ಭಾನುವಾರ, ಸೆಪ್ಟೆಂಬರ್ 22, 2019
23 °C
ಮೊಸರಿನ ತಿನಿಸುಗಳಿಗೆ ಖ್ಯಾತಿಯಾಗಿರುವ ಕೊಲ್ಹಾರ ಯುಕೆಪಿ ವೃತ್ತದ ಮಾತಾ ಸಾವಿತ್ರಿ ಹೋಟೆಲ್‌

ಕೆನೆ ಮೊಸರ ನಾಡಲ್ಲಿ ಮೊಸರವಲಕ್ಕಿಯ ಸವಿರುಚಿ..!

Published:
Updated:
Prajavani

ಕೊಲ್ಹಾರ: ಕೆನೆ ಮೊಸರಿನ ಖಣಿ ಎಂದೇ ಖ್ಯಾತವಾಗಿರುವ ಕೊಲ್ಹಾರ, ಮೊಸರವಲಕ್ಕಿಗೂ ಹೆಸರವಾಸಿ. ಇಲ್ಲಿಗೆ ಬರುವ ಬಹುತೇಕರು ಗಟ್ಟಿ ಕೆನೆ ಮೊಸರವಲಕ್ಕಿಯ ರುಚಿಯನ್ನು ಸವಿಯದೇ ಇರಲ್ಲ.

ಕೊಲ್ಹಾರ ಪಟ್ಟಣ ಸೇರಿದಂತೆ ಯುಕೆಪಿ ಸರ್ಕಲ್‌ನ ಹೆದ್ದಾರಿಯುದ್ದಕ್ಕೂ ಇರುವ, ಎಲ್ಲಾ ಹೊಟೇಲ್‌ಗಳಲ್ಲಿ ಕೆನೆ ಮೊಸರಿನ ಅವಲಕ್ಕಿ ದೊರೆಯುವುದು ಇಲ್ಲಿನ ವಿಶೇಷ. ಇವುಗಳಲ್ಲಿ ಮಾತಾ ಸಾವಿತ್ರಿ ಹೋಟೆಲ್‌, ತಾಜಾ ಗಟ್ಟಿ ಕೆನೆ ಮೊಸರಿನಿಂದ ತಯಾರಿಸುವ ಮೊಸರವಲಕ್ಕಿಗೆ ಬಹಳ ಖ್ಯಾತಿ.

ಅಕ್ಕಪಕ್ಕದ ತಾಲ್ಲೂಕಷ್ಟೇ ಅಲ್ಲದೇ, ಜಿಲ್ಲಾ ಕೇಂದ್ರ ವಿಜಯಪುರದಿಂದಲೂ ಸಹ ಜನರು ಇಲ್ಲಿಗೆ ಬಂದು ಮೊಸರವಲಕ್ಕಿಯನ್ನು ಸವಿಯುತ್ತಾರೆ. ಇದೇ ಇಲ್ಲಿನ ವೈಶಿಷ್ಟ್ಯತೆ.

ಏಳೆಂಟು ದಶಕದಿಂದಲೂ ಹೋಟೆಲ್‌ ಉದ್ಯಮ ನಡೆಸಿಕೊಂಡು ಬಂದಿರುವ, ಕೊಲ್ಹಾರ ಮೂಲದ ಗುಡದೂರು ಕುಟುಂಬ ಒಡೆತನದ ಮಾತಾ ಸಾವಿತ್ರಿ ಹೋಟೆಲ್‌ ಗಟ್ಟಿ ಕೆನೆ ಮೊಸರಿನ ತಿನಿಸುಗಳಿಗೆ ಖ್ಯಾತಿ.

ಇಲ್ಲಿ ತಯಾರಿಸುವ ಮೊಸರಿನ ಎಲ್ಲಾ ತರಹದ ತಿನಿಸುಗಳಿಗೆ ಕೊಲ್ಹಾರದ ವಿಶೇಷವಾಗಿರುವ ತಾಜ ಹಾಗೂ ಗಡಿಗೆ ಕೆನೆ ಮೊಸರನ್ನೇ ಬಳಸುತ್ತಾರೆ. ಅಡುಗೆಗೆ ಮನೆಯಲ್ಲೇ ತಯಾರಿಸಿದ ಮಸಾಲೆ ಪದಾರ್ಥ ಸೇರಿದಂತೆ, ಎಲ್ಲದಕ್ಕೂ ಜವಾರಿ ಪದಾರ್ಥಗಳನ್ನೇ ಬಳಸುತ್ತಾರೆ. ಇದು ಈ ಹೋಟೆಲ್‌ನ ವಿಶೇಷ. ಇದರಿಂದಲೇ ಸ್ವಾದ ಅದ್ಬುತವಾಗಿರುತ್ತದೆ.

ಮೊಸರವಲಕ್ಕಿ, ಪೇಪರ್ ಮೊಸರವಲಕ್ಕಿ, ಮೊಸರನ್ನ ಹಾಗೂ ಸೂಸಲ ಮೊಸರು ಇಲ್ಲಿ ದೊರೆಯುವ ಮೊಸರಿನ ವಿಶೇಷ ತಿನಿಸುಗಳು. ಕೊಲ್ಹಾರದ ಕಡೆ ಬಂದಾಗಲ್ಲೆಲ್ಲಾ ಮಾತಾ ಸಾವಿತ್ರಿ ಹೋಟೆಲ್‌ನಲ್ಲಿ ಪೇಪರ್ ಮೊಸರವಲಕ್ಕಿಯನ್ನು ತಿನ್ನುತ್ತೇವೆ. ಇಲ್ಲಿನ ಮೊಸರವಲಕ್ಕಿಯ ಜತೆ ಪುಟಾಣಿ ಹಿಂಡಿ ಬೆರೆಸಿ ತಿಂದರೆ, ಅದರ ರುಚಿಯೇ ಅದ್ಬುತ ಎನ್ನುತ್ತಾರೆ ಇಲ್ಲಿಗೆ ಬರುವ ಅಸಂಖ್ಯಾತ ಗ್ರಾಹಕರು.

‘ಬೇಸಿಗೆಯ ಝಳ ಹೆಚ್ಚಿರುವುದರಿಂದ ಇದೀಗ ಮೊಸರಿನ ತಿನಿಸುಗಳಿಗೆ ಇಲ್ಲಿ ಬಹಳ ಬೇಡಿಕೆ. ಮೊಸರು ದೇಹಕ್ಕೆ ತಂಪು ಹಾಗೂ ಆರೋಗ್ಯಕ್ಕೂ ಉಪಯುಕ್ತವಾಗಿರುವ ಕಾರಣ, ಯುಕೆಪಿ ವೃತ್ತ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನ ಸವಾರರು, ಇಲ್ಲಿಗೆ ಭೇಟಿಯಿತ್ತು ಮೊಸರಿವಲಕ್ಕಿಯನ್ನು ಸೇವಿಸುತ್ತಾರೆ.

ದಿನಕ್ಕೆ ಸುಮಾರು 400 ಪ್ಲೇಟ್ ಮೊಸರವಲಕ್ಕಿ ಖಾಲಿಯಾಗುತ್ತದೆ. ನಿತ್ಯ ಸುಮಾರು 300ರಿಂದ 350 ಗಡಿಗೆ ಕೆನೆ ಮೊಸರನ್ನು ತರಿಸುತ್ತೇವೆ. ಮೊಸರಿನ ತಿನಿಸುಗಳಿಗೆ ಅಷ್ಟೇ ಅಲ್ಲದೇ, ತಟ್ಟೆ ಊಟಕ್ಕೆ ಹಾಗು ಇತರೆ ತಿನಿಸುಗಳಿಗೂ ಕೆನೆ ಮೊಸರನ್ನು ನೀಡುತ್ತೇವೆ. ಹಲವು ಸಭೆ ಸಮಾರಂಭಗಳಿಗೆ ಇಲ್ಲಿಂದಲ್ಲೇ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ಮಲ್ಲಿಕಾರ್ಜುನ ಗುಡದೂರು.

Post Comments (+)