ಭಾನುವಾರ, ಸೆಪ್ಟೆಂಬರ್ 19, 2021
29 °C

ಮಳೆ ನೀರಿನಲ್ಲಿ ಕೊಚ್ಚಿ ಹೋದ ಟ್ರಾಫಿಕ್ ಸಿಗ್ನಲ್: ವೈರಲ್ ವಿಡಿಯೊ ಮುಂಬೈಯದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಳೆ ನೀರಿನಲ್ಲಿ ಟ್ರಾಫಿಕ್ ಸಿಗ್ನಲ್ ಕೊಚ್ಚಿ ಹೋಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಮುಂಬೈ ಮಳೆಯ ವಿಡಿಯೊ ಎಂದು ಹಲವಾರು ನೆಟ್ಟಿಗರು ಶೇರ್ ಮಾಡಿದ್ದಾರೆ.

ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ಈ ವಿಡಿಯೊ ಟ್ವೀಟಿಸಿ,  ಹಲೋ ಟ್ರಾಫಿಕ್ ಪೊಲೀಸ್ ಆಫ್ ಮುಂಬೈ,  ಸಿಗ್ನಲ್ ರಸ್ತೆ ದಾಟಿದ್ದಕ್ಕೆ ಎಷ್ಟು ದಂಡ ತೆರಬೇಕು ಎಂದು ಕೇಳಿದ್ದಾರೆ.

ಇದೇ ವಿಡಿಯೊವನ್ನು ಡಾ. ಶಹರ್ಯಾರ್ ಎಂಬವರು ಆಗಸ್ಟ್ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೊ 4,045 ಬಾರಿ  ಶೇರ್ ಆಗಿದೆ.

 

ಫ್ಯಾಕ್ಟ್‌ಚೆಕ್ 
ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿರುವ ಹೊತ್ತಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮುಂಬೈ ಮಳೆಯ ದೃಶ್ಯ ಎಂದು ಈ ವಿಡಿಯೊ ಶೇರ್ ಆಗುತ್ತಿದೆ. ಆದರೆ ಈ ವಿಡಿಯೊ ಮುಂಬೈಯದ್ದು ಅಲ್ಲ, ಚೀನಾದ್ದು ಎಂದು ಆಲ್ಟ್‌ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿ ವರದಿ ಪ್ರಕಟಿಸಿದೆ.

ಯೂಟ್ಯೂಬ್‌ನಲ್ಲಿ traffic signal water  ಎಂಬ ಕೀವರ್ಡ್ ಸರ್ಚ್ ಮಾಡಿದಾಗ ಹಲವಾರು ವಿಡಿಯೊ ಕಾಣಿಸುತ್ತದೆ. ಇದರಲ್ಲಿ ಈ ವಿಡಿಯೊ ಚೀನಾದ್ದು ಎಂಬ ಮಾಹಿತಿ ಇದೆ.

ಸಾಮಾಜಿಕ  ಮಾಧ್ಯಮಗಳಲ್ಲಿ ಈಗ ಹರಿದಾಡುತ್ತಿರುವುದು ವಿಡಿಯೊ ತುಣುಕು. ಇದರ ಪೂರ್ಣ ವಿಡಿಯೊವನ್ನು 2018 ಮೇ 11ರಂದು ಚೀನಾದ ನ್ಯೂಸ್ ನೆಟ್ವರ್ಕ್ ಸಿಜಿಟಿಎನ್ ಪೋಸ್ಟ್ ಮಾಡಿದೆ.  ಈ ವಿಡಿಯೊದ 0.13 ಅವಧಿಯ ನಂತರ ಬರುವ 9 ಸೆಕೆಂಡ್ ಅವಧಿಯ ವಿಡಿಯೊ ತುಣುಕು ಈಗ ವೈರಲ್ ಆಗಿರುವುದು.  
ಸಿಜಿಟಿಎನ್ ಪ್ರಕಾರ ದಕ್ಷಿಣ ಚೀನಾದ ಯೂಲಿನ್ ಸಿಟಿಯಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಮಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು.

ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಚೈನೀಸ್ ಅಕ್ಷರಗಳನ್ನು ಕಾಣಬಹುದು. ಹಾಗಾಗಿ ಇದು ಭಾರತದ್ದು ಅಲ್ಲ. ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಾಗಲೂ ಸಿಗ್ನಲ್ ಲೈಟ್ ಉರಿಯುತ್ತಿರುವುದು ಕಾಣಬಹುದು. ಇದು ಸೋಲಾರ್‌ನಿಂದ ಉರಿಯುವ ಲೈಟ್ ಆಗಿದ್ದು, ಲೈಟ್ ಮೇಲೆ  ಸೋಲಾರ್ ಫಲಕವೂ ಇದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು