ತಿನಿರತರಲ್ಲಿ ನಾಯಕತ್ವ ಗುಣ ಇರುವವರು) ಕೆಲಸ ಕೊಟ್ಟು, ಹಳ್ಳಿ ಹಳ್ಳಿಗಳಲ್ಲಿಯೂ ಕಾಂಡೋಮ್ ಹಂಚುವ ಕೆಲಸ ನಡೆಯುತ್ತಿದೆ.

ರಾಜ್ಯ ಸರ್ಕಾರ ರಚಿಸಿದ ‘ಲೈಂಗಿಕ ವೃತ್ತಿನಿರತರ ಸ್ಥಿತಿ–ಗತಿ ಅಧ್ಯಯನ ಸಮಿತಿ’ ಎರಡು ವರ್ಷಗಳ ಹಿಂದೆ ನಡೆಸಿದ ಅಧ್ಯಯನ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಕ್ಕಿದ ಸುಮಾರು ಒಂದು ಲಕ್ಷ ಲೈಂಗಿಕ ವೃತ್ತಿನಿರತರಲ್ಲಿ, 459 ಮಂದಿ ಅಪ್ರಾಪ್ತೆಯರು. ಆದರೆ, ಅನಧಿಕೃತ ಮಾಹಿತಿ ಪ್ರಕಾರ ಈ ‌ಸಂಖ್ಯೆ 12 ಸಾವಿರಕ್ಕೂ ಹೆಚ್ಚು. ಈ ಸಮೀಕ್ಷೆ ಪ್ರಕಾರ,ಶೇ 50ರಷ್ಟು ಮಂದಿ ತಮ್ಮ ಸರಾಸರಿ 14-16ನೆಯ ವಯಸ್ಸಿನಲ್ಲೇ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ್ದಾರೆ!‌

ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ಡ್ಯಾಪ್ಕೊ (ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ) ಅಧೀನದಲ್ಲಿರುವ ನೆಟ್‍ವರ್ಕ್ ಸಂಸ್ಥೆಗಳು ಕಾಂಡೋಮ್‍ಗಳನ್ನು ಸ್ಥಳೀಯ ಲೈಂಗಿಕ ವೃತ್ತಿನಿರತರಿಗೆ ಹಂಚಿಕೆ ಮಾಡುತ್ತದೆ. ಅದರ ಮೂಲಕವೇ ಮಹಿಳೆಯರು ಮತ್ತು ಅಪ್ರಾಪ್ತೆಯರು ಜಾಲದೊಳಗೆ ಬಿದ್ದಿರುವ, ಬೀಳುತ್ತಿರುವ ಸಾಕಷ್ಟು ನಿದರ್ಶನಗಳಿವೆ.

‘ಉದ್ಯೋಗ ಕೊಡುತ್ತೇವೆ ಬನ್ನಿ’ ಎಂದು ಕಾಂಡೋಮ್ ಹಂಚಲು ಎನ್‍ಜಿಓಗಳು, ಸಿಬಿಓಗಳು, ಪೀರ್ ವರ್ಕರ್‌ಗಳು ಅಮಾಯಕ ಹೆಣ್ಣು ಮಕ್ಕಳನ್ನು ದಾಖಲು ಮಾಡುತ್ತಿರುವ ಆರೋಪಗಳಿವೆ.

ವಿತಂಡ ವಾದ: ಎಚ್‍ಐವಿ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆ ಹೆಚ್ಚಿರುವ ಸಮುದಾಯಗಳಾದ ಮಹಿಳಾ ಲೈಂಗಿಕ ಕಾರ್ಯಕರ್ತರು (ಎಫ್‍ಎಸ್‍ಡಬ್ಲ್ಯು) ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರು (ಎಂಎಸ್‍ಎಂ), ಇಂಜಕ್ಷನ್ ಮೂಲಕ ಡ್ರಗ್ ಬಳಸುವವರು (ಐಡಿಯು), ಲಿಂಗ ಪರಿವರ್ತನೆ ಮಾಡಿಕೊಂಡವರು (ಟಿಜಿ), ಟ್ರಕ್ ಚಾಲಕರು ಹಾಗೂ ವಲಸೆ ಬರುವವರಿಗೆ ಕಾಂಡೋಮ್ ಹಂಚುವ ವಿಶಾಲ ವ್ಯವಸ್ಥೆಯನ್ನು ಕೆಸಾಪ್ಸ್ ಹೊಂದಿದೆ.

ಸಹಭಾಗಿ ಲೈಂಗಿಕ ವೃತ್ತಿನಿರತರ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಹುಡುಕಿ, ನೋಂದಣಿ ಮಾಡಿಸಿಕೊಂಡ ಬಳಿಕ ಈ ಸಂಸ್ಥೆಗಳು ಕಾಂಡೋಮ್ ವಿತರಿಸುತ್ತವೆ. ಏಡ್ಸ್, ಎಚ್‍ಐವಿ, ಮತ್ತಿತರ ಗುಪ್ತರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆ ನೀಡುವ ಮೂಲಕ ‘ಸುರಕ್ಷಿತ’ ಜೀವನಪಾಠವನ್ನೂ ಹೇಳಿಕೊಡುತ್ತವೆ.

ಕಾರ್ಮಿಕರಲ್ಲಿ ಬಾಲ ಕಾರ್ಮಿಕರಿದ್ದಂತೆ, ‘ಸೆಕ್ಸ್ ವರ್ಕ್’ನಲ್ಲಿ ಅಪ್ರಾಪ್ತೆಯರಿರುವುದು ಸಹಜ ಎನ್ನುವುದು ಕೆಸಾಪ್ಸ್ ಅಧಿಕಾರಿಗಳ ವಾದ. ಆದರೆ, ಲೈಂಗಿಕವಾಗಿ ಶೋಷಣೆಗೆ ಸಿಲುಕಿಕೊಂಡಿರುವ ಹೆಣ್ಣು ಮಕ್ಕಳು ಆತ್ಮಗೌರವ ಬದಿಗಿಟ್ಟು, ಅನೈತಿಕ ವೃತ್ತಿಯಲ್ಲಿ ತೊಡಗಿರುವುದು ಮಕ್ಕಳ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುತ್ತಾರೆ ಕಾನೂನು ತಜ್ಞರು.

ಕಾಂಡೋಮ್ ಮಾರಾಟ ಜಾಲಕ್ಕೆ ಬಲಿಯಾದ ಅಪ್ರಾಪ್ತೆಯರು ಅದರ ಪೂರೈಕೆಯ ವಾಹಕರಷ್ಟೆ. ಅದಕ್ಕೆ ಪ್ರತಿಯಾಗಿ ‘ನಿನ್ನ ದೇಹ ನಿನ್ನ ಹಕ್ಕು’ ಎಂಬ ಪ್ರತಿಪಾದನೆ ಜೊತೆಗೇ ‘ವೇಶ್ಯಾವಾಟಿಕೆಯನ್ನು ಕಾನೂನುಬದ್ಧ’ಗೊಳಿಸಬೇಕೆಂದು ಶೋಷಿತರ ಕಡೆಯಿಂದಲೇ ಹೋರಾಟ ನಡೆಯುತ್ತಿರುವುದು ಬೃಹತ್ ಬಂಡವಾಳಶಾಹಿ ಕಾಂಡೋಮ್ ಕಂಪನಿಗಳ ಕುತಂತ್ರ ರಾಜಕೀಯವಲ್ಲದೆ ಇನ್ನೇನು?

ಸಮರ್ಥನೆ: ರಾಜ್ಯದಲ್ಲಿ ಎಚ್‌ಐವಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸವಾಲು ಎದುರಿಸುತ್ತಲೇ ಏಡ್ಸ್‌ ನಿಯಂತ್ರಣ ಸೊಸೈಟಿ (ಕೆಸಾಪ್ಸ್) ಕಾರ್ಯಕ್ರಮ ಕಾರ್ಯಗತಗೊಳಿಸುತ್ತದೆ. ಯಾವುದೇ ಹಂತದಲ್ಲೂ ಅಪ್ರಾಪ್ತೆಯರನ್ನು ಬಳಸಿಕೊಳ್ಳುವುದಿಲ್ಲ. ಅಲ್ಲದೆ, ಬಹುತೇಕ ಮಹಿಳೆಯರು ‘ರಹಸ್ಯ’ ಕಾಪಾಡಬೇಕೆಂಬ ಕಾರಣಕ್ಕೆ ತಮ್ಮಿಂದ ಮಕ್ಕಳನ್ನು ದೂರ ಇಟ್ಟು ದಂಧೆ ನಡೆಸುತ್ತಾರೆ. ಎಚ್‌ಐವಿ, ಏಡ್ಸ್‌ ತಡೆಯ ಜೊತೆಗೆ, ಸೋಂಕಿತ ಸಮುದಾಯಕ್ಕೆ ಸಾಮಾಜಿಕ ಸೌಲಭ್ಯಗಳನ್ನು ತಲುಪಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಎನ್‌ಜಿಒ ಮತ್ತು ಸಿಬಿಒಗಳು ಕೆಲಸ ಮಾಡುತ್ತವೆ ಎನ್ನುತ್ತಾರೆ ಕೆಸಾಪ್ಸ್‌ ಅಧಿಕಾರಿಗಳು.

***

‘ನಿಜಕ್ಕೂ ನಮ್ಮದು ಲಜ್ಜೆಗೆಟ್ಟ ವ್ಯವಸ್ಥೆ’
ಕಾಂಡೋಮ್ ಹಂಚಿಕೆಯ ಜಾಲದಿಂದ ಅಪ್ರಾಪ್ತೆಯರೂ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ವಾಸ್ತವ. ಎಚ್‍ಐವಿ ಸೋಂಕು ತಡೆ ನೆಪದಲ್ಲಿ ನಡೆಯುತ್ತಿರುವ ಉಚಿತ ಕಾಂಡೋಮ್ ಹಂಚಿಕೆ ಅದೆಷ್ಟೋ ಕೋಟಿ ರೂಪಾಯಿ ವ್ಯವಹಾರ. ಈ ಕಲ್ಪನೆ ಹಿಂದೆ ದೊಡ್ಡ ಸಂಚಿದೆ, ಅವ್ಯವಹಾರವಿದೆ. ಮುಟ್ಟಿದರೆ ಪುಡಿ, ಪುಡಿಯಾಗುವ ರಬ್ಬರ್ ಚೀಲಗಳಂತಿರುವ ಕಾಂಡೋಮ್‍ಗಳನ್ನು ಹೆಣ್ಣುಮಕ್ಕಳ ಕೈಗಿಟ್ಟು, ಸೆಕ್ಸ್ ಅರಸಿ ಬರುವ ಗಿರಾಕಿಗಳ ಜೊತೆ ಸುರಕ್ಷಿತ ಲೈಂಗಿಕ ಕ್ರಿಯೆಗೆ ಪ್ರೋತ್ಸಾಹ ನೀಡುತ್ತಿರುವುದು ದುರಂತ. ಆ ಮೂಲಕ, ಸೋಂಕು ತಗುಲಿಸಿಕೊಂಡು, ಬದುಕಿಗೆ ಅಪಾಯ ತಂದುಕೊಂಡ ಹೆಣ್ಣುಮಕ್ಕಳ ದುಃಖದ ಕಥೆಗಳನ್ನು ಲೈಂಗಿಕ ಕಾರ್ಯಕರ್ತೆಯರ ಸ್ಥಿತಿ–ಗತಿ ಅಧ್ಯಯನ ಸಮಿತಿ ಅಧ್ಯಕ್ಷೆಯಾಗಿದ್ದಾಗ ಆಲಿಸಿದ್ದೇನೆ. ನಿಜಕ್ಕೂ ನಮ್ಮದು ಲಜ್ಜೆಗೆಟ್ಟ ವ್ಯವಸ್ಥೆ.
–ಜಯಮಾಲಾ, ವಿಧಾನ ಪರಿಷತ್‌ ಸದಸ್ಯೆ (ಮಾಜಿ ಸಚಿವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT