ಶುಕ್ರವಾರ, ಏಪ್ರಿಲ್ 10, 2020
19 °C

Explainer | ಬಾಡಿಗೆ ತಾಯ್ತನ ಮಧ್ಯಮ ಹಾದಿಯತ್ತ ಭಾರತದ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಡಿಗೆ ತಾಯ್ತನದ ಪದ್ಧತಿಯು ಭಾರತದಲ್ಲಿ 2002ರಲ್ಲಿಯೇ ಆರಂಭವಾಗಿದೆ. ಒಂದು ದಶಕದ ಬಳಿಕ ಹಲವು ವೈದ್ಯಕೀಯ ಮಾರ್ಗದರ್ಶಿ ಸೂತ್ರಗಳು ಹಾಗೂ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ಎಆರ್‌ಟಿ) ಕಾಯ್ದೆಗಳು ರೂಪುಗೊಂಡಿವೆ. ಬಾಡಿಗೆ ತಾಯ್ತನ ಪದ್ಧತಿಯನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯನ್ನು ರೂಪಿಸಿದೆ. ರಾಜ್ಯಸಭೆ ಬಯಸಿದ್ದ ತಿದ್ದುಪಡಿಗಳನ್ನು ಮಾಡಿದ ಬಳಿಕ ಮಸೂದೆಗೆ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಶೀಘ್ರ ಕಾಯ್ದೆಯ ಸ್ವರೂಪ ಪಡೆಯುವ ಸಾಧ್ಯತೆ ಇದೆ. 

ಭಾರತದಲ್ಲಿ ಕಾನೂನು ರಚನಾ ಪ್ರಕ್ರಿಯೆ ಸಂಕೀರ್ಣವಾದುದು. ಕರಡು ಮಸೂದೆಯನ್ನು ಸಿದ್ಧಪಡಿಸುವುದು, ಎರಡೂ ಸದನಗಳಲ್ಲಿ ಅಂಗೀಕಾರ ಪಡೆಯುವುದು, ವಿರೋಧ ವ್ಯಕ್ತವಾದಾಗ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸುವುದು, ಬದಲಾವಣೆಗಳೊಂದಿಗೆ ಮತ್ತೆ ಸದನದಲ್ಲಿ ಒಪ್ಪಿಗೆ ಪಡೆಯುವುದು... ಹೀಗೆ ಒಂದು ಮಸೂದೆಯು ಕಾನೂನಿನ ರೂಪ ಪಡೆಯಲು ಕೆಲವೊಮ್ಮೆ ವರ್ಷಗಳೇ ಹಿಡಿಯುತ್ತವೆ.

ಮಸೂದೆಯೊಂದು ಸಂಸತ್ತಿನ ಎರಡೂ ಸದನಗಳ ಪ್ರತ್ಯೇಕ ಆಯ್ಕೆ ಸಮಿತಿಗಳ ಪರಿಶೀಲನೆಗೆ ಒಳಪಡುವುದು ಅಪರೂಪ. ಈಗ ಮತ್ತೆ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿರುವ ‘ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ಇಂಥ ಅಪರೂಪದ ಮಸೂದೆಗಳ ಸಾಲಿಗೆ ಸೇರಿದೆ.

ಬಾಡಿಗೆ ತಾಯಿಯಾಗಲು ಅರ್ಹತೆ ಏನು? ಗಳಿಕೆಯ ಮಾಧ್ಯಮವಾಗಿ ಬಾಡಿಗೆ ತಾಯ್ತನ ಬಳಕೆಯಾಗಬಹುದೇ? ಮಕ್ಕಳನ್ನು ಪಡೆಯುವ ನೈಸರ್ಗಿಕ ವಿಧಾನವನ್ನು ಬಿಟ್ಟು, ನೇರವಾಗಿ ಬಾಡಿಗೆ ತಾಯ್ತನದ ವಿಧಾನ ಆಯ್ಕೆ ಮಾಡಿಕೊಳ್ಳಲು ದಂಪತಿಗೆ ಅನುಮತಿ ನೀಡಬಹುದೇ? ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುವ ದಂಪತಿಯು ಆ ತಾಯಿಗೆ ನೀಡಬೇಕಾದ ಭದ್ರತೆ, ಸೌಲಭ್ಯಗಳೇನು ಮತ್ತು ಎಷ್ಟು ಕಾಲದವರೆಗೆ ಅದನ್ನು ನೀಡಬೇಕು? ಅವಿವಾಹಿತ ಮಹಿಳೆಯು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಬಹುದೇ? ಬಾಡಿಗೆ ತಾಯಿಗೂ ಆಕೆಯ ಹೊಟ್ಟೆಯಲ್ಲಿ ಬೆಳೆದ ಮಗುವಿಗೂ ಸಂಬಂಧ ಎಂಥದ್ದಿರಬೇಕು? ಬಾಡಿಗೆ ತಾಯ್ತನವನ್ನು ಕುರಿತ ಕಾನೂನು ರಚಿಸು‌ವಾಗ ಇಂಥ ಅನೇಕ ‘ನೈತಿಕ’ ಪ್ರಶ್ನೆಗಳು ಎದುರಾಗುತ್ತಿವೆ.

ಏನಿದು ಬಾಡಿಗೆ ತಾಯ್ತನ?
* ಮಕ್ಕಳಾಗದ ದಂಪತಿಗಾಗಿ (ಅಥವಾ ಮಕ್ಕಳನ್ನು ಬಯಸುವ ಪುರುಷ ಇಲ್ಲವೆ ಮಹಿಳೆಗಾಗಿ) ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಗುವನ್ನು ಹೆತ್ತು ಕೊಡುವ ಪ್ರಕ್ರಿಯೆಯೇ ಬಾಡಿಗೆ ತಾಯ್ತನ

* ಮಗು ಬೇಕೆಂದು ಇಚ್ಛಿಸಿದ ದಂಪತಿಯ ಪರವಾಗಿ ಗರ್ಭವನ್ನು ಧರಿಸಿ, ಒಂಬತ್ತು ತಿಂಗಳವರೆಗೆ ಭ್ರೂಣದ ಬೆಳವಣಿಗೆಗೆ ಸಹಕರಿಸಿ, ಹೆರಿಗೆ ಮಾಡಿಸಿಕೊಂಡ ಬಳಿಕ ಮಗುವನ್ನು ಅದರ ಪಾಲಕರಿಗೆ ಒಪ್ಪಿಸಲು ಬಾಡಿಗೆ ತಾಯಿ ಮತ್ತು ಅದರ ಪಾಲಕರ ಮಧ್ಯೆ ಮೊದಲೇ ಒಪ್ಪಂದ ಏರ್ಪಟ್ಟಿರುತ್ತದೆ

* ದೈಹಿಕವಾಗಿ ಅಥವಾ ವೈದ್ಯಕೀಯವಾಗಿ ಮಕ್ಕಳನ್ನು ಪಡೆಯಲು ಸಾಧ್ಯವೇ ಇಲ್ಲದ ದಂಪತಿಯು ಮಗು ಹೊಂದುವ ತನ್ನ ಆಸೆಯನ್ನು ಬಾಡಿಗೆ ತಾಯ್ತನದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯ

* ಬಾಡಿಗೆ ತಾಯ್ತನದಲ್ಲಿ ಎರಡು ವಿಧ: ಒಂದು ಸಾಂಪ್ರದಾಯಿಕ (traditional) ಬಾಡಿಗೆ ತಾಯ್ತನವಾದರೆ, ಮತ್ತೊಂದು ಗರ್ಭಧಾರಣೆ (gestational) ಬಾಡಿಗೆ ತಾಯ್ತನ

* ಸಾಂಪ್ರದಾಯಿಕ ವಿಧಾನದಲ್ಲಿ ಬಾಡಿಗೆ ತಾಯಿಯ ಅಂಡಾಣುವನ್ನೇ ಬಳಸಲಾಗುತ್ತದೆ. ಮಗುವನ್ನು ಬಯಸಿದ ತಂದೆ ಇಲ್ಲವೆ ದಾನಿಯಿಂದ ಪಡೆದ ವೀರ‍್ಯಾಣುವಿನ ಮೂಲಕ ಗರ್ಭಧಾರಣೆಗೆ ಅನುವು ಮಾಡಿಕೊಡಲಾಗುತ್ತದೆ. ಈ ವಿಧಾನದಲ್ಲಿ ಹುಟ್ಟುವ ಮಗು, ಬಾಡಿಗೆ ತಾಯಿಯೊಂದಿಗೆ ವಂಶವಾಹಿ ಸಂಬಂಧ ಹೊಂದಿರುತ್ತದೆ

* ಗರ್ಭಧಾರಣೆಯ ಇನ್ನೊಂದು ವಿಧಾನದಲ್ಲಿ ಮಗು ಬಯಸಿದ ತಂದೆ–ತಾಯಿಯಿಂದಲೇ ಪಡೆದ ಅಂಡಾಣು ಮತ್ತು ವೀರ‍್ಯಾಣುನನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಭ್ರೂಣ ಬೆಳೆಯಲು ಮಾತ್ರ ಬಾಡಿಗೆ ತಾಯಿಯ ಗರ್ಭಾಶಯ ಬಳಕೆಯಾಗುತ್ತದೆ. ಹೀಗಾಗಿ ಈ ರೀತಿ ಜನಿಸಿದ ಮಗುವಿನ ಜತೆ ಬಾಡಿಗೆ ತಾಯಿಯು ಯಾವುದೇ ವಂಶವಾಹಿ ಸಂಬಂಧ ಹೊಂದಿರುವುದಿಲ್ಲ

* ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ಗರ್ಭಧಾರಣೆ ವಿಧಾನದ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡುತ್ತದೆ ಹಾಗೂ ಅದರ ನಿಯಂತ್ರಣಕ್ಕೂ ನಿಯಮಗಳನ್ನು ಹೊಂದಿದೆ

* ಸದ್ಯದ ಸನ್ನಿವೇಶದಲ್ಲಿ ಬಾಡಿಗೆ ತಾಯ್ತನವು ಪರೋಪಕಾರಿ ಆಗಿರಬಹುದು ಅಥವಾ ವಾಣಿಜ್ಯದ ಉದ್ದೇಶವನ್ನೂ ಹೊಂದಿರಬಹುದು. ಪರೋಪಕಾರಿ ಬಾಡಿಗೆ ತಾಯ್ತನದಲ್ಲಿ ವೈದ್ಯಕೀಯ ವೆಚ್ಚ ಹಾಗೂ ವಿಮಾ ಸೌಲಭ್ಯವನ್ನಷ್ಟೇ ಪಡೆದರೆ, ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದಲ್ಲಿ ವೈದ್ಯಕೀಯ ವೆಚ್ಚದ ಜತೆಗೆ ಆರ್ಥಿಕ ಪ್ರಯೋಜನವನ್ನೂ ಪಡೆಯಲಾಗುತ್ತದೆ

* ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಪ್ರಸ್ತಾವ ಹೊಂದಿದೆ. ಆದರೆ, ಪರೋಪಕಾರಿ ಬಾಡಿಗೆ ತಾಯ್ತನಕ್ಕೆ ಸಮರ್ಪಕ ವೈದ್ಯಕೀಯ ಬೆಂಬಲ ನೀಡಲು (ವೈದ್ಯಕೀಯ ವೆಚ್ಚ, ಪೌಷ್ಟಿಕ ಆಹಾರ, ಆರೈಕೆ ಮತ್ತು ವಿಮಾ ಸೌಲಭ್ಯ) ಅವಕಾಶ ಕಲ್ಪಿಸುತ್ತದೆ.

ಯಾರಿಗೆ ಅವಕಾಶ?
* ಗರ್ಭಕೋಶದಲ್ಲಿ ಸಮಸ್ಯೆ ಹೊಂದಿ ಸ್ವಂತವಾಗಿ ಗರ್ಭಧರಿಸಿ ಮಗು ಪಡೆಯುವುದು ಅಸಾಧ್ಯ ಎನಿಸಿದ ಮಹಿಳೆಯು ಬಾಡಿಗೆ ತಾಯ್ತನದ ನೆರವು ಪಡೆಯಬಹುದು

* ಹೆರಿಗೆ ಸಂದರ್ಭ ಇಲ್ಲವೆ ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಗರ್ಭಕೋಶವನ್ನೇ ತೆಗೆಸಿಕೊಂಡ ಮಹಿಳೆ ಸಹ ಈ ಸೌಲಭ್ಯ ಪಡೆಯಲು ಅವಕಾಶ ಉಂಟು

ಬೇರೆ ದೇಶಗಳಲ್ಲಿ ಹೇಗಿದೆ ಸ್ಥಿತಿ?
* ರಷ್ಯಾ, ಜಾರ್ಜಿಯಾ, ಉಕ್ರೇನ್‌, ಕೊಲಂಬಿಯಾ, ಇರಾನ್‌ ಹಾಗೂ ಅಮೆರಿಕದ ಕೆಲವು ರಾಜ್ಯಗಳಲ್ಲಿ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೂ ಅವಕಾಶವಿದೆ

* ಫ್ರಾನ್ಸ್‌, ಫಿನ್ಲೆಂಡ್‌, ಇಟಲಿ, ಜಪಾನ್‌, ಸ್ಪೇನ್‌, ಸ್ವೀಡನ್‌, ಸ್ವಿಟ್ಜರ್ಲೆಂಡ್‌, ಹಂಗೆರಿ, ಐರ್ಲೆಂಡ್‌ ಮೊದಲಾದ ದೇಶಗಳಲ್ಲಿ ಎಲ್ಲ ರೀತಿಯ ಬಾಡಿಗೆ ತಾಯ್ತನಕ್ಕೆ ನಿರ್ಬಂಧವಿದೆ

* ಭಾರತವು ಮೇಲಿನ ಎರಡೂ ವಿಧಗಳ ಪೈಕಿ ಮಧ್ಯದ ದಾರಿಯನ್ನು ಹುಡುಕಿಕೊಂಡಿದೆ. ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ (ವಿದೇಶಿಯರಿಗೂ ಸೇರಿದಂತೆ) ನಿರ್ಬಂಧ ವಿಧಿಸಿ, ಪರೋಪಕಾರಿ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡಲು ಉದ್ದೇಶಿಸಿದೆ

* ಆಸ್ಟ್ರೇಲಿಯಾ, ಕೆನಡಾ, ಇಸ್ರೇಲ್‌, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ವಿಯೆಟ್ನಾಂ, ಥಾಯ್ಲೆಂಡ್‌, ಕಾಂಬೋಡಿಯಾ, ನೇಪಾಳ, ಮೆಕ್ಸಿಕೊ ದೇಶಗಳಲ್ಲಿ ಬಾಡಿಗೆ ತಾಯ್ತನದ ಕಾನೂನುಗಳು ಭಾರತ ಸದ್ಯ ರೂಪಿಸಿದ ಮಸೂದೆಯಲ್ಲಿರುವ ಅಂಶಗಳಂತೆಯೇ ಇವೆ

ಮಗು ಪಡೆದ ಸೆಲೆಬ್ರಿಟಿಗಳು
ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್‌ನ ಹಲವು ತಾರೆಗಳು ಮಕ್ಕಳನ್ನು ಪಡೆದಿದ್ದಾರೆ. ಕರಣ್‌ ಜೋಹರ್‌, ಸಾರಾ ಜೆಸ್ಸಿಕಾ ಪಾರ್ಕರ್‌, ಶಾರೂಕ್‌ ಖಾನ್‌, ತುಷಾರ್‌  ಕಪೂರ್‌, ಏಕ್ತಾ ಕಪೂರ್‌, ಅಮೀರ್‌ ಖಾನ್‌, ಸನ್ನಿ ಲಿಯೋನ್‌, ಸೊಹೈಲ್‌ ಖಾನ್‌, ಫರ್ಹಾ ಖಾನ್‌, ಶಿಲ್ಪಾ ಶೆಟ್ಟಿ ಅದರಲ್ಲಿ ಮುಖ್ಯವಾದವರು.

ಬೇಬಿ ಮಾಂಜಿ
2006ರಲ್ಲಿ ಭಾರತದಲ್ಲಿ ನಡೆದ ಘಟನೆ ಇದು. ಜಪಾನ್‌ನ ದಂಪತಿ ಬಾಡಿಗೆ ತಾಯ್ತನ ಸೇವೆ ಅರಸಿ ಭಾರತಕ್ಕೆ ಬಂದಿದ್ದರು. ಈ ಸೇವೆ ಒದಗಿಸಲು ಉತ್ತರ ಭಾರತದ ಮಹಿಳೆಯೊಬ್ಬರು ಮುಂದಾದರು. ದಂಪತಿ ಮತ್ತು ಬಾಡಿಗೆ ತಾಯಿಯ ಮಧ್ಯೆ ಒಪ್ಪಂದವೂ ಅಂತಿಮವಾಯಿತು, ಆಕೆ ಗರ್ಭ ಧರಿಸಿದ್ದೂ ಆಯಿತು.

ಆದರೆ, ಹೆರಿಗೆ ಆಗುವ ಮುನ್ನವೇ ಜಪಾನ್ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತ ಹೆರಿಗೆಯೂ ಆಯಿತು. ಜಪಾನ್ ದಂಪತಿಯಲ್ಲಿ ಪತ್ನಿಯು, ಈ ಮಗು ಬೇಡ ಎಂದು ನಿರಾಕರಿಸಿದ್ದರು. ಆದರೆ, ಪತಿ ಈ ಮಗು ಬೇಕೆಂದು ಬಯಸಿದರು. ಈ ವ್ಯಾಜ್ಯ ಬಗೆಹರಿಯುವ ಮೊದಲೇ, ದಂಪತಿಗೆ ವಿಚ್ಛೇದನ ಆಯಿತು. ಏಕ ಪೋಷಕರಿಗೆ ಮಗು ದತ್ತು ಕೊಡಲು ಅವಕಾಶ ಇಲ್ಲದೇ ಇದ್ದ ಕಾರಣ, ಪತಿ ಮಗುವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇತ್ತ ಬಾಡಿಗೆ ತಾಯಿಯೂ ಮಗುವನ್ನು ಇರಿಸಿಕೊಳ್ಳಲು ತಯಾರಿರಲಿಲ್ಲ. ಜಪಾನ್ ಸರ್ಕಾರದ ಮಧ್ಯಪ್ರವೇಶದಿಂದ ಈ ಸಮಸ್ಯೆ ಪರಿಹಾರವಾಯಿತು. ಜಪಾನ್ ಸರ್ಕಾರವು ಮಗುವಿಗೆ ಒಂದು ವರ್ಷದ ವೀಸಾ ನೀಡಿತು. ಆದರೆ, ಪತಿಯ ತಾಯಿ ಈ ಮಗುವಿನ ಜವಾಬ್ದಾರಿ ಹೊರಬೇಕಾಯಿತು. ಈ ಮಗುವಿಗೆ ‘ಬೇಬಿ ಮಾಂಜಿ’ ಎಂದು ಹೆಸರಿಡಲಾಗಿತ್ತು, ಇದನ್ನು ಬೇಬಿ ಮಾಂಜಿ ಪ್ರಕರಣ ಎಂದೇ ಕರೆಯಲಾಗಿತ್ತು.

ಮಸೂದೆಯ ಹಾದಿ
* 2005ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಕೆಲವು ಮಾರ್ಗಸೂಚಿ ನಿಯಮಗಳನ್ನು ರೂಪಿಸುವ ಮೂಲಕ  ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ಎಆರ್‌ಟಿ) ಮತ್ತು ಬಾಡಿಗೆ ತಾಯ್ತನಕ್ಕೆ ನಿಯಂತ್ರಣ ವಿಧಿಸುವ ಪ್ರಯತ್ನ ಮಾಡಿತು

* ಇದರ ಆಧಾರದಲ್ಲಿ 2010 ಹಾಗೂ 2014ರಲ್ಲಿ ಮಸೂದೆಗಳನ್ನು ಸಿದ್ಧಪಡಿಸಲಾಯಿತಾದರೂ ಅವುಗಳಿಗೆ ಸಂಸತ್ತಿನ ಅಂಗೀಕಾರ ಲಭಿಸಲಿಲ್ಲ

* ಎಆರ್‌ಟಿ ಮತ್ತು ಬಾಡಿಗೆ ತಾಯ್ತನಕ್ಕೆ ಕಾನೂನಿನ ರೂಪ ನೀಡುವ ಸಲುವಾಗಿ 2006ರಲ್ಲಿ ಕಾನೂನು ಆಯೋಗವು ನ್ಯಾಯಮೂರ್ತಿ ಎ.ಆರ್‌. ಲಕ್ಷ್ಮಣನ್‌ ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು 2009ರ ಆಗಸ್ಟ್‌ 5ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿತು. ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ತಾಯ್ತನವನ್ನು ಬಳಸುವುದನ್ನು ಇದು ವಿರೋಧಿಸಿತು

* ಕಾನೂನು ಆಯೋಗದ ಸಲಹೆ–ಸೂಚನೆಗಳ ಆಧಾರದಲ್ಲಿ 2016ರಲ್ಲಿ ‘ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯನ್ನು ಸಿದ್ಧಪಡಿಸಲಾಯಿತು. ಅದನ್ನು ಸಂಸತ್ತಿನ ಆಯ್ಕೆ ಸಮಿತಿ ಹಾಗೂ ಆರೋಗ್ಯ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಯಿತು. ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ರಾಜ್ಯಸಭೆಯಲ್ಲಿ ಅಂಗೀಕಾರ ಲಭಿಸಲಿಲ್ಲ.

* ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಸಮಿತಿಗಳು 2017ರಲ್ಲಿ ಸೂಚಿಸಿದವು. ಆದರೆ, ಆ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರವು 2016ರ ಮಸೂದೆಯನ್ನೇ 2019ರಲ್ಲಿ ಮತ್ತೆ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಿತು.

* ಮಸೂದೆ ರಾಜ್ಯಸಭೆಗೆ ಬಂದಾಗ ಅದನ್ನು ಇನ್ನೊಮ್ಮೆ ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಿತು. ರಾಜ್ಯಸಭೆಯ ಬಿಜೆಪಿ ಸದಸ್ಯ ಭೂಪೇಂದ್ರ ಯಾದವ್‌ ಅವರ ನೇತೃತ್ವದ ಸಮಿತಿಯು ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಿತು. ಆ ಎಲ್ಲಾ ಬದಲಾವಣೆಗಳನ್ನು ಒಳಗೊಂಡಂಥ ಮಸೂದೆ ಈಗ ಲೋಕಸಭೆಯಲ್ಲಿ ಪುನಃ ಮಂಡನೆಗೆ ಸಿದ್ಧವಾಗಿದೆ.

ವಾಣಿಜ್ಯಾತ್ಮಕ ತಾಯ್ತನ ಯಾಕೆ?

* ಕುಟುಂಬದವರೇ ಬಾಡಿಗೆ ತಾಯಿಯಾದರೆ ಮಗು ಮತ್ತು ತಾಯಿಯ ಮಧ್ಯೆ ಭಾವನಾತ್ಮಕ ಸಂಬಂಧ ಏರ್ಪಡುವ ಸಾಧ್ಯತೆ ಇದೆ. ಬೇರೆ ಮಹಿಳೆಯ ಮೂಲಕ ಮಗು ಪಡೆದರೆ, ಜನಿಸಿದ ಮಗು ಹಾಗೂ ಜೈವಿಕ ತಾಯಿಯ ಮಧ್ಯೆ ಸಂವಾದ ನಡೆಯುವುದಿಲ್ಲ

* ಪರೋಪಕಾರ ಸ್ವರೂಪದ ಬಾಡಿಗೆ ತಾಯ್ತನವಾದರೆ ಮಹಿಳೆಯು ಯಾವುದೇ ಫಲಾಪೇಕ್ಷೆ ಇಲ್ಲದೆ ಮಗುವನ್ನು ಹೆತ್ತು ಕೊಡಬೇಕಾಗುತ್ತದೆ. ವಾಣಿಜ್ಯ ಸ್ವರೂಪದ ಬಾಡಿಗೆ ತಾಯ್ತನದಲ್ಲಿ ಮಹಿಳೆಗೆ ಹೆಚ್ಚು ಅನುಕೂಲಗಳು ಲಭಿಸುತ್ತವೆ.

***

ಬಾಡಿಗೆ ತಾಯಿಯ ಪರ ಸಲಹೆ
* ಬಾಡಿಗೆ ತಾಯಿಯಾಗುವ ಮಹಿಳೆಗೆ ನೀಡಲು ಉದ್ದೇಶಿಸಿರುವ 16 ತಿಂಗಳ ಅವಧಿಯ ವಿಮಾ ಸೌಲಭ್ಯವನ್ನು 36 ತಿಂಗಳ ಅವಧಿಗೆ ವಿಸ್ತರಿಸಬೇಕು

* ಮಗುವನ್ನು ಪಡೆಯಲು ಇಚ್ಛಿಸುವ ದಂಪತಿಯು, ಬಾಡಿಗೆ ತಾಯಿಯಾಗಲು ಒಪ್ಪುವ ಮಹಿಳೆಗೆ ಅಗತ್ಯವಿರುವ ಪೌಷ್ಟಿಕ ಆಹಾರವನ್ನು ಒದಗಿಸಬೇಕು

ಬದಲಾವಣೆಗಳೇನು?
* ಮಗುವನ್ನು ಪಡೆಯಲು ಇಚ್ಛಿಸುವ ದಂಪತಿಯ ಕುಟುಂಬದ ಸದಸ್ಯರು ಮಾತ್ರ ಬಾಡಿಗೆ ತಾಯಿ ಆಗಬಹುದು ಎಂಬ ನಿಯಮ ರದ್ದು

* ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಬೇಕಾದರೆ ದಂಪತಿಯು ಮದುವೆಯಾಗಿ ಕನಿಷ್ಠ ಐದು ವರ್ಷಗಳ ಕಾಲ ಕಾಯಬೇಕು ಎಂಬ ನಿಯಮ ರದ್ದು

* ವಿಧವೆ ಅಥವಾ ವಿಚ್ಛೇದಿತೆಗೂ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅನುಮತಿ

* ಪರೋಪಕಾರಿ ಬಾಡಿಗೆ ತಾಯ್ತನ ಮತ್ತು ವಾಣಿಜ್ಯ ಸ್ವರೂಪದ ಬಾಡಿಗೆ ತಾಯ್ತನಗಳನ್ನು ಪ್ರತ್ಯೇಕಿಸಿ, ಬಾಡಿಗೆ ತಾಯಿಯಾಗಲು ಒಪ್ಪುವ ಯಾವುದೇ ಮಹಿಳೆಯ ಮೂಲಕ ಮಗುವನ್ನು ಪಡೆಯಲು ಅವಕಾಶ

* ವಿದೇಶದಲ್ಲಿರುವ ಭಾರತ ಮೂಲದ ವ್ಯಕ್ತಿಗೂ ಭಾರತೀಯ ಮಹಿಳೆಯ ಮೂಲಕ ಮಗುವನ್ನು ಪಡೆಯಲು ಅವಕಾಶ

ಬದಲಾವಣೆಯ ಉದ್ದೇಶ
* ಕುಟುಂಬದವರೇ ಬಾಡಿಗೆ ತಾಯಿಯಾಗಬೇಕು ಎಂದು ಕಡ್ಡಾಯಗೊಳಿಸಿದರೆ ಬಾಡಿಗೆ ತಾಯ್ತನಕ್ಕೆ ಲಭ್ಯವಾಗುವ ಮಹಿಳೆಯರ ಸಂಖ್ಯೆ ಕಡಿಮೆಯಾಗಬಹುದು, ಸಂಬಂಧಿಕರಿಂದ ದೂರವಾಗಿರುವವರಿಗೆ ಮಗುವನ್ನು ಪಡೆಯುವುದು ಕಷ್ಟವಾಗಬಹುದು ಅಥವಾ ವಿವಾಹಿತ ಜೋಡಿಯು ಭೌತಿಕವಾಗಿ ಸಂಬಂಧಿಕರಿಂದ ದೂರ ವಾಸವಿದ್ದರೆ ಸಮಸ್ಯೆಯಾಗ
ಬಹುದು

* ಬಾಡಿಗೆ ತಾಯ್ತನವು ಖಾಸಗಿ ವಿಚಾರವಾಗಿರುವುದರಿಂದ ಅದನ್ನು ಗೌಪ್ಯವಾಗಿಡಲು ಹೆಚ್ಚಿನವರು ಬಯಸಬಹುದು. ಸಂಬಂಧಿಕರೇ ತಾಯಿಯಾಗಬೇಕು ಎಂಬ ನಿಯಮವು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ

* ಮಹಿಳೆಯನ್ನು ಸಂತಾನೋತ್ಪಾದನೆಯ ಕಾರ್ಮಿಕಳಂತೆ ಬಳಕೆಮಾಡುವ ಅಪಾಯ ಇದೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು