ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್ಪಾವಧಿಯಲ್ಲಿ ಸಿದ್ಧಗೊಳುವ ಪುಲಾವ್‌ ಮಾಡುವುದು ಹೇಗೆ?

Published 30 ಆಗಸ್ಟ್ 2024, 22:44 IST
Last Updated 30 ಆಗಸ್ಟ್ 2024, 22:44 IST
ಅಕ್ಷರ ಗಾತ್ರ

ಸಬ್ಬಸ್ಸಿಗೆ ಭಾತ್‌

ಬೇಕಾಗುವ ಸಾಮಗ್ರಿ: ಮೊದಲೇ ಮಾಡಿಟ್ಟುಕೊಂಡಿದ್ದ ಒಂದು ಕಪ್‌ನಷ್ಟು ಅನ್ನ (ರಾತ್ರಿ ಉಳಿದ ಅನ್ನವನ್ನೂ ಬಳಸಬಹುದು), ಒಂದು ಹಿಡಿ ಸಣ್ಣಗೆ ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು, ಉದ್ದಗೆ ಸೀಳಿದ ಎಂಟ್ಹತ್ತು ಬೆಳ್ಳುಳ್ಳಿ, ಮೂರು ಹಸಿಮೆಣಸಿನಕಾಯಿ, ಉದ್ದುದ್ದಗೆ, ಸಣ್ಣಗೆ ಕತ್ತರಿಸಿದ ಸ್ವಲ್ಪ ಕ್ಯಾಬೇಜ್‌ (ಎಲೆಕೋಸು), ಒಂದು ಈರುಳ್ಳಿ, ಅರಿಸಿನ ಪುಡಿ, ಉಪ್ಪು, ಜೀರಿಗೆ, ಸಾಸಿವೆ, ಕರಿಬೇವು ಎಣ್ಣೆ/ ತುಪ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಅಥವಾ ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು ಹಾಗೂ ಉದ್ದಗೆ ಸೀಳಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಒಗ್ಗರಣೆ ಹಾಕಿ. ಸಣ್ಣಗೆ ಹೆಚ್ಚಿದ್ದ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ನಂತರ ಹೆಚ್ಚಿಟ್ಟ ಸೊಪ್ಪು, ಎರಡು ಚಿಟಿಕೆ ಅರಿಸಿನ ಪುಡಿ ಹಾಕಿ ಚನ್ನಾಗಿ ಬೇಯಿಸಿಕೊಳ್ಳಿ. ಮಾಡಿಟ್ಟ ಅನ್ನವನ್ನು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದೆರೆಡು ನಿಮಿಷದ ವರೆಗೆ ಚನ್ನಾಗಿ ಮಿಶ್ರಣ ಮಾಡಿ. ಬಳಿಕ ಕ್ಯಾಬೇಜ್‌, ಸ್ವಲ್ಪ ಸಬ್ಬಸ್ಸಿಗೆ ಸೊಪ್ಪು ಹಾಕಿದರೆ ಸಬ್ಬಸ್ಸಿಗೆ ಭಾತ್‌ ಸವಿಯಲು ಸಿದ್ಧ.

ಪಾಲಕ್‌ ಪುಲಾವ್‌

ಬೇಕಾಗುವ ಸಾಮಗ್ರಿ: ಒಂದು ಕಪ್‌ ಮಾಡಿಟ್ಟುಕೊಂಡಿರುವ ಅನ್ನ (ಬಾಸ್ಮತಿ ಅಥವಾ ಸೋನಾಮಸೂರಿ ಅಕ್ಕಿ ಬಳಸಬಹುದು), ಒಂದು ಚಿಕ್ಕ ಕಟ್ಟು ಪಾಲಕ್‌, ಐದಾರು ಬೆಳ್ಳುಳ್ಳಿ, ಅರ್ಧ ಇಂಚು ಹಸಿಶುಂಠಿ, ಮೂರು ಹಸಿಮೆಣಸಿನಕಾಯಿ, ಈರುಳ್ಳಿ, ಉಪ್ಪು, ಅರಿಸಿನ ಪುಡಿ, ತಲಾ ಎರಡು ಏಲಕ್ಕಿ, ಲವಂಗ, ಪಲಾವ್‌ ಎಲೆ, ಐದಾರು ಗೋಡಂಬಿ ಅಥವಾ ಬಾದಾಮಿ ಹಾಗೂ ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಮೊದಲಿಗೆ ತೊಳೆದು, ಕತ್ತರಿಸಿಟ್ಟುಕೊಂಡ ಪಾಲಕ್‌, ಐದಾರು ಬೆಳ್ಳುಳ್ಳಿ, ಅರ್ಧ ಇಂಚು ಹಸಿಶುಂಠಿ, ಮೂರು ಹಸಿಮೆಣಸಿನಕಾಯಿಯನ್ನು ಮಿಕ್ಸ್‌ರ್‌ಗೆ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಬಾಣಲೆಯಲ್ಲಿ ಎರಡ್ಮೂರು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ, ಏಳೆಂಟು ಗೋಡಂಬಿ ಹಾಕಿ ಹುರಿದಿಟ್ಟುಕೊಳ್ಳಿ. ಬಳಿಕ ಅದೇ ಬಾಣಲೆಗೆ ಜೀರಿಗೆ, ಸಾಸಿವೆ, ತಲಾ ಎರಡು ಏಲಕ್ಕಿ, ಲವಂಗ, ಪಲಾವ್‌ ಎಲೆ, ಸ್ವಲ್ಪ ಕರಿಬೇವು, ಚಿಟಿಕೆ ಅರಿಶಿಣ ಹಾಕಿ. ಸಣ್ಣಗೆ ಕತ್ತರಿಸಿದ್ದ ಈರುಳ್ಳಿ ಹಾಕಿ, ಅದು ಬೆಂದ ನಂತರ ರುಬ್ಬಿಕೊಂಡಿದ್ದ ಪಾಲಕ್‌ ಮಿಶ್ರಣ ಹಾಕಿ, ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಸ್ವಲ್ಪ ಗರಂ ಮಸಾಲಾ‍ ‍ಪುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಅನ್ನ ಸೇರಿಸಿ, ಎರಡ್ಮೂರು ನಿಮಿಷ ಬೇಯಿಸಿದರೆ ಪಾಲಕ್‌ ಪುಲಾವ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT