ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ತಟ್ಟೆಯತ್ತ ಹಸಿವಿನ ನೋಟ

Last Updated 4 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಆಹಾರವಿರುವುದೇ ಹಸಿವು ನೀಗಿಸಲು, ತಾಕತ್ತು ಕೊಡಲು, ಆಹಾರವಿಲ್ಲದೆ ಜೀವಿಸಲು ಸಾಧ್ಯವೇ? ಜೀವಿಸಿದರೂ ಎಷ್ಟು ದಿನ? ಆದ್ದರಿಂದಲೇ ಇರಬೇಕು ಅನ್ನದಾನ ಶ್ರೇಷ್ಠವೆನ್ನುತ್ತ ಅನ್ನದಲ್ಲಿ ದೇವರನ್ನು ನೋಡುವವರೂ ಇದ್ದಾರೆ. ಆದರೆ, ವಸ್ತುಸ್ಥಿತಿಯತ್ತ ಇಣುಕಿದರೆ ಒಂದು ಕಡೆ ಆಹಾರವಿದ್ದರೂ ಹಸಿದ ಹೊಟ್ಟೆಯನ್ನು ತಲುಪದೆ, ಇನ್ನೊಂದು ಕಡೆ ಆಹಾರವು ಹೊಟ್ಟೆ ತುಂಬಿ ಚೆಲ್ಲಾಡುವುದು ಕಂಡುಬರುತ್ತದೆ. ಜೀವ ಉಳಿಸುವ ಆಹಾರ ಪದಾರ್ಥಗಳು ಹೊಟ್ಟೆ ಸೇರುವುದೆಷ್ಟು, ಪೋಲಾಗುವುದೆಷ್ಟು ಎನ್ನುವುದರತ್ತ ಗಮನಹರಿಸಿದರೆ ಹೌಹಾರುವಂತಾಗುತ್ತದೆ.

ನಾವು ಬೆಳೆಸುವ ಅಮೂಲ್ಯ ಆಹಾರ ಪದಾರ್ಥಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಪೋಲಾಗುತ್ತಿದೆ. ಹೋಟೆಲ್‌ಗಳಲ್ಲಿ, ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲೇ ಅತಿಹೆಚ್ಚು ಆಹಾರ ನಷ್ಟವಾಗುತ್ತಿದೆ. ಎಲೆಯಲ್ಲಿ ಬಡಿಸಿದ 25ರಿಂದ 30 ಬಗೆಯ ವ್ಯಂಜನಗಳಲ್ಲಿ ಸರಾಸರಿ ಮೂರನೇ ಒಂದಂಶವಾದರೂ ಎಸೆಯಲಾಗುತ್ತಿದೆ. ಬೇಕಾದ್ದನ್ನು ಮಾತ್ರ ಹಾಕಿಸಿಕೊಳ್ಳುವ ಬಫೆ ಊಟಗಳಲ್ಲಿ ಆಹಾರ ವ್ಯರ್ಥವಾಗುವುದು ಕಡಿಮೆ ಎನ್ನುವ ಅನಿಸಿಕೆ ಇದ್ದರೂ ಹಾಗಾಗುತ್ತಿಲ್ಲ.

ಶ್ರೀಮಂತಿಕೆ ತೋರಿಸಲು ಹತ್ತು ಹಲವು ಬಗೆಯ ಅಡುಗೆಗಳು ತಯಾರಾಗುತ್ತವೆ. ವ್ಯಂಜನಗಳ ಬಣ್ಣ, ಆಕಾರ ಕಂಡ ಅತಿಥಿಗಳು ಎಲ್ಲವನ್ನೂ ರುಚಿ ನೋಡುವ ಉತ್ಸಾಹದಲ್ಲಿ ಹಾಕಿಸಿಕೊಂಡವರು ಉಂಡು ಕೆಳಗಿಡುವ ಪ್ಲೇಟಿನಲ್ಲಿ ನಾಲ್ಕನೆ ಒಂದಂಶವಾದರೂ ತಿನ್ನದೆ ಉಳಿದಿರುತ್ತದೆ. ಸಮಾರಂಭಗಳಲ್ಲಿ ಮಾಡಿದ ಅಡುಗೆಗಳೂ ಸಾಕಷ್ಟು ಉಳಿದಿರುತ್ತದೆ. ಕೆಲವು ಕಡೆ ಕೆಲವೊಂದು ಆಹಾರ ಪದಾರ್ಥಗಳನ್ನು ಕೆಲಸದವರಿಗೆ, ಕೂಲಿ ಕೆಲಸದವರಿಗೆ, ಬಡವರಿಗೆ ಹಂಚುವುದಿದ್ದರೂ ಸಾಕಷ್ಟು ಅಡುಗೆಗಳನ್ನು ಎಸೆಯಲಾಗುತ್ತಿದೆ. ಸಮಾರಂಭಗಳಲ್ಲಿ ತಿನ್ನದೆ ಉಳಿದ ಅಡುಗೆ ಕಸ ಸೇರುತ್ತದೆ.

ಹೋಟೆಲ್‌ಗೆ ಹೋದಾಗ ಬೇಕಾದ್ದನ್ನು ಮಾತ್ರ ಆರ್ಡರ್ ಮಾಡುವುದು ತಾನೇ? ಆರ್ಡರ್ ಮಾಡಿದ್ದಕ್ಕೆಲ್ಲ ಬಿಲ್ ಬರುತ್ತದೆ. ಆದರೂ, ಪ್ಲೇಟಿನಲ್ಲಿ ಸಾಕಷ್ಟು ಉಳಿದಿರುತ್ತದೆ. ಹೋಟೆಲ್‌ನಲ್ಲೂ ಮಾಡಿದ ಅಡುಗೆಗಳು ಉಳಿದು ಹೋಗುತ್ತದೆ. ಉಳಿದ ಅಡುಗೆಗಳನ್ನು ಅಲ್ಲಿ, ಇಲ್ಲಿ ಹಸಿದವರಿಗೆ ಹಂಚಿದರೂ ತಿನ್ನದೆ ಉಳಿದದ್ದು ಕಸ ಸೇರುತ್ತದೆ. ಊರಿನಲ್ಲಿರುವ ಎಲ್ಲಾ ಹೋಟೆಲ್‌ಗಳಲ್ಲಿ ಪೋಲಾಗುವ ಆಹಾರವನ್ನು ಒಟ್ಟು ಸೇರಿಸಿದರೆ ಎಷ್ಟಾದೀತು? ಎಷ್ಟು ಜನರ ಹಸಿವನ್ನು ನೀಗಿಸಬಹುದು? ಹೋಟೆಲ್‌ಗಳು ಖರೀದಿಸಿದ ಆಹಾರ ಸಾಮಗ್ರಿಗಳಲ್ಲಿ ನಾಲ್ಕನೇ ಒಂದಂಶವಾದರೂ ಹಾಳಾಗಿ ತ್ಯಾಜ್ಯಕ್ಕೆ ಸೇರುತ್ತದೆಯಂತೆ.

ಇವುಗಳೆಲ್ಲಾ ಅಡುಗೆ ಮನೆಗೆ ಹೋಗಿ ವ್ಯರ್ಥವಾಗುವ ಆಹಾರ ಪದಾರ್ಥಗಳು. ಆಹಾರ ಸಾಮಗ್ರಿಗಳು ಅಡುಗೆ ಮನೆಗೆ ಸೇರುವ ಮೊದಲೇ ಸಾಕಷ್ಟು ನಷ್ಟವಾಗಿರುತ್ತವೆ. ತರಕಾರಿಗಳು, ಹಣ್ಣುಗಳು ಅಲ್ಪ ಜೀವಿತಾವಧಿ ಉಳ್ಳವು. ಬೆಳೆಸಿದ್ದರಲ್ಲಿ ಅರ್ಧಾಂಶವಾದರೂ ಅಂಗಡಿಗಳಲ್ಲಿ, ಗೋದಾಮುಗಳಲ್ಲಿ, ಸಾರಿಗೆಯಲ್ಲಿ ಪೋಲಾಗುವ ಲೆಕ್ಕಾಚಾರ ಇದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ತಂಪು ಸಂಗ್ರಹಣೆಯ ವ್ಯವಸ್ಥೆ ಸಾಕಷ್ಟು ಇಲ್ಲದಿರುವುದು. ಸರಿಯಾದ ಸಾಗಾಣಿಕೆಯ ವ್ಯವಸ್ಥೆಯೂ ಇಲ್ಲ.

ಅಕ್ಕಿ, ಗೋಧಿ, ಕಾಳು, ಬೇಳೆಗಳೂ ವಿವಿಧ ಹಂತದಲ್ಲಿ ಸಾಕಷ್ಟು ನಷ್ಟವಾಗುತ್ತದೆ. ಮೊದಲು ರೈತನ ಅಂಗಳದಲ್ಲೇ ಮಳೆ ಬಂದೋ, ಹಕ್ಕಿ, ಇಲಿಗಳು ತಿಂದೋ ನಷ್ಟವಾಗುವುದುಂಟು. ನಮ್ಮಲ್ಲಿ ಆಹಾರ ಸಾಮಗ್ರಿಗಳನ್ನು ಕೂಡಿಡಲು ಒಂದೋ ಗೋದಾಮುಗಳೇ ಇಲ್ಲ. ಇನ್ನು ಕೆಲವು ಕಡೆ ಗೋದಾಮುಗಳಿದ್ದರೂ ಸುಸ್ಥಿತಿಯಲಿಲ್ಲ. ದೇಶದ ಮುಖ್ಯ ಗೋದಾಮುಗಳಲ್ಲಿ ಒಂದಾದ ಭಾರತೀಯ ಆಹಾರ ನಿಗಮದಲ್ಲಿಯೇ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಇಲ್ಲ.

ಇನ್ನು ಮಾಂಸಾಹಾರಕ್ಕೆ ಬಂದರೆ ನಮ್ಮ ಆಹಾರಕ್ಕಾಗಿ ಜೀವತೆತ್ತ ಪ್ರಾಣಿಗಳ ಮಾಂಸ ಜನರ ಹೊಟ್ಟೆ ಸೇರದೆ ಒಂದೊಲ್ಲೊಂದು ರೀತಿಯಲ್ಲಿ ನಷ್ಟವಾಗಿ ತ್ಯಾಜ್ಯಕ್ಕೆ ಸೇರುವ ಗೋಳು ಹೇಳತೀರದು. ನಾವು ಅರ್ಧಂಬರ್ಧ ತಿಂದ ವಸ್ತುಗಳು ಭೂಮಿಗೆ ಸೇರಿದಾಗಲೂ ಭೂಮಿಯ ಇಳುವರಿ ಕಡಿಮೆಯಾಗುತ್ತದೆ.

ಅನ್ನಕ್ಕಾಗಿ ಕೈಚಾಚುತ್ತಿರುವ ಕೈಗಳು

ಆಹಾರ ಸಾಮಗ್ರಿಗಳ ಯಾತ್ರೆ ಸಣ್ಣದಲ್ಲ. ಅಂದರೆ ಗಿಡ ನೆಟ್ಟು, ಬೆಳೆದು, ಕಾಳು, ಬೇಳೆಗಳಾಗಿ, ಬೆಂದು ನಮ್ಮ ತಟ್ಟೆಗೆ ಬರುವಲ್ಲಿ ದೊಡ್ಡ ಕಥೆಯೇ ಇದೆ. ಉದಾಹರಣೆಯಾಗಿ ಭತ್ತವನ್ನೇ ತೆಗೆದುಕೊಂಡರೆ ಭತ್ತ ಬೆಳೆಯಲು 15-16 ವಾರಗಳು ಬೇಕು. ಹವಾಮಾನದ ಅನುಗ್ರಹ ಬೇಕು. ಹಲವರ ಬೆವರು, ಪರಿಶ್ರಮವೂ ಅತ್ಯಗತ್ಯ. ಗದ್ದೆಯಿಂದ ರೈತನ ಅಂಗಳಕ್ಕೆ, ಅಲ್ಲಿಂದ ಗೋದಾಮಿಗೆ, ಸಗಟು, ಚಿಲ್ಲರೆ ವ್ಯಾಪಾರಿಗಳ ವ್ಯವಹಾರದಿಂದ ಪಾರಾಗಿ ಅಡುಗೆ ಮನೆ, ಹೋಟೆಲ್‌ಗಳತ್ತ ನಡೆ, ಇಷ್ಟೆಲ್ಲಾ ದೂರ ಸಂಚರಿಸಿ ಬಂದ ಅಕ್ಕಿ ಅನ್ನವಾಗಿ ಬಟ್ಟಲಿಗೆ ಬಂದಾಗಲೂ ತಿನ್ನದೆ ಕಸಕ್ಕೆ ಸೇರುವುದು ದುಃಖದ ವಿಚಾರ, ಎಲ್ಲರ ಶ್ರಮ ವ್ಯರ್ಥ.

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಪರಾಧಿಗಳು. ವಿಶ್ವದಲ್ಲಿ 82 ಕೋಟಿಗೂ ಅಧಿಕ ಜನ ಪೌಷ್ಟಿಕಾಂಶಗಳ ಕೊರತೆಯಿಂದ ನರಳುತ್ತಿದ್ದಾರೆ. ಪ್ರತಿ 15 ಸೆಕೆಂಡಿಗೆ ಒಂದು ಮಗು ಹಸಿವೆಯಿಂದ ಸಾಯುತ್ತಿದೆಯಂತೆ.

ವಿಶ್ವದಲ್ಲಿ ಹೆಚ್ಚು ಆಹಾರ ಉತ್ಪಾದಿಸುವ ಐದು ದೇಶಗಳಲ್ಲಿ ಭಾರತವೂ ಒಂದು. 2018-19ರಲ್ಲಿ ದೇಶದ ಕೃಷಿ ಉತ್ಪನ್ನವು 28.3 ಕೋಟಿ ಟನ್‌ನಷ್ಟಿತ್ತು. ಕ್ಷೀರಕ್ರಾಂತಿಯಿಂದಾಗಿ ವಿಶ್ವದಲ್ಲಿ ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ನಮ್ಮದು. ಆದರೂ, 2019ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ 117 ದೇಶಗಳಲ್ಲಿ ಹಸಿವೆಯಿಂದ ಇರುವ ಜನರಿದ್ದು ಅದರಲ್ಲಿ ಭಾರತದ ಹೆಸರೂ ಇದೆ. ಭಾರತದ್ದು 102ನೇ ಸ್ಥಾನ. ಆಹಾರ ಸಾಮಗ್ರಿಗಳು ಒಂದಲ್ಲ ಒಂದು ಕಾರಣದಿಂದ ನಷ್ಟವಾಗುವುದು ಹಾಗೂ ಸರಿಯಾಗಿ ಹಂಚಿಕೆಯಾಗದಿರುವುದೇ ಇದಕ್ಕೆ ಕಾರಣ. ನಮ್ಮ ಕಥೆ ಎಂದರೆ ಎಲ್ಲರಿಗೂ ಸಾಕಾಗುವಷ್ಟು ಆಹಾರವಿದೆ. ಆದರೆ ಎಲ್ಲರಿಗೂ ಆಹಾರವಿಲ್ಲ.

ಆಹಾರ ಸಾಮಗ್ರಿಗಳು ಪೋಲಾಗದಂತೆ ತಡೆಯುವತ್ತ ಮೊದಲ ಹೆಜ್ಜೆಯಾಗಿ ಪ್ರತಿಯೊಬ್ಬನಿಗೂ ಆಹಾರ ವಸ್ತುಗಳ ಯಾತ್ರೆ, ಪ್ರಾಮುಖ್ಯತೆ, ಅದರ ಹಿಂದಿರುವ ಜನರ ಪರಿಶ್ರಮ, ದೇಶದಲ್ಲಿ ಆಹಾರವಿಲ್ಲದವರ ಬಗ್ಗೆಯೂ ತಿಳಿದಿರಬೇಕು. ಕೆಲವು ಕಡೆ ಸ್ವಯಂಸೇವಾ ಸಂಸ್ಥೆಗಳು ಸಮಾರಂಭಗಳಲ್ಲಿ, ಹೋಟೆಲ್‌ಗಳಲ್ಲಿ ಉಳಿದ ಆಹಾರ ಪದಾರ್ಥವನ್ನು ಅಗತ್ಯವಿರುವವರಿಗೆ ಹಂಚುವ ವ್ಯವಸ್ಥೆ ಮಾಡುತ್ತಿವೆ. ಕೆಲವು ಹೋಟೆಲ್‌ಗಳ ಮುಂದೆ ಫ್ರಿಡ್ಜಿನ ವ್ಯವಸ್ಥೆ ಮಾಡುತ್ತಿದ್ದು ಉಳಿದ ಆಹಾರಗಳನ್ನು ಅದರಲ್ಲಿ ಇಡುತ್ತಿದ್ದಾರಂತೆ. ಬೇಕಾದವರು ತೆಗೆದುಕೊಂಡು ಹೋಗಬಹುದು. ಆದರೆ, ಇದೆಲ್ಲ ಅತಿ ಚಿಕ್ಕ ಪ್ರಮಾಣದಲ್ಲಿ ನಡೆಯುತ್ತಿದೆ.

ಕೊಡಗಿನ ಹೋಟೆಲ್ ಒಂದರಲ್ಲಿ ಆಶ್ಚರ್ಯವಾದ ನಿಯಮವಿದೆ. ಗ್ರಾಹಕರು ತಿನ್ನದೆ ಉಳಿಸಿದ ಆಹಾರಕ್ಕೂ ಬೆಲೆ ಕೊಡಬೇಕು. ಅಂದರೆ ಗ್ರಾಹಕ ಉಳಿಸಿದ ಆಹಾರವನ್ನು ತೂಕ ಮಾಡುತ್ತಾರೆ. ಗ್ರಾಹಕರು ತಾವು ಆರ್ಡರ್ ಮಾಡಿದ ಆಹಾರಕ್ಕಲ್ಲದೆ ಉಳಿಸಿ ಬಿಟ್ಟ ಆಹಾರಕ್ಕೂ ಬಿಲ್ ಬರುತ್ತದೆ. ತೆಲಂಗಾಣದಲ್ಲಿರುವ ಪ್ರಸಿದ್ಧ ಸರಣಿ ಹೋಟೆಲ್‌ನಲ್ಲೂ ತಿನ್ನದೆ ಉಳಿಸಿದ ಆಹಾರಕ್ಕೆ ಪ್ಲೇಟು ಒಂದಕ್ಕೆ ₹ 50 ಶುಲ್ಕ ವಿಧಿಸುತ್ತಾರೆ. ಕೆಲವು ದೇಶಗಳ ಹೋಟೆಲ್‌ಗಳಲ್ಲಿ ಆರ್ಡರ್ ಮಾಡಿದ ಆಹಾರವನ್ನು ತಿನ್ನಲಾಗದಿದ್ದರೆ ಉಳಿದದ್ದನ್ನು ಪ್ಯಾಕ್ ಮಾಡಿಯೂ ಕೊಡುತ್ತಾರೆ. ಇದನ್ನು ಮನೆಯಲ್ಲಿ ಬೇಕಾದಾಗ ತಿನ್ನಬಹುದು, ಇದೊಂದು ನಾಚಿಕೆಯ ವಿಷಯವಲ್ಲ. ಆಹಾರ ಪದಾರ್ಥ ಅಮೂಲ್ಯವಾದದ್ದು.

ಶ್ರೀಮಂತ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ಜನರು ಆಹಾರ ಪೋಲು ಮಾಡುವುದರಲ್ಲಿ ಮುಂದಿದ್ದಾರೆ. ಚೀನಾ ಮತ್ತು ಗ್ರೀಸ್ ಅತಿ ಕಡಿಮೆ ಆಹಾರ ಸಾಮಗ್ರಿಗಳನ್ನು ವ್ಯರ್ಥ ಮಾಡುವ ದೇಶಗಳಾಗಿವೆ. ಸೌದಿ ಅರೇಬಿಯಾವು ಪ್ಲೇಟಿನಲ್ಲಿ ಉಳಿಸಿದ ಆಹಾರಕ್ಕೆ ಒಂದು ಸಾವಿರ ದಿರಹಮ್ ಶುಲ್ಕ ವಿಧಿಸುವ ಕಾನೂನು ತರಲು ಮುಂದಾಗಿದೆ. ಜರ್ಮನಿಯ ಕೆಲವು ಹೋಟೆಲ್‌ಗಳೂ ಆಹಾರ ಪೋಲು ಮಾಡುವವರಿಗೆ ಶುಲ್ಕ ವಿಧಿಸುತ್ತಿದೆ. ಫ್ರಾನ್ಸ್‌ನಲ್ಲಿ ಸೂಪರ್ ಮಾರ್ಕೆಟ್‌ಗಳು ಆಹಾರ ಸಾಮಗ್ರಿಗಳನ್ನು ಎಸೆಯುವಂತಿಲ್ಲ. ‘ಎಕ್ಸಪೈಯರಿ ಡೇಟ್’ ಹತ್ತಿರ ಬರುತ್ತಿದ್ದಂತೆ ವಸ್ತುಗಳನ್ನು ದಾನ ಮಾಡಬೇಕು.

ಸಮಾರಂಭಗಳಲ್ಲಿ ಹೆಚ್ಚು ಬಗೆಯ ಆಹಾರ ತಯಾರಿಸುವ ಹುಚ್ಚನ್ನು ಬಿಡಬೇಕು, ತಿನ್ನುವವರೂ ಬೇಕಾದ್ದನ್ನು ಮಾತ್ರ ಹಾಕಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಆಹಾರ ಪದಾರ್ಥಗಳ ಪ್ರಾಮುಖ್ಯತೆಯನ್ನು ಕಲಿಸಿಕೊಡಬೇಕು. ಮನೆಯಲ್ಲೂ ಬೇಕಾದಷ್ಟೆ ಆಹಾರದ ಸಾಮಗ್ರಿಗಳನ್ನು ಖರೀದಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಸಮಾರಂಭಗಳಲ್ಲಿ, ಹೋಟೆಲ್‌ಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ತ್ವರಿತಗತಿಯಲ್ಲಿ ಆಹಾರದ ಅಗತ್ಯ ಇರುವವರಿಗೆ ಹಂಚುವ ವ್ಯವಸ್ಥೆ ಮಾಡಬೇಕು. ಆಹಾರ ಅಮೃತಕ್ಕೆ ಸಮಾನ, ಅದರ ದುರ್ಬಳಕೆ ಅಪರಾಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT