ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಇ-ರುಪಿ? ಹೇಗೆ ಕೆಲಸ ಮಾಡುತ್ತದೆ? ನಮಗೆ ಹೇಗೆ ಲಾಭ?

Last Updated 3 ಆಗಸ್ಟ್ 2021, 13:06 IST
ಅಕ್ಷರ ಗಾತ್ರ

ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಆಧಾರಿತ ಹಣಕಾಸು ವಹಿವಾಟಿನೊಂದಿಗೆ 'ಡಿಜಿಟಲ್ ಇಂಡಿಯಾ'ಕ್ಕೆ ಈಗಾಗಲೇ ಹೆಚ್ಚು ಒತ್ತು ಸಿಕ್ಕಿದೆ. ಈಗ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನೂ ಜನಸಾಮಾನ್ಯರ ಪಾಲಿಗೆ ಅನುಕೂಲಕರವಾಗಿ ಪರಿವರ್ತಿಸುವ ಉದ್ದೇಶದ ಫಲವೇ ಪ್ರೀಪೇಯ್ಡ್ ಇ-ವೋಚರ್ 'ಇ-ರುಪಿ'. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಆ.2, 2021) ಘೋಷಿಸಿದ್ದಾರೆ.

ಮುಖ್ಯವಾಗಿ ಹಣವೆಂದರೆ ಹೆಣವೂ ಬಾಯಿಬಿಡುವ ಈ ಕಾಲದಲ್ಲಿ, ಹಣದಿಂದಾಗಿಯೇ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಾ, ಸರಕಾರಿ ಸವಲತ್ತುಗಳು ತಲುಪಬೇಕಾದ ಅರ್ಹ ದೀನ-ದಲಿತರನ್ನು ತಲುಪುವ ಬದಲು ಮಧ್ಯವರ್ತಿಗಳ ಜೇಬು ತುಂಬುತ್ತಿದ್ದುದೇ ಹೆಚ್ಚು. ಹೀಗಾಗಿಯೇ ಬಡತನ ನಿವಾರಣೆ ಎಂಬುದು ಬಹುತೇಕ ಘೋಷಣೆಯಾಗಿಯೇ ಉಳಿದಿದ್ದರೆ, ಸರಕಾರ ವ್ಯಯಿಸುವ ಹಣ ಮಧ್ಯೆ ಮಧ್ಯೆ ಸೋರಿಕೆಯಾಗಿ, ಫಲಾನುಭವಿಯನ್ನು ತಲುಪುತ್ತಿರುವುದು ಅತ್ಯಲ್ಪ ಮಾತ್ರ.

ಇಂಥದ್ದನ್ನು ತಪ್ಪಿಸಿ, ಸರಕಾರದ ಯೋಜನೆ ಯಾವ ವ್ಯಕ್ತಿಗೆ ನಿಜವಾಗಿಯೂ ತಲುಪಬೇಕೋ ಆ ವ್ಯಕ್ತಿಗೆ, ಆತನ ಯಾವ ಉದ್ದೇಶಕ್ಕೆ ತಲುಪಬೇಕೋ ಆ ಉದ್ದೇಶಕ್ಕೆ ಮಾತ್ರ ಬಳಕೆಯಾಗುವ ವ್ಯವಸ್ಥೆಯೇ ಇ-ರುಪಿ (e-₹UPI) ಎಂಬ ವರ್ಚುವಲ್ ಪಾವತಿ ವ್ಯವಸ್ಥೆ.

ಏನಿದು ಇ-ರುಪಿ?
ಹಾಗಂತ ಇ-ರುಪಿ (e-₹UPIn- ಇದು ರೂಪಾಯಿ ಚಿಹ್ನೆ ಹಾಗೂ ಯುಪಿಐ - ಇವುಗಳ ಸುಧಾರಿತ ಮಿಶ್ರ ರೂಪ ಎನ್ನಬಹುದು) ಎಂಬುದು ಕ್ರಿಪ್ಟೋಕರೆನ್ಸಿಯಂತಹಾ (ಬಿಟ್ ಕಾಯಿನ್) ಡಿಜಿಟಲ್ ಹಣವೂ ಅಲ್ಲ. ಯುಪಿಐಯಂತೆ ಇದಕ್ಕೆ ಇಂಟರ್ನೆಟ್ ಸಂಪರ್ಕವಾಗಲೀ, ಬ್ಯಾಂಕಿಂಗ್ ಆ್ಯಪ್ ಆಗಲೀ ಬೇಕಾಗಿಯೇ ಇಲ್ಲ. ಮತ್ತು ಸರಕಾರದಿಂದ ಬಂದಿರುವ ಎಲೆಕ್ಟ್ರಾನಿಕ್ ವೋಚರನ್ನು ಬೇರೆಯವರಿಗೆ ನೀಡಲಾಗದು. ಸುಲಭವಾಗಿ ಹೇಳುವುದಾದರೆ, ಇದೊಂದು ಪ್ರೀಪೇಯ್ಡ್ ಮೊಬೈಲ್ ರೀಚಾರ್ಜ್ ವೋಚರ್ ಇದ್ದಂತೆ. ನೀವು ಅದನ್ನು ಮೊಬೈಲ್ ರೀಚಾರ್ಜ್‌ಗೆ ಮಾತ್ರ ಬಳಸಬಹುದಲ್ಲವೇ? ಹಾಗೆ.

ಪ್ರಧಾನ ಮಂತ್ರಿಯವರೇ ಇ-ರುಪಿ ಬಿಡುಗಡೆ ಸಂದರ್ಭ ಹೇಳಿದ ಮಾತು: ಈ ಯೋಜನೆಯನ್ನು ಸದ್ಯಕ್ಕೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಯೋಜನಗಳಿಗಾಗಿ ಆರಂಭಿಸಲಾಗುತ್ತದೆ. ಮುಂದೆ ವಿಸ್ತರಿಸಲಾಗುತ್ತದೆ. ಅಂದರೆ, ಸರಕಾರ ಮಾತ್ರವಲ್ಲ ಯಾವುದೇ ಜನಸೇವಾ ಸಂಘಟನೆಗಳು ದೀನದುರ್ಬಲರ ಶಿಕ್ಷಣಕ್ಕಾಗಿಯೋ ಅಥವಾ ವೈದ್ಯಕೀಯ ವೆಚ್ಚಕ್ಕಾಗಿಯೋ ನೆರವು ಮಾಡಲು ಇಚ್ಛಿಸಿದರೆ, ನೇರ ಹಣ ನೀಡುವುದಿಲ್ಲ. ಯಾರಿಗೆ ಸಂದಾಯವಾಗಬೇಕೋ ಅವರಿಗೆ, ಆ ಉದ್ದೇಶಕ್ಕೆ ಮಾತ್ರವೇ ಸಂದಾಯವಾಗುವ ವ್ಯವಸ್ಥೆ. ಇಲ್ಲಿ ಫಲಾನುಭವಿಗೆ ಇಂಟರ್ನೆಟ್ ಸಂಪರ್ಕ ಬೇಕಿಲ್ಲ. ಆದರೆ, ಮೊಬೈಲ್ ನಂಬರ್ ಇರುವುದು ಅಗತ್ಯ. ಸ್ಮಾರ್ಟ್ ಫೋನ್ ಬೇಕಾಗಿಲ್ಲ, ಬದಲಾಗಿ ಯಾವುದೇ ಫೀಚರ್ ಫೋನ್ ಕೂಡ ಆದೀತು. ಎಸ್ಎಂಎಸ್ ಬರುವಂತಿದ್ದರೆ ಆಯಿತು.

ಇದು ಹೇಗೆ?
ಸರಕಾರದಿಂದ ವ್ಯಕ್ತಿಯೊಬ್ಬನ ವೈದ್ಯಕೀಯ ವೆಚ್ಚಕ್ಕಾಗಿ 10 ಸಾವಿರ ರೂ. ಮಂಜೂರಾಗಿರುತ್ತದೆ ಎಂದಿಟ್ಟುಕೊಳ್ಳೋಣ. ಇದನ್ನು ಫಲಾನುಭವಿಗಳಿಗೆ ನೇರ ನಗದು (DBT) ವ್ಯವಸ್ಥೆ ಮೂಲಕ ನೀಡಬಹುದು. ಆದರೆ, ಅದನ್ನು ಫಲಾನುಭವಿಯು ಬ್ಯಾಂಕಿನಿಂದ ನಗದೀಕರಿಸಬೇಕು, ಜೊತೆಗೆ ಮಂಜೂರು ಮಾಡಿಸಿದವನ ಕೈಗೆ ಒಂದಷ್ಟು ತುರುಕಬೇಕು. ಆಗ ವೈದ್ಯಕೀಯ ಖರ್ಚಿಗೆ ಮಂಜೂರಾದ ಹಣವನ್ನು ಆಸ್ಪತ್ರೆಗೆ ತುಂಬಲು ಅವನಲ್ಲಿ ಉಳಿಯುವುದು ಕಡಿಮೆ ಹಣ. ಪ್ರಧಾನಿಯವರೇ ಉದಾಹರಣೆ ನೀಡಿದಂತೆ, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸರಕಾರ ನೀಡುವ ಹಣವನ್ನು ಇ-ರುಪಿ ಮೂಲಕ ಆಯಾ ಆಸ್ಪತ್ರೆಗಳ ಖಾತೆಗೆ ಸರಕಾರದಿಂದಲೇ ಕಳುಹಿಸಲಾಗುತ್ತದೆ. ಮಧ್ಯವರ್ತಿಯ ಅಗತ್ಯವೇ ಇರುವುದಿಲ್ಲ.

ಇ-ರುಪಿ ಇಲ್ಲಿ ಪ್ರಯೋಜನಕ್ಕೆ ಬರುತ್ತದೆ. ಹೇಗೆಂದರೆ, ಆಸ್ಪತ್ರೆಯ ಬಿಲ್ ಅವನ ಕೈಗೆ ಸಿಗುತ್ತದೆ. ಅದಕ್ಕೆ ಅನುಸಾರವಾಗಿಯೇ ಸರಕಾರದಿಂದ ವೈದ್ಯಕೀಯ ವೆಚ್ಚ ಮಂಜೂರಾಗುತ್ತದೆ. ಮಂಜೂರಾದ ಹಣದ ಮಾಹಿತಿಯುಳ್ಳ ಕ್ಯುಆರ್ ಕೋಡ್ ಅಥವಾ ಎಸ್ಎಂಎಸ್ ಒಂದು ಫಲಾನುಭವಿಯ ಮೊಬೈಲ್ ನಂಬರಿಗೆ ಬರುತ್ತದೆ. ಅದನ್ನಾತ ಆಸ್ಪತ್ರೆಗೆ ತೋರಿಸುತ್ತಾನೆ. ಆಸ್ಪತ್ರೆಯವರು ಅದನ್ನು ತಮ್ಮ ಸಿಸ್ಟಂನಲ್ಲಿ ಸ್ಕ್ಯಾನ್ ಮಾಡಿ ಅಥವಾ ಸಂಬಂಧಿತ ಎಸ್ಎಂಎಸ್‌ನಲ್ಲಿರುವ ಕೋಡ್ ಅನ್ನು ದಾಖಲಿಸಿಕೊಳ್ಳುತ್ತಾರೆ. ಅದಕ್ಕೆ ಫಲಾನುಭವಿಯು ಅನುಮೋದಿಸಬೇಕಿದ್ದರೆ, ಆತನ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (ಏಕಕಾಲಿಕ ಪಾಸ್‌ವರ್ಡ್) ಒಂದನ್ನು ಆತ ಆಸ್ಪತ್ರೆಯವರಿಗೆ ಕೊಡಬೇಕು.

ತಕ್ಷಣವೇ ಸರಕಾರದಿಂದ ಮಂಜೂರಾದ ಹಣದ ಪೂರ್ತಿ ಮೊತ್ತವು ಆಸ್ಪತ್ರೆಯ ಖಾತೆಗೆ ನೇರವಾಗಿ ಸಂದಾಯವಾಗುತ್ತದೆ.

ಮತ್ತೊಂದು ಸುಲಭದ ಉದಾಹರಣೆಯೆಂದರೆ, ಅರ್ಹ ಸಂತ್ರಸ್ತರಿಗೆ ರೇಶನ್ ಕಿಟ್ ಮಂಜೂರಾಗಿರುತ್ತದೆ ಎಂದಿಟ್ಟುಕೊಳ್ಳೋಣ. ಸರಕಾರದಿಂದ ಈ ಫಲಾನುಭವಿಗೆ ಎಸ್ಎಂಎಸ್ ಅಥವಾ ಕ್ಯುಆರ್ ಕೋಡ್ ರೂಪದಲ್ಲಿ ಇ-ರುಪಿ ಬರುತ್ತದೆ. ಆತ ನಿಗದಿತ ಮಳಿಗೆಗೆ ಹೋಗಿ, ಆ ಕೋಡ್ ತೋರಿಸಿ, ರೇಶನ್ ಕಿಟ್ ಪಡೆಯಬಹುದು. ಅಂದರೆ ಆ ಮಳಿಗೆಯಿಂದ ಮೊಬೈಲ್ ಖರೀದಿಗೋ, ವಾಚ್ ಖರೀದಿಗೋ... ಹೀಗೆ ದುರುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಇ-ರುಪಿ ವ್ಯವಸ್ಥೆಯನ್ನು ಸರಕಾರವೇ ಬಳಸಬೇಕೆಂದಿಲ್ಲ. ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳು ಅಥವಾ ಸೇವಾ ಸಂಸ್ಥೆಗಳು ಕೂಡ ಬಳಸಬಹುದು. ಅವರು ನಿರ್ದಿಷ್ಟ ಉದ್ದೇಶಕ್ಕಾಗಿ ನೀಡುವ ಹಣಕಾಸು ಸಹಾಯಗಳು ಕೂಡ ಇ-ರುಪಿ ಎಂಬ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲೇ ನಡೆಯುತ್ತವೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ವಿಮಾ ಸೌಲಭ್ಯಕ್ಕೂ ಇ-ರುಪಿ ಬಳಸಬಹುದು. ಇದು ಸರಕಾರ ಅಥವಾ ಕಂಪನಿಗಳಿಂದ ಫಲಾನುಭವಿಗೆ. ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಮೂಲಕ ಹಣ ಕಳುಹಿಸಿದಂತೆ ಇದಲ್ಲ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗಬಹುದು.

ಹೀಗಾಗಿ, ಭ್ರಷ್ಟಾಚಾರ ನಿಯಂತ್ರಣದಲ್ಲಿ ಈ ಡಿಜಿಟಲ್ ಪಾವತಿಯ ಇ-ರುಪೀ ವ್ಯವಸ್ಥೆಗೆ ಒಳ್ಳೆಯ ಭವಿಷ್ಯವಿದೆ ಎಂದು ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT