ಸೋಮವಾರ, ಅಕ್ಟೋಬರ್ 21, 2019
21 °C

ವೈರಲ್ ವಿಡಿಯೊ: ದಾಂಡಿಯಾ ನೃತ್ಯ ಮಾಡುತ್ತಿರುವುದು ಮೊರಾರ್ಜಿ ದೇಸಾಯಿ ಅಲ್ಲ

Published:
Updated:

ಬೆಂಗಳೂರು: ಗಾಂಧಿ ಟೋಪಿ ಧರಿಸಿದ ಹಿರಿಯ ವ್ಯಕ್ತಿಯೊಬ್ಬರು ಗುಜರಾತಿನ ಜಾನಪದ ನೃತ್ಯವಾದ ದಾಂಡಿಯಾ ಆಡುತ್ತಿರುವ  ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 1962ರಲ್ಲಿ ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಭಡೇಲಿ ವಲ್ಸದ್‌ ಎಂಬಲ್ಲಿ ಗರ್ಭಾ ನೃತ್ಯ ಮಾಡುತ್ತಿರುವುದು ಎಂಬ ಶೀರ್ಷಿಕೆಯೊಂದಿಗೆ  ಈ ವಿಡಿಯೊ ವ್ಯಾಪಕ ಶೇರ್ ಆಗಿದೆ. 

ಕೀರ್ತಿ ಜೊಬಾನ್‌ಪುತ್ರ  ಎಂಬ  ಫೇಸ್‌ಬುಕ್ ಖಾತೆಯಲ್ಲಿ 2018 ಅಕ್ಟೋಬರ್ 22ರಂದು  ಅಪ್‌ಲೋಡ್ ಆಗಿರುವ ಈ  ವಿಡಿಯೊ 9 ಸಾವಿರ ಬಾರಿ ಶೇರ್ ಆಗಿದೆ. 3.05 ನಿಮಿಷ ಅವಧಿಯ ಈ ವಿಡಿಯೊ ಕಳೆದ ವರ್ಷವೂ ನವರಾತ್ರಿ ಹಬ್ಬದ ಸಮಯದಲ್ಲಿ ಹರಿದಾಡಿತ್ತು. ಹಲವಾರು ಫೇಸ್‌ಬುಕ್ ಬಳಕೆದಾರರು ಈ ವರ್ಷವೂ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.

 ಟ್ವಿಟರ್ ಮತ್ತು ಯುಟ್ಯೂಬ್‌ನಲ್ಲಿಯೂ ಇದೇ ವಿಡಿಯೊ ಶೇರ್ ಆಗಿದೆ.

 2018 ಅಕ್ಟೋಬರ್  ತಿಂಗಳಲ್ಲಿ ಜೀ 24 ಕಲಕ್ ಟ್ವಿಟರ್ ಖಾತೆಯಲ್ಲಿ ಇದೇ ವಿಡಿಯೊ ಶೇರ್ ಆಗಿತ್ತು. 

 ಫ್ಯಾಕ್ಟ್‌ಚೆಕ್ 
ವೈರಲ್ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್ ನ್ಯೂಸ್,  ಆ ವಿಡಿಯೊದಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿ ಮೊರಾರ್ಜಿ ದೇಸಾಯಿ ಅಲ್ಲ ಎಂದಿದೆ.  Morarji Desai dandiya ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ ಸಿಕ್ಕಿದ್ದು ದಿವ್ಯ ಭಾಸ್ಕರ್ ಎಂಬ ಗುಜರಾತಿ  ದೈನಿಕದಲ್ಲಿ ಪ್ರಕಟವಾದ ವರದಿ.  2018 ಅಕ್ಟೋಬರ್‌ನಲ್ಲಿ ಪ್ರಕಟವಾದ ಈ ವರದಿಯಲ್ಲಿ ವಿಡಿಯೊದಲ್ಲಿರುವ  ವ್ಯಕ್ತಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅಲ್ಲ ಎಂದಿದೆ.  


ದಿವ್ಯ ಭಾಸ್ಕರ್ ದೈನಿಕದಲ್ಲಿ ಪ್ರಕಟವಾದ ವರದಿ

ಗುಜರಾತಿ ಪತ್ರಿಕೆಯ ವರದಿ ಪ್ರಕಾರ ವೈರಲ್ ವಿಡಿಯೊ:  ಗರ್ಭಾ ನೃತ್ಯ ಮಾಡುತ್ತಿರುವುದು ಮೊರಾರ್ಜಿ ದೇಸಾಯಿ ಅಲ್ಲ, ಅದು ಕನ್ವರ್‌ಜೀ ನರಸಿಂಹ್ ಲೊದಯಾ ಎಂದಿದೆ.
 ಕೆಲವು ದಿನಗಳ ಹಿಂದೆ  ವಿಡಿಯೊವೊಂದು ವೈರಲ್ ಆಗಿತ್ತು. ದೇಶದ ಮೊದಲ ಗುಜರಾತಿ ಪ್ರಧಾನಿ ಮೊರಾರ್ಜಿ ದೇಸಾಯಿ ಗರ್ಭಾ  ನೃತ್ಯ ಮಾಡುತ್ತಿದ್ದಾರೆ ಎಂದು ವಿಡಿಯೊ ಶೀರ್ಷಿಕೆ  ಇದೆ. ಆದರೆ  ನಿಜ ಸಂಗತಿ ಬೇರೆಯೇ ಇದೆ. ಟೋಪಿ ಧರಿಸಿ ನೃತ್ಯ ಮಾಡುತ್ತಿರುವ ವ್ಯಕ್ತಿ ಮೊರಾರ್ಜಿ ದೇಸಾಯಿ ಅಲ್ಲ ಕನ್ವರ‌್‌ಜೀ ನರಸಿಂಹ್ ಲೊದಯಾ ಆಗಿದ್ದಾರೆ. ಅವರು ಸಹೋದರ ಮುಲ್ಜಿ ನರಸಿಂಹ್ ಲೊದಯಾ ಅವರೊಂದಿಗೆ ನೃತ್ಯ ಮಾಡುತ್ತಿದ್ದಾರೆ. ಕನ್ವರ್‌ಜೀ ಲೊದಯಾ ಅವರು ಈಗ ಇಲ್ಲ. 1994ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೊ ಇದಾಗಿದೆ ಎಂದು ದಿವ್ಯ ಭಾಸ್ಕರ್ ವರದಿಯಲ್ಲಿದೆ.

ದೇಶ್ ಗುಜರಾತ್ ಎಂಬ ಪೋರ್ಟಲ್‌ನಲ್ಲಿಯೂ  ವಿಡಿಯೊದಲ್ಲಿ ಗರ್ಭಾ ನೃತ್ಯ ಮಾಡುತ್ತಿರುವ ವ್ಯಕ್ತಿ ಕನ್ವರ್‌ಜೀ ಲೋದಯಾ ಆಗಿದ್ದು 1994ರಲ್ಲಿ ಮುಂಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿನ ನೃತ್ಯದ ದೃಶ್ಯವಾಗಿದೆ ಎಂದಿದೆ.

ದೇಶ್ ಗುಜರಾತ್ ಮೊರಾರ್ಜಿ ದೇಸಾಯಿ ಅವರ ಕುಟುಂಬದವರನ್ನು ಸಂಪರ್ಕಿಸಿದ್ದು, ವಿಡಿಯೊದಲ್ಲಿರುವುದು ಮೊರಾರ್ಜಿ ದೇಸಾಯಿ ಅಲ್ಲ ಎಂಬ ವಿಷಯವನ್ನು ದೃಢೀಕರಿಸಿದೆ. ಪೋರ್ಟಲ್‌ನ ವರದಿ ಪ್ರಕಾರ ದೇಶ್ ಗುಜರಾತ್, ಮೊರಾರ್ಜಿ ದೇಸಾಯಿ ಅವರ ಮರಿಮೊಮ್ಮಗ ಮಧುಕೇಶ್ವರ್ ದೇಸಾಯಿ ಅವರನ್ನು ಸಂಪರ್ಕಿಸಿದ್ದು, ವಿಡಿಯೊದಲ್ಲಿರುವುದು ಮೊರಾರ್ಜಿ ದೇಸಾಯಿ ಅಲ್ಲ ಎಂದು ಅವರು ಹೇಳಿದ್ದಾರೆ. ಮೊರಾರ್ಜಿ ಭಾಯಿ ಅವರು ಪ್ರತಿದಿನ ಚೂಡಿದಾರ ತೊಡುತ್ತಿದ್ದರು. ಬರೀ ಬಟ್ಟೆ ಮಾತ್ರವಲ್ಲ, ಎತ್ತರ , ದೇಹದ ಆಕಾರ, ಬಣ್ಣ ಎಲ್ಲವೂ  ಮೊರಾರ್ಜಿ ದೇಸಾಯಿ ಅವರಿಗಿಂತ ಭಿನ್ನವಾಗಿದೆ ಎಂದು ಮಧುಕೇಶ್ವರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ- ಹಿಟ್ಲರ್ ಪುಸ್ತಕ: ಫೋಟೊಶಾಪ್ ಚಿತ್ರ ವೈರಲ್

 

Post Comments (+)