ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

Last Updated 10 ಜನವರಿ 2020, 6:42 IST
ಅಕ್ಷರ ಗಾತ್ರ
ADVERTISEMENT
""
""
""
""

ದೆಹಲಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಭೇಟಿ ನೀಡಿ, ಪೆಟ್ಟು ತಿಂದಿದ್ದ ಅಲ್ಲಿನ ವಿದ್ಯಾರ್ಥಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ ನಂತರ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿ ಮುಸುಕುಧಾರಿಗಳಿಂದ ಹಲ್ಲೆಗೊಳಗಾದವರಿಗೆ ದೀಪಿಕಾ ಬೆಂಬಲಿಸಿದ್ದೇ ತಡ, ಆ್ಯಸಿಡ್‌ ಸಂತ್ರಸ್ತೆಯ ಕುರಿತ ಅವರ ಸಿನಿಮಾ ‘ಛಪಾಕ್‌’ ಅನ್ನು ಬಹಿಷ್ಕರಿಸುವುದಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ #BoycottChhapaak ಹೆಸರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಅವರ ‘ಛಪಾಕ್‌’ ಚಿತ್ರವೂ ವಿವಾದಕ್ಕೆ ಗುರಿಯಾಗಿದೆ.

ಆ್ಯಸಿಡ್‌ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್‌ ಅವರ ಜೀವನಾಧಾರಿತ ಚಿತ್ರ ‘ಛಪಾಕ್’. ಮದುವೆಗೆ ನಿರಾಕರಿಸಿದ ಕಾರಣಕ್ಕೆ 2005ರಲ್ಲಿ ಲಕ್ಷ್ಮೀ ಅಗರ್ವಾಲ್‌ ಅವರು 32 ವರ್ಷದ ನಯೀಮ್‌ ಖಾನ್‌ ಮತ್ತು ಆತನ ಇಬ್ಬರು ಸಹಚರರಿಂದ ಆ್ಯಸಿಡ್‌ ದಾಳಿಗೆ ಗುರಿಯಾಗಿ ತಮ್ಮ ರೂಪವನ್ನೇ ಕಳೆದುಕೊಂಡರು. ನಿರ್ದೇಶಕಿ ಮೇಘನಾ ಗುಲ್ಜಾರ್‌ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಲಕ್ಷ್ಮೀ ಅಗರ್ವಾಲ್‌ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಸದ್ಯ ಈ ಚಿತ್ರದ ಮೇಲೆ ಕೇಳಿಬಂದಿರುವ ಆರೋಪವೇನೆಂದರೆ, ಆ್ಯಸಿಡ್‌ ದಾಳಿಯ ಆಪಾದಿತ, ಖಳ ನಮೀಮ್‌ ಖಾನ್‌ನ ಧರ್ಮವನ್ನೇ ಬದಲಿಸಿ ಆತನನ್ನು ರಾಜೇಶ್‌ ಎಂದು ತೋರಿಸಲಾಗಿದೆ ಎಂಬುದು.

ಚಿತ್ರದ ತಾರಾಗಣದ ಕುರಿತು ಮಾಹಿತಿ ನೀಡುವ ಐಎಂಡಿಬಿ ಲಿಂಕ್‌ನ ಆಧಾರದಲ್ಲಿ ‘ಸ್ವರಾಜ್‌’ ಎಂಬ ಸುದ್ದಿ ಸಂಸ್ಥೆ ಮೊದಲಿಗೆ ಈ ಕುರಿತು ವರದಿ ಮಾಡಿತು. ‘ದೀಪಿಕಾ ಅವರ ಚಿತ್ರದಲ್ಲಿ ಅಪರಾಧಿ ನಯೀಮ್‌ ಖಾನ್‌ನ ಹೆಸರನ್ನು ರಾಜೇಶ್‌ ಎಂದು ಬದಲಿಸಲಾಗಿದೆ’ ಎಂದು ಅದು ವರದಿ ಮಾಡಿತ್ತು. ಇದೇ ವಾದವನ್ನೇ ಹಲವು ಸುದ್ದಿಸಂಸ್ಥೆಗಳೂ ಪ್ರತಿಪಾದಿಸಿದ್ದವು. ಸಿನಿಮಾದಲ್ಲಿ ಅಪರಾಧಿಯ ಹೆಸರನ್ನು ಉದ್ದೇಶಪೂರ್ವಕವಾಗಿ ಬದಲಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಇದು ಬಾಲಿವುಡ್‌ನ ಮುಖ ಎಂದಿದ್ದ ಬಿಜೆಪಿ

ನಯೀಮ್‌ನ ಹೆಸರನ್ನು ಬದಲಿಸಿ ರಾಜೇಶ್‌ ಎಂದು ಮಾಡಲಾಗಿದೆ ಎಂಬ ವಾದವನ್ನೇ ಮುಂದಿಟ್ಟುಕೊಂಡು, ಲಕ್ಷ್ಮೀ ಅಗರ್ವಾಲ್‌ ಅವರ ಫೋಟೊದೊಂದಿಗೆ ಹರಿಯಾಣದ ಬಿಜೆಪಿ ಐಟಿ ವಿಭಾಗ ಒಂದು ಟ್ವೀಟ್‌ ಮಾಡಿತ್ತು. ಅದೇನೆಂದರೆ... ‘ಈಕೆ ಲಕ್ಷ್ಮೀ ಅಗರ್ವಾಲ್‌. ‘ಛಪಾಕ್‌’ ಈಕೆಯ ಜೀವನಾಧರಿತ ಸಿನಿಮಾ. ನದೀಮ್‌ (ನಯೀಮ್‌) ಖಾನ್‌ ಎಂಬಾತ ದೆಹಲಿಯ ಖಾನ್‌ ಮಾರುಕಟ್ಟೆಯಲ್ಲಿ ಲಕ್ಷ್ಮೀ ಮೇಲೆ ಆ್ಯಸಿಡ್‌ ದಾಳಿ ಮಾಡಿದ್ದ. ಆದರೆ, ನಮ್ಮ ಬಾಲಿವುಡ್‌ ಮಾತ್ರ ನದೀಮ್‌ನ ಹೆಸರನ್ನು ರಾಜೇಶ್‌ ಎಂದು ಬದಲಿಸಿ ಜಾತ್ಯತೀತತೆಯ ರಕ್ಷಣೆಗೆ ಮುಂದಾಗಿದೆ’ ಎಂದು ಟ್ವೀಟ್‌ ಮಾಡಿತ್ತು.

ವಕೀಲ ಇಶಾಕರಣ್‌ ಸಿಂಗ್‌ ಬಂಡಾರಿ ಎಂಬುವವರೂ ಇದೇ ವಿಚಾರದ ಬಗ್ಗೆ ಟ್ವೀಟ್‌ ಮಾಡಿದ್ದರು.

‘ಹಾಗೇನಾದರೂ ಹೆಸರು ಬದಲಾಗಿದ್ದರೆ ಮತ್ತು ಬೇರೆ ಧರ್ಮದ ಹೆಸರನ್ನೇನಾದರೂ ಬಳಕೆ ಮಾಡಿಕೊಂಡಿದ್ದರೆ ನಾವು ನೋಟಿಸ್‌ ಜಾರಿ ಮಾಡುತ್ತೇವೆ,’ ಎಂದು ಹೇಳಿಕೊಂಡಿದ್ದರು.

ಇಶಾಕರಣ್‌ ಸಿಂಗ್‌ ಭಂಡಾರಿ ಅವರ ಟ್ವೀಟ್‌ ಅನ್ನೇ ಉಲ್ಲೇಖಿಸಿ ಟ್ವೀಟ್‌ ಮಾಡಿದ್ದ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ, ‘ಒಂದು ವೇಳೆ ಸಿನಿಮಾದವರು ಅಪರಾಧಿಯ ಹೆಸರನ್ನು ಮುಸ್ಲಿಂ ಹೆಸರಿನಿಂದ ಹಿಂದೂ ಹೆಸರಿಗೆ ಬದಲಾಯಿಸಿದ್ದರೆ ಅದು ಮಾನಹಾನಿ’ ಎಂದು ಅಭಿಪ್ರಾಯಪಟ್ಟಿದ್ದರು.

ಹೆಸರು ಬದಲಾವಣೆ ಎಂಬುದು ಸುಳ್ಳು

ಸಿನಿಮಾದಲ್ಲಿ ಖಳನ ಹೆಸರನ್ನು ಹಿಂದೂ ಹೆಸರಿಗೆ ಬದಲಾಯಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ‘ನ್ಯೂಸ್‌ಲಾಂಡ್ರಿ’ ಸುದ್ದಿ ಸಂಸ್ಥೆಯ ಸಹ ಸಂಸ್ಥಾಪಕ ಅಭಿನಂದನ್‌ ಶೇಕ್ರಿ ಅವರು ಟ್ವೀಟ್‌ ಮಾಡಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ‘ಛಪಾಕ್‌’ ಬಿಡುಗಡೆಗೂ ಮುನ್ನ ಸಿನಿಮಾ ತಂಡ ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಅಭಿನಂದನ್‌ ಸಿನಿಮಾ ನೋಡಿದ್ದರು.

‘ಆ್ಯಸಿಡ್‌ ದಾಳಿಗೊಳಗಾದವರಿಗಾಗಿ ಆಯೋಜಿಸಲಾಗಿದ್ದ ‘ಛಪಾಕ್‌’ನ ವಿಶೇಷ ಪ್ರದರ್ಶನದಲ್ಲಿ ನಾನೂ ಕೂಡ ಸಿನಿಮಾ ನೋಡಿ ಬಂದಿದ್ದೇನೆ. ಕೆಲವರು ಆರೋಪಿಸುತ್ತಿರುವಂತೆ ಸಿನಿಮಾದಲ್ಲಿ ಆಪಾದಿತನ ಹೆಸರನ್ನು ಮುಸ್ಲಿಂ ಸಮುದಾಯದಿಂದ ಹಿಂದು ಸಮುದಾಯಕ್ಕೆ ಬದಲಾಯಿಸಿರುವುದು ಸುಳ್ಳು. ಆತ ಯಾವ ಧರ್ಮದವನೋ ಅದೇ ಧರ್ಮದವನನ್ನಾಗಿಯೇ ಬಿಂಬಿಸಲಾಗಿದೆ. ಚಿತ್ರದಲ್ಲಿ ಅಪರಾಧಿಯ ಸಂಬಂಧಿಕರನ್ನು ಬುರ್ಖಾಧಾರಿಗಳನ್ನಾಗಿಯೇ ತೋರಿಸಲಾಗಿದೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ಪಿಟಿಐನ ಪತ್ರಕರ್ತೆ ರಾಧಿಕಾ ಶರ್ಮಾ ಅವರು ಕೂಡ ಸಿನಿಮಾದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ್ದು, ಅವರು ಹೆಸರು ಬದಲಾವಣೆಯ ಕುರಿತು ಸ್ಪಷ್ಟನೆ ನೀಡಬಲ್ಲ ವರದಿಯನ್ನೇ ಬರೆದಿದ್ದಾರೆ.

‘ಮೇಘನಾ ಗುಲ್ಜಾರ್‌ ಅವರ ಚಿತ್ರದಲ್ಲಿನದೀಮ್‌, ನಯೀಮ್‌ ಎಂಬ ಹೆಸರುಗಳ ಉಲ್ಲೇಖವಿಲ್ಲ. ಅಲ್ಲದೆ, ರಾಜೇಶ್‌ ಎಂಬುದು ಮಲ್ಟಿ ( ಲಕ್ಷ್ಮೀ ಅಗರ್ವಾಲ್‌) ಅವರ ಸ್ನೇಹಿತನ ಹೆಸರಷ್ಟೇ. ಆ್ಯಸಿಡ್‌ ದಾಳಿ ನಡೆಸಿದ ವ್ಯಕ್ತಿಯನ್ನು ಚಿತ್ರದಲ್ಲಿ ಬಶೀರ್‌ ಖಾನ್ / ಬಾಬೂ ಎಂದು ತೋರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ವರದಿಯನ್ನೇ ತಿದ್ದಿದ್ದ‘ಸ್ವರಾಜ್ಯ’

ಹೆಸರಿನ ಕುರಿತ ನೈಜ ಸಂಗತಿ ಬಯಲಾಗುತ್ತಲೇ ಸುದ್ದಿ ಸಂಸ್ಥೆ ‘ಸ್ವರಾಜ್ಯ’ ತನ್ನ ವರದಿಯನ್ನು ತಿದ್ದಿದೆ. ‘ಛಪಾಕ್‌ ಚಿತ್ರದಲ್ಲಿ ನಯೀಮ್‌ ಖಾನ್‌ನ ಹೆಸರನ್ನು ಬದಲಾವಣೆ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ,’ ಎಂದು ಬರೆದುಕೊಂಡಿದೆ.ಆರಂಭದಲ್ಲಿ ಹೆಸರು ಬದಲಾವಣೆಯ ಕುರಿತು ವರದಿ ಮಾಡಿದ್ದ ‘ಸ್ವರಾಜ್ಯ’ ತನ್ನ ವರದಿಯಿಂದ ಹಿಂದೆ ಸರಿದಿದೆ. ಕೆಲ ಮಂದಿ ಈ ಕುರಿತು ತಾವು ಮಾಡಿದ್ದ ಟ್ವೀಟ್‌ಗಳನ್ನೂ ಅಳಿಸಿಕೊಂಡಿದ್ದಾರೆ.

ಅಪರಾಧಿಯ ಹೆಸರು, ಧರ್ಮವನ್ನು ಬದಲಾಯಿಸಲಾಗಿದೆ ಎಂಬುದು ಕೆಲವರ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಆ್ಯಸಿಡ್‌ ಸಂತ್ರಸ್ತೆಯ ಜೀವನಾಧಾರಿತವಾದ ಚಿತ್ರ ಛಪಾಕ್‌ ಇಂದು (ಜ.10) ದೇಶಾದ್ಯಂತ ಬಿಡುಗಡೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT