ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕ್ರಿಪ್ಟೋಕರೆನ್ಸಿಯ ಜಾಲದೊಳಗಿನ ಗಂಟು

Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಖಾಸಗಿ ಕಂಪನಿಗಳು ನಡೆಸುವ ಡಿಜಿಟಲ್‌ ಹಣಕಾಸು ವ್ಯವಸ್ಥೆ ಎನಿಸಿದ ಕ್ರಿಪ್ಟೋಕರೆನ್ಸಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಎರಡು ವರ್ಷಗಳ ಹಿಂದೆಯೇ ನಿಷೇಧ ಹೇರಿತ್ತು. ಕಾನೂನಿನ ಮಾನ್ಯತೆ ಇಲ್ಲದ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ದೇಶದ ಹಣಕಾಸು ವ್ಯವಸ್ಥೆಯನ್ನು ಬಳಸಿಕೊಳ್ಳಲು ಆಸ್ಪದ ನೀಡಬಾರದು ಎಂದು ಎಲ್ಲ ಬ್ಯಾಂಕ್‌ಗಳಿಗೂ ಆದೇಶಿಸಿತ್ತು. ಕೇಂದ್ರ ಹಣಕಾಸು ಸಚಿವಾಲಯವು ನೇಮಿಸಿದ್ದ ಡಿಜಿಟಲ್‌ ಕರೆನ್ಸಿ ಅಧ್ಯಯನ ಸಮಿತಿ ಸಹ ‘ಸರ್ಕಾರದ ಹಿಡಿತವಿಲ್ಲದ ಇಂತಹ ಅರ್ಥವ್ಯವಸ್ಥೆ ನಮಗೆ ಬೇಡ, ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಬೇಕು’ ಎಂದು ಶಿಫಾರಸು ಮಾಡಿತ್ತು. ಆರ್‌ಬಿಐನ ಆದೇಶವನ್ನು ಇದೀಗ ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌, ಕ್ರಿಪ್ಟೋಕರೆನ್ಸಿ ಮೇಲಿನ ನಿಷೇಧವನ್ನೂ ತೆರವುಗೊಳಿಸಿದೆ. ಸ್ವಿಟ್ಜರ್ಲೆಂಡ್‌, ಕೆನಡಾ, ಜಪಾನ್‌ ಮತ್ತಿತರ ದೇಶಗಳಂತೆ ಭಾರತದಲ್ಲೂ ಇನ್ನುಮುಂದೆ ಕ್ರಿಪ್ಟೋಕರೆನ್ಸಿ ವಹಿವಾಟನ್ನು ಪ್ರವರ್ಧಮಾನಕ್ಕೆ ತರಬಹುದು ಎಂಬ ಆಸೆ, ಈ ವ್ಯವಹಾರದಲ್ಲಿ ತೊಡಗಿರುವ ಡಿಜಿಟಲ್‌ ಕಂಪನಿಗಳಲ್ಲಿ ಚಿಗುರೊಡೆದಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಅರಿಯುವ ಒಂದು ಯತ್ನ ಇಲ್ಲಿದೆ...

ಮಾರುಕಟ್ಟೆಗೆ ಪ್ರವೇಶ ಹೇಗೆ...

ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್ ಹಣಕಾಸು ವ್ಯವಸ್ಥೆ. ಭೌತಿಕ ಅಸ್ತಿತ್ವ ಇಲ್ಲದ ಕಾರಣ ಇದಕ್ಕೆ ಯಾವುದೇ ರಾಷ್ಟ್ರದ ಕಾನೂನಾತ್ಮಕ ಮನ್ನಣೆ ಇರುವುದಿಲ್ಲ. ಹೀಗಾಗಿ ಇದನ್ನು ಡಿಜಿಟಲ್ ಸ್ವರೂಪದಲ್ಲೇ ಬಳಸಬೇಕು. ಹಾಗೆಂದು ಇದನ್ನು ಸುಖಾಸುಮ್ಮನೆ ಸೃಷ್ಟಿಸಲೂ ಸಾಧ್ಯವಿಲ್ಲ. ಮುಖ್ಯವಾಹಿನಿಯ ಹಣಕಾಸು ವ್ಯವಸ್ಥೆಗೆ ಪರ್ಯಾಯವಾಗಿ ಬಳಕೆಯಾಗುವ ಕ್ರಿಪ್ಟೋಕರೆನ್ಸಿ ವ್ಯವಸ್ಥೆಗೆ ಪ್ರವೇಶ ಪಡೆಯಲು, ಮುಖ್ಯವಾಹಿನಿ ವ್ಯವಸ್ಥೆಯ ಹಣವೇ ಬೇಕು.

1. ಯಾವುದೇ ಕ್ರಿಪ್ಟೋಕರೆನ್ಸಿ ವಿನಿಮಯ ಜಾಲತಾಣ ಅಥವಾ ಕೇಂದ್ರಗಳಿಗೆ ಭೇಟಿ ನೀಡಬೇಕು

2. ಅಗತ್ಯವಿರುವ ಕ್ರಿಪ್ಟೋಕರೆನ್ಸಿಯ ಘಟಕಗಳ ಖರೀದಿಗೆ ಮನವಿ ಸಲ್ಲಿಸಬೇಕು. ಮನವಿ ಸಲ್ಲಿಸಿದ ವ್ಯಕ್ತಿಯ ಹೆಸರಿನಲ್ಲಿ ಖಾತೆ ಸೃಷ್ಟಿ ಆಗಲಿದೆ

3. ಖರೀದಿಸಲು ಮುಂದಾಗಿರುವ ಕ್ರಿಕ್ಟೋಕರೆನ್ಸಿಯ ಮೌಲ್ಯದಷ್ಟು ಹಣವನ್ನು ಪಾವತಿಸಬೇಕು. ವಿನಿಮಯ ಜಾಲತಾಣಗಳಲ್ಲಿ ಆದರೆ, ಬ್ಯಾಂಕ್‌ ಖಾತೆ ಮೂಲಕ ಹಣವನ್ನು ಜಮೆ ಮಾಡಬೇಕು. ವಿನಿಮಯ ಕೇಂದ್ರಗಳಲ್ಲಾದರೆ, ನಗದು ಜಮೆ ಮಾಡಬಹುದು.

4. ಕ್ರಿಪ್ಟೋಕರೆನ್ಸಿ ಖಾತೆಗೆ ಕ್ರಿಪ್ಟೋಕರೆನ್ಸಿ ಜಮೆ ಆಗಲಿದೆ

5. ಕ್ರಿಪ್ಟೋಕರೆನ್ಸಿ ಬಳಸಿಕೊಂಡು, ಕ್ರಿಪ್ಟೋಕರೆನ್ಸಿಯಲ್ಲೂ ವ್ಯವಹರಿಸುವ ವರ್ತಕರು–ವ್ಯಕ್ತಿಗಳ ಜತೆ ವ್ಯವಹಾರ ಮತ್ತು ವಹಿವಾಟು ನಡೆಸಬಹುದು. ಕ್ರಿಪ್ಟೋಕರೆನ್ಸಿಯನ್ನೂ ವರ್ಗಾವಣೆ ಮಾಡಬಹುದು.ಕ್ರಿಪ್ಟೋಕರೆನ್ಸಿಯ ಮೌಲ್ಯದಲ್ಲೂ ಏರಿಳಿತವಾಗುತ್ತಿರುತ್ತದೆ. ಇದರಿಂದ ಲಾಭವೂ ಆಗಬಹುದು, ನಷ್ಟವೂ ಆಗಬಹದು

6. ಕ್ರಿಪ್ಟೋಕರೆನ್ಸಿಯನ್ನು ನಗದೀಕರಿಸಿಕೊಳ್ಳಲೂ ಅವಕಾಶವಿದೆ. ಕ್ರಿಪ್ಟೋಕರೆನ್ಸಿಯನ್ನು ವಿನಿಯಮ ಕೇಂದ್ರ ಅಥವಾ ಜಾಲತಾಣದಲ್ಲಿ ಮಾರಾಟ ಮಾಡಿ, ಅಗತ್ಯವಿರುವ ಕರೆನ್ಸಿಯ ರೂಪದಲ್ಲಿ ಹಣ ಪಡೆದುಕೊಳ್ಳಬಹುದು

7. ಹಣವನ್ನು ನಗದು ರೂಪದಲ್ಲಿಯೂ ಪಡೆದುಕೊಳ್ಳಬಹುದು. ಬ್ಯಾಂಕ್ ಖಾತೆಗೂ ಜಮೆ ಮಾಡಿಕೊಳ್ಳಬಹುದು

ವಹಿವಾಟು ಸ್ವರೂಪ...

1. ಕ್ರಿಪ್ಟೋಕರೆನ್ಸಿ ಖಾತೆ/ವ್ಯಾಲೆಟ್ ಇರುವ ವ್ಯಕ್ತಿಯೊಬ್ಬರು ವಸ್ತು/ಸೇವೆಯೊಂದನ್ನು ಖರೀದಿಸಲು ಮುಂದಾಗುತ್ತಾರೆ. ಅದಕ್ಕೆ ಅಗತ್ಯವಿರುವ ಹಣವನ್ನು ಕ್ರಿಪ್ಟೋಕರೆನ್ಸಿ ಸ್ವರೂಪದಲ್ಲಿ ಮಾರಾಟಗಾರ ಅಥವಾ ಸೇವಾದಾರ ವ್ಯಕ್ತಿಗೆ ರವಾನಿಸುತ್ತಾರೆ

2. ಕ್ರಿಪ್ಟೋಕರೆನ್ಸಿ ಖಾತೆಯು ಆ ವ್ಯಕ್ತಿಯ ಒಂದು ವಿಳಾಸವಾಗಿರುತ್ತದೆ. ಆ ವ್ಯಕ್ತಿಯನ್ನು ವಿಳಾಸದ ಮೂಲಕ ಮಾತ್ರ ಗುರುತಿಸಲಾಗುತ್ತದೆ. ಈ ವಿಳಾಸವೂ ಗೂಢಲಿಪಿಯ ರೂಪದಲ್ಲಿ ಇರುತ್ತದೆ

3. ಖರೀದಿದಾರ ವ್ಯಕ್ತಿಯಿಂದ ಕ್ರಿಪ್ಟೋಕರೆನ್ಸಿ ರವಾನೆಯಾದ ನಂತರ, ಆ ವಹಿವಾಟನ್ನು ಗೂಢಲಿಪಿಗೆ ಪರಿವರ್ತಿಸಲಾಗುತ್ತದೆ. ಈ ಗೂಢಲಿಪಿಯನ್ನು ‘ಕೀ’ ಮೂಲಕ ಲಾಕ್ ಮಾಡಲಾಗಿರುತ್ತದೆ

4. ಗೂಢಲಿಪಿಯಲ್ಲಿ ಇರುವ ವಹಿವಾಟನ್ನು ಆರಂಭಿಸಿದ ವ್ಯಕ್ತಿ ಮತ್ತು ಅದನ್ನು ಸ್ವೀಕರಿಸಲಿರುವ ವ್ಯಕ್ತಿಯ ವಿಳಾಸವನ್ನು ಬ್ಲ್ಯಾಕ್‌ಚೈನ್‌ ನಿರ್ವಾಹಕರು ಪರಿಶೀಲಿಸುತ್ತಾರೆ. ಇವರು ಒಪ್ಪಿಗೆ ನೀಡಿದ ನಂತರ ವಹಿವಾಟು, ಮಾರಾಟಗಾರನಿಗೆ ರವಾನೆಯಾಗುತ್ತದೆ

5. ಮಾರಾಟಗಾರನು ತನ್ನ ‘ಕೀ’ಯನ್ನು ಬಳಸಿ ಗೂಢಲಿಪಿಯಲ್ಲಿ ಇರುವ ವಹಿವಾಟನ್ನು ಸಾಮಾನ್ಯ ಲಿಪಿಗೆ ಪರಿವರ್ತಿಸಿಕೊಳ್ಳುತ್ತಾನೆ

6. ಮೊದಲ ವ್ಯಕ್ತಿ ರವಾನಿಸಿದ ಹಣ, ಮಾರಾಟಗಾರನ ಕ್ರಿಪ್ಟೋಕರೆನ್ಸಿ ಖಾತೆಗೆ ಜಮೆ ಆಗುತ್ತದೆ

ಏನಿದು ಕ್ರಿಪ್ಟೋಕರೆನ್ಸಿ?

ಕಾನೂನಿನ ಯಾವುದೇ ಮಾನ್ಯತೆಯನ್ನೂ ಹೊಂದಿರದೇ ಡಿಜಿಟಲ್‌ ವಹಿವಾಟಿನ ಕೊಡುಕೊಳು ವ್ಯವಹಾರಗಳಲ್ಲಿ ಕರೆನ್ಸಿ ಸ್ವರೂಪದಲ್ಲಿ ಬಳಕೆಯಾಗುವ ಒಂದು ಮೌಲ್ಯವೇ ವರ್ಚುವಲ್ (ವಾಸ್ತವ ಎಂದು ಭ್ರಮೆ ಮೂಡಿಸುವ) ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿ. ಇದೊಂದು ಖಾಸಗಿ ವ್ಯವಹಾರದ ಮಾಧ್ಯಮವಾಗಿದ್ದು, ಕ್ರಿಪ್ಟೋಕರೆನ್ಸಿಯ ಮೌಲ್ಯಕ್ಕೆ ಸರ್ಕಾರದಿಂದ ಯಾವುದೇ ಖಾತ್ರಿ (ಆರ್‌ಬಿಐನ ಕರೆನ್ಸಿಗಳಿಗೆ ಇರುವಂತೆ) ಇರುವುದಿಲ್ಲ.

ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್ ಹಣಕಾಸು ವ್ಯವಸ್ಥೆ. ಭೌತಿಕ ಅಸ್ತಿತ್ವ ಇಲ್ಲದ ಕಾರಣ ಇದಕ್ಕೆ ಯಾವುದೇ ರಾಷ್ಟ್ರದ ಕಾನೂನಾತ್ಮಕ ಮನ್ನಣೆ ಇರುವುದಿಲ್ಲ. ಹೀಗಾಗಿ ಇದನ್ನು ಡಿಜಿಟಲ್ ಸ್ವರೂಪದಲ್ಲೇ ಬಳಸಬೇಕು. ಹಾಗೆಂದು ಇದನ್ನು ಸುಖಾಸುಮ್ಮನೆ ಸೃಷ್ಟಿಸಲೂ ಸಾಧ್ಯವಿಲ್ಲ. ಮುಖ್ಯವಾಹಿನಿಯ ಹಣಕಾಸು ವ್ಯವಸ್ಥೆಗೆ ಪರ್ಯಾಯವಾಗಿ ಬಳಕೆಯಾಗುವ ಕ್ರಿಪ್ಟೋಕರೆನ್ಸಿ ವ್ಯವಸ್ಥೆಗೆ ಪ್ರವೇಶ ಪಡೆಯಲು, ಮುಖ್ಯವಾಹಿನಿ ವ್ಯವಸ್ಥೆಯ ಹಣವೇ ಬೇಕು.

ಭಾರತದಲ್ಲಿ ಬಳಕೆಗೆ ಏಕೆ ವಿರೋಧ?

* ಭಾರತದಲ್ಲಿ ಕೇಂದ್ರೀಕೃತ ಬ್ಯಾಂಕಿಂಗ್‌ ವ್ಯವಸ್ಥೆಗೂ ಈ ಕರೆನ್ಸಿಗೂ ಯಾವುದೇ ಸಂಬಂಧ ಇಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಗೆ ಹೊರತಾದ ಕರೆನ್ಸಿಯನ್ನು ಬೆಂಬಲಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಹ ಒಪ್ಪಿಲ್ಲ. ಹೀಗಾಗಿ ಸರ್ಕಾರದಿಂದ ಈ ಕರೆನ್ಸಿಗೆ ಯಾವ ಮಾನ್ಯತೆ ಇಲ್ಲ

* ಅಕ್ರಮ ಸಂಪತ್ತನ್ನು ಕ್ರಿಪ್ಟೋಕರೆನ್ಸಿ ರೂಪದಲ್ಲಿ ಶೇಖರಣೆ ಮಾಡುವ ಸಾಧ್ಯತೆ ಇದೆ ಎಂದು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ಭೀತಿ ವ್ಯಕ್ತಪಡಿಸಿವೆ. ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಈ ಕರೆನ್ಸಿಯ ಬಳಕೆ ಬೇಡ ಎಂಬ ವಾದವಿದೆ

* ಮುಖ್ಯವಾಹಿನಿ ಹಣಕಾಸು ವ್ಯವಸ್ಥೆಯಲ್ಲಿ ದೇಶದ ಕರೆನ್ಸಿಗೆ ಪರ್ಯಾಯವಾಗಿ ಈ ಕ್ರಿಪ್ಟೋಕರೆನ್ಸಿಯನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಿಲ್ಲ

* ವರ್ಚುವಲ್ (ವಾಸ್ತವ ಎಂದು ಭ್ರಮೆ ಮೂಡಿಸುವ) ಅರ್ಥ ವ್ಯವಸ್ಥೆಯ ಸಾಧನವಾದ ಕ್ರಿಪ್ಟೋಕರೆನ್ಸಿಯನ್ನು ನೈಜ ಜಗತ್ತಿನ ವ್ಯವಹಾರಗಳಿಗೆ ಬಳಸಲು ಸಾಧ್ಯವಿಲ್ಲ. ಹೀಗಾಗಿ ಅದರ ನಿಜವಾದ ಮೌಲ್ಯವನ್ನು ಲೆಕ್ಕ ಹಾಕುವುದು ಅಸಾಧ್ಯ

* ಕ್ರಿಪ್ಟೋಕರೆನ್ಸಿಯ ಮೌಲ್ಯ ಊಹೆಗೆ ನಿಲುಕದಷ್ಟು ಪ್ರಮಾಣದಲ್ಲಿ ಏರಿಳಿತ ಆಗುತ್ತಿರುತ್ತದೆ. ಇದರಿಂದ ಗ್ರಾಹಕನ ಹಿತರಕ್ಷಿಸುವುದು ಅಸಾಧ್ಯ

* ಸಂಪೂರ್ಣ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಈ ವಹಿವಾಟು ನಡೆಯುತ್ತಿದ್ದು, ಕೇಂದ್ರೀಕೃತ ವ್ಯವಸ್ಥೆಯ ಗೈರಿನಿಂದಾಗಿ ವ್ಯವಹಾರದ ಮೊತ್ತಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ

ಸಮಿತಿಯ ಶಿಫಾರಸು

ಕೇಂದ್ರ ಹಣಕಾಸು ಸಚಿವಾಲಯವು ವರ್ಚುವಲ್‌ ಕರೆನ್ಸಿ ಕುರಿತು ಅಧ್ಯಯನ ನಡೆಸಿ ವರದಿ ಕೊಡಲು ಸಮಿತಿಯೊಂದನ್ನು ರಚಿಸಿತ್ತು. ಪ್ರಭುತ್ವಕ್ಕೆ ಹೊರತಾದ ಸಂಸ್ಥೆಗಳು ಸೃಷ್ಟಿಸಿದ ಈ ಕ್ರಿಪ್ಟೋಕರೆನ್ಸಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ. ಅದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಕ್ರಿಪ್ಟೋಕರೆನ್ಸಿ
ವಹಿವಾಟಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಬಳಕೆಯಾಗದಂತೆ ಆರ್‌ಬಿಐ ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.

ಪರವಾದ ವಾದ

1. ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಕ್ರಿಪ್ಟೋಕರೆನ್ಸಿಯ ಬಳಕೆಯನ್ನು ನಿರ್ಬಂಧಿಸುವುದಿಲ್ಲ. ಹೀಗಾಗಿ ಅದರ ಮೇಲೆ ನಿಷೇಧ ಹೇರುವುದು ತರವಲ್ಲ

2. ಡಿಜಿಟಲ್‌ ಯುಗದ ಸಾಧ್ಯತೆಯನ್ನು ಬಳಸಿಕೊಂಡು ಬೆಳೆದಿರುವ ಈ ಹಣಕಾಸು ವ್ಯವಸ್ಥೆಗೆ ಲಗಾಮು ಹಾಕುವ ಅವಶ್ಯಕತೆ ಇಲ್ಲ

3. ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ತೊಡಗುವ ಗ್ರಾಹಕರ ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯ

4. ಬಯಸಿದ ಸಂದರ್ಭದಲ್ಲಿ, ಬಯಸಿದಷ್ಟು ಮೊತ್ತದ ವಹಿವಾಟನ್ನು ಯಾವುದೇ ಅಡಚಣೆಯಿಲ್ಲದೆ ಮಾಡುವ ಅವಕಾಶವನ್ನು ಕ್ರಿಪ್ಟೋಕರೆನ್ಸಿ ಹೊಂದಿದೆ

ಬೇರೆ ದೇಶಗಳಲ್ಲಿ ಬಳಕೆಯಲ್ಲಿದೆಯೇ?

* ರಷ್ಯಾ ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ದೇಶದ ಕರೆನ್ಸಿಗೆ ಪರ್ಯಾಯವಾಗಿ ಬಳಸಲು ಅನುಮತಿ ಇಲ್ಲ. ಆದರೆ, ವಸ್ತು ವಿನಿಮಯದ ಸ್ವರೂಪದಲ್ಲಿ ನಿಯಂತ್ರಿತ ಬಳಕೆಗೆ ಅವಕಾಶವಿದೆ

* ಚೀನಾದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

* ಸ್ವಿಟ್ಜರ್ಲೆಂಡ್‌ನಲ್ಲಿ ಈ ಕರೆನ್ಸಿಯನ್ನು ಬಳಸಲು ಅನುಮತಿ ಇದೆ. ಆದರೆ, ಎಲ್ಲ ವಹಿವಾಟುಗಳು ದೇಶದ ಕಾನೂನುಗಳಿಗೆ ಅನುಗುಣವಾಗಿ ನಡೆಯಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ

* ಥಾಯ್ಲೆಂಡ್‌ನಲ್ಲೂ ಕ್ರಿಪ್ಟೋಕರೆನ್ಸಿಯನ್ನು ಉಪಯೋಗಿಸಲು ಅನುಮತಿ ಇದೆ. ಆದರೆ, ಡಿಜಿಟಲ್‌ ಆಸ್ತಿ ವಹಿವಾಟು ಮಾರ್ಗಸೂಚಿಗೆ ಅನುಗುಣವಾಗಿ ಈ ವಹಿವಾಟು ನಿಯಂತ್ರಣಕ್ಕೆ ಒಳಪಟ್ಟಿದೆ. ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುವ ಕಂಪನಿಗಳು ಅಲ್ಲಿನ ಕಂಪನಿ ಕಾನೂನುಗಳ ಪ್ರಕಾರ ಅನುಮತಿ ಪಡೆಯಬೇಕು

* ಜಪಾನ್‌ ದೇಶದಲ್ಲೂ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಅವಕಾಶವಿದೆ. ನೋಂದಾಯಿತ ವಿನಿಮಯ ಕೇಂದ್ರಗಳ ಮೂಲಕವೇ (ಶೇರು ವಿನಿಮಯದಂತೆ) ಈ ವಹಿವಾಟು ನಡೆಸಬೇಕು ಎಂಬ ಷರತ್ತು ವಿಧಿಸಲಾಗಿದೆ

* ಅಮೆರಿಕದ ನ್ಯೂಯಾರ್ಕ್‌ ರಾಜ್ಯದಲ್ಲೂ ಈ ಕರೆನ್ಸಿ ಬಳಕೆಯಲ್ಲಿದೆ. ಕ್ರಿಪ್ಟೋಕರೆನ್ಸಿಯ ಕೊಡುಕೊಳು ವ್ಯವಹಾರವು ನೋಂದಾಯಿತ ವಿನಿಮಯ ಕೇಂದ್ರಗಳ ಮೂಲಕವೇ ನಡೆಯಬೇಕು ಎಂಬ ನಿಯಮವಿದೆ

* ಕೆನಡಾದಲ್ಲೂ ಕ್ರಿಪ್ಟೋಕರೆನ್ಸಿಗೆ ಅನುಮತಿ ಇದೆ. ಅಲ್ಲಿಈ ವಹಿವಾಟನ್ನು ಸಾಮಾನ್ಯ ಹಣಕಾಸಿನ ವ್ಯವಹಾರವಾಗಿ ನೋಡುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT