ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಗಡಿಕೇಶ್ವಾರ- ಭೂಕಂಪನದ ಗಡಿಬಿಡಿ

ಪದೇ ಪದೇ ಕಂಪಿಸುತ್ತಿರುವ ಭೂಮಿ; ಊರವರಿಗೆ ಬಯಲೇ ಹಾಸಿಗೆ, ಆಕಾಶವೇ ಹೊದಿಕೆ
Last Updated 12 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಲಬುರಗಿ ಜಿಲ್ಲೆಯಚಿಂಚೋಳಿ, ಕಾಳಗಿ, ಸೇಡಂ ತಾಲ್ಲೂಕುಗಳ 25ಕ್ಕೂ ಹೆಚ್ಚು ಗ್ರಾಮಸ್ಥರಲ್ಲಿ ನಿಂತ ನೆಲವೇ ಕುಸಿಯುತ್ತಿರುವ ಆತಂಕ ಮನೆಮಾಡಿದೆ. ದಸರೆಯ ಹಬ್ಬದ ಈ ಸಮಯದಲ್ಲಿ ಸಂಭ್ರಮದಲ್ಲಿ ಇರಬೇಕಾದ ಅವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಮನೆ ಬಿಟ್ಟು ಅವರೆಲ್ಲ ರಸ್ತೆಯಲ್ಲಿ ಒಲೆ ಹೊತ್ತಿಸಿ ಅಡುಗೆ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ.

ಗಡಿಕೇಶ್ವಾರ ಸೇರಿದಂತೆ ಈ ಭಾಗದಲ್ಲಿ ಪದೇಪದೇ ಭೂಕಂಪನ ಆಗುತ್ತಿದ್ದರೂ, ತಮಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಆಡಳಿತ ಈವರೆಗೂ ಮಾಡಿಲ್ಲ. ಶಾಶ್ವತ ಪರಿಹಾರ ಹೋಗಲಿ, ಜೀವ ಉಳಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಿ ಎಂದರೆ ಅದಕ್ಕೂ ಸ್ಪಂದಿಸಿಲ್ಲ ಎಂಬುದು ಈ ಗ್ರಾಮಗಳ ಬಹುತೇಕರ ಆರೋಪ.

ಜನರು ಹೆದ್ದಾರಿ ತಡೆದುಸೋಮವಾರ ಪ್ರತಿಭಟನೆ ನಡೆಸಿದರೂ ಯಾರೂ ಸ್ಥಳಕ್ಕೆ ಬರಲಿಲ್ಲ. ಮಂಗಳವಾರ ಬಹುಪಾಲು ಜನ ಊರು ಬಿಡಲು ಮುಂದಾದ ವಿಷಯ ತಿಳಿದು, ಜಿಲ್ಲಾಧಿಕಾರಿ ಗಡಿಕೇಶ್ವಾರ ಸೇರಿದಂತೆ ಕೆಲ ಗ್ರಾಮಗಳಿಗೆ ಭೇಟಿ ನೀಡಿದರು. ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಮಂಗಳವಾರ ರಾತ್ರಿ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಹಳೆಯ ಮನೆಗಳೇ ಈ ಊರುಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಬಹುಪಾಲು ಮನೆಗಳು ಕಲ್ಲಿನ ಗೋಡೆಯಿಂದ ಕಟ್ಟಿದ ಎರಡಂತಸ್ತಿನವು. ಮತ್ತೆ ಕೆಲವು ಮನೆಗಳಿಗೆ ಪರಸಿಯನ್ನೇ ತಾರಸಿಯಾಗಿ ಹಾಕಲಾಗಿದೆ. ಈಗಾಗಲೇ ಸಂಭವಿಸಿದ ಭೂಕಂಪನದ ಕಾರಣ ಕೆಲ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಕೆಲ ಮನೆಗಳು ಭಾಗಶಃ ಬಿದ್ದಿವೆ. ಹೀಗಾಗಿ, ಗ್ರಾಮಸ್ಥರಿಗೆ ಆಕಾಶವೇ ಹೊದಿಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಪರಿಹಾರ ಮಾರ್ಗಗಳೇನು?: ಭೂಕಂಪವು ಎರಡು ರೀತಿ ಸಂಭವಿಸುತ್ತದೆ. ಭೂಮಿಯು ಮೇಲಿಂದ ಕೆಳಗೆ ಅಲ್ಲಾಡುವುದು ಮತ್ತು ಅಡ್ಡಡ್ಡವಾಗಿ ತೂಗುವುದು. ಮೇಲಿಂದ ಕೆಳಗೆ ಅಲ್ಲಾಡಿದಾಗ ಹೆಚ್ಚು ಅಪಾಯ ಆಗುವ ಸಂಭವವಿರುತ್ತದೆ. ಇದರಿಂದ ಸಂರಕ್ಷಿಸಿಕೊಳ್ಳಲು ಭೂವಿಜ್ಞಾನಿಗಳು ಎರಡು ರೀತಿಯ ಪರಿಹಾರಗಳನ್ನು ಸೂಚಿಸುತ್ತಾರೆ.

‘ಭೂಕಂಪಕ್ಕೆ ಜಗ್ಗದಂತೆ ಮನೆಗಳನ್ನು ವಿನ್ಯಾಸಗೊಳಿಸಿಕೊಳ್ಳಬೇಕು ಅಥವಾ ಹಳೆ ಮನೆಗಳನ್ನು ಗಟ್ಟಿಗೊಳಿಸಬೇಕು. ಇದನ್ನು ರೆಟ್ರೋಫಿಟ್ಟಿಂಗ್‌ (Retrofitting) ಎನ್ನುತ್ತಾರೆ. ಮನೆ ಮುಂದೆ ಹಗುರ ವಸ್ತುಗಳಿಂದ ಶೆಡ್‌ ನಿರ್ಮಿಸಿಕೊಳ್ಳುವುದರಿಂದ ಕಬ್ಬಿಣ, ಗಟ್ಟಿಯಾದ ಮರದ ತೊಲೆಗಳಿಂದ ಅಪಾಯ ಆಗುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.

ಭೂಮಿ ನಡುಗಿದಾಗ ಮನೆಯಲ್ಲಿ ಟೇಬಲ್‌, ಮಂಚದಡಿ ಅಡಗಿಕೊಳ್ಳುವುದು ಅಥವಾ ಸುರಕ್ಷಿತ ಸ್ಥಳಕ್ಕೆ ಜಿಗಿಯುವುದು, ಹೊರಗೆ ಓಡುವುದು ತಾತ್ಕಾಲಿಕ ಸಲಹೆಗಳು.

ಇದುದೊಡ್ಡ ಅಪಾಯದ ಮುನ್ಸೂಚನೆಯೇ ಎಂದು ಪ್ರಶ್ನಿಸಿದರೆ, ಪರಿಣತರು ಹೇಳುವುದು ಹೀಗೆ, ‘ಈ ಪ್ರಶ್ನೆಗೆ ನಿಖರ ಉತ್ತರ ನೀಡುವುದು ಕಷ್ಟ’.

ಇಲ್ಲಿ ಪದೇ ಪದೇ ಭೂಕಂಪ ಸಹಜ

ಈ ಭಾಗದಲ್ಲಿ ಹೆಚ್ಚಾಗಿ ಸುಣ್ಣದಕಲ್ಲು ಇರುವ ಕಾರಣ ಪದೇಪದೇ ಭೂಕಂಪನವಾಗುವುದು ಸಹಜ. ಅತಿಯಾದ ಮಳೆ ಹಾಗೂ ಜಲಾಶಯಗಳಲ್ಲಿ ಮಳೆಗಾಲದ ಆರಂಭದಲ್ಲೇ ಹೆಚ್ಚು ನೀರು ಸಂಗ್ರಹವಾದಾಗ ಲಘು ಭೂಕಂಪನಗಳು ಸಂಭವಿಸುತ್ತವೆ. ಸುಮಾರು 20 ವರ್ಷಗಳಿಂದಲೂ ಭೂಕಂಪನ ಹಾಗೂ ಸ್ಫೋಟದ ಶಬ್ದದ ಅನುಭವಗಳು ಆಗುತ್ತಲೇ ಇವೆ. ಅದಕ್ಕಿಂತ ಹಿಂದೆಯೂ ಈ ಅನುಭವ ಪಡೆದವರು ನನಗೆ ಮಾಹಿತಿ ನೀಡಿದ್ದಾರೆ. ಭೂತಳದಲ್ಲಿನ ಬೃಹತ್‌ ಬಂಡೆಗಳ ಘರ್ಷಣೆಯಿಂದ ಭೂಕಂಪ ಸಂಭವಿಸುತ್ತದೆ ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸುತ್ತೇವೆ. ಆದರೆ, ಸುಣ್ಣದ ಕಲ್ಲಿನಂಥ ಮೃದು ಪ್ರದೇಶದಲ್ಲಿ ಭೂತಳ ಒತ್ತಡ ಹೆಚ್ಚಿದಾಗ ಮೇಲಿಂದಮೇಲೆ ನೆಲವು ತೂಗಿದಂತಾಗುತ್ತದೆ.

ಹತ್ತಿರದಲ್ಲಿರುವ ಜಲಾಶಯ, ಹೊಳೆ ಅಥವಾ ಅಣೆಕಟ್ಟೆಗಳಲ್ಲಿ ಜಲರಾಶಿ ವಿಪರೀತವಾದಾಗ ಅದರ ವ್ಯಾಪ್ತಿಯಲ್ಲಿ ಭೂಮಿ ನಡುಗುತ್ತದೆ. ಇದೇ ಕಾರಣಕ್ಕೆ ಕೊಯ್ನಾ ಜಲಾಶಯದ ಸುತ್ತಲಿನ ಪ್ರದೇಶದಲ್ಲೂ ಚಿಂಚೋಳಿ ಮಾದರಿಯಲ್ಲೇ ಭೂಮಿ ಕಂಪಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆಯಾದಾಗಲೂ ಈ ರೀತಿ ಪ್ರತಿಕ್ರಿಯಿಸಿ ತನ್ನ ‘ಸ್ಥಿತಿ’ ಹೇಳಿಕೊಳ್ಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಕೂಡ ಅತಿವೃಷ್ಟಿ ಆದ ವರ್ಷ ಭೂಮಿ ನಡುಗುತ್ತದೆ. ಇದು ಕಾಕತಾಳೀಯವಲ್ಲ. ಇದಕ್ಕೆ ನಿಖರ ಸಂಬಂಧವಿದೆ.

ದಶಕದ ಹಿಂದೆ ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲೂ ಭೂಕಂಪನದ ಸಂಶೋಧನೆಗಳು ನಡೆದವು. ರಿಕ್ಟರ್‌ ಮಾಪಕದಲ್ಲಿ 2.1ರಿಂದ 3.9ರವರೆಗೆ ಕಂಪನಗಳು ದಾಖಲಾದ ಉದಾಹರಣೆಗಳು ಸಾಕಷ್ಟು ಬಾರಿ ಸಿಕ್ಕಿವೆ. ಭೂಗರ್ಭ ಶಾಸ್ತ್ರಜ್ಞರು, ತಂತ್ರಜ್ಞರು, ಜಲತಜ್ಞರನ್ನು ಸೇರಿಸಿಕೊಂಡು ಅಧ್ಯಯನ ಮಾಡಿ ಇದಕ್ಕೆ ಕಾರಣ ಏನು ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದೆವು. ಆಗ ಅವರಲ್ಲಿನ ಭಯ ದೂರಾಯಿತು. ಈಗ ಆ ಪ್ರದೇಶದಲ್ಲಿ ನೆಲ ನಡುಗುವುದು ನಿಂತಿದೆ. ಮಳೆ ಕಡಿಮೆಯಾಗಿದ್ದೇ ಅದಕ್ಕೆ ಕಾರಣ.

–ಡಾ.ವಿ.ಎಸ್‌. ಪ್ರಕಾಶ,ಸಂಸ್ಥಾಪಕ, ವಿಶೇಷ ನಿರ್ದೇಶಕ (ನಿವೃತ್ತ) ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ಉಸ್ತುವಾರಿ ಕೇಂದ್ರ

ಕೊಟ್ಟಿಗೆಯಲ್ಲಿ ಬಾಣಂತಿ, ಹಸುಗೂಸು

ಭೂಕಂಪನದಿಂದ ಸಂಕಷ್ಟಕ್ಕೆ ಸಿಲುಕಿರುವ ಗಡಿಕೇಶ್ವಾರದ ಬಾಣಂತಿ ಶರಣಬಸಮ್ಮ ಅವರ ಸ್ಥಿತಿ ಯಾರಿಗೂ ಬೇಡ ಎನ್ನುವಂತಿದೆ.

ಕೇವಲ 10 ದಿನಗಳ ಹಿಂದೆ ಅವರಿಗೆ ಹೆರಿಗೆಯಾಗಿದೆ. ಬಾಣಂತನಕ್ಕೆ ತವರಿಗೆ ಬಂದ ಅವರನ್ನು ಭೂಕಂಪನ ಚಿಂತೆಗೀಡು ಮಾಡಿದೆ. ತವರು ಮನೆಯ ದನದ ಕೊಟ್ಟಿಗೆ ತುಸು ಗಟ್ಟಿಯಾಗಿರುವ ಕಾರಣ ಅಲ್ಲಿಯೇ ಬಾಣಂತಿ ತಮ್ಮ ಹಸುಳೆಯನ್ನು ಎದೆಗವುಚಿಕೊಂಡು ದಿನ ದೂಡುತ್ತಿದ್ದಾರೆ.‌ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ, ಬಿಸಿನೀರು, ಮಗುವಿನ ಆರೈಕೆಗೆ ಬೇಕಾದ ಯಾವುದೇ ಸವಲತ್ತುಗಳು ಅವರಿಗೆ ಸಿಗುತ್ತಿಲ್ಲ.

‘ಪ್ರಜಾವಾಣಿ’ ತಂಡ ಈ ಗ್ರಾಮಕ್ಕೆ ಭೇಟಿ ನೀಡಿದಾಗ, ಶರಣಬಸಮ್ಮ ತಮ್ಮ ಗೋಳು ತೋಡಿಕೊಂಡರು. ‘ಭೂಮಿ ನಡುಗಿದಾಗ, ಶಬ್ದ ಬಂದಾಗ ಎಲ್ಲರೂ ಎದ್ದು ಓಡುತ್ತಾರೆ. ನನಗೆ ಅದೂ ಸಾಧ್ಯವಿಲ್ಲ. ನನ್ನ ಆರೈಕೆ ಹೇಗಾದರೂ ಆಗಲಿ; ಆದರೆ, ಮಗುವಿಗೆ ಹಾಲುಣಿಸುವುದಕ್ಕೂ ಹೆದರುವಂತಾಗಿದೆ. ಇನ್ನೂ ಎಷ್ಟು ದಿನ ಹೀಗೇ ಬದುಕಬೇಕೋ ಏನೋ’ ಎಂದು ಕಣ್ಣೀರು ಹಾಕಿದರು.

ಶರಣಬಸಮ್ಮ ಅವರಂತೆಯೇ ಇನ್ನೂ ಹಲವರು ಬಾಣಂತಿಯರು, ಗರ್ಭಿಣಿಯರು, ವೃದ್ಧರು, ಮಕ್ಕಳು ಈ ಊರಲ್ಲಿದ್ದಾರೆ. ಹಗಲಿನಲ್ಲಿ ಮನೆಯ ಹೊರಗೆ ಓಡಾಡಿದರೆ, ರಾತ್ರಿ ರಸ್ತೆಯಲ್ಲೇ ಮಲಗಬೇಕು. ಹುಳ–ಹುಪ್ಪಟಿ, ಸೊಳ್ಳೆ, ವಿಷಜಂತುಗಳ ಭಯದಲ್ಲೇ ತೂಕಡಿಸಬೇಕು.

ಸುಣ್ಣದ ಶಿಲೆಯ ರಾಸಾಯನಿಕ ಪ್ರಕ್ರಿಯೆ

ಮಡಕೆಯೊಂದರಲ್ಲಿ ಹಾಕಿದ ಸುಣ್ಣಕ್ಕೆ ನೀರು ಸುರಿದಾಗ ಅದರಲ್ಲಾಗುವ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಬಹುದು. ಇದ್ದಕ್ಕಿದ್ದ ಹಾಗೆ ಸುಣ್ಣವು ಬುಸ್... ಎಂಬ ಶಬ್ದ ಮಾಡುತ್ತದೆ. ನೊರೆ ಹಾಗೂ ಹೊಗೆ ಬಿಡುತ್ತದೆ. ಚಿಂಚೋಳಿ ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ಸಂಭವಿಸುವ ಭೂಕಂಪನ ಹಾಗೂ ಸ್ಫೋಟದ ಶಬ್ದವೂ ಇದೇ ರೀತಿಯ ರಾಸಾಯನಿಕ ಪ್ರಕ್ರಿಯೆ ಎನ್ನುತ್ತಾರೆ ಈ ಪ್ರದೇಶದಲ್ಲಿ ಅಧ್ಯಯನ ಮಾಡಿದ ಭೂಗರ್ಭ ಶಾಸ್ತ್ರಜ್ಞರು.

ಇಲ್ಲಿನ ಭೂಮಿ ಆಳದಲ್ಲಿ ಕೇವಲ 40 ಅಡಿಯವರೆಗೆ ಕರಿಕಲ್ಲು ಇದೆ. ಅದರ ನಂತರ ಸುಣ್ಣದ ಕಲ್ಲು ಆರಂಭವಾಗುತ್ತದೆ. ಬೋರ್‌ವೆಲ್‌ ಕೊರೆಯಿಸಿದ ಬಹುಪಾಲು ಸಂದರ್ಭದಲ್ಲೂ ಇದು ದೃಢಪಟ್ಟಿದೆ. ಧಾರಾಕಾರ ಮಳೆಯಾದಾಗ ನೀರು ಭೂತಳಕ್ಕೆ ಇಳಿದು ಸುಣ್ಣದಶಿಲೆಯನ್ನು ಸೇರುತ್ತದೆ. ಆಗ ಸ್ಫೋಟದ ಸದ್ದು, ನೆಲ ನಡುಗುವ ಪ್ರಕ್ರಿಯೆಗಳು ನಡೆಯುತ್ತವೆ ಎನ್ನುವುದು ಅವರ ವಿವರಣೆ.

ಭೂಗರ್ಭಶಾಸ್ತ್ರಜ್ಞರ ನೆರವು ಕೋರಿದ ಕರ್ನಾಟಕ

ಕಲಬುರಗಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ಕೆಲ ತಿಂಗಳಿಂದ ಆಗುತ್ತಿರುವ ಭೂಕಂಪನದ ಬಗ್ಗೆ ಸಮರ್ಪಕ ಮಾಹಿತಿ ಹಾಗೂ ಜಿಲ್ಲೆಗಳ ಅಧಿಕಾರಿಗಳಿಗೆ ತರಬೇತಿ ನೀಡಲು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ (ಎನ್‌ಜಿಆರ್‌ಐ) ವಿಜ್ಞಾನಿಗಳ ನೆರವು ಕೋರಲಾಗಿದೆ.

ಈ ಕುರಿತು ಪತ್ರ ಬರೆದಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಡಾ. ಮನೋಜ್ ರಾಜನ್ ಅವರು, ಈ ಜಿಲ್ಲೆಗಳಲ್ಲಿ ಆಗಿಂದಾಗ ಭೂಕಂಪನವಾಗುತ್ತಿರುವುದರಿಂದ ಜನರು ಭೀತಿಗೊಳಗಾಗಿದ್ದಾರೆ. ಜಿಲ್ಲೆಯ ಅಧಿಕಾರಿಗಳಿಗೂ ಈ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಗೊತ್ತಾಗುತ್ತಿಲ್ಲ. ಆದ್ದರಿಂದ ಈ ಸ್ಥಳಗಳಿಗೆ ಭೂಗರ್ಭಶಾಸ್ತ್ರಜ್ಞರ ತಂಡವೊಂದನ್ನು ಕಳುಹಿಸಿಕೊಡಬೇಕು. ಅವರು ಇದಕ್ಕೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

‘ಬಿರುಕುಬಿಟ್ಟ ಮನೆಗಳ ಸರ್ವೆ’

ಗಡಿಕೇಶ್ವಾರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದಿಂದಾಗಿ ಬಿರುಕು ಬಿಟ್ಟ ಮನೆಗಳ ಸಮೀಕ್ಷೆ ಆರಂಭಿಸಲಾಗಿದೆ.ಇಂತಹ ಸಂದರ್ಭಗಳಲ್ಲಿ ಗಾಬರಿಯಾಗದಂತೆ ಜನರಲ್ಲಿ ಧೈರ್ಯ ತುಂಬಲಾಗುವುದು. ಮುಂದೆ ಇಂತಹ ಭೂಕಂಪನಗಳು ಸಂಭವಿಸಿದಾಗ ಅದನ್ನು ಎದುರಿಸುವ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು. ಜನ ಗಾಬರಿಯಾಗಿದ್ದರಿಂದ ಊರು ಬಿಡುತ್ತಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ತಡೆಯಲು ಆಗುವುದಿಲ್ಲ. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಭೂಗರ್ಭಶಾಸ್ತ್ರಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಲಿದೆ.

ವಿ.ವಿ. ಜ್ಯೋತ್ಸ್ನಾ,ಜಿಲ್ಲಾಧಿಕಾರಿ, ಕಲಬುರಗಿ

ಸಿದ್ದರಾಮಯ್ಯಗೂ ಅನುಭವ

ಸಿದ್ದರಾಮಯ್ಯ ಅವರು ಮಂಗಳವಾರ ರಾತ್ರಿ 8 ಗಂಟೆಯ ಸುಮಾರು ಗಡಿಕೇಶ್ವಾರ ಗ್ರಾಮದಲ್ಲಿ ಸಭೆ ನಡೆಸುತ್ತಿದ್ದ ವೇಳೆಯೇ ಭೂಮಿಯಿಂದ ಶಬ್ದ ಕೇಳಿ ಬಂತು. ಅಲ್ಲಿಂದಲೇ ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, ಈ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

‘ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಜಿಲ್ಲಾಧಿಕಾರಿಯೇ ಮಾಡಬೇಕಿತ್ತು. ಅವರು ಒಂದು ಬಾರಿಯೂ ಈ ಗ್ರಾಮಕ್ಕೆ ಬಂದಿಲ್ಲ. ನಾನು ಬರುತ್ತೇನೆ ಎಂದು ತಿಳಿದ ನಂತರ ಇಲ್ಲಿಗೆ ಭೇಟಿ ನೀಡಿದ್ದಾರೆ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.

***

ನಾವು ಎಂದೂ ಇಂತಹ ಪರಿಸ್ಥಿತಿ ಎದುರಿಸಿಲ್ಲ. ಆಗಾಗ, ಭೂಕಂಪನವಾಗುತ್ತಿತ್ತು. ಆದರೆ, ಈ ಬಾರಿ ವಿಪರೀತವಾಗಿದೆ. ಊರಿಗೆ ಊರೇ ಖಾಲಿಯಾಗುತ್ತಿದೆ. ಮನೆಯ ಗೋಡೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಆತಂಕದಲ್ಲೇ ಬದುಕುವಂತಾಗಿದೆ

- ಮೆಹಬೂಬಸಾಬ್ ಪಿಂಜಾರ, ಗಡಿಕೇಶ್ವಾರ ಮುಖಂಡ

***

ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಲವು ವರ್ಷಗಳಿಂದಲೂ ಭೂಮಿಯಿಂದ ಸ್ಫೋಟದ ಸದ್ದು ಕೇಳುತ್ತಲೇ ಇದೆ. ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ಕೈಗೊಳ್ಳಬೇಕು ಎಂದು ಕೇಳುತ್ತಲೇ ಇದ್ದೇವೆ. ಈಗ ಶಬ್ದದೊಂದಿಗೆ ಭೂಮಿಯೂ ನಡುಗುತ್ತಿದೆ.‌ ಅನಾಹುತ ಸಂಭವಿಸುವ ಮುನ್ನ ಪುನರ್ವಸತಿ ಕಲ್ಪಿಸಬೇಕು

- ಪ್ರಕಾಶ ರಂಗನೂರು, ಗ್ರಾಮದ ಸಾಮಾಜಿಕ ಕಾರ್ಯಕರ್ತ

***
ನಮ್ಮದು 15 ಜನರು ಇರುವ ಅವಿಭಕ್ತ ಕುಟುಂಬ. ಭೂಕಂಪನದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟು ಕಲ್ಲುಗಳು ಬೀಳುತ್ತಿವೆ. ಇದರಿಂದ ದನಗಳನ್ನು ಕಪನೂರ ಗ್ರಾಮಕ್ಕೆ ಕಳುಹಿಸಿ ನಾವು ಎಲ್ಲರೂ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದಲ್ಲಿರುವ ಬಂಧುಗಳ ಮನೆಗೆ ತೆರಳುತ್ತಿದ್ದೇವೆ

- ಲಲಿತಾ ದೇಸಾಯಿ, ಗ್ರಾಮ ಪಂಚಾಯಿತಿ ಸದಸ್ಯೆ, ಗಡಿಕೇಶ್ವಾರ

***

ಮನೆ ಬಿಟ್ಟು ಒಂದು ವಾರದಿಂದ ಗಿಡಮರಗಳ ಕೆಳಗೆ ಮಲಗುತ್ತಿದ್ದೇವೆ. ಸರ್ಕಾರಕ್ಕೆ ನಮ್ಮ ಕೂಗು ಕೇಳಿಸುತ್ತಿಲ್ಲ. ಎಷ್ಟುಬಾರಿ ಇದು ದೊಡ್ಡ ಸುದ್ದಿಯಾದರೂ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ. ನಾವು ಜೀವಂತ ಇರುವಾಗಲೇ ನೆರವಿಗೆ ಬಂದರೆ ಸಾಕು

- ಹಸೀನಾಬಿ, ಗೃಹಿಣಿ, ಗಡಿಕೇಶ್ವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT