ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಡಿಜಿಟಲ್‌ ಕರೆನ್ಸಿ; ಹಣದ ಚಹರೆ ಬದಲಿಗೆ ಚಿಂತನೆ

Last Updated 29 ಜುಲೈ 2021, 19:31 IST
ಅಕ್ಷರ ಗಾತ್ರ

ಹಣದ ಬಗ್ಗೆ ನಮ್ಮಲ್ಲಿರುವ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಚಿಂತನೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊಂದಿದೆ. ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಅಥವಾ ಡಿಜಿಟಲ್‌ ಕರೆನ್ಸಿಯು ಜಾರಿಗೆ ಬಂದರೆ ಹಣದ ಬಗ್ಗೆ ನಮಗೆ ಈವರೆಗೆ ಇದ್ದ ತಿಳಿವಳಿಕೆಯೇ ಬದಲಾಗಲಿದೆ. ಪ್ರತಿ ಕೇಂದ್ರೀಯ ಬ್ಯಾಂಕ್ ಹೊಂದಿರಲೇಬೇಕಾದ ಅಸ್ತ್ರವಾಗಿ ಡಿಜಿಟಲ್‌ ಕರೆನ್ಸಿಯು ರೂಪುಗೊಳ್ಳಲಿದೆ ಎಂದು ಆರ್‌ಬಿಐನ ಉಪ ಗವರ್ನರ್‌ ರವಿ ಶಂಕರ್‌ ಅವರು ಇತ್ತೀಚೆಗೆ ಹೇಳಿದ್ದಾರೆ

ಹೊಸ ಪರಿಕಲ್ಪನೆ

ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿ ಅಥವಾ ಡಿಜಿಟಲ್‌ ಕರೆನ್ಸಿ ಅಥವಾ ವರ್ಚುವಲ್ ಕರೆನ್ಸಿ ಎಂಬುದು ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ ನೀಡುವ ಕಾನೂನುಬದ್ಧ ಹಣ ಆಗಿರುತ್ತದೆ. ಇದು ಡಿಜಿಟಲ್‌ ರೂಪದಲ್ಲಿ ಇರುತ್ತದೆ ಎಂಬುದೇ ಈಗ ಇರುವ ಹಣಕ್ಕಿಂತ (ಕರೆನ್ಸಿ) ಡಿಜಿಟಲ್‌ ಕರೆನ್ಸಿಗೆ ಇರುವ ವ್ಯತ್ಯಾಸ. ‘ಈಗ ಇರುವ ಹಣ (ಅಂದರೆ ನೋಟು) ಮತ್ತು ಡಿಜಿಟಲ್‌ ಕರೆನ್ಸಿ ನಡುವೆ ವಿನಿಮಯವೂ ಸಾಧ್ಯವಿದೆ’ ಎಂದು ಆರ್‌ಬಿಐ ಉಪ ಗವರ್ನರ್‌ ರವಿಶಂಕರ್‌ ಅವರು ಮಾಹಿತಿ ಕೊಟ್ಟಿದ್ದಾರೆ.

ಬಿಟ್‌ಕಾಯಿನ್‌ನಂತಹ ಕ್ರಿಪ್ಟೊ ಕರೆನ್ಸಿಗಳು ಹಲವಾರು ಈಗಾಗಲೇ ಚಾಲ್ತಿಯಲ್ಲಿ ಇವೆ. ಈ ಎಲ್ಲವೂ ಯಾವುದಾದರೂ ಆನ್‌ಲೈನ್‌ ನೆಟ್‌ವರ್ಕ್‌ಗಳ ಮೂಲಕ ಕಾರ್ಯನಿರ್ವಹಿಸುವ ವ್ಯವಸ್ಥೆ. ಈ ಡಿಜಿಟಲ್‌ ಕರೆನ್ಸಿಗೆ ಯಾವುದೇ ಸರ್ಕಾರದ ಖಾತರಿ ಇಲ್ಲ. ಹಾಗಾಗಿ, ಜನರು ವಂಚನೆಗೆ ಒಳಗಾಗುವ ಸಾಧ್ಯತೆ ಅತ್ಯಂತ ಹೆಚ್ಚು. ಆದರೆ, ದೇಶದ ಕೇಂದ್ರೀಯ ಬ್ಯಾಂಕ್‌ ನೀಡುವ ಡಿಜಿಟಲ್‌ ಕರೆನ್ಸಿಯಲ್ಲಿ ಜನರು ವಂಚನೆಗೆ ಒಳಗಾಗಲು ಅವಕಾಶ ಇಲ್ಲ. ಇದಕ್ಕೆ ಸರ್ಕಾರದ ಖಾತರಿ ಇರುತ್ತದೆ.

ಇದು ಹೊಸ ಪರಿಕಲ್ಪನೆ ಆಗಿರುವುದರಿಂದ ಇದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಆರ್‌ಬಿಐಗೆ ಸ್ಪಷ್ಟತೆ ಇಲ್ಲ. ಹಂತ ಹಂತವಾಗಿಯೇ ಜಾರಿ ಸಾಧ್ಯ ಎಂದು ರವಿಶಂಕರ್‌ ಹೇಳಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಯಾವ ರೀತಿಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂಬುದರ ಮೇಲೆ ಆರ್‌ಬಿಐ ಕಣ್ಣಿಟ್ಟಿದೆ. ಭಾರತದಲ್ಲಿ ಜಾರಿ ಮಾಡುವಾಗ ಯಾವೆಲ್ಲ ಅಂಶಗಳ ಬಗ್ಗೆ ಗಮನ ಹರಿಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆದಿದೆ. ಡಿಜಿಟಲ್‌ ಕರೆನ್ಸಿಯನ್ನು ಚಿಲ್ಲರೆ ವ್ಯವಹಾರಕ್ಕೆ ಮಾತ್ರ ಬಳಸಬೇಕೇ, ಸಗಟು ವಹಿವಾಟಿಗೂ ಬಳಸಬಹುದೇ ಎಂಬ ಬಗ್ಗೆ ಚಿಂತನೆ ನಡೆದಿದೆ. ಡಿಜಿಟಲ್‌ ಕರೆನ್ಸಿ ಹಂಚಿಕೆಯು ವಿಕೇಂದ್ರೀಕೃತವಾಗಿ ಇರಬೇಕೇ ಅಥವಾ ಕೇಂದ್ರೀಕೃತವಾಗಿ ಇರಬೇಕೇ, ಹಣದ ದೃಢೀಕರಣ ವ್ಯವಸ್ಥೆ ಹೇಗೆ ಮುಂತಾದ ವಿಚಾರಗಳು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಆರ್‌ಬಿಐ ಮಾತ್ರ ಡಿಜಿಟಲ್‌ ಕರೆನ್ಸಿ ನೀಡಬೇಕೇ ಅಥವಾ ಬ್ಯಾಂಕುಗಳ ಮೂಲಕವೂ ವಿತರಿಸಬಹುದೇ ಎಂಬ ಪ್ರಶ್ನೆಯೂ ಇದೆ. ಡಿಜಿಟಲ್‌ ಎಂದ ಕೂಡಲೇ ಬಳಕೆದಾರರ ಗುರುತು ರಹಸ್ಯವಾಗಿರುತ್ತದೆ. ಡಿಜಿಟಲ್‌ ಕರೆನ್ಸಿ ಬಳಕೆದಾರರ ಗುರುತನ್ನು ಯಾವ ಪ್ರಮಾಣದಲ್ಲಿ ಬಹಿರಂಗಪಡಿಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆದಿದೆ.

ಅನುಕೂಲಗಳು

*ಇದು ಡಿಜಿಟಲ್‌ ಸ್ವರೂಪದಲ್ಲಿ ಇರುವ ಕಾರಣ, ಕರೆನ್ಸಿ ನೋಟುಗಳನ್ನು ಮುದ್ರಿಸುವ ಅವಶ್ಯಕತೆ ಇಲ್ಲ. ಇದರಿಂದ ಮುದ್ರಣ, ಸಂಗ್ರಹ, ಸಾಗಣೆ ಮತ್ತು ವಿತರಣೆ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಬಹುದಾಗಿದೆ. ಇದು ಡಿಜಿಟಲ್ ಕರೆನ್ಸಿಯ ಪ್ರಧಾನ ಅನುಕೂಲಗಳಲ್ಲಿ ಒಂದು

*ಡಿಜಿಟಲ್ ಕರೆನ್ಸಿಯನ್ನು ಕರೆನ್ಸಿ ನೋಟಿನಂತೆಯೇ ಬ್ಯಾಂಕ್ ಮೂಲಕ ವಿತರಣೆ ಮಾಡಲಾಗುತ್ತದೆ. ಡಿಜಿಟಲ್ ಕರೆನ್ಸಿ ಖಾತೆಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡಬಹುದು. ಡಿಜಿಟಲ್ ಕರೆನ್ಸಿ ವಹಿವಾಟನ್ನು ಬ್ಯಾಂಕ್‌ ಖಾತೆಯ ಮೂಲಕ ನಿರ್ವಹಿಸುವ ಅವಶ್ಯಕತೆ ಇಲ್ಲ. ಈ ವಹಿವಾಟಿಗೆ ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್ ಪಡೆಯುವ ಅವಶ್ಯಕತೆ ಇಲ್ಲ. ಕರೆನ್ಸಿ ನೋಟು ವ್ಯವಹಾರದಂತೆಯೇ ಇದನ್ನು ನಿರ್ವಹಣೆ ಮಾಡಬಹುದು

*ಡಿಜಿಟಲ್ ಕರೆನ್ಸಿಯನ್ನು ವಿದೇಶಿ ವಿನಿಮಯಕ್ಕೆ ಸುಲಭವಾಗಿ, ಸರಳವಾಗಿ ಮತ್ತು ತಕ್ಷಣವೇ ಬಳಸಿಕೊಳ್ಳಬಹುದು. ವಿದೇಶಿ ವಿನಿಮಯಕ್ಕಾಗಿ ಕಮಿಷನ್ ನೀಡುವ ಅವಶ್ಯಕತೆ ಇಲ್ಲ. ವಿನಿಮಯದ ಕ್ಷಣದಲ್ಲಿನ ದರದ ಮೌಲ್ಯದಲ್ಲಿಯೇ ವಿನಿಮಯ ಮಾಡಿಕೊಳ್ಳಬಹುದು

*ಇದನ್ನು ಬ್ಯಾಂಕ್ ಖಾತೆಗಳಲ್ಲಿಯೂ ಠೇವಣಿ ರೂಪದಲ್ಲಿ ಇಡಬಹುದು. ಬ್ಯಾಂಕ್ ದಿವಾಳಿಯಾಗುತ್ತಿದೆ, ವಂಚನೆ ನಡೆದಿದೆ ಎನ್ನಬಹುದಾದ ಸಂದರ್ಭದಲ್ಲಿ ಅಷ್ಟೂ ಹಣವನ್ನು ಸುಲಭವಾಗಿ ವಾಪಸ್ ಪಡೆಯಬಹುದು. ಬ್ಯಾಂಕ್‌ನಲ್ಲಿ ನಗದು ನೋಟು ಲಭ್ಯವಿಲ್ಲ ಎಂಬ ಆತಂಕವಿರುವುದಿಲ್ಲ

*ಕರೆನ್ಸಿ ನೋಟುಗಳ ವ್ಯವಹಾರದ ಅವಶ್ಯಕತೆಯನ್ನು ಡಿಜಿಟಲ್ ಕರೆನ್ಸಿ ಕಡಿಮೆ ಮಾಡುತ್ತದೆ. ಹಣಕಾಸು ವ್ಯವಹಾರಗಳ ಲೆಕ್ಕಪತ್ರ ನಿರ್ವಹಣೆ ಸುಲಭವಾಗುತ್ತದೆ ಮತ್ತು ಸರಳವಾಗುತ್ತದೆ

ಅನನುಕೂಲಗಳು

ಡಿಜಿಟಲ್ ಕರೆನ್ಸಿಯಿಂದಾಗಬಹುದಾದ ಅನುಕೂಲಗಳಂತೆಯೇ ಅನನುಕೂಲಗಳು ಆರ್‌ಬಿಐ ಗುರುತಿಸಿದೆ. ಹೀಗೆ ಗುರುತಿಸಲಾದ ಅನನುಕೂಲಗಳಲ್ಲಿ ಕೆಲವು ಅಪಾಯಕಾರಿಯೂ ಹೌದು ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

*ಡಿಜಿಟಲ್ ಕರೆನ್ಸಿಯನ್ನು ದೇಶವ್ಯಾಪಿ ಬಳಕೆಗೆ ತರಲು ತಂತ್ರಜ್ಞಾನದ ಅಳವಡಿಕೆ ಅತ್ಯಂತ ಮುಖ್ಯ. ಇದಕ್ಕಾಗಿ ದೇಶದ ಎಲ್ಲೆಡೆ ವೇಗದ ಇಂಟರ್ನೆಟ್ ಸೇವೆ ಲಭ್ಯವಿರಬೇಕು. ಅತಿಹೆಚ್ಚು ಜನರು ಸ್ಮಾರ್ಟ್‌ ಫೋನ್‌ಗಳನ್ನು ಬಳಸಬೇಕು. ಡಿಜಿಟಲ್ ಕರೆನ್ಸಿ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಯಾವ ಸಿದ್ಧತೆಗಳನ್ನೂ ಮಾಡಿಕೊಳ್ಳದೆ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದರೆ, ಅದು ಯಶಸ್ವಿಯಾಗುವ ಸಾಧ್ಯತೆ ಕಡಿಮೆ

*ಡಿಜಿಟಲ್ ಕರೆನ್ಸಿಯನ್ನು ನಿರ್ವಹಣೆ ಮಾಡಲು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ. ಕರೆನ್ಸಿ ನೋಟು ಬ್ಯಾಂಕಿಂಗ್ ಮತ್ತು ಡಿಜಿಟಲ್ ಕರೆನ್ಸಿ ಬ್ಯಾಂಕಿಂಗ್ ವ್ಯವಸ್ಥೆಗಳು ಸಮಾನಾಂತರವಾಗಿ ಕಾರ್ಯನಿರ್ವಹಿಸಬೇಕು. ಈ ವ್ಯವಸ್ಥೆಯನ್ನು ರೂಪಿಸಲು ಸಾಕಷ್ಟು ಬಂಡವಾಳ ಹೂಡಿಕೆಯ ಅವಶ್ಯಕತೆ ಇದೆ. ಇದು ಬ್ಯಾಂಕಿಂಗ್ ವ್ಯವಸ್ಥೆಗೆ ಆರಂಭಿಕ ಹೊರೆಯಾಗುವ ಸಾಧ್ಯತೆ ಇದೆ. ಡಿಜಿಟಲ್ ಕರೆನ್ಸಿ ಜಾರಿಗೆ ತಂದರೆ, ಈ ಸ್ವರೂಪದ ಬಂಡವಾಳ ಹೂಡಿಕೆ ಅನಿವಾರ್ಯ. ಅದರ ಹೊರೆ ಗ್ರಾಹಕರಿಗೆ ವರ್ಗವಾಗುವ ಸಾಧ್ಯತೆಯೂ ಇದೆ

*ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಇರುವ ಹ್ಯಾಕಿಂಗ್‌ನಂತಹ ಸೈಬರ್ ಅಪರಾಧಗಳ ಅಪಾಯ ಡಿಜಿಟಲ್ ಕರೆನ್ಸಿಯಲ್ಲಿಯೂ ಇದೆ

*ಡಿಜಿಟಲ್ ಕರೆನ್ಸಿಯನ್ನು ವಿದೇಶಿ ವಿನಿಮಯಕ್ಕೆ ನೇರವಾಗಿ ಬಳಸುವುದಾದರೆ, ವಿನಿಮಯ ಮಾಡಿಕೊಳ್ಳಬೇಕಿರುವ ವಿದೇಶಿ ಕರೆನ್ಸಿಯೂ ಸಹ ಡಿಜಿಟಲ್ ಸ್ವರೂಪದಲ್ಲಿ ಇರಬೇಕು. ಆಗ ಮಾತ್ರ ವಿದೇಶಿ ವಿನಿಮಯಕ್ಕೆ ಇದನ್ನು ಬಳಸಬಹುದು. ಇಲ್ಲದಿದ್ದರೆ ಸಾಂಪ್ರದಾಯಿಕ ರೂಪದಲ್ಲೇ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ

ಡಿಜಿಟಲ್ ಕರೆನ್ಸಿ: ಚೀನಾ ಮುಂದು

ಡಿಜಿಟಲ್ ಕರೆನ್ಸಿಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಸಿದ್ಧಿಗೆ ಬರುತ್ತಿವೆ. ಜಾಗತಿಕವಾಗಿ 81 ದೇಶಗಳು ಡಿಜಿಟಲ್ ಕರೆನ್ಸಿಯ ಅನುಷ್ಠಾನದ ದಿಕ್ಕಿನಲ್ಲಿವೆ ಎಂದು ವರದಿಗಳು ತಿಳಿಸಿವೆ. ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 14 ಆರ್ಥಿಕ ಬಲಾಢ್ಯ ದೇಶಗಳು ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಸಿವೆ. 16 ದೇಶಗಳಲ್ಲಿ ಇಂತಹ ಕರೆನ್ಸಿಗಳು ಅಭಿವೃದ್ಧಿ ಹಂತದಲ್ಲಿವೆ. 32 ದೇಶಗಳಲ್ಲಿ ಇವು ಸಂಶೋಧನೆಯ ಹಂತದಲ್ಲಿವೆ.

ಡಿಜಿಟಲ್ ಕರೆನ್ಸಿ ವಿಚಾರದಲ್ಲಿ ಚೀನಾ ಎಲ್ಲ ದೇಶಗಳಿಗಿಂತ ಮುಂದಿದೆ. ಡಿಜಿಟಲ್ ಯುವಾನ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಸುಮಾರು ₹37 ಲಕ್ಷ ಕೋಟಿ (5.5 ಬಿಲಿಯನ್ ಡಾಲರ್) ಮೌಲ್ಯದ ವಹಿವಾಟು ನಡೆದಿದೆ ಎಂದು ವರದಿಗಳು ಹೇಳಿವೆ. ಮುಂದಿನ ವರ್ಷ ಡಿಜಿಟಲ್ ಯುವಾನ್ ಅನ್ನು ಪರಿಚಯಿಸುವ ಯೋಜನೆಯನ್ನು ಚೀನಾ ಹೊಂದಿದೆ ಎಂಬುದಾಗಿ ವರದಿಯಾಗಿದೆ.

ಬ್ರಿಟನ್, ಅಮೆರಿಕ, ಈಕ್ವೆಡಾರ್, ಟುನೀಶಿಯಾ, ಸೆನೆಗಲ್, ಸ್ವೀಡನ್, ಎಸ್ಟೋನಿಯಾ, ರಷ್ಯಾ, ಜಪಾನ್, ವೆನೆಜುವೆಲಾ ಮತ್ತು ಇಸ್ರೇಲ್‌ನಂತಹ ದೇಶಗಳು ಡಿಜಿಟಲ್ ಕರೆನ್ಸಿಯ ಹಾದಿಯಲ್ಲಿವೆ. ಉಕ್ರೇನ್, ದಕ್ಷಿಣ ಕೊರಿಯಾ, ಐಸ್‌ಲ್ಯಾಂಡ್ ಮತ್ತು ಥಾಯ್ಲೆಂಡ್‌ಗಳಲ್ಲಿ ಪ್ರಾಯೋಗಿಕ ಯತ್ನಗಳು ನಡೆಯುತ್ತಿದ್ದರೆ, ಕೆನಡಾ, ಬ್ರೆಜಿಲ್ ಮತ್ತು ಕಾಂಬೋಡಿಯಾದಲ್ಲಿ ಈ ಪರಿಕಲ್ಪನೆ ಇಟ್ಟುಕೊಂಡು ಕೆಲಸಗಳು ನಡೆಯುತ್ತಿವೆ. ಬಹಮಾಸ್‌ನ ಕಾರ್ಡ್ ಆಧಾರಿತ ‘ಸ್ಯಾಂಡ್ ಡಾಲರ್’ ಅನ್ನು ಈಗಾಗಲೇ ಎರಡು ದ್ವೀಪಗಳಲ್ಲಿ ಪರೀಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ಯಾವ ದೇಶವೂ ಇದನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ.

ಚೀನಾ ದೇಶವು ತನ್ನ ಡಿಜಿಟಲ್ ಕರೆನ್ಸಿಯನ್ನು ‘ಡಿಜಿಟಲ್ ಯುವಾನ್’ ಎಂದು ಕರೆದಿದ್ದು, ತನ್ನ ಹಣಕಾಸು ವ್ಯವಸ್ಥೆಯನ್ನು ಬದಲಾಯಿಸುವ ಪ್ರಯೋಗಗಳಿಗೆ ಮುಂದಾಗಿದೆ. ಅಮೆರಿಕವು ಇದನ್ನು ‘ಡಿಜಿಟಲ್ ಡಾಲರ್’ ಎಂದೂ, ಐರೋಪ್ಯ ಒಕ್ಕೂಟವು ‘ಡಿಜಿಟಲ್ ಯುರೋ’ ಎಂದೂ, ರಷ್ಯಾ ದೇಶವು ‘ಡಿಜಿಟಲ್ ರೂಬಲ್’ ಎಂದು ಕರೆದಿವೆ.

ಜಾಗತಿಕವಾಗಿ ಶೇ 10ರಷ್ಟು ಕೇಂದ್ರೀಯ ಬ್ಯಾಂಕುಗಳು 3 ವರ್ಷಗಳಲ್ಲಿ ಮತ್ತು ಶೇ 20ರಷ್ಟು ಕೇಂದ್ರೀಯ ಬ್ಯಾಂಕ್‌ಗಳು ಮುಂದಿನ 6 ವರ್ಷಗಳಲ್ಲಿ ಸಿಬಿಡಿಸಿ ಅನುಷ್ಠಾನಗೊಳಿಸಲಿವೆ ಎಂದು ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಸೆಟ್ಲ್‌ಮೆಂಟ್ಸ್‌ ತಿಳಿಸಿದೆ.

ಆಧಾರ: ಆರ್‌ಬಿಐನ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ: ಇಸ್‌ ದ ಪ್ಯೂಚರ್ ಆಫ್ ಮನಿ’ ವರದಿ, ಟೆಕ್‌ಕ್ರಂಚ್, ಸ್ಕ್ರಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT