ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತ: ಮಹಿಳೆಯರ ಬದುಕು ಕಸಿದ ತಾಲಿಬಾನ್‌

Last Updated 23 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

‘ಆಗ ಮನೆಯಿಂದ ಹೊರಗಡಿ ಇಟ್ಟಾಗ ರಸ್ತೆಯಲ್ಲಿ ಯಾರೋ ತಡೆಯುತ್ತಾರೆ ಎಂಬ ಭಯ ನನಗಿರಲಿಲ್ಲ. ತಡೆದು, ನನ್ನ ಹಿಜಾಬ್‌ನ ಬಣ್ಣವೇಕೆ ಕೆಂಪು ಅಥವಾ ಬಿಳಿ ಅಥವಾ ಕಪ್ಪಾಗಿದೆ ಎಂದು ಪ್ರಶ್ನಿಸುತ್ತಾರೆ ಎಂಬ ಆತಂಕವೂ ಇರಲಿಲ್ಲ. ನನ್ನ ಕೈಯಲ್ಲಿರುವ ಮೊಬೈಲ್ ಅನ್ನು ಯಾರೋ ಕಸಿದುಕೊಂಡು, ಅದರಲ್ಲಿ ಏನಿದೆ ಎಂದು ನೋಡುತ್ತಾರೆ ಎಂಬ ಕಳವಳವಂತೂ ಇರಲೇ ಇಲ್ಲ. ಈಗ ಅಂತಹ ಎಲ್ಲಾ ಭಯಗಳೂ ಕಾಡುತ್ತಿವೆ’- ಅಫ್ಗಾನಿಸ್ತಾನವನ್ನು ತಾಲಿಬಾನ್‌ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡು ಆಗಸ್ಟ್‌ 15ಕ್ಕೆ ಒಂದು ವರ್ಷ ಕಳೆದಿದೆ. ಆ ನೆಪದಲ್ಲಿ ವಿಶ್ವ ಸಂಸ್ಥೆಯ ಪ್ರತಿನಿಧಿಗಳು ಅಫ್ಗಾನಿಸ್ತಾನದಲ್ಲಿ ಓಡಾಡಿ, ಅಲ್ಲಿನ ಮಹಿಳೆಯೊಬ್ಬರನ್ನು ಮಾತನಾಡಿಸಿದಾಗ ಬಂದ ಪ್ರತಿಕ್ರಿಯೆ ಇದು. ಹೀಗೆ ಮಾತನಾಡಿಸಿದ ಪ್ರತಿಯೊಬ್ಬ ಮಹಿಳೆಯ ಪ್ರತಿಕ್ರಿಯೆಯೂ ಇದೇ ರೀತಿಯದ್ದು. ತಾಲಿಬಾನ್ ಆಡಳಿತದಲ್ಲಿ ಅಫ್ಗಾನಿಸ್ತಾನದ ಮಹಿಳೆಯರ ಸ್ಥಿತಿಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ಆ ಬದಲಾವಣೆಗಳ ಸ್ವರೂಪ ಇಂತಿದೆ

ಅಫ್ಗಾನಿಸ್ತಾನದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಿತಿಗತಿ ಕುರಿತು ಚರ್ಚಿಸಲು ತಾಲಿಬಾನ್‌, ಇದೇ ಜೂನ್‌ 30ರಂದು ಕಾಬೂಲ್‌ನಲ್ಲಿ ಒಂದು ಸಾರ್ವಜನಿಕ ಸಭೆ ಕರೆದಿತ್ತು. ಆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲು ಮೌಲ್ವಿಗಳು ಮತ್ತು ಧಾರ್ಮಿಕ ನಾಯಕರಿಗಷ್ಟೇ ಅವಕಾಶ ನೀಡಲಾಗಿತ್ತು. ಒಟ್ಟು 4,500 ಮಂದಿ ಭಾಗಿಯಾಗಿದ್ದ ಆ ಕಾರ್ಯಕ್ರಮದಲ್ಲಿ ಒಬ್ಬ ಮಹಿಳೆಯೂ ಇರಲಿಲ್ಲ. ‘ತಮ್ಮ ತಂದೆ, ಪತಿ ಮತ್ತು ಗಂಡುಮಕ್ಕಳ ಮೂಲಕ ಮಹಿಳೆಯರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರನ್ನು ಅವರ ಪುರುಷರು ಪ್ರತಿನಿಧಿಸುತ್ತಾರೆ’ ಎಂದು ಆ ಸಭೆಯಲ್ಲಿ ಘೋಷಿಸಲಾಯಿತು. ಈ ಸ್ವರೂಪದ ಧೋರಣೆ ಆ ಸಭೆಗೆ ಸೀಮಿತವಾದುದಲ್ಲ. ಈಗ ಅಫ್ಗಾನಿಸ್ತಾನದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸ್ಥಿತಿ ಇದೇ ರೀತಿ ಇದೆ.

‘ಮಹಿಳೆಯರಿಗೆ ಪ್ರತ್ಯೇಕ ಅಸ್ತಿತ್ವವೇ ಇಲ್ಲ ಎಂಬಂತೆ ತಾಲಿಬಾನ್‌ ಆಡಳಿತ ನಿರ್ವಹಿಸುತ್ತಿದೆ. ಒಂದು ವರ್ಷದಲ್ಲಿ ಸಾರ್ವಜನಿಕ ರಂಗದ ಎಲ್ಲಾ ವಲಯಗಳಿಂದಲೂ ಮಹಿಳೆಯರನ್ನು ಹೊರಗಟ್ಟಲಾಗಿದೆ. ಸಾರ್ವಜನಿಕವಾಗಿ ಮಹಿಳೆಯರನ್ನು ಬಹಿಷ್ಕರಿಸಲಾಗಿದೆ’ ಎಂದು ವಿಶ್ವ ಸಂಸ್ಥೆಯ ‘ಜೆಂಡರ್ ಅಲರ್ಟ್‌’ ವರದಿಯಲ್ಲಿ ಹೇಳಲಾಗಿದೆ.

ಅಫ್ಗಾನಿಸ್ತಾನದ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸ್ಥಿತಿಗತಿ ತೋರಿಸುವ ಗ್ರಾಫಿಕ್‌
ಅಫ್ಗಾನಿಸ್ತಾನದ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸ್ಥಿತಿಗತಿ ತೋರಿಸುವ ಗ್ರಾಫಿಕ್‌

ಚುನಾಯಿತ ಸರ್ಕಾರವನ್ನು ಹೊರದಬ್ಬಿ, 20 ವರ್ಷಗಳ ನಂತರ 2021ರ ಆಗಸ್ಟ್‌ 15ರಂದು ಅಫ್ಗಾನಿಸ್ತಾನವನ್ನು ತಾಲಿಬಾನ್‌ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ತಾಲಿಬಾನ್‌ ಆಡಳಿತ ಇಲ್ಲದೇ ಇದ್ದ ಅವಧಿಯಲ್ಲಿ ಅಫ್ಗಾನಿಸ್ತಾನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿತ್ತು. ತಾಲಿಬಾನ್‌ ಆಡಳಿತ ಬಂದ ನಂತರ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂಬ ಆತಂಕ ಎದುರಾಗಿತ್ತು. ‘ಆತಂಕ ಪಡುವ ಅಗತ್ಯವಿಲ್ಲ’ ಎಂದು ತಾಲಿಬಾನ್‌ ಆಗ ಹೇಳಿತ್ತು. ಆದರೆ, ಸಾರ್ವಜನಿಕ ಜೀವನದಿಂದ ಮಹಿಳೆಯರನ್ನು ತಾಲಿಬಾನ್‌ ಈಗ ಸಂಪೂರ್ಣವಾಗಿ ಹೊರಗಿಟ್ಟಿದೆ.

ಅಫ್ಗಾನಿಸ್ತಾನದಲ್ಲಿ ಮತ್ತೆ ಸರ್ಕಾರ ರಚಿಸಿದಾಗ ತಾಲಿಬಾನ್‌ ಮಾಡಿದ ಮೊದಲ ಕೆಲಸವೆಂದರೆ, ಮಹಿಳೆಯರನ್ನು ರಾಜಕೀಯದಿಂದ ಹೊರಗಿಟ್ಟದ್ದು. ನಂತರದ ದಿನಗಳಲ್ಲಿ ಒಂದೊಂದೇ ಕ್ಷೇತ್ರದಿಂದ ಮಹಿಳೆಯರನ್ನು ಹೊರಗಿಡುವ ಕೆಲಸವನ್ನು ತಾಲಿಬಾನ್ ಆರಂಭಿಸಿತು. 2021ರ ಸೆಪ್ಟೆಂಬರ್‌ನಲ್ಲಿ ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್ ಸರ್ಕಾರ ರದ್ದುಪಡಿಸಿತು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡಬಾರದು. ಅವರು ಮಾಲ್, ಸೂಪರ್‌ ಮಾರ್ಕೆಟ್‌ನಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅವರ ತಂದೆ ಅಥವಾ ಗಂಡ ಅಥವಾ ಮಗ ಜತೆಗಿರಬೇಕು ಎಂದು ಫತ್ವಾ ಹೊರಡಿಸಲಾಯಿತು. ಈ ಸ್ವರೂಪದ ಹುಕುಂಗಳಿಂದ ತೀರಾ ಹೊಡೆತ ಬಿದ್ದದ್ದು ಮಹಿಳಾ ಯಜಮಾನಿಕೆಯ ಕುಟುಂಬಗಳಿಗೆ ಮತ್ತು ಒಂಟಿ ಮಹಿಳೆಯರಿಗೆ. ಅಂತಹವರು ಹೊರಗೆ ಬಾರದೇ ಇರುವಂತಹ ಸ್ಥಿತಿ ಇದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸ್ಥಿತಿ ಇದೇ ರೀತಿ ಇದೆ. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ವಿಶ್ವ ಸಂಸ್ಥೆಯು ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಮಹಿಳೆಯರಿಗೆ ಉದ್ಯೋಗವಿಲ್ಲ

ಅಫ್ಗಾನಿಸ್ತಾನದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಸ್ಥಿತಿಗತಿ ತೋರಿಸುವ ಗ್ರಾಫಿಕ್‌
ಅಫ್ಗಾನಿಸ್ತಾನದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಸ್ಥಿತಿಗತಿ ತೋರಿಸುವ ಗ್ರಾಫಿಕ್‌

‘ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಮಹಿಳಾ ಉದ್ಯೋಗಿಗಳ ಬದಲಾಗಿ ಅವರ ಸೋದರ, ಗಂಡ ಅಥವಾ ಗಂಡು ಮಕ್ಕಳಿಗೆ ನೌಕರಿ ನೀಡಲಾಗಿದೆ. ಮಹಿಳೆಯರು ಮಾತ್ರ ನಿರ್ವಹಿಸುವಂತಹ ಕೆಲಸಗಳಲ್ಲಿ ಮಾತ್ರ ಮಹಿಳಾ ಉದ್ಯೋಗಿಗಳನ್ನು ಉಳಿಸಿಕೊಳ್ಳಲಾಗಿದೆ. ಶಾಲೆಗಳು, ಆಸ್ಪತ್ರೆಗಳು ಮತ್ತು ಮಹಿಳಾ ಶೌಚಾಲಯ ಇರುವ ಸ್ಥಳಗಳಲ್ಲಿ ಮಾತ್ರ ಮಹಿಳೆಯರಿಗೆ ಉದ್ಯೋಗವಕಾಶವಿದೆ’ ಎಂದು ವಿಶ್ವ ಸಂಸ್ಥೆಯ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಹೆಣ್ಣುಮಕ್ಕಳ ಶಿಕ್ಷಣದ ಕನಸು ಕಮರುತ್ತಿದೆ...

ಕಲಿಕೆಯ ಹಂಬಲ: ಅಫ್ಗಾನಿಸ್ತಾನದ ರಹಸ್ಯ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳು–ಎಎಫ್‌ಪಿ ಚಿತ್ರ
ಕಲಿಕೆಯ ಹಂಬಲ: ಅಫ್ಗಾನಿಸ್ತಾನದ ರಹಸ್ಯ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳು–ಎಎಫ್‌ಪಿ ಚಿತ್ರ

‘ಒಂದು ವರ್ಷದಿಂದ ನನ್ನ ಇಬ್ಬರು ಹೆಣ್ಣುಮಕ್ಕಳು ಶಾಲೆಗೆ ಹೋಗಲಾರದೇ ಮನೆಯಲ್ಲಿದ್ದಾರೆ. ಅವರ ಭವಿಷ್ಯಕ್ಕೆ ಮಂಕು ಕವಿದಿದೆ’ ಎಂದು ಹೇಳುವ ಅಫ್ಗನ್ ಮಹಿಳೆಯ ಮಾತುಗಳಲ್ಲಿ ಭವಿಷ್ಯ ಏನೆಂದು ತೋಚದ ಆತಂಕ ಮನೆಮಾಡಿದೆ. ಹೆಣ್ಣುಮಕ್ಕಳು ಶಾಲೆಗೆ ಹೋಗಲು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರ ಬಿಡುತ್ತಿಲ್ಲ. ಶಾಲೆಗೆ ಹೋಗುವ ಹುಡುಗರನ್ನು ನೋಡುವ ಅವರ ಸಹಪಾಠಿ ವಿದ್ಯಾರ್ಥಿನಿಯರು, ತಮ್ಮ ಕನಸುಗಳನ್ನು ತಮ್ಮೊಳಗೆ ಸಾಯಿಸುತ್ತಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಫ್ಗಾನಿಸ್ತಾನದಲ್ಲಿ ಅವಕಾಶವಿಲ್ಲ ಎಂದು ತಾಲಿಬಾನ್ ಷರಾ ಬರೆದಿದೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಶಿಕ್ಷಣವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ,2022ರ ಮಾರ್ಚ್ 23ರಂದು ಹೊಸ ಆದೇಶ ಹೊರಡಿಸಿದ ತಾಲಿಬಾನ್, ಬಾಲಕಿಯರಿಗೆ ಪ್ರೌಢಶಾಲೆಗಳಿಗೆ ಮರು ಪ್ರವೇಶ ನೀಡುವ ಆಲೋಚನೆ ಇಲ್ಲ ಎಂದು ಸ್ಪಷ್ಪಪಡಿಸಿತು. ಅಂದರೆ, ಒಂದು ವರ್ಷದ ಅವಧಿಯಲ್ಲಿ ಪರಿಸ್ಥಿತಿಯಲ್ಲಿ ಏನೂ ಬದಲಾಗಲಿಲ್ಲ. ಈ ನಿರ್ಧಾರದಿಂದ ನೇರವಾಗಿ ಮತ್ತು ವ್ಯವಸ್ಥಿತವಾಗಿ 11 ಲಕ್ಷ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಹೊರಗಿಟ್ಟಂತೆ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಬಾಲಕಿಯರು ಪ್ರೌಢಶಿಕ್ಷಣ ಪಡೆಯುತ್ತಿದ್ದಾರೆ. ಅದರೆ ಅದು ಸಮಗ್ರವಾಗಿ ಹಾಗೂ ದೇಶದ ಎಲ್ಲರಿಗೂ ಸಿಗುತ್ತಿಲ್ಲ. ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕಿಯರು ಇಲ್ಲದಿರುವುದೂ ಮಹಿಳಾ ಶಿಕ್ಷಣಕ್ಕೆ ತೊಡಕಾಗಿದೆ. ಶಾಲಾ ನಿರ್ಬಂಧದಿಂದಾಗಿ, ಮನೆಯಲ್ಲೇ ಉಳಿದಿರುವ ಬಾಲಕಿಯರಿಗೆ ನಿಂದನೆ, ಬಾಲ್ಯ ವಿವಾಹ ಹಾಗೂ ಒತ್ತಾಯದ ಮದುವೆಯಂತಹ ಕಷ್ಟಗಳ ಸರಮಾಲೆಯೇ ಇದೆ.

ಶಾಲಾ ಶಿಕ್ಷಣಕ್ಕೆ ಹೋಲಿಸಿದರೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಅಷ್ಟೊಂದು ಅಡ್ಡಿಗಳಿಲ್ಲ. ಆದರೆ, ಲಿಂಗದ ಆಧಾರದಲ್ಲಿ ತರಗತಿಗಳನ್ನು ಪ್ರತ್ಯೇಕಿಸಲಾಗಿದೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಮನೆಯಿಂದ ಹೊರಹೋಗುವ ಮಹಿಳೆಯರಿಗೆ ಕಠಿಣ ಸ್ವರೂಪದ ನಿಯಮಗಳು ಜಾರಿಯಲ್ಲಿದ್ದು, ಬಹಳಷ್ಟು ಮಹಿಳೆಯರು ಕಾಲೇಜು ಶಿಕ್ಷಣ ಪಡೆಯಲು ಇವು ಅಡ್ಡಿಯಾಗಿವೆ. ಕಾಲೇಜು ವಾತಾವರಣ ಪ್ರತಿಕೂಲವಾಗಿದ್ದು, ಪ್ರವೇಶಾತಿ ಪಡೆಯಲು ಹಿಂದೇಟು ಹಾಕುವವರೇ ಹೆಚ್ಚು.

ಹಕ್ಕುಗಳ ದಮನ

ಮಹಿಳೆಯರಿಗೆ ತಾಲಿಬಾನ್‌ ಹಕ್ಕುಗಳನ್ನು ನಿರಾಕರಿಸಿದೆ. ಇಂತಹ ಹಕ್ಕುಗಳ ರಕ್ಷಣೆಗೆ ಇದ್ದ ಸರ್ಕಾರಿ ಕಣ್ಗಾವಲು ಸಂಸ್ಥೆಗಳನ್ನೂ ತಾಲಿಬಾನ್ ರದ್ದುಪಡಿಸಿದೆ. 2022ರ ಮೇ ತಿಂಗಳಿನಲ್ಲಿ ದೇಶದ ‘ಮಾನವ ಹಕ್ಕುಗಳ ರಕ್ಷಣಾ ಆಯೋಗ’ವನ್ನು ತಾಲಿಬಾನ್ ಸರ್ಕಾರ ವಜಾ ಮಾಡಿದೆ.

ಜತೆಗೆ ಮಹಿಳಾ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಸ್ವಯಂಸೇವಾ ಸಂಸ್ಥೆಗಳಲ್ಲಿ (ಎನ್‌ಜಿಒ) ಹೆಚ್ಚಿನವು ಈಗ ನಿಷ್ಕ್ರಿಯವಾಗಿವೆ. ಕಾಬೂಲ್‌ ಅನ್ನುತಾಲಿಬಾನ್‌ ಅತಿಕ್ರಮಿಸಿಕೊಳ್ಳುವ ಮುನ್ನವೇ ಮಹಿಳಾ ಹಕ್ಕುಗಳ ಹೋರಾಟಗಾರರಲ್ಲಿ ಹಲವರು ಅಫ್ಗಾನಿಸ್ತಾನವನ್ನು ತೊರೆದಿದ್ದರು. ಹೀಗಾಗಿ ತಾಲಿಬಾನ್ ಆಡಳಿತ ಜಾರಿಯಾದ ನಂತರ ಅಂತಹ ಹೋರಾಟಗಾರರ ದೊಡ್ಡ ನಿರ್ವಾತ ನಿರ್ಮಾಣವಾಗಿದೆ.

2021ರಲ್ಲಿ ಅಫ್ಗಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್‌ಜಿಒಗಳಲ್ಲಿ ಶೇ 77ರಷ್ಟು ಎನ್‌ಜಿಒಗಳು ಈಗ ಸಂಪೂರ್ಣ ನಿಷ್ಕ್ರಿಯವಾಗಿವೆ. ಉಳಿದ ಎನ್‌ಜಿಒಗಳಿಗೆ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಲಾಗಿದೆ. ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ತಾಲಿಬಾನ್‌ನ ಈ ಕ್ರಮಗಳ ವಿರುದ್ಧ ಸಾರ್ವಜನಿಕರು ಆರಂಭದ ದಿನಗಳಿಂದಲೂ ಪ್ರತಿಭಟನೆ ನಡೆಸಿದ್ದಾರೆ. ಪತ್ರಕರ್ತರೂ ಪ್ರತಿಭಟನೆಯಲ್ಲಿ ಜತೆಯಾಗಿದ್ದರು. ಆದರೆ, 2021ರ ಸೆಪ್ಟೆಂಬರ್ 1ರಿಂದ ಅಂತಹ ಪ್ರತಿಭಟನೆ ನಡೆಸುವುದನ್ನು ತಾಲಿಬಾನ್ ನಿಷೇಧಿಸಿದೆ. ತಾಲಿಬಾನ್‌ ಆಡಳಿತಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಪ್ರತಿಭಟನೆಗೆ ಮುಂದಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ಆಧಾರ: ವಿಶ್ವ ಸಂಸ್ಥೆಯ ‘ಜೆಂಡರ್ ಅಲರ್ಟ್‌–1’ ಮತ್ತು ‘ಜೆಂಡರ್ ಅಲರ್ಟ್–2’ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT