ಬುಧವಾರ, ಜುಲೈ 6, 2022
21 °C

ಅನುಭವ ಮಂಟಪ | ಸುಪ್ರೀಂ ‘ಮೀಸಲಾತಿ ಸಮೀಕ್ಷೆ’; ರಾಜಕೀಯ ಸವಾಲುಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ತಮ್ಮ ಬುಡಕ್ಕೇ ಬರಬಹುದೆಂದು ಕರ್ನಾಟಕದ ರಾಜಕೀಯ ಪಕ್ಷಗಳು ನಿರೀಕ್ಷಿಸಿರಲಿಕ್ಕಿಲ್ಲ. ‘ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕುರಿತು ಮೂರು ಹಂತದ ಸಮೀಕ್ಷೆ ಮಾಡದ ಹೊರತು ಚುನಾವಣೆ ಮಾಡುವಂತಿಲ್ಲ ಹಾಗೂ ಸದ್ಯಕ್ಕೆ ಹಿಂದುಳಿದ ವರ್ಗಗಳ ಶೇ 27ರಷ್ಟು ಮೀಸಲಾತಿ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳಾಗಿ ಘೋಷಿಸಿ ಚುನಾವಣೆ ನಡೆಸಬಹುದು’ ಎನ್ನುವ ತೀರ್ಪಿನ ನಾಳಿನ ಪರಿಣಾಮಗಳನ್ನು ನಮ್ಮ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಒಂದು ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಶೇ  50ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳ ಮತದಾರರಿದ್ದಾರೆ. ಅಲ್ಪಸಂಖ್ಯಾತ ಶಾಸಕರೂ ಸೇರಿದಂತೆ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಒಟ್ಟು 157 ಶಾಸಕ, ಶಾಸಕಿಯರಿದ್ದಾರೆ. ಈ ಎಲ್ಲ ಶಾಸಕರೂ ಪಕ್ಷಾತೀತವಾಗಿ ಹಿಂದುಳಿದ ವರ್ಗಗಳ ರಾಜಕೀಯ ಹಕ್ಕನ್ನು ರಕ್ಷಿಸಲು ಯುದ್ಧೋಪಾದಿಯಲ್ಲಿ ಸಮೀಕ್ಷೆ ಆರಂಭಿಸಬೇಕೆಂದು ದನಿಯೆತ್ತಬೇಕಾಗಿತ್ತು. ಇಂಥ ಸಮೀಕ್ಷೆಯ ಸಿದ್ಧತೆಗೆ ಇಲ್ಲಿನ ರಾಜಕೀಯ ಪಕ್ಷಗಳು ಯಾಕೆ ಹಿಂದೇಟು ಹಾಕುತ್ತಿವೆ? ಲಿಂಗಾಯತ ಪ್ರಾಬಲ್ಯದ ಬಿಜೆಪಿ; ಒಕ್ಕಲಿಗರ ಪ್ರಾಬಲ್ಯದ ಜೆಡಿಎಸ್; ಹಿಂದುಳಿದ ವರ್ಗಗಳ ಪ್ರಾಬಲ್ಯವಿರುವ ಕಾಂಗ್ರೆಸ್- ಈ ಮೂರು ಪಕ್ಷಗಳಿಗೂ ಹಿಂದುಳಿದ ವರ್ಗಗಳು ಮತ ಹಾಕುತ್ತಾ ಬಂದಿವೆ. ಆದರೆ ಕಾಂಗ್ರೆಸ್ಸಿನ ಕೆಲವು ನಾಯಕರನ್ನು ಬಿಟ್ಟರೆ ಎಲ್ಲ ಪಕ್ಷಗಳ ಹಿಂದುಳಿದ ವರ್ಗ ಹಾಗೂ ದಲಿತ ಶಾಸಕರು, ಈ ಮೀಸಲಾತಿಯ ಪರೋಕ್ಷ ಲಾಭ ಪಡೆದಿರುವ ಪ್ರಬಲ ಜಾತಿಗಳ ನಾಯಕರು ಈ ಬಗ್ಗೆ ಮಾತೇ ಆಡಿಲ್ಲ. ಇನ್ನು ಒಂದೇ ವರ್ಷದಲ್ಲಿ ಚುನಾವಣೆ ಎದುರಿಸಬೇಕಾದ ಎಲ್ಲ ಪಕ್ಷಗಳ ನಾಯಕರು ಹಿಂದುಳಿದ ವರ್ಗಗಳ ಮತದಾರರ ಎದುರು ಯಾವ ಮುಖ ಹೊತ್ತು ನಿಲ್ಲಬಲ್ಲರು? ಈ ಮೀಸಲಾತಿ ಮುಂದುವರಿಕೆಯ ಬಗ್ಗೆ ಯಾವ ಭರವಸೆ ಕೊಡಬಲ್ಲರು?  

ಹಿಂದುಳಿದ ವರ್ಗಗಳ ವಿವಿಧ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ತಕ್ಕ ಪ್ರಾತಿನಿಧ್ಯ ಕೊಟ್ಟರೆ ಮಾತ್ರ ತಮ್ಮ ಅಧಿಕಾರ ರಾಜಕಾರಣ ಸುರಕ್ಷಿತ ಎಂಬ ಸ್ವಾರ್ಥದಿಂದಾದರೂ ಎಲ್ಲ ಹಿಂದುಳಿದ ವರ್ಗಗಳ ಶಾಸಕರು ಈ ಬಗ್ಗೆ ದನಿಯೆತ್ತಲೇಬೇಕಾಗಿತ್ತು. ಸಾಮಾನ್ಯ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಂದ ಬಂದ ಶಾಸಕರು ಹಾಗೂ ಪ್ರಬಲ ಜಾತಿಗಳ ಶಾಸಕರು ಕೂಡ ಶೇ 27ರ ಮೀಸಲಾತಿಯಡಿ ತಂತಮ್ಮ ಹಿಂಬಾಲಕ ಮುಖಂಡರನ್ನು ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಸದಸ್ಯ ಸ್ಥಾನಗಳಲ್ಲಿ ಕೂರಿಸುತ್ತಲೇ ಬಂದಿದ್ದಾರೆ. ಅಂದರೆ, ಇವರೆಲ್ಲರೂ ಪರೋಕ್ಷವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ಫಲಾನುಭವಿಗಳೇ. ಸ್ಥಳೀಯ ಸಂಸ್ಥೆಗಳಲ್ಲಿ ಗಳಿಸಿದ ಸಬಲೀಕರಣದಿಂದಾಗಿಯೇ ಅಷ್ಟಿಷ್ಟು ಅಧಿಕಾರ ಹಿಡಿದಿರುವ ಮಹಿಳಾ ರಾಜಕಾರಣಿಗಳು ಈ ಬಗ್ಗೆ ಮಾತಾಡಲೇಬೇಕಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಸಮೀಕ್ಷೆ ನಡೆಸಿದ ಬಳಿಕ ಅನ್ವಯವಾಗುವ ತರ್ಕವು ಸ್ಥಳೀಯ ಸಂಸ್ಥೆಗಳ ಮಟ್ಟದಿಂದ ವಿಧಾನಸಭೆ, ಪಾರ್ಲಿಮೆಂಟಿನವರೆಗೂ ಬಂದರೆ ಒಟ್ಟು ರಾಜಕೀಯದ ದಿಕ್ಕು ಏನಾಗುತ್ತದೆ? ಸಂವಿಧಾನದತ್ತವಾದ ಇನ್ನುಳಿದ ಮೀಸಲಾತಿಗಳು ಹೇಗೆ ರೂಪಾಂತರಗೊಳ್ಳುತ್ತವೆ? ಈ ಪ್ರಶ್ನೆಗಳು ನಮ್ಮ ನಾಯಕರನ್ನು ಕಾಡಿದಂತಿಲ್ಲ.‌ ಕಾಡಬೇಕಿತ್ತು.

ಹಿಂದುಳಿದ ವರ್ಗಗಳ ಮೀಸಲಾತಿಯಡಿಯಲ್ಲೂ ಹೆಚ್ಚು ಅಧಿಕಾರ ಪಡೆದಿರುವ ಪ್ರಬಲ ಜಾತಿಗಳು ರಾಜಕೀಯ ಪ್ರಾತಿನಿಧ್ಯ ಕುರಿತ ಈ ಪ್ರಶ್ನೆಗಳ ಪರಿಣಾಮದ ಬಗ್ಗೆ ಆತಂಕಗೊಂಡಿರಬಹುದೆ? ರಾಜಕೀಯ ಪ್ರಾತಿನಿಧ್ಯ ಕುರಿತ ಈ ಪ್ರಶ್ನೆ ಮುಂದೊಮ್ಮೆ ‘ನಿರ್ದಿಷ್ಟ ಜಾತಿ, ವರ್ಗಗಳಿಗೆ ಈವರೆಗೆ ಯಾಕೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಸಿಕ್ಕೇ ಇಲ್ಲ?’ ಎಂಬ ಪ್ರಶ್ನೆಯವರೆಗೂ ಹೋಗಬಹುದು ಎಂಬ ಭಯ, ಸ್ಥಾಪಿತ ಹಿತಾಸಕ್ತಿಗಳನ್ನು ಕಾಡುತ್ತಿದೆಯೆ? ಮಹಿಳೆಯರನ್ನು ಒಂದು ವರ್ಗವನ್ನಾಗಿ ನೋಡಿದಾಗ, ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಕೊರತೆಯ ಪ್ರಶ್ನೆಯೂ ಇಲ್ಲಿ ಏಳುವುದರಿಂದ ಮತ್ತಷ್ಟು ವಿಕೇಂದ್ರೀಕರಣದ ಅನಿವಾರ್ಯ ಎದುರಾಗಬಹುದೆಂಬ ಪ್ರಶ್ನೆ ಪುರುಷ ರಾಜಕಾರಣಿಗಳನ್ನು ಕಾಡುತ್ತಿರಬಹುದೆ?

ಈವರೆಗೆ ಚಾಪೆ, ರಂಗೋಲಿಗಳ ಕೆಳಗೆ ನುಸಿದು ಒಬಿಸಿ ಮೀಸಲಾತಿ ಸ್ಥಾನಗಳ ವರ್ಗೀಕರಣಗಳನ್ನು ತಂತಮ್ಮ ಕುಟುಂಬ, ಜಾತಿ, ಚೇಲಾಗಳ ಪರವಾಗಿ ತಿರುಚುತ್ತಾ ಬಂದಿರುವ ಎಲ್ಲಾ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಹಿಂದುಳಿದ ವರ್ಗಗಳಿಗೆ ಆಗುವ ತೀವ್ರ ರಾಜಕೀಯ ಹಿನ್ನಡೆಯ ಪರಿಣಾಮದ ಬಗ್ಗೆ ಯೋಚಿಸಿದಂತಿಲ್ಲ. ಅದರಲ್ಲೂ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳು ಮತ್ತೆ ರಾಜಕೀಯ- ಸಾಮಾಜಿಕ ಚಲನೆಯ ಪ್ರಾಥಮಿಕ ಪಾಠಗಳಿಗೆ ಮರಳಲೇಬೇಕಾದ ಅನಿವಾರ್ಯ ಎದುರಾಗಿದೆ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಎಂಬ ವರ್ಗೀಕರಣಗಳ ಜೊತೆಗೆ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ‘ಅದರ್ ಬ್ಯಾಕ್ ವರ್ಡ್ ಕ್ಲಾಸಸ್’ (ಇತರ ಹಿಂದುಳಿದ ವರ್ಗಗಳು) ಎಂಬ ವಿಶಾಲ ವರ್ಗವೊಂದನ್ನು ಅಂಬೇಡ್ಕರ್ ಅವರು ರೂಪಿಸಿದ್ದೇಕೆ ಎಂಬುದನ್ನು ಸಂಕುಚಿತ ರಾಜಕೀಯ ಪ್ರಜ್ಞೆಯ ಹಿಂದುಳಿದ ಜಾತಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. 1984ರಲ್ಲಿ ವಿಧಾನಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಶಾಸಕರ ಸಂಖ್ಯೆ ಶೇಕಡ 50ರಷ್ಟು ಇದ್ದದ್ದನ್ನು ವಿಶ್ಲೇಷಿಸುತ್ತಾ ಖ್ಯಾತ ಚಿಂತಕ ಡಿ. ಆರ್. ನಾಗರಾಜ್, ‘ಜಾತಿಯನ್ನು ಮುರಿದು ವರ್ಗವಾಗಿಸದಿದ್ದರೆ ಪ್ರತಿಷ್ಠಿತ ಜಾತಿಗಳ ಶ್ರೀಮಂತ ವರ್ಗದ ರಾಜಕಾರಣ ಹಿಮ್ಮೆಟ್ಟುವುದಿಲ್ಲ’ ಎಂದಿದ್ದರು. ಆದರೆ ಹಿಂದುಳಿದ ಜಾತಿಗಳು ಸಮಾನ ಆಶಯಗಳುಳ್ಳ ವರ್ಗಗಳಾಗಿ ಸಂಘಟಿತಗೊಳ್ಳಲು ಹಿಂದುಳಿದ ಜಾತಿಗಳ ರಾಜಕೀಯ ನಾಯಕರು ಮಾಡಿರುವ ಪ್ರಯತ್ನಗಳು ತೀರಾ ಕಡಿಮೆ.

ಇಂಥ ವರ್ಗ ಸಿದ್ಧಾಂತವೇ ಇಲ್ಲದಿರುವುದರಿಂದ, ‘ನನ್ನ ಒಂದು ಕಣ್ಣು ಹೋದರೆ, ನಿನ್ನ ಎರಡು ಕಣ್ಣೂ ಹೋಗಲಿ’ ಎನ್ನುವ ಧೋರಣೆಯಿಂದಾಗಿ ಹಿಂದುಳಿದ ಜಾತಿಗಳು ರಾಜಕೀಯ ಅವಕಾಶಗಳನ್ನು ಸದಾ ಕಳೆದುಕೊಳ್ಳುತ್ತಿರುತ್ತವೆ. ಉದಾಹರಣೆಗೆ, ಮುಸ್ಲಿಮರು, ಕುರುಬರು, ನಾಯಕರು ಸಮಸಂಖ್ಯೆಯಲ್ಲಿರುವ ಕ್ಷೇತ್ರವೊಂದರಲ್ಲಿ ಮೂರು ಸಾವಿರದಷ್ಟು ಮತದಾರರಿರುವ ಜಾತಿಯ ನಾಯಕನೊಬ್ಬ ಸದಾ ಶಾಸಕನಾಗುತ್ತಲೇ ಇರುತ್ತಾನೆ. ಈತ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳಿಂದ ತನಗೆ ಬೇಕಾದ ಎರಡನೇ, ಮೂರನೇ ಸಾಲಿನ ನಾಯಕರನ್ನೇ ರೋಸ್ಟರ್ ಪ್ರಕಾರ ನಿಲ್ಲಿಸಿ ಗೆಲ್ಲಿಸುತ್ತಾನೆ; ಅವರೆಲ್ಲ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಂತೆ ನೋಡಿಕೊಳ್ಳುತ್ತಾನೆ. ಈ ಮೂರೂ ಜಾತಿಗಳು ಒಂದು ವರ್ಗವಾಗಿ ಸಂಘಟಿತವಾಗಿ ತಮ್ಮೊಳಗೇ ಒಬ್ಬ ಶಾಸಕನನ್ನು ಆಯ್ಕೆ ಮಾಡಿಕೊಳ್ಳದಂತೆಯೂ ಯೋಜಿಸುತ್ತಾನೆ. ಒಂದು ವೇಳೆ, ಈ ಮೂರೂ ಹಿಂದುಳಿದ ಜಾತಿಗಳು ಒಗ್ಗೂಡಿದ್ದರೆ ಈ ಹೊತ್ತಿಗೆ ಐದು ವರ್ಷಕ್ಕೊಮ್ಮೆ ರೊಟೇಶನ್ ಪದ್ಧತಿಯಲ್ಲಾದರೂ ಮೂರೂ ಜಾತಿಗಳಿಂದ ಶಾಸಕನನ್ನೋ, ಶಾಸಕಿಯನ್ನೋ ಆರಿಸಿಕೊಳ್ಳಬಹುದಿತ್ತು! ಇಂಥ ಯೋಜನೆ-ಯೋಚನೆಗಳೇ ಇರದ ಹಿಂದುಳಿದ ಜಾತಿಗಳಲ್ಲಿ ಸೀಮಿತವಾದ ವರ್ಗ ಪ್ರಜ್ಞೆ ಕೂಡ ಮೂಡದಂತೆ ಜಾತೀಯ ಸಣ್ಣತನ ತಡೆಯುತ್ತಿರುತ್ತದೆ.          

ಒಂದು ಕಾಲಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಇಬ್ಬರು ಅಧ್ಯಕ್ಷರನ್ನೇ ತಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ಬೀಗಿದ್ದ ಬಿಜೆಪಿಗೆ ಆ ಅಧ್ಯಕ್ಷರುಗಳ ವರದಿಗಳನ್ನಾದರೂ ಓದಬೇಕಾದ ಅನಿವಾರ್ಯ ಈಗ ಎದುರಾಗಿದೆ. ಆದರೆ ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಹಿಂದುಳಿದ ವರ್ಗಗಳ ಏಳಿಗೆ ಕುರಿತ ಇಚ್ಛಾಶಕ್ತಿ, ಸಿದ್ಧತೆ ಈ ತೀರ್ಪಿನ ಸಂದರ್ಭದಲ್ಲಂತೂ ಕಾಣುತ್ತಿಲ್ಲ. ಇನ್ನು ಹಿಂದುಳಿದ ವರ್ಗಗಳ ತರುಣರಲ್ಲಿ ಜಾತೀಯ, ಮತಾಂಧ ಭಾವನೆ ಬಿತ್ತಿ ದಾರಿ ತಪ್ಪಿಸುವ ಒಡಕು ನಾಯಕರುಗಳಿಗಂತೂ ಸುಪ್ರೀಂ ಕೋರ್ಟ್‌ ಒಡ್ಡಿರುವ ಸವಾಲನ್ನು ಎದುರಿಸುವ ಅಗತ್ಯವೇ ಕಂಡಿಲ್ಲ.  ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಸುಪ್ರೀಂ ಕೋರ್ಟು ಕೇಳಿರುವ ಸಮೀಕ್ಷೆ ಸಿದ್ಧವಾಗುವವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಮಸೂದೆಯನ್ನು ಅಂಗೀಕರಿಸಿವೆ. ಅಂಥ ರಾಜಕೀಯ ಇಚ್ಛಾಶಕ್ತಿಯೂ ಕರ್ನಾಟಕದಲ್ಲಿ ಕಾಣುತ್ತಿಲ್ಲ.

ಇನ್ನು ಈ ಬಗ್ಗೆ ಯೋಚಿಸಲೇಬೇಕಾದ ಎಲ್ಲ ರಾಜಕೀಯ ಪಕ್ಷಗಳ ಎರಡು-ಮೂರನೇ ಸಾಲಿನ ಹಿಂದುಳಿದ ವರ್ಗಗಳ ನಾಯಕ, ನಾಯಕಿಯರತ್ತ ನೋಡೋಣ: ರಾಜಕೀಯ ಪಕ್ಷಗಳ ಪೀಠಸ್ಥ ನಾಯಕರು ಸ್ಥಳೀಯ ಸಂಸ್ಥೆಗಳ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತಂತಮ್ಮ ಅಗತ್ಯಕ್ಕೆ ತಕ್ಕಂತೆ ಬಗ್ಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ಈ ಮೀಸಲಾತಿಯ ಫಲವಾಗಿ ಹಂತಹಂತವಾಗಿ ಮೇಲೇರುವ ಅವಕಾಶವಂತೂ ಈ ಹೊಸ ನಾಯಕರಿಗೆ ತೆರೆದಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯ, ಅಧ್ಯಕ್ಷರಾದ ಈ ಹೊಸ ನಾಯಕರು ಮುಂದೆ ಶಾಸಕರೋ, ಮಂತ್ರಿಗಳೋ ಆಗುವ ಗುರಿ, ಅವಕಾಶಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಡಬಾರದು. ಆದ್ದರಿಂದಲೇ ರಾಜಕೀಯ ಮೀಸಲಾತಿಯ ಹಿನ್ನಡೆಯ ಪ್ರಶ್ನೆಯನ್ನು ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಹೊಸ ನಾಯಕರೇ ತುರ್ತಿನಿಂದ ಕೈಗೆತ್ತಿಕೊಳ್ಳಬೇಕು. ಇಂಥ ಧ್ರುವೀಕರಣಗಳ ಮೂಲಕ ಹೊಸ ರಾಜಕೀಯ ಪಕ್ಷಗಳನ್ನು ಕಟ್ಟುವ ಸಾಧ್ಯತೆಯನ್ನೂ ಯುವ ನಾಯಕ ನಾಯಕಿಯರು ಬಿಟ್ಟುಕೊಡಬಾರದು. ಸಾಮಾಜಿಕ ನ್ಯಾಯದ ರಾಜಕಾರಣದ ಸಾಧ್ಯತೆಯನ್ನೇ ಚಿವುಟಿ ಹಾಕಲು ಖಾಸಗಿ ಮಾಧ್ಯಮಗಳೂ ಸೇರಿದಂತೆ ಒಟ್ಟಾರೆ ಖಾಸಗಿ ವಲಯ ಹುನ್ನಾರ ನಡೆಸಿದೆ. ಈ ಹುನ್ನಾರ- ಸವಾಲುಗಳನ್ನು ಹಿಂದುಳಿದ ವರ್ಗಗಳ ರಾಜಕೀಯ ನಾಯಕರುಗಳು ಒಟ್ಟಾಗಿ, ಪಕ್ಷಾತೀತವಾಗಿ ಎದುರಿಸಬೇಕಾಗಿದೆ. ಯಾಕೆಂದರೆ, ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣದಲ್ಲಿ ಈ ವರ್ಗಗಳ ಆರ್ಥಿಕ, ಶೈಕ್ಷಣಿಕ ಏಳಿಗೆಯ ಪ್ರಶ್ನೆಯೂ ಬೆರೆತಿದೆ.

ಜಾತಿ, ಮತೀಯ ಸಂಘಟನೆಗಳಲ್ಲಿ ಮುಳುಗಿ ಮರಗಟ್ಟಿರುವ ಹಿಂದುಳಿದ ಜಾತಿಗಳಲ್ಲಿ ಹೊಸ ರಾಜಕೀಯ ಮಂಥನ ಹುಟ್ಟಲು ಇದು ಸಕಾಲ. ಪಂಚಾಯತ್ ರಾಜ್ ಸೃಷ್ಟಿಸಿದ ಚಲನೆಯ ಮೂಲಕವೂ ಕಳೆದ ದಶಕಗಳಲ್ಲಿ ಶಿಕ್ಷಣ, ಉದ್ಯೋಗ, ರಾಜಕಾರಣಗಳಲ್ಲಿ ಚಲನೆ ಪಡೆದ ಹಿಂದುಳಿದ ವರ್ಗಗಳ ವಿದ್ಯಾವಂತರು ಈ ಬಗ್ಗೆ ಜವಾಬ್ದಾರಿಯಿಂದ ಯೋಚಿಸದಿದ್ದರೆ ಕರ್ನಾಟಕದ ಹಿಂದುಳಿದ ಜಾತಿಗಳು ಶತಮಾನದಷ್ಟು ಹಿಂದಕ್ಕೆ ಹೋಗುತ್ತವೆ. ಅವು ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ದಲಿತ ಸಂಘಟನೆಗಳ ನಾಯಕತ್ವ-ಅನುಭವಗಳಿಂದಲೂ ಪಾಠ ಕಲಿಯಬೇಕು. ಹಾಗೆಯೇ ಈ ರಾಜಕೀಯ ಮೀಸಲಾತಿಯ ಪ್ರಶ್ನೆ ತಮ್ಮ ಒಟ್ಟು ಸಬಲೀಕರಣದ ಬುಡಕ್ಕೆ ಎರಗಿದ ಕೊಡಲಿ ಎಂಬುದನ್ನು ಅರಿತು ಮಹಿಳೆಯರು, ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕಾಗಿದೆ. ಹಿಂದುಳಿದ ವರ್ಗಗಳ ಒಕ್ಕೂಟಗಳು ಹಾಗೂ ಜನಾಂದೋಲನಗಳು ಈ ನಿಟ್ಟಿನಲ್ಲಿ ಬೌದ್ಧಿಕ, ಸಂಘಟನಾತ್ಮಕ ಸಿದ್ಧತೆ ನಡೆಸುವುದು ಈ ಕಾಲದ ತುರ್ತಾಗಿದೆ.

*

‘ರಾಜ್ಯದಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಳ್ಳಬಹುದು’
ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ಹಿರಿಯ ವಕೀಲ ಕಾಂತರಾಜ್ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ.

ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ. ಆಯೋಗದ  ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿಯ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಕೂಡಾ ಸಂಗ್ರಹಿಸಿದೆ.

ರಾಜ್ಯ ಸರ್ಕಾರ ಈ ಸಮೀಕ್ಷೆಯನ್ನು ಒಪ್ಪಿಕೊಂಡು ಜಾರಿಗೆ ತರಬೇಕು. ಇದರಲ್ಲಿ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ನಿಖರವಾದ ಮಾಹಿತಿ ಇರುವುದರಿಂದ ಬೇರೆ ರಾಜ್ಯಗಳಂತೆ ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯ ಇರಲಾರದು. 
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*

‘ಮೀಸಲಿಗೆ ವಿರೋಧವಿಲ್ಲ, ಆಯೋಗ ರಚನೆಗೆ ಚಿಂತನೆ’
ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಯಾವುದೇ ವಿರೋಧ ಇಲ್ಲ. 

ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲು ಸಂದರ್ಭದಲ್ಲಿ ಮೂರು ಹಂತದ ಪರಿಶೀಲನೆ ನಡೆಸುವಂತೆ 2010ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದಾಗಲೇ ಪರಿಹಾರೋಪಾಯಗಳ ಬಗ್ಗೆ ಎಲ್ಲರೂ ಒಟ್ಟಾಗಿ ಚರ್ಚಿಸಬೇಕಿತ್ತು. ಈಗ ಹಳೆಯದನ್ನು ಕೆದಕುತ್ತಾ ಕುಳಿತುಕೊಳ್ಳುವ ಸಮಯವಲ್ಲ.

ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಕುರಿತು ಸರ್ಕಾರ ಅಧ್ಯಯನ ನಡೆಸಿದ್ದು, ಮೂರು ಹಂತಗಳ ಪರಿಶೀಲನೆ ಹೇಗಿರಬೇಕೆಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ರಾಜಕೀಯ ಮೀಸಲಿಗೆ ಸಂಬಂಧಪಟ್ಟಂತೆ ಸ್ಪಷ್ಟ ದತ್ತಾಂಶ ಇಲ್ಲದಿರುವುದರಿಂದ ಪ್ರತ್ಯೇಕ ಆಯೋಗ ರಚನೆ ಅನಿವಾರ್ಯ. ಆಯೋಗದ ವರದಿ ಬರುವವರೆಗೆ ಹಳೆಯ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವುದಕ್ಕೆ ಅವಕಾಶ ನೀಡಿ ಎಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ. 
-ವಿ.ಸುನೀಲ್ ಕುಮಾರ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ

*

‘ಮೀಸಲಾತಿ ರಕ್ಷಣೆ ಸರ್ಕಾರದ ಹೊಣೆ’
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮೀಸಲಾತಿಗೆ ಕುತ್ತು ಬಂದಾಗ ಅದಕ್ಕೆ ರಕ್ಷಣೆ ಒದಗಿಸಬೇಕಾದ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಗಳದ್ದು. ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಿರುವ ರಾಜಕೀಯ ಮೀಸಲಾತಿಗೆ ಕಂಟಕ ಎದುರಾಗಿದೆ. ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಬಲ್ಲ ನಿಖರ ಅಂಕಿ–ಅಂಶಗಳನ್ನು ಒದಗಿಸಿ, ಮೂರು ಹಂತದ ಪರಿಶೀಲನೆ ಮೂಲಕ ಹಿಂದುಳಿದ ವರ್ಗಗಳು ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಿರುವ ಮೀಸಲಾತಿಯನ್ನು ಖಾತರಿಪಡಿಸಬೇಕು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಇನ್ನೂ ಶೋಚನೀಯ ಸ್ಥಿತಿಯಲ್ಲೇ ಇದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಒಪ್ಪಿಕೊಂಡಿದ್ದರೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ರಕ್ಷಣೆ ಕಷ್ಟವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕೆಲಸವನ್ನು ಸುಲಭವಾಗಿ ಮಾಡಬಹುದಿತ್ತು. ಅವರು ಯಾವುದೋ ಒತ್ತಡಕ್ಕೆ ಮಣಿದು ಕೊನೆಯ ಹಂತದಲ್ಲಿ ಕೈ ಚೆಲ್ಲಿದರು. ಈಗಲಾದರೂ ರಾಜ್ಯ ಸರ್ಕಾರ ಆ ಕೆಲಸ ಮಾಡಬೇಕು.
-ಬಂಡೆಪ್ಪ ಕಾಶೆಂಪುರ, ಜೆಡಿಎಸ್‌ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು