ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಚೀತಾ ಬಂದಾಯ್ತು ಮುಂದೇನು...

ಹಲವು ತಿಂಗಳು ಬಯಲು ಬಂಧನ ವಾಸ
Last Updated 18 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಭಾರತದ ಕಾಡಿಗೆ ಚೀತಾವನ್ನು ಮರುಪರಿಚಯಿಸುವ (ರಿಇಂಟ್ರಡ್ಯೂಸ್‌) ಪ್ರಕ್ರಿಯೆ ಒಂದೆರಡು ವರ್ಷಗಳದ್ದಲ್ಲ. ಚೀತಾವನ್ನು ಭಾರತಕ್ಕೆ ತರುವುದಕ್ಕೂ ಮೊದಲು ಹತ್ತಾರು ವರ್ಷಗಳ ಕಾರ್ಯಗಳು ನಡೆದಿವೆ. ಅದರ ಆಧಾರದಲ್ಲಿ ಈಗ ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿದೆ. ಈ ಯೋಜನೆಯ ಪೂರ್ಣ ಅನುಷ್ಠಾನಕ್ಕೆ ಇನ್ನೂ 40 ವರ್ಷಗಳು ಬೇಕು. ಚೀತಾವನ್ನು ಭಾರತದ ಅರಣ್ಯಕ್ಕೆ ಮರುಪರಿಚಯಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಸಂಬಂಧ ಅಧ್ಯಯನಗಳು 1990ರ ದಶಕದ ಕೊನೆಯಲ್ಲಿ ಆರಂಭವಾಗಿದ್ದವು. ಈ ಸಂಬಂಧ 2001ರಿಂದ 2007ರ ಮಧ್ಯೆ ತಜ್ಞರ ಹಲವು ವರದಿಗಳು ಸಲ್ಲಿಕೆಯಾಗಿವೆ. ಇವುಗಳ ಆಧಾರದಲ್ಲಿ ‘ಪ್ರಾಜೆಕ್ಟ್‌ ಚೀತಾ’ವನ್ನು 2009ರಲ್ಲಿ ಅಂತಿಮಗೊಳಿಸಲಾಗಿತ್ತು. ಎಲ್ಲಾ ಪ್ರಕ್ರಿಯೆಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿನ ಅಡೆತಡೆಗಳನ್ನು ನಿವಾರಿಸಿಕೊಂಡು 2022ರಲ್ಲಿ ಆಫ್ರಿಕಾದ ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತರಲಾಗಿದೆ.

ಹಲವು ತಿಂಗಳು ಬಯಲು ಬಂಧನ ವಾಸ

ಚೀತಾಗಳನ್ನು ಅರಣ್ಯಕ್ಕೆ ಬಿಡುವ ಮೊದಲ ಹಂತವು ಅತ್ಯಂತ ಮಹತ್ವದ್ದು. ಈ ಎಂಟು ಚೀತಾಗಳನ್ನು ನೇರವಾಗಿ ಅರಣ್ಯಕ್ಕೆ ಬಿಡುವುದಿಲ್ಲ. ಅರಣ್ಯ ಪ್ರದೇಶದಲ್ಲೇ ಬೇಲಿ ನಿರ್ಮಿಸಿ, ಅವುಗಳನ್ನು ಬಯಲು ಬಂಧನದಲ್ಲಿ ಇರಿಸಲಾಗುತ್ತದೆ. ಆ ಅರಣ್ಯ ಪ್ರದೇಶದ ಪರಿಸರದ ಬಗ್ಗೆ ಅವುಗಳಿಗೆ ಪರಿಚಯವಾದ ನಂತರ ಅವನ್ನು ಅರಣ್ಯಕ್ಕೆ ಬಿಡಲಾಗುವುದು. ಈ ಪ್ರಕ್ರಿಯೆಯನ್ನು ‘ಸಾಫ್ಟ್‌ ರಿಲೀಸ್‌’ ಎಂದು ಕರೆಯಲಾಗುತ್ತದೆ. ಸಾಫ್ಟ್‌ ರಿಲೀಸ್‌ನಲ್ಲಿ ಚೀತಾಗಳ ಬದುಕುಳಿಯುವ ಸಾಧ್ಯತೆಯ ಪ್ರಮಾಣ ಶೇ 67ರಷ್ಟಿರುತ್ತದೆ. ಹೀಗಾಗಿ ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಚೀತಾಗಳನ್ನು ಇರಿಸಲು 6 ಚದರ ಕಿ.ಮೀ. ವ್ಯಾಪ್ತಿಯ ಬಯಲು ಬಂಧನ ಪ್ರದೇಶವನ್ನು ನಿರ್ಮಿಸಲಾಗಿದೆ. ಅದರಲ್ಲೇ ಪ್ರತಿ ಚೀತಾಗೂ ಪ್ರತ್ಯೇಕ ಜಾಗವನ್ನು ನಿರ್ಮಿಸಲಾಗಿದೆ. ಚೀತಾದ ವಯಸ್ಸು ಮತ್ತು ಗಾತ್ರ–ತೂಕದ ಆಧಾರದಲ್ಲಿ ಅವುಗಳ ಜಾಗದ ವ್ಯಾಪ್ತಿಯನ್ನು ನಿಗದಿ ಮಾಡಲಾಗಿದೆ.

ಹತ್ತು ವರ್ಷಗಳ ಕಣ್ಗಾವಲು

ಕುನೊ ರಾಷ್ಟ್ರೀಯ ಉದ್ಯಾನವು 748 ಚದರ ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿರುವ ಹುಲ್ಲುಗಾವಲು ಮತ್ತು ಬಲಿ ಪ್ರಾಣಿಗಳ ಸಾಂದ್ರತೆಯನ್ನು ಪರಿಗಣಿಸಿದರೆ, ಇಲ್ಲಿ 21 ಚೀತಾಗಳು ಮಾತ್ರ ಇರಲು ಸಾಧ್ಯ. ಈಗ ಎಂಟು ಚೀತಾಗಳನ್ನು ಮಾತ್ರ ಇಲ್ಲಿಗೆ ತರಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು 21ಕ್ಕೆ ಏರಿಸಲಾಗುತ್ತದೆ.

* ಚೀತಾಗಳನ್ನು ಇರಿಸಲು 6 ಚದರ ಕಿ.ಮೀ. ವ್ಯಾಪ್ತಿಯ ಬಯಲು ಬಂಧನ ಪ್ರದೇಶವನ್ನು ನಿರ್ಮಿಸಲಾಗಿದೆ. ಅದರಲ್ಲೇ ಪ್ರತಿ ಚೀತಾಗೂ ಪ್ರತ್ಯೇಕ ಜಾಗವನ್ನು ನಿರ್ಮಿಸಲಾಗಿದೆ. ಚೀತಾದ ವಯಸ್ಸು ಮತ್ತು ಗಾತ್ರ–ತೂಕದ ಆಧಾರದಲ್ಲಿ ಅವುಗಳ ಜಾಗದ ವ್ಯಾಪ್ತಿಯನ್ನು ನಿಗದಿ ಮಾಡಲಾಗಿದೆ

6 ಚದರ ಕಿ.ಮೀ. ಬಯಲು ಬಂಧನ ಪ್ರದೇಶದ ಒಟ್ಟು ವ್ಯಾಪ್ತಿ

0.7 ಚದರ ಕಿ.ಮೀ. ಚೀತಾವೊಂದಕ್ಕೆ ಸಿಗಲಿರುವ ಅತ್ಯಂತ ಚಿಕ್ಕ ಪ್ರದೇಶದ ವ್ಯಾಪ್ತಿ

1.1 ಚದರ ಕಿ.ಮೀ. ಚೀತಾವೊಂದಕ್ಕೆ ಸಿಗಲಿರುವ ಅತ್ಯಂತ ದೊಡ್ಡ ಪ್ರದೇಶದ ವ್ಯಾಪ್ತಿ

* ಚೀತಾಗಳು ಪರಸ್ಪರ ಕಿತ್ತಾಡಬಾರದು ಎಂಬ ಉದ್ದೇಶದಿಂದ ಅವುಗಳನ್ನು ಬಯಲು ಬಂಧನದಲ್ಲೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ

* ಈ ಬಯಲು ಬಂಧನದಲ್ಲಿ ಚೀತಾಗಳನ್ನು ಕನಿಷ್ಠ ಒಂದು ತಿಂಗಳು ಮತ್ತು ಗರಿಷ್ಠ 2 ತಿಂಗಳವರೆಗೆ ಇರಿಸಲಾಗುತ್ತದೆ. ಇದು ಸಪಾಟಾದ ಬಯಲು ಪ್ರದೇಶವಾಗಿದ್ದು, ಹಲವು ಕಿ.ಮೀ. ದೂರದವರೆಗೂ ಚೀತಾಗಳು ದೃಷ್ಟಿ ಹಾಯಿಸಲು ಸಾಧ್ಯವಾಗುತ್ತದೆ

* ಬಯಲು ಬಂಧನದ ಅವಧಿಯಲ್ಲಿ ಚೀತಾಗಳು ಸ್ಥಳೀಯ ಪರಿಸರವನ್ನು ಪರಿಚಯ ಮಾಡಿಕೊಳ್ಳುತ್ತವೆ. ಆನಂತರ ಮೂರು ಗಂಡು ಚೀತಾಗಳನ್ನು ಮೊದಲು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ. ಅವು ಅರಣ್ಯ ಪ್ರದೇಶವನ್ನು ಸುತ್ತಾಡಿ, ತಮ್ಮ ವ್ಯಾಪ್ತಿಯನ್ನು ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕೆ ಹಲವು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ಗಂಡು ಚೀತಾಗಳು, ಹೆಣ್ಣು ಚೀತಾಗಳ ಸಾಂಗತ್ಯಕ್ಕಾಗಿ ಬಯಲು ಬಂಧನ ಪ್ರದೇಶಕ್ಕೇ ಬರಬೇಕಾಗುತ್ತದೆ

ಬಲಿ ಪ್ರಾಣಿ

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಆಹಾರಕ್ಕೆ ಲಭ್ಯವಿರುವ ಬಲಿ ಪ್ರಾಣಿಗಳಲ್ಲಿ ಚುಕ್ಕೆಜಿಂಕೆಗಳೇ ಪ್ರಧಾನ ಎಂದು ಗುರುತಿಸಲಾಗಿದೆ. ಈ ಉದ್ಯಾನದಲ್ಲಿ ಚುಕ್ಕೆಜಿಂಕೆಗಳ ಸಾಂದ್ರತೆ ಉತ್ತಮ ಮಟ್ಟದಲ್ಲಿದೆ. ಪ್ರತಿ ಚದರ ಕಿ.ಮೀ.ನಲ್ಲಿ 38.48 ಚುಕ್ಕೆಜಿಂಕೆಗಳಿವೆ. ಈ ಸಾಂದ್ರತೆಯನ್ನು 51.58ಕ್ಕೆ ಹೆಚ್ಚಿಸಲು ಅವಕಾಶವಿದೆ. ಹೀಗಾಗಿ ಚೀತಾಗಳಿಗೆ ಆಹಾರದ ಕೊರತೆ ಉಂಟಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.

ಹತ್ತು ವರ್ಷಗಳ ಕಣ್ಗಾವಲು

ಕುನೊ ರಾಷ್ಟ್ರೀಯ ಉದ್ಯಾನವು 748 ಚದರ ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿರುವ ಹುಲ್ಲುಗಾವಲು ಮತ್ತು ಬಲಿ ಪ್ರಾಣಿಗಳ ಸಾಂದ್ರತೆಯನ್ನು ಪರಿಗಣಿಸಿದರೆ, ಇಲ್ಲಿ 21 ಚೀತಾಗಳು ಮಾತ್ರ ಇರಲು ಸಾಧ್ಯ. ಈಗ ಎಂಟು ಚೀತಾಗಳನ್ನು ಮಾತ್ರ ಇಲ್ಲಿಗೆ ತರಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು 21ಕ್ಕೆ ಏರಿಸಲಾಗುತ್ತದೆ.

lಮೊದಲ ಹಂತದ ಚೀತಾ ಮೇಲ್ವಿಚಾರಣಾ ಅವಧಿಯು ಹತ್ತು ವರ್ಷಗಳದ್ದಾಗಿದೆ. ಈ ಅವಧಿಯಲ್ಲಿ ಪ್ರತಿ ಚೀತಾದ ಮೇಲೂ ದಿನದ 24 ಗಂಟೆಯೂ ಕಣ್ಗಾವಲು ಇರಿಸಲಾಗುವುದು

lಪ್ರತಿ ಚೀತಾಗೂ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಹತ್ತೂ ವರ್ಷಗಳವರೆಗೆ ಇದನ್ನು ಮುಂದುವರಿಸಲಾಗುತ್ತದೆ

lಈ ಅವಧಿಯಲ್ಲಿ ಚೀತಾಗಳು ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ದಾಟಿಹೋಗುವುದನ್ನು ತಡೆಯಲಾಗುತ್ತದೆ. ಉದ್ಯಾನದ ವ್ಯಾಪ್ತಿಯನ್ನು ದಾಟಿಹೋಗುವ ಚೀತಾಗಳನ್ನು ಹಿಡಿದು, ವಾಪಸ್‌ ತಂದು ಬಿಡಲಾಗುವುದು

lಚೀತಾ ಮತ್ತು ಚಿರತೆಗಳು ಒಂದೇ ಪರಿಸರದಲ್ಲಿ ಇದ್ದಾಗ, ಕೆಲವೊಮ್ಮೆ ಸಂಘರ್ಷ ನಡೆಯುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಚೀತಾ, ಚಿರತೆ ಎರಡೂ ಗಂಭೀರವಾಗಿ ಗಾಯಗೊಳ್ಳುವ ಮತ್ತು ಕೆಲವು ಸಂದರ್ಭದಲ್ಲಿ ಸಾವನ್ನಪ್ಪುವ ಅಪಾಯವೂ ಇರುತ್ತದೆ. ಚೀತಾಗಳು ಗಂಭೀರವಾಗಿ ಗಾಯಗೊಂಡರೆ ಮತ್ತು ಸಾವನ್ನಪ್ಪಿದರೆ, ಅದರ ಬದಲಿಗೆ ಮತ್ತೊಂದು ಚೀತಾವನ್ನು ತಂದು ಬಿಡಬೇಕಾಗುತ್ತದೆ

lಹತ್ತು ವರ್ಷಗಳವರೆಗೆ ಈ ಪ್ರಕ್ರಿಯೆಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ. ಈ ಪ್ರದೇಶದಲ್ಲಿ ವಯಸ್ಕ ಚೀತಾಗಳ ಸಂಖ್ಯೆ 21ರಲ್ಲಿ ಸ್ಥಿರವಾಗಲು 15–20 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ

ಬುಡಕಟ್ಟು ಜನರ ಸ್ಥಳಾಂತರ

ಕುನೊ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಲಿನ 3,200 ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಚೀತಾಗಳ ಆವಾಸಕ್ಕಾಗಿ ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ 169 ಹಳ್ಳಿಗಳು ಬರುತ್ತವೆ.ಈ ಪೈಕಿ 748 ಚದರ ಕಿಲೋಮೀಟರ್ ಪ್ರದೇಶವು ಕುನೊ ರಾಷ್ಟ್ರೀಯ ಉದ್ಯಾನ ಪ್ರದೇಶ. ಈ ಪ್ರದೇಶವನ್ನು ಜನರ ಪ್ರವೇಶದಿಂದ ಮುಕ್ತಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಬರುವ 24 ಹಳ್ಳಿಗಳ ಪೈಕಿ ಒಂದು ಹಳ್ಳಿಯ ಸ್ಥಳಾಂತರ ಪ್ರಕ್ರಿಯೆ ಮಾತ್ರ ಜಾರಿಯಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಊರು ಬಿಟ್ಟು ಹೋಗುವ ಹಳ್ಳಿಯ ಪ್ರತಿ ವಯಸ್ಕ ವ್ಯಕ್ತಿಗೆ ₹15 ಲಕ್ಷ ಪರಿಹಾರ ನೀಡಲಾಗಿದೆ. ಗ್ರಾಮಸ್ಥರು ಊರು ತೊರೆಯುವಾಗ ಅವರ ಸಾಕುಪ್ರಾಣಿಗಳನ್ನು ಅಲ್ಲಿಯೇ ಬಿಟ್ಟುಹೋದರೆ, ಅವುಗಳಿಗೂ ಪರಿಹಾರ ನೀಡಲು ಯೋಜನೆಯಲ್ಲಿ ಅವಕಾಶ ಇದೆ. ಈ ಎಲ್ಲ ಹಳ್ಳಿಗಳಲ್ಲಿ ಸುಮಾರು 500 ಸಾಕುಪ್ರಾಣಿಗಳಿವೆ ಎನ್ನಲಾಗಿದೆ. ಈ ಜಾನುವಾರುಗಳನ್ನು ಚೀತಾಗಳಿಗೆ ಬಲಿಪ್ರಾಣಿಗಳನ್ನಾಗಿ ಬಳಸುವ ಉದ್ದೇಶ ಯೋಜನೆಯಲ್ಲಿದೆ.

ಚೀತಾ–ಮನುಷ್ಯ ಸಂಬಂಧ

ಚೀತಾಗಳನ್ನು ಕಾಡಿಗೆ ಬಿಟ್ಟ ಬಳಿಕ ಅವುಗಳ ಸಂತತಿ ಬೆಳೆಯುವುದು ಚೀತಾ ಮತ್ತು ಮನುಷ್ಯನ ಸಂಬಂಧ ಹೇಗೆ ಇರುತ್ತದೆ ಎಂಬುದರ ಮೇಲೆಯೂ ಅವಲಂಬಿತ. ಅದಕ್ಕಾಗಿಯೇ ‘ಚಿಂಟೂ ಚೀತಾ’ ಎಂಬ ಹೆಸರಿನಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಮಧ್ಯಪ್ರದೇಶ ಸರ್ಕಾರವು ಆರಂಭಿಸಿದೆ. ಚೀತಾ ಮತ್ತು ಮನುಷ್ಯ ಸಂಬಂಧವು ಹೇಗಿರಬೇಕು ಎಂಬ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸೂಚಿಸಲಾಗಿದೆ.

ಚೀತಾಗಳಿಂದ ಮನುಷ್ಯರಿಗೆ ಯಾವುದೇ ಅಪಾಯ ಉಂಟಾಗುವುದಿಲ್ಲ ಎಂಬ ಸತ್ಯವನ್ನು ಸಮುದಾಯಕ್ಕೆ ಮನದಟ್ಟು ಮಾಡಬೇಕು. ಜಾನುವಾರುಗಳಿಗೆ ಆಗುವ ತೊಂದರೆಗೆ ತಕ್ಷಣವೇ ಪರಿಹಾರ ದೊರೆಯಲಿದೆ ಎಂಬ ಭರವಸೆಯನ್ನೂ ಜನರಲ್ಲಿ ಮೂಡಿಸಬೇಕು. ಜನವಸತಿ ಪ್ರದೇಶಗಳ ಸುತ್ತಲಲ್ಲಿ ಎಷ್ಟು ಚಿರತೆಗಳು ಇವೆ ಎಂಬುದನ್ನು ರೇಡಿಯೋ ಕಾಲರ್‌ ಉಪಕರಣದ ಮೂಲಕ ಗುರುತಿಸಲಾಗುವುದು. ಚೀತಾಗಳ ಬಗ್ಗೆ ಜನರಲ್ಲಿ ಇರುವ ಅಭಿಮತ ಏನು ಎಂಬುದನ್ನು ಸಮೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುವುದು. ಚೀತಾಗಳ ನಿರ್ವಹಣೆ ಮತ್ತು ಭವಿಷ್ಯದಲ್ಲಿ ಯೋಜನೆಗಳನ್ನು ರೂಪಿಸಲು ಇಂತಹ ಮಾಹಿತಿ ಅತ್ಯಂತ ಉಪಯುಕ್ತ.

ಹುಲಿ ಸಂತತಿ: ಸರಿಸ್ಕಾ, ಪನ್ನಾ ಯಶೋಗಾಥೆ

ಹುಲಿ ಸಂತತಿ ನಾಮಾವಶೇಷ ಆಗಿರುವ ಹಾಗೂ ತೀರಾ ಕಡಿಮೆ ಪ್ರಮಾಣ ದಲ್ಲಿರುವ ಅಭಯಾರಣ್ಯಗಳಲ್ಲಿ ಮತ್ತೆ ಹುಲಿ ಸಂತತಿ ಅಭಿವೃದ್ಧಿಪಡಿಸುವ ಎರಡು ಯೋಜನೆಗಳು ಭಾರತದಲ್ಲಿ ಈಗಾಗಲೇ ಯಶಸ್ವಿಯಾಗಿವೆ. ಮಧ್ಯಪ್ರದೇಶದ ಪನ್ನಾ ರಾಷ್ಟ್ರೀಯ ಉದ್ಯಾನ ಹಾಗೂ ರಾಜಸ್ಥಾನದ ಸರಿಸ್ಕಾ ರಾಷ್ಟ್ರೀಯ ಉದ್ಯಾನದಲ್ಲಿ ಇತರ ರಾಷ್ಟ್ರೀಯ ಉದ್ಯಾನಗಳಿಂದ ಹುಲಿಗಳನ್ನು ತಂದು ಬಿಡಲಾಗಿತ್ತು. ಈ ಎರಡೂ ಉದ್ಯಾನಗಳಲ್ಲಿ ಹುಲಿ ಸಂತತಿ ಬೆಳೆದಿದೆ.‌

ಹುಲಿಗಳ ಸಂಸತಿ ನಾಶವಾಗಿರುವ ಕಾಡುಗಳಲ್ಲಿ ಅವುಗಳನ್ನು ಬೆಳೆಸುವ ಕಾರ್ಯಕ್ರಮ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶುರುವಾಯಿತು.ರಾಜಸ್ಥಾನದ ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ 2004ರ ವೇಳೆಗೆ ಹುಲಿ ಸಂತತಿ ಸಂಪೂರ್ಣ ಇಲ್ಲವಾಗಿತ್ತು. 2008ರಲ್ಲಿ ಈ ಉದ್ಯಾನಕ್ಕೆ ಹುಲಿಗಳನ್ನು ಪರಿಚಯಿಸುವ ಯೋಜನೆ ಚಾಲನೆ ಪಡೆಯಿತು.ಪ್ರಧಾನಿ ಸ್ವತಃ ಈ ಯೋಜನೆಯಲ್ಲಿ ಆಸಕ್ತಿ ವಹಿಸಿದ್ದರು. ತಲಾ ಮೂರು ಹೆಣ್ಣು ಹಾಗೂ ಗಂಡು ಹುಲಿಗಳನ್ನು ಸರಿಸ್ಕಾ ಅರಣ್ಯಕ್ಕೆ ಬಿಡಲಾಯಿತು. ಒಂದು ಹೆಣ್ಣು ಹುಲಿಯ (ಎಸ್‌ಟಿ–2) ಜೊತೆ ಎರಡು ವರ್ಷದ ಮರಿ ಹುಲಿ ಇರುವುದುಕ್ಯಾಮರಾದಲ್ಲಿ ಸೆರೆಯಾಗಿತ್ತು.ಭಾರತದಲ್ಲಿ ಹುಲಿ ಸ್ಥಿತಿಗತಿ ವರದಿ–2018 ಪ್ರಕಾರ, ಸರಿಸ್ಕಾ ಅಭಯಾರಣ್ಯದಲ್ಲಿ 11 ಹುಲಿಗಳಿವೆ.

2003ರ ವೇಳೆಗೆ ಪನ್ನಾ ಉದ್ಯಾನದಲ್ಲಿ 40 ಹುಲಿಗಳಿದ್ದವು. ಬೇಟೆ ಮೊದಲಾದ ಕಾರಣಗಳಿಂದ ಅವುಗಳ ಸಂಖ್ಯೆಯು 2009ರ ವೇಳೆಗೆ ಕೇವಲ 2ಕ್ಕೆ ಕುಸಿಯಿತು. ಹೀಗಾಗಿ ಬಾಂಧವಗಡ ರಾಷ್ಟ್ರೀಯ ಉದ್ಯಾನ ಹಾಗೂ ಕನ್ಹಾ ರಾಷ್ಟ್ರೀಯ ಉದ್ಯಾನದಿಂದ ಎರಡು ಹೆಣ್ಣು ಹುಲಿಗಳನ್ನು (ಟಿ 1 ಮತ್ತು ಟಿ2) ತರಲಾಯಿತು. ಪೆಂಚ್ ರಾಷ್ಟ್ರೀಯ ಉದ್ಯಾನದಿಂದ ಗಂಡು ಹುಲಿಯನ್ನು(ಟಿ 3) ತಂದುಬಿಡಲಾಯಿತು. ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿದವು. 2011ರಲ್ಲಿ ಮತ್ತೆ ಎರಡು ಹುಲಿಗಳನ್ನು(ಟಿ 4 ಮತ್ತು ಟಿ 5) ತರಲಾಯಿತು. ಈಗ, ಪನ್ನಾ ಉದ್ಯಾನದಲ್ಲಿ 25 ಹುಲಿಗಳಿವೆ. ಅಕ್ಕಪಕ್ಕದ ಉದ್ಯಾನಗಳಿಂದ 31 ಹುಲಿಗಳು ಇಲ್ಲಿಗೆ ಬಂದು ಹೋಗುತ್ತಿವೆ ಎಂದು ಭಾರತದಲ್ಲಿ ಹುಲಿ ಸ್ಥಿತಿಗತಿ ವರದಿ–2018 ತಿಳಿಸಿದೆ.

ಆಧಾರ: ಪ್ರಾಜೆಕ್ಟ್‌ ಚೀತಾ–2009, ಭಾರತಕ್ಕೆ ಚೀತಾ ಮರುಪರಿಚಯ ಕ್ರಿಯಾಯೋಜನೆ ವರದಿ–2021, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT