ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಹಣ್ಣಿನರಸದ ಐಸ್ ಟೀ ಸಿಗುತ್ತೆ !

Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಕೋಲ್ಡ್ ಕಾಫಿ’ ಎಲ್ಲರಿಗೂ ಚಿರಪರಿಚಿತ. ಇದೇನಿದು ಹಣ್ಣಿನರಸದ ಐಸ್‌ ಟೀ..! ಬಹಳ ವಿಶೇಷವಾಗಿದೆ ಅಂತ ಎನ್ನಿಸುತ್ತದೆ ಅಲ್ಲವಾ?

ಹೌದು. ಕೋಲ್ಡ್ ಕಾಫಿಯಂತೆ, ಐಸ್‌ ಟೀ ಕೂಡ ಸಿಗುತ್ತದೆ. ಅದು ಬರೀ ಐಸ್‌ ಟೀ ಅಲ್ಲ, ವಿಶಿಷ್ಟ ಫ್ಲೇವರ್‌ನ ಹಣ್ಣಿನರಸದ ಟೀ. ಇದ್ಯಾವ ಥರ ಟೀ? ಇದರ ರುಚಿ ಹೇಗಿರುತ್ತೆ? ಇದನ್ನ ಹೇಗೆ ಮಾಡ್ತಾರೆ? ಅಂತೆಲ್ಲಾ ತಿಳಿಯಬೇಕೇ? ಹಾಗಾದರೆ ನೀವು ಸದಾಶಿವನಗರದಲ್ಲಿರುವ ಪ್ಯಾಲೆಸ್‌ ಆರ್ಚಡ್ಸ್‌ ಟೀ ಹೌಸ್‌ಗೆ ಒಮ್ಮೆ ಭೇಟಿ ಕೊಡಬೇಕು.

ಎಲ್ಲಿದೆ ಈ ‘ಚಹಾ ಮನೆ’?

ಕಾವೇರಿ ಥಿಯೇಟರ್‌ ಪಕ್ಕದ ರಸ್ತೆಯಲ್ಲಿ ಸಿಗುವ ಮಹಾಲಕ್ಷ್ಮಿ ದೇವಸ್ಥಾನದಿಂದ ಮುಂದಕ್ಕೆ ಸಾಗಿದರೆ, ಈ ‌ವಿಶಿಷ್ಟ ಬಗೆಯ ಚಹಾ ಮಾರಾಟ ಮಾಡುವ ‘ಟೀ ಹೌಸ್‌’ ಸಿಗುತ್ತದೆ. ಹಳೆಯ ಪುಟ್ಟ ಮನೆಯನ್ನು ಕೆಫೆ ರೀತಿ ವಿನ್ಯಾಸ ಮಾಡಿದ್ದಾರೆ. ಗೋಡೆಯ ಮೇಲೆ ಅಲ್ಲಲ್ಲಿ ಇರುವ ಚಿತ್ರಕಲೆಯು ಕೆಫೆಯನ್ನು ಇನ್ನಷ್ಟು ಆಕರ್ಷಕಗೊಳಿಸಿದೆ.

ವಿವಿಧ ಐಸ್‌ ಟೀ: ಈ ಟೀ ಹೌಸ್‌ನ ಆಕರ್ಷಣೆಯೇ ಹಣ್ಣಿನರಸದ ‘ಐಸ್‌ ಟೀ’ಗಳು. ಇಲ್ಲಿ ನಾಲ್ಕು ಬಗೆಯ ಐಸ್‌ ಟೀಗಳು ದೊರೆಯುತ್ತವೆ. ಫ್ಯಾಷನ್‌ ಫ್ರೂಟ್‌, ಸ್ವೀಟ್‌ ಲೆಮನ್‌, ಆ್ಯಪಲ್‌ ಮತ್ತು ಮಿಕ್ಸಸ್ಡ್‌ ಹರ್ಬ್ಸ್‌. ಇದಕ್ಕೆ ಹೊರತಾಗಿ ಮಾಮೂಲಿ ಬಿಸಿ ಬಿಸಿ ಚಹಾ, ಅದರಲ್ಲೂ ಹಲವು ವಿಧದ ಚಹಾ ದೊರೆಯುತ್ತದೆ. ಚಹಾ ಹೌಸ್‌ನಲ್ಲಿ ಫಿಲ್ಟರ್‌ ಕಾಫಿ ಕೂಡ ಇದೆ!

‘ಅಡುಗೆ ಮಾಡುವುದು ನನಗೆ ಒತ್ತಡ ನಿವಾರಣೆಗೆ ಇರುವ ಒಂದು ಮಾರ್ಗ. ಜತೆಗೆ, ನಮ್ಮ ಕುಟುಂಬದವರು ಹಲವು ವರ್ಷಗಳಿಂದ ಟೀ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಇದೇ ಕಾರಣಕ್ಕೆ ನನಗೆ ಟೀ ಬಗೆಗೆ ಒಲವು ಹೆಚ್ಚು. ಈ ಒಲವು, ಆಸಕ್ತಿಯ ಕಾರಣಕ್ಕಾಗಿಯೇ ಟೀ ಹೌಸ್‌ ಆರಂಭಿಸಿದೆ’ ಎನ್ನುತ್ತಾ ಚಹಾ ಮನೆ ಕಟ್ಟಿದ ಹಿನ್ನೆಲೆ ವಿವರಿಸುತ್ತಾರೆ ಮಾಲೀಕ ಪ್ರಕಾಶ್‌.

ಈ ಐಸ್ ಟೀ ಬಗ್ಗೆ ಪ್ರಕಾಶ್ ವಿವರಣೆ ನೀಡುವುದು ಹೀಗೆ; ‘ಐಸ್‌ ಟೀ ಎಂದರೆ, ಟೀ ಡಿಕಾಕ್ಷನ್‌ ಅನ್ನು ಐಸ್‌ಕ್ಯೂಬ್‌ಗಳನ್ನಾಗಿ ಮಾಡಿಕೊಂಡು, ಇದನ್ನು ತಣ್ಣನೆ ನೀರಿಗೆ ಹಾಕಿ ಕುಡಿಯುವುದು. ಇದು ಮಾಮೂಲಿ ಐಸ್‌ ಟೀ. ನಾನು ಸ್ವಲ್ಪ ಭಿನ್ನ ಪ್ರಯೋಗ ಮಾಡಿದೆ. ಟೀ ಡಿಕಾಕ್ಷನ್‌ನ ಐಸ್‌ಕ್ಯೂಬ್‌ಗಳನ್ನು ಹಣ್ಣಿನ ರಸಕ್ಕೆ ಸೇರಿಸಿದೆ. ಯಾವ ಹಣ್ಣಿನ ರಸವನ್ನು, ಎಷ್ಟು ಪ್ರಮಾಣ, ಎಷ್ಟು ಸಿಹಿಯೊಂದಿಗೆ ಸೇರಿದರೆ ರುಚಿಯಾಗುತ್ತದೆ ಎಂಬುದನ್ನು ಹಲವು ಪ್ರಯತ್ನಗಳಿಂದ ಕಂಡುಕೊಂಡೆ. ಪ್ರಯತ್ನಗಳು ಯಶಸ್ವಿಯಾದ ಮೇಲೆ, ವಿವಿಧ ರುಚಿಗಳುಳ್ಳ ಚಹಾ ಸಿದ್ಧಪಡಿಸಿದ್ದೇನೆ. ಹಾಗಾಗಿ, ಈ ಟೀ ನಮ್ಮಲ್ಲಿ ಮಾತ್ರ ಸಿಗುತ್ತದೆ’ ಎನ್ನುತ್ತಾರೆ ಅವರು.

ಕೋವಿಡ್‌ ನಂತರ ಜನರು ಆರೋಗ್ಯದ ಬಗ್ಗೆತುಂಬಾ ಕಾಳಜಿ ವಹಿಸುತ್ತಿದ್ದಾರೆ. ಈ ಅಂಶವೂ ನಾನು ಟೀ ಹೌಸ್‌ ಪ್ರಾರಂಭಿಸಲು ಕಾರಣವಾಯಿತು. ಈ ಚಹಾ ಮನೆಯಲ್ಲಿ ದೊರೆಯುವ ಪ್ರತಿಯೊಂದು ಪಾನೀಯ ಮತ್ತು ತಿನಿಸುಗಳು ಆರೋಗ್ಯ ವರ್ಧಕವಾಗಿರಬೇಕು ಎಂಬುದು ನನ್ನ ಆಶಯ. ಹಾಗಾಗಿ ತುಂಬಾ ಕಾಳಜಿಯಿಂದ ಸಿದ್ಧಪಡಿಸಿದ್ದೇನೆ. ಟೀ ತಯಾರಿಸಲು ಸಕ್ಕರೆ ಬದಲು ಸಾವಯವ ಬೆಲ್ಲ ಬಳಸುತ್ತೇವೆ. ಚಹಾ ಜೊತೆಗೆ, ಬೇರೆ ತಿನಿಸುಗಳು ಲಭ್ಯವಿವೆ’ ಎಂದು ಟೀ ಹೌಸ್‌ ಬಗ್ಗೆ ವಿವರಣೆ ನೀಡುತ್ತಾರೆ.

‌ಪ್ರತಿದಿನ ಬೆಳಿಗ್ಗೆ 7.30ರ ಸುಮಾರಿಗೆ ‘ಹೌಸ್‌’ ಪ್ರಾರಂಭವಾಗುತ್ತದೆ. ರಾತ್ರಿ 8 ರಿಂದ 9ರವರೆಗೂ ನಡೆಯುತ್ತದೆ. ಕೆಲವರು ಸಣ್ಣ ಪುಟ್ಟ ಮೀಟಿಂಗ್‌ಗಳನ್ನು ಇಲ್ಲಿಯೇ ಮಾಡುತ್ತಾರೆ. ವರ್ಕ್‌ ಫ್ರಂ ಹೋಮ್‌ ಇರುವುದರಿಂದ ಕೆಲವರು ಇಲ್ಲಿಯೇ ಬಂದು ಸ್ವಲ್ಪ ಸಮಯ ಕೂತು ಕೆಲಸ ಮಾಡಿ ಹೋಗುತ್ತಾರೆ. ಕಳೆದ ಡಿಸೆಂಬರ್‌ನಿಂದ ಟೀ ಹೌಸ್ ಆರಂಭವಾಗಿದೆ ಎಂದು ವಿವರಿಸಿದರು ಪ್ರಕಾಶ್‌.

‘ದಿನಾ ಟೀ ಹೌಸ್‌ಗೆ ಹೋಗುತ್ತೇನೆ’

‘ನನಗೆ ಕೆಫೆಗಳೆಂದರೆ ತುಂಬಾ ಇಷ್ಟ. ರಸ್ತೆಯಲ್ಲಿ ಹೀಗೆ ಒಮ್ಮೆ ಹಾದುಹೋಗುವಾಗ ಈ ಟೀ ಹೌಸ್‌ ಕಂಡಿತು. ಅಂದಿನಿಂದ ಇಂದಿನವರೆಗೆ ಪ್ರತಿದಿನ ಹೋಗುತ್ತೇನೆ. ಪುಟ್ಟದಾಗಿದ್ದರೂ ಸ್ವಚ್ಛವಾಗಿದೆ. ರುಚಿಯ ಬಗ್ಗೆ ಎರಡು ಮಾತಿಲ್ಲ. ಕೆಲವು ದಿನಗಳ ಹಿಂದೆ ಹೌಸ್‌ಗೆ ಹೋಗಿದ್ದಾಗ ಐಸ್‌ ಟೀ ಆರ್ಡರ್‌ ಮಾಡಿದೆ. ನನಗೆ ಸ್ವಲ್ಪ ನೆಗಡಿ ಇತ್ತು. ಇದನ್ನು ಗಮನಿಸಿದ ಪ್ರಕಾಶ್‌, ‘‘ಮೇಡಂ ಐಸ್‌ ಟೀ ಬೇಡ, ನಿಮ್ಮ ನೆಗಡಿ ಕಡಿಮೆ ಮಾಡಲು ಒಂದು ಬಿಸಿ ಬಿಸಿ ಟೀ ಮಾಡಿಕೊಡುತ್ತೇನೆ’’ ಎಂದರು. ನಿಜಕ್ಕೂ ಆ ಟೀ ಕುಡಿದ ಮೇಲೆ ನೆಗಡಿ ಕಡಿಮೆ ಆಯಿತು’ ಎಂದರು ಸಮೃದ್ಧಿ ಹೆಲ್ತ್‌ ಆ್ಯಂಡ್‌ ವೆಲ್‌ಬೀಯಿಂಗ್‌ನ ಜಯಾ.

ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ

ಈ ಟೀ ಹೌಸ್‌ನಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಹಿಳೆಯರು ಮನೆಯಲ್ಲಿಯೇ ತಯಾರು ಮಾಡುವ ಚಿಪ್ಸ್‌, ಉಪ್ಪಿನಕಾಯಿಯಂಥ ವಸ್ತುಗಳನ್ನು ಹೌಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT