ಮಂಗಳವಾರ, ಏಪ್ರಿಲ್ 7, 2020
19 °C
ಸಾಮಾಜಿಕ ಮಾಧ್ಯಮ

Explainer | ಸಾಮಾಜಿಕ ಮಾಧ್ಯಮ ಬಿರುಗಾಳಿಯೋ ತಂಗಾಳಿಯೋ...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಈ ಭಾನುವಾರ, ಸಾಮಾಜಿಕ ಜಾಲತಾಣ ಖಾತೆಗಳನ್ನು ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆಯರಿಗೆ ಈ ಭಾನುವಾರ ಜಾಲತಾಣ ಮೀಸಲು’ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆದರೆ, ಜಾಲತಾಣಗಳ ಕುರಿತು ಶುರುವಾದ ಚರ್ಚೆ ಮಾತ್ರ ಮಳೆ ನಿಂತರೂ ನಿಲ್ಲದ ಮರದ ಹನಿಯಂತೆ ಮುಂದುವರಿದಿದೆ

‘ಈ ಭಾನುವಾರ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ ಖಾತೆಗಳನ್ನು ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಮಾಡಿದ ಟ್ವೀಟ್‌ಗೆ ಹಲವು ರೀತಿಯ ಪ್ರತಿಕ್ರಿಯೆ ಬಂದಿದ್ದವು. ಮಂಗಳವಾರ ಮಧ್ಯಾಹ್ನ ಮತ್ತೊಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರು ಈ ಚರ್ಚೆಗಳಿಗೆ ಅಂತ್ಯ ಹಾಡಿದರು.

ಪ್ರಧಾನಿ ಮೋದಿ ಅವರು ಈ ಸ್ವರೂಪದ ಟ್ವೀಟ್ ಮಾಡುವ ಮೂಲಕ ‘ಷೋ ಅಪ್‌’ ಮಾಡುತ್ತಿದ್ದಾರೆ ಎಂದು ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಮೋದಿ ಅವರು ಜಾಲತಾಣಗಳನ್ನು ತ್ಯಜಿಸುತ್ತಾರೆ ಎಂದು ಭಾವಿಸಿ, ಹಲವರು ಪ್ರತಿಕ್ರಿಯೆ ನೀಡಿದ್ದರು. ನೀವು ಸಾಮಾಜಿಕ ಜಾಲತಾಣಗಳನ್ನು ಬಿಡುವುದು ಬೇಡ ಎಂದು ಒತ್ತಾಯಿಸಿದ್ದರು. ಟ್ವಿಟರ್‌ನಲ್ಲಿ #NoModiNoTwitter, #NoSir, #IWi**A*so*eaveTwitter ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿದ್ದವು.

ಇದರ ಜತೆಯಲ್ಲೇ, ಮೋದಿ ಅವರು ಸಾಮಾಜಿಕ ಜಾಲಾತಾಣಗಳನ್ನು ಬಿಟ್ಟರೆ ದೇಶಕ್ಕೆ ಒಳಿತಾಗುತ್ತದೆ ಎಂದೂ ಹಲವರು ಪ್ರತಿಕ್ರಿಯಿಸಿದ್ದರು. ಹಲವರು ಮೋದಿ ಅವರ ರಾಜೀನಾಮೆಗೂ ಒತ್ತಾಯಿಸಿದ್ದರು. #YesSir ಎಂಬ ಹ್ಯಾಷ್‌ಟ್ಯಾಗ್‌ ಸಹ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

ಮೋದಿ ಅವರ ಟ್ವೀಟ್‌ನ ಅರ್ಥವೇನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲೂ ಚರ್ಚೆ ಆರಂಭವಾಗಿತ್ತು. ‘ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ಮೋದಿ ಅವರು ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟವಾಗಿ ಹೇಳಿಲ್ಲ’, ‘ಅವರು ಭಾನುವಾರ ಮಾತ್ರ ಸಾಮಾಜಿಕ ಜಾಲತಾಣಗಳ ಬಳಕೆ ಕೈಬಿಡಬಹುದು’ ಎಂದು ಹಲವರು ಪ್ರತಿಪಾದಿಸಿದ್ದರು.

ಆದರೆ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರ ಟ್ವೀಟ್‌, ಮೋದಿ ಅವರ ಟ್ವೀಟ್‌ಗೆ ಹೊಸ ಹೊಳಹು ನೀಡಿತ್ತು. ‘ಮೋದಿ ಅವರ ಈ ಹಠಾತ್ ಘೋಷಣೆಯು, ದೇಶದಾದ್ಯಂತ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವುದರ ಮುನ್ನುಡಿ ಇರಬಹುದೇ ಎಂಬ ಕಳವಳಕ್ಕೆ ಕಾರಣವಾಗಿದೆ’ ಎಂದು ತರೂರ್ ಟ್ವೀಟ್ ಮಾಡಿದ್ದರು. ತರೂರ್ ಅವರು ತಮ್ಮ ಟ್ವೀಟ್‌ನಲ್ಲಿ ಎತ್ತಿರುವ ಪ್ರಶ್ನೆಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿತ್ತು. ವಿದೇಶಿ ಮೂಲದ ಜಾಲತಾಣಗಳನ್ನು ನಿಷೇಧಿಸಿ, ಭಾರತದ್ದೇ ಸ್ವಂತ ಸಾಮಾಜಿಕ ಜಾಲತಾಣವನ್ನು ಆರಂಭಿಸುವುದರ ಸುಳಿವು ಇದಾಗಿರಬಹುದು ಎಂದೂ ಹಲವರು ಊಹಿಸಿದ್ದರು.

ಮೋದಿ ಅವರ ಒಂದು ಟ್ವೀಟ್‌ ಈ ಎಲ್ಲಾ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ಮಂಗಳವಾರ ಮಧ್ಯಾಹ್ನ, ‘ಈ ಮಹಿಳಾ ದಿನದಂದು, ತಮ್ಮ ಬದುಕು ಮತ್ತು ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡುವ ಮಹಿಳೆಯರಿಗೆ ನನ್ನ ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಕೊಡುತ್ತೇನೆ. ಲಕ್ಷಾಂತರ ಮಂದಿಯಲ್ಲಿ ಸ್ಫೂರ್ತಿಯ ಕಿಡಿಹೊತ್ತಿಸಲು ಇದು ನೆರವಾಗುತ್ತದೆ. ನೀವು ಅಂತಹ ಮಹಿಳೆಯೇ ಅಥವಾ ನಿಮಗೆ ಅಂತಹ ಮಹಿಳೆಯ ಬಗ್ಗೆ ಗೊತ್ತಿದೆಯೇ? ಅಂತಹ ಕಥೆಗಳನ್ನು #SheInspiresUs ಹ್ಯಾಷ್‌ಟ್ಯಾಗ್‌ನಲ್ಲಿ ಹಂಚಿಕೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಟ್ವೀಟ್‌ಗೆ ಪ್ರತಿಕ್ರಿಯೆಗಳು

* ಸಲಹೆ: ಬಿಜೆಪಿಯಲ್ಲಿನ ಅತ್ಯಾಚಾರಿಗಳು ಮತ್ತು ದೌರ್ಜನ್ಯಕೋರರಿಂದ ಸಂತ್ರಸ್ತರಾದವರಿಗೆ ಈ ಅವಕಾಶ ನೀಡಿ. ಆಗ #SheInspiresUs ಅರ್ಥಪೂರ್ಣವಾಗುತ್ತದೆ
@GauravPandhi

ನಿಮ್ಮ ಬೂಟು ಪಾಲೀಶು ಮಾಡುವ ಕೆಲಸವೇ ಆಗಿರಲಿ, ಜೀವ ಇರುವವರೆಗೂ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ. ನನ್ನ ಜೀವನ ಸಾರ್ಥಕವಾಗುತ್ತದೆ
@Saru81589968

ನನಗೆ ಒಬ್ಬರು ಗೊತ್ತಿದ್ದಾರೆ. ಆಕೆ ಗುಜರಾತ್‌ನವರು. ಆಕೆಯ ಪತಿ ವಿಶ್ವ ಪರ್ಯಟನೆ ಮಾಡುವ ಸಲುವಾಗಿ, ಆಕೆಯನ್ನು ಬಿಟ್ಟುಹೋದ. ಆತ ಇನ್ನು ಪರ್ಯಟನೆ ಮಾಡುತ್ತಲೇ ಇದ್ದಾರೆ, ಆಕೆ ತನ್ನ ಜೀವನೋಪಾಯಕ್ಕಾಗಿ ಈ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ಆಕೆ ಬಹಳ ಧೈರ್ಯಶಾಲಿ. ಮೋದಿಜಿ, ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಆಕೆಗಾಗಿ ಬಿಟ್ಟುಕೊಡಿ
@Waseem_Ahmed11

ಭಾರತೀಯರ ನಿಯಂತ್ರಣದಲ್ಲೇ ಇರುವ ನೂತನ ಸಾಮಾಜಿಕ ಜಾಲತಾಣವನ್ನು ಘೋಷಿಸುತ್ತೀರಿ ಎಂದು ನಿರೀಕ್ಷಿಸಿದ್ದೆ...
@HinduAmericans

ಮಹಿಳೆಯರನ್ನು ಗೌರವಿಸುವ ಅತ್ಯುತ್ತಮ ವಿಧಾನವೆಂದರೆ:
1. ಸ್ತ್ರೀದ್ವೇಷಿ ಹ್ಯಾಂಡಲ್‌ಗಳನ್ನು ಅನ್‌ಫಾಲೊ ಮಾಡಿ
2. ಹಗಲೂರಾತ್ರಿ ಮಹಿಳೆಯರನ್ನು ತೆಗಳುವ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತರುವ ನಿಮ್ಮ ಐಟಿ ಘಟಕವನ್ನು ಬಂದ್ ಮಾಡಿ
3. ನಿಮ್ಮ ಪಕ್ಷದಲ್ಲಿರುವ ಲಾರಿಗಟ್ಟಲೆ ಅತ್ಯಾಚಾರಿಗಳನ್ನು ಬಂದಿಸಿ, ಗುಂಡು ಹಾರಿಸಿ ಮತ್ತು ಶಿಕ್ಷಿಸಿ
ಅಲ್ಲಿಯವರೆಗೆ ನೀವು ಮಾಡುತ್ತಿರುವುದೆಲ್ಲವೂ ‘ಗಿಮಿಕ್‌’ ಅಷ್ಟೆ
@IndianPrism

ಒಂದು ದಿನ ತೀರಾ ಹೆಚ್ಚಾಯಿತು. ನಿಮ್ಮ ಸಾಮಾಜಿಕ ಜಾಲತಾಣವನ್ನು ಕೇವಲ ಒಂದು ಗಂಟೆಯ ಕಾಲ ನಿರ್ವಹಿಸಲು ಅವಕಾಶ ನೀಡಿ. ಜಗತ್ತಿನಲ್ಲಿ ನನ್ನಷ್ಟು ಭಾಗ್ಯಶಾಲಿ ಇನ್ಯಾರೂ ಇರುವುದಿಲ್ಲ. ಮೋದಿ ಇದ್ದರೆ ಎಲ್ಲವೂ ಸಾಧ್ಯ. ನಮೋ ನಮೋ
@kushwahPooja19

 

ಜನಸಂಪರ್ಕಕ್ಕಾಗಿ ಟ್ವಿಟರ್ ಬಳಕೆ

ನವಕಾಲದ ಯುವಜನರ (ಮಿಲೇನಿಯಲ್‌) ಅತ್ಯಂತ ಜನಪ್ರಿಯ ಕೇಂದ್ರ ಸಚಿವೆ ಎನಿಸಿಕೊಂಡಿದ್ದವರು ದಿವಂಗತ ಸುಷ್ಮಾ ಸ್ವರಾಜ್‌. ಟ್ವಿಟರ್‌ ಖಾತೆಯಲ್ಲಿ ಅತ್ಯಧಿಕ ಫಾಲೋವರ್ಸ್‌ ಹೊಂದಿದ ದೇಶದ ರಾಜಕಾರಣಿಗಳಲ್ಲಿ ಅವರೂ ಒಬ್ಬರಾಗಿದ್ದರು. ವಿದೇಶಾಂಗ ಸಚಿವೆಯಾಗಿದ್ದ ಅವರು, ಬೇರೆ ರಾಷ್ಟ್ರಗಳಲ್ಲಿ ತೊಂದರೆಗೆ ಸಿಲುಕಿದ ಭಾರತೀಯರ ರಕ್ಷಣೆಗೆ ಸದಾ ಸಿದ್ಧವಾಗಿರುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಮೊರೆ ಹೋದವರಿಗೂ ನೆರವಿನಹಸ್ತ ಚಾಚುತ್ತಿದ್ದರು. ಅದಕ್ಕೆ ‘ಡಿಜಿಟಲ್‌ ರಾಯಭಾರ’ ಎಂದು ಹೆಸರಿಸಲಾಗಿತ್ತು. ಮಾನವೀಯ ನೆಲೆಯ ನೆರವಿನ ಮೂಲಕ ಪಾಕಿಸ್ತಾನಿಯರ ಹೃದಯವನ್ನೂ ಅವರು ಗೆದ್ದಿದ್ದರು.

‘ನಾನು ಈ ಸಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಟ್ವಿಟರ್‌ ಮೂಲಕವೇ ಘೋಷಿಸಿದ್ದರು. ಅದಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತ್ತು. ‘ನೀವು ಮಂಗಳ ಗ್ರಹದಲ್ಲಿ ಅಪಾಯದಲ್ಲಿ ಸಿಲುಕಿದರೂ ಭಾರತದ ವಿದೇಶಾಂಗ ಸಚಿವಾಲಯ ನಿಮ್ಮ ನೆರವಿಗೆ ಧಾವಿಸಲಿದೆ’ ಎಂಬ ತಮಾಷೆ ಮಾತು ಆಗ ಕೇಳಿಬರುತ್ತಿತ್ತು.


ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ಅಸ್ತ್ರ

ಅಮೇಠಿಯಲ್ಲಿದ್ದ ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಲು ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ಅವರ ನೆರವಿಗೆ ಬಂದ ಅಸ್ತ್ರವೇ ‘ಸಾಮಾಜಿಕ ಮಾಧ್ಯಮ’. 2010ರ ಏಪ್ರಿಲ್‌ 6ರಂದು ಸ್ಮೃತಿ ಅವರು ಟ್ವಿಟರ್‌ ಖಾತೆ ತೆರೆದಿದ್ದರು. 2014ರ ಜುಲೈ ವೇಳೆಗೆ ಅವರ ಫಾಲೋವರ್ಸ್‌ ಸಂಖ್ಯೆ ಐದು ಲಕ್ಷಕ್ಕೆ ತಲುಪಿತ್ತು. ಅದೇ 2019ರ ಜೂನ್‌ ಹೊತ್ತಿಗೆ ಅವರ ಫಾಲೋವರ್ಸ್‌ ಸಂಖ್ಯೆ 90 ಲಕ್ಷಕ್ಕೆ ಏರಿತು. ಕಳೆದ ವರ್ಷ ಸ್ಮೃತಿ ಅವರು ಮಾಡಿದ ಟ್ವೀಟ್‌ಗಳಲ್ಲಿ ಶೇ 12ರಷ್ಟು ವಿಷಯ ಚುನಾವಣೆಗೆ ಸಂಬಂಧಿಸಿದ್ದಾಗಿತ್ತು. ಆ ಅವಧಿಯಲ್ಲಿ ಅವರು ಒಟ್ಟಾರೆ 3,600 ಟ್ವೀಟ್‌ಗಳನ್ನು ಮಾಡಿದ್ದರು. ಅದರಲ್ಲಿ 275 ನೇರವಾಗಿ ಅಮೇಠಿ ಕ್ಷೇತ್ರಕ್ಕೆ ಸಂಬಂಧಿಸಿದ್ದವು. ಅದೇ ಅವಧಿಯಲ್ಲಿ ರಾಹುಲ್‌ ಗಾಂಧಿ ಅವರ ಟ್ವೀಟ್‌ಗಳಲ್ಲಿ ಕೇವಲ ಮೂರು ಬಾರಿ ಅಮೇಠಿ ಹೆಸರು ಬಳಕೆಯಾಗಿತ್ತು.

ಸುಳ್ಳು ಸುದ್ದಿ ಹರಡೋಕೆ...

* ಇತಿಹಾಸದ ಕುರಿತು ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ಮಾಹಿತಿಯನ್ನು ಹರಡು
ವವರನ್ನು ಹಿರಿಯ ಪತ್ರಕರ್ತ ರವೀಶ್‌ ಕುಮಾರ್ ಅವರು ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದ ಕೋಮುವಾದಿಗಳು ಎಂದೇ ಕರೆದಿದ್ದರು. ಸುಳ್ಳು ಸುದ್ದಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳು ಬಳಕೆಯಾದ ಕುರಿತು ವ್ಯಾಪಕ ದೂರುಗಳಿವೆ

* ಹೀಯಾಳಿಸುವುದು, ಬೈಯುವುದು ಹಾಗೂ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು – ಇಂತಹ ಕೃತ್ಯಗಳಿಗೂ ಸಾಮಾಜಿಕ ಮಾಧ್ಯಮ ದುರ್ಬಳಕೆ ಆಗುತ್ತಿದೆ

* ಮಕ್ಕಳ ಕಳ್ಳರು ಎಂದು ಹುಯಿಲೆಬ್ಬಿಸಿ ಗುಂಪು ಹಲ್ಲೆ ನಡೆಸಲು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು ಎಂಬ ದೂರುಗಳೂ ಇವೆ

* ಕೋಮು ಗಲಭೆಗಳು ಇತ್ತೀಚಿನ ದಿನಗಳಲ್ಲಿ ಕ್ಷಿಪ್ರವಾಗಿ ಹರಡುವಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವ ದಟ್ಟವಾಗಿದೆ ಎಂಬ ವರದಿಗಳಿವೆ

ಪ್ರತಿಭಟನೆ, ಸುದ್ದಿಗಳಿಗೆ ದನಿ

* ನರ್ಮದಾ ಬಚಾವೊ ಆಂದೋಲನದ ಸುದ್ದಿಗಳನ್ನು ಯಾವುದೇ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿಲ್ಲ. ಆಂದೋಲನಕ್ಕೆ ಸಂಬಂಧಿಸಿದ ಸುದ್ದಿಗಳು ಫೇಸ್‌ಬುಕ್‌ನ ಮೂಲಕ ಮಾತ್ರ ದೊರೆಯುತ್ತಿವೆ

* ಗುಜರಾತ್‌ನ ಅಹಮದಾಬಾದ್‌ನ ಛಾರಾ ಸಮುದಾಯದ ಜನರ ಮೇಲೆ 2018ರ ಸೆಪ್ಟೆಂಬರ್‌ನಲ್ಲಿ ಪೊಲೀಸರ ದೌರ್ಜನ್ಯ ನಡೆದಿತ್ತು. ಈ ಸಮುದಾಯದ ಜನರು ಮಾತ್ರ ಇರುವ ಛಾರಾ ನಗರಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸ
ಲಾಗಿತ್ತು. ಪೊಲೀಸರ ದೌರ್ಜನ್ಯ ಬೆಳಕಿಗೆ ಬಂದಿದ್ದೂ ಫೇಸ್‌ಬುಕ್‌, ಟ್ವಿಟರ್‌ ಮೂಲಕ

* ನಿರ್ಭಯಾ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಜನರ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆ ಆಗಿದ್ದವು. ಕಠುವಾ, ಉನ್ನಾವ್, ಹೈದರಾಬಾದ್‌ನ ದಿಶಾ ಅತ್ಯಾಚಾರ ಪ್ರಕರಣಗಳಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ. ಹೊಸ ಕಾಯ್ದೆಗಳನ್ನು ರಚಿಸಲು ಇದು ಕಾರಣವಾಯಿತು

* ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ದೊರೆತಿರಲಿಲ್ಲ. ಪೊಲೀಸರು ಈ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯ ವಿಡಿಯೊ ಮತ್ತು ಚಿತ್ರಗಳು ವೈರಲ್ ಆದವು. ದೇಶದಾದ್ಯಂತ ಪ್ರತಿಭಟನೆ ರೂಪುಗೊಳ್ಳಲು ಕಾರಣವಾಯಿತು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು