ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಆಡೋಕೆ ಎಲ್ಲಿದೆ ಮೈದಾನ?

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""
""

‘ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ’ ಎನ್ನುವ ಮಾತು ಕ್ರೀಡೆಗಿರುವ ಮಹತ್ವವನ್ನು ಸಾರಿ ಹೇಳುತ್ತದೆ. ದುರದೃಷ್ಟದ ಸಂಗತಿ ಎಂದರೆ ನಮ್ಮ ಬಹುತೇಕ ಶಾಲೆಗಳಿಗೆ ಆಟದ ಮೈದಾನವೇ ಇಲ್ಲ. ಸಂಸತ್ತಿನ ಸ್ಥಾಯಿ ಸಮಿತಿ ವರದಿಯೇ ಈ ಮಾಹಿತಿಯನ್ನು ಬಯಲು ಮಾಡಿದೆ.

ಮನೆಯಲ್ಲಿದ್ದಷ್ಟೂ ಹೊತ್ತು ಮೊಬೈಲ್‌ ಆಟದಲ್ಲೇ ಕಾಲ ಕಳೆಯುವ ಮಕ್ಕಳಿಗೆ ಶಾಲೆಯಲ್ಲೂ ಆಡುವ ಅವಕಾಶ ಇಲ್ಲದಿರುವುದು ಮಕ್ಕಳ ಹಕ್ಕುಗಳ ಹೋರಾಟಗಾರರಲ್ಲಿ ಕಳವಳವನ್ನು ಉಂಟುಮಾಡಿದೆ. ಬಾಲ್ಯದಲ್ಲಿ ದೈಹಿಕ ಸದೃಢತೆಗೆ ಬೇಕಾದ ಸೌಲಭ್ಯಗಳಿಲ್ಲದೆ ಭವಿಷ್ಯದಲ್ಲಿ ಅವರು ಆರೋಗ್ಯವಂತರಾಗಿ ಬಾಳುವುದು ಹೇಗೆ ಎಂಬ ಪ್ರಶ್ನೆಯನ್ನೂ ಎತ್ತಿದೆ. ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿದ ನಮ್ಮ ರಾಷ್ಟ್ರದಲ್ಲಿ ಅದರ ಸದ್ಬಳಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಒಲಿಂಪಿಕ್‌ ಕೂಟದಲ್ಲಿ ಪುಟ್ಟ ರಾಷ್ಟ್ರಗಗಳಿಗಿಂತಲೂ ಭಾರತದ ಸಾಧನೆ ಕಳಪೆ ಆಗಿರುವುದಕ್ಕೆ ಆಟದ ಮೈದಾನಗಳ ಕೊರತೆಗಿಂತ ಬೇರೆ ಸಾಕ್ಷಿ ಬೇಕೇ ಎಂದು ಹಿರಿಯ ಕ್ರೀಡಾಪಟುಗಳೂ ಕೇಳುತ್ತಿದ್ದಾರೆ....

***

ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡಬೇಕು ಎಂಬ ಗುರಿಯನ್ನೇನೋಭಾರತ ಇಟ್ಟುಕೊಂಡಿದೆ. ಆದರೆ, ಆ ಕನಸಿಗೆ ತಕ್ಕಂತೆ ಕ್ರೀಡಾಪಟುಗಳನ್ನು ರೂಪಿಸುವ ವ್ಯವಸ್ಥೆ ಪ್ರಾಥಮಿಕ ಹಂತದಿಂದಲೇ ನಮ್ಮ ಶಾಲೆಗಳಲ್ಲಿ ಇಲ್ಲ. ಕ್ರೀಡಾ ಸೌಲಭ್ಯಗಳ ಕೊರತೆ ಮಕ್ಕಳನ್ನು ಎಷ್ಟೊಂದು ಕಾಡುತ್ತಿದೆ ಎಂಬುದನ್ನು ರಾಜ್ಯಸಭೆಯಲ್ಲಿ ಮೊನ್ನೆಯಷ್ಟೇ ಮಂಡನೆಯಾದ ಸಂಸತ್ತಿನ ಶಿಕ್ಷಣ ಕುರಿತ ಸ್ಥಾಯಿ ಸಮಿತಿಯ ವರದಿ ಎತ್ತಿ ತೋರಿದೆ.

ಶಿಕ್ಷಣ ಹಕ್ಕು ಕಾಯ್ದೆಯ ಅನುಸಾರ ಪ್ರತಿ ಶಾಲೆಯಲ್ಲೂ ಆಟದ ಮೈದಾನ ಮತ್ತು ವಿದ್ಯುತ್‌ ಸೌಲಭ್ಯ ಇರುವುದು ಕಡ್ಡಾಯ. ಆದರೆ, ರಾಜ್ಯದಲ್ಲಿ ಶೇ 40ರಷ್ಟು ಶಾಲೆಗಳಲ್ಲಿ ಆಟದ ಮೈದಾನವಾಗಲಿ, ವಿದ್ಯುತ್‌ ಸೌಲಭ್ಯವಾಗಲಿ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಶಾಲೆಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಅನುದಾನದ ಕೊರತೆಯೂ ಇದೆ ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ‘ರಾಜ್ಯದಲ್ಲಿ ಇಷ್ಟೊಂದು ಶಾಲೆಗಳು ಕ್ರೀಡಾಂಗಣದ ಕೊರತೆ ಎದುರಿಸುತ್ತಿರುವುದು ಏಕೆ’ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಹಲವು ಸಮಸ್ಯೆಗಳು ಕಾಣುತ್ತವೆ:

1 ಮಕ್ಕಳನ್ನು ಶಾಲೆಗೆ ಸೇರಿಸಲು ಹೊರಟ ಪೋಷಕರು ಅಲ್ಲಿನ ಶೈಕ್ಷಣಿಕ ವಾತಾವರಣವನ್ನು ಮಾತ್ರ ಗಮನಿಸುತ್ತಾರೆಯೇ ಹೊರತು ಕ್ರೀಡಾ ಸೌಲಭ್ಯಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಶಾಲಾ ಆಡಳಿತ ಮಂಡಳಿಗಳು ಆಟದ ಮೈದಾನದ ಕಡೆಗೆ ಒತ್ತು ನೀಡುತ್ತಿಲ್ಲ

2 ಗ್ರಾಮೀಣ ಭಾಗದ ಬಹುತೇಕ ಶಾಲೆಗಳು ಆಟದ ಮೈದಾನವನ್ನು ಹೊಂದಿವೆ. ಆದರೆ, ದೈಹಿಕಶಿಕ್ಷಣ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಸೌಲಭ್ಯವಿದ್ದರೂ ಸಮರ್ಪಕವಾಗಿ ಬಳಸಲಾಗದ ಸ್ಥಿತಿ ಅಲ್ಲಿನ ಮಕ್ಕಳದು

3 ನಗರ ಪ್ರದೇಶದ ಬಹುಪಾಲು ಶಾಲೆಗಳಲ್ಲಿ ಕ್ರೀಡಾ ಸೌಕರ್ಯವೇ ಇಲ್ಲ. ಕೆಲವು ಶಾಲೆಗಳಂತೂ ಮಹಡಿಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳು ತಾವಿರುವ ಶಾಲಾ ಕೊಠಡಿಗಳಲ್ಲೇ ಪ್ರಾರ್ಥನೆ ಮಾಡಬೇಕಿದೆ. ಕೊಠಡಿಗಳಿಂದ ಇಳಿದುಬಂದರೆ ಅವರು ಸೀದಾ ಫುಟ್‌ಪಾತ್‌ ಮೇಲೇ ಕಾಲಿಡಬೇಕಾದ ಸನ್ನಿವೇಶ ಇದೆ

4 ನಗರ ಪ್ರದೇಶದ ಕೆಲವು ಶಾಲೆಗಳು ಆಟದ ಮೈದಾನವನ್ನು ಹೊಂದಿದ್ದರೂ ಅವುಗಳು ಆಟಕ್ಕಿಂತ ಹೆಚ್ಚಾಗಿ ಸಭೆ–ಸಮಾರಂಭ, ಮದುವೆಗೆ ಬಳಕೆ ಆಗುತ್ತಿವೆ

5 ರಾಜ್ಯ ಸರ್ಕಾರವೇ ನೇಮಿಸಿದ್ದ ಎಲ್‌.ಆರ್‌.ವೈದ್ಯನಾಥನ್‌ ಸಮಿತಿ ಶಿಕ್ಷಣದಲ್ಲಿ ಕ್ರೀಡೆಗೆ ಇರಬೇಕಾದ ಮಹತ್ವದ ಕುರಿತು ವಿವರವಾದ ವರದಿ ಸಲ್ಲಿಸಿತ್ತು. ಪ್ರತಿಯೊಂದು ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆ ಸಮಿತಿಯ ಬಹುತೇಕ ಶಿಫಾರಸುಗಳು ಶೈತ್ಯಾಗಾರ ಸೇರಿವೆ

ಟೆರೆಸ್‌ ಮೇಲಿರಲಿ ಒಂದು ಟ್ರ್ಯಾಕ್‌
ರಾಜ್ಯದ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಶಾಲೆಗಳು ಸಹ ಕ್ರೀಡಾಂಗಣ ಹೊಂದಿಲ್ಲ. ‘ರಾಜ್ಯದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡೆಯನ್ನು ಸಂಪೂರ್ಣ ಗೌಣವಾಗಿ ಕಾಣುತ್ತಿವೆ. ಹೀಗಾಗಿ ಅವುಗಳು ಆಟದ ಮೈದಾನಗಳನ್ನೇ ಹೊಂದಿಲ್ಲ. ಆದರೆ, ಬಹುತೇಕ ಸರ್ಕಾರಿ ಶಾಲೆಗಳು ಕ್ರೀಡಾಂಗಣವನ್ನು ಹೊಂದಿವೆ’ ಎನ್ನುತ್ತಾರೆ ಹಿರಿಯ ಅಥ್ಲೀಟ್‌ ಸಹನಾಕುಮಾರಿ.

‘ಶಾಲೆಯಲ್ಲಿ ಬೇರೆ ಯಾವುದೇ ಕ್ರೀಡಾ ಸೌಲಭ್ಯವಿಲ್ಲದಿದ್ದರೂ ಓಡಲು ಒಂದು ಟ್ರ್ಯಾಕ್‌ ಆದರೂ ಇರಬೇಕು. ಜಗತ್ತಿನ ಹಲವೆಡೆ ಈಗೀಗ ಟೆರೆಸ್‌ ಮೇಲೆ ದೊಡ್ಡ, ದೊಡ್ಡ ಕ್ರೀಡಾಂಗಣವನ್ನೇ ನಿರ್ಮಾಣ ಮಾಡಲಾಗುತ್ತಿದೆ. ಶಾಲೆಗಳ ಕಟ್ಟಡಗಳ ಮೇಲೆ ಒಂದು ರಬ್ಬರ್‌ ಟ್ರ್ಯಾಕ್‌ ನಿರ್ಮಾಣ ಮಾಡಲು ಏನು ಅಡ್ಡಿ’ ಎಂದು ಅವರು ಪ್ರಶ್ನಿಸುತ್ತಾರೆ.

ವರದಿಯ ಅಂಶಗಳು
* ಶಿಕ್ಷಣ ಇಲಾಖೆಗೆ ಅನುದಾನ ಹಂಚಿಕೆಯಲ್ಲಿ ಶೇ 27ರಷ್ಟು ಕೊರತೆಯಾಗಿದೆ. ಶಾಲಾ ಶಿಕ್ಷಣ ಇಲಾಖೆಯು ₹82,570 ಕೋಟಿಗೆ ಬೇಡಿಕೆ ಸಲ್ಲಿಸಿದ್ದರೆ, ಹಂಚಿಕೆಯಾದ ಅನುದಾನ ₹59,845 ಕೋಟಿ ಮಾತ್ರ. ಇದರಿಂದ ಕೇಂದ್ರವೇ ರೂಪಿಸಿರುವ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನ್ನೂ ಪರಿಣಾಮಕಾರಿಯಾಗಿ ಜಾರಿ ಮಾಡುವುದು ಕಷ್ಟ
* ಹೈಸ್ಕೂಲ್‌ಗಳಲ್ಲಿ ಅಗತ್ಯ ಬೋಧನಾ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ ನಿರ್ಮಿಸುವ ಕಾಮಗಾರಿಯು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ದೂರವಾಗುತ್ತಿದ್ದಾರೆ
* 2019–20ನೇ ಶೈಕ್ಷಣಿಕ ವರ್ಷದಲ್ಲಿ ಹೈಸ್ಕೂಲ್‌ಗಳಿಗೆ 1,021 ಬೋಧನಾ ಕೊಠಡಿಗಳನ್ನು ಮಂಜೂರು ಮಾಡಲಾಗಿದ್ದರೂ 2019 ಡಿಸೆಂಬರ್‌ ಅಂತ್ಯದವರೆಗೆ ಒಂದೇ ಒಂದು ಕಾಮಗಾರಿ ಪೂರ್ಣಗೊಂಡಿಲ್ಲ
* 1,343 ಪ್ರಯೋಗಾಲಯಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದರೂ ಮೂರು ಪ್ರಯೋಗಾಲಯಗಳನ್ನು ಮಾತ್ರ ನಿರ್ಮಿಸಲಾಗಿದೆ
* 135 ಗ್ರಂಥಾಲಯ ಹಾಗೂ ಕಲೆ/ಸಾಂಸ್ಕೃತಿಗಾಗಿ 74 ಕೊಠಡಿಗಳ ನಿರ್ಮಾಣಕ್ಕಾಗಿ ಅನುಮೋದನೆ ನೀಡಿದ್ದರೂ ಒಂದೇ ಒಂದು ಕೊಠಡಿಯಾಗಲಿ, ಗ್ರಂಥಾಲಯವಾಗಲಿ ನಿರ್ಮಾಣವಾಗಿಲ್ಲ .2019ರ ಡಿಸೆಂಬರ್‌ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ, ಸಮಗ್ರ ಶಿಕ್ಷಣ ಯೋಜನೆಯ ಪರಿಷ್ಕೃತ ಅಂದಾಜುಪಟ್ಟಿಯ ಶೇ 71ರಷ್ಟು ಅನುದಾನವನ್ನು ಮಾತ್ರ ಖರ್ಚು ಮಾಡಲಾಗಿದೆ

ಪ್ರಮುಖ ಶಿಫಾರಸುಗಳು
* ದೇಶದ ಶೇ 60ರಷ್ಟು ಶಾಲೆಗಳಿಗೆ ಮಾತ್ರ ಕಾಂಪೌಂಡ್‌ ಇದೆ. ಜನರು ಶಾಲಾ ಆವರಣ ಪ್ರವೇಶಿಸಲು ಮುಕ್ತ ಅವಕಾಶವಿದ್ದು, ಮಕ್ಕಳ ಸುರಕ್ಷತೆಯ ಕುರಿತು ಆತಂಕ ಎದುರಾಗಿದೆ. ಎಲ್ಲ ಶಾಲೆಗಳಿಗೆ ಆದ್ಯತೆ ಮೇರೆಗೆ ಕಾಂಪೌಂಡ್ ನಿರ್ಮಿಸಿ
* ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳನ್ನು ಒದಗಿಸಿ
* ಎಲ್ಲ ಶಾಲೆಗಳಿಗೆ ಸೌರಶಕ್ತಿ ಆಧರಿತ ವಿದ್ಯುತ್ ಒದಗಿಸಿ (ಅದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಮಾಲಿನ್ಯರಹಿತ ವಿದ್ಯುತ್ ಬಳಕೆಗೆ ಪ್ರೇರಣೆ ಆಗಬಹುದು)

ಸರ್ಕಾರಿ ಶಾಲೆಗಳ ಸ್ಥಿತಿ
44%:
ಶಾಲೆಗಳಿಗೆ ಮಾತ್ರ ವಿದ್ಯುತ್‌ ಸಂಪರ್ಕ ಇಲ್ಲ
43%:ಲೆಗಳಲ್ಲಿ ಆಟದ ಮೈದಾನಗಳಿಲ್ಲ
40%:ಶಾಲೆಗಳಿಗೆ ಕಾಂಪೌಂಡ್‌ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT