ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಹಿಮಾಲಯ ತಪ್ಪಲಿನ ಜೋಶಿಮಠ ಪಟ್ಟಣಕ್ಕೆ ಕುಸಿತದ ಭೀತಿ

Last Updated 5 ಜನವರಿ 2023, 19:45 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದ ಜೋಶಿಮಠ ಎಂಬ ಒಂದಿಡೀ ಊರು ಕುಸಿದು ಬೀಳುವ ಭೀತಿ ಎದುರಾಗಿದೆ. ಇಲ್ಲಿನ ಸುಮಾರು 20 ಸಾವಿರ ನಿವಾಸಿಗಳು ಆತಂಕದಿಂದ ನಡುಗುತ್ತಿದ್ದಾರೆ. ಪವಿತ್ರ ಯಾತ್ರಾಸ್ಥಳ ಬದರೀನಾಥದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಜೋಶಿಮಠ ನಾಮಾವಶೇಷಗೊಳ್ಳಲಿದೆ ಎಂದೇ ಜನರು ಭಾವಿಸಿದ್ದಾರೆ. ಬೆಟ್ಟ ಗುಡ್ಡಗಳಿಂದ ಕೂಡಿದ ಉತ್ತರಾಖಂಡ ರಾಜ್ಯವೇ ಅತ್ಯಂತ ಸೂಕ್ಷ್ಮ ಪ್ರದೇಶ. ಅದರಲ್ಲಿಯೂ ಜೋಶಿಮಠವು ಪಾರಿಸರಿಕವಾಗಿ ಇನ್ನೂ ಸೂಕ್ಷ್ಮ. ಜೋಶಿಮಠದ ಹಲವು ರಸ್ತೆಗಳು ಮತ್ತು 500ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಮೂಡಿದೆ.

ಇದಕ್ಕೆ ಕಾರಣವೇನು ಎಂಬುದು ಬಹಳ ಸ್ಪಷ್ಟ. ಸೂಕ್ಷ್ಮವಾದ ಬೆಟ್ಟ ಪ್ರದೇಶಗಳಲ್ಲಿ ಬೇಕಾಬಿಟ್ಟಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದೇ ಇದಕ್ಕೆ ಕಾರಣ. ಮಣ್ಣಿನ ಅಡಿಯಿಂದ ನೀರು ಜಿನುಗುತ್ತಿದೆ, ಮೇಲ್ಮಣ್ಣು ಸವೆದು ಹೋಗಿದೆ. ಸ್ಥಳೀಯ ತೊರೆಗಳ ಸಹಜ ಹರಿವಿಗೆ ಮನುಷ್ಯ ನಿರ್ಮಿಸಿರುವ ರಚನೆಗಳು ಅಡ್ಡಿಯಾಗಿವೆ. ಹಾಗಾಗಿ, ತೊರೆಗಳು ಆಗಾಗ ದಿಕ್ಕು ಬದಲಿಸುತ್ತಿವೆ. ಧೌಲಿಗಂಗಾ ಮತ್ತು ಅಲಕನಂದಾ ನದಿಗಳ ಸಂಗಮ ಸ್ಥಾನವಾದ ವಿಷ್ಣುಪ್ರಯಾಗದಿಂದ ಆಗ್ನೇಯಕ್ಕಿರುವ ಇಳಿಜಾರಿನಲ್ಲಿ ಈ ಸಣ್ಣ ಪ‍ಟ್ಟಣ ಇದೆ.

ಈ ಪಟ್ಟಣದಲ್ಲಿ ಮಣ್ಣು ಕುಸಿಯುವುದು ಇದು ಮೊದಲೇನೂ ಅಲ್ಲ. ಸುಮಾರು 50 ವರ್ಷಗಳ ಹಿಂದೆಯೇ ಇದು ಜನರ ಅರಿವಿಗೆ ಬಂದಿತ್ತು. 1976ರಲ್ಲಿ ಈ ಕುರಿತು ಅಧ್ಯಯನ ನಡೆಸಲು ಮಿಶ್ರಾ ಸಮಿತಿಯನ್ನು ರಾಜ್ಯ ಸರ್ಕಾರವು ನೇಮಿಸಿತ್ತು. ‘ಇಲ್ಲಿನ ಮರಗಳನ್ನು ಮಕ್ಕಳ ರೀತಿಯಲ್ಲಿ ಪೊರೆಯಬೇಕು. ಇಲ್ಲಿನ ಬೆಟ್ಟಗಳಲ್ಲಿ ಇರುವ ಶಿಲೆಗಳನ್ನು ಅಗೆತ ಅಥವಾ ಸ್ಫೋಟದ ಮೂಲಕ ತೆಗೆಯಬಾರದು’ ಎಂದು ಸಮಿತಿಯು ಆಗಲೇ ಎಚ್ಚರಿಕೆ ನೀಡಿತ್ತು.

ಆದರೆ ಈ ಎಚ್ಚರಿಕೆಯನ್ನು ಸರ್ಕಾರ ಅಥವಾ ಜನರು ಗಂಭೀರವಾಗಿ ಪರಿಗಣಿಸದ ಪರಿಣಾಮ ಈಗ ಗೋಚರವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮನೆಗಳಲ್ಲಿ ಬಿರುಕು ಮೂಡುವುದು ಹೆಚ್ಚಾಗಿದೆ. ಮನೆಗಳು ಅಸ್ಥಿರವಾಗಿವೆ. ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ತುರ್ತಾಗಿ ಏನನ್ನಾದರೂ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

2022ರ ಆಗಸ್ಟ್‌ನಲ್ಲಿ ಸರ್ಕಾರವು ವಿವಿಧ ಸಂಸ್ಥೆಗಳ ಪ್ರತಿನಿಧಿಗಳಿರುವ ತಂಡವೊಂದನ್ನು ರಚಿಸಿತ್ತು. ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ಸಮೀಕ್ಷೆಯ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿತ್ತು. ಕುಸಿತದ ನಿಖರ ಕಾರಣಗಳನ್ನು ಪತ್ತೆ ಮಾಡುವುದು, ಪರಿಹಾರಗಳನ್ನು ಸೂಚಿಸುವುದು ಈ ತಂಡದ ಜವಾಬ್ದಾರಿಯಾಗಿತ್ತು.

ಯೋಜಿತವಲ್ಲದ ಅಭಿವೃದ್ಧಿ ಚಟುವಟಿಕೆಗಳು, ಆಗಾಗ ನಡೆಯುವ ಭೂಕಂಪನಗಳು, ಮಣ್ಣಿನ ಧಾರಣ ಸಾಮರ್ಥ್ಯದ ಅಂದಾಜು ಮಾಡದೇ ನಿರ್ಮಾಣ ಮತ್ತು ಇತರ ಕಾಮಗಾರಿಗಳು ಭೂಕುಸಿತಕ್ಕೆ ಕಾರಣವಾಗಿವೆ ಎಂದು ತಂಡವು ವರದಿಯಲ್ಲಿ ಹೇಳಿತ್ತು.

ಮಾನವನೇ ಕಾರಣ...

ಉತ್ತರಾಖಂಡದಲ್ಲಿ ಅದರಲ್ಲಿಯೂ ವಿಶೇಷವಾಗಿ ಜೋಶಿಮಠವು ಇರುವ ಚಮೋಲಿ ಜಿಲ್ಲೆಯಲ್ಲಿ ‍ಪ್ರಕೃತಿ ವಿಕೋಪಗಳು ನಿರಂತರವಾಗಿ ನಡೆಯುತ್ತಿವೆ. 2021ರ ಮೇಯಲ್ಲಿ ಚಮೋಲಿ ಜಿಲ್ಲೆಯಲ್ಲಿ ಭೂಕಂಪ ಉಂಟಾಗಿತ್ತು. ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪನದ ಕೇಂದ್ರವು ಜೋಶಿಮಠದ ಸಮೀಪವೇ ಇತ್ತು.

2021ರ ಫೆಬ್ರುವರಿಯಲ್ಲಿ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಹಿಮಕುಸಿತದಲ್ಲಿ 204 ಮಂದಿ ನಾಪತ್ತೆಯಾಗಿದ್ದರು. ಅದರಲ್ಲಿ 83 ಮಂದಿಯ ಮೃತದೇಹ ಮತ್ತು 36 ಮಂದಿಯ ದೇಹದ ಭಾಗಗಳು ಸಿಕ್ಕಿದ್ದವು. ಇಂತಹ ದುರಂತಗಳು ಸಾಮಾನ್ಯ ಎಂಬಂತೆ ಇಲ್ಲಿ ಘಟಿಸುತ್ತಿವೆ.

ಈ ಪ್ರದೇಶದಲ್ಲಿ 15,000ಕ್ಕೂ ಹೆಚ್ಚು ಹಿಮಗಲ್ಲುಗಳಿವೆ. ಪ್ರತಿ ದಶಕದಲ್ಲಿ ಇವು 100ರಿಂದ 200 ಅಡಿಯಷ್ಟು ಕೆಳಕ್ಕೆ ಇಳಿಯುತ್ತಿವೆ. ಈ ಹಿಮಗಲ್ಲುಗಳು ಅತ್ಯಂತ ವೇಗವಾಗಿ ಕರಗುತ್ತಿವೆ. ಹೀಗೆ ಕರಗಿದ ಹಿಮಗಲ್ಲುಗಳು ದಿಢೀರ್‌ ಹಿಮಸರೋವರಗಳನ್ನು ಸೃಷ್ಟಿಸುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳಲಾಗದ ಮಣ್ಣು ಬಿರುಕು ಬಿಡುತ್ತದೆ ಮತ್ತು ದಿಢೀರ್‌ ಪ್ರವಾಹಗಳು ಉಂಟಾಗುತ್ತವೆ. 2021ರಲ್ಲಿ ಧೌಲಿಗಂಗಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಅಲಕನಂದಾ–ಭಾಗೀರಥಿ ನದಿಗೆ ಅಣೆಕಟ್ಟೆ ಕಟ್ಟಲೇಬಾರದು ಎಂದು ಪರಿಣತರ ಸಮಿತಿಯು ಶಿಫಾರಸು ಮಾಡಿತ್ತು. ಹಿಮಗಲ್ಲು ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಿಸಬೇಡಿ ಎಂದು ಸುಪ್ರೀಂ ಕೋರ್ಟ್‌ ಕೂಡ 2014ರಲ್ಲಿ ಹೇಳಿತ್ತು. ಆದರೆ ಸರ್ಕಾರವು ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಣೆಕಟ್ಟೆ ನಿರ್ಮಾಣ ಮಾಡಲಾಯಿತು.

ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥವನ್ನು ಸಂಪರ್ಕಿಸುವ 900 ಕಿ.ಮೀ. ಉದ್ದದ ಹೆದ್ದಾರಿ–ಚಾರ್‌ ಧಾಮ್‌ ಹೆದ್ದಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ₹12,000 ಕೋಟಿ ವೆಚ್ಚದ ಯೋಜನೆ ಇದು. ನಿರ್ಮಾಣ ಕಾಮಗಾರಿಗಳನ್ನು ನಡೆಸಲೇಬಾರದು ಎಂದು ಪರಿಣತರು ಹಲವು ಬಾರಿ ಹೇಳಿದ್ದಾರೆ. ಆದರೆ, ಉತ್ತರಾಖಂಡದಲ್ಲಿ ಉಂಟಾದ ಪ್ರವಾಹಕ್ಕೆ ಈ ಯೋಜನೆ ಕಾರಣ ಅಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು 2021ರಲ್ಲಿ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದರು.

ಶ್ರದ್ಧಾಕೇಂದ್ರ

ಜೋಶಿಮಠವು ಹಿಂದೂಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕವಾದ ಪ್ರಮುಖ ಕೇಂದ್ರಗಳಲ್ಲಿ ಒಂದು. ಇದು ಸಮುದ್ರ ಮಟ್ಟದಿಂದ 6,150 ಅಡಿ ಎತ್ತರದಲ್ಲಿ ಇರುವ ಪ್ರದೇಶ. ಪವಿತ್ರ ಕ್ಷೇತ್ರಗಳಾದ ಬದರೀನಾಥ ಮತ್ತು ಹೇಮಕಂಡಕ್ಕೆ ಜೋಶಿಮಠದ ಮೂಲಕವೇ ಹೋಗಬೇಕು. ಇಲ್ಲಿರುವ ಔಲಿ ಕಣಿವೆಯು ವಿವಿಧ ಹೂಗಿಡಗಳಿಂದ ಕೂಡಿದ ನಯನ ಮನೋಹರ ಸ್ಥಳ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಒಂದು ಇಲ್ಲಿಯೇ ಇದೆ.

ತಪೋವನ ಸುರಂಗದತ್ತ ಸ್ಥಳೀಯರ ಬೊಟ್ಟು...

‘ಜೋಶಿಮಠವು ಕುಸಿಯುತ್ತಿರುವುದರ ಹಿಂದಿನ ಬಹುಮುಖ್ಯ ಕಾರಣವನ್ನು ಸರ್ಕಾರ ಕಡೆಗಣಿಸುತ್ತಿದೆ ಅಥವಾ ಮರೆಮಾಚುತ್ತಿದೆ. ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಸುರಂಗವು ಜೋಶಿಮಠದ ಅಡಿಯಲ್ಲಿಯೇ ಹಾದು ಹೋಗುತ್ತದೆ. ಹೀಗಾಗಿ ಜೋಶಿಮಠದ ತಳಭಾಗವು ಸಡಿಲ ಮತ್ತು ಅಸ್ಥಿರವಾಗುತ್ತಿದೆ. ಆದರೆ ಸರ್ಕಾರವು ಇದನ್ನು ಕಡೆಗಣಿಸುತ್ತಿದೆ‘ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜೋಶಿಮಠದಿಂದ ಆಗ್ನೇಯ ದಿಕ್ಕಿನಲ್ಲಿರುವ ತಪೋವನದ ಕಣಿವೆಯಲ್ಲಿ ಧೌಲಿಗಂಗಾ ನದಿಗೆ ಅಡ್ಡವಾಗಿ ಅಣೆಕಟ್ಟೆ ನಿರ್ಮಿಸಲಾಗುತ್ತಿದೆ. ಇಲ್ಲಿ ಸಂಗ್ರಹವಾದ ನೀರನ್ನು ಸುರಂಗದ ಮೂಲಕ, ಜೋಶಿಮಠದ ನೈರುತ್ಯ ದಿಕ್ಕಿನಲ್ಲಿರುವ ಅಲಕನಂದಾ ನದಿಗೆ ಹರಿಸಲಾಗುತ್ತದೆ. ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಸುರಂಗವು ಜೋಶಿಮಠ ಇರುವ ಪರ್ವತದಲ್ಲಿ 1,782 ಮೀಟರ್‌ ಎತ್ತರದಿಂದ, 1,600 ಮೀಟರ್‌ ಎತ್ತರದವರೆಗೆ ಇಳಿಜಾರಿನ ಸ್ವರೂಪದಲ್ಲಿ ಸಾಗುತ್ತದೆ. ಸುರಂಗದ ನಿರ್ಗಮನ ದ್ವಾರದಲ್ಲಿರುವ ಟರ್ಬೈನ್‌ಗಳ ಮೂಲಕ ನೀರನ್ನು ಹಾಯಿಸಿ ಜಲವಿದ್ಯುತ್ ಉತ್ಪಾದಿಸಲಾಗುತ್ತದೆ.

ಸಮುದ್ರಮಟ್ಟದಿಂದ ಲೆಕ್ಕ ಹಾಕಿದರೆ ತಪೋವನ ಅಣೆಕಟ್ಟು, ಸುರಂಗ ಮತ್ತು ಸುರಂಗದ ನಿರ್ಗಮನ ದ್ವಾರವು ಜೋಶಿಮಠಕ್ಕಿಂತ ಕೆಳಭಾಗದಲ್ಲಿ ಬರುತ್ತದೆ. ಜೋಶಿಮಠ ಮತ್ತು ಔಲಿ ಪ್ರದೇಶಗಳನ್ನು ಹೊತ್ತಿರುವ ಪರ್ವತದ ಮಧ್ಯಭಾಗದಲ್ಲಿ ಈ ಸುರಂಗ ಹಾದು ಹೋಗುತ್ತದೆ.

ಸುರಂಗವು ಪರ್ವತದಲ್ಲಿನ ಹಲವು ಅಂತರ್ಜಲಮೂಲಗಳಿಗೆ ಧಕ್ಕೆಮಾಡಿದೆ. ಹೀಗಾಗಿ ಅಂತರ್ಜಲವು ಕಡಿಮೆಯಾಗಿದೆ. ಅಂತಹ ಪ್ರದೇಶವು ಟೊಳ್ಳಾಗಿದ್ದು, ಇಡೀ ಪರ್ವತವೇ ಅಸ್ಥಿರವಾಗಿದೆ ಎಂದು ಜೋಶಿಮಠ ನಿವಾಸಿಗಳು ಆರೋಪಿಸುತ್ತಾರೆ. ನಿವಾಸಿಗಳ ಆಹ್ವಾನದ ಮೇರೆಗೆ ಇಲ್ಲಿ ಅಧ್ಯಯನ ನಡೆಸಿದ ವಿಜ್ಞಾನಿಗಳು ಈ ವಿಷಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಸ್ತೃತ ಅಧ್ಯಯನದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಅವಶೇಷದ ಮೇಲಿನ ಪಟ್ಟಣ...

ಜೋಶಿಮಠ ಇರುವ ಪ್ರದೇಶವು ಹಲವು ದಶಕಗಳ ಹಿಂದೆ ಈ ಸ್ವರೂಪದಲ್ಲಿ ಇರಲೇ ಇಲ್ಲ. ಬದಲಿಗೆ ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶವಾಗಿತ್ತು. ಜೋಶಿಮಠ ಇರುವ ಪ್ರದೇಶಕ್ಕಿಂತ ಎತ್ತರದಲ್ಲಿದ್ದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಭೂಕುಸಿತದಲ್ಲಿ ಇಳಿಜಾರಿಗೆ ಸರಿದ ಸಡಿಲ ಕಲ್ಲುಗಳು, ಈಗ ಜೋಶಿಮಠ ಇರುವ ಪ್ರದೇಶದ ಮೇಲೆ ಸಂಗ್ರಹವಾಗಿತ್ತು. ಅಂತಹ ಪ್ರದೇಶದ ಮೇಲೆಯೇ ಜೋಶಿಮಠ ಪಟ್ಟಣವು ನಿರ್ಮಾಣವಾಗಿದೆ.

ಪರ್ವತದ ಉತ್ತರದ ಇಳಿಜಾರಿನಲ್ಲಿ ಜೋಶಿಮಠ ಇದೆ. ಜೋಶಿಮಠ ಪಟ್ಟಣ ಪ್ರದೇಶದ ಅಡಿಯಲ್ಲಿ ಸಮುದ್ರಮಟ್ಟದಿಂದ 1,785 ಮೀಟರ್‌ ಎತ್ತರದಿಂದ 1,850 ಮೀಟರ್‌ ಎತ್ತರದವರೆಗೆ ಇಂತಹ ಸಡಿಲ ಅವಶೇಷ ಇದೆ. ಈ ಸಡಿಲ ಮಣ್ಣಿನಿಂದ ಕೇವಲ 25 ಮೀಟರ್‌ ಎತ್ತರದಲ್ಲಿ ಜೋಶಿಮಠ ಪಟ್ಟಣ ಆರಂಭವಾಗುತ್ತದೆ ಎಂಬುದನ್ನು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ರಾಕ್‌ ಮೆಕಾನಿಕ್ಸ್‌’ ಸಿದ್ಧಪಡಿಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೋಶಿಮಠಕ್ಕಿಂತಲೂ ಬಹಳ ಎತ್ತರದಲ್ಲಿರುವ ಔಲಿ ಪ್ರದೇಶದಿಂದ ಧೌಲಿಗಂಗಾ ನದಿ ಕಣಿವೆಗೆ ಒಂಬತ್ತು ತೊರೆಗಳು ಹರಿಯುತ್ತವೆ. ಜೋಶಿಮಠದ ಬಳಿ ಈ ತೊರೆಗಳು ನೆಲದಡಿಯಲ್ಲಿ ಹರಿಯುತ್ತವೆ. ಜತೆಗೆ ಜೋಶಿಮಠದ ಕೊಳಚೆ ನೀರು ಸಹ ಈ ತೊರೆಗಳ ಜತೆಯಲ್ಲಿಯೇ ಧೌಲಿಗಂಗಾ ನದಿ ಸೇರುತ್ತದೆ. ಇವುಗಳ ಕಾರಣದಿಂದ ಮಣ್ಣಿನ ಸವಕಳಿಯಾಗಿದೆ. ಹೀಗಾಗಿ ಜೋಶಿಮಠ ಪಟ್ಟಣದ ಅಡಿಯಲ್ಲಿರುವ ಮಣ್ಣು ಸಡಿಲ ಮತ್ತು ಅಸ್ಥಿರವಾಗಿದೆ. ಹೀಗಾಗಿ ಕುಸಿತ ಸಂಭವಿಸುತ್ತಿದೆ.

ಆಧಾರ: ಪಿಟಿಐ, ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ರಾಕ್‌ ಮೆಕಾನಿಕ್ಸ್‌’ನ ಅಧ್ಯಯನ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT