ಶುಕ್ರವಾರ, ಮಾರ್ಚ್ 5, 2021
18 °C

ನಟನೆಯಿಂದ ಆಹಾರದ ನಂಟು

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

Deccan Herald

ಮಕ್ಕಳ ಮನಮೆಚ್ಚಿಸುವ ಅಡುಗೆ ತಯಾರಿಸುವುದು ತಾಯಂದಿರಿಗೆ ಸವಾಲು. ಮಕ್ಕಳ ಕಣ್ಸೆಯುವ, ಆರೋಗ್ಯಕರ ತಿನಿಸು ತಯಾರಿಸುವ ತಂತ್ರವನ್ನು ‘ಮಮ್ಮಿ ಕಾ ಮ್ಯಾಜಿಕ್‌’ ಕಾರ್ಯಕ್ರಮದ ಮೂಲಕ ತೋರಿಸಿದವರು ಅಮೃತಾ ರಾಯ್‌ಚಂದ್‌. ನಟನೆಯಿಂದ ಬಾಣಸಿಗ ವೃತ್ತಿಯ ಸೆಳೆತಕ್ಕೆ ಒಳಗಾದ ಇವರು, ಇತ್ತೀಚೆಗೆ ‘ಗ್ರೋಡೆಜ್‌ ಜರ್ಸಿ’ ನಗರದಲ್ಲಿ ಆಯೋಜಿಸಿದ್ದ ‘ಆರೋಗ್ಯಕರ ಸ್ನಾಕ್ಸ್‌’ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅವರು ಗುಲ್‌ಮೊಹರ್‌ ಮಾತಿಗೆ ಸಿಕ್ಕರು

* ನಟನೆಯಿಂದ ಬಾಣಸಿಗರಾದ ಅನುಭವ ಹೇಗಿದೆ?

ಇದೊಂದು ರೋಚಕ ಪಯಣ. ನಟಿಯಾಗಿದ್ದಾಗ ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಮನೆಯಲ್ಲಿಯೇ ಅಡುಗೆ ಕಾರ್ಯಕ್ರಮ ನಡೆಸಿಕೊಡುವ ಸ್ಟುಡಿಯೊ ಇರುವುದರಿಂದ ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಸಾಧ್ಯವಾಗುತ್ತಿದೆ. ನವೀನ ತಿನಿಸಿನ ಪ್ರಯೋಗಗಳನ್ನು ಮಾಡಲು ಹೆಚ್ಚು ಸಮಯ ಸಿಗುತ್ತಿದೆ. ಪ್ರಪಂಚ ಸುತ್ತಲು ಸಮಯ ದೊರಕುತ್ತದೆ. ಭಾರತೀಯ ಶೈಲಿಯ ಅಡುಗೆಯನ್ನು ವಿದೇಶದಲ್ಲಿ ಪರಿಚಯಿಸುವ ಜೊತೆಗೆ ಅಲ್ಲಿನ ಆಹಾರ ವೈವಿಧ್ಯ ಅರಿತುಕೊಳ್ಳುತ್ತಿದ್ದೇನೆ.  

* ಬಾಣಸಿಗ ವೃತ್ತಿ ಸೆಳೆಯಲು ಕಾರಣ?

ನಟನೆ ಮತ್ತು ಮಾಡೆಲಿಂಗ್‌ ಜೊತೆಗೆ ‘ಮಾಮ್‌ ಕಿ ಮ್ಯಾಜಿಕ್‌’ ಕಾರ್ಯಕ್ರಮ ಪ್ರಾರಂಭಿಸಿದಾಗ ಅದು ವೃತ್ತಿ ಕ್ಷೇತ್ರದ ವಿಸ್ತರಣೆಯಷ್ಟೆ ಎಂದುಕೊಂಡಿದ್ದೆ. ಆದರೆ ಕಾರ್ಯಕ್ರಮ ಪ್ರಾರಂಭವಾದ ಎರಡು ವರ್ಷಗಳಲ್ಲಿಯೇ ಭರ್ಜರಿ ಯಶಸ್ಸು ದೊರಕಿತು. ಅಲ್ಲಿಯವರೆಗೂ ಪಾತ್ರದ ಮೂಲಕ ನನ್ನನ್ನು ಗುರುತಿಸುತ್ತಿದ್ದ ಜನ ನನ್ನದೇ ಹೆಸರಿನಲ್ಲಿ ಗುರುತಿಸಲು ಪ್ರಾರಂಭಿಸಿದರು. ನನ್ನ ಕಾರ್ಯಕ್ರಮ ಹಲವು ತಾಯಂದಿರಿಗೆ ನೆರವಾಗುತ್ತಿದೆ ಎಂಬುದು ತಿಳಿದು ಖುಷಿಯಾಯಿತು. ಪಾಕ ಪ್ರಾವೀಣ್ಯತೆ ಗಳಿಸುವ ಸಲುವಾಗಿ ಸಿಂಗಪುರದಲ್ಲಿ ತರಬೇತಿ ಪಡೆದೆ. ಭಾರತಕ್ಕೆ ಮರಳಿದ ಮೇಲೆ ಹೋಟೆಲ್‌ನಲ್ಲಿ ಕೆಲವು ದಿನ ಕೆಲಸ ಮಾಡಿದೆ. ಜನರ ಪ್ರೀತಿಯೇ ನಾನು ಈ ವೃತ್ತಿಯಲ್ಲಿ ಮುಂದುವರೆಯಲು ಕಾರಣ. 

* ಯಾವ ಬಗೆಯ ಅಡುಗೆ ಮಾಡುವುದು ನಿಮಗಿಷ್ಟ?

ಯಾವುದೇ ಬಗೆಯ ಅಡುಗೆಯನ್ನು ಆರೋಗ್ಯಕರವಾಗಿಸುವ ಜಾಣ್ಮೆ ನನಗಿದೆ. ನನ್ನ ಮಗನಿಗೆ ಬೇಕಿಂಗ್‌ ತಿನಿಸುಗಳು ಇಷ್ಟ. ಹಾಗಾಗಿ ಅದರ ಬಗೆಗೆ ವಿಶೇಷ ಒಲವಿದೆ. ಥಾಯ್‌, ಚೀನಾ, ಇಟಾಲಿಯನ್‌ ಸೇರಿದಂತೆ ಹಲವು ಶೈಲಿಯ ಅಡುಗೆಗಳನ್ನು ಮಾಡುತ್ತೇನೆ.

* ಭೋಜನ ಅನುಭವ (ಡೈನಿಂಗ್ ಎಕ್ಸ್‌ಪೀರಿಯನ್ಸ್‌) ಗ್ರಾಹಕರನ್ನು ಸೆಳೆಯುವಲ್ಲಿ ಎಷ್ಟು ಮುಖ್ಯ?

ನಮ್ಮ ಮಾತು, ವರ್ತನೆ ಬಹುಮುಖ್ಯ. ಗ್ರಾಹಕರು ಆರ್ಡರ್‌ ಮಾಡಿದ್ದನ್ನು ಪೂರೈಸುವುದು, ಜೊತೆಗೆ ಅವು ರುಚಿಕರ, ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ಬಾಣಸಿಗರಿಗೆ ವೃತ್ತಿ ಬದ್ಧತೆ ಇದ್ದಾಗ ಗ್ರಾಹಕರನ್ನು ಆಕರ್ಷಿಸುವುದು ಸುಲಭವಾಗುತ್ತದೆ. ಗ್ರಾಹಕರೊಂದಿಗೆ ಸಂವಹನ ಮಾಡುವುದರಿಂದ ಅವರ ಇಷ್ಟ, ಕಷ್ಟಗಳು ತಿಳಿಯುತ್ತದೆ. ಇದರಿಂದ ನಾವು ಹೊಸ ಪ್ರಯೋಗಗಳನ್ನು ಮಾಡುವುದು ಸಾಧ್ಯವಾಗುತ್ತದೆ.

* ವೃತ್ತಿಯಲ್ಲಿ ನಿಮ್ಮ ಪ್ರೇರಣೆ?

ಶೆಫ್‌ ಸಂಜೀವ್‌ ಕಪೂರ್‌. ನಾನು ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಲು ಅವರೇ ಕಾರಣ. ಪ್ರೋತ್ಸಾಹ ನೀಡುವ ಜೊತೆಗೆ ಕನಸಿನ ಹಾದಿಯ ಸಾಕಾರಕ್ಕೆ ನೆರವಾದರು. ರುಚಿಯ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ.

* ಹೊಸ ಬಗೆಯ ತಿನಿಸಿನ ಪ್ರಯೋಗ ಹೇಗೆ?

ಪ್ರಯೋಗಶೀಲತೆಗೆ ಪ್ರತಿದಿನ ಒಡ್ಡಿಕೊಳ್ಳುತ್ತೇನೆ. ಇರುವ ಪದಾರ್ಥಗಳಲ್ಲಿಯೇ ಅಡುಗೆ ಮಾಡುವ ಕೌಶಲವು ನನಗಿದೆ. ಮಕ್ಕಳ ಜೀವನ ಶೈಲಿಗೆ ಹೊಂದುವಂತೆ ಖಾದ್ಯ ತಯಾರಿಸುತ್ತೇನೆ. ಮಕ್ಕಳ ಮೂಡ್‌, ಅವರ ಇಷ್ಟ, ಕಷ್ಟಗಳನ್ನು ಅರಿತು ಅಡುಗೆ ಮಾಡುತ್ತೇನೆ. ನಾನು ತಯಾರಿಸುವ ಖಾದ್ಯಗಳು ಮಕ್ಕಳ ದಿನಚರಿಯ ಮೇಲೂ ಅವಲಂಬಿಸಿರುತ್ತದೆ. ಅವರಿಗೆ ರಜೆಯಿದ್ದಾಗ ಒಂದು ಬಗೆಯ ಅಡುಗೆ ಮಾಡಿದರೆ, ಪರೀಕ್ಷೆಯ ಸಮಯದಲ್ಲಿ ಭಿನ್ನ ಬಗೆಯ ತಿನಿಸು ತಯಾರಿಸುತ್ತೇನೆ. 

* ನಿಮ್ಮ ಅಡುಗೆ ಮಕ್ಕಳಿಗೆ ಇಷ್ಟವಾಗಲು ಕಾರಣ?

ಮಕ್ಕಳಿಗೆ ಜಂಕ್ ಫುಡ್‌ಗಳ ಮೇಲೆ ವ್ಯಾಮೋಹ ಹೆಚ್ಚು. ಆರೋಗ್ಯಕ್ಕೆ ಹಿತವಾದ ತಿನಿಸನ್ನು ಅವರು ಇಷ್ಟಪಡುವುದಿಲ್ಲ. ನಾನು ಮಕ್ಕಳಿಗಾಗಿ ತಯಾರಿಸುವ ತಿನಿಸುಗಳು ನೋಡಲು ಜಂಕ್‌ಫುಡ್‌ಗಳ ರೀತಿಯೇ ಇರುತ್ತದೆ. ಆದರೆ ಪೌಷ್ಟಿಕಾಂಶಭರಿತವಾಗಿರುತ್ತದೆ. ಈ ಗುಟ್ಟನ್ನು ಅವರ ಬಳಿ  ಹೇಳುವುದಿಲ್ಲ.   

* ಸೆಲೆಬ್ರಿಟಿ ಶೆಫ್‌ ಆಗುವ ಕನಸು ಹೊತ್ತ ಮಹಿಳೆಯರಿಗೆ ನಿಮ್ಮ ಸಲಹೆ?

ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ, ಮುಂದುವರೆಯಿರಿ. ರೆಸ್ಟೊರೆಂಟ್‌ಗಳಲ್ಲಿ ಅಡುಗೆ ಮಾಡುವಾಗ ವಿಭಿನ್ನತೆ ಪ್ರದರ್ಶಿಸಲು ಅವಕಾಶ ಸಿಗುವುದು ಕಡಿಮೆ. ಅದೇ ಮನೆಯಲ್ಲಿ ನವೀನ ಬಗೆಯ ಪ್ರಯೋಗ ಮಾಡಬಹುದು. ಟಿವಿಯಲ್ಲಿ ಬರಲು ಸಾಧ್ಯವಿಲ್ಲ ಎಂದು ನೊಂದುಕೊಳ್ಳುವ ಅಗತ್ಯವಿಲ್ಲ. ನಿಮಗಾಗಿ ಸಾಕಷ್ಟು ಅವಕಾಶಗಳಿವೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.