ಕಾಶ್ಮೀರದಲ್ಲಿ 40 ವರ್ಷಗಳ ನಂತರ ಮೊದಲ ಬಾರಿ ಪ್ರಭಾತ ಫೇರಿ -'ಸುಳ್ಳು ಸುದ್ದಿ'

ಶುಕ್ರವಾರ, ಜೂಲೈ 19, 2019
24 °C

ಕಾಶ್ಮೀರದಲ್ಲಿ 40 ವರ್ಷಗಳ ನಂತರ ಮೊದಲ ಬಾರಿ ಪ್ರಭಾತ ಫೇರಿ -'ಸುಳ್ಳು ಸುದ್ದಿ'

Published:
Updated:

ನವದೆಹಲಿ: ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿ ಪ್ರಭಾತ ಫೇರಿ ನಡೆಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಅಚ್ಚರಿಯೇ? ಮೋದಿ ಹೈ ತೋ ಮುಮ್ಕಿನ್ ಹೈ (ಮೋದಿ ಇದ್ದರೆ ಸಾಧ್ಯ) ಎಂಬ ಟ್ವೀಟ್ ವೈರಲ್ ಆಗಿದೆ.

ಬಿಜೆಪಿ ಬೆಂಬಲಿಗ ಪುನೀತ್ ಶರ್ಮಾ ಎಂಬ ಟ್ವೀಟಿಗರು ಹರೇ ರಾಮ ಹರೇ ಕೃಷ್ಣ ಎಂದು ಹಾಡುತ್ತಾ ರಸ್ತೆಯಲ್ಲಿ ಸಾಗುತ್ತಿರುವ ಭಕ್ತರ ವಿಡಿಯೊವನ್ನು ಜೂನ್ 27ರಂದು ಟ್ವೀಟ್ ಮಾಡಿ ಈ ರೀತಿ ಬರೆದಿದ್ದಾರೆ. ಈ ರೀತಿ ಭಜನೆ ಸಾಗುತ್ತಿರುವಾಗ ಪೊಲೀಸರು ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ರಕ್ಷಣೆ ನೀಡುತ್ತಿರುವುದನ್ನೂ ಕಾಣಬಹುದು.

ಇದೇ ವಿಡಿಯೊ ಫೇಸ್‌ಬುಕ್‌ನಲ್ಲಿಯೂ ಸಿಕ್ಕಾಪಟ್ಟೆ ಶೇರ್ ಆಗಿತ್ತು.

ವಾಟ್ಸ್‌ಆ್ಯಪ್‌ನಲ್ಲಿ ಗುಜರಾತಿ ಬರಹದೊಂದಿಗೆ ಇದೇ ವಿಡಿಯೊ ಶೇರ್ ಆಗಿದೆ.

ವಿಡಿಯೊ ಜತೆಗೆ ಗುಜರಾತಿಯಲ್ಲಿರುವ ಬರಹ ಹೀಗಿದೆ - 40 ವರ್ಷಗಳಲ್ಲಿ ಇದೇ ಮೊದಲ ಬಾರಿ  ಶ್ರೀನಗರದ ಪ್ರಜೆಗಳು ಪ್ರಭಾತ ಫೇರಿ ಮಾಡಿದ್ದಾರೆ.ಇದು ಬದಲಾಗುತ್ತಿರುವ ಭಾರತದ ಮುಖ ಎಂದಿದೆ.

ಫ್ಯಾಕ್ಟ್‌ಚೆಕ್ 
ಈ ವೈರಲ್ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್ ನ್ಯೂಸ್, ಶ್ರೀನಗರದ ಇಸ್ಕಾನ್ ದೇಗುಲವನ್ನು ಸಂಪರ್ಕಿಸಿದೆ. ಈ ವಿಡಿಯೊದಲ್ಲಿ ದೇವರ ಮಂಟಪದ ಬಳಿ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡುತ್ತಿರುವ ಅರ್ಚಕರ ಹೆಸರು ಮೋತಿ ಲಾಲ್ ರೈನಾ.

ಆಲ್ಟ್ ನ್ಯೂಸ್ ಜತೆ ಮಾತನಾಡಿದ ರೈನಾ, ಈ ವಿಡಿಯೊ ಪ್ರಭಾತ ಫೇರಿಯದ್ದು ಅಲ್ಲ ಎಂದಿದ್ದಾರೆ. ಇದು ಈ ವರ್ಷದ ರಾಮ ನವಮಿ ಆಚರಣೆಯದ್ದು. ನಾವು ಈ ದೇವರನ್ನು ಹೊತ್ತು ಇಡೀ ಶ್ರೀನಗರ ಸುತ್ತಾಡಿದ್ದೆವು. ರಾಮ ನವಮಿ ಮತ್ತು ಜನ್ಮಾಷ್ಟಮಿಯ ಸಂದರ್ಭದಲ್ಲಿ ನಾವು ಇಂತಾ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ಇದು ಸಾಧ್ಯವಾಗುತ್ತದೆ ಕೆಲವೊಮ್ಮೆ ಅನುಮತಿ ಸಿಗುವುದಿಲ್ಲ. ಆದಾಗ್ಯೂ, ಇಂತಾ ಆಚರಣೆಗಳು 40 ವರ್ಷದಲ್ಲಿ ಇದೇ ಮೊದಲ ಬಾರಿ ಎಂಬುದು ತಪ್ಪು. 2008ರಿಂದ ಈ ಆಚರಣೆಗಳು ನಡೆದು ಬರುತ್ತಿವೆ ಎಂದಿದ್ದಾರೆ.

ಈ ವರ್ಷ ಏಪ್ರಿಲ್ ತಿಂಗಳಲ್ಲಿ ರಾಮನವಮಿ ಆಚರಣೆ ನಡೆದಿತ್ತು. 

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕಾಶ್ಮೀರ ಕಣಿವೆಯಲ್ಲಿ  ರಾಮನವಮಿ ಆಚರಣೆ ನಡೆದು ಬರುತ್ತಿತ್ತು ಎಂಬುದಕ್ಕೆ ಸಾಕ್ಷ್ಯ ಈ ವರದಿಯಲ್ಲಿದೆ.

ಅಂದಹಾಗೆ  ವೈರಲ್ ಟ್ವೀಟ್‌ನಲ್ಲಿ ಹೇಳಿದಂತೆ ರಾಮನವಮಿ ಆಚರಣೆಗೂ ಪ್ರಭಾತ ಫೇರಿಗೂ ಯಾವುದೇ ಸಂಬಂಧ ಇಲ್ಲ. ರಾಮನವಮಿ ಆಚರಣೆಯೂ ಇಲ್ಲಿ ಮೊದಲೇನೂ ಅಲ್ಲ. ಭದ್ರತಾ ದೃಷ್ಟಿಯಿಂದ ಇಲ್ಲಿ ಪ್ರಭಾತ ಫೇರಿ ನಿಯಮಿತವಾಗಿ ನಡೆಯುವುದಿಲ್ಲ. ನಾವು ಇದನ್ನೂ ಆಯೋಜಿಸಲು ಪ್ರಯತ್ನಿಸಿದ್ದೂ ಇದೆ. ಏತನ್ಮಧ್ಯೆ, ಜಮ್ಮು ಪ್ರದೇಶದಲ್ಲಿರುವ ಉಧಂಪುರದಲ್ಲಿ ಇಸ್ಕಾನ್ ವತಿಯಿಂದ ದಿನಾ ಪ್ರಭಾತ ಫೇರಿ ನಡೆಯುತ್ತಿದೆ ಎಂದಿದ್ದಾರೆ ರೈನಾ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !