ಶುಕ್ರವಾರ, ಮಾರ್ಚ್ 31, 2023
22 °C

Fact Check: ಪ್ರಧಾನಿ ಕಚೇರಿಗೆ ಕಾಲಿಡುವ ಮುನ್ನ ರಿಷಿ ಸುನಕ್ ದೀಪ ಬೆಳಗಿದರೇ?

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಭಾರತದಲ್ಲಿ ಬಹಳಷ್ಟು ಚರ್ಚೆಗೂ ಕಾರಣವಾಗಿದೆ. ಈ ಹಂತದಲ್ಲಿ, ರಿಷಿ ಸುನಕ್ ಅವರು ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೀಪಾವಳಿಯಂದು (25 ಅಕ್ಟೋಬರ್ 2022) ಮೊದಲ ಬಾರಿ 10, ಡೌನಿಂಗ್ ಸ್ಟ್ರೀಟ್ ವಿಳಾಸದಲ್ಲಿರುವ ತಮ್ಮ ಕಚೇರಿ ಪ್ರವೇಶಿಸುವ ಮುನ್ನ ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ, ದೀಪ ಹಚ್ಚಿ ಒಳಗೆ ಪ್ರವೇಶಿಸಿದರು ಎಂಬ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೊಗಳು ಮತ್ತು ಚಿತ್ರಗಳು ಹರಿದಾಡಿವೆ.

ಇವುಗಳ ಸತ್ಯಾಸತ್ಯತೆಯನ್ನು ಪ್ರಜಾವಾಣಿ ಪರಿಶೀಲಿಸಿತು.

ಹರಿದಾಡುತ್ತಿದ್ದ ವಿಷಯ ಏನು?


ಟ್ವೀಟ್ ಸ್ಕ್ರೀನ್ ಶಾಟ್. 48 ಸಾವಿರಕ್ಕೂ ಹೆಚ್ಚು ಲೈಕ್ಸ್ ಇವೆ.

'ದಿಸ್ ಇಸ್ ಆಫ್ರಿಕಾ' ಎಂಬ ಟ್ವಿಟರ್ ಖಾತೆಯೊಂದರಲ್ಲಿ ವಿಡಿಯೊವೊಂದನ್ನು ಹಂಚಲಾಗಿದ್ದು, ಅದರಲ್ಲಿ "ಯುಕೆ ಹೊಸ ಪ್ರಧಾನಿ ತಮ್ಮ ಹೊಸ ಕಚೇರಿ ಪ್ರವೇಶಿಸುವ ಮುನ್ನ ಆಧ್ಯಾತ್ಮಿಕ/ಸಾಂಪ್ರದಾಯಿಕ ಕ್ರಮಗಳನ್ನು ಅನುಸರಿಸಿದರು. ನಾವು ನಮ್ಮ ಪರಂಪರೆಯನ್ನು ಬಹುತೇಕ ಮರೆತಿದ್ದೇವೆ" ಎಂದು ಬರೆಯಲಾಗಿತ್ತು. ಲಿಂಕ್ ಇಲ್ಲಿದೆ.

ಫೇಸ್‌ಬುಕ್ ತಾಣದಲ್ಲಿಯೂ ಯೊರುಬಾ ಕಲ್ಚರಲ್ ಹೆರಿಟೇಜ್ ಸೆಂಟರ್ ಹೆಸರಿನ ಖಾತೆಯಲ್ಲಿ ಹಲವು ಚಿತ್ರಗಳನ್ನು ಬಳಸಿ, ರಿಷಿ ಸುನಕ್ ಅವರು ತಮ್ಮ ಕಚೇರಿ ಪ್ರವೇಶಿಸುವ ಮುನ್ನ ದೀಪಾವಳಿ ಆಚರಿಸಿದರು ಎಂದು ಬರೆಯಲಾಗಿತ್ತು. ಲಿಂಕ್ ಇಲ್ಲಿದೆ.

ಫಸ್ಟ್ ಪೋಸ್ಟ್ ಸುದ್ದಿ ತಾಣದಲ್ಲಿ ಕೂಡ ಇದೇ ಅರ್ಥದಲ್ಲಿ ವರದಿ ಇಲ್ಲಿ ಪ್ರಕಟವಾಗಿದೆ

ಪ್ರಜಾವಾಣಿ ಸತ್ಯಾಂಶ ತನಿಖೆ
ಈ ಕುರಿತು ಪ್ರಜಾವಾಣಿಯ ವೆಬ್ ತಂಡವು ಸತ್ಯಾಂಶವೇನೆಂದು ಪರಿಶೀಲಿಸಿದೆ. ಇನ್‌ವಿಡ್ ಟೂಲ್ ಬಳಸಿ ವಿಡಿಯೊದಿಂದ ಚಿತ್ರಗಳನ್ನು ಪಡೆದು, ಅದನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಅಂತರಜಾಲದಲ್ಲಿ ಶೋಧಿಸಲಾಯಿತು. ಈ ಸಂದರ್ಭದಲ್ಲಿ ರಿಷಿ ಸುನಕ್ ಅವರು 2020ರ ನವೆಂಬರ್ 14ರಂದು ಪೋಸ್ಟ್ ಮಾಡಿದ ಟ್ವಿಟರ್ ವಿಡಿಯೊ ದೊರೆಯಿತು. ಅದರ ಲಿಂಕ್ ಇಲ್ಲಿದೆ.

ರಿಷಿ ಸುನಕ್ ಅವರು ಚಾನ್ಸ್‌ಲರ್ ಆಗಿದ್ದಾಗ ಡೌನಿಂಗ್ ಸ್ಟ್ರೀಟ್‌ನ ನಂ.11ನೇ ಮನೆಯಲ್ಲಿ ಆಚರಿಸಿದ ದೀಪಾವಳಿಯ ವಿಡಿಯೊ ಆಗಿತ್ತದು.

ಮತ್ತಷ್ಟು ಹುಡುಕಿದಾಗ, ಚಿತ್ರ ಪೂರೈಕೆ ಸಂಸ್ಥೆಯಾಗಿರುವ 'ಗೆಟ್ಟಿ ಇಮೇಜಸ್' ವೆಬ್ ತಾಣದಲ್ಲಿ ಇದೇ ಚಿತ್ರವನ್ನು ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿರುವ ಅಡಿಬರಹವೂ ಕೂಡ 2020ರ ನವೆಂಬರ್ 14 ದಿನಾಂಕವನ್ನು ತೋರಿಸುತ್ತಿದ್ದು, ಚಾನ್ಸ್‌ಲರ್ ರಿಷಿ ಸುನಕ್ ಅವರು ಲಂಡನ್ ಡೌನಿಂಗ್ ಸ್ಟ್ರೀಟ್‌ನ ತಮ್ಮ ನಿವಾಸದೆದುರು 2020 ನವೆಂಬರ್ 12ರಂದು ದೀಪಾವಳಿಯ ದೀಪ ಬೆಳಗಿದ ದೃಶ್ಯವಿದೆಂದು ಬರೆಯಲಾಗಿತ್ತು. ಲಿಂಕ್ ಇಲ್ಲಿದೆ.

ಬಳಿಕ, ಫೇಸ್‌ಬುಕ್ ಪೋಸ್ಟ್‌ನಲ್ಲಿದ್ದ ದೀಪಗಳ ಚಿತ್ರದ ಬಗೆಗೂ ಹುಡುಕಾಟ ನಡೆಸಲಾಯಿತು. ಅದು ಫ್ಲಿಪ್‌ಕಾರ್ಟ್ ವಾಣಿಜ್ಯ ಜಾಲತಾಣದಲ್ಲಿ ಬತ್ತಿಯ ಮಾರಾಟಕ್ಕೆ ಬಳಸಿದ್ದ ಚಿತ್ರ (ಇಲ್ಲಿದೆ ಲಿಂಕ್) ಮಾತ್ರವಲ್ಲದೆ, ವಿಕಿಪೀಡಿಯಾದಲ್ಲಿ ಕೂಡ ಇದೇ ಚಿತ್ರವು ಗೋಚರಿಸಿದೆ.

ಇದಲ್ಲದೆ, ಪ್ರಖ್ಯಾತ ಬ್ರಿಟಿಷ್ ಮಾಧ್ಯಮ ಸಂಸ್ಥೆ ಗಾರ್ಡಿಯನ್ ಕೂಡ 2020ರ ದೀಪಾವಳಿ ಕುರಿತ ವರದಿಯೊಂದರಲ್ಲಿ ರಿಷಿ ಸುನಕ್ ಅವರು ದೀಪಾವಳಿ ಆಚರಿಸಿದ ವಿಷಯವನ್ನೂ, ಚಿತ್ರವನ್ನೂ ತನ್ನ ಸುದ್ದಿಯಲ್ಲಿ ಪ್ರಕಟಿಸಿತ್ತು. ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಚಿತ್ರ ಮತ್ತು ವಿಡಿಯೊಗಳು ಸಾಂದರ್ಭಿಕವಾಗಿ ತಪ್ಪು ಮಾಹಿತಿಯೊಂದಿಗೆ ಪುನಃ ಬಳಸಲಾಗಿದೆ ಎಂಬುದನ್ನು ಪುಷ್ಟೀಕರಿಸಿದೆ.

ಅಂತಿಮ ನಿರ್ಣಯ
ಹೀಗಾಗಿ, ರಿಷಿ ಸುನಕ್ ಅವರು ಪ್ರಧಾನಿಯಾದ ಬಳಿಕ ತಮ್ಮ ಕಚೇರಿಗೆ ತೆರಳುವ ಮುನ್ನ ದೀಪ ಹಚ್ಚಿದರು ಎಂಬ ಅಡಿಬರಹದೊಂದಿಗೆ ಹರಿದಾಡುತ್ತಿದ್ದ ವಿಡಿಯೊ ಮತ್ತು ಚಿತ್ರಗಳ ಕುರಿತ ಮಾಹಿತಿಯು ದಾರಿ ತಪ್ಪಿಸುವಂಥದ್ದು ಎಂಬುದು ಖಚಿತವಾಗಿದೆ. ಚಿತ್ರ ಮತ್ತು ವಿಡಿಯೊ ನಿಜವೇ ಆಗಿದ್ದರೂ ಕೂಡ, ಅವುಗಳು 2020ಕ್ಕೆ ಸಂಬಂಧಿಸಿದ್ದೇ ಹೊರತು, ರಿಷಿ ಸುನಕ್ ಪ್ರಧಾನಿಯಾದ ಬಳಿಕ ಕಚೇರಿಗೆ ಕಾಲಿಡುವುದಕ್ಕೆ ಮುನ್ನ ನಡೆಸಿದ ಆಚರಣೆಯಲ್ಲ ಎಂಬುದು ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು