ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಚರ್ಚೆ- 2| ಮೀಸಲಾತಿ ಮೇಲೆ ರಾಜಕೀಯ ಬಲದ ಸವಾರಿ

Last Updated 28 ನವೆಂಬರ್ 2022, 19:44 IST
ಅಕ್ಷರ ಗಾತ್ರ

ಸಾಮಾಜಿಕವಾಗಿ ತುಳಿತಕ್ಕೊಳಗಾದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ನ್ಯಾಯ ಒದಗಿಸುವ ಪ್ರಯತ್ನವನ್ನು ಪ್ರಬಲ ಸಮುದಾಯಗಳು ದಶಕಗಳ ಕಾಲದಿಂದಲೂ ವಿರೋಧಿಸುತ್ತಲೇ ಬಂದಿವೆ. ಚರ್ಚೆ, ಪ್ರಶ್ನೆಗಳ ರೂಪದಲ್ಲಿ ಮೀಸಲಾತಿಯ ಉದ್ದೇಶವನ್ನು ಟೀಕಿಸುತ್ತಿದ್ದ ಇಂತಹ ವರ್ಗಗಳಿಗೆ ಆರಂಭದಿಂದಲೂ ರಾಜಕೀಯ ಬೆಂಬಲ ಇತ್ತು. ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಮೀಸಲಾತಿಯನ್ನು ವಿರೋಧಿಸುವವರ ಜತೆ ಕೈಜೋಡಿಸಿಕೊಂಡು ಬಂದಿರುವುದನ್ನು ಚರಿತ್ರೆಯ ಪುಟಗಳಲ್ಲಿ ಕಾಣಬಹುದು

ಜಾತಿಯ ಕಾರಣದಿಂದ ದೇಶವನ್ನು ಆವರಿಸಿಕೊಂಡಿರುವಸಾಮಾಜಿಕ ಅಸಮಾನತೆಯನ್ನು ತೊಲಗಿಸಿ, ಶೋಷಿತ ಸಮುದಾಯ ಗಳಿಗೆ ಶಕ್ತಿ ನೀಡಲು ರೂಪಿಸಲಾದ ಮೀಸಲಾತಿ ವ್ಯವಸ್ಥೆಯನ್ನು ಆಳುವ ಪಕ್ಷಗಳು ಮತ್ತು ರಾಜಕೀಯವಾಗಿ ಪ್ರಬಲವಾದ ಸಮುದಾಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾ ಬಂದಿವೆ. ಭಾರತದಲ್ಲಿ ಮೀಸಲಾತಿ ವ್ಯವಸ್ಥೆಗೆ ಶತಮಾನದ ಇತಿಹಾಸವಿದೆ. ಮಹಾರಾಷ್ಟ್ರದ ಸಾಹು ಮಹಾರಾಜ, ಮೈಸೂರಿನ ಒಡೆಯರ್‌ ತಮ್ಮ ಸಂಸ್ಥಾನಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಿದ್ದರು. ದೇಶವುಸ್ವಾತಂತ್ರ್ಯಾನಂತರ ರೂಪಿಸಿಕೊಂಡ ಸಂವಿಧಾನದಲ್ಲೇ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಅದಕ್ಕೆ ಸಾಂವಿಧಾನಿಕ ರಕ್ಷಣೆ ನೀಡಲಾಗಿದೆ. ಆರಂಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದ್ದ ಮೀಸಲಾತಿ ಸೌಲಭ್ಯವು, ನಂತರದ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೂ ಲಭಿಸಿತು. ಹಿಂದುಳಿದ ವರ್ಗಗಳು ಮೀಸಲಾತಿ ಪಟ್ಟಿಯನ್ನು ಸೇರಿದ ಬಳಿಕ ಪ್ರಬಲ ಜಾತಿ ಮತ್ತು ಸಮುದಾಯಗಳು ಸಮಯ ಸಿಕ್ಕಾಗಲೆಲ್ಲ ತಮಗಿರುವ ರಾಜಕೀಯ ಬಲವನ್ನು ಬಳಸಿಕೊಂಡೇ ಮೀಸಲಾತಿ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು
ಪ್ರಯತ್ನಿಸುತ್ತಲೇ ಇವೆ.

‘ಸಮಾನ ಅವಕಾಶಗಳನ್ನು ನೀಡಬೇಕು. ಈವರೆಗೆ ಆಡಳಿತದಲ್ಲಿ ಸರಿಯಾದ ಅವಕಾಶ ಪಡೆದಿಲ್ಲದ ಕೆಲವು ಸಮುದಾಯಗಳ ಪರವಾಗಿ ಮೀಸಲಾತಿ ಇರತಕ್ಕದ್ದು’ ಎಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಮಿತಿಯು ಮೀಸಲಾತಿ ಕುರಿತು ನಡೆಸಿದ ಚರ್ಚೆಯ ವೇಳೆ ಮಾಡಿದ್ದ ಭಾಷಣದಲ್ಲಿ ಹೇಳಿದ್ದರು. ‘ಸಮಾನತೆಯ ಅವಕಾಶ ಎಂಬ ತತ್ವ ಹಾಗೂ ಪ್ರಭುತ್ವದಲ್ಲಿ ಪ್ರಾತಿನಿಧ್ಯ ಪಡೆಯದ ಸಮುದಾಯಗಳ ಬೇಡಿಕೆಯನ್ನು ಪೂರೈಸುವುದು ಎಂಬ ಎರಡು ಅಂಶಗಳನ್ನು ಕಾಪಾಡಿಕೊಳ್ಳಬೇಕು’ ಎಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಇದೇ ತತ್ವಗಳ ಆಧಾರದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ನಮ್ಮ ಸಂವಿಧಾನದಲ್ಲಿ ಸೇರಿಸಲಾಗಿತ್ತು. ಆದರೆ, ರಾಜಕೀಯವಾಗಿ ಗಣನೀಯ ಪ್ರಾತಿನಿಧ್ಯ ಪಡೆದಿರುವ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿಯೂ ಹೆಚ್ಚು ಅವಕಾಶಗಳನ್ನು ಪಡೆದಿರುವ ಸಮುದಾಯಗಳಿಗೆ ಸಂವಿಧಾನದ ಆಶಯಗಳನ್ನೂ ಮೀರಿ ಮೀಸಲಾತಿಯ ಸೌಲಭ್ಯ ವಿಸ್ತರಿಸುವ ಪ್ರಯತ್ನಗಳು ಹಲವು ಬಾರಿ ನಡೆದಿವೆ. ಕೆಲವು ರಾಜ್ಯಗಳಲ್ಲಿ ಅಂತಹ ಪ್ರಯತ್ನಗಳು ಸಫಲವಾಗಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಕೈಗೊಂಡ ತೀರ್ಮಾನಗಳು ನ್ಯಾಯಾಲಯದ ಮಧ್ಯಪ್ರವೇಶದಿಂದ ಅನುಷ್ಠಾನಕ್ಕೆ ಬಂದಿಲ್ಲ.

ಸಾಮಾಜಿಕವಾಗಿ ತುಳಿತಕ್ಕೊಳಗಾದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ನ್ಯಾಯ ಒದಗಿಸುವ ಪ್ರಯತ್ನವನ್ನು ಪ್ರಬಲ ಸಮುದಾಯಗಳು ದಶಕಗಳ ಕಾಲದಿಂದಲೂ ವಿರೋಧಿಸುತ್ತಲೇ ಬಂದಿವೆ. ಚರ್ಚೆ, ಪ್ರಶ್ನೆಗಳ ರೂಪದಲ್ಲಿ ಮೀಸಲಾತಿಯ ಉದ್ದೇಶವನ್ನು ಟೀಕಿಸುತ್ತಿದ್ದ ಇಂತಹ ವರ್ಗಗಳಿಗೆ ಆರಂಭದಿಂದಲೂ ರಾಜಕೀಯ ಬೆಂಬಲ ಇತ್ತು. ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಮೀಸಲಾತಿಯನ್ನು ವಿರೋಧಿಸುವವರ ಜತೆ ಕೈಜೋಡಿಸಿಕೊಂಡು ಬಂದಿರುವುದನ್ನು ಚರಿತ್ರೆಯ ಪುಟಗಳಲ್ಲಿ ಕಾಣಬಹುದು. ಬಿಂದೇಶ್ವರಿ ಪ್ರಸಾದ್ ಮಂಡಲ್‌ ಆಯೋಗವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 27ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿ 1980ರಲ್ಲಿ ವರದಿ ನೀಡಿತ್ತು. 1990ರ ಆಗಸ್ಟ್‌ನಲ್ಲಿ ಆಗಿನ ಪ್ರಧಾನಿ ವಿ.ಪಿ. ಸಿಂಗ್ ಅವರು ಮಂಡಲ್‌ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಮುಂದಾದಾಗ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕಿಚ್ಚು ಆವರಿಸಿತು. ಶೋಷಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಕಲ್ಪಿಸುವುದನ್ನು ತೆರೆಮರೆಯಲ್ಲಿ ವಿರೋಧಿಸಿಕೊಂಡು ಬಂದವರೆಲ್ಲರೂ ಮಂಡಲ್‌ ವರದಿ ವಿರುದ್ಧ ಪ್ರತಿಭಟನೆಗೆ ಇಳಿದರು. ಅಂತರಂಗದಲ್ಲಿ ಮೀಸಲಾತಿಯನ್ನು ವಿರೋಧಿ ಸುತ್ತಿದ್ದ ಅನೇಕ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಬೆಂಬಲವೂ ಈ ಹೋರಾಟಕ್ಕೆ ಇತ್ತು. ಈ ರೀತಿ ಮೀಸಲಾತಿ ವ್ಯವಸ್ಥೆಯ ಮೇಲೆ ಆರಂಭವಾದ ‘ರಾಜಕಾರಣದ ಸವಾರಿ’ ನಂತರ ಬಲಗೊಳ್ಳುತ್ತಲೇ ಇದೆ.

ಬಲಗೊಂಡ ನಂಟು

ಕೇಂದ್ರ ಸರ್ಕಾರವು ವೈದ್ಯಕೀಯ ಶಿಕ್ಷಣವೂ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಮೀಸಲಾತಿ ಕಲ್ಪಿಸಲು2006ರಲ್ಲಿ ಮುಂದಾಯಿತು. ಈ ತೀರ್ಮಾನದ ವಿರುದ್ಧವೂ ಪ್ರಬಲ ಸಮುದಾಯಗಳ ವಿದ್ಯಾರ್ಥಿಗಳು ದೇಶವ್ಯಾಪಿಯಾಗಿ ಬೀದಿಗೆ ಇಳಿದಿದ್ದರು. ‘ಎರಡನೇ ಮಂಡಲ್‌ ಹೋರಾಟ’ ಎಂಬ ಹೆಸರಿನಡಿ ನಡೆದ ಈ ಪ್ರತಿಭಟನೆ ಹಲವೆಡೆ ಹಿಂಸಾಚಾರಕ್ಕೆ ಎಡೆಮಾಡಿತ್ತು. ಆಗ ಕೂಡ ರಾಜಕೀಯ ಕೈವಾಡ ಪ್ರಬಲವಾಗಿ ಕೆಲಸ ಮಾಡಿತ್ತು. ಮೀಸಲಾತಿ ವಿರೋಧಿ ಮನಃಸ್ಥಿತಿಯ ರಾಜಕೀಯ ಪಕ್ಷಗಳ ಜತೆ ನಂಟು ಹೊಂದಿರುವವರೇ ಈ ಹೋರಾಟದ ನೇತೃತ್ವ ವಹಿಸಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿತ್ತು. 2008ರಲ್ಲಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಲಯ, ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ 27ರಷ್ಟು ಮೀಸಲಾತಿ ನೀಡುವ ಸರ್ಕಾರದ ನಿರ್ಧಾರವನ್ನು
ಎತ್ತಿಹಿಡಿದಿತ್ತು.

ಭೂ ಮಾಲೀಕತ್ವ, ಸಾಮಾಜಿಕ ಸ್ಥಿತಿ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದುವರಿದಿರುವ ಹಾಗೂ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ಒತ್ತಡ ಹೇರುತ್ತಿರುವುದು ಒಂದು ದಶಕದಿಂದ ಈಚೆಗೆ ಹೆಚ್ಚುತ್ತಿದೆ. 2015ರಲ್ಲಿ ರಾಜಸ್ಥಾನದಲ್ಲಿ ಗುಜ್ಜರ್‌ ಸಮುದಾಯದ ಜನರು ಎಲ್ಲ ಸರ್ಕಾರಿ ಹುದ್ದೆಗಳಲ್ಲಿ ಶೇ 5ರಷ್ಟು ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಈ ಚಳವಳಿಯು ರಾಜಸ್ಥಾನದ ಹಲವೆಡೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು. ಗುಜರಾತ್‌ನಲ್ಲಿ ಪಾಟೀದಾರ್‌ (ಪಟೇಲರು) ಸಮುದಾಯದ ಜನರು ಮೀಸಲಾತಿ ನೀಡುವಂತೆ ಆಗ್ರಹಿಸಿ 2015ರಲ್ಲಿ ದೀರ್ಘಕಾಲ ಹೋರಾಟ ನಡೆಸಿದ್ದರು. ಚಳವಳಿ ಹಿಂಸಾರೂಪ ಪಡೆದಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 11 ಮಂದಿ ಮೃತಪಟ್ಟಿ
ದ್ದರು. ಆಂಧ್ರಪ್ರದೇಶದಲ್ಲಿ ಕಾಪು ಸಮುದಾಯವು ಇತರ ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿಗೆ ಆಗ್ರಹಿಸಿ 2016ರಲ್ಲಿ ಬೃಹತ್‌ ಹೋರಾಟ ನಡೆಸಿತ್ತು. ಅದೇ ವರ್ಷ ಹರಿಯಾಣದಲ್ಲಿ ಜಾಟರು ಮೀಸಲಾತಿಗಾಗಿ ನಡೆಸಿದ ಹೋರಾಟವು ಹಿಂಸಾರೂಪ ಪಡೆದಿತ್ತು. 2018ರಲ್ಲಿ ಮರಾಠಿಗರು ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ದೊಡ್ಡ ಹೋರಾಟ ನಡೆಸಿದ್ದರು. ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳು ಹೋರಾಟಗಾರರ ಬೇಡಿಕೆಗೆ ಮಣಿದು ತೀರ್ಮಾನ ಕೈಗೊಂಡಿದ್ದವು. ಗುಜರಾತ್‌ನ ಪಾಟೀದಾರ ಸಮುದಾಯವು ಆರ್ಥಿಕವಾಗಿ ದುರ್ಬಲ ಸಮುದಾಯಗಳ ಕೋಟಾದಡಿ ಶೇ 10ರ ಮೀಸಲಾತಿಯಲ್ಲಿ ಪಾಲು ಪಡೆಯುತ್ತಿದೆ.

ಕೆಲವು ವರ್ಷಗಳ ಹಿಂದಿನವರೆಗೂ ಮೀಸಲಾತಿ ಕಲ್ಪಿಸುವುದು ಮತ್ತು ಅದರ ಪ್ರಮಾಣದ ಹೆಚ್ಚಳಕ್ಕೆ ಬೇಡಿಕೆಯಿಟ್ಟು ನಡೆಯುವ ಹೋರಾಟದ ಮುಂಚೂಣಿಯಲ್ಲಿ ಆಯಾಸಮುದಾಯದ ಜಾತಿ ಸಂಘಟನೆಗಳೇ ಇರುತ್ತಿದ್ದವು. ರಾಜಕೀಯ ನಾಯಕರು ದೂರದಲ್ಲೇ ಉಳಿದಿರುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ರಾಜಕೀಯ ನೇತಾರರೇ ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಿಂದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕುರುಬರು ನಡೆಸುತ್ತಿರುವ ಹೋರಾಟ, ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟಗಳ ಮುಂಚೂಣಿಯಲ್ಲಿ ರಾಜಕಾರಣಿಗಳೇ ಇದ್ದಾರೆ. ಹಿಂದುಳಿದ ವರ್ಗಗಳ ಪ್ರವರ್ಗ–3ರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಒಕ್ಕಲಿಗರು ಆರಂಭಿಸಿರುವ ಹೋರಾಟದ ವೇದಿಕೆಯಲ್ಲೂ ಸಚಿವರು, ಶಾಸಕರು, ಸಂಸದರು ನೇರವಾಗಿ ಭಾಗಿಯಾಗಿದ್ದಾರೆ.

ಆಯಾ ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಪ್ರಬಲ ಸಮುದಾಯಗಳ ಮೀಸಲಾತಿ ಬೇಡಿಕೆಗಳುಮುನ್ನೆಲೆಗೆ ಬರುತ್ತಿವೆ. ಭೂ ಒಡೆತನ, ಆರ್ಥಿಕ ಮತ್ತು ರಾಜಕೀಯವಾಗಿ ಬಲಿಷ್ಠವಾಗಿರುವ ಸಮುದಾಯಗಳು ತಮಗಿರುವ ‘ಮತದಾರರ ಬಲ’ವನ್ನು ಆಡಳಿತದ ಚುಕ್ಕಾಣಿ ಹಿಡಿದವರ ಮುಂದಿಟ್ಟು ‘ಹಿಂದುಳಿದವರ’ ಪಟ್ಟಿ ಸೇರಲು ಪಟ್ಟು ಹಾಕುತ್ತಿವೆ. ಆಡಳಿತದ ಚುಕ್ಕಾಣಿ ಹಿಡಿದವರು ಮತಬ್ಯಾಂಕ್‌ ಆಸೆಯಲ್ಲಿ ನಿರ್ಧಾರ ಕೈಗೊಳ್ಳುವ ಇಕ್ಕಟ್ಟಿಗೆ ಸಿಲುಕುತ್ತಿರುವುದು ನಡೆಯುತ್ತಲೇ ಇದೆ.

ವಿಮರ್ಶೆಗೂ ಹೆದರುವ ಕಾಲ

ಕೇಂದ್ರ ಸರ್ಕಾರವು ಸಂವಿಧಾನಕ್ಕೆ 103ನೇ ತಿದ್ದುಪಡಿ ತರುವ ಮೂಲಕ ಆರ್ಥಿಕವಾಗಿ ದುರ್ಬಲ ಸಮುದಾಯಗಳಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಿದೆ. ಈವರೆಗೂ ಮೀಸಲಾತಿಯ ವ್ಯಾಪ್ತಿಯಲ್ಲಿಲ್ಲದ ಸಮುದಾಯಗಳ ಬಡವರಿಗೆ ಮಾತ್ರವೇ ಈ ಮೀಸಲಾತಿ ದೊರಕಲಿದೆ. ಸುಪ್ರೀಂ ಕೋರ್ಟ್‌ ಈ ತಿದ್ದುಪಡಿಯನ್ನು ಎತ್ತಿಹಿಡಿದಿದೆ. ಆದರೆ, ಕರ್ನಾಟಕವೂ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸಂಖ್ಯೆ ಜಾಸ್ತಿಯಾಗಿರುವ ಹಲವು ರಾಜ್ಯಗಳಲ್ಲಿ ಇಡಬ್ಲ್ಯುಎಸ್‌ ವ್ಯಾಪ್ತಿಗೆ ಸೇರುವ ಸಮುದಾಯಗಳ ಜನಸಂಖ್ಯೆ
ಕಡಿಮೆ ಇದೆ. ಜನಸಂಖ್ಯೆಗಿಂತ ಹೆಚ್ಚಿನ ಮೀಸಲು ಕಲ್ಪಿಸುವಂತಹ ನಿರ್ಧಾರದ ಅಪಾಯಗಳ ಕುರಿತುವಿಮರ್ಶಿಸುವುದಕ್ಕೂ ರಾಜಕೀಯ ನೇತಾರರು ಹೆದರುತ್ತಿದ್ದಾರೆ.

ಕರ್ನಾಟಕದಲ್ಲಿ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತ ಮತ್ತು ಮೊದಲಿಯಾರ್‌ ಸಮುದಾಯಗಳು ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹತೆ ಹೊಂದಿವೆ. ಸದ್ಯದ ಅಂದಾಜಿನ ಪ್ರಕಾರ, ಈ ಸಮುದಾಯಗಳ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 5ರಷ್ಟನ್ನು ದಾಟುವುದಿಲ್ಲ. ಆದರೆ, ಇಲ್ಲಿ ಅವರಿಗೆ ದುಪ್ಪಟ್ಟು ಮೀಸಲಾತಿ ದೊರಕಲಿದೆ. ಸಹಜವಾಗಿಯೇ ಅನ್ಯ ಸಮುದಾಯಗಳು ಅವಕಾಶ ವಂಚಿತವಾಗಲಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಸೇರಿದಂತೆ ಮೀಸಲಾತಿ ಸೌಲಭ್ಯ ಪಡೆಯುವ ಸಮುದಾಯಗಳಿಂದ ಬಂದಿರುವ ನೇತಾರರೂ ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆ ಮತ್ತು ರಾಜಕೀಯ ಭವಿಷ್ಯದ ಚಿಂತೆ ನೇತಾರರನ್ನು ಈ ಸ್ಥಿತಿಗೆ ದೂಡಿದಂತಿದೆ.

ನಿಲುವು ಬದಲಿಸಿದ ಕಾಂಗ್ರೆಸ್‌

ಇಡಬ್ಲ್ಯುಎಸ್‌ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಆ ಪಕ್ಷದ ಹಲವು ನಾಯಕರು ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸಿ ಹೇಳಿಕೆ ನೀಡಿದ್ದರು. ಆದರೆ, ತಮಿಳುನಾಡಿನ ಡಿಎಂಕೆ ಸರ್ಕಾರ ತೀರ್ಪಿನ ಮರುಪರಿಶೀಲನೆಗೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಿಲುವು ಬದಲಿಸಿದೆ. ತೀರ್ಪಿನ ಮರು ಪರಿಶೀಲನೆ ನಡೆಸುವಂತೆ ಕೋರಿ ಕಾಂಗ್ರೆಸ್‌ ನಾಯಕರೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT