ಭಾನುವಾರ, ಸೆಪ್ಟೆಂಬರ್ 20, 2020
23 °C

ಸಾಂಸ್ಕೃತಿಕ ಪಾಕದ ರುಚಿ ನೀಡುವ ‘ಅಡುಕಲೆ’

ನಾಗರತ್ನ ಜಿ. Updated:

ಅಕ್ಷರ ಗಾತ್ರ : | |

Prajavani

ನಮ್ಮ ಆಹಾರ ಪದ್ಧತಿ ಬದಲಾಗುತ್ತಿದೆ. ವಿದೇಶಿ ಆಹಾರ ಪದ್ಧತಿಗೆ ತೆರೆದುಕೊಳ್ಳುವ ಭರದಲ್ಲಿ ನಮ್ಮ ಸ್ಥಳೀಯ ಆಹಾರದ ಘಮಲು, ಸ್ವಾದ ಮರೆತೇ ಹೋದಂತಾಗುತ್ತಿರುವುದು ವಿಪರ್ಯಾಸ. ಎಲ್ಲೆಲ್ಲೂ ವಿದೇಶಿ ಖಾದ್ಯಗಳ ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳು ಕಾಣಸಿಗುತ್ತಿವೆ. ನಗರದಲ್ಲಿ ಸ್ಥಳೀಯ ಆಹಾರ ಪದ್ಧತಿಯ ಖಾದ್ಯಗಳ ಸವಿ ಉಳಿಸಿಕೊಳ್ಳುವಲ್ಲಿ ‘ಅಡುಕಲೆ’ ಶ್ರಮಿಸುತ್ತಿದೆ.

ಇಲ್ಲಿ ತಿನಿಸುಗಳನ್ನು ಸವಿಯುವುದರ ಜೊತೆಗೆ ತಯಾರಿಸುವ ವಿಧಾನವನ್ನೂ ತಿಳಿಸಿಕೊಡುತ್ತಾರೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಅಭಿರುಚಿಯ ಮಿಶ್ರಣವನ್ನು ಸಂಯೋಜಿಸಿ ಖಾದ್ಯವನ್ನು ತಯಾರಿಸುವಲ್ಲಿ ಸಂಕೇತಿ ಸಮುದಾಯ ಹೆಸರುವಾಸಿ. 

ವಿಶೇಷ ಖಾದ್ಯಗಳು

ಅಕ್ಕಿ ತರಿ ಉಪ್ಪಿಟ್ಟು, ತರಕಾರಿ ಮಿಶ್ರಿತ ಉಪ್ಪಿಟ್ಟು, ಖಾರಾ ಪೊಂಗಲ್‌, ಖಾರಾ ಬಾತ್‌, ಈರುಳ್ಳಿ ಟೊಮೆಟೊ ಉಪ್ಪಿಟ್ಟು, ಉಪಮಾ ಮಿಕ್ಸ್‌, ಕೇಸರಿ ಬಾತ್‌, ಮೆಂತ್ಯ ಖಾರಾ ಬಾತ್‌, ಮೆಂತ್ಯ ದೋಸಾ, ರವಾ ದೋಸಾ, ಬ್ರೇಕ್‌ಫಾಸ್ಟ್‌ ಕಾಂಬೊ, ನುಚ್ಚಿನ ಉಂಡೆ ಮತ್ತು ಮಜ್ಜಿಗೆ ಹುಳಿ, ಗೊಜ್ಜವಲಕ್ಕಿ, ಅವಲಕ್ಕಿ ಬಿಸಿಬೇಳೆ ಬಾತ್‌ ಮಿಕ್ಸ್‌, ಅವಲಕ್ಕಿ ಉಪ್ಪಿಟ್ಟು, ಲೆಮನ್‌ ಪೋಹಾ, ಅಕ್ಕಿ ಕೋಡುಬಳೆ, ಈರುಳ್ಳಿ ಕೋಡುಬಳೆ, ಸ್ಪೆಷಲ್‌ ಮಿಕ್ಸ್ಚರ್‌, ಖಾರಾ ಬೂಂದಿ, ಹರಳು ಮತ್ತು ಈರುಳ್ಳಿ ಸಂಡಿಗೆ, ರಾಗಿ ಇಡ್ಲಿ, ರವಾ ಇಡ್ಲಿ, ‌ಪ್ಲೇನ್‌ ಹರಳು ಸಂಡಿಗೆ, ಚಕ್ಕುಲಿ, ನಿಪ್ಪಟ್ಟು, ಆಂಬೊಡೆ, ಖಾರಾ ಓಂಪುಡಿ ಹೀಗೆ 40 ಬಗೆಯ ಕರ್ನಾಟಕ, ತಮಿಳುನಾಡು, ಕೇರಳದ ವಿಶೇಷ ತಿಂಡಿತಿನಿಸುಗಳು ಇಲ್ಲಿ ಸಿಗುತ್ತವೆ.

ವಿಶೇಷ ಕಾರ್ಯಕ್ರಮ

ಇಲ್ಲಿ ಎರಡು ವಾರ ಅಥವಾ ತಿಂಗಳಿಗೊಮ್ಮೆ ಗ್ರಾಹಕರ ಮನ ತಣಿಸಲು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಹೆಸರಾಂತ ಸಂಗೀತಗಾರರು, ಬರಹಗಾರರು ಹಾಗೂ ಚಲನಚಿತ್ರ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಅಲ್ಲದೆ, ಅಡುಕಲೆಯಲ್ಲಿ ತಯಾರಿಸುವಂತಹ ಆಹಾರದ ಬಗ್ಗೆ ಗಣ್ಯರಿಗೆ ಪರಿಚಯಿಸಲಾಗುತ್ತದೆ.

ಖಾದ್ಯ ತಯಾರಿಸುವ ಸಂಕೇತಿ

ಸಂಕೇತಿ ಸಮುದಾಯ ಮೈಸೂರಿನಲ್ಲಿ ನೆಲೆಸಿರುವ ಸ್ಮಾರ್ತ ಬ್ರಾಹ್ಮಣರ ಸಮುದಾಯ. ಕನ್ನಡ, ತಮಿಳು, ಮಲಯಾಳಂ ಮಿಶ್ರಿತ ಭಾಷೆಯನ್ನು ಮಾತನಾಡುತ್ತಾರೆ. ಖಾದ್ಯ ತಯಾರಿಕೆ ಇತ್ಯಾದಿ ಸಂಸ್ಕೃತಿ ಸಂಬಂಧಿ ವಿಷಯಗಳಲ್ಲಿ ಇವರದು ಅನನ್ಯ ಆಸಕ್ತಿ.

‘ಅಡುಕಲೆ’ ಎಂದರೆ ‘ಕಿಚನ್‌’ ಎಂದರ್ಥ. ನಮ್ಮ ಪೂರ್ವಿಕರ ಆಹಾರ ಪದ್ಧತಿಯನ್ನು ಉಳಿಸಿ ಬೆಳೆಸುವುದಕ್ಕಾಗಿ ಸಾಂಪ್ರದಾಯಿಕ ತಿನಿಸುಗಳನ್ನು ಸಂಕೇತಿ ಸಮುದಾಯ ತಯಾರಿಸುತ್ತಾರೆ. ರೆಡಿ ಟು ಈಟ್‌ ಆಹಾರವೂ ಇಲ್ಲಿ ತಯಾರಾಗುತ್ತದೆ.

ಅಡುಕಲೆ ಹುಟ್ಟು

10 ವರ್ಷಗಳ ಹಿಂದೆ ನಾಗರಬಾವಿಯ ಗಾರ್ಡನ್‌ ವಿಲ್ಲಾ ಬಡಾವಣೆಯ ಮನೆಯೊಂದರಲ್ಲಿ ಹುಟ್ಟಿಕೊಂಡ ಈ ಅಡುಕಲೆ ಇಂದು ವಿಶ್ವವ್ಯಾಪಿ ಜನಪ್ರಿಯತೆ ಗಳಿಸಿರುವುದು ರೋಚಕ ಎನ್ನುತ್ತಾರೆ ಅಡುಕಲೆ ಮಾಲೀಕರಾದ ಮಾಲತಿ. 

ಸಮಾನ ಮನಸ್ಕರು ಸೇರಿ ಮೊದಲಿಗೆ ‘ಸಾರಿನ ಪುಡಿ’ ತಯಾರಿಕೆಯನ್ನು ಪ್ರಾರಂಭಿಸಿದೆವು. ಉತ್ತಮ ಪ್ರತಿಕ್ರಿಯೆ ಬಂದಿತು. ಇದರೊಂದಿಗೆ ವಿವಿಧ ಖಾದ್ಯಗಳನ್ನು ತಯಾರಿಸಲು ಪ್ರಾರಂಭಿಸಿದೆವು. 2018ರವರೆಗೂ ರಿಟೇಲ್ ಮಾರುಕಟ್ಟೆಯಲ್ಲಿದ್ದ ಅಡುಕಲೆ ಉತ್ಪನ್ನಗಳು ಈಗ  ತನ್ನದೇ ಆದ ಮಳಿಗೆಗಳಲ್ಲಿ ಮೆರೆಯುತ್ತಿವೆ.

ಸಂಬಂಧಗಳ ಬೆಸುಗೆ ಈ ಅಡುಕಲೆ

ಸಂಕೇತಿಯ ಮೂಲ ಉದ್ದೇಶವೇ ಮನಸುಗಳನ್ನು ಮತ್ತು ಸಂಬಂಧಗಳನ್ನು ಬೆಸೆಯುವುದು. ಫಾಸ್ಟ್‌ ಫುಡ್‌ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಾಂಪ್ರದಾಯಿಕ ತಿನಿಸುಗಳನ್ನು ಮುಂದಿನ ಪೀಳಿಗೆ ಮರೆಯುವಂತಾಗಬಾರದು ಎಂಬ ಧ್ಯೇಯದಿಂದ ಅಡುಕಲೆ ಹುಟ್ಟಿಕೊಂಡಿದೆ. ಅಲ್ಲದೆ ಇಂದಿನ ವೇಗದ ಬದುಕಿನಲ್ಲಿ ಕ್ಷಣಾರ್ಧದಲ್ಲಿ ಸಿದ್ಧಗೊಳ್ಳುವ ಉಪಾಹಾರ ನೆರವಾಗುವುದಲ್ಲದೆ, ಕೈಗೆಟುಕುವ ಬೆಲೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅಡುಕಲೆಯ ಮತ್ತೊಂದು ವೈಶಿಷ್ಟ್ಯವೆಂದರೆ ಯಾವುದೇ ಕೃತಕ ಬಣ್ಣ, ಪ್ರಿಸರ್ವೇಟಿವ್ಸ್‌ ಬಳಸುವುದಿಲ್ಲ. adukale.com, ಅಮೆಜಾನ್, ಬಿಗ್ ಬಾಸ್ಕೆಟ್ ಜಾಲತಾಣಗಳಲ್ಲಿಯೂ ಸಂಕೇತಿ ಆಹಾರ ಖಾದ್ಯಗಳು ಮಾರಾಟವಾಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು