ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನೈರ್ಮಲ್ಯದಲ್ಲಿ ಕರ್ನಾಟಕ ಏಕೆ ಹಿಂದೆ?

Last Updated 20 ಆಗಸ್ಟ್ 2020, 21:29 IST
ಅಕ್ಷರ ಗಾತ್ರ
ADVERTISEMENT
""
""
""

ಸ್ವಚ್ಛ ಸರ್ವೇಕ್ಷಣೆ 2020ರಲ್ಲಿ ದೇಶದ ಅತ್ಯಂತ ಸ್ವಚ್ಛ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 21ನೇ ಸ್ಥಾನದಲ್ಲಿದೆ.ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆಯಲು, ಸರ್ವೇಕ್ಷಣೆಯಲ್ಲಿ ಪಾಲ್ಗೊಳ್ಳುವಿಕೆಯೂ ಅತ್ಯಂತ ಅಗತ್ಯ. ಸ್ವಚ್ಛನಗರಿ, ಸ್ವಚ್ಛ ರಾಜ್ಯಗಳ ರ‍್ಯಾಂಕ್‌ ಪಡೆಯಲು ಹಲವು ಸ್ವರೂಪದ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಈ ಮಾನದಂಡಗಳಲ್ಲಿ ಹೆಚ್ಚಿನ ಅಂಕ ಪಡೆದ ನಗರ ಅಥವಾ ರಾಜ್ಯ ರ‍್ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳುತ್ತದೆ.

ಕರ್ನಾಟಕವು ಸ್ವಚ್ಛ ರಾಜ್ಯಗಳ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದೆ. ಅಂದರೆ, ನಗರಗಳನ್ನು ಸ್ವಚ್ಛವಾಗಿಡುವ ದಿಸೆಯಲ್ಲಿ ನಗರಾಡಳಿತಗಳಿಗೆ ಸಹಕಾರ ನೀಡುವ ಮಾನದಂಡದಲ್ಲಿ ರಾಜ್ಯ ಸರ್ಕಾರವು ಕಡಿಮೆ ಅಂಕಗಳನ್ನು ಪಡೆದಿದೆ. ಮೊದಲ ರ‍್ಯಾಂಕ್ ಪಡೆದಿರುವ ಛತ್ತೀಸಗಡ ರಾಜ್ಯವು 1,553 ಅಂಕಗಳನ್ನು ಪಡೆದಿದೆ. ಆದರೆ ಕರ್ನಾಟಕಕ್ಕೆ ಈ ವಿಭಾಗದಲ್ಲಿ 688.3 ಅಂಕಗಳಷ್ಟೇ ಸಿಕ್ಕಿವೆ.

ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ, ನಗರಾಡಳಿತ ಮತ್ತು ರಾಜ್ಯ ಸರ್ಕಾರದ ಮಧ್ಯೆ ಅಗತ್ಯ ಸಹಕಾರ ಮತ್ತು ಸಮನ್ವಯ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಹಕಾರ ಮತ್ತು ಸಮನ್ವಯದ ಕೊರತೆ ಇರುವ ಕಾರಣ, ನಗರಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಹಿಂದೆ ಬೀಳುತ್ತಿವೆ. ಒಟ್ಟಾರೆಯಾಗಿ ಇದು ರಾಜ್ಯದಲ್ಲಿ ಸ್ವಚ್ಛತೆ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ. ಕ್ರಮವಾಗಿ ಮೊದಲ ಮೂರು ರ‍್ಯಾಂಕ್ ಪಡೆದಿರುವ ಛತ್ತೀಸಗಡ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಈ ಸ್ವರೂಪದ ಸಹಕಾರ ಅತ್ಯುತ್ತಮಮಟ್ಟದಲ್ಲಿದೆ. ಹೀಗಾಗಿ ಈ ರಾಜ್ಯಗಳ ಹಲವು ನಗರಗಳು ಮತ್ತು ಪಟ್ಟಣಗಳು ಸ್ವಚ್ಛತೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆದಿವೆ ಎಂದು ಸ್ವಚ್ಛ ಸರ್ವೇಕ್ಷಣೆ 2020 ವರದಿಯಲ್ಲಿ ವಿವರಿಸಲಾಗಿದೆ.

ನಗರ ಮತ್ತು ಪಟ್ಟಣಗಳು ತ್ಯಾಜ್ಯ ಮುಕ್ತವಾಗಿವೆಯೇ ಎಂಬುದೂ ರಾಜ್ಯಗಳ ರ‍್ಯಾಂಕ್‌ ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಈ ವಿಭಾಗದಲ್ಲೂ ಕರ್ನಾಟಕವು ಕನಿಷ್ಠ ಅಂಕಗಳನ್ನು ಪಡೆದಿದೆ. ಮೊದಲ ರ‍್ಯಾಂಕ್‌ನಲ್ಲಿರುವ ಛತ್ತೀಸಗಡವು ಈ ವಿಭಾಗದಲ್ಲಿ 1,300 ಅಂಕಗಳನ್ನು ಪಡೆದಿದ್ದರೆ, ಕರ್ನಾಟಕವು 100 ಅಂಕಗಳನ್ನಷ್ಟೇ ಪಡೆದಿದೆ. ರಾಜ್ಯದ ಹೆಚ್ಚಿನ ನಗರಗಳು ತ್ಯಾಜ್ಯ ಮುಕ್ತ ನಗರ ಅಥವಾ ಪಟ್ಟಣ ಎಂಬ ಗುರಿಯನ್ನು ಸಾಧಿಸಿಲ್ಲ. ಇದನ್ನು ಸಾಧಿಸಲು ಅಗತ್ಯವಿರುವ ಕಾನೂನು ಜಾರಿಯಲ್ಲಿಲ್ಲ. ಜಾರಿಯಲ್ಲಿರುವ ಕಾನೂನು ಸಹ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಉತ್ತಮ ರ‍್ಯಾಂಕ್ ಪಡೆದಿರುವ ರಾಜ್ಯಗಳು ಈ ವಿಚಾರದಲ್ಲಿ ಕಠಿಣ ಕಾನೂನನ್ನು ಹೊಂದಿವೆ. ಕಾನೂನಿನ ಉಲ್ಲಂಘನೆಗೆ ಕಠಿಣ ಶಿಕ್ಷೆ ಅಥವಾ ದಂಡ ತೆರಬೇಕಾದ ಪರಿಸ್ಥಿತಿ ಇದೆ. ಹೀಗಾಗಿಯೇ ಆ ರಾಜ್ಯಗಳ ಪಟ್ಟಣಗಳೂ ‘ತ್ಯಾಜ್ಯ ಮುಕ್ತ ಪಟ್ಟಣ’ ಎಂಬ ಗರಿ ಪಡೆದಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆಯಲ್ಲಿಯೂ ಕರ್ನಾಟಕವು ಕಡಿಮೆ ಅಂಕಗಳನ್ನು ಪಡೆದಿದೆ. ಛತ್ತೀಸಗಡವು 430, ಮಹಾರಾಷ್ಟ್ರವು 392,
ಮಧ್ಯಪ್ರದೇಶವು 350 ಅಂಕಗಳನ್ನು ಪಡೆದಿವೆ. ಕರ್ನಾಟಕವು 152 ಅಂಕಗಳನ್ನಷ್ಟೇ ಪಡೆದಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ರಾಜ್ಯದ ನಾಗರಿಕರ ಸಂಖ್ಯೆಯೂ ಕಡಿಮೆ ಇದೆ. ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವೂ ಸಕಾರಾತ್ಮಕವಾಗಿ ಇಲ್ಲ. ಸ್ವಚ್ಛತೆಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿಲ್ಲ, ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮತ್ತು ಮಾನವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಎಲ್ಲೆಡೆ ಇಲ್ಲ ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಈ ಎಲ್ಲಾ ಅಂಶಗಳು ರಾಜ್ಯದ ರ‍್ಯಾಂಕ್ ಅನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಈ ವಿಭಾಗಗಳಲ್ಲಿ ರಾಜ್ಯವು ಸುಧಾರಣೆ ಕಂಡರೆ, ರಾಜ್ಯದ ಸ್ವಚ್ಛತೆಯ ಮಟ್ಟ ಸುಧಾರಿಸಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ರಾಜ್ಯದ ನಗರ, ಪಟ್ಟಣಗಳ ಸ್ಥಾನ
* ಬೆಂಗಳೂರು ನಗರ: 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ‘ಸ್ವ–ಸುಸ್ಥಿರ ಮಹಾನಗರ’
* ಹುಣಸೂರು: ದಕ್ಷಿಣ ವಲಯದಲ್ಲಿ 50,000–1 ಲಕ್ಷ ಜನಸಂಖ್ಯೆಯ ಪಟ್ಟಣಗಳಲ್ಲಿ, ‘ನಾಗರಿಕರ ಪ್ರತಿಕ್ರಿಯೆಯಲ್ಲಿ ಅತ್ಯುತ್ತಮ ನಗರ‌’
* ರಾಮನಗರ: ದಕ್ಷಿಣ ವಲಯದಲ್ಲಿ 50,000–1 ಲಕ್ಷ ಜನಸಂಖ್ಯೆಯ ಪಟ್ಟಣಗಳಲ್ಲಿ, ‘ಅನ್ವೇಷಣೆ ಮತ್ತು ಅತ್ಯುತ್ತಮ ಅಭ್ಯಾಸಗಳ ಅತ್ಯುತ್ತಮ ನಗರ’
* ಕೆ.ಆರ್‌.ನಗರ: ದಕ್ಷಿಣ ವಲಯದಲ್ಲಿ 25,000-50,000 ಜನಸಂಖ್ಯೆಯ ಪಟ್ಟಣಗಳಲ್ಲಿ, ‘ನಾಗರಿಕರ ಪ್ರತಿಕ್ರಿಯೆಯಲ್ಲಿ ಅತ್ಯುತ್ತಮ ನಗರ'
* ಕಡೂರು: ದಕ್ಷಿಣ ವಲಯದಲ್ಲಿ 25,000-50,000 ಜನಸಂಖ್ಯೆಯ ಪಟ್ಟಣಗಳಲ್ಲಿ, ‘ಅನ್ವೇಷಣೆ ಮತ್ತು ಅತ್ಯುತ್ತಮ ಅಭ್ಯಾಸಗಳ ಅತ್ಯುತ್ತಮ ನಗರ‌’
* ಎಚ್‌.ಡಿ.ಕೋಟೆ:ದಕ್ಷಿಣ ವಲಯದಲ್ಲಿ 25,000ಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ,‘ನಾಗರಿಕರ ಪ್ರತಿಕ್ರಿಯೆಯಲ್ಲಿ ಅತ್ಯುತ್ತಮ ನಗರ‌’
* ಹೊಳಲ್ಕೆರೆ:ದಕ್ಷಿಣ ವಲಯದಲ್ಲಿ 25,000ಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ,‘ಸ್ವ–ಸುಸ್ಥಿರ ನಗರ’
* ಪಿರಿಯಾಪಟ್ಟಣ:ದಕ್ಷಿಣ ವಲಯದಲ್ಲಿ 25,000ಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ, ‘ಅತ್ಯಂತ ಸ್ವಚ್ಛನಗರ’
* ಜಾಲಿ ಪಟ್ಟಣ:ದಕ್ಷಿಣ ವಲಯದಲ್ಲಿ 25,000ಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ, ‘ಫಾಸ್ಟೆಸ್ಟ್ ಮೂವರ್ಸ್ ಸಿಟಿ’

ಸ್ವಚ್ಛ ಸರ್ವೇಕ್ಷಣೆ ಮೌಲ್ಯಮಾಪನ ಪ್ರಕ್ರಿಯೆ
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆ ಮೌಲ್ಯಮಾಪನದ ಅಂಕ ನಿಗದಿ ಪ್ರಕ್ರಿಯೆಯನ್ನು ಕೊಂಚ ಪರಿಷ್ಕರಿಸಿತ್ತು. ಕಳೆದ ವರ್ಷ 5,000 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಈ ಬಾರಿ 6,000 ಅಂಕ ಗೊತ್ತುಪಡಿಸಲಾಗಿತ್ತು. ಸ್ವಚ್ಛ ಸರ್ವೇಕ್ಷಣೆ ಲೀಗ್‌ 2020ರ ಮೂರು ತ್ರೈಮಾಸಿಕಗಳಲ್ಲಿ ನಗರಗಳು ಪಡೆದ ಶ್ರೇಯಾಂಕವನ್ನೂ ಈ ಬಾರಿ ಪರಿಗಣಿಸಲಾಗಿದೆ.

ನಾಗರಿಕರ ಪ್ರತಿಕ್ರಿಯೆ:ನಾಗರಿಕರ ಪ್ರತಿಕ್ರಿಯೆ ವಿಭಾಗಕ್ಕೆ ಶೇ 25ರಷ್ಟು ಅಂಕ ನೀಡಲಾಗಿದೆ. ಇದು ಸಮೀಕ್ಷೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ತಿಳಿಸುತ್ತದೆ.ಈ ವರ್ಷ, ನಾಗರಿಕರಿಂದ ನೇರ ಪ್ರತಿಕ್ರಿಯೆ ಪಡೆದು ಸ್ವಚ್ಛ ನಗರಗಳು ಮಾಡಿದ ಪ್ರಗತಿಯನ್ನು ಪರಿಶೀಲಿಸುವ ಮೂಲಕ ಸಮೀಕ್ಷೆಯನ್ನು ಜನ ಕೇಂದ್ರಿತ ಮಾಡಲಾಗಿದೆ. ಸ್ವಚ್ಛತಾ ಸಹಾಯವಾಣಿ 1969, ಸ್ವಚ್ಛತಾ ಆ್ಯಪ್, ಸ್ವಚ್ಛ ಸರ್ವೇಕ್ಷಣ 2020 ಪೋರ್ಟಲ್ ಮೂಲಕ ನಾಗರಿಕರು ಅಭಿಪ್ರಾಯ ತಿಳಿಸಬಹುದಾಗಿತ್ತು.

ನೇರ ಪರಿಶೀಲನೆ:ನಗರಕ್ಕೆ ಭೇಟಿ ನೀಡುವ ಮತ್ತು ಸ್ಥಳದಲ್ಲಿ ನಿರ್ಣಾಯಕ ಅವಲೋಕನ ಮಾಡುವ ಸ್ವತಂತ್ರ ಸಂಸ್ಥೆಯ ಕೈಯಲ್ಲಿ 1,500 ಅಂಕಗಳು ಇದ್ದವು. ಸಚಿವಾಲಯವು ಪ್ರತ್ಯಕ್ಷ ಪರಿಶೀಲನೆಗೆ ಈ ಬಾರಿ ಹೆಚ್ಚು ಒತ್ತು ನೀಡಿತ್ತು. ಕಳೆದ ವರ್ಷ ಈ ವಿಭಾಗಕ್ಕೆ 1,000 ಅಂಕ ನಿಗದಿಪಡಿಸಲಾಗಿತ್ತು.

ಸೇವಾ ಮಟ್ಟದ ಪ್ರಗತಿ:ಸೇವಾ ಮಟ್ಟದ ಪ್ರಗತಿ ಮತ್ತು ಸ್ವಚ್ಛ ಸರ್ವೇಕ್ಷಣಾ ಲೀಗ್‌ ಎರಡನ್ನೂ ಸೇರಿಸಿ ಶೇ 25ರಷ್ಟು ಅಂಕ ನೀಡಲಾಗಿದೆ.ಈ ವಿಭಾಗದಲ್ಲಿ ನಗರಗಳನ್ನು ವಿವಿಧ ಅಂಶಗಳನ್ನು ಕೇಂದ್ರೀಕರಿಸಿ ಮೌಲ್ಯಮಾಪನ ಮಾಡಲಾಗಿದೆ. ಅವುಗಳೆಂದರೆ,
*ಘನತ್ಯಾಜ್ಯ ಸಂಗ್ರಹ ಮತ್ತು ಸಾಗಣೆ
* ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆ
*ಸುಸ್ಥಿರ ನೈರ್ಮಲ್ಯ
* ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ)
* ಸಾಮರ್ಥ್ಯ ವೃದ್ಧಿ
*ನಾವೀನ್ಯತೆ ಮತ್ತು ಉತ್ತಮ ಅಭ್ಯಾಸಗಳು

ಬಯಲು ಬಹಿರ್ದೆಸೆ ಮುಕ್ತ:ಸಚಿವಾಲಯವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್), ಒಡಿಎಫ್ ಪ್ಲಸ್ ಮತ್ತು ಒಡಿಎಫ್ ಪ್ಲಸ್ ಪ್ಲಸ್ ಸ್ಥಾನಮಾನವನ್ನು ಯಶಸ್ವಿಯಾಗಿ ಸಾಧಿಸಿದ ನಗರಗಳಿಗೆ 500 ಅಂಕಗಳನ್ನು ನೀಡಲಾಗಿದೆ. ಒಡಿಎಫ್ ಪ್ಲಸ್‌ ಸ್ಥಾನವನ್ನುಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಸುಸ್ಥಿರತೆ ಎಂದು ಪರಿಗಣಿಸಲಾಗಿದೆ. ಒಡಿಎಫ್‌ ಪ್ಲಸ್ ಪ್ಲಸ್ ಸ್ಥಾನವುಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಸುಸ್ಥಿರತೆ ಜತೆಗೆ ಮಲವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡು ವುದನ್ನು ಒಳಗೊಂಡಿದೆ. ಸಚಿವಾಲಯದ ಪ್ರಕಾರ 819 ನಗರಗಳು ಒಡಿಎಫ್ ಪ್ಲಸ್ ಹಾಗೂ 312 ನಗರ ಗಳು ಒಡಿಎಫ್ ಪ್ಲಸ್‌ ಪ್ಲಸ್ ಪ್ರಮಾಣಪತ್ರ ಪಡೆದಿವೆ.

ತ್ಯಾಜ್ಯಮುಕ್ತ ನಗರಗಳಿಗೆ ಸ್ಟಾರ್ ರೇಟಿಂಗ್ ಆಧಾರದಲ್ಲಿ 1,000 ಅಂಕಗಳನ್ನು ನಿಗದಿ ಮಾಡಲಾಗಿತ್ತು. ಇದಕ್ಕೆ 12 ಮಾನದಂಡಗಳನ್ನು ಗೊತ್ತುಪಡಿಸಲಾಗಿತ್ತು. ಮನೆಮನೆಯಿಂದ ಕಸ ಸಂಗ್ರಹ, ಚರಂಡಿ ಹಾಗೂ ಜಲ ಮೂಲಗಳ ಸ್ವಚ್ಛತೆ, ಕಟ್ಟಡ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿ ಮೊದಲಾದ ಅಂಶಗಳನ್ನು ಇದು ಆಧರಿಸಿದೆ. ಸ್ಟಾರ್ ರೇಟಿಂಗ್ ಅನ್ನು ನಗರಗಳೇ ಘೋಷಿಸಿಕೊಳ್ಳಬಹುದು. ಸ್ವತಂತ್ರ ಸಂಸ್ಥೆಯ ಪರಿಶೀಲನೆಯ ಬಳಿಕ ಸಚಿವಾಲಯವು ಸಮೀಕ್ಷೆಯ ವೇಳೆ ಅಂಕಗಳನ್ನು ನೀಡಿದೆ. ಸಚಿವಾಲಯದ ಪ್ರಕಾರ 1,422 ನಗರಗಳು ತ್ಯಾಜ್ಯಮುಕ್ತ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿವೆ. ಈ ಪೈಕಿ 1 ಸ್ಟಾರ್‌ಗೆ 504, 3 ಸ್ಟಾರ್‌ಗೆ 213, 5 ಸ್ಟಾರ್‌ಗೆ 508, 7 ಸ್ಟಾರ್‌ಗೆ 197 ನಗರಗಳು ಅರ್ಜಿ ಸಲ್ಲಿಸಿದ್ದವು.

ಜಗತ್ತಿನ ಅತಿ ದೊಡ್ಡ ಸ್ವಚ್ಛತಾ ಸಮೀಕ್ಷೆ
ಸ್ವಚ್ಛ ಸರ್ವೇಕ್ಷಣೆಯು ಜಗತ್ತಿನ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 2016ರಲ್ಲಿ ಆರಂಭಗೊಂಡಾಗ 37 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2017ರಲ್ಲಿ ಎರಡನೇ ಸಮೀಕ್ಷೆಯಲ್ಲಿ ನಗರಗಳ ಸಂಖ್ಯೆ ಹೆಚ್ಚಿತು. 1 ಲಕ್ಷ ಅಥವಾ ಹೆಚ್ಚಿನ ಜನಸಂಖ್ಯೆಯ 434 ನಗರಗಳಿಗೆ ಅದು ಹಿಗ್ಗಿತು. 2018ರಲ್ಲಿ 4,203 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 10 ಪಟ್ಟು ವಿಸ್ತರಿಸಿತ್ತು. 4ನೇ ವರ್ಷದಲ್ಲಿ 4,237 ಪಟ್ಟಣ ಮತ್ತು ನಗರಗಳು ಹಾಗೂ 62 ಕಂಟೋನ್ಮೆಂಟ್ ಬೋರ್ಡ್‌ಗಳೂ ಸೇರಿದಂತೆ 40 ಕೋಟಿ ಜನರನ್ನು ಒಳಗೊಂಡಿತ್ತು.

2016ರಲ್ಲಿ ಮೈಸೂರಿಗೆ ಭಾರತದ ಸ್ವಚ್ಛ ನಗರಿ ಎಂಬ ಗರಿ ಮೂಡಿತು. 2017, 2018, 2019 ಮತ್ತು 2020ರಲ್ಲಿ ಮಧ್ಯಪ್ರದೇಶದ ಇಂದೋರ್ ನಗರವು ಸತತವಾಗಿ ಮೊದಲ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಸರ್ವೇಕ್ಷಣಾ ಲೀಗ್ 2020ರ ಮೂರು ತ್ರೈಮಾಸಿಕಗಳಲ್ಲೂ ಅದು ಅಗ್ರಸ್ಥಾನ ಕಾಯ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT