ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗಾಲದ ಮಹಾ ಖಾದ್ಯ ಗುಳ್ಳೆ

Published 22 ಜೂನ್ 2024, 21:07 IST
Last Updated 22 ಜೂನ್ 2024, 21:07 IST
ಅಕ್ಷರ ಗಾತ್ರ

ಕರ್ನಾಟಕದ ಕರಾವಳಿಗುಂಟ ಮಾತೊಂದು ಪ್ರಚಲಿತದಲ್ಲಿದೆ. ‘ಒಳ್ಳೆನು ಒಂದು ಹಾವೆ, ಗುಳ್ಳೆನು ಒಂದು ಗವಲೆ’ ಎಂದು. ಇದಕ್ಕೆ ಈ ಎರಡೂ ಜೀವಿಗಳ ಮೃದು ಸ್ವಭಾವವೆ ಕಾರಣ ಇರಬಹುದೇನೊ. ಗುಳ್ಳೆ ಮತ್ತು ನರ್ತೆ ಎಂದು ಪ್ರಾದೇಶಿಕ ಹೆಸರಿನಿಂದ ಕರೆಯಲ್ಪಡುವ ಗುಳ್ಳೆ ಕರಾವಳಿ ಭಾಗದ ಜನರ ಮಳೆಗಾಲದ ಮಹಾ ಖಾದ್ಯ!

ಕರಾವಳಿಯಲ್ಲಿ ಮುಂಗಾರು ಇಳೆಗೆ ಮುತ್ತಿಕ್ಕಿತೆಂದರೆ ಗುಳ್ಳೆ ಪ್ರಿಯರು ಕನಸು ಕಾಣಲು ಶುರು ಮಾಡುತ್ತಾರೆ. ಭೂದೇವಿಯ ಮಡಿಲಿನಲ್ಲಿರುವ ಬೀಜದೊಡನೆ ಸ್ಪರ್ಧೆ ಒಡ್ಡಿದಂತೆ ಕೃಷಿ ಮಾಡುವ ವಿಶೇಷವಾಗಿ ಭತ್ತ ಬೆಳೆಯುವ ಗದ್ದೆಯ ಹಾಳಿ ಬದಿಯಲ್ಲಿ ಕಾಣಸಿಗುವ ಗುಳ್ಳೆಗಳು ಮಳೆಗಾಲ ಮುಗಿಯುವ ತನಕ ಗುಳ್ಳೆ ಪ್ರಿಯರ ಆಹಾರವಾಗುತ್ತವೆ.

ಮೃದ್ವಂಗಿಗಳ ವರ್ಗಕ್ಕೆ ಸೇರಿದ ಗುಳ್ಳೆಗಳ ಹೊರಗಿನ ಕವಚ ಗಟ್ಟಿಯಾಗಿರುತ್ತದೆ. ಶುದ್ಧ ಸಸ್ಯಹಾರಿಯಾದ ಇದು ಮಳೆಗಾಲದಲ್ಲಿ ಕೆರೆಯ ಪರಿಸರ, ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಬೀಳುವ ನೀರಿನ ಸುತ್ತ ಬದುಕುತ್ತದೆಯಲ್ಲದೆ, ಹಾಲಿನಂತಹ ಬಿಳಿ ಬಣ್ಣದ ಹಲವಾರು ಮೊಟ್ಟೆಗಳನ್ನು ಇಡುತ್ತದೆ. ಎಲ್ಲಾ ಮೊಟ್ಟೆಗಳು ಗೊಂಚಲಾಗಿರುವುದು ಇದರ ವಿಶೇಷ. ಮೊಟ್ಟೆಗಳು ಮುತ್ತಿನಂತಿದ್ದು ಅವುಗಳನ್ನು ನೋಡುವುದೇ ಖುಷಿ.

ಗುಳ್ಳೆ ಖಾದ್ಯ ಪ್ರಿಯರು ಗುಳ್ಳೆಗಳನ್ನು ಸಂಗ್ರಹಿಸಿ ಅದರ ಮಾಂಸವನ್ನು ಹೊರತೆಗೆದು ತಮಗಿಷ್ಟವಾದ ಅಡುಗೆ ತಯಾರಿಸುತ್ತಾರೆ. ಕೋಳಿ ಮಾಂಸಕ್ಕೆ ಬಳಸುವ ಮಸಾಲೆಯನ್ನೆ ಇದಕ್ಕೂ ಬಳಸಿ ಸಾರನ್ನು ಮತ್ತು ಸುಕ್ಕ ತಯಾರಿಸುತ್ತಾರೆ. ಹಂಚಿರೊಟ್ಟಿ ಮತ್ತು ಗುಳ್ಳೆಯ ದಪ್ಪಸಾರು ಸ್ವಾದ ವಿಶಿಷ್ಟ. ಆದರೆ ಗುಳ್ಳೆ ಮಾರಾಟಕ್ಕೆ ಸಿಗುವುದು ತೀರಾ ಕಡಿಮೆ.

ಗುಳ್ಳೆ ಒಂದೇ ದಿನ ಒಂದು ಸಾರಿಗಾಗುವಷ್ಟು ಸಿಗುವುದು ಕಷ್ಟ. ಕಾರಣ ಗುಳ್ಳೆಯನ್ನು ದೊಡ್ಡ ಮಣ್ಣಿನ ಮಡಕೆಯಲ್ಲಿಟ್ಟು ಅದಕ್ಕೆ ನೀರು ಹಾಕಿ ಅಕ್ಕಿ ದೂಳನ್ನು ತಿನ್ನಲು ಕೊಡುತ್ತಾರೆ. ಮಡಕೆಯ ಬಾಯಿಯನ್ನು ಬಟ್ಟೆಯಿಂದ ಭದ್ರವಾಗಿ ಕಟ್ಟಿಡುತ್ತಾರೆ. ಬಟ್ಟೆ ಕಟ್ಟದೇ ಇದ್ದರೆ ಮಡಕೆಯಿಂದ ಗುಳ್ಳೆಗಳು ಮೇಲೆ ಬಂದು ಹರಿದು ಹೋಗುತ್ತವೆ. ಹೀಗೆ ಐದಾರು ದಿನ ಸಂಗ್ರಹಿಸಿದ ಗುಳ್ಳೆಗಳನ್ನು ತಾವು ಸಾರು ಮಾಡುವುದರ ಜೊತೆಗೆ ತಮ್ಮ ನೆಂಟರಿಷ್ಟರಿಗೂ ಕಳುಹಿಸುತ್ತಾರೆ.

ರಾಸಾಯನಿಕ ಗೊಬ್ಬರ ಬಳಕೆ ಹಾಗೂ ಯಂತ್ರಗಳನ್ನು ಬಳಸಿ ಭತ್ತದಗದ್ದೆಗಳನ್ನು ಊಳುವುದರಿಂದ ಗುಳ್ಳೆಗಳು ಅವಸಾನದ ಅಂಚಿನಲ್ಲಿವೆ. ಮಳೆಗಾಲ ಮುಗಿಯುತ್ತಿದ್ದಂತೆ ಭೂಮಿಯಲ್ಲಿ ಒಂದಾಗುವ ಗುಳ್ಳೆಗಳನ್ನು ಮತ್ತೆ ನೋಡುವದು ಮುಂದಿನ ಮಳೆಗಾಲದಲ್ಲೆ.

ಗುಳ್ಳೆಗಳು
ಗುಳ್ಳೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT