ಸೋಮವಾರ, ಮಾರ್ಚ್ 30, 2020
19 °C

ಚರ್ಮ ರಕ್ಷಣೆಗೆ ಮನೆಮದ್ದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಳಿಗಾಲದಲ್ಲಿ ಚಂದಗಾಣಿಸಬೇಕೆಂದರೆ ನುಣ್ಣನೆಯ, ಬೆಣ್ಣೆಯಂತೆ ಚರ್ಮದ ಸ್ಥಿತಿಯನ್ನು ಕಾಪಿಟ್ಟುಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮ ಕೈಗೊಳ್ಳ ಬಹುದು. ಚರ್ಮ ರಕ್ಷಣೆಯ ಪಂಚ ತಂತ್ರಗಳು ಇಲ್ಲಿವೆ.

ಮೊದಲು ನಿಮ್ಮ ಚರ್ಮ ಶುಷ್ಕವಾಗಿದೆಯೇ ಅಥವಾ ಎಣ್ಣೆ ಚರ್ಮವೇ ಎಂದು ನಿರ್ಧರಿಸಿಕೊಳ್ಳಿ. ಚರ್ಮ ಯಾವ ಬಗೆಯದ್ದೆಂದು ನಿರ್ಧರಿಸಲು, ಮಲಗೆದ್ದ ಮೇಲೆ ಒಮ್ಮೆ ಮೂಗು, ಗದ್ದ ಎರಡನ್ನೂ ಮುಟ್ಟಿನೋಡಿ. ಅಲ್ಲಿ ಜಿಡ್ಡಿನಂಶ ಕಂಡು ಬಂದರೆ ಎಣ್ಣೆ ಚರ್ಮವೆಂಬ ನಿರ್ಧಾರಕ್ಕೆ ಬರಬಹುದು. ಚರ್ಮ ಒಣಗಿದಂತೆ, ಒಡೆದಂತೆ ಕಾಣುತ್ತಿದ್ದರೆ ಒಣ ಚರ್ಮವೆಂಬ ನಿರ್ಧಾರಕ್ಕೆ ಬರಬಹುದು.

ಕಡಲೆಹಿಟ್ಟು ಹಾಗೂ ಅರಿಶಿಣ ಲೇಪನ: ನಿಮ್ಮದು ಒಣ ಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆ ರಸ ಅಥವಾ ತಿಳಿಮಜ್ಜಿಗೆ ನೀರು ಬೆರೆಸಿ ಲೇಪನ ಮಾಡಿಕೊಳ್ಳಬೇಕು. ಈ ಲೇಪನವನ್ನು ಮುಖ, ಕೈ-ಕಾಲುಗಳಿಗೆ ಲೇಪಿಸಿಕೊಂಡು, ಒಣಗಿದಂತೆ ಅನಿಸಿದಾಗ, ಉಗುರು ಬೆಚ್ಚಗಿನ ನೀರನ್ನು ಬಳಸಿ ತೊಳೆದುಕೊಳ್ಳಬೇಕು. ಮೈ ಮೇಲಿನ ನೀರು ಹಿಂಗುವಂತೆ ಅಂಗೈನಿಂದ ತಟ್ಟಿ ತಟ್ಟಿ ಒರೆಸಿಕೊಳ್ಳಬೇಕು.

ಲೋಳೆಸರ: ಇದು ಯಾವ ಬಗೆಯ ಚರ್ಮವಾದರೂ ಪರವಾಗಿಲ್ಲ, ಧಾರಾಳವಾಗಿ ಬಳಸಬಹುದು. ಬಟ್ಟಲೊಂದಕ್ಕೆ ಲೋಳೆ ಸರದ ತಿರುಳನ್ನು ತೆಗೆದುಕೊಂಡು, ನಿಂಬೆ ರಸ ಹಾಗೂ ಅರಿಶಿಣವನ್ನು ಬೆರೆಸಿ, ಜೆಲ್‌ನಂತೆ ಇದನ್ನು ಮುಖಕ್ಕೆ, ಮೊಣಕೈ ತುದಿಗಳಿಗೆ ಲೇಪಿಸಿ, ಹದಿನೈದು ನಿಮಿಷಗಳ ನಂತರ ತೊಳೆದುಕೊಳ್ಳಿ.

ಆಲೂಗಡ್ಡೆ: ಇದು ಚರ್ಮವನ್ನು ಸ್ವಚ್ಛಗೊಳಿಸಿ, ಕೋಮಲಾಂಶ ನೀಡುತ್ತದೆ. ಆಲೂಗಡ್ಡೆಯನ್ನು ತುರಿದುಕೊಂಡು, ಆ ತುರಿಯನ್ನು ಮುಖಕ್ಕೆ ಉಜ್ಜಿ ಕೊಳ್ಳಬೇಕು. ಅದರ ನಂತರ ಐಸ್‌ ಕ್ಯುಬ್‌ ಅನ್ನು ಮುಖದ ತುಂಬ ಆಡಿಸಿಕೊಂಡರೆ ನುಣುಪು ನಿಮ್ಮ ಅನುಭವಕ್ಕೆ ಬರುತ್ತದೆ.

ಪಪ್ಪಾಯ: ಅತಿ ಹಣ್ಣಾಗಿ ಕಳೆತ ಪಪ್ಪಾಯದ ತಿರುಳನ್ನು ಅಂಗೈಯಲ್ಲಿ ಹಿಸುಕಿಕೊಳ್ಳಿ. ಒಣಚರ್ಮವಾದರೆ ಕೆನೆ, ಎಣ್ಣೆ ಚರ್ಮವಾದರೆ ನಿಂಬೆರಸ ಬೆರೆಸಿ, ಪೇಸ್ಟ್‌ ಮಾಡಿಕೊಳ್ಳಿ. ಈ ಲೇಪನವನ್ನು ಮುಖ, ಕತ್ತು, ಕೈಗಳಿಗೆ ಲೇಪಿಸಿಕೊಳ್ಳಿ. ಕಾಲು ಗಂಟೆಯ ನಂತರ ಚರ್ಮ ಬಿಗಿದುಕೊಂಡಂತೆ ಎನಿಸ ತೊಡಗುತ್ತದೆ. ಆಗ ಉಗುರು ಬಿಸಿ ನೀರಿನಿಂದ ಇದನ್ನು ತೊಳೆದುಕೊಳ್ಳಿ.

ಕೊಬ್ಬರಿ ಎಣ್ಣೆ: ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಹಚ್ಚಿ ಕೊಂಡು ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ನೈಸರ್ಗಿಕ ಮಾಯಿಶ್ಚರೈಸರ್‌ ನೀಡಿದಂತೆ ಆಗುತ್ತದೆ.

ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಲು ಆಗದಿದ್ದರೆ ಸ್ನಾನದ ಕೊನೆಯಲ್ಲಿ  ಒಂದು ಲೋಟ ನೀರಿಗೆ ಒಂದಷ್ಟು ತೆಂಗಿನೆಣ್ಣೆಯ ಹನಿಗಳನ್ನು ಸೇರ್ಪಡೆಗೊಳಿಸಿ, ಅವನ್ನು ಕೈ, ಕಾಲು, ಬೆನ್ನು, ಹೊಟ್ಟೆಗೆ ಹಚ್ಚಿಕೊಂಡರೆ ಚಳಿಗಾಲದ ತುರಿಕೆ ಹಾಗೂ ಕೆರೆತವನ್ನು ಕಡಿಮೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು