ಭಾನುವಾರ, ಆಗಸ್ಟ್ 14, 2022
20 °C

Explainer | ದೇಶದ್ರೋಹ: ಕಾನೂನಿನ ವ್ಯಾಖ್ಯಾನ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕನ್ಹಯ್ಯಾ ಕುಮಾರ್‌ ವಿರುದ್ಧ ದೇಶದ್ರೋಹ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ 2020ರ ಫೆ.28ರಂದು ಅನುಮತಿ ನೀಡಿತ್ತು. ಇದೇ ಹೊತ್ತಿನಲ್ಲೇ ದೇಶದ್ರೋಹದ ಪ್ರಕರಣಗಳು ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಹೀಗಾಗಿ ದೇಶದ್ರೋಹದ ಕುರಿತ ಕಾನೂನಿನ ವ್ಯಾಖ್ಯಾನಗಳ ಕುರಿತು ಇಲ್ಲಿ ವಿವರಿಸಲಾಗಿದೆ.  

***

1857

ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾದ ವರ್ಷವದು. ಅದರ ಮರುವರ್ಷ ಅರ್ಥಾತ್‌ 1858 ರಲ್ಲಿ ಬ್ರಿಟಿಷ್ ಮಾದರಿಯ ನ್ಯಾಯಾಲ ಯಗಳ ಸ್ಥಾಪನೆ ಶುರುವಾದುವು. ಇವುಗಳ ಮೂಲಕವಾಗಿ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದವು. 1860ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾನೂನು ಜಾರಿಗೊಂಡಿತು.

ಬರುಬರುತ್ತಾ, ಬ್ರಿಟಿಷರ ವಿರುದ್ಧ  ಅನೇಕ ಪತ್ರಿಕೆಗಳು ಜನಾಭಿಪ್ರಾಯ ಸಂಗ್ರಹಿಸಲು ಶುರು ಮಾಡಿದವು.  ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಯಿತು.  ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಕೂಡ ಪ್ರಬಲವಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಾಯಿ ಮುಚ್ಚಿಸಲು ಬ್ರಿಟಿಷರು 15 ಬಗೆಯ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದರು. ಅದರಲ್ಲಿ ಒಂದು ‘ದೇಶದ್ರೋಹ’ ಅಪರಾಧ. ಭಾರತೀಯ ದಂಡ ಸಂಹಿತೆಗೆ (ಐಪಿಸಿ) 124(ಎ) ಎಂಬ ಕಲಮನ್ನು ಸೇರಿಸಲಾಯಿತು. ಈ ಕಲಮು ರಾಜದ್ರೋಹ ಅಥವಾ ದೇಶದ್ರೋಹವನ್ನು ವ್ಯಾಖ್ಯಾನಿಸುತ್ತದೆ.

124 (ಎ) ಕಲಮಿನ ಪ್ರಕಾರ, ಯಾವುದೇ ವ್ಯಕ್ತಿಯ ಭಾಷಣ, ಬರಹ ಅಥವಾ ಇತರ ವಿಧಾನಗಳು ಸರ್ಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಬೆಳೆಸುತ್ತವೆಯೋ / ಬೆಳೆಸಲು ಪ್ರಯತ್ನಿಸುತ್ತವೆಯೋ ಅಥವಾ ಅತೃಪ್ತಿಯನ್ನು ಪ್ರಚೋದಿಸುತ್ತವೆಯೋ/ ಪ್ರಚೋದಿಸಲು ಪ್ರಯತ್ನಿಸುತ್ತವೆಯೋ ಅಂತಹ ವ್ಯಕ್ತಿ ವಿರುದ್ಧ ರಾಜದ್ರೋಹ ಅಥವಾ ದೇಶದ್ರೋಹದ ಆಪಾದನೆ ಹೊರಿಸಬಹುದು. ಈ ಅಪರಾಧಕ್ಕೆ ಜೀವಾವಧಿಯವರೆಗೂ ಶಿಕ್ಷೆ ವಿಧಿಸುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಲಾಯಿತು. ಇದೇ ಕಲಮನ್ನು ಬಳಸಿ ಬಾಲಗಂಗಾಧರ ತಿಲಕ್, ಮಹಾತ್ಮಗಾಂಧಿ, ಅನಿಬೆಸೆಂಟ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಬಂಧಿಸಿ ಅವರ ವಿರುದ್ಧ ‘ದೇಶದ್ರೋಹ’ ಮೊಕದ್ದಮೆ ಹೂಡಿದರು.

ಬ್ರಿಟಿಷ್‌ ಆಡಳಿತ ಮುಕ್ತಾಯಗೊಂಡು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ  ಈ ಕಾನೂನು ಮುಂದುವರಿಯಿತು. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ತಮ್ಮ ಅನುಕೂಲಕ್ಕೆ ಬ್ರಿಟಿಷರು ಮಾಡಿಕೊಂಡಿರುವ ‘ದೇಶದ್ರೋಹ’ದ ಕಾನೂನು ಈಗಲೂ ಜಾರಿಯಲ್ಲಿ ಇರುವುದು ಸರಿಯಲ್ಲ ಎಂದು ಹಲವರು ತೀಕ್ಷ್ಣವಾಗಿ ನುಡಿದರೆ, ಈಗಿರುವ ಕಾನೂನುಗಳ ಪೈಕಿ ಶೇ 80ರಷ್ಟು ಬ್ರಿಟಿಷ್‌ ಕಾಲದ್ದೇ ಆಗಿರುವಾಗ ಇದು ಕೂಡ ಜಾರಿಯಲ್ಲಿ ಇರುವುದು ತಪ್ಪೇನು ಎಂಬ ಪ್ರಶ್ನೆ ಇನ್ನು ಕೆಲವರದ್ದು. ಆಗಾಗ್ಗೆ ಚರ್ಚೆಗೆ ಗ್ರಾಸವಾಗಿ ತಣ್ಣಗಾಗುತ್ತಿದ್ದ ‘ದೇಶದ್ರೋಹ’ ಕಾನೂನು, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ವಿವಾದದಿಂದಾಗಿ ಪುನಃ ಚರ್ಚೆಗೆ ಒಳಗಾಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರು ದೇಶದ್ರೋಹ ಎಸಗಿದ್ದಾರೆಯೋ, ಇಲ್ಲವೋ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.

ಸುಪ್ರೀಂಕೋರ್ಟ್‌ ದೃಷ್ಟಿಯಲ್ಲಿ ‘ದೇಶ ದ್ರೋಹ’...

‘ದೇಶದ್ರೋಹ’ದ ಕುರಿತು ಈಗಾಗಲೇ ಸುಪ್ರೀಂಕೋರ್ಟ್‌ ಅನೇಕ ಪ್ರಕರಣಗಳಲ್ಲಿ ಸ್ಪಷ್ಟ ವಿವರಣೆ ನೀಡಿದೆ. ‘ಕೇದಾರ್‌ನಾಥ್‌ ಸಿಂಗ್‌ ವರ್ಸಸ್‌ ಸ್ಟೇಟ್‌ ಆಫ್‌ ಬಿಹಾರ್‌ 1962’ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು, ‘ಯಾವುದೇ ಭಾಷಣ ಅಥವಾ  ಇನ್ನಾವುದೇ ಚಟುವಟಿಕೆ ದೇಶದ್ರೋಹ ಎನಿಸಿಕೊಳ್ಳಬೇಕಿದ್ದರೆ ಅದು ಹಿಂಸೆಗೆ ಪ್ರಚೋದನೆ ನೀಡುವಂತಿರಬೇಕು ಇಲ್ಲವೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವಂತಿರಬೇಕು.

ಇಲ್ಲದಿದ್ದರೆ ಅದು ‘ದೇಶದ್ರೋಹ’ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.  ನಂತರ ‘ಇಂದ್ರಾದಾಸ್‌ ವರ್ಸಸ್‌ ಸ್ಟೇಟ್‌ ಆಫ್‌ ಅಸ್ಸಾಂ ಆ್ಯಂಡ್‌ ಅರುಣಾಚಲಪ್ರದೇಶ್‌–2011’ ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ‘ಸಾರ್ವಜನಿಕ ಶಾಂತಿಗೆ ಭಂಗ ತರುವ ಕ್ರಿಯೆ ಮಾತ್ರವೇ ದೇಶದ್ರೋಹ’ ಎಂದು ತಿಳಿಸಿದೆ. ‘ಬಲವಂತ್‌ ಸಿಂಗ್‌ ವರ್ಸಸ್‌ ಸ್ಟೇಟ್‌ ಆಫ್‌ ಪಂಜಾಬ್‌’ ಪ್ರಕರಣದಲ್ಲಿ ಆರೋಪಿಯನ್ನು ‘ದೇಶದ್ರೋಹ’ ಪ್ರಕರಣದಿಂದ ಬಿಡುಗಡೆ ಮಾಡಿದೆ.  ಈ ಪ್ರಕರಣದಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದ ಕೆಲ ಕ್ಷಣಗಳಲ್ಲಿಯೇ ‘ಖಾಲಿಸ್ತಾನ್‌ ಜಿಂದಾಬಾದ್‌, ರಾಜ್‌ ಕರೇಗಾ ಖಾಲ್ಸಾ’ (ಖಾಲಿಸ್ತಾನಕ್ಕೆ ಜಯವಾಗಲಿ, ಖಾಲ್ಸಾಗಳೇ ಆಡಳಿತ ನಡೆಸಲಿದ್ದಾರೆ) ಎಂದು ಘೋಷಣೆ ಕೂಗಲಾಗಿತ್ತು. ಆದರೆ ಇದು ‘ದೇಶದ್ರೋಹ’ ಅಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿತು.

ಈಚಿಗಿನ ಪ್ರಕರಣಗಳು:

ಕ್ರಮೇಣ ‘ದೇಶದ್ರೋಹ’ ಕಾನೂನನ್ನು ಸರ್ಕಾರದ ವಿರುದ್ಧ ಧ್ವನಿ ಎತ್ತುವ  ಸಾಹಿತಿಗಳ, ಕಲಾವಿದರ, ಜನಪರ ನಾಯಕರ ವಿರುದ್ಧವೂ ಅಸ್ತ್ರವಾಗಿ ಬಳಸುತ್ತಾ ಇರುವುದು ಹಲವರ ಅಸಮಾಧಾನಕ್ಕೆ ಗುರಿಯಾಯಿತು. ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ನಾಗರಿಕ ಹಕ್ಕು ಹೋರಾಟಗಾರ ವಿನಾಯಕ್‌ ಸೇನ್‌ ಅವರನ್ನು 2007ರಲ್ಲಿ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಬೆಂಬಲಿಸುವ ಮಾತುಗಳನ್ನು ಆಡಿದ ಆರೋಪದ ಮೇಲೆ 2012ರಲ್ಲಿ ಲೇಖಕಿ ಅರುಂಧತಿ ರಾಯ್, ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡುವಂಥ ಕಾರ್ಟೂನ್‌ ಬಿಡಿಸಿದ್ದ ಆರೋಪದ ಮೇಲೆ ಅಸೀಮ್ ತ್ರಿವೇದಿ, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಗುಜರಾತಿನ ಹಾರ್ದಿಕ್ ಪಟೇಲ್,  ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಟೀಕಿಸಿರುವ ಆರೋಪದ ಮೇಲೆ ಜನಪದ ಗಾಯಕ  ಕೋವನ್‌... ಹೀಗೆ ಅನೇಕ ಮಂದಿಯ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ.

‘ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅತೃಪ್ತಿ ಪ್ರಚೋದಿಸದೇ ವಿರೋಧಿಸುವುದು ಅಥವಾ ಬದಲಾಯಿಸಲು ಪ್ರಯತ್ನಿಸುವುದು ‘ದೇಶದ್ರೋಹ’ ಕಲಮಿನ ಅಡಿ ಅಪರಾಧವಲ್ಲ. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು... ಇವರ ಹೇಳಿಕೆ ಕ್ರಮಗಳನ್ನು ಟೀಕಿಸುವುದೂ ಅಪರಾಧವಲ್ಲ.  ಏಕೆಂದರೆ ಇವರು ‘ಸರ್ಕಾರ’ವಲ್ಲ. ಆದರೂ ಇವರನ್ನು ‘ದೇಶದ್ರೋಹ’ದ ಅಡಿ ಬಂಧಿಸಲಾಗಿದೆ ಎಂದು ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದವು.

ಭಾರತೀಯ ಸಂವಿಧಾನದ 19(ಎ) ಪರಿಚ್ಛೇದದ ಅನುಸಾರ ಭಾರತದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದ್ದರಿಂದ ‘ದೇಶದ್ರೋಹ’ದ ಅಡಿ ಬಂಧನ ಉಚಿತವಲ್ಲ ಎಂಬುದು ಇನ್ನು ಹಲವರ ವಾದ. ಆದರೆ ಸಂವಿಧಾನದ 19(ಬಿ) ಕಲಮಿನ ಪ್ರಕಾರ ‘ದೇಶದ ಸಮಗ್ರತೆಯನ್ನು ಪ್ರಶ್ನಿಸುವ, ಇನ್ನೊಬ್ಬರನ್ನು ತುಚ್ಛೀಕರಿಸುವ, ದೇಶದ ದೇಶಕ್ಕೆ ಅಗೌರವ ಸೂಚಿಸುವ ಯಾವುದೇ ಸಂಗತಿ ಈ ಸ್ವಾತಂತ್ರ್ಯದ ಪರಿಧಿಗೆ ಬರುವುದಿಲ್ಲ’ ಎಂದು ಸ್‍ಪಷ್ಟಪಡಿ ಸಿರುವುದು ಇಲ್ಲಿ ಉಲ್ಲೇಖಾರ್ಹ.

ಇನ್ನು, ಜೆಎನ್‌ಯು ವಿಷಯಕ್ಕೆ ಬರುವುದಾದರೆ ಕನ್ಹಯ್ಯಾ ಕುಮಾರ್‌ ಘೋಷಣೆ ಕೂಗಿರುವುದರಿಂದ ಶಾಂತಿಗೆ ಭಂಗ ಬಂದಿದೆಯೇ, ‘ಅಫ್ಜಲ್‌ ನಮಗೆ ನಾಚಿಕೆ ಆಗುತ್ತಿದೆ, ನಿನ್ನ ಕೊಂದವ ಬದುಕಿದ್ದಾನೆ’, ‘ಭಾರತ ನಿನ್ನ ಭಾಗ ಆಗುತ್ತದೆ, ಇನ್‌ಶಾಹ್‌ ಅಲ್ಹಾ, ಇನ್‌ಶಾಹ್‌ ಅಲ್ಹಾ’... ಇತ್ಯಾದಿ ಘೋಷಣೆಗಳು ಸರ್ಕಾರ, ದೇಶದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಬೆಳೆಸುತ್ತವೆಯೋ ಎಂಬುದನ್ನು ಕೋರ್ಟ್‌ ನಿರ್ಧರಿಸಬೇಕಿದೆ. ಈಗ ಸಿಕ್ಕಿರುವ ವಿಡಿಯೊ ತುಣುಕಿನಲ್ಲಿ ಘೋಷಣೆ ಕೂಗಿರುವುದು ಕನ್ಹಯ್ಯಾ ಅವರೇ ಅಥವಾ ಬೇರೆಯವರೇ  ಎಂಬುದು ಕೂಡ ಸಾಬೀತಾಗಬೇಕಿದೆ. ದೇಶದ  ವಿರುದ್ಧ ಮುಗ್ಧತೆಯಿಂದ ಮಾತ್ರ ಘೋಷಣೆಗಳು ಮೊಳಗಿದವೋ ಇಲ್ಲವೇ ಅದಕ್ಕೆ ತುಂಬಾ ಪೂರ್ವತಯಾರಿ ನಡೆದಿದ್ದವೋ, ವಿದೇಶಿ ಅಕ್ರಮ ಸಂಪರ್ಕಗಳು ಇದ್ದವೋ ಎನ್ನುವುದನ್ನು ಸರ್ಕಾರ ಕೂಲಂಕಷವಾಗಿ ಪತ್ತೆ ಮಾಡುವ ಸಂಬಂಧ ಬಂಧಿಸಿದವರ ವಿಚಾರಣೆ ಕೂಡ ಅನಿವಾರ್ಯ ಕೂಡ ಆಗಬಹುದು.

‘ಅಫ್ಜಲ್‌ಗುರುವಿಗೆ ಸುಪ್ರೀಂಕೋರ್ಟ್‌ ಗಲ್ಲುಶಿಕ್ಷೆ ವಿಧಿಸಿದೆ. ದೇಶದ್ರೋಹಿ ಕೆಲಸದಲ್ಲಿ ನಿರತನಾಗಿದ್ದ ಎಂದು ಸುಪ್ರೀಂಕೋರ್ಟ್‌ ಹೇಳಿದ ಮೇಲೆ ಅವನ ಫೋಟೊ ಇಟ್ಟುಕೊಂಡು ಮೆರವಣಿಗೆ ಮಾಡುವುದು, ಅವನ ಪರವಾಗಿ ಘೋಷಣೆ ಕೂಗುವುದು ಸರಿಯಲ್ಲ. ಇದು ದೇಶದ್ರೋಹದ ಕೆಲಸವೇ. ಕೇವಲ ದೇಶದ್ರೋಹ ಮಾತ್ರವಲ್ಲ, ಇದು ನ್ಯಾಯಾಂಗ ನಿಂದನೆಯೂ ಆಗುತ್ತದೆ’  ಎನ್ನುತ್ತಾರೆ ಹೈಕೋರ್ಟ್‌ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ.

‘ತಮಗೆ ತಪ್ಪು ಎನಿಸಿರುವ ಘಟನೆ ವಿರುದ್ಧ ವಿದ್ಯಾರ್ಥಿಗಳ ಗುಂಪು ದನಿ ಎತ್ತಿದರೆ ಅದು ದೇಶದ್ರೋಹ ಆಗುವುದಿಲ್ಲ. ಒಂದು ವೇಳೆ ಘೋಷಣೆ ಕೂಗುವ ಮೂಲಕ ಅಲ್ಲಿರುವ ಜನರು ಶಸ್ತ್ರಾಸ್ತ್ರಗಳನ್ನು ಎತ್ತಿ ಗಲಾಟೆ ಮಾಡುವ ಹಾಗೆ ಪ್ರಚೋದನೆ ಮಾಡಿದ್ದರೆ ಮಾತ್ರ ಅದು ‘ದೇಶದ್ರೋಹ’ ಆಗುತ್ತಿತ್ತು’ ಎಂಬ ಅಭಿಪ್ರಾಯ ಹಿರಿಯ ವಕೀಲ ಸುಶೀಲ್‌ ಕುಮಾರ್‌ ಅವರದ್ದು.

(2018ರಲ್ಲಿ ಪ್ರಕಟವಾದ ಈ ಲೇಖನ, 2020ರಲ್ಲಿ ಕನ್ಹಯ್ಯ ಕುಮಾರ್ ವಿರುದ್ಧ ವಿಚಾರಣೆ ಸಂದರ್ಭದಲ್ಲಿ ಅಪ್‌ಡೇಟ್ ಮಾಡಲಾಗಿತ್ತು. ಇದೀಗ ದೇಶದ್ರೋಹ ಕಾನೂನಿನ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಹಿನ್ನೆಲೆಯಲ್ಲಿ ಮರುಪ್ರಕಟಿಸಲಾಗಿದೆ.)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು